Wednesday, 11th December 2024

ಉತ್ತರವೇ ಸಿಗದ ಪರೀಕ್ಷೆಯ ಸಮಸ್ಯೆ

ಅಭಿಮತ

ಗೌತಮ ಗೌಡಪ್ಪ ಗೌಡ್ರು

ಹಳ್ಳಿಯನ್ನು ಬಿಟ್ಟು ದೂರದ ಊರಿಗೆ ಸಾಲ ಮಾಡಿ ಬಂದು, ಸರಕಾರಿ ನೌಕರಿ ಪಡೆಯಬೇಕೆಂದು ಆಸೆ ಹೊತ್ತ ಅದೆಷ್ಟೋ ಬಡ ಯುವ ಮನಸ್ಸುಗಳು ಇಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಹೀಗೆ ಕನಸು ಹೊತ್ತ ಲಕ್ಷಾಂತರ ತರುಣರ ಭವಿಷ್ಯ ಇಂದು ಪ್ರಶ್ನಾರ್ಥಕ ಚಿಹ್ನೆಯಾಗಿಬಿಟ್ಟಿದೆ. ಎಷ್ಟೋ ಜನಕ್ಕೆ ಒಂದು ದಿನ ಊಟಕ್ಕೂ, ರೂಮಿನ ಬಾಡಿಗೆ ಕಟ್ಟಲು ಆಗದೇ ಒದ್ದಾಡುತ್ತಿದ್ದಾರೆ.

ಇವರು ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆದು ಪಾಸಾಗಿ ನೌಕರಿ ಗಿಟ್ಟಿಸಿಕೊಂಡು ಬದುಕನ್ನು ಹಸನಾಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ಆ ನೌಕರಿಗಳು ಮಾತ್ರ ದುಡ್ಡಿದ್ದವರ ಮನೆ ಬಾಗಿಲಿಗೆ ಧಾವಿಸುತ್ತಿವೆ. ಅದೆಷ್ಟೋ ಬಡ ತಂದೆ-ತಾಯಿಗಳು ಮಕ್ಕಳ ಓದಿಗಾಗಿ ಸಾಲ ಮಾಡಿ ಮಗ ದುಡಿಯುವ ದಿನಗಳಿಗಾಗಿ ಕಾಯುತ್ತ ಕನಸು ಕಾಣುತ್ತಿದ್ದಾರೆ. ನಮ್ಮ ರಾಜಕೀಯ ನಾಯಕರು, ಅಧಿಕಾರಿಗಳು, ಸಂಪೂರ್ಣ ನಮ್ಮಆಡಳಿತ ವ್ಯವಸ್ಥೆಯೇ ಇಂಥ ಕನಸುಗಳ ಕೊಲೆ ಮಾಡುತ್ತಿದೆ.

ಕಳೆದ ಎರಡು ವರ್ಷಗಳ ಹಿಂದೆ ಪಿಎಸ್‌ಐ ನೇಮಕ ಪರೀಕ್ಷೆ ನಡೆದಿತ್ತು. ಆ ಒಂದು ಅಕ್ರಮ ಇಡೀ ಯುವ ಸಮೂಹವನ್ನೇ ತಲ್ಲಣ ಗೊಳಿಸಿತ್ತು. ಅದಕ್ಕಿಗ ಎರಡು ವರ್ಷ ಗತಿಸಿದೆ. ಈಗ ಪುನಃ ಪರೀಕ್ಷೆ ಮಾಡಲು ತಯಾರಿ ನೆಡೆಸಿzರೆ . ಅದರ ನಡುವೆಯೇ ಇತ್ತೀಚೆಗೆ ನಡೆದ ಕೆಇಎ ಪರೀಕ್ಷೆಯಲ್ಲಿ ಕೂಡ ಅಕ್ರಮಗಳು ಮತ್ತೆ ಬೆಳಕಿಗೆ ಬಂದಿವೆ. ಇಂಥ ಅಕ್ರಮಗಳನ್ನು ಯಾವ ಸರಕಾರಗಳು ಬಂದರೂ ತಡೆಯಲಾಗುತ್ತಿಲ್ಲ. ಏಕೆ ಎಂಬುದೇ ಪ್ರಶ್ನಾರ್ಥಕ ಚಿಹ್ನೆಯಾಗಿ ಬಿಟ್ಟಿದೆ. ದುಡ್ಡು ಇದ್ದವರು ಮಾತ್ರ ನೌಕರಿ ಕೊಂಡುಕೊಳ್ಳುತ್ತ ಹೋದರೆ, ಪ್ರಾಮಾಣಿಕತೆವಾಗಿ ಓದುತ್ತಿರುವ ಬಡ ಯುವ ಮನಸ್ಸು ಗಳು ಎಲ್ಲಿಗೆ ಹೋಗಬೇಕು? ಅದೆಷ್ಟು ಸರಕಾರ ಗಳು ಬಂದರೂ ಹೋದರೂ, ಯಾರೂ ಏನೂ ಮಾಡಲಾಗದಂತ ಕೆಟ್ಟ ಪರಿಸ್ಥಿತಿ ನಮ್ಮಲ್ಲಿದೆ.

ಎಲ್ಲ ಸರಕಾರಗಳು ಬಂದಾಗಲೂ ಈ ಭ್ರಷ್ಟಾಚಾರ ಎಂಬುದು ಉತ್ತುಂಗದಲ್ಲಿರುತ್ತದೆ. ಕಳೆದ ಸರಕಾರ ಜನರಿಗೆ ಬೇಡವಾಗಿದ್ದಕ್ಕೆ ಜನರು ಬದಲಾಯಿಸಿದರು. ಈಗ ಹೊಸ ಸರಕಾರ ಬಂದಿದೆ. ಅವರು ಹಳೆ ಸರಕಾರದ ದಾರಿಯನ್ನು ತುಳಿಯುತ್ತಿದ್ದಾರೆ ಎಂಬ ಅನುಮಾನ ಪ್ರಾರಂಭವಾಗಿದೆ. ಈ ಸರಕಾರಿ ನೌಕರಿಗಾಗಿ
ನಡೆಯುವ ನೇಮಕ ಪರೀಕ್ಷೆಗಳು ಅಕ್ರಮದಿಂದ ತುಂಬಿ ತುಳುಕು ತ್ತಿವೆ. ಎಲ್ಲಿ ಹೋದರೂ, ಸ್ವಜನ ಪಕ್ಷಪಾತ, ಹಣ, ತೋಳ್ಬಲ, ರಾಜಕೀಯ, ಜಾತಿ, ಧರ್ಮವೇ ನಡೆಯುತ್ತಿದೆ. ಓದಿನ ಪರಿಶ್ರಮಕ್ಕೆ ಬೆಲೆ ಎಲ್ಲಿಯೂ ಸಿಗುತ್ತಿಲ್ಲ ಎಂಬಂತಾಗಿದೆ.

ಎಲ್ಲ ರಾಜಕೀಯ ಪಕ್ಷಗಳಿಗೂ ಗೊತ್ತಿದೆ; ಪ್ರತಿಯೊಂದು ನೇಮಕ ದಲ್ಲೂ ಅಕ್ರಮ ನಡೆಯುತ್ತಿದೆ ಎಂಬುದು. ಆದರೆ ಅದನ್ನು ತಡೆಯುವ ಪ್ರಯತ್ನಗಳನ್ನು ಯಾರೂ ಮಾಡುತ್ತಿಲ್ಲ. ಪ್ರತಿಯೊಂದು ಪರೀಕ್ಷೆಯಲ್ಲಿ ಭ್ರಷ್ಟಾಚಾರ ಉಹೆಗೂ ಮೀರಿ ನಡೆಯುತ್ತಿದೆ. ಇದನ್ನು ವಿದ್ಯಾರ್ಥಿಗಳು ಎಷ್ಟು ದಿನ ಅಂತ ಪ್ರತಿಭಟಿಸಿಯಾರು? ಅವರಿಗೂ ಒಂದು ಬದುಕಿನ ಮಿತಿ ಅನ್ನುವುದಿರುತ್ತದೆ, ಬರಿ ಕನಸುಗಳನ್ನೇ ಕಾಣುತ್ತ ಅದಕ್ಕೆ ನೀರು ಹಾಕುತ್ತ ಕನಸಿನ ಬದುಕನ್ನು ಸಾಗಿಸಲು ಎಷ್ಟು ದಿನ ಸಾಧ್ಯ ವಾದಿತು? ಎಲ್ಲ ಕಷ್ಟಪಟ್ಟು ಓದಿ ಇನ್ನೇನು ನೌಕರಿ ಸಿಗುತ್ತದೆ ಎನ್ನುವ ಹೊತ್ತಿಗೆ ನೌಕರಿ ಸಿಗದೇ ಹಗರಣಗಳಾದರೆ ವಿದ್ಯಾರ್ಥಿಗಳ ಬದುಕು ವಿನಾಶದ ಹಾದಿ ಹಿಡಿದುಬಿಡುತ್ತದೆ. ನಾವು ಯಾರೂ ಈ ನ್ಯಾಯಾಲಯಗಳನ್ನು ಪ್ರಶ್ನಿಸಬಾರದು. ಏಕೆಂದರೆ ನ್ಯಾಯ ದೇವತೆ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ಸರ್ವರಿಗೂ
ಸಮಾನ ನ್ಯಾಯ ನೀಡುತ್ತಾಳೆ ಎಂದು ನಮ್ಮೆಲ್ಲರ ನಂಬಿಕೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಮೊಕದ್ದಮೆಗಳ ಒತ್ತಡ ಇತ್ಯಾದಿ ಮಿತಿ ಗಳಿಂದಾಗಿ ಇಂಥ ಪ್ರಕರಣ ಗಳ ತೀರ್ಪು ಸಹ ವಿಳಂಬವಾಗುತ್ತದೆ.

ಹೀಗಾಗಿ ಯುವಕರ ಭವಿಷ್ಯ ಮುರುಟಲು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಲ್ಲವೂ ಪರೋಕ್ಷ ಕಾರಣವಾಗುತ್ತಿವೆ. ಸದೃಢ ಸಮಾಜ ನಿರ್ಮಾಣವಾಗ ಬೇಕಾದರೆ ಇಂತಹ ಅಕ್ರಮ ಗಳನ್ನು ನಾವಿಂದು ತಡೆಯದಿದ್ದರೆ ಮುಂದೆ ಇದು ಹೆಮ್ಮರವಾಗಿ, ಯಾರು ಅಲುಗಾಡಿಸಲಾಗದಂತ ಕೆಟ್ಟ ವ್ಯವಸ್ಥೆಯ ಸಮಾಜ ನಿರ್ಮಾಣವಾಗುತ್ತದೆ. ಕೇಂದ್ರೀಯ ಲೋಕಸೇವಾ ಆಯೋಗ ನಡೆಸುವಂತಹ ಈ ಐಎಎಸ್, ಐಪಿಎಸ್ ಪರೀಕ್ಷೆಗಳಂತೆ ಪ್ರಾಮಾಣಿಕವಾಗಿ, ಕರ್ನಾಟಕದಲ್ಲಿ ಏಕೆ ಪರೀಕ್ಷೆಗಳಾಗುತ್ತಿಲ್ಲ? ನಿಗದಿತ ಸಮಯಕ್ಕೆ ನಿಗದಿತ ಪರೀಕ್ಷೆಗಳನ್ನು ನಮ್ಮ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಏಕೆ ಮಾಡಲಾಗುತ್ತಿಲ್ಲ? ಯಾವುದೇ ಪರೀಕ್ಷೆಗಳನ್ನು ಸರಿಯಾಗಿ ನಡೆಸುತ್ತಿಲ್ಲ ಏಕೆ? ಯುಪಿಎಸ್ಸಿ ಒಂದು ವರ್ಷದೊಳಗೆ ಸಂಪೂರ್ಣ ನೇಮಕ ಮುಗಿಸಿಬಿಡುತ್ತದೆ.

ಆದರೆ ಕರ್ನಾಟಕದಲ್ಲಿ ಒಂದು ನೇಮಕ ಮುಗಿಯಬೇಕಾದರೆ ಎರಡು ಮೂರು ವರ್ಷಗಳೇ ಬೇಕಾಗುವುದು ಏಕೆ? ಇಂಥ ಆಯೋಗಗಳ ಕೆಲಸವೇ ಪ್ರಾಮಾಣಿಕ ನೇಮಕಗಳನ್ನು ನಡೆಸುವುದು, ಹಾಗಿದ್ದರೂ ಒಂದೇ ಒಂದು ಪರೀಕ್ಷೆಯನ್ನೂ ಪ್ರಾಮಾಣಿಕವಾಗಿ ನಡೆಸುತ್ತಿಲ್ಲವಲ .ಇದಕ್ಕೆಲ್ಲ ಕಾರಣ ರಾಜಕೀಯ ಎಂಬುದಾದರೆ, ರಾಜಕೀಯ ನಾಯಕರುಗಳಿಗೆ ಪಾಠವನ್ನು ಕಲಿಸುವ ಸಮಯ ಕೇವಲ ಚುನಾವಣೆ ಮಾತ್ರ. ಈ ಚುನಾವಣೆಗಳಲ್ಲಿ ನಾವು ಯಾರನ್ನೊ ಬದಲಾಯಿಸಿ ಬೇರೆ ಯಾರನ್ನೋ ಆಡಳಿತಕ್ಕೆ ತಂದರೆ ಅವರು ಕೂಡ ಅದೇ ದಾರಿ ಹಿಡಿದರೆ ಇನ್ನು ಯಾರನ್ನು ಆಯ್ಕೆ ಮಾಡೋಣ ಎಂಬ ಪ್ರಶ್ನೆ ತರುಣರಲ್ಲಿ ಕಾಡುತ್ತಿದೆ. ಒಂದೇ ಒಂದು ಪರೀಕ್ಷೆಯನ್ನೂ ನೆಟ್ಟಗೆ ನಡೆಸಲಾಗದಂಥ ಅಸಹಾಯಕ ಪರಿಸ್ಥಿತಿ ನಮ್ಮಲ್ಲಿದೆ. ನಮ್ಮ ವ್ಯವಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವ ಯುವ ಮನಸ್ಸುಗಳನ್ನು ನರಕಕ್ಕೆ ತಳ್ಳುತ್ತಿದೆ.