Sunday, 8th September 2024

ಬ್ರಿಟಿಷರು ಅಪಾರವಾಗಿ ಗೌರವಿಸುತ್ತಿದ್ದ ಗಾಂಧೀಜಿ

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಮತ್ತೊಂದು ಗಾಂಧಿ ಜಯಂತಿ ಬಂದಿದೆ. ಮತ್ತೊಮ್ಮೆ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟವನ್ನು ಎಲ್ಲರೂ ನೆನಪಿಸಿಕೊಂಡು, ಗೌರವದಿಂದ ಸ್ಮರಿಸುವ
ದಿನ ಬಂದಿದೆ. ಸತ್ಯಾಗ್ರಹ, ಅಸಹಕಾರ, ಅಹಿಂಸೆ, ಹರತಾಳಗಳ ಮೂಲಕ ಕಲೋನಿಯಲ್ ಬ್ರಿಟಿಷರ ವಿರುದ್ಧ ಹೋರಾಡಿದ ಗಾಂಧೀಜಿಯವರು, ಆ
ವಿನೂತನ ಪ್ರತಿಭಟನಾ ವಿಧಾನದ ಮೂಲಕ, ಜಗತ್ತಿಗೇ ಶಾಂತಿ ಸಂದೇಶ ಸಾರಿದ ಮಹಾತ್ಮ. ಬಂದೂಕು ಹಿಡಿದ ಬ್ರಿಟಿಷರ ಕ್ರೌರ್ಯದ ವಿರುದ್ಧ, ‘ಶಾಂತಿ ಮಂತ್ರ’ವನ್ನೇ ಅಸ್ತ್ರ ಮಾಡಿಕೊಂಡು ಹೋರಾಟ ಮಾಡಲೂ ಸಾಧ್ಯ ಎಂದು ತೋರಿಸಿಕೊಟ್ಟವರು ಗಾಂಧೀಜಿ.

ಸತ್ಯಾಗ್ರಹ ಎಂಬ ಅಸ್ತ್ರವನ್ನು ಸಂಶೋಧಿಸಿದ ಗಾಂಧೀಜಿಯವರು, ಅದರಿಂದಾಗಿ ಅದೆಷ್ಟು ಪ್ರಸಿದ್ಧರಾದ ರೆಂದರೆ, ನಮ್ಮನ್ನು ಆಳುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯವೇ ಅವರನ್ನು ಗೌರವಿಸುತ್ತಿತ್ತು, ಅವರ ಸಹಾಯವನ್ನು ಬಯಸುತ್ತಿತ್ತು, ಹಲವು ಬಾರಿ ಅವರನ್ನು ತನ್ನ ಒಳಿತಿಗಾಗಿ ಉಪಯೋಗಿಸಿಕೊಳ್ಳುತ್ತಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ತನಕವೂ ಅವರಿಗೆ ಭದ್ರತೆ ನೀಡಿ, ಅವರ ಜೀವಹಾನಿಯಾಗದಂತೆ ನೋಡುಕೊಂಡಿದ್ದ ಬ್ರಿಟಿಷರು, ಅವರಿಗೆ ವಿಐಪಿ ಟ್ರೀಟ್‌ಮೆಂಟ್ ನೀಡುತ್ತಿದ್ದರು. ಬಂಧನಕ್ಕೊಳಗಾದಾಗ, ಆಗಾಖಾನ್ ಅರಮನೆಯಂತಹ ವೈಭವೋಪೇತ ಸ್ಥಳಗಳಲ್ಲಿ ಅವರನ್ನು ಗೃಹಬಂಧನದಲ್ಲಿರಿಸಿ, ತಮ್ಮ ದೈನಂದಿನ ಪ್ರಾರ್ಥನೆ, ಬರವಣಿಗೆಯನ್ನು ಮುಂದುವರಿಸಲು ಅವಕಾಶ ನೀಡಿದ್ದರು.

ಗಾಂಧೀಜಿಯವರ ಅಹಿಂಸೆ, ಶಾಂತಿ ಮತ್ತು ಸತ್ಯಾಗ್ರಹಗಳು ಬ್ರಿಟಿಷರಿಗೆ ಎಷ್ಟು ಮೆಚ್ಚುಗೆಯಾಗಿತ್ತೆಂದರೆ, ತಮ್ಮ ವಿರುದ್ಧ ಹೋರಾಡುತ್ತಿದ್ದ ಅವರೊಂದಿಗೆ ಹಲವು ವೈಸ್ ರಾಯ್‌ಗಳು ಸ್ನೇಹಯುತ ಸಂಬಂಧ ಹೊಂದಿದ್ದರು, ಕ್ಲಿಷ್ಟ ಸಂದರ್ಭಗಳಲ್ಲಿ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ಎಷ್ಟರ ಮಟ್ಟಿಗೆ ಎಂದರೆ, ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರವೂ, ಕೊನೆಯ ವೈಸ್ ರಾಯ್ ಮೌಂಟ್‌ಬ್ಯಾಟನ್, ಗಾಂಧೀಜಿಯವರ ಸಹಕಾರದಿಂದಾಗಿ, ಅವರನ್ನು ಉಪವಾಸಕ್ಕೆ ಕುಳ್ಳಿರಿಸಿ, ದೆಹಲಿಯಲ್ಲಿ ನಡೆಯುತ್ತಿದ್ದ ಕೋಮುಗಲಭೆಯನ್ನು ನಿಯಂತ್ರಿಸಿ, ಬ್ರಿಟಿಷರ ಗೌರವವನ್ನು ಕಾಪಾಡಿದ!

ಇಂದು ಅಹಿಂಸೆಯ ಪ್ರತೀಕವಾಗಿ ಗಾಂಧೀಜಿಯವರು ಪಡೆದಿರುವ ಗೌರವ ಅಭೂತಪೂರ್ವ. 87 ದೇಶಗಳಲ್ಲಿ ಗಾಂಧೀಜಿಯವರ ಪ್ರತಿಮೆಗಳಿವೆ. ಅವರ
ಜನ್ಮದಿನವನ್ನು ವಿಶ್ವ ಅಹಿಂಸಾದಿನ ಎಂದು ಆಚರಿಸುತ್ತಿರುವುದು ನಿಜಕ್ಕೂ ಭಾರತದ ಹೆಮ್ಮೆ. ನನಗೆ ಪರಿಚಿತರಾಗಿರುವ ಒಬ್ಬರಿಗೆ ಗಾಂಧೀಜಿ ಎಂದರೆ ಅಪಾರ ಗೌರವ. ‘ಗಾಂಧೀಜಿಯವರ ಹೋರಾಟದಿಂದಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು’ ಎಂದು ಅವರು ಯಾವಾಗಲೂ ಹೇಳುತ್ತಿರುತ್ತಾರೆ. ಅದಕ್ಕೆ ಉತ್ತರ ವಾಗಿ ‘ಗಾಂಧೀಜಿಯವರ ಹೋರಾಟದ ಜತೆಯಲ್ಲೇ, ಇತರರ ಬಲಿದಾನ, ಸುಭಾಷ್ ಚಂದ್ರ ಬೋಸರ ಸೈನ್ಯದ ಹೋರಾಟ, ಮುಂಬಯಿಯ ನೌಕಾಪಡೆಯವರು 1946ರಲ್ಲಿ ನಡೆಸಿದ ಅಭೂತ ಪೂರ್ವ ಹೋರಾಟ, ಅಂದಿನ ವಿಶ್ವದ ಪರಿಸ್ಥಿತಿ, ಎರಡನೆಯ ಮಹಾಯುದ್ಧದ ನಂತರ ಬದಲಾದ ಜನರ ಗ್ರಹಿಕೆ – ಇವೆಲ್ಲವೂ ಒಟ್ಟು ಸೇರಿ ನಿರ್ಮಾಣವಾದ ಸನ್ನಿವೇಶ ಸಹ, ಬ್ರಿಟಿಷರು ಭಾರತದಿಂದ ಹೊರಟುಹೋಗುವಂತೆ ಮಾಡಿತು’ ಎಂದು ಯಾರಾದರೂ ಅವರ ಬಳಿ ಹೇಳಿದರೆ, ಆ ಹಿರಿಯರು ಸುತರಾಂ ಒಪ್ಪಲು ತಯಾರಿಲ್ಲ! ‘ನಿಮಗೆ, ಅಂದರೆ ಈಗಿನ ತಲೆಮಾರಿನವರಿಗೆ ಗಾಂಧೀಜಿಯವರ ತ್ಯಾಗದ ಬೆಲೆ ಗೊತ್ತಿಲ್ಲ.

ಅವರು ದೇಶಕ್ಕಾಗಿ ತನ್ನೆಲ್ಲವನ್ನೂ ತ್ಯಾಗ ಮಾಡಿದರು, ಸತ್ಯಾಗ್ರಹ ಮಾಡಿದರು, ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟರು’ ಎಂದು ಕಟುವಾಗಿ ಪತ್ಯುತ್ತರ ನೀಡಿ, ತಮಗೆ ಎದುರಾಡಿದವರ ಬಾಯಿ ಮುಚ್ಚಿಸುತ್ತಾರೆ. ನಿವೃತ್ತ ಸರಕಾರಿ ಅಧಿಕಾರಿಯಾಗಿರುವ ಅವರು ನಮ್ಮ ದೇಶದ ಇತಿಹಾಸವನ್ನು ಸಾಕಷ್ಟು ಓದಿಕೊಂಡಿದ್ದಾರೆ, ತಿಳಿದಿದ್ದಾರೆ. ಆದರೆ ಈಚಿನ ದಶಕಗಳಲ್ಲಿ ಹೊರಬಂದ ಹಲವು ಪ್ರಮುಖ ವಿಚಾರಗಳನ್ನು, ವಿಶ್ಲೇಷಣೆಗಳನ್ನು, ರಹಸ್ಯ ದಾಖಲೆಗಳ ವಾಸ್ತವವನ್ನು ಒಪ್ಪಿಕೊಳ್ಳಲು ಅವರು ತಯಾರಿಲ್ಲ.

ಕಳೆದ ಎರಡು ದಶಕಗಳಲ್ಲಿ ಹೊರಬಂದ ಹಲವು ಪುಸ್ತಕಗಳು ಹೊರಗೆಡಹಿದ ಕಟುಸತ್ಯಗಳನ್ನು ವರೆಗೆ ಹಚ್ಚಿ ನೋಡುವ ತಾಳ್ಮೆ, ವಿವೇಚನೆ ಅವರಲ್ಲಿಲ್ಲ.
‘ಗಾಂಧೀಜಿಯವರ ಹೋರಾಟವು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು’ ಎಂಬ ಅವರ ನಂಬಿಕೆಯನ್ನು ಪ್ರಶ್ನಿಸುವುದನ್ನು ಅವರು ಇಷ್ಟಪಡುವುದಿಲ್ಲ,
ಬಯಸುವುದೂ ಇಲ್ಲ, ಅದೊಂದು ಹೇಳಿಕೆಗೆ ಬೇರಾವ ಸಮಜಾಯಿಷಿ ನೀಡಿದರೂ ಒಪ್ಪದೇ ಇರುವಂತಹ ಮನಸ್ಥಿತಿ ಅವರದ್ದು.

ಅಹಿಂಸೆ, ಸತ್ಯಾಗ್ರಹ, ಹರತಾಳಗಳನ್ನು ಹೋರಾಟಕ್ಕೆ ಬಳಸಿ, ಸದಾ ಶಾಂತಿಮಂತ್ರವನ್ನು ಪಠಿಸುತ್ತಿದ್ದ ಗಾಂಧೀಜಿಯವರು, ಇಂತಹ ನಡೆಗಳಿಂದಲೇ
ಮಹಾತ್ಮ ಎನಿಸಿದ್ದರು. ಬಂದೂಕು ಹಿಡಿದ ಪೊಲೀಸರ ವಿರುದ್ಧ, ಮೌನವಾಗಿ ಪ್ರತಿಭಟಿಸಿ, ಅವರ ಮನ ಪರಿವರ್ತನೆ ಮಾಡಬಹುದು ಎಂಬ ಗಾಂಧೀಜಿಯವರ ದೃಢ ನಂಬಿಕೆಯನ್ನು ಕಂಡು, ಅದನ್ನು ಅವರು ದಕ್ಷಿಣ ಆಫ್ರಿಕಾದಲ್ಲಿ ಮತ್ತು ಭಾರತದಲ್ಲಿ ಆಚರಣೆಗೆ ತಂದ ರೀತಿಯನ್ನು ಕಂಡು ವಿಶ್ವಕ್ಕೆ ವಿಶ್ವವೇ ಬೆರಗಾಯಿತು.
ಆದರೆ ಗಾಂಧೀಜಿಯವರ ಈ ‘ಅಹಿಂಸಾ ಪ್ರೇಮ’ ವನ್ನು, ಮನೋಭಾವವನ್ನು ತಮ್ಮ ಲಾಭಕ್ಕೆ ಉಪಯೋಗಿಸಿಕೊಂಡವರಲ್ಲಿ ಪ್ರಮುಖರೆಂದರೆ ಬ್ರಿಟಿಷರು.

ಭಾರತದಿಂದ ಅಪಾರ ಸಂಪತನ್ನು ತಮ್ಮ ದೇಶಕ್ಕೆ ಸಾಗಿಸಿ, ಇಲ್ಲಿನ ವಿಶಾಲ ಭೂಪ್ರದೇಶವನ್ನು ತಮ್ಮ ಲಾಭಕ್ಕಾಗಿ, ವ್ಯಾಪಾರಕ್ಕಾಗಿ ಬಳಸಿಕೊಳ್ಳುತ್ತಾ, ಇಲ್ಲಿ
ದಬ್ಬಾಳಿಕೆ ಆಡಳಿತವನ್ನು ಮುಂದುವರಿಸುವ ಉದ್ದೇಶಕ್ಕಾಗಿ, ಗೊತ್ತಿದ್ದೋ ಗೊತ್ತಿಲ್ಲದೆಯೋ ಬ್ರಿಟಿಷರು ಗಾಂಧೀಜಿಯವರನ್ನು ಉಪಯೋಗಿಸಿಕೊಂಡಿದ್ದು ಮೇಲ್ನೋಟಕ್ಕೆ ಕಾಣುತ್ತದೆ. ಬ್ರಿಟಿಷರು ಕಾಲದಿಂದ ಕಾಲಕ್ಕೆ ತರುತ್ತಿದ್ದ ಕ್ರೂರ, ಅಮಾನವೀಯ ಕಾನೂನುಗಳನ್ನು ಕಂಡು ಪ್ರತಿಭಟಿಸುತ್ತಿದ್ದ ಭಾರತೀಯರನ್ನು
ಮಣಿಸಲು, ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ದಶಕಗಳ ಕಾಲ ಜಾರಿಯಲ್ಲಿಟ್ಟಿದ್ದ ಕ್ರಾಂತಿಕಾರಿಗಳ ಹೋರಾಟವನ್ನು ದಿಕ್ಕುತಪ್ಪಿಸಲು, ಗಾಂಧೀಜಿ
ಯವರನ್ನು ಮೇಲಕ್ಕೆತ್ತಿ ಬೆಳೆಸಿದ ಬ್ರಿಟಿಷರ ನಡೆಯಲ್ಲಿ, ಅವರ ಸ್ವಾರ್ಥ ಅಡಗಿತ್ತು. ಅದನ್ನು ಯಶಸ್ವಿಯಾಗಿ, ಹಲವು ಬಾರಿ ರಹಸ್ಯವಾಗಿ, ಕೆಲವು ಬಾರಿ
ಬಹಿರಂಗವಾಗಿ ಕಾರ್ಯಪಾಲನೆ ಮಾಡುತ್ತಲೇ ಬಂದರು.

ಗಾಂಧೀಜಿಯವರನ್ನು ಬ್ರಿಟಿಷರು ‘ವಿ.ಐ.ಪಿ.’ ಯಾಗಿ ನೋಡುತ್ತಿದ್ದರು ಎಂಬುದಕ್ಕೆ ಮೊದಲ ಪ್ರಸಿದ್ಧ ಮತ್ತು ಎಲ್ಲರಿಗೂ ಗೊತ್ತಿರುವ (ರಹಸ್ಯವಲ್ಲದ) ಉದಾಹರಣೆ 1915ರಲ್ಲಿ ಸಿಗುತ್ತದೆ. 21ವರ್ಷಗಳ ಕಾಲ ದಕ್ಷಿಣ ಆಫ್ರಿಕಾದಲ್ಲಿದ್ದ ಗಾಂಧೀಜಿಯವರು, ಅಲ್ಲಿನ ತಾರತಮ್ಯದ ವಿರುದ್ಧ ಹೋರಾಟ ನಡೆಸುತ್ತಾ,ಮಹಾತ್ಮ ಎಂಬ ಬಿರುದನ್ನು ಪಡೆದು, ಸತ್ಯಾಗ್ರಹವನ್ನು ಸಂಶೋಧಿಸಿ, ಅಬ್ಬರದ ಪ್ರಚಾರ ದೊಂದಿಗೆ 1915ರಲ್ಲಿ ಭಾರತಕ್ಕೆ ವಾಪಸಾದರು. ಅವರು ಬಂದಿದ್ದೇ ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಎಂದು ಅದಾಗಲೇ ಪ್ರಚಾರವಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಅವರು ನಟಾಲ್ ಇಂಡಿಯನ್ ಕಾಂಗ್ರೆಸ್‌ನ್ನು ಸ್ಥಾಪಿಸಿದ್ದರು, ಟಾಲ್‌ಸ್ಟಾಯ್ ಆಶ್ರಮ ಸ್ಥಾಪಿಸಿದ್ದರು, ಶಾಂತಿಯ ತಳಹದಿಯಲ್ಲೇ ಅಲ್ಲಿದ್ದ ಜನಾಂಗೀಯ ತಾರತಮ್ಯದ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

1915ರಲ್ಲಿ ಗಾಂಧೀಜಿಯವರು ಭಾರತಕ್ಕೆ ಬಂದಿಳಿದಾಗ, ಮುಂಬಯಿಯಲ್ಲಿ ಅವರಿಗೆ ಅದ್ಧೂರಿಯ ಸ್ವಾಗತ! ಆ ವಾಣಿಜ್ಯ ನಗರಿಯ ಪ್ರಸಿದ್ಧ ವರ್ತಕರು ಗಾಂಧೀಜಿ ಯವರಿಗೆ ಸನ್ಮಾನ ಮಾಡಿದರು. ಬ್ರಿಟಿಷರ ನೇರ ನಿಯಂತ್ರಣದಲ್ಲಿದ್ದ ಮುಂಬಯಿ ಪ್ರಾಂತ್ಯದಲ್ಲಿ, ಅಂತಹ ಬಹಿರಂಗ ಸಮಾರಂಭ ನಡೆಯಬೇಕೆಂದರೆ
ಆಳುವವರ ಸಹಮತ ಬೇಕೇ ಬೇಕು. ಇದರ ಜತೆ, ಸ್ವತಃ ಬ್ರಿಟಿಷ್ ಸರಕಾರವೇ ಗಾಂಧೀಜಿಯವರನ್ನು ಗೌರವಿಸಿತು! ಬ್ರಿಟಿಷ್ ರಾಜ್‌ಗೆ ಉತ್ತಮ ಸೇವೆ ನೀಡಿದ ವರಿಗೆ ಇಂಗ್ಲೆಂಡ್‌ನ ದಣಿಗಳು ಪ್ರತಿ ವರ್ಷ ಕೊಡಮಾಡುವ, ಅತ್ಯುನ್ನತ ಗೌರವದ ‘ಕೈಸರ್ -ಇ -ಹಿಂದ್’ ಪ್ರಶಸ್ತಿಯನ್ನು ಗಾಂಧೀಜಿಯವರಿಗೆ ನೀಡಿ ಗೌರವಿಸ ಲಾಯಿತು.

ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷರು ನಡೆಸಿದ ಯುದ್ಧದ ಸಮಯದಲ್ಲಿ ಸರಕಾರಕ್ಕೆ ಸಹಾಯ ಮಾಡಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂಬ ಅಧಿಕೃತ ಕಾರಣ ನೀಡಲಾಗಿತ್ತು. ಅದೇನೇ ಇದ್ದರೂ, ಸರಕಾರದಿಂದ ಅತ್ಯುನ್ನತ ಪ್ರಶಸ್ತಿ ಪಡೆದರು ಎಂದಾಗ, ಸಹಜವಾಗಿ, ಅವರು ಸರಕಾರದ ದೃಷ್ಟಿಯಲ್ಲಿ ಒಬ್ಬ ವಿಐಪಿ
ತಾನೆ! ಐದು ವರ್ಷಗಳ ನಂತರ, ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡವನ್ನು ಪ್ರತಿಭಟಿಸಿ, 1920ರಲ್ಲಿ ಗಾಂಧೀಜಿಯವರು ಅದನ್ನು ಹಿಂದಿರುಗಿಸಿದರು.
೧೯೧೮ರಲ್ಲಿ ಗಾಂಧೀಜಿಯವರ ಒಳ್ಳೆಯತನವನ್ನು ಬ್ರಿಟಿಷರು ದುರ್ಬಳಕೆ ಮಾಡಿಕೊಂಡ ಮತ್ತೊಂದು ಉದಾಹರಣೆಯನ್ನು ಕಾಣಬಹುದು.

ಅದಾಗಲೇ, ಗಾಂಧೀಜಿಯವರು ಸರಕಾರಕ್ಕೆ ತಮ್ಮ ಶಾಂತಿಯುತ ಹೋರಾಟದ ಬಿಸಿಮುಟ್ಟಿಸಿದ್ದರು. 1917ರಲ್ಲಿ ಚಂಪಾರಣ್ ಸತ್ಯಾಗ್ರಹದ ನೇತೃತ್ವ ವಹಿಸಿದ್ದ
ಗಾಂಧೀಜಿಯವರು, ರೈತರ ಇಷ್ಟದ ವಿರುದ್ಧವಾಗಿ ನೀಲಿ ಬೆಳೆಯಬೇಕೆಂದು ಒತ್ತಾಯಿಸುವಂತಿಲ್ಲ ಎಂದು ಸರಕಾರವನ್ನು ಆಗ್ರಹಿಸಿದ್ದರು. ಮುಂದಿನ ವರ್ಷ,
ಬರಗಾಲ ಅನುಭವಿಸುತ್ತಿದ್ದ ಖೆಡಾದಲ್ಲಿ ಕರವಸೂಲಿಯನ್ನು ಮುಂದೂಡುವಂತೆ ಸರಕಾರವನ್ನು ಒತ್ತಾಯಿಸಲು, ಸಹಿಸಂಗ್ರಹಣೆ, ಕರನಿರಾಕರಣೆ ಮತ್ತು
ಸತ್ಯಾಗ್ರಹ ವನ್ನು ಯಶಸ್ವಿಯಾಗಿ ನಡೆಸಿದ್ದರು.

ಇಷ್ಟಾದರೂ, 1918ರಲ್ಲಿ ಬ್ರಿಟಿಷರಿಗೆ ಅಪಾರ ಪ್ರಮಾಣದ ಸೈನಿಕರ ಅವಶ್ಯಕತೆ ಉಂಟಾದಾಗ, ಭಾರತದ ವೈಸರಾಯ್ ಮೊರೆಹೋದದ್ದು ಗಾಂಧೀಜಿ ಯವರನ್ನು. ದೆಹಲಿಯಲ್ಲಿ ನಡೆದ ‘ಯುದ್ಧ ಪರಿಷತ್ತು’ (ವಾರ್ ಕಾನರೆನ್ಸ್) ಸಮಾಲೋಚನೆಯಲ್ಲಿ, ಗಾಂಧೀಜಿಯವರೊಂದಿಗೆ ಮಾತುಕತೆಗೆ ಕುಳಿತ ವೈಸ್
ರಾಯ್, ಮೊದಲನೆಯ ಮಹಾಯುದ್ಧದಲ್ಲಿ ಹೋರಾಡಲು ಸಾವಿರಾರು ಸೈನಿಕರನ್ನು ಆಯ್ಕೆ ಮಾಡಲು ಗಾಂಧೀಜಿಯವರ ಅನುಮತಿಯನ್ನು ಪಡೆಯುವಲ್ಲಿ ಯಶಸ್ವಿಯಾದ. ಅಂದು ಬ್ರಿಟಿಷ್ ಸೈನ್ಯವನ್ನು ಸೇರಿದ ನಮ್ಮ ಸಾವಿರಾರು ಸೈನಿಕರು ಯುರೋಪ್‌ಗೆ ತೆರಳಿ, ಜರ್ಮನಿ ಮತ್ತಿತರ ದೇಶಗಳ ವಿರುದ್ಧ ಹೋರಾಡಿ, ಬ್ರಿಟಿಷ್ ಮಿತ್ರಪಡೆ ಸೈನ್ಯಕ್ಕೆ ಜಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇಲ್ಲಿ ಗಾಂಧೀಜಿಯವರ ಒಳ್ಳೆಯತನವನ್ನು ಬ್ರಿಟಿಷರು ಹೇಗೆ ದುರುಪಯೋಗ ಪಡಿಸಿಕೊಂಡರು ಎಂಬ ಪ್ರಶ್ನೆ ಎದುರಾಗಬಹುದು. ಮೊದಲ ಮಹಾಯುದ್ಧ ನಡೆಯುತ್ತಿರುವಾಗಲೇ ಗಾಂಧೀಜಿಯವರು ಬ್ರಿಟಿಷ್ ಸೈನ್ಯ ಬಲಪಡಿಸುವಲ್ಲಿ ತಮ್ಮ ಸಹಕಾರ ನೀಡಿದ್ದರ ಕುರಿತು ಸಾಕಷ್ಟು ವ್ಯಾಖ್ಯಾನಗಳು ಬಂದಿವೆ.
ನಮ್ಮವರು ಯುದ್ಧಕಲೆ ಕಲಿತು ಬರಲಿ ಎಂದು ಗಾಂಧೀಜಿ ಅನುಮತಿ ನೀಡಿದರು ಎಂಬ ಟಿಪ್ಪಣಿಯೂ ಇದೆ. ಆದರೆ, ಬ್ರಿಟಿಷರ ವಿರುದ್ಧ ಅದಾಗಲೇ ಒಂದೆರಡು
ದಶಕಗಳಿಂದ ಸಶಸ ಹೋರಾಟವನ್ನು ಜಾರಿಯಲ್ಲಿಟ್ಟಿದ್ದ ಬಂಗಾಳದ ಅನುಶೀಲನ ಸಮಿತಿಯ ಮತ್ತು ಪಂಜಾಬಿನ ಗದ್ದರ್ ಪಕ್ಷದ ಕ್ರಾಂತಿಕಾರಿ ಹೋರಾಟ ಗಾರರಿಗೆ,  ಗಾಂಧೀಜಿಯವರ ಈ ನಡೆಯಿಂದ ದೊಡ್ಡಮಟ್ಟದ ಆಘಾತ, ಹಿನ್ನಡೆಯಾಯಿತು. ಮೊದಲ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರ ಬಹುಪಾಲು ಸೈನ್ಯವು ಭಾರತದಿಂದ ಹೊರಹೋಗಿದ್ದಾಗ, ಇಲ್ಲಿ ಬ್ರಿಟಿಷರನ್ನು ಓಡಿಸಲು ಕ್ರಾಂತಿಕಾರಿಗಳು ಯೋಜನೆ ತಯಾರಿಸಿದ್ದ.

ಆ ಉದ್ದೇಶಕ್ಕಾಗಿ, ಬೇರೆ ಬೇರೆ ದೇಶಗಳಲ್ಲಿದ್ದ ಸಾವಿರಾರು ಕ್ರಾಂತಿಕಾರಿಗಳು ಭಾರತಕ್ಕೆ ಮರಳಿದ್ದರು. ಆ ಸಮಯದಲ್ಲಿ ಭಾರತದಲ್ಲಿದ್ದ ಬ್ರಿಟಿಷ್ ಸೈನಿಕರ ಸಂಖ್ಯೆ ಕೇವಲ 15000. ಆದರೆ, ಗಾಂಽಜಿಯವರ ಸಹಮತದ ಮೇರೆಗೆ, ಸಾವಿರಾರು ಸ್ಥಳೀಯ ಯುವಕರನ್ನು ಸೈನ್ಯಕ್ಕೆ ಸೇರಿಸಿಕೊಂಡದ್ದರಿಂದ, ಬ್ರಿಟಿಷ್ ಸೈನ್ಯ ಬಲಗೊಂಡಿತು. ಸಶಸ್ತ್ರ ಹೋರಾಟದ ಮೂಲಕ ೧೯೧೮ರಲ್ಲಿ ಬ್ರಿಟಿಷರನ್ನು ಓಡಿಸುವ ಕ್ರಾಂತಿಕಾರಿಗಳ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಯಿತು.

ಇಲ್ಲಿ ಗಾಂಧೀಜಿಯವರ ವೈಯಕ್ತಿಕ ಮನೋಗತವೂ ಈಡೇರಿದೆ ಎನ್ನಬಹುದು. ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಹಿಂಸೆಯನ್ನು ಪ್ರಯೋಗಿಸಲೇಬಾರದು ಎಂದು
ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಹೇಳಿಕೊಂಡು ಬಂದಿದ್ದರು. ಒಬ್ಬೊಬ್ಬರಾಗಿ ಬ್ರಿಟಿಷ್ ಅಧಿಕಾರಿಗಳನ್ನು ಕೊಲ್ಲುತ್ತಿದ್ದ, ವೈಸ್‌ರಾಯ್ ಮೇಲೆ
ಬಾಂಬ್ ಎಸೆಯುತ್ತಿದ್ದ (1912) ತರುಣ ಕ್ರಾಂತಿಕಾರಿಗಳನ್ನು ಗಾಂಧೀಜಿ ಎಂದಿಗೂ ಬೆಂಬಲಿಸಲಿಲ್ಲ. 1918ರ ನಂತರ ಕ್ರಾಂತಿಕಾರಿಗಳ ಹೋರಾಟ ನಿಧಾನವಾಗಿ ತಣ್ಣಗಾಗುತ್ತಾ ಬಂದಿದ್ದರಿಂದ, ಗಾಂಽಜಿಯವರ ಈ ಒಂದು ಉದ್ದೇಶ ಪರೋಕ್ಷವಾಗಿ ಈಡೇರಿದಂತಾಗಿತ್ತು!

ಈ ನಿಟ್ಟಿನಲ್ಲಿ ಯೋಚಿಸಿದರೆ, ಬ್ರಿಟಿಷರ ವಿರುದ್ಧ ಹೋರಾಟ ನಡೆಸುತ್ತಿದ್ದ ಕ್ರಾಂತಿಕಾರಿಗಳ ಅಭಿಯಾನವನ್ನು ವಿಫಲಗೊಳಿಸಲು, ಬ್ರಿಟಿಷರು ಗಾಂಧೀಜಿಯವ
ರನ್ನು ಬಳಸಿಕೊಂಡರು ಎಂದೇ ಹೇಳಬಹುದು. ಬ್ರಿಟಿಷರ ಈ ರಹಸ್ಯ ತಂತ್ರವನ್ನು ಅರಿಯದೇ, ತಮ್ಮ ಅಹಿಂಸಾವಾದಕ್ಕೆ ಅಂಟಿಕೊಂಡ ಗಾಂಧೀಜಿಯವರು ನಿಜಕ್ಕೂ ಮಹಾತ್ಮರೇ ಸರಿ. ಗಾಂಧೀಜಿಯವರ ಒಳ್ಳೆಯತನವನ್ನು, ಜನರನ್ನು ನಿಯಂತ್ರಿಸುವ ಅವರ ಶಕ್ತಿಯನ್ನು ಬ್ರಿಟಿಷರು ದುರುಪಯೋಗಪಡಿಸಿಕೊಂಡ ವಿದ್ಯಮಾನಗಳು 1948ರಲ್ಲೂ ಮುಂದುವರಿಯುತ್ತದೆ!

15.8.1948ರಂದು ಸ್ವಾತಂತ್ರ್ಯ ದೊರೆತರೂ, ದೇಶದುದ್ದಕ್ಕೂ ಕೋಮುದಳ್ಳುರಿ, ಗಲಭೆಗಳು ನಿಂತಿರಲಿಲ್ಲ. ಅತ್ತ ಕಾಶ್ಮೀರದಲ್ಲಿ ಯುದ್ಧ ನಡೆಯುತ್ತಿತ್ತು. ಪಾಕಿಸ್ತಾನದಿಂದ ಓಡಿಬಂದಿದ್ದ, ಭಯಾನಕ ಅನುಭವಕ್ಕೆ ಸಾಕ್ಷಿಯಾಗಿದ್ದ, ಎಥ್ನಿಕ್ ಕ್ಲೀನ್ಸಿಂಗ್‌ಗೆ ಒಳಗಾಗಿದ್ದ ಲಕ್ಷಾಂತರ ಜನರು ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಪ್ರತಿದಿನ ಬೀದಿ ಬೀದಿಗಳಲ್ಲಿ ಆಶ್ರಯಕ್ಕಾಗಿ, ಆಹಾರಕ್ಕಾಗಿ ಗಲಭೆ ನಡೆಯುತ್ತಿತ್ತು. ದೆಹಲಿ ಸ್ಫೋಟಕ ಸ್ಥಿತಿ ತಲುಪಿತ್ತು. ಗವರ್ನರ್ ಜನರಲ್ ಮೌಂಟ್‌ಬ್ಯಾಟನ್ 12.1.1948ರಂದು ಗಾಂಧೀಜಿಯವರೊಂದಿಗೆ ಮಾತುಕತೆಗೆ ಕುಳಿತ. ದೆಹಲಿಯ ಸ್ಫೋಟಕ ಸ್ಥಿತಿಯನ್ನು ತಣ್ಣಗಾಗಿಸಲು ನಿಮ್ಮಿಂದ ಮಾತ್ರ ಸಾಧ್ಯ, ಏನಾದರೂ ಮಾಡಿ ಎಂದು ಮನವಿ ಮಾಡಿದ.

ಆ ಮೀಟಿಂಗ್ ಮುಗಿದ ನಂತರ, ಗಾಂಧೀಜಿಯವರು ಸ್ವತಂತ್ರ ಭಾರತದಲ್ಲೂ ಉಪವಾಸ ಸತ್ಯಾಗ್ರಹ ಮಾಡುವರೆಂಬ ಘೋಷಣೆ ಹೊರಬಿತ್ತು! ಅವರ
ಬೇಡಿಕೆಗಳು? ದೆಹಲಿಯಲ್ಲಿ ಸ್ಥಳೀಯ ಜನರು ಶಾಂತಿ ಸ್ಥಾಪಿಸಬೇಕು ಮತ್ತು ಪಾಕಿಸ್ತಾನಕ್ಕೆ ರೂ.55 ಕೋಟಿ ನೀಡಬೇಕು! ಅಷ್ಟು ದಶಕಗಳ ಕಾಲ ಗಾಂಧೀಜಿ ಯವರ ಅಹಿಂಸಾಪ್ರೇಮವನ್ನು ದುರುಪಯೋಗಪಡಿಸಿಕೊಂಡ ಬ್ರಿಟಿಷ್ ರಾಜ್, 1948ರಲ್ಲಿ ಅವರನ್ನು ಮತ್ತೊಮ್ಮೆ ಉಪವಾಸಕ್ಕೆ ಕೂರುವಂತೆ ಯಶಸ್ವಿಯಾಗಿ ಮನವೊಲಿಸಿದ ಮೌಂಟ್‌ಬ್ಯಾಟನ್‌ನ ಈ ಕುತ್ಸಿತ ಚಾಣಾಕ್ಷತನ ಹೆಚ್ಚು ಪ್ರಚಾರಕ್ಕೆ ಬರಲೇ ಇಲ್ಲ!

ಏಕೆಂದರೆ, ಅದಾಗಿ ಎರಡೇ ವಾರಗಳಲ್ಲಿ ರಾಷ್ಟ್ರಪಿತನ ಕೊಲೆಯಾಯಿತು. ಜೀವನದುದ್ದಕ್ಕೂ ಅಹಿಂಸೆ, ಶಾಂತಿ, ಹರತಾಳ, ಪ್ರತಿಭಟನೆ ಮತ್ತು ಸತ್ಯಾಗ್ರಹ ಎನ್ನುತ್ತಾ ನಿರಂತರ ಹೋರಾಟ ನಡೆಸಿದ, ಅಹಿಂಸೆಯ ಮೇಲೆ ಶೇ.100ರಷ್ಟು ನಂಬಿಕೆ ಇರಿಸಿದ್ದ ಮಹಾತ್ಮಾ ಗಾಂಧೀಜಿಯವರನ್ನು, ಬಂದೂಕಿನಿಂದ ಹಾರಿದ ಒಂದು ಗುಂಡು ಸಾಯಿಸಿದ್ದು ಮಾತ್ರ 20ನೆಯ ಶತಮಾನದ ಘೋರ ದುರಂತ.

Leave a Reply

Your email address will not be published. Required fields are marked *

error: Content is protected !!