Sunday, 8th September 2024

ಕುಮಾರಸ್ವಾಮಿ ಮುಖದಲ್ಲಿ ಮಾಯಾ ಕಳೆ

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಇಂತಹ ಟೈಮಿನಲ್ಲಿ ಸಿ.ಎಂ.ಇಬ್ರಾಹಿಂ ದಾಳ ಉರುಳಿಸಿದರೆ ತನ್ವೀರ್ ಸೇಠ್ ಜೆಡಿಎಸ್ ಪಾಳಯಕ್ಕೆ ಕಾಲಿಡಬಹುದು. ಹೀಗೆ ಜಮೀರ್
ಅಹ್ಮದ್, ತನ್ವೀರ್ ಸೇಠ್ ಅವರೆಲ್ಲ ಜೆಡಿಎಸ್ ಕಡೆ ಬಂದರೆ ಆ ಪಾರ್ಟಿಯಲ್ಲಿ ಗೆಲ್ಲುವ ಕ್ಯಾಂಡಿಡೇಟುಗಳು ಹೆಚ್ಚಾಗುತ್ತಾರೆ.

ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕರ್ನಾಟಕದ ಮಾಯಾವತಿ ಆಗಲಿದ್ದಾ ರೆಯೇ? ಇತ್ತೀಚೆಗೆ ಸಂಭವಿಸುತ್ತಿರುವ ಭೂಕಂಪ ಗಳಿಂದ ಹೊಯ್ದಾಡುತ್ತಿರುವ ಸಿದ್ದರಾಮಯ್ಯ ಅವರ ಶಿಬಿರದಲ್ಲಿ ಇಂಥದೊಂದು ಅನುಮಾನ ಶುರುವಾಗಿದೆ. ಮೊನ್ನೆ, ಮೊನ್ನೆಯವರೆಗೂ ಸ್ಥಿರವಾಗಿಯೇ ಇದ್ದ ಸಿದ್ದರಾಮಯ್ಯ ಅವರ ಶಿಬಿರದಲ್ಲೀಗ ಸಣ್ಣ-ಸಣ್ಣ ಗೊಂದಲಗಳು ಕಾಡುತ್ತಿವೆ.

ಇಂತಹ ಗೊಂದಲಗಳಲ್ಲಿ ಸ್ವತಃ ಸಿದ್ದರಾಮಯ್ಯ ಅವರ ನಿಲುವುಗಳ ಪಾತ್ರ ಇರುವುದು ಸುಳ್ಳೇನಲ್ಲ. ಆದರೆ ಅದಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಅವರ ಶಿಬಿರದಲ್ಲಿ ಗೊಂದಲ ಮೂಡಿಸುವ ಯತ್ನಕ್ಕೆ ಜೆಡಿಎಸ್ ಕೈ ಹಾಕಿದೆ. ಪರಿಣಾಮ? ಅವಕಾಶ ಸಿಕ್ಕಾಗಲೆಲ್ಲ ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ ಪರಸ್ಪರರ ಮೇಲೆ ಕೆಸರು ಎರಚಿಕೊಳ್ಳುತ್ತಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಯಂ ಬಲದ ಮೇಲೆ ಗೆದ್ದು ಅಧಿಕಾರ ಹಿಡಿಯಲು ಬಯಸಿರುವ ಸಿದ್ದರಾಮಯ್ಯ ಇದೇ ಕಾರಣಕ್ಕಾಗಿ ಜೆಡಿಎಸ್ ಪಾಳಯದಲ್ಲಿ ಹುಳಿ ಹಿಂಡಿದ್ದಾರೆ ಎಂಬುದು ಕುಮಾರಸ್ವಾಮಿ ಅವರ ಸಿಟ್ಟು.

ಗುಬ್ಬಿ ಶಾಸಕ ಶ್ರೀನಿವಾಸ್, ಅರಸೀಕೆರೆಯ ಶಿವಲಿಂಗೇಗೌಡ, ಕಡೂರಿನ. ವೈ.ಎಸ್.ವಿ.ದತ್ತಾ ಸೇರಿದಂತೆ ಜೆಡಿಎಸ್‌ನ ಹಲ ನಾಯಕ ರನ್ನು ಸಿದ್ದರಾಮಯ್ಯ ಅದಾಗಲೇ ತಮ್ಮ ವರ್ತುಲಕ್ಕೆ ಎಳೆದುಕೊಂಡಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಈ ಹಾಲಿ, ಮಾಜಿ ಶಾಸಕರ ವಲಸೆ ಶುರುವಾಗುತ್ತದೆ ಎಂಬುದು ಕುಮಾರಸ್ವಾಮಿಯವರ ಆಕ್ರೋಶ. ಇಂತಹ ಆಕ್ರೋಶವೇ ಸಿದ್ದರಾಮಯ್ಯ ಅವರ ಪಾಳಯಕ್ಕೆ ಕೈ ಹಾಕಿ ಸಿ.ಎಂ.ಇಬ್ರಾಹಿಂ ಅವರನ್ನು ಜೆಡಿಎಸ್ ಕಡೆ ಎಳೆದುಕೊಳ್ಳಲು ಅವರಿಗೆ ಪ್ರೇರೇಪಣೆ ನೀಡಿದ್ದು. ವಸ್ತುಸ್ಥಿತಿ ಎಂದರೆ ಕೈ ಪಾಳಯದ ಮೇಲೆ ಭ್ರಮನಿರಸನಗೊಂಡ ಸಿ.ಎಂ.ಇಬ್ರಾಹಿಂ ಜೆಡಿಎಸ್ ಕಡೆ ಮುಖ ಮಾಡಿದಾಗ ದೇವೇಗೌಡರೇನೂ ಉತ್ಸಾಹ ತೋರಿಸಿರಲಿಲ್ಲ.

ಆದರೆ ಸಿದ್ದರಾಮಯ್ಯ ಪಾಳಯದ ಬುಡಕ್ಕೆ ಗಡಪಾರೆ ಹಾಕಲು ತಹತಹಿಸುತ್ತಿದ್ದ ಕುಮಾರಸ್ವಾಮಿ ತಾವೇ ಮುಂದೆ ನುಗ್ಗಿ ಕೈ ತೋರಿಸು ತ್ತಿದ್ದ ಇಬ್ರಾಹಿಂ ಅವರನ್ನು ಸೆಳೆದುಕೊಂಡರು. ಸಿ.ಎಂ.ಇಬ್ರಾಹಿಂ ಜೆಡಿಎಸ್‌ಗೆ ಕಾಲಿಟ್ಟು ಅಧ್ಯಕ್ಷರಾದ ನಂತರ ಆ ಪಕ್ಷದ ಚಹರೆಪಟ್ಟಿ ಬದಲಾಗಿದೆ. ಅಪ್ಪ-ಮಕ್ಕಳ ಪಾರ್ಟಿ ಎಂಬ ಇಮೇಜು ಅಪ್ಪ-ಮಕ್ಕಳು-ಮೊಮ್ಮಕ್ಕಳ ಪಾರ್ಟಿ ಅಂತ ಪ್ರಮೋಷನ್ನು ಪಡೆದರೂ ಜನ ಅದರ ಕಡೆ ಕಣ್ಣು ತಿರುಗಿಸುವಂತೆ ಇಬ್ರಾಹಿಂ ಮಾಡಿದ್ದಾರೆ. ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದ ಇಬ್ರಾಹಿಂ ಅವರು ಗೌಡರ ರಾಜಕೀಯದ ಬಗ್ಗೆ ಹಾಸ್ಯ ಮಾಡುತ್ತಿದ್ದರು. ವಿಧಾನಸೌಧದ ಕಟ್ಟೆಯ ಮೇಲೆ ನಮ್ಮ ಹುಡುಗರು ಕುಳಿತು ಆಳುವುದನ್ನು ನೋಡುವುದೇ ನನ್ನ ಇಚ್ಛೆ ಅಂತ ದೇವೇಗೌಡರು ಹೇಳುತ್ತಿದ್ದರು.ಆದರೆ ಅವರು ದೇವೇಗೌಡರ ಮಕ್ಕಳೇ ಅನ್ನುವುದು ನಮಗೆ ಗೊತ್ತಿರಲಿಲ್ಲ ಅಂತ ಇಬ್ರಾಹಿಂ ಹೇಳುತ್ತಿದ್ದರೆ ಜನ ಗಡಚಿಕ್ಕುವಂತೆ ಚಪ್ಪಾಳೆ ಹೊಡೆಯುತ್ತಿದ್ದರು.

ಈಗ ಅದೇ ಇಬ್ರಾಹಿಂ ಜೆಡಿಎಸ್ ಪಾಳಯಕ್ಕೆ ಬಂದ ಮೇಲೆ ಈ ನೆಲಕ್ಕೆ ದೇವೇಗೌಡ್ರ ಬೀಜವನ್ನು (ಕುಮಾರಸ್ವಾಮಿ) ನಾಟಿ ಮಾಡು ತ್ತೇವೆ. ಅದು ಫಲ (ಸಿಎಂ) ಕೊಡುವಂತೆ ಮಾಡುತ್ತೇವೆ ಅನ್ನುತ್ತಿದ್ದಾರೆ. ಅವರ ಮಾತಿಗೆ ಈಗಲೂ ಜನ ಚಪ್ಪಾಳೆ ಹೊಡೆಯುತ್ತಿದ್ದಾರೆ. ಹೀಗೆ ರಾಜ್ಯದ ಜನರ ಗಮನ ಸೆಳೆದಿರುವ ಇಬ್ರಾಹಿಂ ಮುಂದಿನ ದಿನಗಳಲ್ಲಿ ಕೈ ಪಾಳಯದಲ್ಲಿರುವ ಜಮೀರ್ ಅಹ್ಮದ್ ಅವರಿಂದ ಹಿಡಿದು ತನ್ವೀರ್ ಸೇಠ್ ಅವರ ತನಕ ಹಲ ಮುಸ್ಲಿಮ್ ಲೀಡರುಗಳನ್ನು ಜೆಡಿಎಸ್ ಕಾಂಪೌಂಡ್ ಒಳಗೆ ಎಳ್ಕೊತೀವಿ ಅನ್ನುತ್ತಿದ್ದಾರೆ.

ಅಷ್ಟೇ ಅಲ್ಲ, ಈ ಸಂಬಂಧ ಮಾತುಕತೆಯನ್ನೂ ಆರಂಭಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಇವರೆಲ್ಲ ಜೆಡಿಎಸ್ ಕಡೆ ಬರುತ್ತಾರಾ ಅನ್ನುವ ವಿಷಯದಲ್ಲಿ ಅನುಮಾನ ಇರುವುದೇನೋ ನಿಜ. ಯಾಕೆಂದರೆ ಜಮೀರ್ ಅಹ್ಮದ್ ಅವರು ಕುಮಾರಸ್ವಾಮಿ ಅವರ ವಿರುದ್ಧ ಏನೇನು ಮಾತನಾಡಲು ಸಾಧ್ಯವೋ ಅದನ್ನೆಲ್ಲ ಮಾತನಾಡಿದ್ದಾರೆ. ಅದೇ ರೀತಿ ಕೈ ಪಾಳೆಯದಿಂದ ಹೊರಬರುವುದು ತನ್ವೀರ್ ಸೇಠ್ ಅವರಿಗೆ ಕಷ್ಟ. ಆದರೆ ಇಬ್ಬರಿಗೂ ಈಗ ಸಿದ್ದರಾಮಯ್ಯ ಅವರ ವಿಷಯದಲ್ಲಿ ಸಮಾಧಾನವಿಲ್ಲ.

ಹೀಗಾಗಿ ಈ ಪೈಕಿ ಜಮೀರ್ ಅಹ್ಮದ್ ದೋಸೆ ತಿರುವಿ ಹಾಕುವುದು ಅಸಂಭವ ಏನಲ್ಲ. ಕುಮಾರಸ್ವಾಮಿ ಅವರ ಜತೆ ಅದೇನೇ ಗುದ್ದಾಟಕ್ಕೆ ಬೀಳಲಿ. ಆದರೆ ಸನ್ನಿವೇಶ ಬಂದರೆ, ‘ಅರೇ ಒಂದೇ ತಾಯಿ ಮಕ್ಳು ಜಗಳ ಆಡೋದಿಲ್ವಾ? ಹಂಗೇ ನಾನು ಕುಮಾರಣ್ಣ ಜಗಳ ಆಡಿದೀವಿ. ಹಾಗಂತ ನಮ್ ತಾಯಿ(ಜೆಡಿಎಸ್)ಒಬ್ಳೇ ಅನ್ನೋದನ್ನ ಮರೀಲಿಕ್ಕಾಗ್ತದಾ?’ ಅಂತ ಅವರು ಹೇಳುವುದನ್ನು ಕೇಳುವ ಭಾಗ್ಯ ಜನರಿಗೆ ಬರಬಹುದು. ಅದೇ ರೀತಿ ಜಮೀರ್ ಅಹ್ಮದ್ ಬಾಯಿಂದ ಇಂಥ ಮಾತು ಹೊರಬಿದ್ದರೆ ಕುಮಾರಸ್ವಾಮಿ ಅವರ ಕಲೀಜಾ ಕರಗಿ, ‘ಎಷ್ಟೇ ಆದ್ರೂ ಜಮೀರ್ ನಮ್ಮ ಬ್ರದರ್ ಅಲ್ವಾ? ಏನೋ ವಿಷ ಘಳಿಗೆ. ನಡೀಬಾರದ್ದು ನಡೀತು’ ಅಂತ ಹೆಗಲ ಮೇಲೆ ಕೈ ಇಡುವ
ದಿನವೂ ಬರುತ್ತದೆ.

ಇನ್ನು ತನ್ವೀರ್ ಅಹ್ಮದ್ ಅವರ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಪೋರ್ಟಿವ್ ಆಗಿದ್ದಾರೆ. ಆದರೆ ಅವರ ತವರು ಜಿಲ್ಲೆ ಮೈಸೂರಿನವರೇ ಆದ ಸಿದ್ದರಾಮಯ್ಯ ನೆಗೆಟಿವ್ ಆಗಿದ್ದಾರೆ. ಇದೇ ಕಾರಣಕ್ಕಾಗಿ ಹಿಂದೆ ಮೇಯರ್ ಆಯ್ಕೆಯ ಸಂದರ್ಭದಲ್ಲಿ ತನ್ವೀರ್ ಸೇಠ್ ಅವರು ಸಿದ್ರಾಮಯ್ಯ ಅವರಿಗೆ ಡಿಚ್ಚಿ ಕೊಟ್ಟಿದ್ದರು. ಹೀಗೆ ಅವತ್ತು ತನ್ವೀರ್ ಸೇಠ್ ಕೊಟ್ಟ ಡಿಚ್ಚಿಗೆ ಬೆರಗಾದ ಸಿದ್ದರಾಮಯ್ಯ ಅವರಿಗೆ ಈಗಲೂ ಮುಯ್ಯಿ ತೀರಿಸಿಕೊಳ್ಳುವ ಹಟ ಇದೆ. ಮತ್ತದು ತನ್ವೀರ್ ಸೇಠ್ ಅವರಿಗೂ ಗೊತ್ತಿದೆ.

ಇಂತಹ ಟೈಮಿನಲ್ಲಿ ಸಿ.ಎಂ.ಇಬ್ರಾಹಿಂ ದಾಳ ಉರುಳಿಸಿದರೆ ತನ್ವೀರ್ ಸೇಠ್ ಜೆಡಿಎಸ್ ಪಾಳಯಕ್ಕೆ ಕಾಲಿಡಬಹುದು. ಹೀಗೆ ಜಮೀರ್ ಅಹ್ಮದ್, ತನ್ವೀರ್ ಸೇಠ್ ಅವರೆಲ್ಲ ಜೆಡಿಎಸ್ ಕಡೆ ಬಂದರೆ ಆ ಪಾರ್ಟಿಯಲ್ಲಿ ಗೆಲ್ಲುವ ಕ್ಯಾಂಡಿಡೇಟುಗಳು ಹೆಚ್ಚಾಗುತ್ತಾರೆ. ಅಷ್ಟೇ ಅಲ್ಲ,
ಸಿದ್ದರಾಮಯ್ಯ ಅವರ ಶಿಬಿರದ ಟಾಪಿಗೆ ಗುನ್ನ ಬೀಳಲಿದೆ. ಅಂದ ಹಾಗೆ ಇವತ್ತಿನ ರಾಷ್ಟ್ರ ರಾಜಕಾರಣದ ಚಿತ್ರವನ್ನು ನೋಡಿದರೆ ಬಿಜೆಪಿಯ ವಿರುದ್ಧ ಮುಸ್ಲಿಮರು ತಿರುಗಿ ಬಿದ್ದಿದ್ದಾರೆ. ಹೀಗಾಗಿ ಅವರು ಕಾಂಗ್ರೆಸ್‌ಗೆ ಸಾಲಿಡ್ಡು ಬೆಂಬಲ ನೀಡಲಿದ್ದಾರೆ.

ಹೀಗಾಗಿ ಜೆಡಿಎಸ್ ಪಕ್ಷ ಮುಸ್ಲಿಮರ ಮತ ಗಳಿಸುವುದು ಕಷ್ಟ ಅಂತ ಸಿದ್ದರಾಮಯ್ಯ ಪಾಳಯ ಹೇಳುತ್ತದೆ. ಇದಕ್ಕೆ ಉದಾಹರಣೆಯಾಗಿ ಹಾನಗಲ, ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಗಾದ ಗತಿ ಏನು ಅಂತ ಬೊಟ್ಟು ಮಾಡಿ ತೋರಿಸುತ್ತಾರೆ.
ಆದರೆ ಮುಂದಿನ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಅಂದುಕೊಂಡಷ್ಟು ಸರಳವಾಗಿರುವುದಿಲ್ಲ ಎಂಬುದು ಮಾತ್ರ ನಿಜ. ಅರ್ಥಾತ್, ಜೆಡಿಎಸ್ ಪಕ್ಷದ ಹೆಬ್ಬಾಗಿಲನ್ನು ಈಗ ನೋಡಿದರೆ ಒಂದು ಸೈಜಿನಲ್ಲಿ ಮುಸ್ಲಿಮ್ ಮತಗಳು ಅದಕ್ಕೆ ದಕ್ಕಲಿವೆ. ಇದರಿಂದ ಜೆಡಿಎಸ್ ಪಕ್ಷಕ್ಕೆ ದೊಡ್ಡ ಲಾಭವಾಗದೆ ಇರಬಹುದು. ಆದರೆ ಕಾಂಗ್ರೆಸ್ ಗಳಿಕೆ ೨೦೧೮ರ ಚುನಾವಣೆಗಿಂತ ಕಡಿಮೆಯಾಗಿ ಎಪ್ಪತ್ತರ ಆಸು ಪಾಸಿಗೆ ಬಂದು ನಿಲ್ಲಲಿದೆ ಎಂಬುದು ಸದ್ಯದ ಲೆಕ್ಕಾಚಾರ.

ಅಂದ ಹಾಗೆ ಜೆಡಿಎಸ್ ಪಕ್ಷ ಕಾಂಗ್ರೆಸ್‌ಗೆ ಮಾಡುವ ಹಾನಿ ತಮಗೆ ಅನುಕೂಲ ಮಾಡಿಕೊಡುತ್ತದೆ. ಸ್ವಯಂ ಬಲದ ಮೇಲೆ ಮರಳಿ ಅಽಕಾರಕ್ಕೆ ಬರಲು ನೆರವಾಗುತ್ತದೆ ಎಂಬುದು ಬಿಜೆಪಿ ನಿರೀಕ್ಷೆ. ಅಂದರೆ? ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗಳಿಕೆ ಮೂವತ್ತರ ಆಸು ಪಾಸಿಗೆ ಬಂದು ನಿಲ್ಲುತ್ತದೆ ಮತ್ತು ಕಾಂಗ್ರೆಸ್ ಗಳಿಕೆ ಎಪ್ಪತ್ತು ಸೀಟುಗಳ ಆಸುಪಾಸಿಗೆ ಬಂದು ನಿಲ್ಲುವಂತೆ ಮಾಡುತ್ತದೆ. ಹಾಗಾದಾಗ ಸ್ವಯಂ ಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುವ ಲೆಕ್ಕಾಚಾರ ಬಿಜೆಪಿ ವರಿಷ್ಟರಲ್ಲಿದೆ.

ಅವರಲ್ಲಿ ಇಂತಹ ಲೆಕ್ಕಾಚಾರ ಇದೆ ಅನ್ನುವುದರ ಅರ್ಥವೇನು? ದೇವೇಗೌಡ ಮತ್ತು ಕುಮಾರಸ್ವಾಮಿ ಬಿಜೆಪಿ ವರಿಷ್ಟರ ಸಂಪರ್ಕದಲ್ಲಿ ದ್ದಾರೆ ಅಂತ ತಾನೇ? ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದ ಮಾಯಾವತಿ ಅವರಿಗೆ ಸಮಾಜವಾದಿ ಪಕ್ಷದ ಕ್ಯಾಂಡಿಡೇಟುಗಳನ್ನು ಸೋಲಿಸುವುದೇ ಅಜೆಂಡಾ ಆಗಿತ್ತು. ಹೀಗೆ ಸಮಾಜವಾದಿ ಪಕ್ಷದ ಕ್ಯಾಂಡಿಡೇಟುಗಳು ಸೋಲುವಂತೆ ಮಾಡಿದ ಅವರು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಅಧಿಕಾರ ಹಿಡಿಯಲು ಸಹಕಾರ ನೀಡಿದರು. ಅವರೇಕೆ ಬಿಜೆಪಿ ಅಧಿಕಾರಕ್ಕೆ ಬರಲು ಇಂತಹ ಸಹಕಾರ ನೀಡಿದರು? ಎಂಬ ಪ್ರಶ್ನೆಗೆ ಕೇಳಿ ಬರುವ ಉತ್ತರ: ಬಿಜೆಪಿ ಟ್ರ್ಯಾಪ್ ಎಂಬುದು.

ಈಗ ಕರ್ನಾಟಕದಲ್ಲಿ ಕುಮಾರಸ್ವಾಮಿ ಕೂಡಾ ಮಾಯಾವತಿ ಪಾತ್ರಕ್ಕೆ ಸಜ್ಜಾಗಿದ್ದಾರೆ. ಮಾಯಾವತಿ ಅವರಂತೆ ಅವರು ಬಿಜೆಪಿ ವರಿಷ್ಟರ ಟ್ರ್ಯಾಪಿಗೆ ಸಿಗದಿದ್ದರೂ ತಮ್ಮನ್ನು ನಾಮಾವಶೇಷ ಮಾಡುವ ಸಿದ್ದರಾಮಯ್ಯ ಬಯಕೆಗೆ ತಿರುಗೇಟು ಹೊಡೆಯಲು ಈ ಗೆಟಪ್ಪಿಗೆ ಹೊಂದಿ
ಕೊಳ್ಳತೊಡಗಿದ್ದಾರೆ. ಇದೇ ಕಾರಣಕ್ಕಾಗಿ ಸಿದ್ರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್ ಜತೆ ಸೇರಿ ಮೈತ್ರಿ ಸರಕಾರ ರಚಿಸಲು ಸಿದ್ಧ ಅಂತ ಡಿಕೆಶಿಗೆ ಮೆಸೇಜು ಕಳಿಸುತ್ತಾ, ಮತ್ತೊಂದು ಕಡೆಯಿಂದ ಬಿಜೆಪಿ ವರಿಷ್ಟರ ಪ್ಲಾನಿನಂತೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಸ್ವತಃ ಸಿದ್ರಾಮಯ್ಯ ಗ್ಯಾಂಗಿನ ಅನುಮಾನ. ಸಿ.ಎಂ.ಇಬ್ರಾಹಿಂ ಇಂತಹ ಅನುಮಾನಕ್ಕೆ ತುಪ್ಪ ಎರೆಯುವಂತೆ ಕಾಣುತ್ತಿರುವುದು ನಿಜ.

error: Content is protected !!