Sunday, 8th September 2024

ತಂತ್ರ, ಯಂತ್ರಗಳಿಂದ ಮೋಸ ಹೋಗುತ್ತೇವೆ

ಪ್ರಾಣೇಶ ಪ್ರಪಂಚ

ಗಂಗಾವತಿ ಪ್ರಾಣೇಶ

ಭಾರತದ ತತ್ವಜ್ಞಾನ, ಋಷಿ ಪರಂಪರೆ, ಪಾಪ ಪುಣ್ಯಗಳ ವಿಶ್ಲೇಷಣೆ, ಧರ್ಮಾ ಧರ್ಮಗಳ ವಿವೇಚನೆ ಅಸದೃಶವಾದವುಗಳು, ಇವೆಲ್ಲವನ್ನು ಅರಿತವರು, ಆಚರಿಸುವವರು ಹೇಗೋ ಒಂದು ರೀತಿಯಿಂದ ಸುಖ, ಸಂತೃಪ್ತಿಗಳಲ್ಲೇ ಇದ್ದಾರೆ. ಇನ್ನೊಬ್ಬರನ್ನು ಆಳುವ, ತಾವು ಮೆರೆಯುವ, ಇನ್ನೊಬ್ಬರನ್ನು ಕಾಯಾ,
ವಾಚಾ, ಮನಸಾ ಹಿಂಸಿಸಿ, ದೂಷಿಸಿ ಬದುಕುವವರು ಅತೃಪ್ತಿ, ಕ್ರೋಧ, ಅಸಂತೋಷಗಳಲ್ಲೇ ಇದ್ದಾರೆ.

ಪರರ ಸ್ವತ್ತು ಬೆಂಕಿಗೆ ಸಮ ಎಂದು ಭಾವಿಸಿ, ಬಂದಷ್ಟರಿಂದಲೇ ಬಾಳಿಕೊಳ್ಳುವ ಜನ ಇಂದಿಗೂ ನಿಶ್ಚಿಂತೆ ಯಿಂದಲೇ ಇದ್ದಾರೆ. ದುರಾಸೆಗೆ, ಅಸಹನೆಗೆ ಬಿದ್ದ ಜನ, ಸದಾ ಕುದಿಯುತ್ತಲೇ ತಿನ್ನಲೂ ಬಾರದ, ಬಿಸಾಡಲೂ ಆಗದ ಅರೆಬೆಂದ ಅನ್ನದಂತೆ ಜೀವನದ ಪಾತ್ರಗಳಲ್ಲಿ ಬೇಯುತ್ತಲೇ ಇದ್ದಾರೆ. ನಮ್ಮ ರಾಜಕಾರಣಿಗಳು ಕಳೆದ 75 ವರ್ಷಗಳಿಂದ ಜನರಿಗೆ ಎಲ್ಲವನ್ನು ಉಚಿತಕೊಟ್ಟು, ಮನ್ನಾ ಮಾಡಿ, ಬರೀ ಒಂದು ದಿನಕ್ಕಲ್ಲ, ವರ್ಷಕ್ಕಲ್ಲ ಮುಂಬರುವ ಜನ್ಮ ಜನ್ಮಗಳಿಗೂ ಅವರನ್ನು ಋಣವೆಂಬ ಸೂತಕವು ಅಂಟಿಕೊಂಡು ಅದನ್ನು ಕಳೆದುಕೊಳ್ಳಲು ಮತ್ತೆ ಮತ್ತೆ ಹುಟ್ಟುತ್ತಲೇ, ಕಷ್ಟಗಳನ್ನು ಅನುಭವಿಸುತ್ತಲೇ ಸಾಯುವಂತೆ ಮಾಡಿದ್ದಾರೆ, ವೋಟಿಗಾಗಿ ಸಾಲಮನ್ನಾ ಮಾಡುವ ಅಜ್ಞಾನಿ ರಾಜಕಾರಣಿಗಳು ಸಮಾಜದ ಆರ್ಥಿಕ ವ್ಯವಸ್ಥೆಯನ್ನು ಕುಸಿಯುವಂತೆ ಮಾಡುವುದರ ಜತೆಗೆ, ಸಾಲ ತೆಗೆದುಕೊಂಡ ವ್ಯಕ್ತಿಯನ್ನು ಅಗೋಚರ ಋಣಭಾದೆಗೆ ಸಿಲುಕಿಸಿ ಅವನನ್ನು ‘ಪುನರಪಿ ಜನನಂ, ಪುನರಪಿ ಮರಣಂ’ ಚಕ್ರಕ್ಕೆ ಸಿಲುಕಿಸಿಲ್ಲ, ಚಕ್ರದ ಅರೆಗಳೇ ಅವನಾಗುವಂತೆ ಮಾಡಿ ದ್ದಾರೆ.

ಶ್ರೀ ವಿಜಯದಾಸರೂ ತಮ್ಮ ಒಂದು ಉಗಾಭೋಗದಲ್ಲಿ ಅದೆಷ್ಟು ಹೃದಯಂಗಮವಾಗಿ ಈ ಋಣಗಳ ಬಗ್ಗೆ ಹೇಳಿದ್ದಾರೆಂದರೆ ಶ್ರೋತವ್ಯ, ಮಂತವ್ಯ, ನಿಽಧ್ಯಾಸಿತವ್ಯ ಮಾಡುವಂತದು.

‘ಋಷಿಗಳ ಋಣ ಪೂರ್ವಾಶ್ರಮದಿಂದ ಪರಿಹಾರ ತ್ರಿದಶರ ಋಣ ಮೇಧಾದಿಗಳು ಮಾಡೆ ಅಸು ಸಂಬಂಧಿಗಳ ಋಣ ಗೃಹಸ್ಥಾಮಶ್ರಮದಲಿ, ಪುಸಿಯಲ್ಲ ತಿದ್ದಿ ಹೋಗುವದು ಸಿದ್ಧ ವಸುಧೆಯೊಳಗೆ ಒಂದು ಕಾಸು ಕೊಟ್ಟವನ ಋಣ ವಸುಧೆಯಲ್ಲಾ ತಿರುಗಿದರೂ ಪೋಗದಯ್ಯ ಪಶುಪಾಲ ಅವ್ಯಯಾತ್ಮ ವಿಜಯ ವಿಠ್ಠಲ ರಂಗ ಬಸುರೊಳು ಪೊಗಲಿಟ್ಟು ಬೆಸಸದೆ ಬಿಡದಯ್ಯ’

(ಬ್ರಹ್ಮಚರ್ಯ ಪಾಲನೆಯಿಂದ ಋಷಿ ಋಣ, ಯಜ್ಞ ಯಾಗಾದಿಗಳಿಂದ ದೇವ ಋಣ, ಗೃಹಸ್ಥಾಶ್ರಮದಿಂದ ಪಿತೃ ಋಣ, ದೇಹಾರೋಗ್ಯ ಕಾಪಾಡಿಕೊಳ್ಳುವುದರಿಂದ ದೇಹ ಋಣ, ಗಿಡಮರ ಬಳ್ಳಿಗಳ ಪೋಷಣೆ-ರಕ್ಷಣೆಗಳಿಂದ ಭೂತ ಋಣ, ಭಕ್ತಿ, ಭಜನೆ, ಜ್ಞಾನಗಳಿಂದ ಪರಮಾತ್ಮನ ಋಣ ಪರಿಹಾರವಾಗುವವು. ಆದರೆ, ನಾವು ಇತರರಿಂದ ಪಡೆದ ಒಂದು ಕಾಸು ಇದ್ದರೂ ಆ ಋಣದ ಹಣ ಹಿಂದಿರುಗಿಸದಿದ್ದರೆ ದೇಶ, ದೇಶ ತಿರುಗಿದರೂ ಹೋಗದು, ನೀನು ಯಾರಿಂದ ಸಾಲ ಪಡೆದಿರು ವೆಯೋ, ಇಲ್ಲ ಕದ್ದಿರುವೆಯೋ, ಅವರಲ್ಲಿಯೇ ಮತ್ತೆ ಮತ್ತೆ ಹುಟ್ಟಿ, ಅವನ ಮನೆಯ ಮಗನಾಗಿ, ಅಳಿಯನಾಗಿ, ಕಡೆಗೆ ಅವನ ಹೊಲ ಊಳುವ ಎತ್ತು, ಮನೆ ಕಾಯುವ ನಾಯಿ, ಕಡೆಗೆ ಅವನ ಮನೆಯ ಮುಂದಿನ ಮರವಾಗಿ ಹುಟ್ಟಿ ಅವರಿಗೆ ನೆರಳಾಗುವ ಕೆಲಸವನ್ನು ಮಾಡಿ ಆ ಋಣ ತೀರಿಸಲೇಬೇಕು.

ಇದನ್ನು ಸಾಲ ಮನ್ನಾ ಮಾಡಿ ಎಂದು ಬೊಬ್ಬಿಟ್ಟು ಮನ್ನಾ ಮಾಡಿಸಿಕೊಳ್ಳುವ ಈ ಮನೋಭಾವದ ಹಿಂದೆ, ನಮ್ಮ ದಾಸರುಗಳ ಈ ಮಾತುಗಳ ಹಿಂದಿನ ತರ್ಕ ಸರಣಿ ಎಷ್ಟು ಗಹನ, ಗಮನಾರ್ಹವಾಗಿದೆ ನೋಡಿದಿರಾ? ಪುರಂದರದಾಸರು ಈ ಸಾಲವೆಂಬ, ಋಣವೆಂಬ ಸೂತಕಕ್ಕೆ ಪರಿಹಾರವೇ ಇಲ್ಲ. ಇದು ಜನ್ಮ ಜನ್ಮಾಂತರಗಳಲ್ಲೂ ಬಾಧಿಸುತ್ತದೆ. ಅದಕ್ಕೆ ಸಾಲಿಗನನ್ನು, ಇನ್ನೊಬ್ಬರ ಹಣಕ್ಕೆ ಆಸೆ ಪಡುವವರನ್ನು, ಇನ್ನೊಬ್ಬರ ಹಣ ಲಪಟಾಯಿ ಸುವವನಿಗಂತೂ ಅತಿ ತೀಕ್ಷ್ಣವಾಗಿ ತಿಳಿ ಹೇಳಿದ್ದಾರೆ ಈ ಕೀರ್ತನೆಯಲ್ಲಿ.

‘ಋಣವೆಂಬ ಸೂತಕವು ಬಲು ಬಾಧೆಪಡಿಸುತ್ತದೆ’||ಪ||
ಗುಣನಿಽಯೇ ನೀನೆನ್ನ ಋಣವ ಪರಿಹರಿಸೋ ||
ಹೆತ್ತ ಸೂತಕ ಹತ್ತುದಿನಗಳಿಗೆ ಪರಿಹಾರ |
ಮೃತ್ಯು ಸೂತಕವು ಹನ್ನೊಂದು ದಿನಗಳಿಗೆ ||
ಮತ್ತೆ ಋಣ ಸೂತಕವೋ ಜನ್ಮಜನ್ಮಾಂತರಕೆ |
ಎತ್ತ ಹೋದರೂ ಬಿಡದೆ ಬೆಂಬತ್ತಿ ಬರುವದು ||
ಬಂಧು ಬಳಗದ ಮುಂದೆ ಬಹು ಮಾನವು ಹೋಗಿ |
ಅಂದವಳಿದೆನೊ ಈ ವಿಧ ಋಣದೊಳು ||
ಇಂದಿರಾರಮಣ ಶ್ರೀಪುರಂದರ ವಿಠ್ಠಲನೆ |
ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ ||

ಎಂದು ಮನೋಜ್ಞವಾಗಿ ವರ್ಣಿಸಿದ್ದಾರೆ. ಇಂತಹ ಮಹಿಮಾನ್ವಿತ ದಾಸರ, ಅನುಭಾವಿಗಳ, ಶರಣರ, ಮಾರ್ಮಿಕವಾದ ಮಾತುಗಳಿಗೆ ಮಾರುಹೋಗದ ನಾವು
ಇಂದಿಗೂ ಜಾಹಿರಾತು ನೋಡಿ, ದಲ್ಲಾಳಿಗಳನ್ನು ಹಿಡಿದು ಮೋಸ ಹೋಗುತ್ತೇವೆ. ಚಾಪೆಯ ಕೆಳಗೆ, ರಂಗೋಲಿ ಕೆಳಗೆ ನುಸುಳುವವರ ಕಾಲವೂ ಮುಗಿದು, ಈಗ ನಮ್ಮ ಕಾಲಬುಡದ ನೆಲದೊಳಗೇ ಸುರಂಗ ಕೊರೆದು ಹಳ್ಳ ತೋಡಿ ಜನ ನಮ್ಮನ್ನು ಕೆಡವಲಾರಂಭಿಸಿದ್ದಾರೆ.

ನನಗೆಷ್ಟೋ ಸಲ ಜನರೊಡನೆ ಬೆರೆತಾಗ ಸಿಗುವ ಸುಖಕ್ಕಿಂತಲೂ, ಪುಸ್ತಕಗಳೊಡನೆ ಬೆರೆತಾಗ ಓದುವಾಗ ಸಿಗುವ ಸುಖವೇ ಸುಖ ಎನಿಸುತ್ತದೆ. ಗ್ರಂಥಗಳು ಹೇಳುವಷ್ಟು ಸಮಾಧಾನವನ್ನು ಜನರಾಗಲಿ, ಬಂಧುಗಳಾಗಲಿ, ಸ್ನೇಹಿತರಾಗಲಿ ಹೇಳುವುದಿಲ್ಲ. ನೇರ ಕಟಕಿಯಾಡುವ ಮಿತ್ರರಿಗಿಂತ ಪರಿಸರದ ವ್ಯಕ್ತಿ ಸ್ವಭಾವ ಗಳ ಕಿಟಕಿ ತೆಗೆಯುವ ಗ್ರಂಥಗಳೇ ಮೇಲು. ಏನೆಲ್ಲ ಮಾಡಿದರೂ ಸುಖ ಸಿಗದಾಗ ಸುತ್ತಲ ಪರಿಸರವೇ ಬೇಸರವಾಗಿ, ವ್ಯವಸ್ಥೆಗೆ ನೊಂದು, ಕಂಡವರ ಮಾತು ಗಳಿಗೆ ಕುಗ್ಗಿ ಆತ್ಮಹತ್ಯೆಗೇ ಎಳೆದುಕೊಂಡು ಹೋಗುವವರನ್ನು ನಿತ್ಯ ನೋಡುತ್ತೇವೆ.

ಆದರೆ, ಏನೇ ಆದರೂ ನಮ್ಮ ಕೈಯಲ್ಲಿ ಏನೂ ಇಲ್ಲ ಎಂದು ನಮಗೆ ಮತ್ತೆ ಧೈರ್ಯ ಹೇಳೊದು ಪುರಂದರದಾಸರ ಈ ಕೀರ್ತನೆ,
‘ಹರಿಚಿತ್ತ ಸತ್ಯ ಹರಿ ಚಿತ್ತ ||
ನರಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು
ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ |
ಮದುವೆಯೇ ಆಗದಿರೋದು ಹರಿಚಿತ್ತವು ||
ಕುದುರೆ ಅಂದಣ ಆನೆ ಬಯಸೋದು ನರಚಿತ್ತ |
ಪಾದಚಾರಿಯಾಗೋದು ಹರಿಚಿತ್ತವಯ್ಯ ||
ವಿಧವಿಧ ತಿರುಗಾಟ, ಯಾತ್ರೆ ಬಯಸೋದು ನರಚಿತ್ತ |
ಒದಗಿ ಬರುವ ರೋಗಗಳು ಹರಿಚಿತ್ತವು ||
ತಾನೂ ಅನ್ನದಾನ ಮಾಡಬೇಕೆಂಬೋದು ನರಚಿತ್ತ |
ತನ್ನ ಉದರಕ್ಕೆ ಅಳುವದು ಹರಿಚಿತ್ತವಯ್ಯ ||
ಎಲ್ಲರನೂ ಆಳಬೇಕೆಂಬೋದು ನರಚಿತ್ತ |
ಪರರ ಕೈ ಕೆಳಗೆ ಕೆಲಸ ಮಾಡೋದು ಹರಿಚಿತ್ತವು.
ದೇವರನು (ಪುರಂದರ ವಿಠ್ಠಲ) ಕಾಣಬೇಕೆಂಬೋದು
ನರಚಿತ್ತ
ಪಾಪ, ದುರಿತಗಳನ್ನು ಕಳೆದುಕೋ ಎಂಬೋದು
ಹರಿಚಿತ್ತ.

ಇದೇ ಇಂಗ್ಲೀಷಿನ ‘ಮ್ಯಾನ್ ಪ್ರೊಪೋಸಸ್, ಗಾಡ್ ಡಿಸ್ಪೋಸಸ್’ ಎಂಬುದಲ್ಲವೇ? ಆದರೆ, ಈ ಒಂದು ವಾಕ್ಯ ಓದಿ ಈಗಿನ ಪೀಳಿಗೆ ಸುಮ್ಮನಾಗಿ ಬಿಡುತ್ತದೆ. ಇದರ ಆಳ, ವಿಸ್ತಾರಗಳನ್ನು ದಾಸ-ಶರಣರು ತಮ್ಮ ಅನುಭವದ ಗಣಿಗಳಿಂದ ಹೆಕ್ಕಿ ತೆಗೆದುಕೊಟ್ಟರು. ವಸ್ತುನಿಷ್ಠವಾದ ವೈವಿಧ್ಯತೆ ನಮ್ಮ ಹಿರಿಯರದು, ನಮ್ಮ ಪುರಾತನ ಪುರುಷರದ್ದು ಎಂಬ ಸತ್ಯ ಅವರ ಈ ಸಾಹಿತ್ಯದಿಂದ ನಮಗೆ ತಿಳಿಯುತ್ತದೆ.

ನನಗಂತೂ ಮೊದಲಿನಿಂದಲೂ ಪುಸ್ತಕಗಳೇ ಸ್ನೇಹಿತರು, ಗುರುಗಳು. ಅಕ್ಕಮಹಾದೇವಿಯು ಆತ್ಮ ಸಂಗಾತಕ್ಕೆ ನೀನೆನಗುಂಟು ಎಂದು ಹೇಳುವಂತೆ ನಾನು ಆತ್ಮ ಸಂಗಾತಕ್ಕೆ ಗ್ರಂಥಗಳುಂಟು ಎಂದು ಹೇಳುವವನು. ಆದರೆ, ಅದೇಕೋ ಈಗಿನ ಪೀಳಿಗೆಗೆ ಪುಸ್ತಕಗಳೆಂದರೇ ಅಲರ್ಜಿ. ಯಾವ ವಿಷಯದಲ್ಲೂ ಆಳಕ್ಕಿಳಿ ಯುವುದಿಲ್ಲ. ತೆರೆ-ನೊರೆಗಳ ಮೇಲೆ ಈಜಾಡಿ ದಂಡೆ ಸೇರಿಬಿಡುತ್ತಾರೆ.

ಆಳಕ್ಕೆ ಇಳಿಯದೇ ಮುತ್ತು ರತ್ನ ಸಿಗುವುದೆಂಬ ಕಲ್ಪನೆಯೂ ಇಲ್ಲ. ನಮ್ಮ ಉತ್ತರ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದ ಕಡೆ ಇದಕ್ಕೆ ಕಡಿದಷ್ಟೆ ತುರಿಸಿ ಕೊಳ್ಳುವುದು ಎನ್ನುತ್ತಾರೆ. ಎಲ್ಲವೂ ಉಚಿತವಾಗಬೇಕು, ನಮ್ಮದೆಲ್ಲ ಉಳಿಯಬೇಕು, ಬೇರೆಯವರದೆಲ್ಲ ಅಳಿಯಬೇಕು ಎಂಬ ಗುಣ ಶೇ. ಎಂಭತ್ತರಷ್ಟು ಜನರಿಗೆ ರಕ್ತದಲ್ಲೇ ಬೆರೆತು ಹೋಗಿಬಿಟ್ಟಿದೆ. ಇದಕ್ಕೆಲ್ಲ ಈ ಭ್ರಷ್ಟ ರಾಜಕಾರಣಿಗಳ ವೈಭವೋಪೇತ ಜೀವನ, ಅವರ ದಿನಚರಿಗಳೇ ಕಾರಣ.

ಅಬ್ಬರಿಸಿ, ನೊರೆಕಾರುತ್ತಾ ಬರುವ ಸಮುದ್ರದ ಅಲೆ ದಂಡೆಗೆ ತಲೆ ಹೊಡೆದುಕೊಂಡು ಮತ್ತೆ ಮೆಲ್ಲಗೆ ಹಿಂದೆ ಹೋಗಿ ಪುನಃ ಕಡಲನ್ನೇ ಸೇರುವಂತೆ ಈ ಆಟೋಪ ಗಳೆಲ್ಲ ಎಂಬುದರ ನೈಜತೆ ಅರಿವಾಗಬೇಕಾಗಿದೆ. ಯಾವುದಕ್ಕೂ ದುರಾಸೆ ಬೇಡ, ಅವರಂತೆ ನಾವಿಲ್ಲವಲ್ಲ ಎಂಬ ಕೊರಗು ಬೇಡ. ಅತೀ ಶ್ರೀಮಂತ ನಾಗಲು ಹೋಗಿ ಭಿಕ್ಷೆ ಬೇಡುವ ಸ್ಥಿತಿಗೆ ಬಂದವರಿದ್ದಾರೆ. ಬರೀ ಓ.ಟಿ.ಪಿ ಕೇಳಿ ಹಣ ದೋಚುವ ಪಾಪಿಗಳು ಬಂದಿದ್ದಾರೆ. ತತ್ವ, ಮಂತ್ರಗಳಲ್ಲಿ ವಿಶ್ವಾಸ ಕಳೆದುಕೊಂಡರೆ ಬೇರೆಯವರ ಕುತಂತ್ರ, ಅಂಗೈಯಷ್ಟಿರುವ ಯಂತ್ರಗಳಿಂದ ಮೋಸ ಹೋಗುತ್ತೇವೆ.

ಎಲ್ಲವನ್ನೂ ಕೊಡುವ ನಮ್ಮ ದೇವರುಗಳನ್ನು ಒಮ್ಮೆ ನೋಡಿ, ಅವರ ವೇಷ ಭೂಷಣಗಳಲ್ಲೇ ಗಹನವಾದ ತತ್ವಗಳಿವೆ. ಹರಿಹರ ಕವಿ ತನ್ನ ಗಿರಿಜಾ ಕಲ್ಯಾಣ ಕೃತಿಯಲ್ಲಿ ಶಿವನ ಕುರಿತು ಹೇಳುವಾಗ, ಶಿವನ ಪ್ರಾರಬ್ಧ ನೋಡಿ ಕಲಿಯಿರಿ ಎನ್ನುತ್ತಾನೆ, ಅದು ಹೀಗಿದೆ.

ಉಡುವದು ಗಜಚರ್ಮವಾದರೂ |
ಬೇಡಿದವರಿಗೆ ಉತ್ತಮ ವಸಗಳನೀವ ||
ತಾ ಕುಡಿವದು ಗಂಜಿ ಯಾದೊಡೇಂ |
ಬೇಡಿದವರಿಗಿತ್ತಪನು ಗಜ, ರಾಜಿ, ವಾಜಿಗಳು |
ಕೊಡುವದಕ್ಕುಂಟು ಭೋಗಿಪುದಕ್ಕಿಲ್ಲ.

ಅದಕ್ಕೆ ಈ ಪುಣ್ಯ ಭರತ ಭೂಮಿಯಲ್ಲಿ ಹುಟ್ಟಿದ ನಾವು ನಮ್ಮ ಪ್ರಾರಬ್ಧಕ್ಕನುಗುಣವಾಗಿ ಬಾಳಲೇ ಬೇಕು. ಅತಿಕ್ರಮಿಸಿ, ಅತಿಬಯಸಿದರೆ ಮತ್ತಷ್ಟು ಹೀನಬದುಕೇ ನಮ್ಮದಾಗುವುದು. ನಾವು ಕೊನೆಯದಾಗಿ ದೇವರನ್ನು ಏನು ಬೇಡಿಕೊಳ್ಳಬೇ ಕೆಂಬುದನ್ನು ಕನಕದಾಸರು ಬರೆದುಬಿಟ್ಟಿದ್ದಾರೆ. ಅದೆಂದರೆ,

ಹಿಂದೆ ಬರೆದಾ ಬರಹ ಹೇಗಾದರಾಗಲಿ |
ಮುಂದೆನ್ನ ವಂಶದಲಿ ಜನಿಸಿದವರ ಕಾಯೋ ||

ಎಂಥ ಅದ್ಭುತ ಮಾತು. ನಮ್ಮ ರಾಜಕಾರಣಿಗಳ ದೃಷ್ಟಿ, ವಿಚಾರವೆಲ್ಲವೂ ಮುಂದಿನ ಚುನಾವಣೆ ಮೇಲೆ, ನಮ್ಮ ದಾಸರ, ಶರಣರ, ತತ್ವಜ್ಞಾನಿಗಳ, ಸಂತರ, ಸಜ್ಜನರ ದೃಷ್ಟಿ ಮುಂದಿನ ಪೀಳಿಗೆಯ ಮೇಲೆ.

Leave a Reply

Your email address will not be published. Required fields are marked *

error: Content is protected !!