Saturday, 27th July 2024

ಹಿಂದೂಗಳು ಒಂದಾಗುತ್ತಿರುವಾಗ ಇವರದ್ದೇನು ವಿರೋಧ ?

ಶಿಶಿರ ಕಾಲ

shishirh@gmail.com

ಆಸೀನ್‌ಗಳನ್ನು ಟಿವಿಯಲ್ಲಿ ನೋಡಿದ್ದು ನನಗಿನ್ನೂ ನೆನಪಿದೆ. ಕಂಚಿ ಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿಯವರನ್ನು ಅರೆಸ್ಟ್ ಮಾಡಿ ಕೊಂಡೊ
ಯ್ಯುತ್ತಿದ್ದ ವಿಡಿಯೋಗಳು ಅವು. ಅದನ್ನು ನೋಡಿದ ಯಾವುದೇ ಆಸ್ತಿಕ ಹಿಂದೂವಿಗೆ ಅವರೊಬ್ಬ ಕಪಟ ಸನ್ಯಾಸಿ ಇರಲೂಬಹುದು ಎಂದೆನಿಸಬೇಕು. ಆ ರೀತಿಯಲ್ಲಿ ಅಂದು ಬಿಂಬಿಸಲಾಗಿತ್ತು. ತಮಿಳುನಾಡಿನ ಸರಕಾರವಷ್ಟೇ ಅಲ್ಲ, ಮಾಧ್ಯಮಗಳೂ ಅವರು ದೋಷಿ ಎಂದೇ ತೀರ್ಪು ಕೊಟ್ಟು ಬಿಟ್ಟಿದ್ದವು.

ಕೇಂದ್ರದಲ್ಲಿದ್ದದ್ದು ಕಾಂಗ್ರೆಸ್ ಪಕ್ಷ. ಕಂಚಿ ಪೀಠವನ್ನು ಏರಿದ ನಂತರ ಜಯೇಂದ್ರ ಸರಸ್ವತಿ ಸ್ವಾಮಿಗಳು ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದರು. ದಲಿತರು, ಮೇಲಿನ-ಕೆಳಗಿನ ಜಾತಿಯವರು, ರಾಜಕಾರಣಿಗಳು, ಜನಸಾಮಾನ್ಯರು ಹೀಗೆ ಎಲ್ಲ ಹಿಂದೂಗಳನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು. ಆ ಸಮಯದಲ್ಲಿ ದೀನ-ದಲಿತರ ಕೇರಿಗಳಲ್ಲಿ ಮಿಷನರಿಗಳ ಮತಾಂತರವೂ ಎಗ್ಗಿಲ್ಲದೆ ಸಾಗಿತ್ತು. ಜಯೇಂದ್ರರು ಹರಿಜನರ ಕೇರಿಗಳಿಗೆ ಹೋಗಿ ಅಲ್ಲಿ ಶಂಕರ ಮೂರ್ತಿ ಪ್ರತಿಷ್ಠಾಪಿಸಿದರು.

ರಾಜಕೀಯ ಕಾರಣಕ್ಕೆ ಹಿಂದೂಗಳಿಂದಲೇ ತುಳಿತಕ್ಕೊಳಗಾಗಿದ್ದ ಸ್ಥಳಗಳನ್ನು ಗುರುತಿಸಿ ಅಲ್ಲಿನ ಸ್ಥಿತಿಯನ್ನು ಬದಲಿಸಿದ್ದರು. ಇದು ಮತಾಂತರಕ್ಕೆ ಮಾರಕ ವಾಗಿತ್ತು. ಇದೆಲ್ಲ ಒಳ್ಳೆಯ ಕೆಲಸಗಳು ಸಹಜವಾಗಿ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದ್ದವು. ಅದೇ ಮುಳವಾಯಿತೋ ಏನೋ. ಆ ಸಮಯದಲ್ಲಿ ತಮಿಳುನಾಡಿನಲ್ಲಿ ಪೆರಿಯಾರ್ ವಾದ, ಹಿಂದೂ ವಿರೋಽ ದ್ರಾವಿಡ ವಾದ ಜಾಗ್ರತವಾಗಿತ್ತು. ಮಠಗಳ ವಿರುದ್ಧದ ಪಿತೂರಿಗಳು ಶುರು
ವಾದವು. ಆಗ ಕ್ರಿಶ್ಚಿಯನ್ ಮಿಷನರಿಗಳ ಒತ್ತಡ ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲಿತ್ತು ಎಂಬ ವಾದವೂ ಇದೆ. ಕಾರಣ ಎರಡರಲ್ಲಿ ಒಂದು.

ಒಟ್ಟಾರೆ ಯಾವುದೋ ಒಂದು -ರ್ಜಿ ಕೇಸಿನಲ್ಲಿ ಅಂದಿನ ತಮಿಳುನಾಡು ಸರಕಾರ ಶ್ರೀಗಳನ್ನು ೨೦೦೪ರ ಸಂಕ್ರಾಂತಿ ಹಬ್ಬದ ದಿನವೇ ಅರೆಸ್ಟ್ ಮಾಡಿತ್ತು.
ತ್ರಿಕಾಲ ಪೂಜೆಗೆ ಹೊರಟ ಶ್ರೀಗಳನ್ನು ಯಾವುದೋ ಒಬ್ಬ ಕ್ರಿಮಿನಲ್‌ನಂತೆ ಎಳೆದೊಯ್ದು ಜೈಲಿಗೆ ಹಾಕಲಾಯಿತು. ಮಾಧ್ಯಮಗಳು ಜತೆ ಸೇರಿದ್ದರಿಂದ ಸರಕಾರದ ಈ ನಡೆಯನ್ನು ಹೆಚ್ಚಾಗಿ ವಿರೋಧಿಸಲಿಲ್ಲ. ಆದರೆ ಅಂದು ಕೋಟ್ಯಾನುಕೋಟಿ ಭಕ್ತರು, ಸ್ವಾಮಿಗಳ ಶಿಷ್ಯರು ಅಸಹಾಯಕರಾಗಿ ಅತ್ತರು.
ಟಿವಿಗಳಲ್ಲಿ ಕ್ರೈಮ್ ಸ್ಟೋರಿಗಳ ರೂಪದ ವರದಿಗಳು ಬಂದವು. ಮಠದ ಶಿಷ್ಯರಲ್ಲಿ ಒಡಕುಂಟಾಗಿ ಪರ-ವಿರೋಧಿ ಚಟುವಟಿಕೆಗಳು ನಡೆದವು. ಇದರಿಂದ ಆ ಭಾಗದ ಹಿಂದೂ ಸಮಾಜವೇ ಇಬ್ಭಾಗವಾಯಿತು.

ಮಠದಿಂದಾಗುತ್ತಿದ್ದ ಒಳ್ಳೆಯ ಕೆಲಸಗಳು ನಿಂತವು. ಮತಾಂತರಕ್ಕೆ ಹಾದಿ ಸುಗಮವಾಯಿತು ಇತ್ಯಾದಿ. ಮುಂದೆ ಈ ಆರೋಪದಲ್ಲಿ ಹುರುಳಿಲ್ಲ, ಪೊಲೀಸರು ದ್ವೇಷ ಕಾರಣದಿಂದ ನಡೆದುಕೊಂಡದ್ದು ಸ್ಪಷ್ಟವಾಗಿದೆ, ಸ್ವಾಮೀಜಿ ನಿರ್ದೋಷಿ ಎಂಬ ತೀರ್ಪು ಬಂತು ೨೦೧೩ರಲ್ಲಿ. ಈ ೯ ವರ್ಷ ಹಿಂದೂ ಧರ್ಮದ ಪ್ರಮುಖ ಮಠಗಳಲ್ಲೊಂದಾದ, ಆದಿ ಶಂಕರ ಪರಂಪರೆಯ ಈ ಸ್ವಾಮೀಜಿ ಅನುಭವಿಸಿದ್ದು ಒಂದೆರಡಲ್ಲ. ಇದರಿಂದಾದ ಸಾಮಾಜಿಕ ನಷ್ಟವೂ ಚಿಕ್ಕದಲ್ಲ. ೨೦೧೮ ರಲ್ಲಿ ಅವರು ಐಕ್ಯರಾದಾಗ ದಶಕದ ನೋವು ಅವರೊಂದಿಗೆ ಕೊನೆಯಾಯಿತು ಎಂದು ಔಟ್‌ಲುಕ್ ಪತ್ರಿಕೆ ಹೆಡ್‌ಲೈನ್
ಕೊಟ್ಟಿತ್ತು.

ಸದ್ಯ ರಾಮಮಂದಿರದ ಉದ್ಘಾಟನೆಗೆ ಭಾರತವೇ ಸಜ್ಜುಗೊಳ್ಳುತ್ತಿದೆ. ಇದು ಸಹಜವಾಗಿ ದೇಶ-ವಿದೇಶಗಳಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆ ಯನ್ನು, ಇತಿಹಾಸ ವನ್ನು ಬಹುತೇಕ ಅಂತಾರಾಷ್ಟ್ರೀಯ ಮಾಧ್ಯಮಗಳು ಗಮನಿಸಿ ಪ್ರಕಟಿಸುತ್ತಿವೆ. ಹೀಗೆ ಪ್ರಪಂಚವೇ ಇದನ್ನು ಅಭೂತಪೂರ್ವ ಎನ್ನುತ್ತಿರುವಾಗ ಕೆಲವು ಬೈಪಣೆಯ ಜೀವಿಗಳಿಗೆ ಸಹಜವಾಗಿ ಸಹಿಸಲಿಕ್ಕಾಗುತ್ತಿಲ್ಲ. ‘ರಾಮಮಂದಿರ ನಿರ್ಮಾಣವೇ ಮುಗಿದಿಲ್ಲ, ಅಧಂಬರ್ಧ ಕಟ್ಟಿದ ದೇವಸ್ಥಾನ ಉದ್ಘಾಟಿಸುವುದು ಸರಿಯಲ್ಲ’ ಎಂಬಿತ್ಯಾದಿ ಪುಕಾರು. ಕಾಂಗ್ರೆಸ್ ಪಕ್ಷದ ಸ್ಥಿತಿ ಅರ್ಥವಾಗುತ್ತದೆ.

ಬಿಸಿತುಪ್ಪ. ಅಂತೆಯೇ ಮೋದಿಯನ್ನು ಹಳಿಯಬೇಕೆಂಬ ಈ ಬೈಪಣೆಯ ಮೀಡಿಯಾಗಳದ್ದೂ ಸ್ಥಿತಿ ಅರ್ಥವಾಗುತ್ತದೆ. ಆದರೆ ಇದೆಲ್ಲದಕ್ಕೂ ತಾಳಮೇಳವಾಗದಿರು ವುದು ಉತ್ತರದ ಎರಡು ಶಂಕರಾಚಾರ್ಯ ಪೀಠಾಧಿಪತಿಗಳ ಮಾತು, ನಿಲುವು, ವಿರೋಧ. ಅವರದೂ ಅದೇ ವಾದ. ದೇವಸ್ಥಾನ ಪೂರ್ಣ ನಿರ್ಮಾಣವಾಗಿಲ್ಲ, ಹಾಗಾಗಿ ಅದರ ಉದ್ಘಾಟನೆ ಸರಿಯಲ್ಲ. ಇದು ಧಾರ್ಮಿಕವಲ್ಲ, ರಾಜಕಾರಣದ ಕಾರ್ಯಕ್ರಮ. ಕಾಂಗ್ರೆಸ್‌ನದೂ ಅದೇ ತಗಾದೆ. ಹಾಗನ್ನುವಾಗ ಸೋಮನಾಥ ದೇವಸ್ಥಾನವನ್ನು ಕಾಂಗ್ರೆಸ್ ಪಕ್ಷ ಮರೆತಂತಿದೆ. ಅಲ್ಲಿ ಪ್ರಾಣ ಪ್ರತಿಷ್ಠೆಯಾಗಿದ್ದು ೧೯೫೧ರಲ್ಲಿ. ದೇವಸ್ಥಾನ ನಿರ್ಮಾಣ ಪೂರ್ಣವಾಗಿದ್ದು ೧೯೫೬ರಲ್ಲಿ. ಇರಲಿ, ಅವರದು ರಾಜಕೀಯ ಪಕ್ಷ. ವಿರೋಧಕ್ಕೆ ಏನೋ ಒಂದು ಕಾರಣ ಬೇಕಿರುತ್ತದೆ, ಇಟ್ಟುಕೊಂಡಿದ್ದಾರೆ.

ಈ ಮೂಲಕ ಸಾಮಾಜಿಕ ಸಂದೇಶವನ್ನು ಚುನಾವಣಾ ಪೂರ್ವದಲ್ಲಿ ಒಂದು ವರ್ಗಕ್ಕೆ ತಿಳಿಸುವ ರಾಜಕೀಯ ಅವಶ್ಯಕತೆ ಅದು. ಆದರೆ ಈ ಅಪೂರ್ಣ ದೇವಸ್ಥಾನದ ತಗಾದೆಗೆ ಎಲ್ಲಿಲ್ಲದ ಉತ್ಕರ್ಷ ಬಂದದ್ದು, ಇದನ್ನು ನಾಲ್ಕರಲ್ಲಿ ಎರಡು ಶಂಕರಾಚಾರ್ಯ ಪೀಠಗಳು ವಿರೋಧಿಸಿದ ನಂತರ. ಉತ್ತರದ ಪುರಿ ಗೋವರ್ಧನ ಪೀಠದ ಶಂಕರಾಚಾರ್ಯರಾದ ನಿಶ್ಚಲಾನಂದರು ಮತ್ತು ಜ್ಯೋತಿರ್ಮಠ- ಜ್ಯೋತಿಷ್ ಪೀಠದ ಶಂಕರಾಚಾರ್ಯರಾದ ಅವಿಮುಕ್ತೇಶ್ವರಾ
ನಂದರು. ಉಳಿದೆರಡು ಶಂಕರ ಪೀಠಗಳಾದ ಶೃಂಗೇರಿ ಮತ್ತು ದ್ವಾರಕೆಯ ಶಂಕರಾಚಾರ್ಯರ ನಿಲುವು ಬಹಿರಂಗವಾದಂತಿಲ್ಲ. ಆ ಕಾರಣಕ್ಕೆ ಲೇಖನದ ವ್ಯಾಪ್ತಿಯಿಂದ ಈ ಎರಡೂ ಪೀಠವನ್ನು ಹೊರಗಿಡುವುದು ಸೂಕ್ತ.

ವಿರೋಧವಿರುವುದು ಶಂಕರಾಚಾರ್ಯರುಗಳಾದ ಪುರಿಯ ನಿಶ್ಚಲಾನಂದರಿಗೆ ಮತ್ತು ಅವಿಮುಕ್ತೇಶ್ವರಾನಂದರಿಗೆ ಮಾತ್ರ. ಅವರ ಆಪಾದನೆ ಸರಿಯೇ ಇದೆ. ಅಪೂರ್ಣ ದೇವಸ್ಥಾನವನ್ನು ಉದ್ಘಾಟಿಸುವ ಗಡಿಬಿಡಿ ಏಕೆ? ಇದು ರಾಜಕೀಯ ಪ್ರೇರಿತ ಇತ್ಯಾದಿ. ಇಲ್ಲೊಂದಿಷ್ಟು ಪ್ರಶ್ನೆಗಳು ಎದುರಾಗುತ್ತದೆ.
ದೇಶವೇ ರಾಮಮಂದಿರದಿಂದ ಒಂದಾಗಿ ಸಂಭ್ರಮದಲ್ಲಿರು ವಾಗ ಇಂಥ ರಗಳೆಗಳ ಮೂಲಕ ಪೀಠಗಳೆರಡು ವಿರೋಧಿಸುವುದು ಸರಿಯೇ? ಹಿಂದೂ ಧರ್ಮದ ರಕ್ಷಣೆಗೆ ನಿಂತವರು ಆದಿಶಂಕರರು. ಈಗ ಅವರ ಪರಂಪರೆಯ ಇಬ್ಬರು ಪೀಠಾಧಿಪತಿಗಳ ಈ ನಿಲುವಿನಿಂದ ಹಿಂದೂ ಏಕತೆಗೆ ಧಕ್ಕೆಯಾಗುವು
ದಿಲ್ಲವೇ? ಸ್ವಾಮಿಗಳು ವಿರೋಧಿಸಿದರೆ ಶಿಷ್ಯವರ್ಗವೂ ಅದನ್ನೇ ಪಾಲಿಸುತ್ತದೆ.

ಹೀಗಿರುವಾಗ ಒಂದು ದೊಡ್ಡ ವರ್ಗದ ಹಿಂದೂಗಳನ್ನು ಇಂಥ ಸಂಭ್ರಮದಿಂದ, ಏಕತಾ ಕಾರ್ಯದಿಂದ ಹೊರಗಿಡುವ ಕೆಲಸ ತಮ್ಮಿಂದಾಗುತ್ತಿದೆ ಎಂದು ಈ ಇಬ್ಬರು ಪೀಠಾಧಿಪತಿಗಳಿಗೆ ತಿಳಿಯುತ್ತಿಲ್ಲವೇ? ಹಾಗೆ ನೋಡಿದರೆ ಕಂಚಿ ಕಾಮಕೋಟಿ ಪೀಠಾಧಿಪತಿಗಳ ಬಂಧನವಾಗುವಾಗ ಕೇಂದ್ರದಲ್ಲಿದ್ದದ್ದು ಕಾಂಗ್ರೆಸ್ ಪಕ್ಷ. ಅದು ಅಂದು ಪೀಠದ ರಕ್ಷಣೆಗೆ ನಿಂತಿರಲಿಲ್ಲ. ಈ ಎಲ್ಲ ಕಾರಣಗಳಿಂದ ಶಂಕರ ಪೀಠ ಗಳು ರಾಮಮಂದಿರವನ್ನು ಬೆಂಬಲಿಸಬೇಕು, ಜತೆಯಲ್ಲಿ ನಿಲ್ಲಬೇಕು.

ಆದರೆ ಕಂಚಿ ಪೀಠ, ಶಂಕರರು ಹೇಳಿದ ನಾಲ್ಕು ಯತಿ ಗಳು, ನಾಲ್ಕು ಪೀಠಕ್ಕೆ ಹೊರತಾದದ್ದು. ಅದು ಶಂಕರ ಪರಂಪರೆಯ ಪೀಠವೇ ಅಲ್ಲ. ಅದು ನಾಲ್ಕು ಪೀಠಗಳಿಗಿಂತ ಕೆಳಗಂತೆ. ಅದನ್ನು ಸ್ವತಃ ಪುರಿಯ ನಿಶ್ಚಲಾನಂದರೇ ಹೇಳಿರುವ ವಿಡಿಯೋವನ್ನು ನೋಡಬಹುದು. ಕಂಚಿ ಜಯೇಂದ್ರ ಸರಸ್ವತಿ ಸ್ವಾಮಿಗಳನ್ನು ಬಂಧಿಸಿದಾಗ ಈ ಕಾರಣಕ್ಕೆ ಚತುರ್ ಪೀಠಗಳು ಒಂದು ಅಂತರವನ್ನಂತೂ ಕಾಪಾಡಿಕೊಂಡಿದ್ದವು. ೨೦೧೪ರ ಚುನಾವಣೆ ಸಮಯದಲ್ಲಿ ‘ಮೋದಿ ಸಮರ್ಥ’ ಎಂದು ಮುಕ್ತವಾಗಿ ಹೇಳಿದ್ದು ಕಂಚಿಯ ಜಯೇಂದ್ರರು. ಆದರೆ ಮೋದಿ ಪ್ರಧಾನಿಯಾಗುವ ಬಗ್ಗೆ ಅಭಿಪ್ರಾಯ ಕೇಳಿದ್ದಕ್ಕೆ ಅಂದಿನ ಪುರಿಯ ಸ್ವಾಮೀಜಿ ಸಿಟ್ಟಿಗೆದ್ದಿದ್ದರು. ಪುರಿ ಮತ್ತು ದ್ವಾರಕೆಯ ಶಂಕರಾಚಾರ್ಯರಿಬ್ಬರು ಮೋದಿಯ ವಿರುದ್ಧ ಚುನಾವಣಾ ಪ್ರಚಾರ ಮಾಡಿದ್ದರು. ಅಷ್ಟೇ ಅಲ್ಲ, ೨೦೧೯ರಲ್ಲಿ ಮೋದಿಯ ವಿರುದ್ಧ ವಾರಾಣಸಿಯಲ್ಲಿ ದ್ವಾರಕೆಯ ಅವಿಮುಕ್ತೇಶ್ವರಾನಂದರು ತಮ್ಮದೇ ಶಿಷ್ಯನೊಬ್ಬನನ್ನು, ಬಹುಶಃ ಮತ ಒಡೆಯ ಲೆಂದೇ ಚುನಾವಣೆಗೆ ನಿಲ್ಲಿಸಿದ್ದರು.

ಅವಿಮುಕ್ತೇಶ್ವರಾನಂದರೇ ಹೇಳಿರುವಂತೆ, ಇಲ್ಲಿಯವರೆಗೆ ರಾಮಮಂದಿರದ ಉದ್ಘಾಟನೆಗೆ ಅವರಿಗೆ ಆಹ್ವಾನವೇ ಬಂದಿಲ್ಲ, ಬಂದರೂ ಹೋಗುವುದಿಲ್ಲ ಎಂದಿದ್ದಾರೆ. ಹೀಗೆ ಇಷ್ಟೆಲ್ಲಾ ಘಟನೆಗಳು ಈ ಹಿಂದೆ ನಡೆದಿವೆ. ಹಾಗಾಗಿ ಪೂರ್ಣವಾಗದ ದೇವಸ್ಥಾನವೆಂಬುದು ಈಗಿನ ವಿರೋಧಕ್ಕೆ ಶಾಸೋಕ್ತ ಕಾರಣವೇ, ಅಥವಾ ಇಲ್ಲಿ ಬೇರಿನ್ನೇನೋ ಅಗ್ನಿಯಿಂದ ಹೊಗೆ ಯಾಡುತ್ತಿದೆಯೇ ಎಂಬ ಪ್ರಶ್ನೆ ಸಹಜ. ದ್ವಾರಕೆಯ ಶಂಕರಾಚಾರ್ಯ  ಅವಿಮುಕ್ತೇಶ್ವರಾ ನಂದರು ೨೦೧೯ರಲ್ಲಿ ಮೋದಿಯ ಎದುರು ತಮ್ಮ ಶಿಷ್ಯನನ್ನು ಚುನಾವಣೆಗೆ ನಿಲ್ಲಿಸಿದ್ದರು ಎಂದೆನಲ್ಲ.

ಆ ಅಭ್ಯರ್ಥಿ ಚುನಾವಣೆಗೆ ನಿಂತದ್ದು ಅಖಿಲ ಭಾರತ ರಾಮರಾಜ್ಯ ಪರಿಷತ್ ಎಂಬ ಪಕ್ಷದಿಂದ. ಈ ಪಕ್ಷದ ಇತಿಹಾಸ ಇದೆಲ್ಲದರ ಹಿಂದಿರುವ ಇನ್ನೊಂದು ಆಯಾಮವನ್ನು ಬಹಿರಂಗವಾಗಿಸುತ್ತದೆ. ಆರೆಸ್ಸೆಸ್, ಜನಸಂಘಗಳು ಹುಟ್ಟುವುದಕ್ಕಿಂತ ಮೊದಲು ಹಿಂದುತ್ವದ ವಿಚಾರಗಳನ್ನು ಇಟ್ಟುಕೊಂಡು  ೯೪೮ರಲ್ಲಿಯೇ ಸ್ಥಾಪನೆಯಾದ ಪಕ್ಷ ಅಖಿಲ ಭಾರತ ರಾಮರಾಜ್ಯ ಪರಿಷತ್. ಈ ಪಕ್ಷ ೧೯೫೧ರ ಚುನಾವಣೆಯಲ್ಲಿ ಮೂರು ಸೀಟುಗಳನ್ನೂ ಗೆದ್ದಿತ್ತು. ಅದನ್ನು ಸ್ಥಾಪಿಸಿದವರು ಸನ್ಯಾಸಿ-ಸ್ವಾಮಿ ಕರಪಾತ್ರಿ. ಕರವನ್ನೇ ಪಾತ್ರೆಯನ್ನಾಗಿಸಿ, ಒಂದೇ ಮುಷ್ಠಿ ಆಹಾರ ಸೇವಿಸುತ್ತಿದ್ದ ಸಂತರಾಗಿದ್ದರಿಂದ ಆ ಹೆಸರಂತೆ. ಇವರು ಸ್ವಾತಂತ್ರ್ಯ ಬಂದ, ಆಗಸ್ಟ್ ೧೪ರ ರಾತ್ರಿಯೇ ದೇಶವಿಭಜನೆಯನ್ನು ವಿರೋಧಿಸಿದ್ದರು. ಆಗಲೇ ಇವರನ್ನು ಬಂಧಿಸಲಾಗಿತ್ತು.

ಸ್ವತಂತ್ರ ಭಾರತದಲ್ಲಿ ಮೊದಲು ಜೈಲಿಗೆ ಹೋದವರು ಎಂಬ ಅಗ್ಗಳಿಕೆ ಇವರಿಗಿದೆ. ಅಂದು ಹಿಂದೂ ವಿಧೇಯಕವನ್ನು ಇವರು ವಿರೋಧಿಸಿದ್ದರು. ಅಷ್ಟೇ ಅಲ್ಲ ಗೋಹತ್ಯೆ, ಕಪಿ ಹತ್ಯೆ ಗಳ ನಿಷೇಧವಾಗಬೇಕು ಎಂಬುದು ಅವರ ಪಕ್ಷದ ನಿಲುವಾಗಿತ್ತು. ೧೯೫೧ರಲ್ಲಿ ಜನಸಂಘ ಸ್ಥಾಪನೆಯಾಯಿತಲ್ಲ, ಅವರದೂ ಇದೇ ವಿಚಾರಗಳಿದ್ದವು. ಆದರೆ ಅವರಿಬ್ಬರಲ್ಲಿ ಒಂದು ವಿಚಾರ ಭೇದವಿತ್ತು. ಸ್ವಾಮಿ ಕರಪಾತ್ರಿ ಜಾತಿವಾದದ ಪ್ರತಿಪಾದಕರಾಗಿದ್ದರು. ಜಾತಿ ಪದ್ಧತಿ ಯನ್ನು ಹಾಗೆಯೇ ಇಡಬೇಕು, ಅದರ ಸುತ್ತಲೇ ಕಾನೂನು ಬರಬೇಕು ಎಂಬುದು ಅವರ ನಿಲುವಾಗಿತ್ತು. ಆರೆಸ್ಸೆಸ್‌ನ ನಿಲುವು ಈ ವಿಚಾರದಲ್ಲಿ ಬೇರೆ ಯಿತ್ತು. ಅಂದಿನ ಸರಸಂಘ ಚಾಲಕರಾದ ಗೋಳ್ವಾಲ್ಕರ್ ಮೊದಲ ವಿಶ್ವ ಹಿಂದೂ ಪರಿಷತ್ತಿನಲ್ಲಿ ಹಿಂದೂ ಧರ್ಮದಿಂದ ಜಾತಿ ಪದ್ದತಿಯ ನಿರ್ಮೂಲನೆ ಯಾಗಬೇಕು ಎಂದಿದ್ದರು. ಇದು ಸ್ವಾಮಿ ಕರಪಾತ್ರಿ ಅವರಿಗೆ ಆಗಿಬರಲಿಲ್ಲ.

ಅವರು ಗೋಳ್ವಾಲ್ಕರ್ ಅವರಲ್ಲಿ ‘ಜಾತಿ ಪದ್ಧತಿ ಹಿಂದೂ ಧರ್ಮದ ಅಂಗ’ ಎಂದು ಆರೆಸ್ಸೆಸ್ ಘೋಷಿಸಿ, ನಿಲುವು ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು. ಗೋಳ್ವಾಲ್ಕರ್ ಅದಕ್ಕೆ ಒಪ್ಪಲಿಲ್ಲ. ಅಲ್ಲಿಂದ ಸ್ವಾಮಿ ಕರಪಾತ್ರಿ ಸಂಘವನ್ನು ವಾಚಾಮಗೋಚರ ಹಳಿಯಲು ಶುರುಮಾಡಿದರು. ಸಂಗಳು ಕೆಳಜಾತಿಯವರ ಮನೆಯಲ್ಲಿ ಆಹಾರ ಸ್ವೀಕರಿಸುತ್ತಾರೆ. ಅವರಿಗೆ ಸಾಮಾಜಿಕ ಕಲ್ಪನೆಯ ಸ್ಪಷ್ಟತೆ ಇಲ್ಲ. ಹೀಗೆ ಓತಪ್ರೋತ ವಿರೋಧ ಶುರುಮಾಡಿದರು. ತಮ್ಮ ಪುಸ್ತಕ ‘ವಿಚಾರ ಪುರುಷ’ದಲ್ಲಿ ಶೂದ್ರರಿಗೆ ಹಾಲು ಕುಡಿಯಲು ಕೊಡ ಬಾರದು, ಹಾಗೊಮ್ಮೆ ಕೊಟ್ಟರೆ ಅವರು ಚಂಡಾಲರಾಗುತ್ತಾರೆ ಎಂದೆಲ್ಲ ಬರೆದು ಕೊಂಡರು. ಆರ್ಯ ಸಮಾಜ ಮತಾಂತರ ವಾದವರನ್ನು ಹಿಂದೂ ಧರ್ಮಕ್ಕೆ ಮರಳಿ ತರುವ ಕೆಲಸ ಮಾಡಿದರೆ ‘ಘರ್ ವಾಪಸಿ’ ಅತಾರ್ಕಿಕ ಎಂದು ವಾದಿಸಿದರು.

ಸ್ವಾಮಿ ಕರಪಾತ್ರಿ ಯವರನ್ನು ಸೋಮನಾಥ ದೇವಸ್ಥಾನದ ಉದ್ಘಾಟನೆಗೆ ಆಹ್ವಾನಿಸಲಾಯಿತು. ಅದಕ್ಕವರು ‘ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠೆ ಮಾಡುವವರು ಯಾವ ಜಾತಿಯವರು? ಯಾವೆಲ್ಲ ಜಾತಿಯವರಿಗೆ ದೇವಸ್ಥಾನದ ಒಳಗೆ ಪ್ರವೇಶವಿದೆ?’ ಎಂಬಿ ತ್ಯಾದಿ ಪ್ರಶ್ನಿಸಿದರು, ಹೋಗಲಿಲ್ಲ. ವಿಶ್ವನಾಥ ದೇವಸ್ಥಾನವನ್ನು ಹರಿಜನರು ಪ್ರವೇಶಿಸುವುದೂ ಸರಿಯಲ್ಲವೆಂದರು. ಅವರ ವಿಚಾರಗಳು ಏನಿದ್ದವು ಎಂಬುದಕ್ಕೆ ಈ ಕೆಲ ಉದಾಹರಣೆಗಳು ಸಾಕು ಬಿಡಿ. ಇತ್ತ ಜಾತೀವಾದವನ್ನು ಮಂಡಿಸುವ ರಾಮ ರಾಜ್ಯ ಪರಿಷತ್ತಿನ ಸ್ವಾಮಿ ಕರಪಾತ್ರಿ, ಅತ್ತ ಅದನ್ನು ವಿರೋಧಿಸುವ ಗೋಳ್ವಾಲ್ಕರ್.

ಸ್ವಾಮಿ ಕರಪಾತ್ರಿಯವರ ಈ ವಿಚಾರ ವನ್ನು ಒಪ್ಪದ ಅವರದೇ ಪಕ್ಷದ ದೊಡ್ಡ ಗುಂಪು ೧೯೭೧ರಲ್ಲಿ ಜನಸಂಘದಲ್ಲಿ ವಿಲೀನವಾಯಿತು. ಸ್ವಾಮಿ ಕರಪಾತ್ರಿ ಮಾತ್ರ ತಮ್ಮ ಕೊನೆಯ ದಿನದವರೆಗೂ (೧೯೮೦) ತಮ್ಮ ಜಾತೀವಾದಕ್ಕೇ ಜೋತು ಬಿದ್ದಿದ್ದರು. ಸ್ವಾಮಿ ಕರಪಾತ್ರಿ ಸಂತರಾಗಿದ್ದರು, ಜತೆಗೆ ರಾಜಕಾರಣಿ ಕೂಡ. ೧೯೫೩ರಲ್ಲಿ ಜೋಷಿಮಠದ ಅಂದಿನ ಶಂಕರಾಚಾರ್ಯರಾದ ಬ್ರಹ್ಮಾನಂದರ ದೇಹತ್ಯಾಗವಾಯಿತು. ಆಗ ಅಲ್ಲಿನ ಪೀಠಾಧಿಪತಿ ಗಳಾಗುವಂತೆ, ಶಂಕರಾಚಾರ್ಯರಾಗುವಂತೆ ಸ್ವಾಮಿ ಕರಪಾತ್ರಿಯವರಲ್ಲಿ ಪ್ರಸ್ತಾಪಿಸಲಾಯಿತು.

ಸ್ವಾಮಿ ಕರಪಾತ್ರಿ ರಾಜಕಾರಣದಲ್ಲಿದ್ದುದರಿಂದ ಅದಕ್ಕೆ ಒಪ್ಪಲಿಲ್ಲ. ಆದರೂ ಅವರು ನಿರಂತರ ಪೀಠದ ಮಾರ್ಗದರ್ಶಕರಾಗಿ ಮುಂದುವರಿದರು. ಪೀಠಾಽಪತಿಗಳಿಗೆ ಎರಡನೇ ಗುರುವಾದರು. ೧೯೭೩ರಲ್ಲಿ ಜೋಷಿಮಠದ ಶಂಕರಾಚಾರ್ಯರಾದದ್ದು ಸ್ವಾಮಿ ಸ್ವರೂಪಾನಂದರು. ೨೦೨೨ರವರೆಗೂ ಅವರೇ ಶಂಕರಾಚಾರ್ಯರಾಗಿದ್ದರು. ಅವರ ಗುರುಸಮಾನ ಮಾರ್ಗ ದರ್ಶಕರಾಗಿದ್ದವರು ಸ್ವಾಮಿ ಕರಪಾತ್ರಿ. ಸ್ವರೂಪಾನಂದರೂ ತಮ್ಮ ಗುರುವಿನಂತೆ ಸಂಘವನ್ನು ವಿರೋಧಿಸಿದರು. ಅವರ ಬಳಿ ‘ಮೋದಿ ಹೇಗೆ?’ ಎಂದು ಕೇಳಿದರೆ ಮೈಕ್ ಕಿತ್ತೆಸೆದಿದ್ದರು.

ಸ್ವರೂಪಾನಂದರೂ ಗುರುವಿನ ದಾರಿಯಲ್ಲೇ ನಡೆದರು. ಗೋಳ್ವಾಲ್ಕರ್‌ರಿಂದ ಶುರುವಾಗಿ ಮೋದಿಯವರವರೆಗೆ ಸಂಘದ ಹಿನ್ನೆಲೆಯವರೆಲ್ಲ ರಾಮ ನನ್ನು ಐತಿಹಾಸಿಕ ಪುರುಷ ಎನ್ನುತ್ತಾರೆ, ಹಾಗಾಗಿ ರಾಮಮಂದಿರ ಮಂದಿರವಲ್ಲ, ಅದೊಂದು ಸ್ಮಾರಕ ಎಂದರು. ಈಗ ಸ್ವರೂಪಾನಂದರ ಶಿಷ್ಯ ಅವಿಮುಕ್ತೇಶ್ವರಾನಂದರ ಕಾಲ. ಅವರೇ ಇಂದು ರಾಮ ಮಂದಿರವನ್ನು ಅಶಾಸೀಯ ಎನ್ನುತ್ತಿರುವುದು, ಅಯೋಧ್ಯೆಯ ರಾಮಮಂದಿರದಲ್ಲಿ ಶೂದ್ರ ರೊಬ್ಬರನ್ನು ಪೂಜಾರಿಯಾಗಿ ನೇಮಕ ಮಾಡಿರುವುದನ್ನು ಅದೇ ಜಾತಿ ವಾದದ ಹಿನ್ನೆಲೆಯಲ್ಲಿ ವಿರೋಧಿಸುತ್ತಿರುವುದು.

ವಿರೋಧಿಸುತ್ತಿರುವ ಎರಡನೇ ಶಂಕರಾಚಾರ್ಯರು ಪುರಿಯ ಗೋವರ್ಧನ ಮಠದ ಸ್ವಾಮಿ ನಿಶ್ಚಲಾನಂದರು. ಅವರ ಮಾರ್ಗದರ್ಶಕ, ಗುರು ಸಮಾನರು ಕೂಡ ಸ್ವಾಮಿ ಕರಪಾತ್ರಿ. ಸನ್ಯಾಸಿಯೆಂದರೆ ಸರ್ವಸಂಗ ಪರಿತ್ಯಾಗಿ, ರಾಗ-ದ್ವೇಷ ವನ್ನು ಮೀರಿದವರು. ಆದರೆ ಇವರು ಪರಂಪರಾಗತ ದ್ವೇಷವನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆಯೇ? ಹೌದಾದರೆ ಈ ಯತಿವರ್ಯರ ನಡೆ ಸರಿಯೇ? ಇದು ಈಗಿನ ಪ್ರಶ್ನೆ. ಹಿಂದೂ ಧರ್ಮವನ್ನು ನಿರಂತರ ಕಾಡಿದ ದೊಡ್ಡ ಸಮಸ್ಯೆಯೆಂದರೆ ಆಂತರಿಕ ಒಡಕು. ಈ ಕಾರಣಕ್ಕೇ ಈ ಭವ್ಯ ನೆಲವನ್ನು ನೂರಾರು ವರ್ಷ ಅನ್ಯರು ಆಳಿದ್ದು, ಲೂಟಿ
ಹೊಡೆದದ್ದು, ದೋಚಿದ್ದು. ಇದೇ ಕಾರಣಕ್ಕೆ ಹಲವು ಬಾರಿ ಹಿಂದೂ ಧರ್ಮ ಸರ್ವನಾಶದ ಅಂಚಿಗೆ ಹೋಗಿ ನಿಂತದ್ದು.

ಹೀಗಿರುವಾಗ, ರಾಮಮಂದಿರ ಹಿಂದೂ ಏಕೀಕರಣಕ್ಕೊಂದು ಕಾರಣವಾಗಿರುವಾಗ, ಹಿಂದೆ ಹಿಂದುಗಳನ್ನು ಒಗ್ಗೂಡಿಸಿದ ಶಂಕರ ಪರಂಪರೆಯವರೇ ‘ಇದು ಶಾಸೋಕ್ತವಾಗಿಲ್ಲ, ದೇವಸ್ಥಾನ ಅಪೂರ್ಣ’ ಎಂದು ವಿರೋಧಿಸುವುದು ಸರಿಯೇ? ಇದು ರಾಜಕೀಯವೇ ಇರಬಹುದೇ? ಮೋದಿ ಲಾಭ ಪಡೆಯ ಲೆಂದೇ ಈಗ ಉದ್ಘಾಟಿಸುವುದೇ ಆಗಿರಲಿ, ಆದರೆ ಈ ಸಂದರ್ಭದಲ್ಲಿ ಮೊಸರಲ್ಲಿ ಕಲ್ಲು ಹುಡುಕುವಂತೆ ಒಂದು ಕಾರಣ ಕೊಡುವುದು ಎಷ್ಟು ಸಮಂಜಸ? ಅದೇಕೆ ಪುರಿ ಮತ್ತು ದ್ವಾರಕೆಯ ಎರಡೂ ಶಂಕರ ಪೀಠಗಳು ಹಿಂದೂ ಏಕೀಕರಣದ ಸ್ಥೂಲ ಚಿತ್ರಣವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಎಡವುತ್ತಿವೆ? ಇಷ್ಟಕ್ಕೂ ಮಠಮಾನ್ಯಗಳ ಆದ್ಯತೆ ಯಾವುದು, ಹಿಂದೂ ಧರ್ಮವೇ ಅಥವಾ ಪರಂಪರಾಗತ ರಾಗ-ದ್ವೇಷಗಳೇ? ಮೊದಲಿನಿಂದಲೂ ಹಾಗೆಯೇ.

ಹಿಂದೂ ಧರ್ಮದಲ್ಲಿ ಒಂದೊಂದು ಮಠದವರು ಒಂದೊಂದು ದಿಕ್ಕಿಗೆ. ಒಂದು ಮಠದ ವಿರುದ್ಧ ರಾಜಕೀಯ ಪಿತೂರಿಗಳಾದಲ್ಲಿ ಇನ್ನೊಂದು ಮಠ ಬಾಯಿಗೆ ಹೊಲಿಗೆ ಹಾಕಿ ಕೂತಿರುತ್ತದೆ. ಒಬ್ಬ ಸ್ವಾಮೀಜಿಯ ಮೇಲೆ ದಬ್ಬಾಳಿಕೆಯಾದಲ್ಲಿ, ಅದನ್ನು ವಿರೋಧಿಸಬೇಕೇ, ಬೇಡವೇ ಎಂದು ರಾಜಕಾರಣಿ ಗಳಂತೆ ಮಠಗಳೂ ಲೆಕ್ಕಾಚಾರ ಹಾಕುತ್ತವೆ. ಒಂದೇ ಜಾತಿ ವರ್ಗದಲ್ಲಿ ಎರಡು ಮಠಗಳಿದ್ದರೆ ಅಲ್ಲಿ ಭಕ್ತರದ್ದೇ ಎರಡು ಗುಂಪುಗಳಿರುತ್ತವೆ. ಅವರ ನಡುವೆಯೇ ಜಗಳ, ವೈಮನಸ್ಸು. ಇದೆಲ್ಲದರ ನಡುವೆ ಕೆಲವು ಕಪಟಿ, ದೇಶ ಬಿಟ್ಟು ಓಡಿಹೋಗುವ ಸನ್ಯಾಸಿಗಳು, ಸ್ವಾಮೀಜಿಗಳು. ಒಳ್ಳೆಯ ಸ್ವಾಮೀಜಿ ಗಳಿಲ್ಲವೆಂದಲ್ಲ.

ಬಹುತೇಕರು ನಿಜಾರ್ಥದಲ್ಲಿ ಸನ್ಯಾಸಿಗಳೇ. ಅರಿಷಡ್ವರ್ಗ ಹೊಂದಿರದ ಸ್ವಾಮೀಜಿಗಳೇ ಹೆಚ್ಚಿಗೆಯಿದ್ದಾರೆ. ನನಗೆ ಆ ಎಲ್ಲ ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದೆ. ಆದರೆ ಮಠಾಧಿಪತಿಗಳಿಗೂ ಅವರದೇ ಆದ ಕರ್ತವ್ಯವಿದೆ. ಅದನ್ನು ಮೀರಿದಾಗ ಅವರೂ ಪ್ರಶ್ನಾತೀತರಲ್ಲ. ನಾವು ಸೀತೆಯನ್ನು ಅನುಮಾನಿಸಿದ ರಾಮನನ್ನು ಪ್ರಶ್ನಿಸುತ್ತೇವೆ. ಅದೇ ರಾಮ ಮರೆಯಲ್ಲಿ ನಿಂತು ವಾಲಿಯನ್ನು ಕೊಂದಾಗಲೂ ಪ್ರಶ್ನೆಗೊಳಗಾಗುತ್ತಾನೆ. ಹಾಗಿರುವಾಗ ಮೇಲ್ನೋಟಕ್ಕೆ ಪರಂಪರಾಗತ ರಾಜಕೀಯ ದಂತೆ ಕಾಣುವ ಈ ಎರಡು ಪೀಠಗಳ ಶಂಕರಾಚಾರ್ಯರ ನಿಲುವನ್ನು ಪ್ರಶ್ನಿಸಲೇಬೇಕಲ್ಲವೇ?

Leave a Reply

Your email address will not be published. Required fields are marked *

error: Content is protected !!