Saturday, 23rd November 2024

ಕಸವೇ ಮಾನವ ಅಸ್ತಿತ್ವದ ಕುರುಹಾಗಬಹುದೇ ?

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

ಒಂದು ಹಾಲಿನ ಕ್ಯಾನ್ ಒಂದು ತಿಂಗಳಲ್ಲಿ ಅಟ್ಲಾಂಟಿಕ್ ಸಮುದ್ರವನ್ನು ದಾಟಿ ಮಲೇಶಿಯಾಗೆ ತಲುಪಿ, ಅಲ್ಲಿ ಸ್ವಲ್ಪ ದಿನವಿದ್ದು, ಮೂರು ತಿಂಗಳ ನಂತರ ನೈಜೆರಿಯಾ ತಲುಪಿತ್ತು. ಇನ್ನೊಂದು ಕ್ಯಾನ್ ನಾಲ್ಕು ದೇಶಗಳ ಬಂದರುಗಳಲ್ಲಿ ಕೆಲಕಾಲ ಕಳೆದು, ಚೀನಾ ತಲುಪಿತ್ತು.

ಆ ದಿನ ನಮ್ಮೂರಿನಿಂದ ಕೆಲ ಹುಡುಗರು ಊರಿನ ಸಮಸ್ಯೆಯೊಂದನ್ನು ಹೊತ್ತು ಬೆಂಗಳೂರಿಗೆ ಬಂದಿದ್ದರು. ಹೇಗಾದರೂ ಮಾಡಿ ಮುಖ್ಯಮಂತ್ರಿಯನ್ನು ಭೆಟ್ಟಿಯಾಗಿಯೇ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಎಂದು ಗಟ್ಟಿಯಾಗಿ ನಂಬಿದ್ದರು. ಕುಮಟಾದಿಂದ ನಮ್ಮೂರು ಹತ್ತು ಕಿಲೋಮೀಟರ್. ಕುಮಟಾ ಕರಾವಳಿ. ಅಲ್ಲಿಂದ ನಮ್ಮೂರಿಗೆ ಹೋಗಬೇಕೆಂದರೆ ವಾಹನ ಒಂದು ಗುಡ್ಡ ಹತ್ತಬೇಕು. ಎತ್ತರದ ಸಮತಟ್ಟಿನಲ್ಲಿ ಸುಮಾರು ಎಂಟು ಕಿಲೋ ಮೀಟರ್ ಹೋಗಿ ಕೆಳಕ್ಕಿಳಿದರೆ ಅದು ಮೂರೂರು.

ಮೂರೂರಿನಿಂದ ಪಶ್ಚಿಮ ಘಟ್ಟ ಶುರು. ಪಶ್ಚಿಮಘಟ್ಟ ಕರಾವಳಿಯ ತೀರಾ ಹತ್ತಿರಕ್ಕೆ ಬರುವುದು ಕುಮಟಾದಲ್ಲಿ. ಉತ್ತರ ಕನ್ನಡದ ಕುರಿತು ಹೇಳುತ್ತ ಚುಟುಕು ಬ್ರಹ್ಮ ದಿನಕರ ದೇಸಾಯಿ ‘ಒಂದು ಕಡೆ ಸಹ್ಯಾದ್ರಿ ಒಂದು ಕಡೆ ಕಡಲು’ ಎಂದಿದ್ದರು. ಅದು ಉತ್ತರ ಕನ್ನಡಲ್ಲಿಯೇ ಹೆಚ್ಚು ಲಾಗುವಾಗುವ ಊರೆಂದರೆ ಕುಮಟಾ – ಮೂರೂರು. ಇಂತಹ ಕುಮಟಾ ತಾಲೂಕಿನ ಆಡಳಿತಕ್ಕೆ ಪರಿಹರಿಸಲು ಅಸಾಧ್ಯವಾದ ಸಮಸ್ಯೆಯೆಂದರೆ ಊರಿನ ಕಸ ವಿಲೇ ವಾರಿ- ಕಸವನ್ನು ಎಲ್ಲಿ ಹಾಕುವುದೆಂದು. ಒಂದೋ ಸಮುದ್ರಕ್ಕೆ ಎಸೆಯಬೇಕು ಇಲ್ಲವೇ ಪಶ್ಚಿಮ ಘಟ್ಟದಲ್ಲಿ ಎಸೆಯಬೇಕು.

ಎರಡೂ ಕಡೆ ಹಾಕಲು ಊರಿನ ಕಾನೂನು ಒಪ್ಪುವುದಿಲ್ಲ. ಹಾಗಾಗಿ ಕುಮಟಾ ನಗರ ಸಭೆ ಕಸವನ್ನು ಮೂರೂರು ಗುಡ್ಡದ ಮೇಲೆ ಎಸೆಯಲು ಶುರು ಮಾಡಿತ್ತು. ಇಡೀ ತಾಲೂಕಿನ ಕಸ ಎಸೆಯಲು ಘಟ್ಟದ ಸಮತಟ್ಟು ಜಾಗ ಬಿಟ್ಟರೆ ಬೇರಿನ್ನೊಂದು ಇರಲಿಲ್ಲ. ಆದರೆ ಹಾಗೆ ಘಟ್ಟದ ಬಯಲಿನಲ್ಲಿ ಕಸ, ಪ್ಲಾಸ್ಟಿಕ್ಕುಗಳನ್ನು ಎಸೆದರೆ ಅದು ಗಾಳಿಗೆ ಹಾರಿ ಬರುತ್ತಿದ್ದುದು ಇನ್ನೊಂದು ಮಗ್ಗುಲಿನ ನಮ್ಮೂರಿಗೆ. ಅಲ್ಲಿಂದ ಅಘನಾಶಿನಿ ನದಿಯ ಮೂಲಕ ಸಮುದ್ರವನ್ನೇ ಸೇರಬೇಕು. ಕುಮಟಾದಿಂದ ನಮ್ಮೂರಿಗೆ ಹೋಗುವ ದಾರಿಯೇ ಗಬ್ಬೆದ್ದು ನಾರುತ್ತದೆ. ಇದೇ ಪುಕಾರನ್ನು ಅಂದು ನಮ್ಮೂರ ಹುಡುಗರು ಮುಖ್ಯಮಂತ್ರಿಗೆ ತಿಳಿಸಲು ಬಂದಿದ್ದರು. ಅದಕ್ಕಿಂತ ಮೊದಲು ಡಿಸಿ, ಎಮಎಲಎ ಇವರಾರಿಂದಲೂ ಪರಿಹಾರ ಸಿಕ್ಕಿರಲಿಲ್ಲ.

ಅಂತೂ ಮುಖ್ಯಮಂತ್ರಿ ಭೆಟ್ಟಿಯಾಗಿ ಕಸದ ಸಮಸ್ಯೆ ಹೇಳಿದ್ದಾಯಿತು. ಮುಖ್ಯಮಂತ್ರಿ ಅಲ್ಲಿನ ಶಾಸಕರಿಗೆ, ಡಿಸಿಗೆ ಫೋನ್ ಮಾಡಿ ವಿಚಾರಿಸಲಾಗಿ ಇದೊಂದು ಬಗೆಹರಿಸಲು ಸಾಧ್ಯವೇ ಇಲ್ಲದ ಸಮಸ್ಯೆ ಎನ್ನುವುದು ತಿಳಿಯಿತು. ಏನೋ ಒಂದು ಪರಿಹರಿಸುತ್ತೇನೆ ಎಂದು ಮುಖ್ಯಮಂತ್ರಿಗಳು ನಮ್ಮನ್ನೆಲ್ಲ
ಸಾಗುಹಾಕಿದರು. ಸಮಸ್ಯೆ ಹಾಗೆಯೇ ಮುಂದಿವರಿಯಿತು. ಇದು ನಮ್ಮೂರಿನ ಸಮಸ್ಯೆ ಒಂದೇ ಅಲ್ಲ. ನೀವು ಕಲಘಟಗಿಯಿಂದ ಹುಬ್ಬಳ್ಳಿಗೆ ಹೋಗುವಾಗ ಬಸ್ಸಿನಲ್ಲಿ ನಿದ್ರೆ ಮಾಡಿದರೆ ಹುಬ್ಬಳ್ಳಿ ಪ್ರವೇಶಿಸುವುದಕ್ಕಿಂತ ಮೊದಲೇ ಥಟ್ಟನೆ ಎಚ್ಚರಾಗುವುದೇ ಅಲ್ಲಿನ ಕಸದ ರಾಶಿಯ ಗಬ್ಬುನಾತದಿಂದ.

ಬೆಂಗಳೂರಿಗೆ ಹೊಕ್ಕುವಾಗ ಕೂಡ ಇದೇ ಅನುಭವ. ನವಿ ಮುಂಬಯಿ, ವಾಶಿಯಿಂದ ಮುಂಬೈಗೆ ಹೋಗುವಾಗ ಕೂಡ ಹೀಗೆಯೇ. ಇದೇನು ನಮ್ಮೂರ ಅಥವಾ ದೇಶದ ಸಮಸ್ಯೆಯಷ್ಟೇ ಅಲ್ಲ. ಚಿಕಾಗೊ, ನ್ಯೂಯಾರ್ಕ್ ಹೀಗೆ ಅಮೆರಿಕದ ನಗರಗಳನ್ನೂ ಸೇರಿಸಿ ಜಗತ್ತಿನ ಬಹುತೇಕ ನಗರ, ಮೆಗಾಸಿಟಿಗಳನ್ನು ಹೊಕ್ಕುವಾಗ ಕೂಡ ಇಂಥzಂದು ಗಬ್ಬು ನಗರಕ್ಕಿಂತ ಮೊದಲು ನಮ್ಮನ್ನು ಆಕ್ರಮಿಸಿಕೊಳ್ಳುತ್ತದೆ. ಈ ಕಸದ ವಿಲೇವಾರಿ ದೊಡ್ಡ ಸಮಸ್ಯೆ. ಇದಕ್ಕೆ ಹೊರತಾದ ಊರು, ನಗರವಿಲ್ಲ. ಕೆಲವು ಸಮಸ್ಯೆಗಳೇ ಹಾಗೆ. ನೀವು ಇದನ್ನು ಪರಿಹರಿಸುವುದು ಹೇಗೆ ಎಂದು ಒಂದು ಗಂಟೆ ಮಾತಾಡಿ ಎಂದು ಯಾರಾದರೂ ಮೇಧಾವಿಗಳನ್ನು ಕೇಳಿ ದರೆ ಅವರು 59 ನಿಮಿಷ ಸಮಸ್ಯೆಯನ್ನು ವಿವರಿಸುತ್ತಾರೆ

ಮತ್ತು ಒಂದು ನಿಮಿಷ ಈ ಸಮಸ್ಯೆಯನ್ನು ನಿವಾರಿಸುವುದು ಎಷ್ಟು ಮುಖ್ಯವೆಂದು ಮಾತನಾಡುತ್ತಾರೆ. ಏಕೆಂದರೆ ಇವೆಲ್ಲ ಪರಿಹಾರವೇ ಇಲ್ಲದವುಗಳು.
ನ್ಯೂಯಾರ್ಕ್ ನಗರ- 85 ಲಕ್ಷ ಜನಸಂಖ್ಯೆ – 12000 ಟನ್ ಕಸ ಪ್ರತಿ ದಿನ ಇದೊಂದೇ ನಗರದಲ್ಲಿ ಉತ್ಪಾದನೆಯಾಗುತ್ತದೆ. ಇದರಲ್ಲಿ ಕೇವಲ ಶೇ.30 ಮಾತ್ರ ಸುಟ್ಟು ವಿದ್ಯುತ್ ಉತ್ಪಾದನೆಯ ಉಪಯೋಗಕ್ಕೆ ಬರುತ್ತದೆ. ಇನ್ನುಳಿದದ್ದು ಒಂದೋ ನೆಲದಾಳಕ್ಕೆ ಸೇರಬೇಕು ಇಲ್ಲವೇ ಮತ್ತೆಲ್ಲಿಯೋ ಹೋಗಿ ಮಾಯವಾಗಬೇಕು! ಲಂಡನ್ ನಗರ ತಲಾ 450 ಕೆಜಿ ತ್ಯಾಜ್ಯ ಪ್ರತಿ ವರ್ಷ ಸಂಗ್ರಹಿಸುತ್ತದೆ. ಹಾಂಗ್ ಕಾಂಗ್ ನಗರದ ಕಸ ಪ್ರತಿ ವರ್ಷ 30 ಲಕ್ಷ ಟನ್. ಟೋಕಿಯೋ, ಮೆಕ್ಸಿಕೋ, ಮುಂಬೈ ಹೀಗೆ ಎಲ್ಲ ನಗರಗಳ ಕಸ ವರ್ಷಕ್ಕೆ ಅದೆಷ್ಟೋ ಲಕ್ಷ ಲಕ್ಷ ಟನ್. ಒಟ್ಟಾರೆ ಮನುಷ್ಯನಿಂದಾಗಿ ಉಂಟಾಗುವ ಕಸ ವರ್ಷವೊಂದಕ್ಕೆ ಎಷ್ಟು? ಅಂದಾಜಿಸಿ ನೋಡೋಣ! ಬರೋಬ್ಬರಿ ‘2 ಲಕ್ಷ ಕೋಟಿ ಕೆಜಿ’.

ಅದು ಪ್ರತಿ ದಿನ 547 ಕೋಟಿ ಕೆಜಿ. ಪ್ರತಿ ದಿನವೂ ರೆಕಾರ್ಡ್ ಬ್ರೇಕ್. 2050ರಲ್ಲಿ ಪ್ರತಿ ವರ್ಷಕ್ಕೆ ನಾವೆ ಸೇರಿ ಉಂಟು ಮಾಡುವ ಕಸ ವಾರ್ಷಿಕ 3.5 ಲಕ್ಷ ಕೆಜಿಗೆ ತಲುಪುತ್ತದೆ ಎನ್ನುವುದು ಅಂದಾಜು. ಅದೆಂತಹ ರಿಸೈಕಲ್ ಎಂದರೂ ಮರು ಬಳಕೆಗೆ ಆಗಿಬರುವ ಕಸ ಇದರಲ್ಲಿ ಕೇವಲ ಶೇ.20 ರಿಂದ ಶೇ.30 ಮಾತ್ರ. ಉಳಿದದ್ದೆಲ್ಲ ನೆಲದೊಳಕ್ಕೆ ಅಥವಾ ಸಮುದ್ರದ ಪಾಲಾಗುತ್ತದೆ. ಪ್ಲಾಸ್ಟಿಕ್ ರಿಸೈಕಲ್‌ಗೂ, ಪೆಟ್ರೋಲ್ ದರಕ್ಕೂ ನೇರ ಸಂಬಂಧ. ಪೆಟ್ರೋಲ್ ದರ ಇಳಿದರೆ ಪ್ಲಾಸ್ಟಿಕ್ ಅನ್ನು ರಿಸೈಕಲ್ ಮಾಡುವುದಕ್ಕಿಂತ ಹೊಸ ಪ್ಲಾಸ್ಟಿಕ್ ತಯಾರಿಕೆ ಗ್ಗವಾಗುತ್ತದೆ. ಹಾಗಾದಾಗ ಶೇ. 90ಕ್ಕಿಂತ ಜಾಸ್ತಿ – ವರ್ಷಕ್ಕೆ ಒಂದೂವರೆ ಲಕ್ಷ ಕೋಟಿ ಕೆಜಿ ತ್ಯಾಜ್ಯ ತ್ಯಾಜ್ಯವಾಗಿಯೇ ಉಳಿದುಬಿಡುತ್ತದೆ. ಇದೆಲ್ಲ ವಲ್ಡ ಬ್ಯಾಂಕ್ ಕೊಡುವ ಲೆಕ್ಕ.

ಈ ಸಮಸ್ಯೆಯ ಪ್ರಮಾಣ ಅಂದಾಜಿಸಲು ಇವಿಷ್ಟು ಸಾಕೆನ್ನಿಸುತ್ತದೆ. ಅಮೆರಿಕ ದೇಶವೊಂದನ್ನೇ ತೆಗೆದುಕೊಂಡರೆ ಇಲ್ಲಿನ ಕಸ ನೆಲ ಸೇರಿದ್ದರಿಂದ ಉಂಟಾದ ಮಿಥೇನ್ ಪ್ರಮಾಣ ಎರಡು ಕೋಟಿ ಕಾರು ಒಂದಿಡೀ ವರ್ಷ ಓಡಿಸಿದಾಗಿನ ವಾಯುಮಾಲಿನ್ಯಕ್ಕೆ ಸಮ. ಜಗತ್ತಿನ ಬಹುತೇಕ ನಗರಗಳ ಕಸ ವಿಲೇವಾರಿ ಮೇಲ್ನೋಟಕ್ಕೆ ಸರಕಾರವೇ ನಿರ್ವಹಿಸುತ್ತದೆ ಎಂದು ನೀವಂದುಕೊಂಡಿದ್ದರೆ ಅದು ಅರ್ಧ ಸತ್ಯ. ಕಸವನ್ನು ಮನೆಗಳಿಂದ ಒಯ್ಯುವ ವ್ಯವಸ್ಥೆ ಸರಕಾರದ್ದೇ ಆದರೂ ಮುಂದಿನ ಎಲ್ಲ ವ್ಯವಹಾರ ಬಹುತೇಕ ಮಾಫಿಯಾಗಳದ್ದು.

ಜಾಗತಿಕ ಕಸದ ವ್ಯವಹಾರ ಸುಮಾರು 1.6 ಟ್ರಿಲಿಯನ್ ಡಾಲರ್. ಇದು ಭಾರತದ ಆರ್ಥಿ ಕತೆಯ ಅರ್ಧಕ್ಕೆ ಸಮ. ಅದರಲ್ಲಿ ಶೇ.70ರಷ್ಟು ಮಾಫಿಯಾ ಗಳ ಕೈ ಅಲ್ಲಿ. ಮಾಫಿಯಾಗಳಿಗೆ ಅತ್ಯಂತ ಸೇ- ಎನ್ನಿಸುವ ಬಿಸಿನೆಸ್ ಕಸ ವಿಲೇವಾರಿ. ಕಸ ವಿಲೇವಾರಿಯನ್ನು ಮಾಫಿಯಾಗಳು ನಡೆಸಲು ಶುರುಮಾಡಿ ಸುಮಾರು ಅರ್ಧ ಶತಮಾನವೇ ಆಗಿದೆ. ಇಪ್ಪತ್ತನೇ ಶತಮಾನದ ಮಧ್ಯದಲ್ಲಿ ಜಗತ್ತಿನ ಬಹುತೇಕ ಸರಕಾರಗಳು ಕಸ ವಿಲೇವಾರಿ ನಿರ್ವಹಿಸಲು ಅಸಾಧ್ಯ ವಾದ ಸ್ಥಿತಿಗೆ ತಲುಪಿದ್ದವು. ಆಗ ಕಾರ್ಖಾನೆಗಳು, ಇಂಡಸ್ಟ್ರಿ ಗಳು ತಮ್ಮಲ್ಲಿ ಉತ್ಪತ್ತಿಯಾಗುವ ಕಸವನ್ನು ತಾವೇ ನಿರ್ವಹಿಸಿಕೊಳ್ಳಬೇಕು ಎನ್ನುವ ಕಾನೂನುಗಳು ಅಮೆರಿಕ, ಯೂರೋಪ್‌ಗಳಲ್ಲಿ ಜಾರಿಗೆ ಬಂದವು. ಆಗ ಈ ಮಾಫಿಯಾಗಳು ಈ ವ್ಯವಹಾರಕ್ಕೆ ಇಳಿದದ್ದು. ಇಂದು ಬಹುತೇಕ ಇಂಡಸ್ಟ್ರಿ ಗಳ ಕಸವಿಲೇವಾರಿ ನಿರ್ವಹಿಸುವುದು ಆಯಾದೇಶದ ಮಾಫಿಯಾಗಳು.

ಇವರು ಇದಕ್ಕೆಲ್ಲ ಕಂಡುಕೊಂಡ ಸುಲಭದ ಉಪಾಯವೆಂದರೆ ಕಸವನ್ನು ದೊಡ್ಡ ದೊಡ್ಡ ಕಂಟೇನರ್‌ಗಳಲ್ಲಿ ತುಂಬಿಸಿ ಬಡ ದೇಶಗಳಿಗೆ ಒಯ್ದು, ಅಲ್ಲಿನ ಸರಕಾರಗಳಿಗೆ ದುಡ್ಡು ತಿನ್ನಿಸಿ ಅಲ್ಲಿನ ನೆಲದಲ್ಲಿ ಎಸೆಯುವುದು. ಇದೆಲ್ಲ ಮಿತಿ ಮೀರಿದ್ದು ೨೦೧೭ರಲ್ಲಿ. ಅಲ್ಲಿಯವರೆಗೆ ಚೀನಾ ರಿಸೈಕಲ್ ಮಾಡಲು ಎಲ್ಲ ದೇಶಗಳಿಂದ ಕಸವನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಯಾವಾಗ ಚೀನಾ ಈ ಕಸ ಆಮದನ್ನು ನಿಲ್ಲಿಸಿತೋ ಆಗ ಜಗತ್ತಿನ ಬಹಳಷ್ಟು ದೇಶಗಳು ಕಂಗಾಲಾದವು. ಯುರೋಪ್ ದೇಶಗಳ ಮಾಫಿಯಾ ಈ ಎಲ್ಲ ಕಸದ ರಾಶಿ-ರಾಶಿಗಳನ್ನು ಹಾಕಲು ಜಾಗ ಹುಡುಕತೊಡಗಿತು. ಆಗ ಸಿಕ್ಕಿದ್ದೇ ಪೂರ್ವ ಆಫ್ರಿಕಾದ ಹೊಟ್ಟೆಗಿಲ್ಲದ ದೇಶಗಳು. ಅಲ್ಲಿನ ರಾಷ್ಟ್ರಗಳಲ್ಲಿ ಅತಿಯಾದ ಬಡತನದ ಅದರ ಜತೆ ಭ್ರಷ್ಟತೆಯೂ ಇದೆ.

ಮಂತ್ರಿಗಳನ್ನು ದುಡ್ಡಿಗೆ ಕೊಂಡು, ಹೆದರಿಸಿ ಆಫ್ರಿಕಾದ ನೆಲದಲ್ಲಿ ಯೂರೋಪಿನ ಕಸಗಳು ಕೋಟಿ ಟನ್ನುಗಳ ಲೆಕ್ಕದಲ್ಲಿ ಬಂದು ರಾಶಿ ಹಾಕುವ ವ್ಯವಸ್ಥೆ ಯಾಯಿತು. ಅಲ್ಲಿಂದ ಇಲ್ಲಿಯವರೆಗೆ ಆಫ್ರಿಕಾ ಜಾಗತಿಕ ಕಸದತೊಟ್ಟಿಯಾಗಿ ಬಿಟ್ಟಿದೆ. ಒಮಾನ್, ಸ್ಪೇನ್, ಮೊದಲಾದ ದೇಶಗಳಿಂದ ಕಸ ದಕ್ಷಿಣ ಆಫ್ರಿಕಾಕ್ಕೆ ಬಂದು ಬೀಳುತ್ತಿದೆ. ಘಾನದಲ್ಲಿನ ಕಸದರಾಶಿಯಲ್ಲಿ ಬರೋಬ್ಬರಿ ನೂರಕ್ಕೂ ಹೆಚ್ಚಿನ ದೇಶದ  ವಸ್ತುಗಳ ಲೇಬಲ್ಲುಗಳು ಹತ್ತು ನಿಮಿಷ ಹುಡುಕಿದರೆ ಸಿಗುತ್ತದೆ. ಇಂದು ಕಸ ಅದೆಲ್ಲಿಯೊ ಪ್ರಯಾಣ ಬೆಳೆಸಿ ಅದೆಲ್ಲಿಯೋ ಹೋಗಿ ನೆಲಕ್ಕೋ ಸಮುದ್ರಕ್ಕೋ ಸೇರುತ್ತದೆ.

ಇಂಥದ್ದೊಂದು ಕಸದ ಪ್ರಯಾಣವನ್ನು ತಿಳಿಯಲು ಆಕ್ಸಫರ್ಡ್ ಯೂನಿವರ್ಸಿಟಿ ಒಂದು ಪ್ರಯೋ ಗವನ್ನು ಮಾಡಿತ್ತು. ಅಲ್ಲಿನ ಹುಡುಗರು ನಾಲ್ಕು ಹಾಲಿನ ಪ್ಲಾಸ್ಟಿಕ್ ಕ್ಯಾನ್‌ಗೆ ಜಿಪಿಎಸ್ ಟ್ಯಾಗ್ ಅನ್ನು ಅಳವಡಿಸಿ ಅದನ್ನು ಬೇರೆ ಬೇರೆ ದಿನ ಕಸದ ಬುಟ್ಟಿಗೆ ಎಸೆದರು. ಒಂದು ಹಾಲಿನ ಕ್ಯಾನ್ ಒಂದು ತಿಂಗಳಲ್ಲಿ ಅಟ್ಲಾಂಟಿಕ್ ಸಮುದ್ರವನ್ನು ದಾಟಿ ಮಲೇಶಿಯಾಗೆ ತಲುಪಿ, ಅಲ್ಲಿ ಸ್ವಲ್ಪ ದಿನವಿದ್ದು, ಮೂರು ತಿಂಗಳ ನಂತರ ನೈಜೆರಿಯಾ ತಲುಪಿತ್ತು. ಇನ್ನೊಂದು ಕ್ಯಾನ್ ನಾಲ್ಕು ದೇಶಗಳ ಬಂದರುಗಳಲ್ಲಿ ಕೆಲಕಾಲ ಕಳೆದು, ಚೀನಾ ತಲುಪಿತ್ತು. ಮತ್ತೊಂದು ಪ್ಲಾಸ್ಟಿಕ್ ಕ್ಯಾನ್ ದಕ್ಷಿಣ ಅಮೆರಿಕದ ಚಿಲಿ ದೇಶವನ್ನು ತಲುಪಿತ್ತು.

ನಾಲ್ಕನೆಯದು ಫಿಲಿಪೈನ್ಸ್‌ನ ಸಮುದ್ರದಲ್ಲಿ ಕೆಲಕಾಲ ತೇಲಾಡಿ ನಂತರದಲ್ಲಿ ಸಮುದ್ರ ಮಧ್ಯದ ಸಂಪರ್ಕ ಕಡಿದು ಮಾಯವಾಗಿತ್ತು. ಮನುಷ್ಯ ಮಾಡಿಕೊಂಡ ವ್ಯವಸ್ಥೆಯಲ್ಲಿ ಈ ಕಸದ ವಿಲೇವಾರಿ ಅತಿ ದೊಡ್ಡ ಸಮಸ್ಯೆ. ಇದು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುವಂಥದ್ದು. ಕೆಲ ಬಡ ದೇಶಗಳಲ್ಲಿ ಪ್ಲಾಸ್ಟಿಕ್ ಮೊದಲಾದವುಗಳನ್ನು ನಾಲ್ಕಾರು ಬಾರಿ ಮರುಬಳಕೆ ಮಾಡುವುದು ಕಾಣಿಸಿದರೂ ಅವೆಲ್ಲ ಒಂದಿಂದು ದಿನ ನೆಲ – ಜಲವನ್ನೇ ಸೇರುವುದು. ಇವತ್ತು ಮೈಕ್ರೋಪ್ಲಾಸ್ಟಿಕ್ ಎನ್ನುವ ಸಮಸ್ಯೆ ಉದ್ಭವಿಸಿದ್ದೇ ಇದರಿಂದ. ಅತಿ ಸೂಕ್ಷ್ಮ / ಮೈಕ್ರೋಸ್ಕೊಪಿಕ್ ಪ್ಲಾಸ್ಟಿಕ್ ಕಣಗಳು. ಇವು ಇಂದು
ಸರ್ವವ್ಯಾಪಿ, ಸರ್ವ್ವಾಂತರ್ಯಾಮಿ. ಕೆರೆ ತೊರೆ, ತರಕಾರಿ, ಊಟ ಇದರಲ್ಲ. ಗಾರ್ಡಿಯನ್ ಪತ್ರಿಕೆಯ ಇತ್ತೀಚೆಯ ವರದಿಯನ್ನು ಓದುತ್ತಿದ್ದೆ.

ಈಗ ಮನುಷ್ಯನ ಶ್ವಾಸಕೋಶ, ರಕ್ತ, ಅಷ್ಟೇ ಅಲ್ಲ ತಾಯಿಯ ಹಾಲಿನಲ್ಲಿ ಕೂಡ ಈ ಪ್ಲಾಸ್ಟಿಕ್ ನ ಅತಿ ಸೂಕ್ಷ್ಮ ಕಣಗಳು ಕಾಣಿಸಿಕೊಳ್ಳಲಾರಂಭಿಸಿವೆ.
ರಕ್ತಕ್ಕೇ ಹೊಕ್ಕಿದವು ದೇಹದ ಯಾವ ಭಾಗವನ್ನೂ ಹೋಗಿ ಮುಟ್ಟಬಹುದು. ಇದೆಲ್ಲ ಮುಂದುವರಿಯುವುದು ನೋಡಿದರೆ ಮಾನವಾರ್ಹತೆಯ ಮೇಲೆಯೇ ಪ್ರಶ್ನೆ ಮೂಡುತ್ತದೆ. ಇಂದು ನಾವು ಮಾಡುವ ಕಸ ಮುಂದೊಂದು ದಿನ ನಮ್ಮ ಅಸ್ತಿತ್ವದ ಕುರುಹುಗಳಾಗಿ ಉಳಿದುಬಿಡುತ್ತವೆಯೇನೋ!