Saturday, 27th July 2024

ಸ್ವಾಸ್ಥ್ಯವೆಂದರೆ ಕೇವಲ ದೈಹಿಕ ಆರೋಗ್ಯವಲ್ಲ..!

ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ

ಡಾ.ಸಾಧನಶ್ರೀ

ಜ್ವರ, ಮಧುಮೇಹ , ನೆಗಡಿ, ಚರ್ಮವ್ಯಾಧಿಗಳ ಸುಳಿವಿಲ್ಲದ ಶರೀರ ಸದೃಢವಾಗಿದೆ. ಆದರೆ ಇಂದ್ರಿಯಗಳ ಕಾರ್ಯಕ್ಷಮತೆ ಕುಂದಿದೆ ಅಥವಾ ಇಂದ್ರಿಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಆದರೆ ಮಾನಸಿಕ ಸ್ಥಿತಿ ದೂಷಿತವಾಗಿದೆ – ಅತಿಯಾದ ಆಸೆ, ಕೋಪ, ಹೊಟ್ಟೆ ಕಿಚ್ಚುಗಳ ಗೂಡಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಂದೂ ಸಹ ಸ್ವಾಸ್ಥ್ಯದ ಅನುಭವವಾಗದು.

ಆಯುರ್ವೇದ ವೈದ್ಯೆಯಾಗಿರುವ ನನಗೆ ಸಹಜವಾಗಿಯೇ ‘ಕ್ಲಿನಿಕ್’ ನನ್ನ ಕಾರ್ಯ ಕ್ಷೇತ್ರ ಹಾಗೂ ನನ್ನ ಕುರುಕ್ಷೇತ್ರವೂ ಹೌದು. ಕಾರಣ, ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಗೀತೋಪ ದೇಶವಾದಂತೆ, ನನ್ನ ಜೀವನದ ಎಲ್ಲಾ ಸತ್ಯ -ಸ್ವರೂಪಗಳ ಅವಬೋಧವಾಗುತ್ತಿರುವುದು ಈ ಕುರುಕ್ಷೇತ್ರ ದಲ್ಲಿಯೇ!

ಪ್ರತಿನಿತ್ಯ ಪೇಷಂಟ್‌ಗಳೊಂದಿಗೆ ಆಗುವ ಒಡನಾಟ ಒಂದು ನೂತನ ಅನುಭವ ಮತ್ತು ಹೊಸ ಕಲಿಕೆ! ಆ ಮಾರ್ಗದರ್ಶಕ ಕಲಿಕೆಗಳನ್ನು ಸರಳವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಪುಟ್ಟ ಪ್ರಯತ್ನ , ನಿಮಗೂ ಮರ್ಗದರ್ಶನವಾಗಲಿ ಎಂಬ ಕಳಕಳಿಯೊಂದಿಗೆ! ಒಮ್ಮೆ ಒಬ್ಬ ಪೇಷೆಂಟ್, ‘ಹೇಗಿದ್ದೀರಾ’ ಎಂಬ ನನ್ನ ಪ್ರಶ್ನೆಯನ್ನು ಉತ್ತರಿಸಲು ಅವರು ಅವಲಂಬಿತವಾಗಿದ್ದು ಅವರ ಮೆಡಿಕಲ್ ರಿಪೋಟ್ಸ ಮೇಲೆ. ಇನ್ನೊಮ್ಮೆ ಅತಿಯಾದ ಶ್ವಾಸದ – ಉಸಿರಾಟದ ಸಮಸ್ಯೆಯಿರುವ ಒಬ್ಬ ಹೆಂಗಸು ಸದಾ ಇನ್ಹೇಲರ್ ಮೇಲೆ ಅವಲಂಬಿತ.

ಮತ್ತೊಬ್ಬರು, ನಿzಗಾಗಿ ಗುಳಿಗೆಯ ಮೇಲೆ ಅವಲಂಬಿತ. ಕೆಲವರಂತು ಮಾನ ಸಿಕ ಸಂತುಲನಕ್ಕೆ ಥೆರಪಿ ಮೇಲೆಯೇ ಅವಲಂಬಿತ. ನಿತ್ಯವೂ ಶಕ್ತಿಯುತ ವಾಗಿ ಕಾರ್ಯ ನಿರ್ವಹಿಸಲು ಇಂಜೆಕ್ಶನ್ ಮೇಲೆ ಅವಲಂಬಿತ. ಮಗುವಿಗೆ ಜನ್ಮ ನೀಡಲು ಲ್ಯಾಬ್ ಮೇಲೆ ಅವಲಂಬಿತ. ಜೀವನ ಸಾಗಿಸಲು ಡಯಾಲಿಸಿಸ್ ಹಾಗೂ ಕೀಮೋಥೆರೆಪಿ ಮೇಲೆ ಅವಲಂಬಿತ. ಹೀಗೆ ನೋಡುತ್ತಾ ಹೋದರೆ, ಜೀವನ ನಡೆಸಲು ಪರಾವಲಂಬನೆ ಸಹಜವಾಗಿಬಿಟ್ಟಿದೆ. ಒಟ್ಟಾರೆ ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತರಾದ ಮೇಲೆಯೂ ಔಷಧ-ಆಸ್ಪತ್ರೆಗಳ ಮೇಲೆ ಪೂರ್ಣವಾಗಿ ಅವಲಂಬಿತವಾಗಿರುವ ನಮ್ಮನ್ನು ಫ್ರೀ/ಇಂಡಿಪೆಂಡೆಂಟ್ ಎಂದು ಕರೆದುಕೊಳ್ಳಲು ಸಾಧ್ಯವೇ? ವೈeನಿಕವಾಗಿ ನಾವು ಎಷ್ಟು ಮುಂದುವರೆದರೂ ದಿನೇ ದಿನೇ ಆರೋಗ್ಯದಲ್ಲಿ ಕ್ಷೀಣಿಸುತ್ತಿರುವುದು ಹಾಗೂ ಆಸ್ಪತ್ರೆಗಳು ಹೆಚ್ಚುತ್ತಿರುವುದನ್ನು ನೋಡಿದರೆ ಸ್ವಾಸ್ಥ್ಯದ ಪರಿಕಲ್ಪನೆಯಲ್ಲಿ ನಾವೆ ತಪ್ಪಿದ್ದೇವೆ ಎಂದು ಅನ್ನಿಸುತ್ತದೆ.

ಸಣ್ಣ ಪ್ರಾಯದ ಮಕ್ಕಳೇ ಹಲವಾರು ರೋಗಗಳ ಗೂಡಾಗುತ್ತಿರುವುದನ್ನು ನೋಡಿದರೆ ಸ್ವಾಸ್ಥ್ಯ ಪರಿಪಾಲನೆಯಲ್ಲಿ ನಾವು ಖಂಡಿತ ಎಡವುತ್ತಿದ್ದೇವೆ ಎಂಬುದರಲ್ಲಿ ಸಂಶಯವಿಲ್ಲ. ಕ್ಲಿನಿಕ್‌ಗೆ ಬರುವ ಆರೋಗ್ಯಾಕಾಂಕ್ಷಿಗಳನ್ನು, ನಿಮ್ಮ ಆರೋಗ್ಯವನ್ನು ನಿತ್ಯ ಹೇಗೆ ನೋಡಿಕೊಳ್ಳುತ್ತಿದ್ದೀರಾ? , ಅಂತ ಕೇಳಿದಾಗ ಅವರು ಕೊಡುವ ಕೆಲವು ಉತ್ತರಗಳನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ. ಮೂರು ತಿಂಗಳಿಗೊಮ್ಮೆ ಪೂರ್ತಿ ‘ಬಾಡಿ ಚೆಕಪ್’ ಮಾಡಿ ಕೊಳ್ಳುತ್ತೇನೆ. ದಿನವೂ ಪ್ರೋಟೀನ್ ರಿಚ್ ಫುಡ್ ತೆಗೆದು ಕೊಳ್ಳುತ್ತೇನೆ. ೧೦೦೦೦ ಸ್ಟೆ ನಿತ್ಯ ನಡಿತೀನಿ. ಐದು ಲೀಟರ್ ನೀರು ಕುಡಿಯುತ್ತೇನೆ. ಪ್ರತಿ ತಿಂಗಳೂ ಸ್ಪಾಗೆ ಹೋಗಿ ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತೇನೆ.

ಮಲ್ಟಿ ವಿಟಮಿತೆಗೆದುಕೊಳ್ಳುತ್ತೇನೆ… ಇತ್ಯಾದಿ ಇತ್ಯಾದಿ.. ಇಲ್ಲಿ ನಾವು ಗಮನಿಸಿದರೆ ಆರೋಗ್ಯವನ್ನು ನಾವು ನೋಡಿಕೊಳ್ಳುವ ನಿಟ್ಟಿನಲ್ಲಿ ಕೇವಲ ನಮ್ಮ ಶರೀರದ ಪಾಲನೆಯನ್ನು ಸ್ವಲ್ಪ ಮಟ್ಟಿಗೆ ಮಾಡುತ್ತಿದ್ದೇವೆ ಅಷ್ಟೇ. ಈ ಪ್ರಯಾಸಗಳಿಂದ ‘ಶಾರೀರಿಕ ಆರೋಗ್ಯ’ವನ್ನು ತಾತ್ಕಾಲಿಕವಾಗಿ ಅನುಭವಿಸ ಬಹುದೋ ಏನೋ.. ಆದರೆ ‘ಸ್ವಾಸ್ಥ್ಯ’ದ ಸಂಪೂರ್ಣ ಅನುಭವವನ್ನು ಪಡೆಯಲು ಅಸಾಧ್ಯ. ಸಾಮಾನ್ಯದ ವ್ಯವಹಾರದಲ್ಲಿ ‘ಆರೋಗ್ಯ’ ಹಾಗೂ ‘ಸ್ವಾಸ್ಥ್ಯ’ವನ್ನು ಒಂದೇ ಅರ್ಥದಲ್ಲಿ ಬಳಸುವುದು ಉಂಟು. ಆದರೆ, ಸ್ನೇಹಿತರೆ, ಸ್ವಾಸ್ಥ್ಯವೆಂದರೆ ಆರೋಗ್ಯವಲ್ಲ. ಸ್ವಾಸ್ಥ್ಯವೇ ಬೇರೆ, ಆರೋಗ್ಯವೇ ಬೇರೆ! ಎಂಬ ಅತ್ಯುನ್ನತವಾದ ವಿಚಾರವನ್ನು ವಿಸ್ತಾರವಾಗಿ ತಿಳಿಸಿಕೊಟ್ಟಿರುವ ಏಕೈಕ ಶಾಸ್ತ್ರವೆಂದರೆ ಅದು ಆಯುರ್ವೇದ ಶಾಸ್ತ್ರ.

ಬದುಕಿನ ವಿಜ್ಞಾನವಾದ ಆಯುರ್ವೇದದ ಆರ್ಷ ಗ್ರಂಥಗಳನ್ನು ತೆರೆದು ನೋಡಿದಾಗ, ವಿಶೇಷವಾದ ಸ್ವಾಸ್ಥ್ಯದ ಕಲ್ಪನೆ ನಮ್ಮನ್ನು ಸ್ವಾಗತಿಸುತ್ತದೆ. ಮನುಷ್ಯ ಕೇವಲ ಶರೀರ ಮಾತ್ರವಲ್ಲದೆ ಶರೀರ, ಇಂದ್ರಿಯ, ಮನಸ್ಸು ಮತ್ತು ಆತ್ಮಗಳೆಂಬ ನಾಲ್ಕರ ಒಕ್ಕೂಟ. ಸ್ವತಂತ್ರವಾಗಿಯೂ ಅಥವಾ ಒಟ್ಟಾಗಿ ಯೂ ಇವು ಹಾಳಾದಾಗ ಸ್ವಾಸ್ಥ್ಯವು ಹದಗೆಡುತ್ತದೆ ಎಂಬುದು ಇಲ್ಲಿನ ಸಾರಾಂಶ. ಶರೀರದ ಮೇಲೆ ಮನಸ್ಸಿನ ಪ್ರಭಾವ, ಮನಸ್ಸಿನ ಮೇಲೆ ಇಂದ್ರಿಯ ಹಾಗೂ ಶರೀರಗಳ ಪ್ರಭಾವ- ಇವುಗಳ ಬಗ್ಗೆ ನಿತ್ಯ ಜೀವನದಲ್ಲಿ ಅರಿವು ಬೆಳೆಸಿಕೊಂಡಾಗ ಮಾತ್ರ ಸ್ವಾಸ್ಥ್ಯದ ಪರಿಕಲ್ಪನೆ ಸಾಧ್ಯ, ಇಲ್ಲದಿದ್ದರೆ ‘ಆರೋಗ್ಯ’ದ ಸ್ಥಿತಿಯೇ ಅಂತಿಮವೆಂಬ ಭ್ರಮೆಯಲ್ಲಿರುತ್ತೇವೆ ಎಂಬುದು ಆಯುರ್ವೇದದ ಕಿವಿಮಾತು.

ಹೇಗೆ ಆರೋಗ್ಯ ಬೇರೆ ಹಾಗೂ ಸ್ವಾಸ್ಥ್ಯ ಬೇರೆ ಅಂತ ನೋಡೋಣ. ರೋಗವೆಂದರೆ ಶರೀರ ಮತ್ತು ಮನಸ್ಸುಗಳ ನೋವು ಮತ್ತು ದುಃಖದ ವಿಷಮ ಸ್ಥಿತಿ. ಆರೋಗ್ಯವೆಂದರೆ ರೋಗ ರಹಿತ ಸ್ಥಿತಿ ಅಷ್ಟೇ. ಅದಕ್ಕಿಂತ ಹೆಚ್ಚೇನೂ ಅಲ್ಲ. ಆದರೆ ಸ್ವಾಸ್ಥ್ಯವು ಅಷ್ಟೇ ಅಲ್ಲ. ಅದು ಆರೋಗ್ಯದ ಮುಂದಿನ ಹಂತ- ರೋಗವಿಲ್ಲದಿರುವಿಕೆಯ ನಂತರದ ಸ್ಥಿತಿ! ಸ್ವಾಸ್ಥ್ಯವು ಬದುಕಿನ ಸುಸ್ಥಿತಿ. ಸ್ವಸ್ಥ ಶಬ್ದದಲ್ಲಿ ‘ಸ್ವ’ ಎಂದರೆ ತನ್ನ, ‘ಸ್ಥ’ ಎಂದರೆ ಸ್ಥಿರವಾಗಿ ನೆಲೆಸುವುದು ಎಂದರ್ಥ. ಸಂಸ್ಕೃತದಲ್ಲಿ ಹೇಳಬೇಕಾದರೆ , ಸುಷ್ಠುಸ್ಥಿತಃ ಸ್ವಸ್ಥಃ , ಅಂದರೆ ತನ್ನ ಬದುಕಿನ ಎ ಆಯಾಮಗಳಲ್ಲಿಯೂ (ಶರೀರ- ಇಂದ್ರಿಯ-ಮನಸ್ಸು-ಆತ್ಮ) ಸ್ಥಿರವಾದ ಸ್ಥಿತಿಯನ್ನು ಹೊಂದಿರುವವನನ್ನು ಹಾಗೂ ಯಾವುದೇ ಪರಾವಲಂಬನೆ ಇಲ್ಲದೆ ಸ್ವಕರ್ತವ್ಯ ನಿರ್ವಹಣಾ ಸಾಮರ್ಥ್ಯ ಇರುವವನಿಗೆ ಸ್ವಸ್ಥ’ ಎಂದು ಕರೆಯಬಹುದು.

ಇಂತಹ ಸ್ಥಿತಿಯೇ ಸ್ವಾಸ್ಥ್ಯ. ಜ್ವರ, ಮಧುಮೇಹ, ನೆಗಡಿ, ಚರ್ಮವ್ಯಾಧಿಗಳ ಸುಳಿವಿಲ್ಲದ ಶರೀರ ಸದೃಢವಾಗಿದೆ. ಆದರೆ ಇಂದ್ರಿಯಗಳ ಕಾರ್ಯಕ್ಷಮತೆ ಕುಂದಿದೆ ಅಥವಾ ಇಂದ್ರಿಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಆದರೆ ಮಾನಸಿಕ ಸ್ಥಿತಿ ದೂಷಿತವಾಗಿದೆ – ಅತಿಯಾದ ಆಸೆ, ಕೋಪ, ಹೊಟ್ಟೆ
ಕಿಚ್ಚುಗಳ ಗೂಡಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಂದೂ ಸಹ ಸ್ವಾಸ್ಥ್ಯದ ಅನುಭವವಾಗದು. ಶರೀರ-ಇಂದ್ರಿಯ- ಮನಸ್ಸುಗಳು ಸುಸ್ಥಿತಿಯಲ್ಲಿದ್ದು, ಪ್ರಸನ್ನವಾಗಿದ್ದರೆ ಮಾತ್ರ ಸ್ವಾಸ್ಥ್ಯದ ಅನುಭವ ಸಾಧ್ಯ. ಇಂತಹ ಸಂತುಲಿತ ಸ್ಥಿತಿಯಲ್ಲಿ ಮಾತ್ರ ಸ್ವಾತಂತ್ರ್ಯದ ಆನಂದ ಲಭ್ಯ. ಈ ಸ್ವಾತಂತ್ರ್ಯವು ಮಾತ್ರ
ನಮ್ಮನ್ನು ನಮ್ಮ ಜೀವನದ ಗುರಿ ಎಡೆಗೆ ಕರೆದೊಯ್ಯುತ್ತದೆ.

ಹಾಗಾದರೆ ನಮ್ಮ ಬದುಕಿನ ಗುರಿ ಏನು? ಎಂಬ ಪ್ರಶ್ನೆಗೆ ಹಲವಾರು ತಾತ್ಕಾಲಿಕ ಉತ್ತರಗಳು ಸಿಕ್ಕರೂ ಒಂದು ಶಾಸ್ತ್ರಸಮ್ಮತವಾದ ಸಾರ್ವಕಾಲಿಕ ಸತ್ಯ ವಾದ ಉತ್ತರ ವೆಂದರೆ- ‘ಧರ್ಮ, ಅರ್ಥ, ಕಾಮ, ಮೋಕ್ಷ’ಗಳೆಂಬ ನಾಲ್ಕು ಪುರುಷಾರ್ಥಗಳ ಸಾಧನೆಯೇ ಈ ಬದುಕಿನ ಅತ್ಯುನ್ನತ ಗುರಿ. ಈ ಗುರಿಸಾಧನೆಗೆ ನಮ್ಮ ಶರೀರ, ಇಂದ್ರಿಯ, ಮನಸ್ಸು ಮತ್ತು ಆತ್ಮಗಳ ಸಾಮರಸ್ಯವಾದ – ಪರಸ್ಪರ ಜಗಳವಿಲ್ಲದ ಸಂಘಟನೆ ಅತ್ಯಗತ್ಯ. ಈ ಸುಗಮವಾದ ಸಂಬಂಧವೇ ಸ್ವಾಸ್ಥ್ಯ. ದೇಹ, ಇಂದ್ರಿಯ, ಮನಸ್ಸುಗಳ ತಯಾರಿಕೆಯೇ ಸ್ವಾಸ್ಥ್ಯ ಸಾಧನೆಯ ಮೊದಲ ಉದ್ದೇಶ!

ಸ್ವಾಸ್ಥ್ಯವು ನಮಗೆ ಸ್ವಾತಂತ್ರ್ಯ ನೀಡುತ್ತೆ ಎಂಬುದು ಸರಿಯಾದ ಮಾತು ಹೌದು, ಆದರೆ ಈ ಸ್ವಾತಂತ್ರ್ಯವನ್ನು ಗಳಿಸುವುದು-ಉಳಿಸುವುದು-ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ನಿತ್ಯ ಪರಿಶ್ರಮ ಬೇಕು . ಯಾವತ್ತೋ ತಿಂಗಳಿಗೊಮ್ಮೆ- ಮೂರು ತಿಂಗಳಿಗೊಮ್ಮೆ- ಆರು ತಿಂಗಳಿಗೊಮ್ಮೆ ಮಾಡುವ ಕಸರತ್ತು ಅಲ್ಲ. ಸ್ವಾಸ್ಥ್ಯ ಪರಿಪಾಲನೆ ನಿತ್ಯ ಯಜ್ಞ. ಈ ಸಂದರ್ಭದಲ್ಲಿ ಡಿವಿಜಿಯವರ ಒಂದು ಮಾತು ನೆನಪಾಗುತ್ತೆ – ‘ಸ್ವಾತಂತ್ರ್ಯವೆಂದರೆ ಮಾವು
ಅಥವಾ ಬಾಳೆಹಣ್ಣಲ್ಲ . ಅದು ತೆಂಗಿನಕಾಯಿ!’ ಅದರ ನಾರಿನ ಹೊದಿಕೆಯನ್ನು ತೆಗೆಯುವ ಕೌಶಲ್ಯ, ಅದರ ಚಿಪ್ಪನ್ನು ಒಡೆಯುವ ಶಕ್ತಿ, ಕೊಬ್ಬರಿ ಯನ್ನು ಬೇರ್ಪಡಿಸುವ ಜಾಣತನ ಹಾಗೆ ಅದನ್ನು ಜಗಿಯುವ ತಾಳ್ಮೆ ನಮ್ಮಲ್ಲಿರಬೇಕು ಇಲ್ಲದಿದ್ದರೆ ನಾವು ಅದರ ಸಂಪೂರ್ಣ ರುಚಿಯನ್ನು ಸವಿಯಲು ಸಾಧ್ಯವಿಲ್ಲ.

ಅದರ ಸಂಪೂರ್ಣ ಉಪಯುಕ್ತತೆಯನ್ನು ಅನುಭವಿಸಲು ಬಯಸಿದರೆ ಕಠಿಣ ಪರಿಶ್ರಮಕ್ಕಾಗಿ ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು! ಸ್ವಾಸ್ಥ್ಯ ಸಾಧನೆಗೂ
ಇದೇ ಮಾರ್ಗ. ಆಯುರ್ವೇದದ ಸ್ವಭಾವೋಪರಮ ವಾದದ ಪ್ರಕಾರ ‘ವಿನಾಶ’ ನೈಸರ್ಗಿಕವಾದಂತಹ ಒಂದು ಪ್ರಕ್ರಿಯೆ. ಇದಕ್ಕೆ ಯಾವುದೇ ಪರಿಶ್ರಮದ ಅಗತ್ಯವಿಲ್ಲ. ಅದು ಪ್ಯಾಸಿವ್ ಪ್ರೊಸೆಸ್. ಆದರೆ, ಪರಿಪಾಲನೆ ಅಥವಾ ಸಾಸ್ಥ್ಯದ ರಕ್ಷಣೆಗೆ ನಾವು ಪ್ರತಿ ನಿತ್ಯ ಪರಿಶ್ರಮಿಸಬೇಕು.

ಇದು ಸಹಜವಾಗಿ, ಏನು ಮಾಡದೆಯೇ ದಕ್ಕುವ ಸ್ಥಿತಿಯಲ್ಲ. ಆದ್ದರಿಂದ ಕೇವಲ ಲ್ಯಾಬ್ ರಿಪೋರ್ಟ್‌ಗಳನ್ನು ಅಥವಾ ವೇಯಿಂಗ್ ಮಿಷಿನ್‌ನಲ್ಲಿ ಕಾಣಿಸುವ ಅಂಕಿಗಳನ್ನು ನಾರ್ಮಲ್ ರೇಂಜ್ ಗೆ ತಂದು, ‘ಆರೋಗ’ವಂತರಾಗುವ ನಮ್ಮ ನಿತ್ಯ ನಿಷಲ ಪ್ರಯಾಸದಿಂದ, ಶರೀರ-ಇಂದ್ರಿಯ-ಮನಸ್ಸುಗಳ ಎದ್ದು ಕಾಣುವ ವಿಕಾರಗಳನ್ನು ನಾರ್ಮಲ್ ರೇಂಜ್‌ಗೆ ತಂದು ಸ್ವಾಸ್ಥ್ಯ’ವನ್ನು ಅನುಭವಿಸಿ ಸ್ವತಂತ್ರವಾಗುವ ಕಡೆಗೆ ಗಮನ ಹರಿಸೋಣ! ನೆನಪಿರಲಿ ಸ್ವಾಸ್ಥ್ಯವೆಂದರೆ ಸ್ವಾತಂತ್ರ್ಯ , ಸ್ವಾತಂತ್ರ್ಯವೆಂದರೆ ಸ್ವಾವಲಂಬನೆ ! ಆಯುರ್ವೇದವು ನಮ್ಮೆಲ್ಲರನ್ನ ಸ್ವಾವಲಂಬಿ ಸ್ವಸ್ಥರನ್ನಾಗಿ ಮಾಡಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *

error: Content is protected !!