Friday, 19th April 2024

ಹಿಂದುತ್ವದ ಪಕ್ಷಕ್ಕೆ ಮುಂದೇನು ?

ಪ್ರತಿನೋಟ

ಡಾ.ಆರ್‌.ಜಿ.ಹೆಗಡೆ

ramhegde62@gmail.com

ರಾಮಮಂದಿರದ ವಿರುದ್ಧವಿದ್ದ ಜನ ಕೋರ್ಟ್ ಆದೇಶದ ನಂತರ ಮಂದಿರದ ರಚನೆಯನ್ನು ತಣ್ಣಗೆ ಒಪ್ಪಿಕೊಂಡಂತಿದೆ. ಯಾವುದೇ ಪ್ರಚೋದನಕಾರಿ ಮಾತುಗಳು ಆ ಕಡೆಯಿಂದ ಬಂದಂತಿಲ್ಲ. ಕ್ರಿಯೆ ಇರದಲ್ಲಿ ಪ್ರತಿಕ್ರಿಯೆ ತೋರಿಸಲು, ಬೀದಿಗಿಳಿಯಲು ಮಾಸ್ ವ್ಯಕ್ತಿಗೆ ಆಸಕ್ತಿ ಇರುವುದಿಲ್ಲ.

ಭವ್ಯ ರಾಮ ಮಂದಿರ ಅಯೋಧ್ಯೆಯಲ್ಲಿ, ಅಲ್ಲೇ, ರಾಮ ಜನ್ಮ ಭೂಮಿಯಲ್ಲಿ ತಲೆಯೆತ್ತಿ ನಿಂತಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಅದ್ದೂರಿಯಾಗಿ ಮುಗಿದು ತಿಂಗಳಾಯಿತು. ಕಾರ್ಯಕ್ರಮ ಮೂಲತಃ ಧಾರ್ಮಿಕವಾದುದು. ಆದರೆ, ಅದು ಕೇವಲ ‘ಧಾರ್ಮಿಕ’ ವಾಗಿರಲಿಲ್ಲ.
ಕಾರ್ಯಕ್ರಮಕ್ಕೊಂದು ಭಾರೀ ಐತಿಹಾಸಿಕ, ರಾಜಕೀಯ, ಸಾಂಸ್ಕೃತಿಕ ಹಿನ್ನೆಲೆ ಇತ್ತು.

ಪ್ರಧಾನಿಯವರನ್ನೂ ಸೇರಿ ಹಲವರು ಬಾಯಿಬಿಟ್ಟೇ ಹೇಳಿರುವುದೆಂದರೆ ಪ್ರಾಣಪ್ರತಿಷ್ಠೆ ಒಂದು ಸಮುದಾಯದ ಶತಮಾನಗಳ ಕಾಲದ (ರಾಜಕೀಯ)
ಹೋರಾಟದ ಫಲ. ಒಂದು ಸಂಸ್ಕೃತಿ ತನ್ನ ಐತಿಹಾಸಿಕ ಅವಮಾನವನ್ನು ಕಳಚಿಕೊಂಡು ಅಸ್ತಿತ್ವವನ್ನು ಮರುಗಳಿಸಿಕೊಂಡ, ಮೆರೆದ ಸಂದರ್ಭ.
ಒಂದು ಅರ್ಥದಲ್ಲಿ ಒಂದು ಸಂಸ್ಕೃತಿ ತನ್ನದೇ ‘ಪ್ರಾಣ’ ಪ್ರತಿಷ್ಠಾಪನೆಯನ್ನು ಪುನಃ ಮಾಡಿಕೊಂಡ ಕ್ಷಣವೂ ಹೌದು. ಅಂದರೆ ಎಲ್ಲರೂ ಗಮನಿಸಿರುವ
ಹಾಗೆ ಕಾರ್ಯಕ್ರಮ ಅಪ್ಪಟ ಧಾರ್ಮಿಕವಾಗಿದ್ದರು ಕೂಡ ಅದೇ ಕಾಲಕ್ಕೆ ದೇಶದ ಸಾಂಸ್ಕೃತಿಕ ರಾಜಕೀಯದ ಯಶಸ್ಸಿನ ಉತ್ತುಂಗದ ಕ್ಷಣವೂ ಹೌದು.

ಏಕೆಂದರೆ, ದೇಶದ ಒಂದು ಪ್ರಮುಖ ರಾಜಕೀಯ ಪಕ್ಷ ರಾಮಮಂದಿರ ಕಟ್ಟುವುದನ್ನು ತನ್ನ ಮುಖ್ಯಅಜೆಂಡಾವನ್ನಾಗಿಸಿಕೊಂಡಿತ್ತು. ಎಂಬತ್ತರ
ದಶಕದಿಂದ ತನ್ನ ರಾಜಕೀಯವನ್ನು ಅದು ರಾಮಮಂದಿರದ ಸುತ್ತಲೇ ಕಟ್ಟಿಕೊಂಡಿತ್ತು. ರಾಮಮಂದಿರ ಹೋರಾಟವೇ ಪಕ್ಷದ ‘ಹಿಂದುತ್ವ’ ದ ಕೇಂದ್ರ ಬಿಂದು. ಮಂದಿರ ವಿಷಯದ ಮೇಲೆಯೇ ಅದು ರಾಷ್ಟ್ರೀಯತೆಯನ್ನೂ ವ್ಯಾಖ್ಯಾನಿಸಿದ್ದು. ದೇಶದ ಪ್ರಮುಖ ರಾಜಕೀಯ ಶಕ್ತಿಯಾಗಿ ಹಲವು ರಾಜ್ಯಗಳಲ್ಲಿ, ಕೇಂದ್ರದಲ್ಲಿ ಅದು ಅಧಿಕಾರಕ್ಕೆ ಬಂದದ್ದೂ ಇದೇ ಕಾರಣಕ್ಕೆ. ಸಹಜವಾಗಿ ಅದು ಈ ಕಾರ್ಯಕ್ರಮವನ್ನು ಸೆಲೆಬ್ರೇಟ್ ಮಾಡಿತು.

ಮಂದಿರ ರಾಜಕೀಯದ ತೀವ್ರತೆ ಹೇಗಿದೆಯೆಂ ದರೆ ದೇಶದ ಇನ್ನೊಂದು ಪ್ರಮುಖ ರಾಷ್ಟ್ರೀಯ ಪಕ್ಷ ಕಾರ್ಯಕ್ರಮದಲ್ಲಿ ಭಾಗವಹಿಸಲೇ ಇಲ್ಲ. ಏಕೆಂದರೆ ಆರಂಭದಿಂದಲೂ (ಒಂದು ರೀತಿಯಲ್ಲಿ ಅನಿವಾರ್ಯವಾಗಿ) ‘ಮಂದಿರ’ವನ್ನು ಅದು ವಿರೋಧಿಸುತ್ತಲೇ ಬಂದಿತ್ತು. ಏಕೆಂದರೆ ರಾಜಕೀಯವಾಗಿ, ಅದರಲ್ಲೂ ವಿಶೇಷವಾಗಿ ಉತ್ತರ ಭಾರತದಲ್ಲಿ ಇದೇ ವಿಷಯ ಅದರ ಅವನತಿಗೆ ಕಾರಣವಾಗಿದ್ದು. ಒಂದೊಮ್ಮೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ತನಗೆ ಈಗಿರುವ ವೋಟ್ ಬ್ಯಾಂಕ್ ಸಹ ಕೈಬಿಟ್ಟುಹೋಗಬಹುದು ಎಂಬ ಭಯದಿಂದ ಅದುದೂರ ಉಳಿಯಿತು.

ಇನ್ನು ಮಂದಿರಕ್ಕಾಗಿ ಹೋರಾಡಿದವರಿಗೆ ಇದೀಗ ನಿರುಮ್ಮಳದ ಭಾವನೆ ಬಂದಿರಬೇಕು. ವಿಶೇಷವಾಗಿ ಕಳೆದ ಐವತ್ತು ವರ್ಷಗಳಿಂದ ದೇಶದ ರಾಜಕೀಯ ವನ್ನು ಆವರಿಸಿಕೊಂಡಿದ್ದ ಒಂದು ಮಹತ್ವದ ಅಜೆಂಡಾಕ್ಕೆ, ಆ ಕುರಿತಾದ ಹೋರಾಟಕ್ಕೆ ಈಗ ತೆರೆಬಿದ್ದಿದೆ. ಇಲ್ಲಿ ಉದ್ಭವಿಸುವ ಮಹತ್ವದ ಪ್ರಶ್ನೆ ಎಂದರೆ ದೇಶದ ರಾಜಕೀಯ ಮುಂದೆ ಯಾವ ದಾರಿಯನ್ನು ತೆಗೆದುಕೊಳ್ಳುತ್ತದೆ ಎನ್ನುವುದು. ಹಲವು ಸಾಧ್ಯತೆಗಳಿವೆ. ಮೊದಲು ಮಂದಿರ ಕಟ್ಟುವುದನ್ನೇ ತನ್ನ ಮುಖ್ಯ ಅಜೆಂಡಾ ಆಗಿಸಿಕೊಂಡ ಭಾರತೀಯ ಜನತಾ ಪಕ್ಷದ ಕೋನದಿಂದ ವಿಷಯವನ್ನು ನೋಡೋಣ. ಈ ಐತಿಹಾಸಿಕ ಘಟನೆಯ ನಂತರ ಜನರ ನೆನಪಿನಿಂದ ಹಿಂದುತ್ವದ ರಾಜಕೀಯ ಹಿಂದಾಗುತ್ತ ಹೋಗಬಹುದು.

‘ಹೇಗೂ ಮಂದಿರ ಆಯಿತಲ್ಲ’ ಎನ್ನುವ ಭಾವನೆಗೆ ಹಿಂದುತ್ವದ ಮಾಸ್ ಬೆಂಬಲಿಗರು ಬಂದುಬಿಡಬಹುದು. ಏಕೆಂದರೆ ಸಾಧಾರಣವಾಗಿ ಇಂಥ ‘ಮಾಸ್’ ಒಂದೇ ವಿಷಯವನ್ನೇ ಮಾತನಾಡುತ್ತ, ‘ಹಳೆ ಹುಳಿಮಜ್ಜಿಗೆ ಕಡೆಯುತ್ತ’ ಕುಳಿತುಕೊಳ್ಳಲು ಬಯಸುವುದಿಲ್ಲ. ಇವರಿಗೆ ಹೊಸ ಹೊಸ ಸಂಗತಿಗಳ ಮಾತು ಬೇಕು. ರೋಮಾಂಚನ ಬೇಕು. ಬಹುತೇಕ ಸಾಧಾರಣ ವ್ಯಕ್ತಿಗಳಿಗೆ ರಾಜಕೀಯವೂ ಒಂದು ಮನರಂಜನೆ. ಹಾಗಾಗಿಯೇ ಉತ್ತರ ಕೋರಿಯಾದ ಕಿಮ್ ಜಾಂಗ್ ಉನ್‌ನಂಥವರು ಜನಪ್ರಿಯ ನಾಯಕರಾಗಿ ಹೋಗುವುದು. ಜೀವನಕ್ಕೆ ಎಕ್ಸೈಟ್‌ಮೆಂಟ್ ತರುವ ವಿಷಯ ರಾಜಕೀಯ. ಕಳೆದ ಬಾರಿ ಬಹಳ ಜನಪ್ರಿಯವಾಗಿದ್ದ ವಿಷಯ ಈ ಬಾರಿಯೂ ಪ್ರಸ್ತುತವೇ ಆಗಿದ್ದರೂ ಸಪ್ಪೆಯೆನಿಸುತ್ತದೆ. ವಿಚಾರ ಎಷ್ಟೇ ಗಟ್ಟಿಯಾಗಿದ್ದರು ಕೂಡ ಜನ ಅದನ್ನು ಮರೆತುಬಿಡಬಹುದು. ಆಸಕ್ತಿ ತೆಗೆದುಕೊಳ್ಳದೇ ಇರಬಹುದು.

ಬೇರೆ ಬೇರೆ ಕಡೆ ಇದೇ ರೀತಿಯ ಪ್ರಕರಣಗಳನ್ನು ಕೆದಕುವ ಪ್ರಯತ್ನಗಳಿಗೆ ‘ಮಾಸ್ ಹಿಂದುತ್ವದ’ ಬೆಂಬಲ ಬಾರದೆಯೇ ಹೋಗಿಬಿಡುವ ಸಾಧ್ಯತೆ ಇದೆ. ಏಕೆಂದರೆ ಸಾಧಾರಣ ಮನುಷ್ಯನಿಗೆ ಕೊನೆಗೂ ಬೇಕಿರುವುದು ಒಂದು ರೀತಿಯ ದೈನಂದಿನ ಜೀವನ. ಬಲವಾದ ಭಾವನಾತ್ಮಕ, ನಾಟಕೀಯ, ಸಾಹಸ ಮಯ ವಿಷಯವಿದ್ದರೆ ಮಾತ್ರ ಜನ ಮನೆಯಿಂದ ಹೊರ ಬಂದು ಬೆಂಬಲಿಸುತ್ತಾರೆ. ಇಲ್ಲವಾದರೆ ಹೊರಬೀಳುವುದಿಲ್ಲ. ರಾಮಮಂದಿರವನ್ನು ಪ್ರತಿಷ್ಠಾಪಿಸಿದ ರಾಜಕೀಯ ಕ್ರೆಡಿಟ್ ಪಕ್ಷಕ್ಕೆ ಸಿಗುವುದರಲ್ಲಿ ಸಂಶಯವಿಲ್ಲ. ಬರಲಿರುವ ಚುನಾವಣೆಯ ಮೇಲೆ ಈ ಸಂಗತಿ ಭಾರಿ ಪ್ರಭಾವ ಬೀರುವುದು ಸತ್ಯವೇ. ಆದರೆ ಆ ಕ್ರೆಡಿಟ್ ಎಷ್ಟು ಮುಂದೆ, ಎಷ್ಟು ದಿನಗಳ, ವರ್ಷಗಳ ತನಕ ಮುಂದುವರಿಯುತ್ತದೆ ಎನ್ನುವುದನ್ನು ಹೇಳಲಾಗುವುದಿಲ್ಲ.

ಅಲ್ಲದೆ ಇನ್ನೊಂದು ವಿಷಯ. ಮಂದಿರ ದೇಶದ ಹಿಂದುಗಳನ್ನು ಬಹಳ ಮಟ್ಟಿಗೆ ಒಂದುಗೂಡಿಸಿತು ನಿಜ. ಆದರೆ ಏಕತೆ ಹಾಗೇ ಉಳಿಯುತ್ತದೆ
ಎನ್ನಲಾಗುವುದಿಲ್ಲ. ಏಕೆಂದರೆ ಹಿಂದೂ ಧರ್ಮ ಮೋನೋಲಿಥಿಕ್ ಆದ ಅಂದರೆ ಒಂದು ಪ್ರವಾದಿ, ಒಂದು ತತ್ವ ಹಾಗೂ ಒಂದೇ ರೀತಿಯ ಸೂತ್ರ ಗಳನ್ನು ಹೊಂದಿದ ಏಕಶಿಲೆಯಂತಹ ಧರ್ಮವಲ್ಲ. ಹಿಂದೂ ಧರ್ಮದೊಳಗೇ ಇರುವ ವಿಭಿನ್ನ ಪರಂಪರೆಗಳು ಅದನ್ನು ಏಕಶಿಲೆಯನ್ನಾಗಿಸಲು ಬಿಡುವುದಿಲ್ಲ. ಪರಕೀಯ ಹಾಗೂ ತನ್ನ ಎನ್ನುವ ವಿಷಯ ಬಂದಾಗ ಅದು ಒಂದಾಗಬಹುದು ನಿಜ. ಆದರೆ ಅಂತಹ ಒಂದಾಗುವಿಕೆ ಗಟ್ಟಿಯಾಗಿ ನಿಂತೇ
ಬಿಡುತ್ತದೆ ಎಂದು ಹೇಳಲಾಗುವುದಿಲ್ಲ. ಉತ್ತರ ಭಾರತದಲ್ಲಿ ಎಲ್ಲ ವರ್ಗಗಳು ಒಂದಾಗಿರಬಹುದು. ಅಲ್ಲಿ ಶ್ರೀರಾಮ ಭಾವನಾತ್ಮಕ ವಿಷಯ. ಆದರೆ
ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹಿಂದೂ ಧರ್ಮದ ಬೇರೆ ಬೇರೆ ವರ್ಗಗಳ ಹಿಂದೂ ನಾಯಕರೇ ರಾಮ ಮಂದಿರದ ಕುರಿತು ಅಪಸ್ವರವೆತ್ತಿದ್ದು
ನಮಗೆ ಗೊತ್ತಿದೆ.

ಇನ್ನೂ ಒಂದು ವಿಷಯ ಗಮನಿಸಬೇಕು. ರಾಮಮಂದಿರದ ವಿರುದ್ಧವಿದ್ದ ಜನ ಕೋರ್ಟ್ ಆದೇಶದ ನಂತರ ಮಂದಿರದ ರಚನೆಯನ್ನು ತಣ್ಣಗೆ
ಒಪ್ಪಿಕೊಂಡಂತಿದೆ. ಯಾವುದೇ ಪ್ರಚೋದನಕಾರಿ ಮಾತುಗಳು ಆ ಕಡೆಯಿಂದ ಬಂದಂತಿಲ್ಲ. ಕ್ರಿಯೆ ಇರದಲ್ಲಿ ಪ್ರತಿಕ್ರಿಯೆ ತೋರಿಸಲು, ಬೀದಿಗಿಳಿ
ಯಲು ಮಾಸ್ ವ್ಯಕ್ತಿಗೆ ಆಸಕ್ತಿ ಇರುವುದಿಲ್ಲ. ಹೀಗಾಗಿ ಮಾಸ್ ಹಿಂದೂ ಹೇಗೂ ಆಯಿತಲ್ಲ ಎಂದುಕೊಂಡು ತೃಪ್ತಿಯ ಭಾವನೆ ತಳೆದುಬಿಡಬಹುದು.
ಇನ್ನೂ ಒಂದು ವಿಷಯ. ಏನೆಂದರೆ ಯಾವುದೇ ಧರ್ಮದ, ಜನಾಂಗದ ಜನ ಒಂದು ಹಂತದ ಆರ್ಥಿಕತೆಯನ್ನು ಮೀರಿದಾಗ ಅವರಿಗೆ ಧರ್ಮಕ್ಕಿಂತಲೂ
ತಮ್ಮ ಆರ್ಥಿಕತೆ ಮತ್ತು ಜೀವನವನ್ನು ಎಂಜಾಯ್ ಮಾಡಬೇಕೆಂಬ ಬಯಕೆಯೇ ಪ್ರಮುಖವಾಗಿ ಹೋಗುತ್ತದೆ.

ಅಂದರೆ ಧರ್ಮ ಎರಡನೆಯ ಸ್ಥಾನಕ್ಕೆ ತಳ್ಳಲ್ಪಟ್ಟು ಒಂದನೆಯ ಸ್ಥಾನವನ್ನು ಆರ್ಥಿಕತೆ ತೆಗೆದುಕೊಳ್ಳುತ್ತದೆ. ನಮ್ಮ ದೇಶದಲ್ಲಿ ರಾಮ ಮಂದಿರ ಹೋರಾಟದಲ್ಲಿ ವಿಶೇಷವಾಗಿ ಸಕ್ರಿಯವಾಗಿ ಭಾಗವಹಿಸಿದವರು ಹೋರಾಡಿದವರು, ಉತ್ತರ ಭಾರತದವರು ಮತ್ತು ಒಂದು ಆರ್ಥಿಕ ಗೆರೆಯ ಮೇಲಿನವರು. ಹಾಗೆಂದು ಕೆಳಗಿನವರು ಭಾಗವಹಿಸಲಿಲ್ಲ ಎಂದೇನೂ ಅರ್ಥವಲ್ಲ. ಈ ವರ್ಗ ಈಗ ವಿಷಯ ಮುಗಿಸಿ ತನ್ನ ದಾರಿಯಲ್ಲಿ ಹೋಗಿಬಿಡ ಬಹುದು. ಹಾಗಾಗಿ, ಈ ಚುನಾವಣೆಯಲ್ಲಿ ರಾಮಮಂದಿರದ ವಾತಾವರಣ ಆ ಪಕ್ಷಕ್ಕೆ ಲಾಭ ತಂದರೂ ಮುಂದಿನ ದಿನಗಳಲ್ಲಿ ತನ್ನ ರಾಜಕೀಯವನ್ನು ಹೇಗೆ ಕಟ್ಟಿಕೊಳ್ಳುತ್ತದೆ ಎನ್ನುವುದು ತುಂಬ ಕುತೂಹಲದ ಪ್ರಶ್ನೆ. ಅಲ್ಲದೆ ರಾಮಮಂದಿರ ಅಷ್ಟೇ ಅಲ್ಲ.

ಧರ್ಮದ ಲೇಪನವಿದ್ದ ಇತರ ಹಲವು ಮಹತ್ವದ ರಾಜಕೀಯ ವಿಷಯಗಳು ಆರ್ಟಿಕಲ್ ೩೭೦, ತ್ರಿವಳಿ ತಲಾಕ್ ಕೂಡ ಮುಗಿದು ಹೋಗಿವೆ. ಸಿಎಎ
ಅಂತಹ ದೊಡ್ಡ ವಿಷಯವಲ್ಲ. (ಉಳಿಯುವುದು ಸಮಾನ ನಾಗರಿಕ ಸಂಹಿತೆ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವುದು ಮಾತ್ರ) ಗಮನಿಸಬೇಕು; ಬಹಳ ವರ್ಷಗಳಿಂದ ಕುದಿಯುತ್ತಿದ್ದ ಹಲವು ವಿಷಯಗಳು ಈಗ ಶಾಂತವಾಗಿ ಹೋಗಿವೆ. ಬಹುಶಃ ಜನರ ಮನಸ್ಸಿನಿಂದ ಮರೆಯಾಗಿ ಹೋಗಿದ್ದರೂ ಇರಬಹುದು. ಈಗ ಇಲ್ಲಿ ಸಹಜವಾಗಿ ಬರುವ ಪ್ರಶ್ನೆ ಆ ಪಕ್ಷ ತನ್ನ ಮುಂದಿನ ಇಪ್ಪತ್ತೈದು ವರ್ಷಗಳ ರಾಜಕೀಯವನ್ನು
ಯಾವ ಯಾವ ವಿಷಯಗಳ ಸುತ್ತಮುತ್ತ ಕಟ್ಟಿಕೊಳ್ಳುತ್ತದೆ ಎನ್ನುವುದು. ತನ್ನ ಸಾಂಸ್ಕೃತಿಕ ರಾಜಕೀಯಕ್ಕೆ ಹೊಸ ಯಾವ ಯಾವ ಜನಪ್ರಿಯ
ಆಯಾಮಗಳನ್ನು ಸೇರಿಸಬಹುದು ಎನ್ನುವುದು.

ಪಕ್ಷ ಈಗಾಗಲೇ ಭ್ರಷ್ಟಾಚಾರ ರಹಿತ ಆಡಳಿತ, ಅಭಿವೃದ್ಧಿಯ ರಾಜಕೀಯ ಮತ್ತು ರಾಷ್ಟ್ರೀಯತೆಯ ರಾಜಕೀಯ ಇವುಗಳನ್ನು ಕೂಡ ತನ್ನ ಅಜೆಂಡಾ ದಲ್ಲಿ ಕೂಡಿಸಿಕೊಂಡಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಮರಳಿ ತೆಗೆದುಕೊಳ್ಳುವ ಮಾತನಾಡಿದೆ. ರಾಷ್ಟ್ರೀಯತೆಯ ರಾಜಕೀಯದ ಭಾಗವಾಗಿ ಅದನ್ನು ಪಕ್ಷ ಮುಂದುವರಿಸಬಹುದು. ಆದರೆ ಇವಿಷ್ಟೇ ಸಾಲಲಿಕ್ಕಿಲ್ಲ. ಹಾಗಾಗಿ ಪ್ರಶ್ನೆಯಿರುವುದು ಹಿಂದುತ್ವ ರಾಜಕೀಯದ ಅಥವಾ ಸಾಂಸ್ಕೃತಿಕ ರಾಜಕೀಯದ ಭಾಗವಾಗಿ ಪಕ್ಷ ಬೇರೆ ಯಾವ ವಿಷಯಗಳನ್ನು ದೇಶದ ಮುಂದಿಡಬಹುದು ಎನ್ನುವುದು.

ಏಕೆಂದರೆ ಮೂಲತಃ ಪಕ್ಷಕ್ಕೆ ದಟ್ಟವಾದ ‘ಹಿಂದುತ್ವ’ದ ಬಣ್ಣವಿದೆ ಮತ್ತು ಆ ಬಣ್ಣವನ್ನು ಬಿಟ್ಟುಕೊಡಲು ಅದು ಬಯಸುವುದಿಲ್ಲ. ಬಿಡಲು
ಸಾಧ್ಯವೂ ಇಲ್ಲ. ಬಿಟ್ಟುಕೊಟ್ಟರೆ ಅದಕ್ಕೂ ಅಸ್ತಿತ್ವವಾದಿ ಸಮಸ್ಯೆ ಅಂದರೆ ಮೂಲಭೂತವಾಗಿ ಪಕ್ಷದ ಗುರುತು ಏನು ಎನ್ನುವ ಗೊಂದಲ ಆರಂಭ ವಾಗುತ್ತದೆ. ಹಾಗಾಗಿ ಭವಿಷ್ಯದಲ್ಲಿ ಅಂದರೆ ಈ ಚುನಾವಣೆಯ ಬಳಿಕ ಮುಂದೆ ಅದು ಹಿಂದುತ್ವವನ್ನು ಹೇಗೆ ವಿಸ್ತರಿಸಿ ಹೆಚ್ಚು ಜನಪ್ರಿಯವಾಗುವಂತೆ ಮಾಡಬಹುದು ಎನ್ನುವುದು ತುಂಬ ಕುತೂಹಲದ ವಿಷಯ. ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಹೇಳುವಂತೆ ಮೋದಿಯವರ ನಂತರ ಆ ಪಕ್ಷದಿಂದ ಬರುವ ಪ್ರಧಾನಿ ಅಭ್ಯರ್ಥಿಗಳು ಇನ್ನೂ ಹೆಚ್ಚು ‘ಉಗ್ರವಾಗಿ’ ಹಿಂದುತ್ವ ರಾಜಕೀಯವನ್ನು ಅಪ್ಪಿಕೊಳ್ಳಬೇಕಾಗುತ್ತದೆ; ಇರಬಹುದು. ಆದರೆ ಅವರು ಯಾವ ಯಾವ ಹೊಸ ಹಿಂದುತ್ವದ ಜನಪ್ರಿಯ ವಿಷಯಗಳನ್ನು ಎತ್ತಬಹುದು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.

ಏಕೆಂದರೆ ಆ ವಿಷಯದ ಮೇಲೆ ಪಕ್ಷದ ದೀರ್ಘಕಾಲದ ಭವಿಷ್ಯ ನಿಂತಿದೆ. ಹಾಗೆಯೇ ಪ್ರಮುಖ ರಾಷ್ಟ್ರೀಯ ಪ್ರತಿಪಕ್ಷ ಕಾಂಗ್ರೆಸ್ ಮುಂದೆ ಕೂಡ ಸವಾಲುಗಳಿವೆ. (ಆ ಪಕ್ಷ ಈಗ ತೊಂದರೆಯಲ್ಲಿರಬಹುದು. ಆದರೆ ಅದು ಮುಗಿದು ಹೋಗಬಹುದಾದ ಪಕ್ಷವೇನೂ ಅಲ್ಲ .) ಮುಖ್ಯ ಸವಾಲು ಹೆಚ್ಚೂ ಕಡಿಮೆ ಉತ್ತರ ಭಾರತ ದಲ್ಲಿ ಹಿಂದೂ ಸಮುದಾಯ ಪಕ್ಷವನ್ನು ಬಿಟ್ಟು ಹೋಗಿರುವಂತೆ ಅನಿಸುತ್ತಿರುವುದು. ಅದನ್ನು ಮರಳಿ ಪಡೆಯಲು ಪಕ್ಷ ಏನು ಪ್ರಯತ್ನ ಮಾಡುತ್ತದೆ, ಮಾಡಬಹುದು ಎನ್ನುವುದು ದೊಡ್ಡ ಪ್ರಶ್ನೆ. ಅದರ ಇನ್ನೊಂದು ಸಮಸ್ಯೆಯೆಂದರೆ ಪ್ರಾದೇಶಿಕ ಪಕ್ಷಗಳು ಮತ್ತು ಅದು ಹೆಚ್ಚೂ ಕಡಿಮೆ ಒಂದೇ ವೋಟ್ ಬ್ಯಾಂಕ್ ಅನ್ನು ಹಂಚಿಕೊಳ್ಳಬೇಕಾಗಿರುವುದು. ಇದು ಪ್ರಾದೇಶಿಕ ಪಕ್ಷಗಳಿಗೂ ಚೆನ್ನಾಗಿ ಗೊತ್ತಿದೆ. ಹಾಗಾಗಿ ಅವು ಕಾಂಗ್ರೆಸ್ ಅನ್ನು ಬೆಳೆಯಲು ಬಿಡುವುದಿಲ್ಲ.

ಈಗಾಗಲೇ ಮಮತಾ ಬ್ಯಾನರ್ಜಿ ಈ ಕುರಿತು ಸ್ಪಷ್ಟವಾದ ನಿಲುವು ತೆಗೆದುಕೊಂಡು ಬಿಟ್ಟಿದ್ದಾರೆ. ಅಖಿಲೇಶ್ ಯಾದವ್ ಕೂಡ ಹೇಳಿಬಿಟ್ಟಿದ್ದಾರೆ. ಉತ್ತರದಲ್ಲಿ ತೊಂದರೆಯಲ್ಲಿರುವ ಹಾಗೂ ಪ್ರಾದೇಶಿಕವಾಗಿ ಪ್ರಾದೇಶಿಕ ಪಕ್ಷಗಳ ಜತೆ ಹೋರಾಡಬೇಕಿರುವ ಅದರ ಮುಂದೆ ಈಗಿರುವ ಪ್ರಶ್ನೆ ಬೃಹತ್ತಾದ ಹಿಂದೂ ಮಧ್ಯಮ ವರ್ಗದ ಮನಸ್ಸನ್ನು ಗೆಲ್ಲುವುದು ಹೇಗೆ ಎನ್ನುವುದು. ಹಾಗೆಯೇ ಇರುವ ಪ್ರಶ್ನೆ ಪ್ರಾದೇಶಿಕ ಪಕ್ಷಗಳ ಜತೆ ಹಂಚಿಹೋಗುವ ಅಲ್ಪ ಸಂಖ್ಯಾತ ಮತಗಳನ್ನು ತಾನು ಹೇಗೆ ಸೆಳೆಯುವುದು ಎನ್ನುವುದು. ಮುಂದಿನ ಇಪ್ಪತ್ತೈದು ವರ್ಷಗಳಿಗಾಗಿ ತನ್ನ ರಾಜಕೀಯವನ್ನು ಹೇಗೆ ಕಟ್ಟಿಕೊಳ್ಳು ವುದು? ರಾಮಮಂದಿರ ದೇಶದ ಪ್ರಮುಖ ಎರಡು ರಾಜಕೀಯ ಪಕ್ಷಗಳ ಮುಂದೆ ಹೊಸ ಸವಾಲುಗಳನ್ನು ತಂದಿಟ್ಟಿದೆ.

Leave a Reply

Your email address will not be published. Required fields are marked *

error: Content is protected !!