Friday, 20th September 2024

ಮಲ್ಯನ ತೀರ್ಥ ಓಕೆ, ಕೃಷ್ಣನ ಪ್ರಸಾದ ಯಾಕೆ ?

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

ಪೊಲೀಸ್ ಎರಗುವ ಎಲ್ಲ ಅಪರಾಧಗಳೂ ಮೊಕದ್ದಮೆಯಾಗಿ ದಾಖಲಾಗುವುದಿಲ್ಲ. ದಾಖಲಾಗುವ ವ್ಯವಸ್ಥೆಯಿದ್ದಿದ್ದರೆ ಪೊಲೀಸರೇ ಇರುತ್ತಿರಲಿಲ್ಲ! ಪತ್ರಕರ್ತರ
ಅವಘಡಗಳೂ ಹಾಗೇ. ಉದಾಹರಣೆಗೆ, ಪಾನಗೋಷ್ಠಿಗಳಲ್ಲಿ ಕಂಡುಬರುವ ಅತಿರೇಕಗಳು. ಒಮ್ಮೆ, ವೆಸ್ಟ್-ಎಂಡ್ ಹೊಟೆಲ್‌ನಲ್ಲಿ ಒಂದು ಕೂಟ ಏರ್ಪಾಡಾಗಿತ್ತು. ಸೇವಾಕರ್ತರು ಅಂದಿನ ಉಪ ಮುಖ್ಯಮಂತ್ರಿ ಎಸ್ ಎಂ ಕೃಷ್ಣ.

ಸ್ವಲ್ಪ ಹೊತ್ತು ಪತ್ರಕರ್ತರೊಡಗೂಡಿದ್ದು ಹೊರಟರು. ಆ ಹೊತ್ತಿಗಾಗಲೇ ಹೈದರಾಬಾದ್‌ನಿಂದ ಬಂದಿದ್ದ ವರದಿಗಾರನೊಬ್ಬ ಚಿತ್ತಾಗಿದ್ದ. ಹೊಟೆಲ್ ಆವರಣದಲ್ಲಿನ ಹುಲ್ಲು ಹಾಸೇ ಅವನಿಗೆ ಹಾಸಿಗೆಯಾಗಿತ್ತು. ವಾರೆಗಣ್ಣಿನಲ್ಲಿ ಅವನತ್ತ ನೋಟ ಬೀರಿ ಕೃಷ್ಣ ಕಾರಿನತ್ತ ನಡೆದರು. ಷರಾಬೆಂಬ ದ್ರಾವಣವೇ ಹಾಗೆ – ಅದರಲ್ಲಿ ಆರೋಗ್ಯ, ಸಂತೋಷ, ಹಣ, ಶಾಂತಿ, ನೆಮ್ಮದಿ, ಸಮತೋಲನ, ಸಂಬಂಧ, ಘನತೆ, ಮರ್ಯಾದೆ ಎಲ್ಲವೂ ಸಂಪೂರ್ಣ ಕರಗುತ್ತದೆ. ಅಂತಹ ಮತ್ತೊಂದು ವಸ್ತುವಿದ್ದರೆ ಅದು ಕಮ್ಯುನಿಸಂ. ಸಮಾಜದ ಸ್ವಾಸ್ಥ್ಯವನ್ನೂ, ದೇಶದ ಭದ್ರತೆಯನ್ನೂ ಹಾಳುಗೆಡವಬಲ್ಲ ವಿಚ್ಛಿದ್ರಕ ಶಕ್ತಿಯೂ ಆ ತತ್ವಕ್ಕಿದೆ.

ಹಾಗಾಗಿ, ಕುಡಿದು ನೆಲಕ್ಕೊರಗಿದ ಆ ಪತ್ರಕರ್ತನನ್ನು ಕಡೆಗಣಿಸಿ ನಡೆದ ಕೃಷ್ಣರಂತೆ ಕಮ್ಯುನಿಸಂ ಎಂಬ ಕಳ್ಳಭಟ್ಟಿಯನ್ನು ಕುಡಿದು ಬೀದಿಯಲ್ಲಿ ರಂಪ ಮಾಡುತ್ತಿರುವ ಕಮ್ಮಿಗಳನ್ನು ನಾವು ಉಪೇಕ್ಷಿಸಲುಬಾರದು. ಅಂತಹ ಒಂದು ಮೈಮೇಲೆ ಕಾರ್ಲ್ ಮಾರ್ಕ್ಸ್ ಮತ್ತು  ನಿನ್‌ರನ್ನು ಆವಾಹಿಸಿಕೊಂಡವರ ವ್ಯವಸ್ಥಿತ ರಂಪಾಟವನ್ನ ಅಮೆರಿಕದಲ್ಲಿ ನಿಯೋಜಿಸಲಾಗಿದೆ. ಜಾಗತಿಕ ಹಿಂದುತ್ವವನ್ನು ಕೆಡವುವುದು (Dismantling Global Hinduism) ಆನ್ ಲೈನ್ ಸಮಾವೇಶ ವೆಂದು ಹೆಸರಿಸಿರುವ ಮೂರು ದಿನದ ಆ ರಂಪಾಟದ ಅಜೆಂಡಾ. ಆಯೋಜಕರಾರೊ ತಿಳಿಯದು. ಭಾರತದ ಪರಾವಲಂಬಿ ಬುದ್ಧಿಜೀವಿಗಳು ಅಸಂಬದ್ಧ ಪ್ರಲಾಪ ದಲ್ಲಿ ಪಾಲ್ಗೊಳ್ಳುವ ಪ್ರಮುಖ ಭಾಷಣಕಾರರು.

ಸಂಶೋಧಕಿ ಎಂದು ಗುರುತಿಸಲ್ಪಟ್ಟ ಆಡ್ರೆ ಟ್ರುಶ್ಕೆ (Audrey Trushket) ಎಂಬ ತಲೆಕೆಟ್ಟ ಹೆಣ್ಣು ಈ ಸಮಾವೇಶದ ರೂವಾರಿ. ಜೆ ಎನ್ ಯು ತುಕಡೆ ಗ್ಯಾಂಗಿನ ಆಜೀವ ಸದಸ್ಯತ್ವಕ್ಕೆ ಅರ್ಹರಾಗಬಲ್ಲ ಮತ್ತನೇಕರ ಪ್ರಲಾಪವೂ ಮೂರೂ ದಿನ ಭೋರ್ಗರೆಯಲಿದೆ. ಹಿಂದೂಗಳ ಕರ್ಣಕಠೋರ ನಿಂದಾಸ್ತುತಿಗೆ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಅವರ ಮರಿ ಮಗಳಾದ ಸುಪ್ರಿಯಾ ಗಾಂಧಿ ಎಂಬ ಮಹಿಳಾಮಣಿಯೂ ದನಿಗೂಡಿಸಲಿದ್ದಾರೆ. (ಅವರ ಮತ್ತೊಬ್ಬ ಮರಿಮಗಳಾದ ಆಶಿಷ್ ಲತಾ ರಮಗೋಬಿನ್ ಳನ್ನು ಯಾವ ದಕ್ಷಿಣ ಆಫ್ರಿಕಾದಲ್ಲಿ ಮುತ್ತಾತ ಹೆಸರು ಮಾಡಿದರೋ ಅದೇ ದೇಶದ ನ್ಯಾಯಾಲಯ ಕಳೆದ ಜೂನ್ ತಿಂಗಳಲ್ಲಿ ಬೃಹತ್ ವಂಚನೆ ಪ್ರಕರಣವೊಂದರಲ್ಲಿ ಸೆರೆವಾಸ ವಿಧಿಸಿತು.)

ಆಡ್ರೆ ಟ್ರುಶ್ಕೆ ಕುರಿತು ಮಾಹಿತಿ ಇಲ್ಲದಿದ್ದಲ್ಲಿ ಒಂದೆರಡು ಮಾತುಗಳಲ್ಲಿ ಪರಿಚಯ ಮಾಡುವೆ. ಕೃಷ್ಣನ ಜನ್ಮಸ್ಥಳವಾದ ಮಥುರೆ ಹಾಗೂ ವಾರಣಾಸಿಯೂ ಸೇರಿ ದಂತೆ ವಿವಿಧೆಡೆಗಳಲ್ಲಿ ಹಿಂದೂ ಮತ್ತು ಬೌದ್ಧರ ದೇವಾಲಯಗಳನ್ನು ನಾಶಪಡಿಸಿದ ಔರಂಗಝೇಬನ ಕೈಗಂಟಿದ ರಕ್ತವನ್ನು ತನ್ನ ಟವೆಲ್‌ನಿಂದ ಒರೆಸಿ ಅವನಿಗೂ ಶಾಂತಿದೂತನ ಫ್ಯಾನ್ಸಿ ಡ್ರೆಸ್ ತೊಡಿಸಬಲ್ಲ ಪ್ರಸಾಧನ ಕಲೆ ಆಡ್ರೆಗೆ ಒಲಿದಿದೆ. ಕೆ. ಎಸ್. ಭಗವಾನ್ ಕಮೋಡಾರೂಢರಾಗಿ ಮಾಡಿದ ಸಂಶೋಧನೆಯನ್ನು ಮೀರಿಸುವಂತೆ ವಾಲ್ಮೀಕಿ ರಾಮಾಯಣದಲ್ಲಿರದ ಸಾಲುಗಳನ್ನು ಇದೆಯೆಂದು ಬರೆದು ಸೀತೆ ರಾಮನ ಕುರಿತಾಗಿ ಎಲ್ಲೂ ಆಡದ ಮಾತನ್ನು ಅವಳ ಬಾಯಲ್ಲಿ ತುರುಕಿ, ರಾಮನನ್ನು ಅವಹೇಳನ ಮಾಡಿದ ಕುಖ್ಯಾತಿ ಇದೇ ಆಡ್ರೆಯದು.

ಆಡ್ರೆಯೇ ಭಗವಾನರಿಂದ ಪ್ರಭಾವಿತಳಾದಳೋ, ಭಗವಾನರೇ ಆಕೆಯಿಂದ ಸ್ಫೂರ್ತಿ ಪಡೆದರೋ ಹೇಳಲಿಕ್ಕಾಗದಷ್ಟು ಗಲೀಜಾಗಿದೆ ಅವಳ ರಾಮಾಯಣದ ವ್ಯಾಖ್ಯೆ. ಅವಳು ಪಾಠ ಹೇಳುವ ರಟ್ಗರ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಭಗವಾನನೂ ಕಾಪಾಡಲಾರ. ವಿಶ್ವಾದ್ಯಂತ ಕಮ್ಯುನಿಸ್ಟ್ ಸರ್ಕಾರಗಳನ್ನು ಉರುಳಿಸುವುದಕ್ಕೆ ಸದಾ ಸನ್ನದ್ಧವಾಗಿರುವ ಅಮೆರಿಕ ಅದಕ್ಕಾಗಿ ಜನಸಾಮಾನ್ಯರಿಗೆ ಎಂದೂ ಅರ್ಥವಾಗದ, ವಿಶ್ವಾದ್ಯಂತ ವಿಧ್ವಂಸಕಕಾರಿ ಕೃತ್ಯಗಳನ್ನು
ಗೋಪ್ಯವಾಗಿ ನಿಯೋಜಿಸುವ ಸಿ ಐ ಎ ಎಂಬ ಸಂಸ್ಥೆಯನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತದೆ. ಅದೇ ಅಮೆರಿಕದ ನೆಲದಲ್ಲಿ ಎಡಪಂಥೀಯರೆಂಬ ಈ ಸಾಮಾಜಿಕ ತ್ಯಾಜ್ಯಗಳ ಸಮಾವೇಶವನ್ನು ಅಲ್ಲಿಯ ೪೧ ವಿಶ್ವವಿದ್ಯಾಲಯಗಳು ಬೆಂಬಲಿಸುತ್ತಿರುವುದು ವಿಪರ್ಯಾಸ.

ಸಾರ್ವಜನಿಕವಾಗಿ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಮೈಪರಚಿಕೊಳ್ಳುವ ಈ ಎಡಬಿಡಂಗಿಗಳು ಅಮೆರಿಕದಂತಹ ಬಂಡವಾಳಶಾಹಿ ವ್ಯವಸ್ಥೆಯ ನೆರಳಲ್ಲೇ ಹಿಂದೂಗಳ ವಿರುದ್ಧ ಪಿತೂರಿ ಹೂಡುವ ಈ ಸಮಾವೇಶವನ್ನು ನಡೆಸುತ್ತಿರುವುದೂ ವಿಪರ್ಯಾಸದಂತೇ ಕಂಡುಬಂದರೂ ಸ್ವಾರ್ಥದ ವಿಚಾರದಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ಸಮಾವೇಶದ ಆಯೋಜಕರಿಗೂ, ಅಮೆರಿಕಾಗೂ ಭೀಕರ ಪೈಪೋಟಿಯೇ ಇದೆ. ಆದರೆ ಭಾರತದ ಪ್ರಗತಿ ಕುರಿತ ಅಸೈರಣೆ ಮತ್ತು ಮೋದಿಯ ಜನಪ್ರಿಯತೆ ಬಗ್ಗೆ ಒಡಲೊಳಗಿರುವ ನಂದದ ಬೆಂಕಿ ಇವೆರಡೂ ದುಷ್ಟ ಶಕ್ತಿಗಳನ್ನೂ ಸೀಮಿತವಾಗಿ ಒಗ್ಗೂಡಿಸಿದೆ.

ಆ ಮಟ್ಟಿಗೆ ಇಬ್ಬರದೂ ಆತ್ಮಘಾತುಕತೆಯೇ. ಆದರೆ ಆ ಗುಣ ಇಬ್ಬರಲ್ಲೂ ಮನೆಮಾಡಿದೆ. ಇಲ್ಲಿ ಗಮನಿಸಬೇಕಾದ್ದು ಭಾರತ ವಿರೋಧಿ ವಿಭಜಕ ಶಕ್ತಿಗಳ ವ್ಯಾಪ್ತಿ. ಜಗತ್ತಿನ ಯಾವುದೆಲ್ಲ ಬಿಲಗಳಲ್ಲಿ ಕ್ಷುದ್ರಶಕ್ತಿಗಳು ಬಿಳಲುಬಿಟ್ಟಿವೆ ಎಂಬುದು ಗಾಬರಿ ಹುಟ್ಟಿಸುತ್ತದೆ. ಹಿಂದೂ ವಿರೋಧಿ ಧೋರಣೆಗೆ ತತ್ವದ ನಕಲಿ ದರಪಟ್ಟಿ ಲಗತ್ತಿಸಿ ಅದನ್ನೇ ಬಂಡವಾಳ ಮಾಡಿಕೊಂಡು, ಅದಕ್ಕೆ ಪಿತ್ರಾರ್ಜಿತ ಪತ್ರಿಕೆಯ ಮೌಲ್ಯ(!) ವನ್ನು ಎರವಲು ಪಡೆದು ವ್ಯರ್ಥಜೀವನ ನಡೆಸಿದ ಅರೆ-ಅಕ್ಷರಸ್ಥೆ ಗೌರಿ ಲಂಕೇಶ್ ಮರಣೋತ್ತರವಾಗಿ ರಷ್ಯಾ ದೇಶದ ಉನ್ನತ ಪ್ರಶಸ್ತಿಯನ್ನು ಪಡೆದುಕೊಂಡದ್ದು ನಿಮಗೆ ಮರೆತಿದ್ದರೆ ಮತ್ತೊಂದು ತಾಜಾ ನಿದರ್ಶನ ಇಲ್ಲಿದೆ.

ಕೋವಿಡ್‌ನಿಂದ ಹೈರಾಣಾಗಿರುತ್ತಿರುವ ಕೇರಳ ರಾಜ್ಯಕ್ಕೆ ಕೋವಿಡ್‌ನ್ನು ಸಮರ್ಥವಾಗಿ ಎದುರಿಸಿತೆಂದು ಹಾಡಿ ಹೊಗಳುವ ರಾಯ್ಟರ್ಸ್ ಸುದ್ದಿ ಸಂಸ್ಥೆಯ ಇತ್ತೀಚಿನ ಲೇಖನವನ್ನು ಪ್ರಾಯೋಜಿಸಿದ್ದು ಚೀನಾ ಸರ್ಕಾರಕ್ಕೆ ಹತ್ತಿರವಾದ ಹುವೇ (Huawei) ಕಂಪನಿ. ಇರಲಿ, ಆನ್ ಲೈನ್ ಸಮಾವೇಶದ ಮಧ್ಯಾರಾಧನೆ ಸೆಪ್ಟೆಂಬರ್ 11 ರಂದು. ಒಸಾಮಾ ಬಿನ್ ಲಾಡೆನ್ ಅಮೆರಿಕ ಮೇಲೆ ನಡೆಸಿದ ದಾಳಿಯ ಇಪ್ಪತ್ತನೇ ವಾರ್ಷಿಕೋತ್ಸವ ದಿನದಂದು. ಸಮಾವೇಶದ ಆಯೋಜಕ ರನ್ನು ಬೆಚ್ಚಿ ಬೀಳಿಸುವಂತೆ ವಿರೋಧ ವ್ಯಕ್ತವಾಗುತ್ತಿದೆ. ಹಿಂದೂ ಅಮೆರಿಕನ್ ಪ್ರತಿಷ್ಠಾನ ಸಮಾವೇಶಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಿದೆ.

ಹಿಂದೂಗಳನ್ನು ರಾಕ್ಷಸರಂತೆ ಬಿಂಬಿಸಲು ಪಣತೊಟ್ಟಿರುವ ಈ ವ್ಯರ್ಥಜೀವಿಗಳ ಧೂರ್ತತೆಯನ್ನು ಅನಾವರಣ ಗೊಳಿಸುತ್ತಿದೆ. ಅನಿವಾಸಿ ಭಾರತೀಯರಲ್ಲಿ ಪ್ರಮುಖರಾದ ರಾಜೀವ್ ಮಲ್ಹೋತ್ರ, ಬ್ರಿಟನ್ ಮೂಲದ ಮೇರು ವ್ಯಕ್ತಿತ್ವದ ಪಂಡಿತ್ ಸತೀಶ್ ಶರ್ಮಾ ಮುಂತಾದವರು ಹಗಲು ರಾತ್ರಿಯೆನ್ನದೆ ಭಾರತದ ವಿರುದ್ಧ ತುಕುಡೆ ಗ್ಯಾಂಗ್ ಹೆಣೆದ ಹುನ್ನಾರದ ವಿರುದ್ಧ ಕ್ಲಬ್ ಹೌಸ್‌ನಲ್ಲಿ ದಿನನಿತ್ಯ ಗಂಟೆಗಟ್ಟಲೆ ಚರ್ಚೆ ನಡೆಸುತ್ತಿದ್ದಾರೆ. ಈ ಚರ್ಚೆಗಳು ಕೆಲವೊಮ್ಮೆ ಆರೆಂಟು ಗಂಟೆಗಳಷ್ಟು ಸುದೀರ್ಘವಾಗಿ ನಡೆಯುವುದೂ ಉಂಟು.

ದೇಶದ ಬಗ್ಗೆ ಕಳಕಳಿ ಹೊತ್ತಿರುವ ಅನಿವಾಸಿ ಭಾರತೀಯರ ಸಮೂಹವೇ ತುಕುಡೆ ಗ್ಯಾಂಗ್ ವಿರುದ್ಧ ಸೆಟೆದು ನಿಂತಿದೆ. ಅಮೆರಿಕದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ವೆಂದರೆ ಹಿಂದೂಗಳನ್ನು ಅವಹೇಳನ ಮಾಡುವ ಸ್ವಾತಂತ್ರ್ಯ. ಅದನ್ನು ಹೇಳುವವರಿಲ್ಲ, ಕೇಳುವವರಿಲ್ಲ. ಆ ಕಾರಣಕ್ಕಾಗಿ, ಸಮಾವೇಶವನ್ನು ತಡೆಯ ಲಿಕ್ಕಾಗದಿದ್ದರೂ ಅದರ ಪರವಾಗಿ ನಿಂತ ವಿಶ್ವವಿದ್ಯಾಲಯಗಳು ಬೆಂಬಲ ವಾಪಸ್ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ. ಅಮೆರಿಕ ದೇಶದಲ್ಲಿ ಅತ್ಯುತ್ತಮ ಸ್ಥಾನಮಾನ ಹೊಂದಿದ ಅಲ್ಪಸಂಖ್ಯಾತ ಜನಾಂಗದಲ್ಲಿ ಭಾರತೀಯ ಹಿಂದೂಗಳೇ ಪ್ರಮುಖರು. ವರ್ಣೀಯ ಜನರನ್ನು ತಾರತಮ್ಯದಿಂದ ನೋಡುವ ಪ್ರವೃತ್ತಿ ಅಲ್ಲಿಯ ಬಿಳಿಯರಿಂದ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ.

ಇಂತಹ ಸನ್ನಿವೇಶದಲ್ಲಿ, ಹಿಂದೂಗಳ ಮೇಲೆ ಆಕ್ರಮಣವನ್ನು ಪ್ರಚೋದಿಸುವಂತಹ ಘೋಷವಾಕ್ಯ ಹೊತ್ತ ಸಮಾವೇಶ ಅದನ್ನು ಉತ್ತೇಜಿಸುತ್ತದೆ ಎಂಬುದು ಭಾರತೀಯ ಹಿಂದೂಗಳು ಮಂಡಿಸಿರುವ ವಾದ. ಅಮೆರಿಕದ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಭಾರತೀಯರ ಕೊಡುಗೆ ಮಹತ್ವದ್ದಾಗಿದೆ. ತಮ್ಮಿಂದ
ಶ್ರೇಯಸ್ಸನ್ನು ಕಂಡು ಈಗ ಸಮಾವೇಶದ ನೆಪದಲ್ಲಿ ತಮ್ಮ ವಿರುದ್ಧ ನಡೆಸಲಾಗುತ್ತಿರುವ ವಿಷಪೂರಿತ ಸಮಾವೇಶಕ್ಕೆ ವಿಶ್ವವಿದ್ಯಾಲಯಗಳು ಬೆಂಬಲ ನೀಡುತ್ತಿರುವುದರ ಔಚಿತ್ಯವನ್ನು ಪ್ರಶ್ನಿಸಲಾಗುತ್ತಿದೆ. ಅದನ್ನು ಮನಗಂಡ ಒಂದು ನಾಲ್ಕು ವಿಶ್ವವಿದ್ಯಾಲಯಗಳು ಸಮಾವೇಶಕ್ಕೆ ತಮ್ಮ ಬೆಂಬಲವಿಲ್ಲವೆಂದು ಹೇಳಿಕೆ ಕೊಟ್ಟಿವೆ. ಅದರಲ್ಲಿ ಪ್ರತಿಷ್ಠಿತ ಸ್ಟಾನರ್ಡ್ ವಿಶ್ವವಿದ್ಯಾಲಯವೂ ಸೇರಿದೆ. ಸಮಾವೇಶದ ಆಯೋಜಕರ ಕುಟಿಲತೆಯನ್ನು ಬಯಲಿಗೆಳೆಯುವಂತೆ
ಅವರು ತಮ್ಮ ಪೂರ್ವಾನುಮತಿ ಇಲ್ಲದೆ ತಮ್ಮ ವಿಶ್ವವಿದ್ಯಾಲಯದ ಲಾಂಛನವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿವೆ.

ಬಸರಾರದೋ, ಹೆಸರಾರದೋ ಎನ್ನುವಂತೆ ಅಲ್ಲಿ ತಾಲಿಬಾನಿಗಳು ತಮ್ಮ ಮೃಗತ್ವವನ್ನು ಪ್ರದರ್ಶಿಸುತ್ತಿದ್ದಾರೆ, ಈ ಧೂರ್ತರಿಗೆ ಹಿಂದೂಗಳ ತಲೆಮೇಲೆ ಗೂಬೆ ಕೂಡಿಸುವ ರೋಗ. ಇವರ ದುರ್ನಡೆ ಹೆಚ್ಚಾದಷ್ಟೂ ಹಿಂದೂಗಳು ಒಗ್ಗಟ್ಟಾಗುತ್ತಾರೆ, ಒಗ್ಗಟ್ಟಾದರೆ ಮೋದಿಯನ್ನು ಸೋಲಿಸಲು ಮುಂದಿನ ಚುನಾವಣೆಯಲ್ಲೂ ಸಾಧ್ಯವಿಲ್ಲ ಅನ್ನುವ ಸರಳ ಕಾರಣಕ್ಕಾದರೂ ಇಂತಹ ಹಾಸ್ಯಾಸ್ಪದ ಸಮಾವೇಶಕ್ಕೆ ಕೈಹಾಕಬಾರದಿತ್ತು. ಮತ್ತಿನಲ್ಲಿರುವವರನ್ನು ಕೈ ಹಿಡಿದು ಎತ್ತಬಾರದು ಎಂದು ಮೊದಲೇ ಹೇಳಿದೆ.

ಹಿಂದೂ ಭಯೋತ್ಪಾದನೆ ಸೋನಿಯಾ ಅಕ್ಕಳ ಕಪೋಲಕಲ್ಪಿತ ಕತೆ ಎಂದು ಸಾಬೀತಾದ ನಂತರವೂ ಇಂತಹ ಕುಚೋದ್ಯಗಳು ನಡೆಯುತ್ತಿರುತ್ತವೆ. ಅಂದ ಹಾಗೆ, ಆಫ್ಘಾನಿಸ್ತಾನದಲ್ಲಿ ಅಮೆರಿಕ ಮೂಗು ತೂರಿಸಿ ಎರಡು ದಶಕಗಳಾದವು. ಭಯೋತ್ಪಾದನೆಯ ಮೇಲೆ ಜಾಗತಿಕ ಯುದ್ಧ ಸಾರಿದ ಅಂದಿನ ಅಧ್ಯಕ್ಷನ ಘಂಟಾಘೋಷ ಮೊಳಗಿದ ನಂತರ ಇಸ್ಲಾಂ ಟೆರರ್ ಆಫ್ರಿಕಾ ಮತ್ತು ಏಷ್ಯಾ ಖಂಡಗಳ ದೇಶಗಳಿಗೆ ವಿಸ್ತರಿಸಿದೆ. ಲ್ಯಾಟಿನ್ ಅಮೆರಿಕದಲ್ಲಿ ಅದರ ಸ್ಲೀಪರ್ ಸೆಲ್‌ಗಳು ಹಬ್ಬಿವೆ.

ಕಳೆದ ಸುಮಾರು ಇನ್ನೂರೂ-ದಿನಗಳಲ್ಲಿ ನೈಜೀರಿಯಾ ದೇಶದ ಇಸ್ಲಾಮಿಕ್ ಜಿಹಾದಿಗಳು ಮತ್ತು ರಕ್ಷಣಾ ವ್ಯವಸ್ಥೆಯೊಳಗಿನ ಅವರ ಸಹಚರರಿಂದ ಕೊಚ್ಚಿಸಿ ಕೊಂಡು ಜೀವ ಕಳೆದುಕೊಂಡ ಅಲ್ಲಿನ ಕಿರಿಸ್ತಾನರ ಸಂಖ್ಯೆ ಬರೋಬ್ಬರಿ 3642. ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದದ್ದು. ಶಾಲಾ ಅಧ್ಯಾಪಕನೊಬ್ಬ ಎಂಟು ವರ್ಷದ ಕ್ರಿಶ್ಚಿಯನ್ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ನಡೆಸಿದ. ಪೊಲೀಸರು ಅವನ ಪರ ವಹಿಸುತ್ತಿದ್ದಾರೆ. ಅದೇ ಪಾಪಿಸ್ತಾನದಲ್ಲಿ, ಯೂನಿಸೆಫ್ ನಡೆಸುವ ಶಾಲೆಯಲ್ಲಿ ಮೂರು ವರ್ಷದ ಪುಟ್ಟ ಪಾಪುವಿನ ಮೇಲೆ ಅದೇ ಶಾಲೆಯ ಪ್ರಾಂಶುಪಾಲಕಿಯ ಗಂಡ ಅತ್ಯಾಚಾರವೆಸಗಿದ.

ಅತ್ಯಾಚಾರಿಯ ವಿರುದ್ಧ ದೂರನ್ನು ವಾಪಸ್ ಪಡೆಯದಿದ್ದರೆ, ಇಸ್ಲಾಂ ನಿಂದೆ ಮಾಡಿದರೆಂದು ಕೇಸ್ ಜಡಿಯುವುದಾಗಿ ಮಗುವಿನ ಪೋಷಕರನ್ನು ಬೆದರಿಸ ಲಾಯಿತು. ಇವಾವುದೂ, ಮಾರ್ಕ್ಸ್-ಲೆನಿನ್ನರ ಸ್ಥಳೀಯ ಭಕ್ತರ ಕಣ್ಣಿಗೆ ಬೀಳುವುದಿಲ್ಲವೋ? ಅವರದ್ದೇ ಪತ್ರಿಕಾ ಸಾಮ್ರಾಜ್ಯ. ಅವರದ್ದೇ ದರಬಾರು. ಅಮೆರಿಕ ದಲ್ಲೂ, ಭಾರತದಲ್ಲೂ. ಹಿಂದೂಗಳ ವಿರುದ್ಧ ಯೋಜಿಸಿರುವ ಸಮಾವೇಶವನ್ನು ಪ್ರತಿಭಟಿಸುತ್ತಿರುವವರ ಪರವಾಗಿ ಅದೆಷ್ಟು ವರದಿಗಳು ಬಂದವೋ? ಅದರ ಮಾತು ಬೇಡ ಬಿಡಿ. ಕೋವಿಡ್‌ನಿಂದ ಸಂತ್ರಸ್ತರಾಗಿರುವವರಲ್ಲಿ ಬೆಂಗಳೂರಿನ ಪತ್ರಕರ್ತರೂ ಸೇರಿದ್ದಾರೆ. ಅದಾವ ಎಡಪಂಥೀಯ ಮಾಧ್ಯಮ ಸಂಸ್ಥೆಯೂ ಅವರ ಹೊಟ್ಟೆಯನ್ನು ತಣ್ಣಗೆ ಮಾಡಲಿಲ್ಲ. ಬೆಂಗಳೂರು ಪ್ರೆಸ್ ಕ್ಲಬ್ಬಿನ ಪದಾಧಿಕಾರಿಗಳು ಇಸ್ಕಾನಿನ ಮೊರೆ ಹೋಗಿ ನಿರುದ್ಯೋಗಿಗಳಾದ ಅಥವಾ ವೇತನ ವಂಚಿತರಾದ ಪತ್ರಕರ್ತರಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದಾರೆ.

ಅದಕ್ಕೆ ಕೆಲವು ಹೊಟ್ಟೆ ತುಂಬಿದ (ಎಡಪಂಥೀಯ) ಪತ್ರಕರ್ತರ ಆಕ್ಷೇಪಣೆ ವ್ಯಕ್ತವಾಗಿದೆ. ಇದೇನು, ದಾರಿದ್ರ್ಯಗೊಂಡ ಪತ್ರಿಕೋದ್ಯಮವೇ ಅಥವಾ ಪತ್ರಕರ್ತರ ದಾರಿದ್ರ್ಯವೇ ಎಂದು ಒಬ್ಬ ಪ್ರಭೃತಿ ಪ್ರಶ್ನೆ ಎತ್ತಿದ್ದಾರೆ. ಬಲು ಹಿಂದೆ, ಇದೇ ಕ್ಲಬ್ಬಿನಲ್ಲಿ ಕಳಂಕಿತ ಹೆಂಡದ ದೊರೆ ವಿಜಯ್ ಮಲ್ಯಾ ಬಾರೊಂದನ್ನು ಕೊಡುಗೆಯಾಗಿ
ನೀಡಿದಾಗ ಅದರ ವಿರುದ್ಧವೂ ಈ ವ್ಯಕ್ತಿ ದನಿ ಎತ್ತಿದ ದಾಖಲೆ ನನ್ನ ಬಳಿಯಂತೂ ಇಲ್ಲ. (ವಿ.ಸೂ. ಲೇಖನದ ಆರಂಭದಲ್ಲಿ ಪ್ರಸ್ತಾಪಿಸಲಾದ ವರದಿಗಾರ ಬೇರೆ!)