Friday, 20th September 2024

ದೇವರಿಗೇ ಮನೆ ಇಲ್ಲ, ಇನ್ನು ನಮಗೇಕೆ ?

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ಮನೆ ಎಂಬುದು ಪ್ರತಿಯೊಬ್ಬರಿಗೂ ಅವಶ್ಯಕವಾದ ತಾಣ. ಅವಿಡಯೊಳಗ ಹೊಲ ಇರದಿದ್ರೂ ಊರೊಳಗೆ ಒಂದು ಸ್ವಂತ ಮನೆ ಇರಬೇಕು, ಹೊಟ್ಟಿಗೆ ಅನ್ನ ಸಿಗದಿದ್ದರೂ, ತಲಿ ಇಡಲು ಒಂದು ಸೂರು ಇರಬೇಕು. ಭೂಮಿ ಎಷ್ಟೆ ದೊಡ್ಡದಿದ್ದರೂ ನಮ್ಮದು ಅಂತ ಅಂಗೈ ಅಗಲ ಮನೆಯಿರಬೇಕು, ಇವೆಲ್ಲ ಸ್ವಂತ ಮನೆ ಇರಬೇಕು ಎಂಬ ಮನುಷ್ಯನ ಎಲ್ಲ ಆಸೆಗಳಲ್ಲೂ ಪ್ರಮುಖವಾದ ಒಂದು ಆಸೆ, ಕನಸು, ಗುರಿ, ಧ್ಯೇಯ ಇತ್ಯಾದಿ ಇತ್ಯಾದಿ.

ಹಿರಿಯ ಲೇಖಕಿ ದಿ|| ಎಂ.ಕೆ. ಇಂದಿರಾರವರ ‘ಟು-ಲೆಟ್’ ಎಂಬ ಕಾದಂಬರಿಯನ್ನು 1970 ರ ದಶಕದಲ್ಲೇ ಓದಿದ್ದು ನನಗೆ ನೆನಪಿದೆ. ಬೆಂಗಳೂರಿನ ಬಾಡಿಗೆ ಮನೆಗಳ ಫಜೀತಿ, ಸ್ಥಿತಿ, ಅವಾಂತರಗಳನ್ನು ಸಹಜ ಹಾಸ್ಯದೊಂದಿಗೆ ಬರೆದ ಈ ಕಾದಂಬರಿ ಎಂ.ಕೆ. ಇಂದಿರಾರವರ ಕಾದಂಬರಿಗಳಲ್ಲೇ ಮಾಸ್ಟರ್ ಪೀಸ್ ಕೃತಿ. ಮಧ್ಯಮ ವರ್ಗದವರ ಭವಣೆಗಳ ಚಿತ್ರಣ ಅತ್ಯಂತ ಸಹಜವಾಗಿ ಮೂಡಿದ ಕಾದಂಬರಿ ಇದು. ನಾನು ಎರಡು ಮೂರು ಸಾರಿ ಓದಿದ್ದೇನೆ. ಪೂರ್ಣ ಕಾದಂಬರಿ ಖರೀದಿಸುವಷ್ಟು ಹಣವಿಲ್ಲದ ಆ ದಿನಗಳಲ್ಲಿ ಪ್ರತಿನಿತ್ಯ ನಾಲ್ಕಾಣೆ ಕೊಟ್ಟು ಆ ಕಾದಂಬರಿಯನ್ನು ‘ಜೇಸಿಸ್ ಲೈಬ್ರರಿ’ಯಿಂದ ತಂದು ಓದುತ್ತಿದ್ದೆ.

ಆ ಲೈಬ್ರೇರಿಯನ್ (ಗ್ರಂಥಪಾಲಕ) ಎಷ್ಟು ಸಲ ಓದ್ತಿಯೋ ಮಹಾರಾಯ, ಏನು ಅಂಥಾದ್ದು ಬರೆದಾರ ಅದರಾಗ ಎನ್ನುತ್ತಲೇ ನನಗೆ ಕೊಡುತ್ತಿದ್ದನಾಗಲಿ, ‘ಏನು ಇದೆ ನೋಡೋಣ’ ಎಂದು ಆತ ಓದಲೇ ಇಲ್ಲ. ಈ ಗ್ರಂಥಪಾಲ ಕರು, ಅಡಿಗೆಯವರು, ದೇವಸ್ಥಾನ ಅರ್ಚಕರು ಇವರೆಲ್ಲ ಪರರಿಗಾಗಿಯೇ ಇದರ ಮಹತ್ವ ತಿಳಿದು ಕೊಂಡಿರುತ್ತಾರಾಗಲಿ, ಅವರಿಗೆ ಅದು ಮಹತ್ವ ಎನಿಸುವುದೇ ಇಲ್ಲ. ಏಕೆಂದರೆ, ಬೇಕಾದರೆ ಕೇಳಿ ಅಥವಾ ನೋಡಿ.

ಈ ಗ್ರಂಥ ಪಾಲಕರಿಗೆ ಪುಸ್ತಕಗಳನ್ನು ನೋಡಿ, ನೋಡಿಯೇ ಸಾಕಾಗಿರುತ್ತದೆ. ಜನ ಕೇಳಿದ್ದನ್ನು ಹುಡುಕಿ, ಕೊಟ್ಟು ಕೊಟ್ಟು ತಲೆಕೆಟ್ಟಿರುತ್ತದೆ. ಅವರಿಗೆ ಒಂಥರಾ ಪುಸ್ತಕಗಳೆಂದರೆ ಮನೆ ಹೆಂಡತಿ ಎನಿಸಿರುತ್ತದೆ. ನೋಡಿ, ನೋಡಿಯೇ ಬೇಜಾರಾಗಿರುತ್ತದೆ. ಇನ್ನು ಅಡಿಗೆಯವರು, ಬಂದವರಿಗೆ ಪಂಚಭಕ್ಷ್ಯ ಪರಮಾನ್ನಗಳನ್ನು ಒಲೆ ಮುಂದೆ ಕೂತು, ಮಾಡಿ, ರುಬ್ಬಿ, ಅಡಿಗೆಯೊಳಗೆ ಕೈಯಾಡಿಸಿ, ಅಂದರೆ ಅವರ ಕೈಯನ್ನೇ ಅಲ್ಲ, ಕೈಯಲ್ಲಿ ಹಿಡಿದ ಸೌಟನ್ನು ಆಡಿಸಿ, ತಿರುವಿ ಅಂತ ಅರ್ಥ. ಅದಲ್ಲದೆ ಹೊಗೆಯನ್ನೇ ಹೆಚ್ಚು ಹೆಚ್ಚು ಕುಡಿದು ಸಾಕಾಗಿ, ಎಲ್ಲ ತರಹದ ಭಕ್ಷ್ಯ ಭೋಜ್ಯಗಳನ್ನು ಜನ ಚಪ್ಪರಿಸಿ ಉಂಡದ್ದನ್ನು ನೋಡಿ, ಹಿಗ್ಗೇ ಹೆಚ್ಚಾಗಿ ಹೊಟ್ಟೆ ತುಂಬಿದ್ದರಿಂದ, ಹೆಚ್ಚಾಗಿ ಅಡಿಗೆಯವರು ತಾವು ಮಾತ್ರ ಅನ್ನ ತಿಳಿಸಾರು ಉಂಡೇ ಮನೆ ಸೇರಿರುತ್ತಾರೆ.

ಇನ್ನು ದೇವಸ್ಥಾನದ ಅರ್ಚಕರು, ಪುರೋತರು ಇವರದೂ ಅಷ್ಟೇ ಹಣೆಬರಹ ಪಾಪ! ಬರುವ, ಬೇಡುವ ಭಕ್ತರಿಗೆಲ್ಲ ಅನೇಕ ವ್ರತ, ನಿಯಮ, ಹವನ, ಹೋಮ ಹೇಳಿ, ಮಾಡಿಸುತ್ತಾ ಅವರಿಗೆ ನೌಕರಿ, ಹೆಂಡತಿ, ಮನೆ, ವ್ಯಾಪಾರದಲ್ಲಿ ಲಾಭ ಸಿಗುವಂತೆ ಮಾಡುತ್ತಾರಾಗಲಿ ಅವರೇ ಅವುಗಳನ್ನು ಮಾಡಿ ಶ್ರೀಮಂತರಾಗಿ ಈ ಪೌರೋಹಿತ್ಯವನ್ನು ಬಿಡುವುದಿಲ್ಲ. ಹೀಗಾಗಿ ಪುಸ್ತಕ ಕೊಡುತ್ತಿದ್ದ ಗ್ರಂಥಪಾಲಕ ಅದನ್ನು ಓದಲೇ ಇಲ್ಲ. ಎರಡಂಕಣದ ಮನೆಯಲ್ಲಿಯೇ ಹದಿನೈದು ಇಪ್ಪತ್ತು ವರ್ಷ ಬದುಕಿದ ನನಗೆ ಎಂ.ಕೆ. ಇಂದಿರಾರವರ ‘ಟು-ಲೆಟ್’ ಕಾದಂಬರಿಯ ಬವಣೆಗಳು, ಪಾತ್ರಗಳು, ಅದು ನಾನೇ, ನಮ್ಮ ಮನೆಯ ಪರಿಸ್ಥಿತಿಯೇ ಎನಿಸಿಬಿಟ್ಟಿತ್ತು. ಮನೆ, ಎಂಬ ಈ ಎರಡಕ್ಷರದ ಶಬ್ದ ಅನೇಕರಿಗೆ ಅಪ್ಯಾಯಮಾನ, ಕೆಲವರಿಗೆ ಅನಿವಾರ್ಯ, ಕೆಲವರಿಗೆ ದುಸ್ವಪ್ನ, ಕೆಲವು ರಾಜಕಾರಣಿಗಳು, ಸಿನಿಮಾ ನಟರು, ಕ್ರಿಕೆಟ್ ಆಟಗಾರರ ಮನೆಗಳನ್ನು ನೋಡಿದರೆ, ತಲೆ ಇಡಲು, ಕಾಲು ಚಾಚಲು ಇಷ್ಟು ದೊಡ್ಡ ಮನೆ ಬೇಕೆ? ಎನಿಸು ತ್ತಿರುತ್ತದೆ.

ಇದು ನಮ್ಮ ಲೌಕಿಕ ಜೀವನದ ಮನೆಗಳ ಕಥೆಯಾದರೆ ರಾಮಾಯಣದಲ್ಲಿ ಮನೆಯ ಬಗ್ಗೆ ವಿಭೀಷಣನ ವಿಚಾರಗಳನ್ನು ಮನೋಜ್ಞವಾಗಿ ವಿಷದೀಕರಿಸಿದ್ದವರು
ಮಹಾರಾಷ್ಟ್ರದ ತ್ರಯಂಬಕನಾಥ ರೆಂಬ ಸಂತರು. ಅವರು ರಾಮಾಯಣದಲ್ಲಿನ ಈ ಪ್ರಸಂಗವನ್ನು ಹೀಗೆ ಬರೆಯುತ್ತಾರೆ, ಆಕಾಶದಲ್ಲಿ ನಿಂತು ವಿಭೀಷಣನು ಕೆಳಗೆ ನಿಂತ ಶ್ರೀರಾಮಚಂದ್ರನನ್ನು ನೋಡಿದಾಗ ಅವನಿಗೆ ಸಮಾಧಾನವಾಯಿತಂತೆ, ಏಕೆಂದರೆ ರಾಮನ ಪರವಾಗಿ ಮಾತನಾಡಿದ್ದಕ್ಕೆ ರಾವಣ ಅವನನ್ನು ಹೊರಗೆ ಅಟ್ಟಿದ್ದ, ಅಂದರೆ ಲಂಕೆಯನ್ನು, ನನ್ನ ಮನೆಯನ್ನು ಬಿಟ್ಟು ಹೋಗೆಂದಿದ್ದ, ಅಣ್ಣನಾದ ರಾವಣನಿಗೆ ದ್ರೋಹಮಾಡಿ ನಾನು ಈ ರಾಮನ ಬಳಿಗೆ ಬಂದಿದ್ದೇನೆ ಎಂಬ ಅಳುಕು ವಿಭೀಷಣನಿಗೂ ಇತ್ತು.

ಆದರೆ, ಕೆಳಗೆ ರಾಮನ ಅಕ್ಕಪಕ್ಕ ನಿಂತ ಸುಗ್ರೀವ ಹಾಗೂ ಲಕ್ಷ್ಮಣನನ್ನು ನೋಡಿದ ಮೇಲೆ ನಿರಾಳವಾದನಂತೆ. ಏಕೆಂದರೆ, ಸುಗ್ರೀವನೂ ಶ್ರೀರಾಮನ ಕೈಯಿಂದ ಸ್ವತಃ ಅಣ್ಣ ವಾಲಿಯನ್ನು ಕೊಲ್ಲಿಸಿದವನು. ಇನ್ನು ಲಕ್ಷ್ಮಣ ಶ್ರೀರಾಮನ ಪಾದುಕೆಗಳನ್ನು ಒಯ್ಯಲು ಬಂದ ಭರತನನ್ನು ಕೊಲ್ಲಲು ಹೊರಟಿದ್ದವನು. ಇವರಿಬ್ಬರನ್ನು ತನ್ನ ಬಳಿಯೇ ಉಳಿಸಿಕೊಂಡು ಆಶ್ರಯ ಕೊಟ್ಟಿರುವ ರಾಮನು ನನಗೂ ಖಂಡಿತ ಕೃಪೆ ತೋರುವನು ಎಂದು ಶ್ವಾಸ ಮೂಡಿತಂತೆ. ಇನ್ನು ನನಗೆ ಮನೆಯಿಲ್ಲ ಎಂದು ಚಿಂತೆ ಮಾಡಬಾರದು ಎನಿಸಿತಂತೆ. ಏಕೆಂದರೆ, ನಾನು ಯಾರನ್ನು ನಂಬಿ ಬಂದಿದ್ದೆನೋ ಆ ರಾಮನಿಗೆ ಈಗ ಮನೆಯಿಲ್ಲ, ಅವನೂ ಎಲ್ಲ ಬಂಧು-ಬಳಗವನ್ನು ತೊರೆದವನು.

ಕನಕದಾಸರು ಒಂದು ಕೀರ್ತನೆಯಲ್ಲಿ ನಾವು ಸುಮ್ಮನೆ ಮನೆ ಮನೆ ಎಂದು ಬಡಿದಾಡುತ್ತೇವೆ. ನಮ್ಮನ್ನು ಸೃಷ್ಠಿ ಮಾಡಲು ಹತ್ತು ಅವತಾರಗಳನ್ನು ಎತ್ತಿದ ಭಗವಂತನಿಗೇ ಮನೆಯಿಲ್ಲ ಎಂದಿದ್ದಾರೆ. ಹೇಗೆಂದರೆ, ನೋಡಿ ಇಲ್ಲಿ ಮತ್ಸ್ಯ- ಕೂರ್ಮ-ವರಾಹಾದಿಗಳ ಅವತಾರದ ಶ್ರೀಹರಿ ನಾರಾಯಣನಿಗೆ ಮನೆಯೆಂದರೆ ಬರೀ ನೀರೆ ಗತಿಯಾಗಲಿಲ್ಲವೇ? ಇನ್ನು ರಾಮನ ಅವತಾರದಲ್ಲಿ ಸೀತೆಯ ಸ್ವಯಂವರದಲ್ಲಿ ಆಕೆಯನ್ನು ಗೆದ್ದು ಮದುವೆಯಾದ ರಾಮನಿಗೆ ಸಂಸಾರ ಮಾಡಲು ಚಿತ್ರಕೂಟ ಪರ್ವತವೇ ಮನೆಯಾಯಿತು. ಇನ್ನು ಈ ಪೃಥ್ವಿ, ಭೂಮಿಯನ್ನು ಹೊತ್ತ ಆದಿಶೇಷನಿಗೆ ಹುತ್ತವೇ ಮನೆ, ಇನ್ನು ಗರುಡ ದೇವರು, ದೇವರನ್ನೇ ಹೊತ್ತು ತಿರುಗುವ ವಿಮಾನ ಗರುಡ. ಆದರೆ, ಆ ಗರುಡನು ರಾತ್ರಿ ಮಲಗುವ ಮನೆ ಎಲ್ಲಿದೆ? ಬೋಳುಮರದ ಟೊಂಗೆಯ ಮೇಲೆ ಕುಳಿತು ಅವನು ತೂಕಡಿಸಬೇಕು. ಇನ್ನು
ಚಂದ್ರಕುಲದ ಅರಸರುಗಳಾದ ಪಾಂಡವರೈವರ ಪತ್ನಿಗೆ ವಾಸಕ್ಕೆ ಮನೆ ಇದ್ದರೂ ವನವಾಸದಲ್ಲೇ ಅರ್ಧ ಆಯುಷ್ಯ ಕಳೆಯಿತು.

ಸಮಸ್ತ ಜೀವರಾಶಿಗಳ ಆಶ್ರಯ ಸ್ಥಾನವೇ ಪರಮಾತ್ಮ ನ ಸಾನಿಧ್ಯ. ಅದೇ ಎಲ್ಲ ಜೀವರ ಮನೆ. ನಾವು ಅಲ್ಲಿಗೆ ಮರಳಿ ಹೋದಾಗಲೇ ನಮಗೆ ತೃಪ್ತಿ. ನಾವು ಅಲ್ಲಿಂದಲೇ ಈ ಲೋಕದ ಮಣ್ಣು, ಕಲ್ಲು, ಈಗ ಸಿಮೆಂಟಿನ ಮನೆಗೆ ಬಂದವರು. ಅಲ್ಲಿದೆ ನಮ್ಮನೆ! ಇಲ್ಲಿ ಬಂದೆ ಸುಮ್ಮನೆ ಎಂದು ಪುರಂದರದಾಸರು ಹೇಳಿದ್ದು ಇಂತಹ ದೃಷ್ಟಾಂತಗಳಿಂದಲೆ. ಸಂತ ನಾಮದೇವರೂ ಸಹ ಪರೇ ಹೂನಿ ಪರತೇ ಘರ್ ತೇಥೇರಾಹೂ ನಿರಂತರ|| ಎಂದು ಪರಾತ್ಪರನಾದ ಪಾಂಡುರಂಗನೇ ನಮ್ಮ ಮನೆ. ಅಲ್ಲೇ ನಮ್ಮ ನಿರಂತರವಾಸ ಎಂದು ಮನೆಯ ವಿಳಾಸ ಹೇಳುತ್ತಾರೆ. ಸ್ವಾಮಿ ವಿವೇಕಾನಂದರಿಗೆ ಒಮ್ಮೆ ಒಬ್ಬ ಪಾಶ್ಚಿಮಾತ್ಯನು ಭೇಟಿಯಾದ.
ಆತನು ಅವರ ಒಂದು ಪ್ರವಚನದಿಂದ ಪ್ರಭಾವಿತನಾಗಿದ್ದು, ಆತ ಸರಳನೂ, ಮುಗ್ಧನೂ ಆಗಿದ್ದು, ಸ್ವಾಮೀಜಿ, ನಾನು ನಿಮ್ಮ ದೇವರನ್ನು ಭೇಟಿ ಮಾಡಬೇಕಾಗಿದೆ. ಸ್ವಲ್ಪ ಅವನ ವಿಳಾಸ ಕೊಡುವಿರಾ? ಎಂದು ಕೇಳಿದ ವಿವೇಕಾನಂದರು ನಸುನಕ್ಕು ತಮ್ಮಾ, ನನಗೆ ನಿನ್ನ ವಿಳಾಸಕೊಡು, ನಾನೇ ಆ ದೇವರನ್ನು ನಿನ್ನ ಮನೆಗೆ ಕಳಿಸುತ್ತೇನೆ ಎಂದರು.

ಆ ಮುಗ್ಧ ಯುವಕ ತನ್ನ ಮನೆಯ ನಂಬರ್, ಮನೆ ಇರುವ ಬೀದಿ, ಕಟ್ಟಡ, ಬಡಾವಣೆ ಎಲ್ಲ ಬರೆದುಕೊಟ್ಟ. ಸ್ವಾಮಿ ವಿವೇಕಾನಂದರು ಮತ್ತೆ ನಗುತ್ತಾ ಅದನ್ನು ನೋಡುತ್ತಾ ತಮ್ಮಾ ಇವೆಲ್ಲ ನಂಬರ್, ನಿನ್ನ ಹೆಸರು, ನೀನಿರುವ ಊರು ಎಲ್ಲ ಜಡ ವಸ್ತುಗಳಾದವು, ಇವು ಯಾವುವೂ ನೀನು ಎಂಬುದೇ ಅಲ್ಲ. ನಿನ್ನ ಸ್ವರೂಪವು ದೇವರ ಆಶ್ರಯದಲ್ಲೇ ಇದೆ. ಎಲ್ಲ ಜೀವಗಳ, ಎಲ್ಲ ಜೀವರ ಕೇರಾಫ್ ದೇವರು. ಇದನ್ನು ಮರೆತ ಜನರು ದೇವರ ಬೇರೆ ಬೇರೆ ವಿಳಾಸ ಹೇಳುತ್ತಾರೆ. ದೇವರನ್ನು
ಹುಡುಕುವವ ರೆಲ್ಲರೂ ದೇವರ ಆಶ್ರಯದಲ್ಲೇ ಇರುತ್ತಾರೆ. ಇದು ತಾಯಿಯನ್ನು ಮಗು ತಾನಿರುವ ಮನೆಯಲ್ಲೇ ಅಡಗಿಕೊಂಡಿರುವ ತನ್ನ ತಾಯಿಯನ್ನು ಹುಡುಕಿದಂತೆ.

ನೋಡುವ ಬಯಕೆ ಉತ್ಕಟವಾಗಿ ತಾಯಿ ಸಿಗದಾಗ ಮಗು ವಿಹ್ವಲವಾಗಿ ಜೋರಾಗಿ ಅಳುವಂತೆ ನಾವೂ ದೇವರನ್ನು ಕಾಣಬೇಕೆಂದು ಹೃದಯ ತುಂಬಿ, ಚಡಪಡಿಸಿ ಅತ್ತಾಗ ತಾಯಿ ಹೊರಬಂದು ಹೇಗೆ ಸಂತೈಸುವಳೋ, ನಿನ್ನನ್ನು ಎತ್ತಿ ಮುದ್ದಾಡುವಳೋ ಹಾಗೆ, ಆ ದೇವರ ಆಶ್ರಯದಲ್ಲೇ ನೀನು ಇದ್ದಿ, ಎಂದು ತಿಳಿದಾಗ ನಿನ್ನ ಈ ಹುಡುಕಾಟ ನಿಂತು ಹೋಗುತ್ತದೆ ಎಂದು ಹೇಳಿದರು. ನೋಡಿದಿರಾ? ಎರಡಕ್ಷರದ ಮನೆ, ಮನುಷ್ಯನ ಆರಡಿಯ ದೇಹವನ್ನು ಅಲ್ಲಾಡಿಸಿ ಬಿಡುತ್ತದೆ. ಭೂಮಿಯೇ ಹಾಸಿಗೆ ಗಗನವೇ ಹೊದಿಕೆ ಎಂದು ಸಂತ ಶರಣರೆಲ್ಲ ನೂರಾರು ವರ್ಷ ಬದುಕಿಬಿಟ್ಟರು. ಅಮರರಾದರು. ಆದರೆ, ನಮ್ಮದೇ ಸ್ವಂತ
ಮನೆಯಲ್ಲಿ ಉಸಿರು ಬಿಡಬೇಕು ಎಂದು ಬಯಸುವ ನಾವು, ಸೈಟು ಖರೀದಿ, ಮನೆಗಾಗಿ ಸಾಲ, ನಂತರ ಮನೆ ಕಟ್ಟಿಸುವ ಪರ್ಮಿಷನ್, ನಂತರ ಮನೆ ಕಟ್ಟಲು ಬರುವ ಕೂಲಿ, ಮೇಸ್ತ್ರಿಗಳ ಜೊತೆ ವಾಗ್ಯುದ್ಧ, ಬೈಗಳು, ನಿಷ್ಠುರಗಳ ಮಹಾಪೂರ ಹರಿಸಿ, ಕಟ್ಟಿದ ಮೇಲೆ ಅದಕ್ಕೆ ಹೆಸರಿಡಲು ಹೋರಾಟ, ನಂತರ ಮನೆ ಓಪನಿಂಗ್‌ಗಾಗಿ ಯಾರ‍್ಯಾರನ್ನು ಕರೆಯಬೇಕು ಎಂಬ ಜಿದ್ದಾಜಿದ್ದಿ, ಓಪನಿಂಗ್ ದಿನ ಅವಶ್ಯಕತೆಗಿಂತ, ಅಂದುಕೊಂಡಿದ್ದಕ್ಕಿಂತ ಹೆಚ್ಚು ಜನ ಬರುವುದು, ಎಲ್ಲವೂ ಮುಗಿದು ಹಳೆ ಮನೆ ಸಾಮಾನವೆಲ್ಲ ಹೊಸ ಮನೆಗೆ ಸಾಗಿಸಿ ಜೋಡಿಸುವಲ್ಲಿ ಮರುಹುಟ್ಟೇ ಪಡೆದಿರುತ್ತೇವೆ.

ಕಡೆಕಡೆಗೆ ಮನೆ ಕಟ್ಟಿಸುವ ಮುನ್ನ ಅಂದುಕೊಂಡಂತೆ ಅನೇಕರು ಪಾಪ! ಸ್ವಂತ ಮನೆಯಲ್ಲೇ ಉಸಿರು ಬಿಡಬೇಕಾದ ಪರಿಸ್ಥಿತಿ ತಂದುಕೊಡು, ಉಸಿರುಬಿಟ್ಟು,
ನುಡಿದಂತೆ ನಡೆದೂ ಹೋಗಿದ್ದಾರೆ. ಮನೆಯೇ ದೇವಾಲಯ, ಮಡದಿಯೇ ದೇವಾಲಯದ ದೇವತೆ, ಮಕ್ಕಳೇ ದೇವಾಲಯದ ಗಂಟೆಗಳು, ಕಟ್ಟಿಸಿದವನು
ಗಂಡಸು? ಅವನೇ ಪೂಜಾರಿ. ಒಂದೊಂದು ರೂಮು ಒಬ್ಬೊಬ್ಬರು ಆಕ್ರಮಿಸಿಕೊಂಡು ಕಟ್ಟಿಸಿದವನು ಹೊರ ಕಟ್ಟೆಗೆ ಮಲಗುವ ದೃಶ್ಯ ಸರ್ವೇ ಸಾಮಾನ್ಯ. ಈಗ್ಗೆ ಮೂವತ್ತು ವರ್ಷಗಳ ಹಿಂದೆ ನಮ್ಮ ಗಂಗಾವತಿಯ ನಾವಿರುವ ರಾಯರ ಓಣಿಯಲ್ಲಿ ಅನೇಕ ಶೆಟ್ಟರ ಮನೆಗಳಿದ್ದವು. ಎಲ್ಲರ ಮನೆಯ ಮುಂದು ಎರಡೂ ಬದಿಯೂ ದೊಡ್ಡ ದೊಡ್ಡ ಒಬ್ಬರು ಮಲಗುವಷ್ಟು ಕಟ್ಟೆಗಳು. ಅವುಗಳನ್ನು ಓಣಿಯ ಪಡ್ಡೇ ಹುಡುಗ, ಯುವಕರುಗಳು ರಾತ್ರಿ ಮಲಗಲೆಂದೇ ಬಿಟ್ಟಿರುತ್ತಿದ್ದರು.

ಅಂಥಹ ಕಟ್ಟೆಗಳ ಮೇಲೆಯೇ ಹತ್ತಿಪ್ಪತ್ತು ವರ್ಷಗಳು ನಾನು ಮಲಗಿ ರಾತ್ರಿಗಳನ್ನು ಕಳೆದಿದ್ದೇನೆ. ಒಳಗೆ ಮಲಗಿ ದವರಿಗೆ ಹೊರಗೆ ಕಾವಲುಗಾರನಿದ್ದಾನೆಂಬ
ಧೈರ್ಯ. ಇನ್ನು ನಮಗೆ ಯಾರಿಗೂ ತಿಳಿಯದಂತೆ ಸೆಕೆಂಡ್ ಶೋ ನೋಡಿ ಬಂದು ಆ ಕಟ್ಟೆಗೆ ಹಾಸಿಗೆ ಸುರುಳಿ ಉರುಳಿಸಿ ಮಲಗುತ್ತಿದ್ದ ಆ ನೆಮ್ಮದಿ ನಿದ್ದೆಯ ರಾತ್ರಿಗಳು, ಏನು ಕೊಟ್ಟರೆ ಸಿಕ್ಕಾವು ಎನಿಸುತ್ತಾ ಇರುತ್ತದೆ. ದೇಶಗಳ ಐಷಾರಾಮಿ ಹೋಟಲ್‌ಗಳ ಆ ರೂಮುಗಳು, ಮಲಗಿದರೆ ಆಳದ ಬಾಯೊಳಗೇ ಹೋಗುವಂತೆ ತಗ್ಗುಬೀಳುವ ಆ ಕುತನಿ ಗಾದಿ (ಬೆಡ್)ಗಳು, ದೇಹಕ್ಕೆ ಇನ್ನಷ್ಟು ಹಿಂಸೆ ಮಾಡುತ್ತವೆ ಆಗಲಿ, ಸಿಹಿ ನಿದ್ದೆ ಕೊಡುತ್ತಿದ್ದಿಲ್ಲ.

ಸ್ವಂತ ಮನೆ, ಸಪರೇಟ್ ಬೆಡ್ ರೂಮ್‌ಗಳನ್ನು ನಾವು ನಮ್ಮ ಬಾಲ್ಯ, ಯೌವ್ವನಗಳಲ್ಲಿ ಕಾಣಲೇ ಇಲ್ಲ. ಮುಪ್ಪು ಆವರಿಸುತ್ತಿರುವ ಈ ದಿನಗಳಲ್ಲಿ ಸ್ವಂತ ಮನೆಗಳು
ಉಸಿರುಬಿಡಲೆಂದೇ ಕಟ್ಟಿಸಿದೇವೆನೋ? ಎನಿಸುತ್ತಿದೆ. ಒಮ್ಮೊಮ್ಮೆ ಮುಪ್ಪಿನಲ್ಲಿ ಗಾಢನಿದ್ದೆ ಬರದಿರುವುದಕ್ಕೆ ಕಾರಣ ಇದೆ ಇರಬಹುದೇ? ಎನಿಸಿ, ಮಧ್ಯೆ ಮಧ್ಯೆ ಆಗಾಗ ಎಚ್ಚರವಾಗೋದು, ಉಸಿರು ನಿಂತಿಲ್ಲ ಎಂದು ಖಾತ್ರಿಪಡಿಸಿಕೊಳ್ಳಲೇನೋ ಎಂದು ಕೂಡಾ ಯೋಚನೆ ಬರುತ್ತಿರುತ್ತದೆ.