Thursday, 19th September 2024

ಗಾಲಿ ರೆಡ್ಡಿಗೆ ಬಿಜೆಪಿ ವರಿಷ್ಠರ ಬೇಲಿ ?

ಮೂರ್ತಿಪೂಜೆ

ಇತ್ತೀಚೆಗೆ ರೆಡ್ಡಿಯವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದಾಗ ಮೋದಿ-ಅಮಿತ್ ಷಾ ಜೋಡಿಗೆ ಪಾಸಿಟಿವ್ ಸಂದೇಶ ರವಾನೆ ಯಾಗಿತ್ತು. ಎಷ್ಟೇ ಆದರೂ ಜನಾರ್ದನರೆಡ್ಡಿ ಅವರ ಪಕ್ಷ ಹೈದ್ರಾಬಾದ್-ಕರ್ನಾ ಟಕದ ಜಿಲ್ಲೆಗಳನ್ನು ಕೇಂದ್ರೀಕರಿಸಿ ಕೊಂಡಿದೆ. ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಸೇರಿದಂತೆ ಅದು ತಲೆ ಎತ್ತುತ್ತಿರುವ ಜಿಗಳಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ನಡುವೆ ಫೈಟು ಇದೆ. ಇಂತಲ್ಲಿ ಜನಾರ್ದನರೆಡ್ಡಿ ಅವರ ಪಕ್ಷ ಕಾಂಗ್ರೆಸ್ಸಿನ ಅತೃಪ್ತರನ್ನು ಸೆಳೆದರೆ, ಮುಸ್ಲಿಂ ಮತಗಳನ್ನು ಡಿವೈಡ್ ಮಾಡಿದರೆ ಅದರಿಂದ ಕಾಂಗ್ರೆಸ್ಸಿಗೆ ಹಾನಿಯಾಗಿ, ಬಿಜೆಪಿಗೆ ಅನುಕೂಲವಾಗುತ್ತದೆ ಎಂಬುದು ಈ ಸಂದೇಶ.

ಆದರೆ ದಿನ ಕಳೆದಂತೆ ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಾಂಗ್ರೆಸ್ಸಿಗಿಂತ ಹೆಚ್ಚಾಗಿ ಬಿಜೆಪಿಗೇ ಡ್ಯಾಮೇಜು ಮಾಡುತ್ತದೆ ಎಂಬ ವರದಿ ಕಮಲ ಪಾಳೆಯವನ್ನು ತಬ್ಬಿಬ್ಬುಗೊಳಿಸಿದೆ. ಇದೆಲ್ಲ ಕಾರಣದಿಂದ ಕರ್ನಾಟಕದಲ್ಲಿ ಮರಳಿ ಅಧಿಕಾರ ಹಿಡಿಯಲು ಹೊರಟ ಬಿಜೆಪಿ ವರಿಷ್ಠರಿಗೆ ಈಗ ಗಾಲಿ ಜನಾರ್ದನ ರೆಡ್ಡಿ ಮೇಲೆ ಸಿಟ್ಟು ಬಂದಿದೆಯಂತೆ. ಕಾರಣ? ಪಕ್ಷ ಕಟ್ಟಲು ಹೊರಟ ಜನಾರ್ದನರೆಡ್ಡಿ ಅವರ ಗಾಳಕ್ಕೆ ಕಾಂಗ್ರೆಸ್ ಕೊಳಕ್ಕಿಂತ, ಬಿಜೆಪಿ ಕೊಳದ ಹೆಚ್ಚು ಮೀನುಗಳು ಸಿಗತೊಡಗಿವೆ. ಅರ್ಥಾತ್, ಕಾಂಗ್ರೆಸ್ಸಿನ ಅತೃಪ್ತರಿಗಿಂತ ಬಿಜೆಪಿಯ ಅತೃಪ್ತರೇ ಹೆಚ್ಚಿನ ಸಂಖ್ಯೆಯಲ್ಲಿ ‘ಗಾಲಿ’ ಪಾಳೆಯಕ್ಕೆ ಸೇರತೊಡಗಿದ್ದಾರೆ.

ಕಾರಣವಿಷ್ಟೇ, ಇಷ್ಟು ವರ್ಷಗಳ ಕಾಲ ಜನಾರ್ದನರೆಡ್ಡಿ ಬಿಜೆಪಿಯ ಇದ್ದವರು. ಹೀಗಾಗಿ ಅಲ್ಲಿರುವವರ ಜತೆ ಅವರಿಗೆ ಆತ್ಮೀಯತೆ ಇದೆ. ಆದರೆ ಜನಾರ್ದನರೆಡ್ಡಿ ಅವರ ಹವಾ ನಡೆಯುತ್ತಿದ್ದ ಕಾಲದಲ್ಲಿ ಅದರ ಬಿಸಿಗೆ ಬೆಂದವರು ಕಾಂಗ್ರೆಸ್ಸಿಗರು. ಹೀಗಾಗಿ ರೆಡ್ಡಿಗಾರು ಜತೆ ಸೇರಲು ಕಾಂಗ್ರೆಸ್ಸಿಗರು ಉತ್ಸಾಹ ತೋರಿಸುತ್ತಿಲ್ಲ. ಬದಲಿಗೆ ಬಿಜೆಜಿಯಿಂದಲೇ ಹೆಚ್ಚಿನ ಜನ ಬರುತ್ತಿದ್ದಾರೆ.
ಅಂದ ಹಾಗೆ, ರೆಡ್ಡಿಗಾರು ಕಟ್ಟಿದ ಹೊಸ ಪಕ್ಷಕ್ಕಿರುವುದು ಮೂವತ್ತು ಕ್ಷೇತ್ರಗಳ ಟಾರ್ಗೆಟ ಅಷ್ಟೇ.

ಮತ್ತೆ ಬಹುತೇಕ ಕ್ಷೇತ್ರಗಳಲ್ಲಿ ಅದು ಮೂರರಿಂದ ಐದು ಸಾವಿರ ಮತಗಳನ್ನು ಪಡೆಯಬಹುದು. ಸಹಜವಾಗಿ ಅದರ ಗಳಿಕೆ ಯಿಂದ ಹಾನಿ ಅನುಭವಿಸುವುದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ಹೀಗಾಗಿ, ಒಂದೋ ಜನಾರ್ದನರೆಡ್ಡಿ ಜತೆ ಮಾತುಕತೆ ನಡೆಸಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಿ. ಸಿಂಧನೂರು ವಿಧಾನಸಭಾ ಕ್ಷೇತ್ರದಿಂದಲೋ, ಇನ್ನೆಲ್ಲಿಂದಲೋ ಸ್ಪರ್ಧಿಸಲು ಟಿಕೆಟ್ಟು ಕೊಡಿ. ಇಲ್ಲವೇ ಹಳೆಯ ಕೇಸುಗಳನ್ನು ಮೇಲೆತ್ತಿ ಅವರಿಗೆ ಹಳೆ ರುಚಿ ತೋರಿಸಿ ಎಂಬುದು ಬಿಜೆಪಿ ನಾಯಕರ ಮಾತು. ಅಂದರೆ?ಇದ್ದಕ್ಕಿದ್ದಂತೆ ಜನಾರ್ದನರೆಡ್ಡಿ ಹೆಸರು ರಾಜ್ಯ ರಾಜಕೀಯದ ಅಂಗಳದಲ್ಲಿ ಪಟಪಟಿಸತೊಡಗಿದೆ.

ಗಾಲಿಗೆ ಸಂತೋಷ್ ಬ್ರೇಕ್
ಇದೆಲ್ಲರ ನಡುವೆ ಕುತೂಹಲದ ಸಂಗತಿ ಎಂದರೆ ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಜನಾರ್ದನ ರೆಡ್ಡಿ ಅವರ ಪಕ್ಷಕ್ಕೆ ಹವಾ ಇದೆ ಎಂಬ ವರದಿ ಬಂದಾಗ ಸಿಎಂ ಬೊಮ್ಮಾಯಿ ಆ ಕಡೆ ನೋಡಿದ್ದರಂತೆ. ಅದರಲ್ಲೂ ತಮ್ಮ ಸಂಪುಟದ ಸಹೋದ್ಯೋಗಿ, ಸಾರಿಗೆ ಸಚಿವ ಶ್ರೀರಾಮುಲು ಇದಕ್ಕೆ ತುಪ್ಪ ಸುರಿದಾಗ, ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಒಲವು ತೋರಿಸಿದ್ದರಂತೆ.

ಆದರೆ ಬಿಜೆಪಿ ಪಾಳೆಯಕ್ಕೆ ಗಾಲಿ ಹರಿದು ಬರಲು ಬಿ.ಎಲ್.ಸಂತೋಷ್ ಬ್ರೇಕ್ ಹಾಕಿzರೆ. ಈ ಹಿಂದೆ ಬಿಜೆಪಿ ಸರಕಾರದಲ್ಲಿದ್ದಾಗ, ಗಣಿ ಸಾಮ್ರಾಜ್ಯದ ಅಬ್ಬರ ನಡೆಯುತ್ತಿದ್ದಾಗ ಜನಾರ್ದನ ರೆಡ್ಡಿ ನಡೆದುಕೊಳ್ಳುತ್ತಿದ್ದ ರೀತಿಯೇ ಸಂತೋಷ್ ಅವರ ಅಸಮಾ ಧಾನಕ್ಕೆ ಕಾರಣ. ಅಂದ ಹಾಗೆ, ಕರ್ನಾಟಕದಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟವರೇ ಜನಾರ್ದನ ರೆಡ್ಡಿ.

೨೦೦೮ ರಲ್ಲಿ ಪಕ್ಷ ಅಧಿಕಾರ ಹಿಡಿಯಲು ಅವರು ನೀಡಿದ ಸಹಕಾರ ದೊಡ್ಡದೇ. ಆದರೆ ೨೦೧೩ ರ ಹೊತ್ತಿಗೆ ಬಿಜೆಪಿಯ ವಿರುದ್ಧ ಜನಾಕ್ರೋಶ ಭುಗಿಲೆದ್ದಿದ್ದರಲ್ಲಿ ಜನಾರ್ದನ ರೆಡ್ಡಿ ಪಾತ್ರ ಇನ್ನೂ ದೊಡ್ಡದು ಅಂತ ಸಂತೋಷ್ ಕೊಟ್ಟ ವರದಿ ಮೋದಿ-ಷಾ ಟೇಬಲ್ಲಿಗೆ ತಲುಪಿತ್ತು. ಇದರ ಪರಿಣಾಮವಾಗಿ, ಅದೇನೇ ಕಸರತ್ತು ಮಾಡಿದರೂ ಜನಾರ್ದನ ರೆಡ್ಡಿಯವರಿಗೆ ಕಮಲ ಪಾಳೆಯದ ಬಾಗಿಲು ಓಪನ್ ಆಗಲಿಲ್ಲ.

ಶ್ರೀರಾಮುಲು ಬಗ್ಗೆ ರೆಡ್ಡಿಗಾರು ಅನುಮಾನ?
ಜನಾರ್ದನ ರೆಡ್ಡಿ ಅವರಿಗೆ ಬಿಜೆಪಿ ಬಾಗಿಲು ತೆರೆಯಲಿ ಅಂತ ಅವರ ಜೀವದ ಗೆಳೆಯ ಶ್ರೀರಾಮುಲು ಪ್ರಯತ್ನಿಸಿದ್ದು ನಿಜವಾದರೂ ಗಾಲಿಗೆ ಅನುಮಾನ ಶುರುವಾಗಿದೆಯಂತೆ. ಕೆಲ ಮೂಲಗಳ ಪ್ರಕಾರ, ಶ್ರೀರಾಮುಲು ಬಗ್ಗೆ ರೆಡ್ಡಿ ಅವರಿಗೆ
ಅನುಮಾನ ಮೂಡಲು ಕಾರಣ ರಾದವರು ಅವರ ಪತ್ನಿ ಅರುಣಾ ಲಕ್ಷ್ಮಿ. ಇವತ್ತು ಬಳ್ಳಾರಿ ಯಿಂದ ಬೆಂಗಳೂರಿಗೆ ಶ್ರೀರಾಮುಲು ತಲುಪಿದ್ದರೆ ಅದಕ್ಕೆ ನೀವು ಕಾರಣ. ಆದರೆ ಇವತ್ತು ನೀವು ಸಂಕಟಕ್ಕೆ ಸಿಲುಕಿದ್ದೀರಿ. ಆದರೆ, ಶ್ರೀರಾಮುಲು ಮಾತ್ರ ಅಧಿಕಾರ ಅನುಭವಿಸುತ್ತಿದ್ದಾರೆ.

ಹೋಗಲಿ, ನೀವು ಪುನಃ ಬಿಜೆಪಿಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಬಹುದು ಎಂದುಕೊಂಡರೆ, ಅದಕ್ಕೆ ಅಡ್ಡಗಾಲು ಹಾಕುತ್ತಿರುವವರೇ ಶ್ರೀರಾಮುಲು.ಅವರಿಗೆ ನೀವು ರಾಜಕಾರಣದಲ್ಲಿ ಬೆಳೆಯುವುದು ಬೇಕಿಲ್ಲ. ಈಗ ಅಧಿಕಾರದಲ್ಲಿದ್ದು ಶಕ್ತಿ ಬೆಳೆಸಿ
ಕೊಂಡಿರುವುದರಿಂದ ನಿಮ್ಮ ಅಗತ್ಯವೂ ಅವರಿಗಿಲ್ಲ ಅಂತ ಪತ್ನಿ ಅರುಣಾ ಲಕ್ಷ್ಮಿಯವರು ಹೇಳಿದ್ದು ಗಾಲಿ ನೆತ್ತಿಗೆ ನಾಟಿತಂತೆ.
ಇವತ್ತು ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮೇಲೆದ್ದು ನಿಲ್ಲಲು ಇದು ಮೂಲ ಎಂಬುದು ಈಗ ಚಾಲ್ತಿಯಲ್ಲಿರುವ ಮಾತು.

ಅದೇನೇ ಇರಲಿ, ಒಟ್ಟಿನಲ್ಲಿ ಮೇಲೆದ್ದು ನಿಂತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹವಾ ಒಂದು ಮಟ್ಟಿಗೆ ಶುರುವಾಗಿದೆ. ಖುದ್ದು ಜನಾರ್ದನ ರೆಡ್ಡಿಯವರು ಗಂಗಾವತಿಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರೆ, ಅವರ ಪತ್ನಿ ಶ್ರೀಮತಿ ಅರುಣಾ ಲಕ್ಷ್ಮಿಯವರು ಬಳ್ಳಾರಿ ನಗರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಬಳ್ಳಾರಿಯಲ್ಲಿ ಅರುಣಾ ಲಕ್ಷ್ಮಿ ಅವರಿಗೆ ಎದುರಾಗುತ್ತಿರುವವರು ಜನಾರ್ದನ ರೆಡ್ಡಿಯವರ ಸಹೋದರ ಸೋಮಶೇಖರ ರೆಡ್ಡಿ ಎಂಬುದು ಕುತೂಹಲಕಾರಿ.

ಇವರಿಬ್ಬರು ಎದುರಾಳಿಗಳಾಗುತ್ತಿರುವುದು ವೈರತ್ವದ ಲಕ್ಷಣ ಎಂದು ಬಣ್ಣಿಸಲಾಗುತ್ತಿದೆಯಾದರೂ, ಇಂದು ಟ್ವಿಸ್ಟ್ ಇದೆ. ಅದೆಂದರೆ ಅರುಣಾ ಲಕ್ಷ್ಮಿಯವರನ್ನು ಕಣಕ್ಕಿಳಿಸಲು ಜನಾರ್ದನ ರೆಡ್ಡಿ ಅವರಿಗೆ ಸಿಕ್ಕ ಒಂದು ಮೆಸೇಜು ಕಾರಣ. ಅದೆಂದರೆ ಬಿಜೆಪಿ ವತಿಯಿಂದ ಶಾಸಕರಾಗಿರುವ ಸೋಮಶೇಖರ ರೆಡ್ಡಿ ಅವರಿಗೆ ಈ ಬಾರಿ ಟಿಕೆಟ್ ನೀಡಲು ಕಮಲ ಪಾಳೆಯ ಹಿಂದೆ ಮುಂದೆ ನೋಡುತ್ತಿದೆ. ಹಾಗೇನಾದರೂ ಆದರೆ ತಮ್ಮ ಕುಟುಂಬದ ಹಿಡಿತದಿಂದ ಕ್ಷೇತ್ರ ತಪ್ಪಬಾರದು ಎಂಬುದು ಜನಾರ್ದನರೆಡ್ಡಿ ಲೆಕ್ಕಾಚಾರ.

ಅದೇ ರೀತಿ ತಮ್ಮ ಪತ್ನಿ ಕಣಕ್ಕಿಳಿಯುವುದಾಗಿ ಹೇಳಿರುವುದರಿಂದ ಬಿಜೆಪಿ ವರಿಷ್ಠರು ತಮ್ಮ ನಿರ್ಧಾರ ಬದಲಿಸಿ, ಸೋಮ ಶೇಖರರೆಡ್ಡಿ ಅವರಿಗೇ ಮತ್ತೆ ಟಿಕೆಟ್ ಕೊಡಬಹುದು ಎಂಬುದು ಜನಾರ್ದನ ರೆಡ್ಡಿ ಯೋಚನೆ. ಅರ್ಥಾತ್, ಮೇಲ್ನೋಟಕ್ಕೆ ಹೇಗೇ ಕಂಡರೂ ರೆಡ್ಡಿ ಬ್ರದರ್ಸ್ ಒಗ್ಗಟ್ಟಾಗಿಯೇ ಇzರೆ. ಅಷ್ಟೇ ಅಲ್ಲ, ಬಿಜೆಪಿಗೆ ಹಲ್ವಾ ತಿನ್ನಿಸಲು ನಿರ್ಧರಿಸಿದ್ದಾರೆ ಎಂಬುದು ಹಲವರ ಅನುಮಾನ.

ಇದೆಲ್ಲದರ ಪರಿಣಾಮವಾಗಿ, ಒಂದು ಮಟ್ಟದದರೂ ಮೇಲೇಳುತ್ತಿರುವ ಗಾಲಿ ಜನಾರ್ದನ ರೆಡ್ಡಿ ಹವಾಕ್ಕೆ ಬ್ರೇಕ್ ಹಾಕಬೇಕು ಎಂಬ ಮೆಸೇಜು ಬಿಜೆಪಿ ವರಿಷ್ಠರಿಗೆ ತಲುಪಿದೆ. ಈ ಮೆಸೇಜನ್ನು ಅವರು ನಿಶ್ಚಿತವಾಗಿ ವಿಕೋಪಕ್ಕೆ ತೆಗೆದುಕೊಂಡು ಹೋಗುತ್ತಾರೆ. ಆ ಮೂಲಕ ಗಾಲಿಗೆ ಹಿಂದಿನಂತೆಯೇ ಸಂಕಷ್ಟದ ದಿನಗಳು ಎದುರಾಗಲಿವೆ ಎಂಬುದು ಹಲವರ ಗುಸು-ಗುಸು.

ಹೊಸ ಚಿಂತೆಗೆ ಬಿದ್ದರು ಕುಮಾರಸ್ವಾಮಿ ಇನ್ನು ಪಂಚರತ್ನ ಯಾತ್ರೆಯ ಮೂಲಕ ಎದುರಾಳಿ ಪಕ್ಷಗಳು ಅಚ್ಚರಿಗೊಳ್ಳುವಂತೆ ಮಾಡಿದ್ದ ಜೆಡಿಎಸ್ ಪಾಳೆಯ ದಲ್ಲಿ ‘ಮನೆ ಗದ್ದಲ’ದ ಸದ್ದು ಕೇಳುತ್ತಿದೆ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಷಯವೇ ಈ ಗದ್ದಲದ ಮೂಲ. ಅಂದ ಹಾಗೆ ಹಾಸನದಲ್ಲಿ ದಾಸ ಒಕ್ಕಲಿಗ ಮತಗಳು ಸಾಲಿಡ್ ಆಗಿರುವುದರಿಂದ ಮಾಜಿ ಶಾಸಕ,ದಿವಂಗತ ಪ್ರಕಾಶ್ ಅವರ ಪುತ್ರ ಸ್ವರೂಪ್ ಅವರಿಗೆ ಪಕ್ಷದ ಟಿಕೆಟ್ ಕೊಡುವುದು ಎಚ್ .ಡಿ.ಕುಮಾರಸ್ವಾಮಿ ಅವರ ಯೋಚನೆ.

ಆದರೆ ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ತಮಗೆ ಸವಾಲು ಹಾಕುತ್ತಿರುವುದರಿಂದ ಕೆರಳಿದ ಎಚ್.ಡಿ.ರೇವಣ್ಣ, ಈ ಕ್ಷೇತ್ರದಲ್ಲಿ ತಮ್ಮ ಪತ್ನಿ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸಲು ಬಯಸಿದ್ದಾರೆ. ಹೀಗೆ ಕುಮಾರಸ್ವಾಮಿ-ರೇವಣ್ಣ ಅವರ ಬಯಕೆಗಳು ಪರಸ್ಪರ ಘರ್ಷಿಸಿರುವುದೇ ಗೌಡ್ರ ಮನೆ ಗದ್ದಲಕ್ಕೆ ಮೂಲ ಕಾರಣ. ಈ ಮಧ್ಯೆ ರೇವಣ್ಣ ಅವರ ಪುತ್ರ ಸೂರಜ್ ಅವರು, ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಅನ್ನುವಂತಹ ಮಾತು ಬಿಡಬೇಕು. ಭವಾನಿ ರೇವಣ್ಣ ಅವರು ಸ್ಪರ್ಧಿಸಿದರೆ ಗೆಲುವು ನಿಶ್ಚಿತ ಎಂಬುದನ್ನು ಮರೆಯಬಾರದು. ಇವತ್ತು ಜಿಯಲ್ಲಿ ರೇವಣ್ಣ ಅವರಂತಹ ನಾಯಕರು ಮತ್ತೊಬ್ಬರಿಲ್ಲ ಎಂಬ ಧಾಟಿಯಲ್ಲಿ ಮಾತನಾಡಿದ್ದು ಕುಮಾರಸ್ವಾಮಿಯವರ ಬೆಂಬಲಿಗರನ್ನು ಕೆರಳಿಸಿದ್ದು ಸಹಜವೇ.

ಅದಾದ ಮೇಲೆ, ರೇವಣ್ಣ ಮತ್ತವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಬೆಂಬಲಿಗರು
ಯುದ್ಧಕ್ಕಿಳಿದರು. ನಂತರ ರೇವಣ್ಣ ಎಂಟ್ರಿಯಾಗಿ, ಕುಮಾರಸ್ವಾಮಿ ಅವರೇ ನಮ್ಮ ನಾಯಕ ಎಂದ ಮೇಲೆ ಪರಿಸ್ಥಿತಿ ತಣ್ಣ
ಗಾಯಿತೇನೋ ನಿಜ. ಆದರೆ, ಹಾಸನದ ಟಿಕೆಟ್ ವಿಷಯದಲ್ಲಿ ಕುಮಾರಸ್ವಾಮಿ, ರೇವಣ್ಣ ಇಬ್ಬರ ನಿಲುವೂ ಬದಲಾಗಿಲ್ಲ.
ಕುಮಾರಸ್ವಾಮಿ, ಸ್ವರೂಪ್‌ರನ್ನು ಕರೆಸಿ ‘ನಿಮಗೆ ಪಕ್ಷದ ಟಿಕೆಟ್ ಗ್ಯಾರಂಟಿ. ಹೋಗಿ ಪ್ರಚಾರದ ಕಡೆ ಗಮನ ಕೊಡಿ’ ಎಂದು ಹೇಳಿದರೆ, ರೇವಣ್ಣ ಮಾತ್ರ ದೇವೇಗೌಡ್ರು, ಕುಮಾರಸ್ವಾಮಿ ಮತ್ತು ಸಿ.ಎಂ.ಇಬ್ರಾಹಿಂ ಅವರು ಒಂದು ತೀರ್ಮಾನ ತೆಗೆದು ಕೊಳ್ಳುತ್ತಾರೆ ಅಂತ ಅಡ್ಡೇಟು ಹಾಕಿದ್ದಾರೆ.

ಆದರೆ ಈ ನಡುವೆ ಏನೋ ಮಿಸ್ ಹೊಡೆಯುತ್ತಿದೆ ಅಂತ ಕುಮಾರಸ್ವಾಮಿ ಅವರಿಗೆ ಅನುಮಾನ ಕಾಡುತ್ತಿದೆಯಂತೆ. ಹಾಸನ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ರೇವಣ್ಣ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರಿಂದ ಎ, ಬಿ, ಸಿ ಫಾರಂಗಳನ್ನು ಮುಂಚಿತವಾಗಿ ಪಡೆದುಕೊಂಡು ಬಿಟ್ಟಿzರಾ? ಎಂಬುದು ಈ ಅನುಮಾನ. ಎಷ್ಟೇ ಆದರೂ ದೇವೇಗೌಡರಿಗೆ ರೇವಣ್ಣ ಎಂದರೆ ಪರಮ ಪ್ರೀತಿಯಿರುವ ಈ ಕಾರಣಕ್ಕಾಗಿ, ಅವರು ಮುಂಚಿತವಾಗಿ ಎ, ಬಿ ಮತ್ತು ಸಿ ಫಾರಂಗಳನ್ನು ಭವಾನಿ ರೇವಣ್ಣ ಅವರಿಗೆ ಕೊಟ್ಟು ಬಿಟ್ಟಿದ್ದರೆ ಕುಮಾರಸ್ವಾಮಿ ಅಸಹಾಯಕರಾಗುತ್ತಾರೆ.

ಯಾಕೆಂದರೆ, ಇಂತವರಿಗೆ ಟಿಕೆಟ್ ನೀಡಿದ್ದೇವೆ ಅಂತ ಚುನಾವಣಾ ಆಯೋಗಕ್ಕೆ ಕೊಡಲು ಎ ಮತ್ತು ಬಿ ಫಾರಂ ಕೊಡಲಾಗು ತ್ತದೆ. ಒಂದು ವೇಳೆ ಒಬ್ಬರಿಗೆ ಕೊಟ್ಟ ಎ, ಬಿ ಫಾರಂಗಳನ್ನು ಅನೂರ್ಜಿತಗೊಳಿಸಿ, ಬೇರೆಯವರಿಗೆ ಟಿಕೆಟ್ ಕೊಡಬೇಕೆಂದರೆ ಸಿ ಫಾರಂ ಕೊಡುವುದು ವಾಡಿಕೆ. ಆದರೆ ಈಗಾಗಲೇ ಭವಾನಿ ರೇವಣ್ಣನವರ ಹೆಸರಿಗೆ ದೇವೇಗೌಡರು ಎ, ಬಿ, ಸಿ ಫಾರಂಗಳನ್ನು ಬರೆದುಕೊಟ್ಟು ಬಿಟ್ಟಿದ್ದರೆ ಸ್ವರೂಪ್ ಅವರಿಗೆ ಟಿಕೆಟ್ ಕೊಡಿಸುವ ಕುಮಾರಸ್ವಾಮಿಯವರ ಇಚ್ಛೆ ಸಂಪೂರ್ಣ ಭಗ್ನವಾಗುತ್ತದೆ.

ಹಾಗಂತ ಈಗಲೇ ಈ ವಿಷಯದ ಬಗ್ಗೆ ದೇವೇಗೌಡರ ಜತೆ ಮಾತನಾಡುವುದು ಕುಮಾರಸ್ವಾಮಿಗೆ ಇಷ್ಟವಿಲ್ಲ. ಯಾಕೆಂದರೆ ಈಗಾಗಲೇ ದೇವೇಗೌಡರು ಬಳಲಿದ್ದಾರೆ. ಹೀಗಾಗಿ ತಾವು ಮಾಡುವ ಪ್ರಸ್ತಾಪ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬುದು ಕುಮಾರಸ್ವಾಮಿ ಅವರ ಚಿಂತೆ.

Read E-Paper click here