Sunday, 8th September 2024

ಹಿಂದಿ ಹೇರಿಕೆ: ಎಲ್ಲ ಸರಕಾರಗಳ ಕೂಸು

ಅಶ್ವತ್ಥಕಟ್ಟೆ

ranjith.hoskere@gmail.com

ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದುರಾದಾಗಲೆಲ್ಲ ಕರ್ನಾಟಕಕ್ಕೆ ಒಂದು ಗಟ್ಟಿ ‘ಪ್ರಾದೇಶಿಕ ಪಕ್ಷ’ದ ಅಗತ್ಯವಿದೆ ಎನಿಸು ತ್ತದೆ. ತಮಿಳುನಾಡಿನಲ್ಲಿರುವ ಡಿಎಂಕೆ, ಅಣ್ಣಾ ಡಿಎಂಕೆ ರೀತಿಯ ಪ್ರಾದೇಶಿಕ ಪಕ್ಷಗಳು ಕರ್ನಾಟಕಕ್ಕೆ ಅಗತ್ಯವಿದೆ.

ಇಡೀ ದೇಶದಲ್ಲಿ ಕಳೆದೊಂದು ವಾರದಿಂದ ‘ಹಿಂದಿ ಹೇರಿಕೆ’ ಎನ್ನುವ ಆಕ್ರೋಶ ಮತ್ತೆ ಜೋರಾಗಿದೆ. ಅದರಲ್ಲಿಯೂ ದಕ್ಷಿಣ ಭಾರತದ ರಾಜ್ಯ ಗಳಲ್ಲಿ ಈ ಟೀಕೆ ಜೋರಿಗಾಯೇ ಇದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಸರಕಾರದ ವಿರುದ್ಧ ದಕ್ಷಿಣ ಭಾರತದ ನಾಯಕರು ಬೊಬ್ಬೆ ಹಾಕುತ್ತಿದ್ದಾರೆ.

ಸಾಮಾನ್ಯವಾಗಿ ಹಿಂದಿ ದಿವಸ್ ಸಮಯದಲ್ಲಿ ‘ಹಿಂದಿ ಹೇರಿಕೆ’ ಎನ್ನುವ ಟ್ರೇಂಡ್ ಕೇಳಿಬರುವುದು ಸಹಜ. ಆದರೆ ಈಗ ಕೇಳಿ ಬರುವುದಕ್ಕೆ ಇರುವ ಪ್ರಮುಖ ಕಾರಣವೆಂದರೆ, ಗೃಹ ಇಲಾಖೆ ನೀಡಿರುವ ಒಂದು ವರದಿ. ಐಐಟಿಯಂತಹ ಸಂಸ್ಥೆಗಳಲ್ಲಿ ಇಂಗ್ಲಿಷ್‌ಗಿಂತ ಸ್ಥಳೀಯ ಭಾಷೆಗಳಿಗೆ ಒತ್ತು ನೀಡಬೇಕು. ಹಿಂದಿ ಮಾತನಾಡುವ ರಾಜ್ಯಗಳ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಂದಿ, ಹಿಂದಿಯೇತರ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯಲ್ಲಿಯೇ ಬೋಧನಾ ಕ್ರಮವಿರಬೇಕು ಎನ್ನುವ ಶಿಫಾರಸು ಈ ಹೊಸ ವಿವಾದಕ್ಕೆ ಕಾರಣವಾಗಿದೆ.

ಮೇಲ್ನೋಟಕ್ಕೆ ಹಿಂದಿ ಮಾತನಾಡುವ ರಾಜ್ಯದಲ್ಲಿ ಹಿಂದಿ ಭಾಷೆ, ಹಿಂದಿಯಲ್ಲದೇ ಬೇರೆ ಭಾಷೆ ಮಾತನಾಡುವ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಪಾಠ ಮಾಡಲು ಅವಕಾಶ ನೀಡುವುದರಲ್ಲಿ ಇರುವ ತಪ್ಪೇನು? ಪರಕೀಯ ಭಾಷೆಯಾಗಿರುವ ಇಂಗ್ಲಿಷ್ ಬದಲಿಗೆ, ಸ್ಥಳೀಯ ಭಾಷೆಗಳಿಗೆ ಒತ್ತು ನೀಡುವ ಸಲುವಾಗಿ ಈ ಶಿಫಾರಸು ಮಾಡಲಾಗಿದೆ. ಆದರೆ ದಕ್ಷಿಣ ಭಾರತ ದಲ್ಲಿ ಈ ಶಿಫಾರಸಿನಲ್ಲಿ ಸ್ಥಳೀಯ ಭಾಷೆಗಳು ಎಂದರೆ, ಕೇವಲ ‘ಹಿಂದಿ’ ಎಂದು ಏಕೆ ಅರ್ಥೈಸಿಕೊಳ್ಳಲಾಯಿತು. ಕೆಲವೊಮ್ಮೆ ದಕ್ಷಿಣ ಭಾರತದ ರಾಜ್ಯಗಳಲ್ಲಿರುವ ಒಗ್ಗಟ್ಟಿನ ಸಮಸ್ಯೆಯಿಂದ ಸ್ಥಳೀಯ ಭಾಷೆಗಳಿಗೆ ಸಂಬಂಧಿಸಿದ ಆದೇಶಗಳು ಕೇವಲ ‘ಕಾಗದ’ದಲ್ಲಿಯೇ ಉಳಿಯುತ್ತವೆ ಎನ್ನುವುದು ಕೆಲವರ ಆರೋಪವಾಗಿದೆ.

ಈ ರೀತಿ ಇತರೆ ಭಾಷೆಗಳನ್ನು ಹೊರತುಪಡಿಸಿ, ಹಿಂದಿಗೆ ಮಾತ್ರ ಹೆಚ್ಚು ಪ್ರಾಶಸ್ತ್ಯ ಸಿಗುವುದಕ್ಕೆ ಕಾರಣವೂ ಇದೆ. ಅದು ಕೇವಲ ಬಿಜೆಪಿ ಕಾಲದಲ್ಲಿ ಅಥವ ಕಾಂಗ್ರೆಸ್ ಕಾಲದಲ್ಲಿ ಆಗಿದೆ ಎಂದಲ್ಲ. ಎಲ್ಲ ಸರಕಾರಗಳು ಇದೇ ರೀತಿಯಲ್ಲಿ ಮಾಡಿಕೊಂಡು ಬಂದಿವೆ. ಸ್ವಾತಂತ್ರ್ಯ ನಂತರ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರು ಅವರ, ‘ತ್ರಿಭಾಷ’ ಸೂತ್ರವೇ ಇಂದಿನ ಈ ಪರಿಸ್ಥಿತಿಗೆ ಕಾರಣ.

ದೇಶದ ಎಲ್ಲ ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ಭಾಷೆಯಾಗಿ ‘ಇಂಗ್ಲಿಷ್’, ದೇಶದ ಭಾಷೆಯಾಗಿ ‘ಹಿಂದಿ’ ಹಾಗೂ ಅಲ್ಲಿನ
ಸ್ಥಳೀಯ ಭಾಷೆಯನ್ನು ಕಲಿಸಬೇಕು ಎನ್ನುವ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಒಂದು ವೇಳೆ ಹಿಂದಿಯೇ ಆ ರಾಜ್ಯದ ಸ್ಥಳೀಯ ಭಾಷೆಯಾಗಿದ್ದರೆ, ಅಂತಹ ರಾಜ್ಯಗಳಲ್ಲಿ ದಕ್ಷಿಣ ಭಾರತದ ಅಥವಾ ಈಶಾನ್ಯ ರಾಜ್ಯಗಳ ಒಂದು ಭಾಷೆಯನ್ನು ಕಲಿಸಬೇಕು ಎನ್ನುವ ತೀರ್ಮಾನವನ್ನು ಮಾಡಿಕೊಳ್ಳಲಾಯಿತು. ಈ ತೀರ್ಮಾನದಂತೆ ನಡೆದಿದ್ದರೆ, ದಕ್ಷಿಣ ಭಾರತದಲ್ಲಿ ಹಿಂದಿ ಹಾಗೂ ಉತ್ತರ ಭಾರತದಲ್ಲಿ ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುವು, ಮಲಯಾಳಂನಲ್ಲಿ ಯಾವುದಾದರೂ ಒಂದನ್ನು
ಹಿಂದಿ ಮಾತನಾಡುವ ರಾಜ್ಯಗಳು ಕಲಿಸಬೇಕಿತ್ತು.

ಆದರೆ ಕಳೆದ ಏಳು ದಶಕದಲ್ಲಿ ದಕ್ಷಿಣ ಭಾರತದಲ್ಲಿ ಮಾತ್ರ ಹಿಂದಿ ಕಲಿಕೆಯಾಗುತ್ತಿದೆ ಹೊರತು, ಹಿಂದಿ ಆಡಳಿತವಿರುವ
ರಾಜ್ಯಗಳಲ್ಲಿ ‘ದ್ವಿಭಾಷ’ ನೀತಿಯನ್ನೇ ಅನುಸರಿಸಲಾಗುತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಈಗಲೂ ಹಿಂದಿ ಭಾಷೆಯನ್ನು ಹೊರತುಪಡಿಸಿ ಯಾವ ಭಾಷೆಯನ್ನು ಗಂಭೀರವಾಗಿ ಕಲಿಸುವುದಿಲ್ಲ ಎನ್ನುವುದು ಸ್ಪಷ್ಟ.

ಹಾಗೇ ನೋಡಿದರೆ ಭಾರತದ 12ಕ್ಕೂ ಹೆಚ್ಚು ರಾಜ್ಯಗಳಲ್ಲಿ ಹಿಂದಿಯನ್ನೇ ಆಡಳಿತ ಭಾಷೆಯನ್ನಾಗಿ ಅಳವಡಿಸಿಕೊಳ್ಳಲಾಗಿದೆ. ಇನ್ನು ಕೆಲವು ಗುಜರಾತ್, ಪಂಜಾಬ್‌ನಂತಹ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗಳನ್ನು ಆಡಳಿತ ಭಾಷೆಯನ್ನಾಗಿ ಇಟ್ಟುಕೊಂಡಿದ್ದರೂ, ಹಿಂದಿಯೇ ಪ್ರಮುಖ ಭಾಷೆಯಾಗಿದೆ. ದಕ್ಷಿಣ ಭಾರತದ ಆರೇಳು ರಾಜ್ಯಗಳನ್ನು ಹೊರತುಪಡಿಸಿದರೆ,
ಇನ್ನುಳಿದ ಎಲ್ಲ ರಾಜ್ಯಗಳಲ್ಲಿಯೂ ಇಂಗ್ಲಿಷ್‌ಗಿಂತ ಹೆಚ್ಚು ಹಿಂದಿ ಪ್ರಭಾವ ಹೊಂದಿರುವ ಭಾಷೆಯಾಗಿದೆ. ಆದ್ದರಿಂದ ‘ಹಿಂದಿ ಹೇರಿಕೆ’ ಎಂದು ದಕ್ಷಿಣ ಭಾರತದವರು ಎಂದು ಹೇಳುತ್ತಾ ಬಂದರೂ, ರಾಜಕೀಯವಾಗಿ ಇದನ್ನು ವಿರೋಧಿಸುವ ದಾಷ್ಟ್ಯವನ್ನು ತಮಿಳುನಾಡು ಹೊರತು ಪಡಿಸಿದರೆ ಯಾವ ರಾಜ್ಯಗಳು ತೋರಿಲ್ಲ ಎನ್ನುವುದೇ ವಿಪರ್ಯಾಸ.

ಹೌದು, ಕೇಂದ್ರ ಸರಕಾರ ತ್ರಿಭಾಷ ನೀತಿಯಲ್ಲಿ ಜಾರಿಗೊಳಿಸಿದ ಬಳಿಕ, ಅದನ್ನು ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳು ತಮ್ಮ ವಿಧಾನಮಂಡಳದಲ್ಲಿ ಯಥಾವತ್ತಾಗಿ ಅನುಮೋದಿಸಿ ಕಳುಹಿಸಿವೆ. ಆದರೆ ಈ ವಿಷಯದಲ್ಲಿ ಪ್ರಶ್ನಿಸುವ
ಧೈರ್ಯವನ್ನು ಕರ್ನಾಟಕದ ಯಾವ ಸರಕಾರಗಳೂ ಮಾಡಲಿಲ್ಲ. ಕೇವಲ 1967ರಲ್ಲಿ ಸರಕಾರ ಮಾಡಿರುವ ಎಡವಟ್ಟು ಗಳಲ್ಲ. ಅದಾದ ಬಳಿಕ ಹಲವು ಬಾರಿ ತಿದ್ದುಪಡಿ ಕಾಯಿದೆಗಳು ಬಂದಾಗಲೆಲ್ಲ, ಅವುಗಳನ್ನು ಪ್ರಶ್ನಿಸುವ ಅಥವಾ ತಡೆ ಹಿಡಿಯುವ ಪ್ರಯತ್ನವನ್ನು ಯಾರೊಬ್ಬರೂ ಮಾಡಲಿಲ್ಲ.

ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಓರಿಸ್ಸಾ, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಬಹುತೇಕ ರಾಜ್ಯಗಳು ಈ
ವಿಷಯದಲ್ಲಿ ಎಡವಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ತಂದ ಕೆಲವು ಮಾರ್ಪಾಡುಗಳು, ಹಿಂದಿಯನ್ನು ರಾಜ್ಯ ಭಾಷೆಗಳ
ಮೇಲೆ ಹೇರಿಕೆ ಮಾಡುವುದಕ್ಕೆ ಇನ್ನಷ್ಟು ಸಹಕಾರಿಯಾಯಿತು ಎಂದರೆ ತಪ್ಪಾಗುವುದಿಲ್ಲ. ಆದರೆ ಈ ವಿಷಯದಲ್ಲಿ ತಮಿಳು ನಾಡು ಸರಕಾರವನ್ನು ಮೆಚ್ಚಲೇಬೇಕು. ಅಲ್ಲಿನ ಇಂದಿಗೂ ತಮಿಳೇ ಪ್ರಧಾನ ಭಾಷೆಯನ್ನಾಗಿ ಸ್ವೀಕರಿಸಿದ್ದಾರೆ. ಹಿಂದಿಯನ್ನು ಈಗಲೂ ಅವರು ಅಳವಡಿಸಿಕೊಂಡಿಲ್ಲ.

ತಮಿಳುನಾಡಿನೊಂದಿಗೆ ಕೇರಳವೂ, ಅದೇ ರೀತಿ ಭಾಷಾ ಪ್ರೇಮವನ್ನು ಮೆರೆಯುತ್ತಿದೆ. ಆದರೆ ಆ ರಾಜ್ಯವೂ ಈ ಮೊದಲು ತ್ರಿಭಾಷ ನೀತಿಗೆ ಒಪ್ಪಿಗೆ ಸೂಚಿಸಿದೆ. ಇನ್ನುಳಿದಂತೆ ಇರುವ ಬಹುತೇಕ ರಾಜ್ಯಗಳು, ದೇವನಾಗರಿ ಲಿಪಿಯನ್ನೇ ಅಳವಡಿಸಿ ಕೊಂಡಿರುವುದರಿಂದ, ದಕ್ಷಿಣ ಭಾರತದವರಿಗೆ ಆಗುವಂತಹ ಸಮಸ್ಯೆ ಉತ್ತರ ಭಾರತದ ರಾಜ್ಯದಲ್ಲಿರುವವರಿಗೆ
ಆಗುವುದಿಲ್ಲ.

ಇನ್ನು ದಕ್ಷಿಣ ಭಾರತದಲ್ಲಿಯೇ ಇರುವ ಇತರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಹಿಂದಿ ಹೇರಿಕೆ ಎನ್ನುವ ಆರೋಪ ಹೆಚ್ಚಾಗಿ ಕೇಳಿಬರುವುದಕ್ಕೆ ಪ್ರಮುಖ ಕಾರಣ, ಕನ್ನಡಿಗರ ಮನಸ್ಥಿತಿ ಎಂದರೆ ತಪ್ಪಾಗುವುದಿಲ್ಲ. ಇಲ್ಲಿ ಎಲ್ಲವನ್ನು ಒಪ್ಪಿಕೊಳ್ಳುವ ಅಥವಾ ಕನ್ನಡ ಎನ್ನುವುದು ಈಗಲೂ ‘ಮತದಾನ’ಕ್ಕೆ ಕಾರಣವಾಗದೇ ಇರುವುದೇ ಇಲ್ಲಿನ ಸಮಸ್ಯೆ. ಹಾಗೆಂದ ಮಾತ್ರಕ್ಕೆ ಇದು ಕೇವಲ ಬಿಜೆಪಿ ಅಧಿಕಾರದಲ್ಲಿರುವಾಗ ಆಗಿರುವ ಸಮಸ್ಯೆ ಎನ್ನಲು ಸಾಧ್ಯವಿಲ್ಲ. ಈ ಹಿಂದಿದ್ದ ಕಾಂಗ್ರೆಸ್ ಸರಕಾರಗಳು ಕನ್ನಡದ ಮೇಲೆ ತೋರಿದ ಅಸಡ್ಡೆಯೂ ಇದಕ್ಕೆ ಕಾರಣ. ಹಾಗೇ ನೋಡಿದರೆ, ಕರ್ನಾಟಕದಲ್ಲಿ ಇಲ್ಲಿಯವರೆಗೆ ನೀರು, ಗಡಿ
ಚುನಾವಣೆಯ ವಿಷಯವಾಗಿತ್ತೇ ಹೊರತು, ಇಲ್ಲಿಯವರೆಗೆ ಭಾಷೆ ಎನ್ನುವುದು ಚುನಾವಣೆಯ ವಸ್ತುವಾಗಿಲ್ಲ.

ಅನೇಕರು, ಕನ್ನಡವನ್ನು ಮಾತನಾಡಿದರೆ ಎಲ್ಲಿ ಸಮಾಜ ‘ಕೀಳಾಗಿ’ ಕಾಣುವುದೋ ಎನ್ನುವ ಆತಂಕದಲ್ಲಿಯೇ ಬಾರದ ಭಾಷೆಯನ್ನು ಮಾತನಾಡುವ ಪ್ರಯತ್ನದಲ್ಲಿ ನಾವಿದ್ದೇವೆ. ಇಂತಹ ಸಮಯದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದುರಾದಾಗಲೆಲ್ಲ ಕರ್ನಾಟಕಕ್ಕೆ ಒಂದು ಗಟ್ಟಿ ‘ಪ್ರಾದೇಶಿಕ ಪಕ್ಷ’ದ ಅಗತ್ಯವಿದೆ ಎನಿಸುತ್ತದೆ. ತಮಿಳುನಾಡಿನಲ್ಲಿರುವ ಡಿಎಂಕೆ, ಅಣ್ಣಾ ಡಿಎಂಕೆ ರೀತಿಯ ಪ್ರಾದೇಶಿಕ ಪಕ್ಷಗಳು ಕರ್ನಾಟಕಕ್ಕೆ ಅಗತ್ಯವಿದೆ. ರಾಜ್ಯದಲ್ಲಿರುವ ಜೆಡಿಎಸ್, ಕನ್ನಡ ಪರವಾಗಿ ಮಾತನಾಡು ತ್ತಿದ್ದರೂ ರಾಜಕೀಯ ವಿಷಯ ಬಂದಾಗ ‘ಹೊಂದಾಣಿಕೆ’ ಮಾಡಿಕೊಳ್ಳುವ ಅಥವಾ ರಾಷ್ಟ್ರೀಯ ಪಕ್ಷಗಳಿಗೆ ಜೈ ಎನ್ನುವ ಸ್ಥಿತಿಗೆ ತಲುಪಿದೆ.

ಆದರೆ ನೆರೆ ತಮಿಳುನಾಡಿನಲ್ಲಿರುವ ಪ್ರಾದೇಶಿಕ ಪಕ್ಷಗಳು, ತಮ್ಮ ರಾಜ್ಯದ ನೆಲ, ಜಲ ಹಾಗೂ ಭಾಷೆಯ ವಿಷಯದಲ್ಲಿ ಪಕ್ಷಬೇಧ ಮರೆತು ಒಂದಾಗುವ ಅಗತ್ಯಬಿದ್ದರೆ ಅಧಿಕಾರವನ್ನು ಬಿಟ್ಟು ಹೋರಾಟಕ್ಕೆ ಇಳಿಯುವ ಮನಸ್ಥಿತಿಯಲ್ಲಿವೆ. ಅಂತಹ ಗಟ್ಟಿ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಹೊರಹೊಮ್ಮದಿರುವುದೇ, ಕರ್ನಾಟಕದ ಹಲವು ಸಮಸ್ಯೆಗಳಿಗೆ ರಾಜಕೀಯ ಇಚ್ಛಾ ಶಕ್ತಿಯ ಕೊರತೆಯಾಗಲು ಕಾರಣ.

ಹಾಗೇ ನೋಡಿದರೆ ಹಿಂದಿ ದಿವಸ್ ಅನ್ನು ಇಂದು ಮೊನ್ನೆಯಿಂದ ಮಾಡಿಕೊಂಡು ಬರುತ್ತಿರುವುದಲ್ಲ. ನೆಹರು ಪ್ರಧಾನಿ ಯಾಗಿದ್ದಾಗಿನಿಂದಲೂ ಇದು ನಡೆದೇ ಇತ್ತು. ಆದರೀಗ ರಾಜಕೀಯ ಕಾರಣಕ್ಕಾಗಿ, ಹಿಂದಿ ದಿವಸ್ ಅನ್ನು ವಿರೋಧಿಸುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಈ ಹಿಂದೆ ಹಿಂದಿ ದಿವಸ್ ಸಮಯದಲ್ಲಿ ಏಕೆ ಮೌನವಾಗಿದ್ದರು? ರಾಜಕೀಯ ಕಾರಣಕ್ಕೆ ಹಿಂದಿಯನ್ನು ವಿರೋಧಿಸುವ ನೆಪದಲ್ಲಿ ಒಂದು ಪಕ್ಷವನ್ನು ವಿರೋಧಿಸುವುದು ನಾಯಕರ ನಡೆಯಿಂದ ಸ್ಪಷ್ಟವಾಗುತ್ತದೆ.

ಆದರೆ ಈ ಹಂತದಲ್ಲಿ ಕರ್ನಾಟಕದಲ್ಲಿ ‘ಭಾಷೆ’ಯ ಆಧಾರದಲ್ಲಿ ಮತಗಳು ಗಿಟ್ಟುವುದಿಲ್ಲ ಎನ್ನುವುದನ್ನು ರಾಜಕೀಯ ಪಕ್ಷಗಳು ಅರಿತಿರುವುದರಿಂದ ‘ಭಾಷೆ’ಯ ವಿಷಯದಲ್ಲಿ ಅಸಡ್ಡೆ ತೋರುತ್ತಲೇ ಇದ್ದಾರೆ. ರಾಜ್ಯದ ಜನರೂ ‘ನಮ್ಮ ಭಾಷೆ’ ಎನ್ನುವ ಜತೆಗೆ ಭಾಷೆಯ ವಿಷಯವನ್ನು ‘ಮತ’ವಾಗಿ ಪರಿವರ್ತಿಸದೇ ಹೋದರೆ, ದಶಕ ಕಳೆದರೂ ‘ಹಿಂದಿ ಹೇರಿಕೆ’, ‘ಒತ್ತಾಯದ ಇಂಗ್ಲಿಷ್ ಕಲಿಕೆ’ ಎನ್ನುವ ಕೂಗು ಕೂಗಾಗಿಯೇ ಇರುತ್ತದೆ ಎನ್ನುವುದು ಸ್ಪಷ್ಟ.

error: Content is protected !!