Sunday, 8th September 2024

ಮುಖ ಗುರುತಿಸುವಿಕೆ ಎಂಬ ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ

ಶಿಶಿರ ಕಾಲ

ಶಿಶಿರ‍್ ಹೆಗಡೆ

shishirh@gmail.com

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಫೇಶಿಯಲ್ ರೆಕಗ್ನಿಷನ್ ಆಗೀಗ ಈ ಶಬ್ದವನ್ನು ಕೇಳುತ್ತಿರುತ್ತೇವೆ. ಮುಖ ಗುರುತಿಸುವಿಕೆ ಮತ್ತು ಕೃತಕ ಬುದ್ಧಿವಂತಿಕೆ. ಮೊದಲ ನೆಯದು ತಂತ್ರಜ್ಞಾನ ಬಳಸಿ ನೀವು ನೀವೇ ಎಂದು ಪತ್ತೆ ಹಚ್ಚುವುದು. ಕ್ಯಾಮರಾದಲ್ಲಿ – ಫೋಟೋದಲ್ಲಿ ಇರುವುದು ಇಂಥದ್ದೇ ವ್ಯಕ್ತಿ ಎಂದು ಕಂಪ್ಯೂಟರ್ ಗುರುತಿಸುವುದು. ಎರಡನೆಯದು ಕೃತಕ ಬುದ್ಧಿವಂತಿಕೆ. ಏನಿದು ಕೃತಕ ಬುದ್ಧಿವಂತಿಕೆ? ಸರಳವಾಗಿ ಹೇಳಬೇಕೆಂದರೆ ಕಂಪ್ಯೂಟರ್ ಒಂದು ಸಾಕಷ್ಟು ಮಾಹಿತಿ ಯನ್ನು ಉಪಯೋಗಿಸಿ ಆ ಎಲ್ಲ ಮಾಹಿತಿಗಳನ್ನು ತಾನೇ ಸಂಸ್ಕರಿಸಿ ಮನುಷ್ಯ ಸಹಜವೆನ್ನುವ ನಿರ್ಧಾರಗಳನ್ನು ತೆಗೆದುಕೊಳ್ಳುವ ತಂತ್ರಜ್ಞಾನ.

ಉದಾಹರಣೆಯೊಂದಿಗೆ ವಿವರಣೆ ಹೀಗೆ : ರೈತನೊಬ್ಬ ತನ್ನ ತೋಟಕ್ಕೆ ಯಾವಾಗ ನೀರು ಹಾಕಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳುವ ಒಂದು ಸನ್ನಿವೇಶ ವನ್ನು ವಿಶ್ಲೇಷಿಸೋಣ. ಇದು ವರ್ಷದ ಯಾವ ಕಾಲ, ಕೆರೆ – ಬೋರ್ವೆಲ್ ನಲ್ಲಿ ಎಷ್ಟು ನೀರಿದೆ, ಲೋಡ್ ಶೆಡ್ಡಿಂಗ್ ಯಾವಾಗ ಆಗುತ್ತದೆ, ಯಾವಾಗ ಹಿಂದೆ ಮಳೆಯಾಯಿತು, ಮುಂದಿನ ಮಳೆ ಯಾವಾಗ – ಹವಾಮಾನ ವರದಿ ಹೇಗೆ, ಈಗ ಇಷ್ಟು ಬೆಳೆದ ಗಿಡಕ್ಕೆ – ಈ ನೆಲಕ್ಕೆ ಎಷ್ಟು ನೀರು ಬೇಕು ಎಂಬಿತ್ಯಾದಿ ಯನ್ನು ಗ್ರಹಿಸಿ ಯಾವಾಗ ಎಷ್ಟು ನೀರು ಬಿಡಬೇಕು ಎಂದು ನಿರ್ಧರಿಸುತ್ತಾನೆ ಅಲ್ಲವೇ? ಒಬ್ಬ ನುರಿತ ರೈತನಿಗೆ ಇರುವ ಜ್ಞಾನದಲ್ಲಿ ಇಂಥದ್ದೊಂದು ನಿರ್ಧಾರ ತೆಗೆದು ಕೊಳ್ಳುವುದು ದೊಡ್ಡ ಮಾತೇ ನಲ್ಲ.

ಆದರೆ ಈ ಕೆಲಸವನ್ನು ಕಂಪ್ಯೂಟರ್ ಚಾಲಿತ ಸ್ಪಿನ್‌ಕ್ಲರ್‌ಗೆ ಕೊಟ್ಟರೆ ಹಿಂದೆಲ್ಲ ಆ ಸಮಯಕ್ಕೆ ಮಳೆಯಾಯಿತೋ ಇಲ್ಲವೋ, ಕೆರೆಯಲ್ಲಿ ಎಷ್ಟು ನೀರಿದೆ, ನಾಳೆ ಮಳೆಯಾಗಬಹುದೇ ಎಂಬಿತ್ಯಾದಿ ಯಾವುದೇ ಒಂದನ್ನೂ ಗ್ರಹಿಸದೇ ನೀರು ಹಾಕುತ್ತಿತ್ತು. ಅದೇ ಹೊಸಯುಗದ ತಂತ್ರಜ್ಞಾನವನ್ನು ಹೊಂದಿದ ಕಂಪ್ಯೂಟರಿಗೆ ರೈತನಿಗೆ ಲಭ್ಯವಾಗುವ ಎಲ್ಲ ಮಾಹಿತಿಗಳನ್ನು ಕೊಟ್ಟು ಕ್ರಮೇಣ ಕಂಪ್ಯೂಟರ್ ತಾನೇ ಯಾವಾಗ, ಎಷ್ಟು ಹೊತ್ತಿನಲ್ಲಿ, ಎಷ್ಟು ನೀರು ಬಿಡಬೇಕು ಎನ್ನುವುದನ್ನು ಗ್ರಹಿಸುವುದು – ಇದು ಕೃತಕ ಬುದ್ಧಿವಂತಿಕೆ – ಆರ್ಟಿಫಿಶಿಯಲ್ ಇಂಟೆಲಿಜೆನ್ಸ್.

ಇಲ್ಲಿ ಹೀಗೆ ಮಾಡು ಎನ್ನುವುದಕ್ಕಿಂತ – ಇದು ವಿಷಯ ನೀನೆ ನಿರ್ಧರಿಸು ಎಂದು ಕಂಪ್ಯೂಟರಿಗೆ ಬಿಡುವುದು. ಇದೊಂದು ತೀರಾ ಸಾಧಾರಣ ಉದಾಹರಣೆ.
ಸಾಮಾನ್ಯವಾಗಿ ಸಮಾಜಲ್ಲಿ ಬುದ್ಧಿವಂತ, ಯಶಸ್ವಿ ಎಂದಾದವರು ಹಲವು ಮಾಹಿತಿಗಳನ್ನು ನೆನಪಿಟ್ಟುಕೊಂಡು ಅದನ್ನು ಚೆನ್ನಾಗಿ ಸಂಸ್ಕರಿಸಿ ಬಳಸಿಕೊಳ್ಳು ವವರು. ಡಾಕ್ಟರ್ ನುರಿತ ಎಂದಾಗುವುದು ತನ್ನ ಅನುಭವದಿಂದ. ಅನುಭವ ಎಂದರೇನು? ಹಿಂದಾದ ಘಟನೆಯನ್ನು ನೆನಪಿಟ್ಟು ಅದನ್ನು ಸರಿಯಾಗಿ ವಿಶ್ಲೇಷಣೆಗೆ ಬಳಸಿಕೊಳ್ಳುವುದರ ಜತೆ ತಾನು ಕಲಿತದ್ದನ್ನು ಉಪಯೋಗಿಸುವುದು. ಅಂತೆಯೇ ಮೆಕ್ಯಾನಿಕ್, ರೈತ, ಅಥವಾ ಯಾರೇ ನಿರ್ಧರಿಸುವವರಿರಬಹುದು.

ಇವರೆಲ್ಲರೂ ಅದರಲ್ಲಿ ಯಶಸ್ವಿ ಎಂದಾಗುವುದೇ ಅವರ ಹಿಂದಿನ ಅನುಭವವನ್ನು ಇಂದಿನ ಜ್ಞಾನದೊಂದಿಗೆ ಬಳಸಿಕೊಳ್ಳುವ ತಾಕತ್ತಿನಿಂದಾಗಿ. ಅನುಭವವೆಂದರೆ ಅವರ ತಲೆಯಲ್ಲಿ ಒಂದಿಷ್ಟು ಸಂಬಂಧಪಟ್ಟ ಮಾಹಿತಿ, ನೆನಪು ಮತ್ತು ಅದನ್ನು ಜ್ಞಾನದ ಜತೆ ತಾರ್ಕಿಕವಾಗಿ ಬಳಸುವ ಶಕ್ತಿ. ಈ ತಾರ್ಕಿಕ ಬಳಕೆ ಸಾಧ್ಯವಾಗ ದಿದ್ದಲ್ಲಿ ಅನುಭವಕ್ಕೆ ಬೆಲೆ ಇಲ್ಲ. ಇಲ್ಲಿ ಎಕ್ಪೀರಿಯೆನ್ಸ್ ನಿಂದ ಪಡೆದ ಮಾಹಿತಿ ಮತ್ತು ಅದರ ಸರಿಯಾದ ಬಳಕೆ ಮುಖ್ಯವಾಗುತ್ತದೆ. ಈ ಮಾಹಿತಿಯನ್ನೆಲ್ಲ ಕೊಟ್ಟು ಕಂಪ್ಯೂಟರ್ ಅದನ್ನೆಲ್ಲ ತಾರ್ಕಿಕವಾಗಿ ಗ್ರಹಿಸಬಲ್ಲ ಮತ್ತು ಮನುಷ್ಯ ಸಾದೃಶ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುವುದೇ ಆರ್ಟಿಫಿಶಿಯಲ್ ಇಂಟೆಲಿ ಜೆನ್ಸ್ – ಕೃತಕ ಬುದ್ಧಿವಂತಿಕೆ.

ಇದು ಕೃತಕ ಏಕೆಂದರೆ ಇಲ್ಲಿ ಮಾಹಿತಿಯನ್ನು ಒದಗಿಸಿ ಕೊಡಬೇಕು ಮತ್ತು ಆ ಮಾಹಿತಿಯನ್ನು ತಾರ್ಕಿಕವಾಗಿ ಬಳಸುವುದು ಹೇಗೆ ಎಂಬ ಬಗ್ಗೆ ಕೂಡ ಕರಾರು ವಕ್ಕಾದ ಸೂಚನೆಯಿರಬೇಕು. ಈ ಸೂಚನೆಗಳು ಹೇಗಿರಬೇಕೆಂದರೆ ಮಾಹಿತಿಯನ್ನು ಕಂಪ್ಯೂಟರೇ ಸಂಸ್ಕರಿಸಿ ನಿರ್ಧರಿಸುವಂತೆ. ಇದನ್ನು ಸರಿಯಾಗಿ ಅಭಿವೃದ್ಧಿಗೊಳಿಸಿದರೆ ಮನುಷ್ಯನಿಗೆ ಸಾಧ್ಯವಾಗದ ಕೆಲಸವನ್ನು ಕಂಪ್ಯೂಟರ್ ಮಾಡಬಲ್ಲದು. ಏಕೆಂದರೆ ಕಂಪ್ಯೂಟರ್ ಎಂದರೆ ಅದೊಂದು ಮಷಿನ್ – ಸಲಕರಣೆ. ಅದಕ್ಕೆ ನಮ್ಮಂತೆ, ನಮ್ಮ ಮೆದುಳಿನಂತೆ ಒಂದು ಸಾಧ್ಯತಾ ಪರಿಧಿಯಿರುವುದಿಲ್ಲ. ಡಾಕ್ಟರ್ ಎಂದರೆ ಹೆಚ್ಚೆಂದರೆ ಎಷ್ಟು ಪುಸ್ತಕ ಓದಬಹುದು? ಎಷ್ಟು ರೋಗ ಲಕ್ಷಣ ಗಳನ್ನು, ಒಂದೇ ರೋಗದ ಎಷ್ಟು ವೈವಿಧ್ಯವನ್ನು, ಔಷಧಗಳನ್ನು ನೆನಪಿಟ್ಟುಕೊಳ್ಳಬಹುದು? ಅದೇ ಆ ಕೆಲಸ ಕಂಪ್ಯೂಟರಿಗೆ ಕೊಟ್ಟರೆ? ಸಾಧ್ಯತೆ ಅಪರಿಮಿತ ಮತ್ತು ಅಭಿವೃದ್ಧಿಯಾದಂತೆ ತಪ್ಪಾಗುವ ಸಾಧ್ಯತೆಕೂಡ ಮನುಷ್ಯನಿಗಿಂತ ತೀರಾ ಎನ್ನುವಷ್ಟು ಕಡಿಮೆ.

ಈಗಿನ ಈ ತಂತ್ರಜ್ಞಾನವನ್ನು ಬಳಸಿಕೊಂಡು ಊಹೆಗೂ ನಿಲುಕದ ಸಾಧ್ಯತೆಗಳಿಗೆ ಜಗತ್ತು ತೆರೆದುಕೊಳ್ಳುತ್ತಿದೆ – ಇನ್ ಫೆಕ್ಟ್ ಈಗಾಗಲೇ ತೆರೆದುಕೊಂಡಾಗಿದೆ. ಉದಾಹರಣೆಗೆ ಸೆಲ್ ಡ್ರೈವಿಂಗ್ ಕಾರುಗಳು. ನಾವು ಮನುಷ್ಯರು ಕಾರು ಓಡಿಸುವಾಗ ನಮ್ಮ ಪ್ರತಿಕ್ರಿಯೆ – ಬ್ರೇಕ್ ಹಾಕುವುದು, ಕ್ಲಚ್ ಒತ್ತುವುದು, ಗೇರ್ ಬದಲಿಸುವುದು, ಇಂಡಿಕೇಟರ್ ಹಾಕುವುದು ಹೀಗೆ ಹತ್ತಾರು ಕೈಂಕರ್ಯಗಳನ್ನು ನಿರ್ಧರಿಸುವಾಗ ನಾವು ಗ್ರಹಿಸುವ ಮತ್ತು ಸಂಸ್ಕರಿಸುವ ಮಾಹಿತಿಗಳನ್ನೇ
ಒಂದು ಕ್ಷಣ ಯೋಚಿಸಿ ನೋಡಿ. ಅದೇ ಕೆಲಸವನ್ನು ಕಾರಿನಲ್ಲಿ ಅಡಕವಾದ ಕಂಪ್ಯೂಟರ್ ಒಂದು ಮಾಡುತ್ತದೆಯೆಂ ದರೆ ಆ ಎಲ್ಲ ವಿವೇಚನೆಯನ್ನು ಹೊಂದಿದ ರಷ್ಟೇ ಅದು ಸಾಧ್ಯ.

ರಸ್ತೆಯೆಂದರೆ ಕೋಟಿಗಟ್ಟಲೆ ಸಾಧ್ಯತೆಗಳು. ಆ ಎಲ್ಲ ಸಾಧ್ಯತೆಗಳಲ್ಲಿ ಆ ಕ್ಷಣದಲ್ಲಿ ಎದುರಾಗುವ ಒಂದು ಸಾಧ್ಯತೆಯಲ್ಲಿ ಸ್ವಯಂ ಚಾಲಿತ ಕಾರು ಹೇಗೆ ಕೆಲಸ
ಮಾಡಬೇಕೆಂಬುದನ್ನು ಕ್ಷಣಾರ್ಧದಲ್ಲಿ ಅದೇ ನಿರ್ಧರಿಸಬೇಕು. ಇದನ್ನು ಕಂಪ್ಯೂಟರಿನಲ್ಲಿ ಹೀಗಾದರೆ ಹಾಗೆ ಮಾಡು ಎಂದು ಒಂದಾದ ನಂತರ ಒಂದರಂತೆ ನಿರ್ದೇಶಿಸುವುದು ಅಸಾಧ್ಯ. ಅಲ್ಲಿ ಕೃತಕ ಬುದ್ಧಿವಂತಿಕೆ ಇದ್ದರೆ ಮಾತ್ರ ಸಾಧ್ಯ. ಅಲ್ಲಿ ಆ ಕ್ಷಣಕ್ಕೆ ಎದುರಾಗುವ ಸಾಧ್ಯತೆಯನ್ನು ವಿಶ್ಲೇಷಿಸಿ ನಿರ್ಧಾರಕ್ಕೆ ಬಂದು ಅದು ಕಾರ್ಯರೂಪಕ್ಕೆ ಬರಬೇಕು.

ಅದೆಲ್ಲವೂ ಮಿಲಿಸೆಕೆಂಡುಗಳಲ್ಲಿ ಆಗಬೇಕು. ಇಲ್ಲದಿದ್ದರೆ ಆ ವಾಹನದಲ್ಲಿರುವವರು ಪಡ್ಚ. ಇಲ್ಲಿ ಮೊದಲನೆಯದು ತಾರ್ಕಿಕ ನಿರ್ಧಾರ ತೆಗೆದುಕೊಳ್ಳುವ ಕಂಪ್ಯೂಟರ್ ನಿರ್ದೇಶನಗಳು. ಎರಡನೆಯದೇ ಕೋಟಿ ಕೋಟಿ ಸಾಧ್ಯತೆಗಳ ಮಾಹಿತಿ. ಇವೆರಡೂ ಇದ್ದರೆ ಮಾತ್ರ ಇದು ಸಾಧ್ಯವಾಗುವುದು. ಕಾರಿಗೆ ಆಕಳೊಂದು ಎದುರಿಗೆ ಬಂದಿದೆಯೆಂದರೆ ಮನುಷ್ಯರಾದವರು ಆ ಪ್ರಾಣಿಯನ್ನು ಕ್ಷಣಮಾತ್ರದಲ್ಲಿ ಗುರುತಿಸಿ ಬ್ರೇಕ್ ಹಾಕುತ್ತಾರೆ. ಇಲ್ಲಿ ಆಕಳನ್ನು ಗುರುತಿಸು ವುದು, ಸ್ಪೀಡ್ ಎಷ್ಟು, ಹಿಂದೆ ಬೇರೆ ವಾಹನವಿದೆಯೇ ಎಂದೆಲ್ಲ ಹಲವು ಮಾಹಿತಿಗಳನ್ನು ಅಳೆದು ತೂಗುವುದು ಮೊದಲನೆಯದು.

ಇಲ್ಲಿ ಆಕಳ ಬದಲಿಗೆ ಇಲಿ ಎದುರಾದರೆ ನಮ್ಮ ಪ್ರತಿಕ್ರಿಯೆ ಬೇರೆ. ಈ ಎಲ್ಲ ಗ್ರಹಿಕೆ ಮತ್ತು ತದನಂತರ ತೆಗೆದುಕೊಳ್ಳುವ ನಿರ್ಧಾರ, ಇದನ್ನು ಸ್ವಯಂ ಚಾಲಿತ ಕಾರಿನಲ್ಲಿ ಕಂಪ್ಯೂಟರ್ ಮಾಡಬೇಕು. ಇಲ್ಲಿ ಕಂಪ್ಯೂಟರ್ ತಾನೇ ಇದೆಲ್ಲವನ್ನು ವಿಶ್ಲೇಷಿಸಿ ನಿರ್ಧರಿಸಬೇಕೆಂದರೆ ಲೆಕ್ಕಕ್ಕೆ ಸಿಗದಷ್ಟು ಮಾಹಿತಿ ಅಲ್ಲಿ ಲಭ್ಯವಿರಬೇಕು. ರಸ್ತೆಗಿಳಿದರೆ ಕೋಟಿ ರೀತಿಯ ಸಾಧ್ಯತೆ ಎದುರಾಗುತ್ತದೆ. ಆ ಎಲ್ಲ ಸಾಧ್ಯತೆ ಗಳಲ್ಲಿ ಆ ಕ್ಷಣಕ್ಕೆ ಸರಿಯಾಗುವ, ಸರಿಯೆನಿಸುವ ನಿರ್ಧಾರ ಮನುಷ್ಯ ತೆಗೆದು ಕೊಳ್ಳುವುದು ಸುಲಭ ಮತ್ತು ಸಹಜ ಆದರೆ ಕಂಪ್ಯೂಟರ್, ಯಂತ್ರವೊಂದು ಆ ಕೆಲಸ ಮಾಡಬೇಕು.

ಇಲ್ಲಿ ಮುಖ್ಯವಾಗುವುದೇ ಮಾಹಿತಿಯ, ಸಾಧ್ಯತೆಯ ಲಭ್ಯತೆ. ಸ್ವಯಂ ಚಾಲಿತ ಕಾರಿನ ಉದಾಹರಣೆ ಇಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ವಿವರಣೆಗೆ ಹೇಳಿದ
ವಿಚಾರ. ಈ ರೀತಿಯೇ ಅದೆಷ್ಟೋ ಸಾಧ್ಯತೆಗಳಿವೆ. ಉದಾಹರಣೆಗೆ ಇಡೀ ನೂರು ಕೋಟಿ ಮಂದಿಯ ಆರೋಗ್ಯ ಅನಾರೋಗ್ಯದ ಮಾಹಿತಿಯನ್ನು ಅವರ ಹಿನ್ನೆಲೆ, ಅಭ್ಯಾಸ, ಹವ್ಯಾಸ, ವಂಶವಾಹಿನಿ ಮೊದಲಾದ ವಿಷಯವನ್ನು ಕಂಪ್ಯೂಟರಿಗೆ ಕೊಟ್ಟರೆ ಡಾಕ್ಟರಿನಂತೆ, ಡಾಕ್ಟರಿಗಿಂತ ಹೆಚ್ಚು ಕರಾರುವಕ್ಕಾಗಿ ರೋಗ ಕಾಣಿಸಿ ಕೊಳ್ಳುವ ಮುಂಚೆಯೇ ಅದನ್ನು ಕಂಪ್ಯೂಟರ್ ಊಹಿಸುವುದು ಸಾಧ್ಯ. ಇನ್ನೊಂದು ಉದಾಹರೆಣೆಗೆ – ಇಡೀ ದೇಶದ ಬಾರಿನಲ್ಲಿನ ವಿಡಿಯೊವನ್ನು ಈ ರೀತಿ ಸಂಸ್ಕರಿಸಿದರೆ ಯಾವ ರೀತಿಯ ವ್ಯಕ್ತಿ ಎಷ್ಟು ಕುಡುದರೆ ಹೇಗೆ ವ್ಯವಹರಿಸುತ್ತಾನೆ ಎಂದು ವಿಶ್ಲೇಷಿಸಬಹುದು.

ವ್ಯಕ್ತಿ ಬಾರಿಗೆ ಕಾಲಿಟ್ಟಾಗಲೇ ಅಂದಾಜಿಸಿ ಆ ಬಾರಿನವರು ಆ ವ್ಯಕ್ತಿಗೆ ಎಷ್ಟು ಡ್ರಿಂಕ್ಸ್ ಕೊಡಬಹುದು ಎಂದು ತಿಳಿಯಬಹುದು. ಇನ್ನೊಂದು ಹಂತ ಮುಂದೆ ಹೋಗಿ ಒಬ್ಬ ವ್ಯಕ್ತಿಯ ಎಲ್ಲ ಮಾಹಿತಿಗಳನ್ನು ಒಂದು ಕಡೆ ಗುಡ್ಡೆ ಹಾಕಿ ಅದನ್ನು ಕಂಪ್ಯೂಟರಿಗೆ ಕೊಟ್ಟಾಗ ಆತ ಯಾವ ರೀತಿಯ ವ್ಯಕ್ತಿ – ಆತನ ನಡೆ ನುಡಿಗಳು ಹೇಗೆ, ಆತನಿಗೆ ಸಾಲ ಕೊಡಬಹುದೇ, ಕೊಟ್ಟರೆ ಆತ ತೀರಿಸಬಹುದೇ, ಆ ವ್ಯಕ್ತಿ ಕಳ್ಳನೇ, ಸುಳ್ಳನೇ, ಒಬ್ಬ ಅಪರಾಧಿಗೆ ಜಾಮೀನು ಕೊಡಬಹುದೇ, ಕೊಟ್ಟರೆ ಆತನ ಪೂರ್ವಾಪರದಿಂದಾಗಿ, ವ್ಯಕ್ತಿತ್ವದಿಂದಾಗಿ ಬೇಲ್ ಅನ್ನು ಮೀರುವ ಸಾಧ್ಯತೆಯೇನು ಎಂಬಿತ್ಯಾದಿ ನಿರ್ಧಾರಗಳನ್ನು ಕೂಡ ತೆಗೆದುಕೊಳ್ಳಬಹುದು.

ಇದೆಲ್ಲವನ್ನು ಸೋಷಿಯಲ್ ಪ್ರೊಫೆಲಿಂಗ್ ಎನ್ನಲಾಗುತ್ತದೆ.  ಇದೆಲ್ಲ ಸಾಧ್ಯತೆಗಳಿಂದಾಗಿ ಯಾರು ಯಾವಾಗ ಎಲ್ಲಿ ಹೇಗೆ ಎಷ್ಟು ಸರಕಾರಕ್ಕೆ ಒಪ್ಪುತ್ತಾರೆ ಎಂಬು ದನ್ನು, ಯಾರು ಯಾವ ರೀತಿಯ ಅಪರಾಧ ಎಸಗಬಹುದು ಎಂಬುದನ್ನು ಕೂಡ ಮೊದಲೇ ಗ್ರಹಿಸಬಹುದು, ನಿಗಾ ಇತ್ತು ನಿಯಂತ್ರಿಸಬಹುದು. ಇದು ಇಂದಿನ ತಂತ್ರಜ್ಞಾನ- ಇದು ಅಭಿವೃದ್ಧಿಯಾದಂತೆ ಸಮಾಜದ ಆಗುಹೋಗುಗಳನ್ನು ತೀರಾ ಅಚ್ಚುಕಟ್ಟಾಗಿ ಗ್ರಹಿಸಬಹುದು ಮತ್ತು ಜನರನ್ನು ಹಿಡಿತದಲ್ಲಿ ಇಟ್ಟುಕೊಳ್ಳಬ ಹುದು. ಇದೆಲ್ಲ ಮಾಹಿತಿ ತಂತ್ರಜ್ಞಾನದಿಂದ ಯಾರಿಗೆ ಏನು ಇಷ್ಟ, ಯಾರು ಯಾವ ವಾರ ಏನನ್ನು ಖರೀದಿಸಬಹುದು, ಏನನ್ನು ತಿನ್ನಬಹುದು, ಯಾವ ರೀತಿಯ ಬಟ್ಟೆಯನ್ನು ಖರೀದಿಸಬಹದು ಎನ್ನುವುದನ್ನು ಕೂಡ ಗ್ರಹಿಸುವ, ಆ ಮೂಲಕ ಅವರ ಸುಪ್ತಮನಸ್ಸಿನಲ್ಲಿದ್ದದ್ದನ್ನು ಗ್ರಹಿಸಿ ಜಾಗ್ರತವಾಗುವಂತೆ ಮಾಡಿ ಅವರ ನಿರ್ಧಾರಗಳನ್ನು ನಿರ್ದೇಶಿಸುವ ಕೆಲಸವನ್ನು ಕೂಡ ಮಾಡಬಹುದು.

ಈ ತಂತ್ರಜ್ಞಾನದ ಸಾಧ್ಯತೆಗೆ ಮಿತಿಯೆನ್ನುವುದೇ ಇಲ್ಲ. ಆದರೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿನ ಕಾನೂನಿನಲ್ಲಿ ಈ ಎಲ್ಲವಕ್ಕೂ ಒಂದಿಷ್ಟು ನಿಬಂಧನೆಗಳಿವೆ. ಯಾವ ಮಾಹಿತಿಯನ್ನು ಹೇಗೆ ಎಷ್ಟು ಬಳಸಬಹುದು ಎನ್ನುವ ಬಗ್ಗೆ ನಿರ್ಬಂಧಗಳಿವೆ. ಅಮೆರಿಕದಲ್ಲಿ ಅಥವಾ ಕೆಲವು ಆಧುನಿಕ ರಾಷ್ಟ್ರಗಳಲ್ಲಿ ರೋಗಕ್ಕೆ ಸಂಬಂಧಿ ಸಿದ ಅಥವಾ ಕೆಲವು ತೀರಾ ವೈಯಕ್ತಿಕವೆನ್ನುವ ಮಾಹಿತಿಯನ್ನು ಬಳಸುವಲ್ಲಿ ನಿರ್ಬಂಧಗಳಿವೆ. ಆದರೆ ಚೀನಾದಲ್ಲಿನ ವ್ಯವಸ್ಥೆ ಮಾತ್ರ ಹಾಗಲ್ಲ. ಅಲ್ಲಿನ
ಸರಕಾರ ನಿರ್ಧರಿಸಿತೆಂದರೆ ಅದಕ್ಕೆ ತಗಾದೆ ತೆಗೆಯುವ ಯಾವುದೇ ಸ್ವಾತಂತ್ರ್ಯ ಅಲ್ಲಿಲ್ಲ.

ಚೀನಾ ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆಯ ದೇಶ. ಅಲ್ಲದೆ ಇಂದು ಅವರ ತಾಂತ್ರಿಕ ಆವಿಷ್ಕಾರಕ್ಕೆ ಪೂರಕವಾಗುವುದು ಅಲ್ಲಿನ ಸರಕಾರಿ ವ್ಯವಸ್ಥೆ. ಇಂದು ಅಲ್ಲಿನ ಸರಕಾರದ ಸಾರ್ವಭೌಮತ್ವದಿಂದಾಗಿ ಎಗ್ಗಿಲ್ಲದ ಮಾಹಿತಿ ಗಳನ್ನು ಈಗ ಕಲೆಹಾಕಲಾಗುತ್ತಿದೆ. ಅದರಲ್ಲಿ ಮುಖ್ಯವಾದದ್ದೇ ಈ ಸೋಷಿಯಲ್ ಪ್ರೊಫೆಲಿಂಗ್ – ವ್ಯಕ್ತಿಯ ಸಾಮಾ ಜಿಕ ವರ್ಗೀಕರಣ. ಜಗತ್ತಿನ ಎಲ್ಲ ಸಿಸಿಟಿವಿಗಳಲ್ಲಿ 50% ಸಿಸಿಟಿವಿ ಇರುವುದು ಇಂದು ಚೀನಾದಲ್ಲಿ. ಜಗತ್ತಿನಲ್ಲಿ ಒಂದು ಅಂದಾಜಿನ ಪ್ರಕಾರ ಇಂದು 80 ಕೋಟಿ ಸರ್ವೇಲೆನ್ಸ್ ಕ್ಯಾಮರಾಗಳಿದ್ದರೆ ಅದರಲ್ಲಿ 57 ಕೋಟಿ ಕ್ಯಾಮರಾಗಳು ಇರುವುದು ಚೀನಾದಲ್ಲಿ.

ಈ ಎಲ್ಲ ಕ್ಯಾಮರಾಗಳಲ್ಲಿ ಸೆರೆಯಾಗುವ ಎಲ್ಲ ಮಾಹಿತಿಗಳು ಅಲ್ಲಿನ ಸರಕಾರಕ್ಕೆ ಲಭ್ಯ. ಅದನ್ನು ಸಂಸ್ಕರಿಸಿ ಸಾವಿರದೆಂಟು ರೀತಿಯ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಡೀಪ್ ಲನಿಂಗ್‌ಗೆ ಬಳಕೆಯಾಗುತ್ತದೆ. ಅಲ್ಲಿ ಮಾಹಿತಿಯ, ವ್ಯಕ್ತಿಯ ಗೌಪ್ಯತೆ ಎನ್ನುವುದು ಸರಕಾರಕ್ಕೆ ಲಾಗುವಾಗುವುದಿಲ್ಲ. ಬೀಜಿಂಗ್‌ನ ಕೆಲವು ರೆಸ್ಟೋರೆಂಟಿಗೆ ಹೋದರೆ ಕ್ಯಾಮರಾದ ಎದುರಿಗೆ ನಿಂತರೆ ಸಾಕು, ವ್ಯಕ್ತಿಯ ಮುಖವನ್ನು ಗ್ರಹಿಸಿ ಎಲ್ಲ ರೋಗಗಳ ಮಾಹಿತಿಯನ್ನು ಪ್ರೊಫೈಲ್ ನಿಂದ ಪಡೆದು ಏನನ್ನು ತಿನ್ನಬೇಕು ಎಂದು ಹೇಳುವುದರ ಜತೆ ಅವರ ಖಾತೆಯಿಂದ ಹಣಸಂದಾಯದವರೆಗೆ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದ ಸಾಧ್ಯವಾಗಿದೆ.

ಒಳ್ಳೆಯದೇ ಅಲ್ಲವೇ? ಆದರೆ ಒಂದೊಮ್ಮೆ ಒಂದು ಸಾವಿರ ಅಥವಾ ಲಕ್ಷ ಮಂದಿ ಚೀನಾದ ಸರಕಾರದ ವಿರುದ್ಧ ಜಾಥಾ ಹೊರಟರೆ ಆ ಎಲ್ಲ ಜನರ ಮುಖವನ್ನು ಕ್ಯಾಮರದಲ್ಲಿಯೇ ಗ್ರಹಿಸಿ, ಅವರ ಊರು ವಿಳಾಸ ತಿಳಿದು ದಿನದೊಳಗೆ ಬಂಧಿಸುವುದು ಕೂಡ ಅಲ್ಲಿ ಸಾಧ್ಯ. ಇಂದು ಈ ತಂತ್ರಜ್ಞಾನ ದಿಂದಾಗಿ ಚೀನಾದಲ್ಲಿ ಮುಖ ತೋರಿಸಿ ಎಟಿಎಂ ನಿಂದ ಹಣ ಪಡೆಯಬಹುದು, ವಿಮಾನ ಪ್ರಯಾಣದ ಸಮಯದಲ್ಲಿ ಚೆಕ್ ಇನ್ ಮಾಡಬಹುದು, ಅದರ ಜತೆ ಜತೆಗೆ ಮನುಷ್ಯನ ಭಾವನೆ ಗಳನ್ನು ಕೂಡ ಇಂದು ಕ್ಯಾಮರಾ ಗ್ರಹಿಸುವ ಹಂತಕ್ಕೆ ಅಲ್ಲಿ ತಲುಪಿ ಆಗಿದೆ.

ಚೀನಾ ಇಂದು ಹೈಪರ್ ಸರ್ವೇಲೆನ್ಸ್ – ಎಂದರೆ ಅತ್ಯಾಧುನಿಕ ಸರಕಾರಿ ಕಣ್ಗಾವಲು ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ನಿರತವಾಗಿದೆ. ಚೀನಾ ಸರಕಾರಕ್ಕೆ ಕೇಳಿದರೆ
ಇದೆಲ್ಲ ರಾಮರಾಜ್ಯ ನಿರ್ಮಾಣಕ್ಕೆ ಬೇಕು ಎನ್ನುವ ರೀತಿಯ ಉತ್ತರ. ಆದರೆ ಈ ಮೂಲಕ ಇಂದು ಚೀನಾ ಅದರ ಜನಸಂಖ್ಯೆಯ 90% ಎಂದರೆ 126 ಕೋಟಿ ಮಂದಿಯನ್ನು ಪ್ರತೀ ಕ್ಷಣ ಕಣ್ಗಾವಲು ಮಾಡುತ್ತಿದೆ. ಈ ಅಷ್ಟೂ ಮಂದಿಯ ಭಾವನೆ, ಲೈಂಗಿಕ ಒಲವು, ವಯಸ್ಸು, ಆಸೆ, ರಾಜಕೀಯ ವಾಲಿಕೆ ಹೀಗೆ ಅಕ್ಷರಶಃ ಪ್ರತಿಯೊಂದರ ಮೇಲೆ ನಿಗಾ ಇಡುವ ಕೆಲಸ ನಡೆಯುತ್ತಿದೆ. ಈಗಾಗಲೇ ಸಾಮಾಜಿಕ ಅವಮಾನ ಗಳಿಗೆ ಕೂಡ ಈ ಎಲ್ಲ ಮಾಹಿತಿ ಬಳಕೆಯಾಗುತ್ತಿದೆ.

ಅಲ್ಲಿ ಸಿಗ್ನಲ್ ಅಲಕ್ಷಿಸಿ ರಸ್ತೆ ದಾಟಲು ಮುಂದಾದರೆ ಕ್ಷಣಾರ್ಧದಲ್ಲಿ ರಸ್ತೆಯ ಪಕ್ಕದಲ್ಲಿರುವ ದೊಡ್ಡ ಫಲಕದಲ್ಲಿ ಆ ವ್ಯಕ್ತಿಯ ಫೋಟೋ, ವಿಳಾಸ, ಹೆಸರು ಎಲ್ಲವೂ ಕಾಣಿಸಿಕೊಳ್ಳುತ್ತದೆ. ಬೀಜಿಂಗ್‌ನಲ್ಲಿ ಇದೇ ಟೆಕ್ನಾಲಜಿಯನ್ನು ಸಾರ್ವಜನಿಕ ಶೌಚಾಲಯದಲ್ಲಿ ಟಾಯ್ಲೆಟ್ ಪೇಪರ್ ಕದಿಯದಂತೆ ತಡೆ ಯಲು ಕೂಡ ಬಳಕೆಯಾಗು ತ್ತಿದೆ ಎಂದರೆ ನೀವೇ ಅಂದಾಜಿಸಿ, ಅಲ್ಲಿನ ಸರಕಾರ ಏನೇನು ಮಾಹಿತಿಯನ್ನು ಅಲ್ಲಿನ ನಾಗರಿಕರ ಬಗ್ಗೆ ಕಲೆಹಾಕುತ್ತಿದೆ ಎಂದು. ಅಲ್ಲಿನ ಸರಕಾರಕ್ಕೆ ಅಲ್ಲಿನ ನಾಗರಿಕ ಎಷ್ಟು ಸಲ ಮೂತ್ರಕ್ಕೆ ಹೋಗುತ್ತಾನೆ ಎಂದೂ ತಿಳಿಯುವ ಸಾಧ್ಯತೆಯಿದೆ ಅಥವಾ ಅದು ಕೂಡ ಗೊತ್ತು.

ಬೀಜಿಂಗ್‌ನ ಪೊಲೀಸರು ಈಗಾಗಲೇ ಮುಖವನ್ನು ಗುರುತಿಸುವ ಕನ್ನಡಕಗಳನ್ನು ಬಳಸುತ್ತಿದ್ದಾರೆ. ಇದರಿಂದ ಅಪರಾಧಿಗಳು ಅವರ ಕಣ್ಣೆದುರಿಗೆ ಬಂದರೆ ಕ್ಷಣಾರ್ಧದಲ್ಲಿ ಗೊತ್ತಾಗಿಬಿಡುತ್ತದೆ. ಅಲ್ಲಿ ಅಪರಾಧವೆಸಗಿ ಕೇಸ್ ದಾಖಲಾಗುವುದಕ್ಕಿಂತ ಮೊದಲೇ ಅಪರಾಽಯನ್ನು ಹಿಡಿಯುವುದು ಕೂಡ ಸಾಧ್ಯ. ಇದು ಒಂದು ಕಡೆ. ಆದರೆ ಚೀನಾ ಈ ತಂತ್ರಜ್ಞಾನವನ್ನು ಅಷ್ಟಕ್ಕೇ ಬಳಸಿಕೊಳ್ಳುತ್ತಿಲ್ಲ. ಶಿನ್ ಜಿಯಾಂಗ್ ಚೀನಾದ ಅಲ್ಪಸಂಖ್ಯಾತ ಮುಸ್ಲಿಮರು ವಾಸಿಸುವ ಜಾಗ. ಅಲ್ಲಿನ
ಸ್ಥಳೀಯ ಸಂಸ್ಥೆಯೊಂದರ ಪ್ರಕಾರ ಸುಮಾರು ಹತ್ತು ಲಕ್ಷ ಮಂದಿ ಪ್ರತ್ಯೇಕತಾವಾದಿಗಳನ್ನು ಚೀನಾ ಇದೆ ತಂತ್ರಜ್ಞಾನ ಬಳಸಿಕೊಂಡು ಸೀಮಿತ ಸ್ಥಳದಲ್ಲಿ ಪರೋಕ್ಷವಾಗಿ ಬಂಧಿಸಿ ಬಿಟ್ಟಿದೆ. ಇದನ್ನು ಜಗತ್ತಿನ ಅತಿ ದೊಡ್ಡ ಬಂಧನದ ವ್ಯವಸ್ಥೆ ಎಂದೇ ಹೇಳಲಾಗುತ್ತದೆ.

ಅಲ್ಲಿನ ವ್ಯವಸ್ಥೆ ಹೇಗಿದೆಯೆಂದರೆ ಈ ಜಾಗದಲ್ಲಿರುವ ಯಾವೊಬ್ಬ ಮುಸ್ಲಿಂ ಕೂಡ ಮನೆಯಿಂದ ಮುನ್ನೂರು ಮೀಟರ್ ಆಚೆ ಹೋದರೆ ಅಲ್ಲಿನ ಪೊಲೀಸರಿಗೆ
ಕ್ಷಣಾರ್ಧದಲ್ಲಿ ಮಾಹಿತಿ ರವಾನೆಯಾಗುತ್ತದೆ. ಮುಂದಿನ ದಿನಗಳಲ್ಲಿ ಚೀನಾ ಸರಕಾರ ಇನ್ನಷ್ಟು ಅಂಕುಶಕ್ಕೆ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಮುಂದಾಗುವ ಬಗ್ಗೆ ಜಗಜ್ಜಾಹೀರವಾಗಿಯೇ ಹೇಳಿಕೊಂಡಿದೆ. ಇದೆಲ್ಲ ಅಕ್ಷರಶಃ ಸರಕಾರದ ಸರ್ವಾಧಿಕಾರದ ನಡೆಗಳು. ಇದೆಲ್ಲವನ್ನು, ಮಾನವ ಹಕ್ಕನ್ನು ಪ್ರಶ್ನಿಸಲು ಅಲ್ಲಿ ಯಾರೂ ಇಲ್ಲ. ಏಕೆಂದರೆ ಎಲ್ಲಿಯೇ ಅಲ್ಲಿನ ಸರಕಾರೀ ಅಂಕುಶತ್ವವನ್ನು ಪ್ರಶ್ನಿಸಿದರೆ ಪ್ರಶ್ನಿಸಿದ್ದು ಯಾರು, ಎಲ್ಲಿ, ಯಾವರೀತಿ ಎಂದು ಸರಕಾರಕ್ಕೆ ಕ್ಷಣಾರ್ಧದಲ್ಲಿ ತಿಳಿದುಬಿಡುತ್ತದೆ.

ಇದು ಒಂದು ಆಯಾಮದಲ್ಲಿ ಒಳ್ಳೆಯದೆನ್ನಿಸಿದರೂ ಮನುಷ್ಯನ ಸ್ವಾತಂತ್ರದ, ಗೌಪ್ಯತೆಯ ಪ್ರಶ್ನೆ ಎದ್ದಾಗ ಇದೆಲ್ಲ ಅತಿಯೆನ್ನಿಸುತ್ತದೆ. ಅಲ್ಲದೆ ಈ ಮಾಹಿತಿ ಮತ್ತು ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಹೇಗೆಲ್ಲ ಸರಕಾರದಿಂದ ಬಳಸಲ್ಪಡಬಹುದು ಎನ್ನುವುದು ಇಂದು ಚೀನಾದಲ್ಲಿನ ಬಹುತೇಕರ ಆತಂಕದ ವಿಚಾರ. ಅದನ್ನು  ಪ್ರಶ್ನಿಸುವಂತಿಲ್ಲ, ದಂಗೆಯೇಳುವಂತಿಲ್ಲ. ಅಲ್ಲದೇ ಇದು ಅಭಿವೃದ್ಧಿ ಹೊಂದಿದ ನಂತರ ಅದನ್ನು ಬೇರೆ ದೇಶದವರು, ಅಲ್ಲೆಲ್ಲಿಯದೋ ಸರ್ವಾಧಿಕಾರ ಅನ್ಯ ಉದ್ದೇಶಕ್ಕೆ ಹೇಗೆ ಬಳಸಬಹುದು ಎನ್ನುವುದು. ಒಟ್ಟಾರೆ ಸರಕಾರ ನಿಮ್ಮನ್ನು – ಎಲ್ಲರನ್ನೂ ಪ್ರತೀ ಕ್ಷಣ ನೋಡುತ್ತಿದೆ, ಅಲ್ಲದೇ ನಿಮ್ಮ ವರ್ತನೆ ಮತ್ತು  ನಡವಳಿಕೆ ಯನ್ನು ನಿಯಂತ್ರಿಸುತ್ತದೆ ಎನ್ನುವುದೇ ಅರಗಿಸಿಕೊಳ್ಳಲು ಸಾಧ್ಯವಾಗದ ಮಾತು.

ಅಲ್ಲದೇ ಈ ಎಲ್ಲ ತಂತ್ರಜ್ಞಾನ ಮತ್ತು ಮಾಹಿತಿಯನ್ನು ಈಗಾಗಲೇ ಆಕ್ರಮಣಕಾರೀ ಮನೋಭಾವವುಳ್ಳ ಚೀನಾ ಬೇರೆ ದೇಶಗಳ ಮೇಲೆ ಹೇಗೆ ಪ್ರಯೋಗಿಸ ಬಲ್ಲದು ಎನ್ನುವ ಆತಂಕ ಅಮೆರಿಕ, ಭಾರತ ಮತ್ತು ಹಲವು ದೇಶಗಳಿಗೆ ಇದೆ. ಆ ಕಾರಣಕ್ಕಾಗಿಯೇ ಭಾರತದಲ್ಲಿ ಕೆಲವು ಆಪ್‌ಗಳನ್ನೂ ನಿಷೇಧಿಸಿದ್ದು. ಒಟ್ಟಾರೆ ನಿರಂಕುಶವಾದಿ ಚೀನಾ ಮತ್ತು ಅಲ್ಲಿನ ಸರಕಾರಕ್ಕೆ ಈ ತಂತ್ರಜ್ಞಾನ ವರವಾಗಿದೆ ಆದರೆ ಅಲ್ಲಿನ ಮಂದಿಗೆ? ಉಳಿದವರಿಗೆ? ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್, ಅಮೆರಿಕ ಕೂಡ ಈ ತಂತ್ರಜ್ಞಾನವನ್ನು ತಕ್ಕ ಮಟ್ಟಿಗೆ ಬಳಸುತ್ತಿದ್ದು ಕೆಲವು ವರ್ಷವೇ ಆಯಿತು.

ಚೀನಾ ಇದನ್ನು ಬಳಸುವ ರೀತಿ ನೀತಿಯೇ ಬೇರೆ. 2011 ರಲ್ಲಿ ಅಂದಿನ ಗೂಗಲ್ ಚೇರ್‌ಮನ್ ಈ ತಂತ್ರಜ್ಞಾನವನ್ನು ತನ್ನ ಕಂಪನಿ ಅಭಿವೃದ್ಧಿಪಡಿಸುವುದಿಲ್ಲ
ಏಕೆಂದರೆ ಇದನ್ನು ತಪ್ಪು ಕೆಲಸಕ್ಕೆ ಬಳಸುವ ಸಾಧ್ಯತೆಯೇ ಹೆಚ್ಚು ಎಂದಿದ್ದ. ನಂತರದಲ್ಲಿ ಆ ಕಂಪನಿ ಕೂಡ ತನ್ನ ನಿಲುವನ್ನು ಬದಲಿಸಿಕೊಂಡದ್ದು ಬೇರೆ ವಿಚಾರ. ಒಟ್ಟಾರೆ ಜಗತ್ತನ್ನು ಕ್ರಮೇಣ ಬದಲಿಸುವ ಶಕ್ತಿಯುಳ್ಳ ಈ ಹೊಸ ತಂತ್ರಜ್ಞಾನದ ಬಗ್ಗೆ ತಿಳಿದಿರಬೇಕು. ಇದೆಲ್ಲವನ್ನು ಒಳ್ಳೆಯದೋ ಕೆಟ್ಟದ್ದೋ ಎಂಬ ದ್ವಂದ್ವ ಇಟ್ಟುಕೊಂಡೇ ನೋಡಬೇಕು.

Leave a Reply

Your email address will not be published. Required fields are marked *

error: Content is protected !!