Sunday, 8th September 2024

ಸಾಧ್ಯವಾದರೆ ಕೈಲಾದಷ್ಟು ಸಹಾಯ ಮಾಡೋಣ, ಇಲ್ಲದಿದ್ದರೆ ತೆಪ್ಪಗಿರೋಣ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

ಪ್ರತಿ ದಿನ ಎರಡು ಸಾವಿರಕ್ಕಿಂತ ಹೆಚ್ಚು ಜನ ಸಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ. ಹನ್ನೆರಡು ವಾರಗಳ ಕಾರ್ಗಿಲ್ ಯುದ್ಧದಲ್ಲಿ (1999) ಮಡಿದವರಿಗಿಂತ ನಾಲ್ಕು ಪಟ್ಟು ಹೆಚ್ಚು ಜನ ಕರೋನಾ ವೈರಸ್ಸಿಗೆ ಬಲಿಯಾಗಿದ್ದಾರೆ. ಆಯುದ್ಧಕ್ಕೂ, ಕರೋನಾ ವೈರಸ್ ನಡುವಿನ ಸೆಣಸಾಟಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಕಾರ್ಗಿಲ್ ಯುದ್ಧದಲ್ಲಿ ನಮ್ಮ ಪಕ್ಕದ ವೈರಿಯ ಜತೆ ಯುದ್ಧ ಮಾಡಿದ್ದೆವು. ಆ ಯುದ್ಧದಲ್ಲಿ ಜನರಲ್‌ಗಳು, ನುರಿತ ಸೈನಿಕರು ಪಾಲ್ಗೊಂಡಿದ್ದರು. ಆದರೂ ಅಷ್ಟೊಂದು ಮಂದಿ ಸತ್ತರು. ಆದರೆ ಈ ಯುದ್ಧದಲ್ಲಿ ವೈರಿ ಕಣ್ಣಿಗೆ ಕಾಣುತ್ತಿಲ್ಲ. ಆದರೆ ಆ ವೈರಿಯ ಹೆಸರು ಕರೋನಾ ವೈರಸ್ ಅಂದಷ್ಟೇ ಗೊತ್ತು. ಕಣ್ಣಿಗೆ ಕಾಣದ ವೈರಿಯ ಜತೆ ಕಾದಾಡುವುದೆಂದರೆ ಗಾಳಿಯೊಂದಿಗೆ ಸೆಣಸಿದಂತೆ.

ಏಪ್ರಿಲ್ 15 ರಿಂದ ಪ್ರತಿದಿನ ಎರಡು ಲಕ್ಷಕ್ಕಿಂತ ಹೆಚ್ಚು ಜನರಿಗೆ ಕರೋನಾ ವೈರಸ್ ಸೋಂಕು ತಗುಲುತ್ತಿದೆ. ಕಳೆದ ನಾಲ್ಕು ದಿನ ಗಳಿಂದ ಈ ಸಂಖ್ಯೆ ಹತ್ತಿರ ಹತ್ತಿರ ಮೂರು ಲಕ್ಷ ಸಮೀಪಿಸುತ್ತಿದೆ. ಹಿಂದಿನ ವರ್ಷ ಕರೋನಾ ಮಹಾಮಾರಿ ಜಗತ್ತಿನೆಡೆ ಕಾಣಿಸಿ ಕೊಂಡ ನಂತರದಿಂದ, ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕುಪೀಡಿತರಾಗುತ್ತಿರುವುದು ಇದೇ ಮೊದಲು. ಎರಡನೇ ಅಲೆಯ ಹೊಡೆತ ಉಳಿದ ದೇಶಗಳಿಗಿಂತ ಭಾರತದ ವ್ಯಾಪಕವಾಗಿರುವುದು ಕಳವಳಕಾರಿ.

ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಸೋಂಕಿತರ ಮತ್ತು ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ಹತ್ತು ದಿನಗಳಿಗೆ, ಸೋಂಕಿತರ ಪ್ರಮಾಣ ದುಪ್ಪಟ್ಟಾಗುತ್ತಿದೆ. ರಾಷ್ಟ್ರೀಯ ಟೆಸ್ಟ್ ಪೊಸಿಟಿವಿಟಿ ರೇಟ್ ಹಿಂದಿನ ವಾರ ಶೇ.ಹದಿಮೂರರಷ್ಟಿತ್ತು. ಈ ವಾರ ಅದು ಶೇ. ಇಪ್ಪತ್ತಕ್ಕೇರಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇದು ಶೇ. ಐದಕ್ಕಿಂತಜಾಸ್ತಿಯಾಗಬಾರದು. ಆದರೆ ಭಾರತ ದಲ್ಲಿ ಇದು ಅಪಾಯದ ಅಂಚನ್ನು ದಾಟಿ ಹೋಗುತ್ತಿದೆ. ಕೆಲವು ರಾಜ್ಯಗಳಲ್ಲಿ ಇದು ಶೇ.ಮೂವತ್ತನ್ನು ದಾಟಿದೆ. ಪರೀಕ್ಷೆ ಮಾಡಿಸಿಕೊಂಡ ಮೂವರಲ್ಲಿ ಒಬ್ಬರಿಗೆ ಪಾಸಿಟಿವ್. ಸೋಂಕಿತರ ಸಂಖ್ಯೆಯಲ್ಲಿ ಭಾರತ ಅಮೆರಿಕವನ್ನು ಮೀರಿಸಲಿದೆ.

ಎರಡನೇ ಅಲೆ ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿನ ಲೋಪ – ದೋಷಗಳನ್ನು ಬಟಾಬಯಲು ಮಾಡಿದೆ. ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ, ಪ್ರತಿದಿನ ಹದಿನೈದು ಸಾವಿರಕ್ಕಿಂತ ಹೆಚ್ಚು ಮಂದಿ ಸೋಂಕಿತರಾಗುತ್ತಿದ್ದಾರೆ. ಈಗಾಗಲೇ ಆಸ್ಪತ್ರೆ ಯಲ್ಲಿ ಹಾಸಿಗೆ ಸಿಗುತ್ತಿಲ್ಲ. ಆಕ್ಸಿಜನ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಸೋಂಕಿತರ ಸಂಖ್ಯೆಯೇನಾದರೂ ಇಪ್ಪತ್ತು ಸಾವಿರ ದಾಟಿದರೆ, ಪರಿಸ್ಥಿತಿ ಕೈಮೀರಿಹೋಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಲಾಕ್ ಡೌನ್ ಹಾಕಬೇಕೋ, ಬೇಡವೋ ಎಂಬ ಬಗ್ಗೆಯೇ ಸರಕಾರಕ್ಕೆ ಸ್ಪಷ್ಟತೆ ಇಲ್ಲ. ವೈರಸ್ ಹರಡುವ ಸರಪಣಿಯನ್ನು ತುಂಡು ಮಾಡದೇ, ಅದನ್ನು ಹರಡುವುದನ್ನು ತಡೆಯಲು ಸಾಧ್ಯವೇ ಇಲ್ಲ. ಹಾಗೆ ಮಾಡಬೇಕೆಂದರೆ, ಅದಕ್ಕೆ ಲಾಕ್ ಡೌನ್ ಒಂದೇ ಉಪಾಯ. ಅಮೆರಿಕದಲ್ಲಿ ಲಾಕ್ ಡೌನ್ ಮಾಡದೇ ನಿಯಂತ್ರಿಸಿದ್ದರೆ, ಅದಕ್ಕೆ ಅಲ್ಲಿನ ಜನರ ಮನಸ್ಥಿತಿ ಮತ್ತು ವಿಶಾಲ
ಭೌಗೋಳಿಕ ಪ್ರದೇಶ ಕಾರಣ. ಈ ವಿಷಯದಲ್ಲಿ ಭಾರತವನ್ನು ಅಮೆರಿಕದೊಂದಿಗೆ ಹೋಲಿಸಲಾಗದು.

ಭಾರತವನ್ನು ಭಿನ್ನವಾಗಿಯೇ ನೋಡಬೇಕು. ಬೇರೆದೇಶಗಳಿಗೆ ಅನ್ವಯವಾಗುವ ನಿಯಮಗಳು ನಮಗೆ ಲಾಗೂ ಆಗುವುದಿಲ್ಲ.
ಇಂಥ ಸ್ಥಿತಿಯಲ್ಲಿ ಸರಕಾರದೊಂದಿಗೆ ಸ್ಥಿರವಾಗಿ ನಿಂತುಕೊಳ್ಳಬೇಕಾದುದು ಎಲ್ಲರ ಕರ್ತವ್ಯ. ಸರಕಾರವನ್ನು, ವ್ಯವಸ್ಥೆಯನ್ನು ಮತ್ತುಎಲ್ಲವುಗಳಿಗೂ ಕಾರಣರಾದ ‘ಮೋದಿ’ಯವರನ್ನು ದೂಷಿಸುತ್ತಾ ಕುಳಿತುಕೊಳ್ಳುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ. ಅದರ ಬದಲು ತೆಪ್ಪಗಿರುವುದು ನಾವು ಮಾಡಬಹುದಾದ ದೊಡ್ಡ ಉಪಕಾರ.

ಸರಕಾರಕ್ಕೆ ಏನು ಮಾಡಬೇಕು ಎಂಬುದು ಗೊತ್ತಿದೆ. ಅಧಿಕಾರಿಗಳು, ನುರಿತ ವೈದ್ಯರು, ಪರಿಣತರು, ಸಲಹೆಗಾರರು, ಅನುಭವಿಗಳು
ಸರಕಾರಕ್ಕೆ ಕಾಲಕಾಲಕ್ಕೆ ಸಲಹೆ-ಸೂಚನೆ ನೀಡುತ್ತಾರೆ ಎಂಬ ವಿವೇಚನೆ ಇಟ್ಟುಕೊಂಡರೆ ಸಾಕು. ಕುಳಿತಲ್ಲಿಂದ ಸಾಮಾಜಿಕ
ಜಾಲತಾಣದಲ್ಲಿ ಕಾಮೆಂಟು ಬರೆಯುವುದು, ಷರಾ ಗೀಚುವುದುಸುಲಭ. ಎರಡನೇ ಅಲೆಗೆ ಚೀನಾವೂ ಕಾರಣವಲ್ಲ, ಸರಕಾರವೂ
ಕಾರಣವಲ್ಲ. ಅದಕ್ಕೆ ನಾವು ಪ್ರತಿಯೊಬ್ಬರೂ ಕಾರಣರು. ಇಂಥ ಸಂಕಷ್ಟದ ಸಮಯದಲ್ಲಿ, ರಾಜಕಾರಣ ಮಾಡುವುದು ಮಹಾ
ಪಾಪ. ಸಾಧ್ಯವಾದರೆ ನಮ್ಮ ಕೈಲಾದ ಸಹಾಯ ಮಾಡೋಣ.

ಇಲ್ಲದಿದ್ದರೆ ಸುಮ್ಮನಿರೋಣ. ಅದೂ ಸಹ ಈ ಸಮಯದಲ್ಲಿ ನಾವು ಮಾಡಬಹುದಾದ ಉಪಕಾರವೇ. ಬೆಂಕಿ ಬಿದ್ದ ಮನೆಯಲ್ಲಿ ಮೈಕಾಯಿಸಿಕೊಳ್ಳುವ ನೀಚ ಮನೋಭಾವ ಬೇಡ.

ನಿನ್ನೆಯ ಪತ್ರಿಕೆ – ಇಂದಿನ ಪತ್ರಿಕೆ
ಕೆಲವು ವರ್ಷಗಳ ಹಿಂದೆ, ನಾನು ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣ ಮಾಡುತ್ತಿದ್ದೆ. ಆಗ ನಾನು ಸಂಪಾದಕ ನಾಗಿದ್ದ ‘ವಿಜಯ ಕರ್ನಾಟಕ’ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸುವುದು, ಹಳ್ಳಿ – ಹೋಬಳಿಗಳಲ್ಲಿ ವರದಿಗಾರರು ಮತ್ತು ಪತ್ರಿಕೆ ಏಜೆಂಟರನ್ನು ನೇಮಿಸುವುದು ನನ್ನ ಪ್ರವಾಸದ ಉದ್ದೇಶವಾಗಿತ್ತು.

ನಮ್ಮ ಪ್ರಸಾರಾಂಗ ಪ್ರಮುಖರು, ಈ ಊರುಗಳಲ್ಲಿ ಪತ್ರಿಕೆ ಓದುವಂತೆ ಜನರನ್ನು ಹೇಗೆ ಕೇಳುವುದು ಸಾರ್? ಈ ಊರುಗಳಲ್ಲಿ ಯಾರೂ ಪತ್ರಿಕೆಯನ್ನೇ ಓದುವುದಿಲ್ಲ’ ಎಂದು ಹೇಳಿದರು. ಯಾರೂ ಚಪ್ಪಲಿ ಧರಿಸದ ಊರಿನಲ್ಲಿ ಚಪ್ಪಲಿ ಮಾರಾಟ ಮಾಡುವುದು ಸುಲಭ ಎಂಬ ಮ್ಯಾನೇಜಮೆಂಟ್ ಕತೆಯನ್ನು ಕೇಳಿಲ್ಲವಾ? ಅದೇ ನಿಯಮವನ್ನು ನಾವು ಇಲ್ಲಿಯೂ ಪ್ರಯೋಗ ಮಾಡಿನೋಡೋಣ’ ಎಂದೆ. ಅದನ್ನು ಅವರು ಅಲ್ಲಿ ಜಾರಿಗೆ ತಂದು, ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿದ್ದು ಬೇರೆ ಕತೆ.

ನಾವು ಆ ಪ್ರದೇಶಗಳಲ್ಲಿ ಓಡಾಡುವಾಗ, ಒಂದು ಹಳ್ಳಿಯಲ್ಲಿ ನಮ್ಮ ವಾಹನವನ್ನು ನಿಲ್ಲಿದೆವು. ಅಲ್ಲಿನ ಒಂದು ಪೆಟ್ಟಿಗೆ ಅಂಗಡಿ ಯಲ್ಲಿ, ಕೆಲವು ಪತ್ರಿಕೆಗಳನ್ನು ನೇತು ಹಾಕಲಾಗಿತ್ತು. ಆದರೆ ಅವೆಲ್ಲವೂ ನಿನ್ನೆಯ ಪತ್ರಿಕೆಗಳಾಗಿದ್ದವು. ಏನ್ ಸ್ವಾಮೀ, ‘ಇಂದಿನ ಪತ್ರಿಕೆಗಳು ಇವೆಯಾ?’ ಎಂದು ಕೇಳಿದೆಅದಕ್ಕೆ ಆತ ಇಂದಿನ ಪತ್ರಿಕೆಗಳು ಬೇಕಾದರೆ, ನೀವು ನಾಳೆ ಇಲ್ಲಿಗೆ ಬರಬೇಕು. ನನ್ನ ಬಳಿ ಇರುವುದೆ ನಿನ್ನೆಯ ಪತ್ರಿಕೆಗಳು.

ಇಲ್ಲಿನ ಜನ ನಿನ್ನೆಯ ಪತ್ರಿಕೆಗಳನ್ನೇ ಇಂದಿನ ಪತ್ರಿಕೆಗಳು ಎಂದು ಭಾವಿಸಿ ಓದುತ್ತಾರೆ. ಅವರಿಗೆ ಅದರಿಂದ ಯಾವ ವ್ಯತ್ಯಾಸವೂ ಆಗಿಲ್ಲ. ಬಹಳ ವರ್ಷಗಳಿಂದ ನಾನು ಹೀಗೆ ಪತ್ರಿಕೆ ಮಾರುತ್ತಿದ್ದೇನೆ’ ಎನ್ನಬೇಕೇ? ಹಾಗೆ ನೋಡಿದರೆ, ಆ ಊರಿನ ಜನ ಇಂದು ಓದುವುದು ಮೊನ್ನೆಯ ಸುದ್ದಿಯಾಗಿತ್ತು. ಆದರೆ ಅವರೆಲ್ಲ ಇಂದಿನ ಸುದ್ದಿ ಎಂದೇ ಭಾವಿಸಿಕೊಂಡು ಓದುತ್ತಿದ್ದರು. ನಂತರ ಎಲ್ಲಾ ಜಿಲ್ಲೆಗಳಲ್ಲಿ ಎಡಿಷನ್ (ಆವೃತ್ತಿ) ಆರಂಭವಾದ ನಂತರ, ಈ ಚಿತ್ರಣ ಸಂಪೂರ್ಣಬದಲಾಯಿತು.

ಬುದ್ಧಿವಂತ ಆಲಸಿಗರು
ಬುದ್ಧಿವಂತರು ಆಲಸಿಗಳಾಗಿರುತ್ತಾರಂತೆ. ಹೇಗೆ ಅಂತೀರಾ? ನಾನು ಮತ್ತು ನನ್ನ ಹೆಂಡತಿ ಲಿವಿಂಗ್ ರೂಮಿನಲ್ಲಿ ಸೋಫಾದಲ್ಲಿ ಕುಳಿತು ಟಿವಿ ನೋಡುತ್ತಿದ್ದೆವು. ನನ್ನ ಮೊಬೈಲ್‌ಗೆ ಎಸ್ಸೆಮ್ಮೆಸ್ಬಂದಿರುವುದರ ಸೂಚಕವಾಗಿ ಬೀಪ್ ಸದ್ದು ಬಂದಿತು. ನಾನು ಸುತ್ತಲೂ ಮೊಬೈಲ್‌ಗೆ ತಡಕಾಡಿದೆ. ನಾನು ಅದನ್ನು ಕಿಚನ್‌ನಲ್ಲಿ ಬಿಟ್ಟು ಬಂದಿದ್ದೆ. ಎದ್ದು ಹೋಗಿ ಮೊಬೈಲ್ ನಲ್ಲಿರುವ ಎಸ್ಸೆಮ್ಮೆಸ್ ಮೆಸೇಜನ್ನು ನೋಡಿದರೆ. ನನ್ನಹೆಂಡತಿ ಕಳಿಸಿದ ಮೆಸೇಜ್ ಅದಾಗಿತ್ತು. ‘ಬರುವಾಗ ಬಿಸ್ಕತ್ ಮತ್ತು ಚಿಪ್ಸ್ ತೆಗೆದು ಕೊಂಡು ಬನ್ನಿ’ ಎಂದು ಎಸ್ಸೆಮ್ಮೆಸ್ ಕಳಿಸಿದ್ದಳು.

ಹೆಚ್ಚು ಸಲ ಕೆಮರಾಕ್ಕೆ ಮುಖ ಕೊಟ್ಟವರು

ಯಾವ ವ್ಯಕ್ತಿಯ ಫೋಟೋವನ್ನು ಅತಿ ಹೆಚ್ಚು ಸಲ ತೆಗೆಯಲಾಗಿದೆ (most photographed personality) ಎಂಬ ಪ್ರಶ್ನೆಗೆ ನಮ್ಮಮುಂದೆ, ಸಿನಿಮಾ ನಟ – ನಟಿಯರು, ಹಾಲಿವುಡ್ ತಾರೆಯರು, ಪ್ರಮುಖ ದೇಶಗಳ ಅಧ್ಯಕ್ಷರು, ಜಾಗತಿಕ ನಾಯಕರು, ಫುಟ್ಬಾಲ್ ಮತ್ತು ಕ್ರಿಕೆಟ್ ಆಟಗಾರರು, ಮುಂತಾದವರ ಇಮೇಜುಗಳು ಹಾದು ಹೋಗಬಹುದು. ಅದರಲ್ಲೂ ಅಮೆರಿಕ ಮತ್ತು ಯುರೋಪಿನಲ್ಲಿರುವ ಗಣ್ಯಾತಿಗಣ್ಯರು ಈ ಸಾಲಿಗೆ ಸೇರಬಹುದು ಎಂದು ನಾವೆ ಅಂದುಕೊಂಡಿರಬಹುದು. ಆದರೆ ಅಪ್ಪಿ ತಪ್ಪಿಯೂ TVXQ ಎಂದು ವಿಚಿತ್ರವಾಗಿ, ವಿಲಕ್ಷಣವಾಗಿ ಕರೆಯಿಸಿಕೊಳ್ಳುವ ಇಬ್ಬರ ಹೆಸರು ನಮ್ಮ ಮುಂದೆ ಬರಲು ಸಾಧ್ಯವೇ ಇಲ್ಲ. ಆದರೆ ದಕ್ಷಿಣ ಕೊರಿಯಾದ ಈ ಇಬ್ಬರು ಪಾಪ್ ಸಂಗೀತಗಾರರು ಜಗತ್ತಿನ ಹತ್ತು most photographed persona lities ಪಟ್ಟಿಯಲ್ಲಿ ಈ ಪಾಪ್ ಸಂಗೀತಗಾರರ ಹೆಸರಿದೆ ಎಂದರೆ ಆಶ್ಚರ್ಯವಾಗ ಬಹುದು.

ಅಷ್ಟಕ್ಕೂ TVXQ ವಿಸ್ತೃತ ರೂಪ – Tong Vfang Xien Qi. 2003 ರಲ್ಲಿ ಇವರು ಹಠಾತ್ ಜನಪ್ರಿಯರಾದರು. ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಇವರ ಹಾಡುಗಳ ಕೋಟ್ಯಂತರ ಧ್ವನಿಮುದ್ರಿಕೆಗಳು ಮಾರಾಟವಾದವು. ಇವರ ಜನಪ್ರಿಯತೆ ಅಮೆರಿಕ, ಆಫ್ರಿಕಾ, ಯುರೋಪಿಗೂ ಹರಡಿತು. ಇವರು ಜಗತ್ತಿನಾದ್ಯಂತ ಪ್ರವಾಸ ಮಾಡಿದಾಗ, ಇವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಜನ ಮುಗಿ ಬೀಳುತ್ತಿದ್ದರು. ಇವರ ಫೋಟೋ ತೆಗೆಯಲು ಫೋಟೋಗ್ರಾಫರುಗಳಲ್ಲಿ ಪೈಪೋಟಿ. ಇವರಿಬ್ಬರ ಹತ್ತು ಸಾವಿರಕ್ಕೂ ವಿಭಿನ್ನ ಭಂಗಿಯ ಫೋಟೋಗಳಿವೆ.

ಜಗತ್ತಿನ ಟಾಪ್ ಟೆನ್ most photographed personalities ಪಟ್ಟಿಯನ್ನು ಸಿದ್ಧಪಡಿಸಿದರೆ, ಅದರಲ್ಲಿ ಮರ್ಲಿನ್ ಮನ್ರೋ, ಮೈಕೆಲ್ ಜಾಕ್ಸನ್, ರಾಜಕುಮಾರಿ ಡಯಾನಾ, ಕ್ರಿಸ್ಟಿಯಾನೊ ರೊನಾಲ್ಡೊ, ಎಲ್ವಿಸ್ ಪ್ರೆಸ್ಲಿ, ಮಹಮದ್ ಅಲಿ, ಬ್ರಿಟ್ನಿ ಸ್ಪಿಯರ್ಸ್, ಎರಡನೇ ಪೋಪ್ ಜಾನ್ ಪಾಲ್ ಜತೆಗೆ TVXQ  ಕೂಡ ಬರುತ್ತಾರೆ. ಆದರೆ ಅವರ ಫೋಟೋ ತೋರಿಸಿದರೂ ಗುರುತು ಹಿಡಿಯ ದವರೂ ಇರಬಹುದು.

ಬಚ್ಚಲುಮನೆಗೊಂದು ಪತ್ರಿಕೆ
ಕಳೆದ ವಾರ ನ್ಯೂಯಾರ್ಕ್ ನಲ್ಲಿರುವ ಸ್ನೇಹಿತರೊಬ್ಬರು ನನಗೆ ಒಂದು ಮ್ಯಾಗಜಿನ್ ಕಳಿಸಿಕೊಟ್ಟಿದ್ದರು. ಅದರ ಹೆಸರು
ಫೆಸಿಲಿಟಿ’. ಇದು ಸಂಪೂರ್ಣ ಬಾಥರೂಮ್ ಬಗ್ಗೆಯೇ ಮೀಸಲಾದ, ನೂರಾ ಹನ್ನೆರಡು ಪುಟಗಳ ಪತ್ರಿಕೆ. ಬಾಥರೂಮ್ ಮೂಲಕ ಜಗತ್ತನ್ನುನೋಡುವ ಪ್ರಯತ್ನ’ ಎಂಬ ಸಾಲನ್ನು ಈ ಪತ್ರಿಕೆ ತನ್ನ ಘೋಷವಾಕ್ಯವನ್ನಾಗಿಟ್ಟುಕೊಂಡಿದೆ.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ, ಬಾಥರೂಮ್ ಬಗ್ಗೆ ಜನರ ಅಭಿಪ್ರಾಯ ಬದಲಾಗುತ್ತಿದೆ. ಅದನ್ನು ಈಗ ‘ರೆಸ್ಟ್ ರೂಮ’ ಎಂದು ಕರೆಯಲಾಗುತ್ತಿದೆ. ಮನೆಯ ಜಗುಲಿ ಅಥವಾ ಲಿವಿಂಗ್ ರೂಮಿಗೆ ನೀಡಿದಷ್ಟೇ ಮಹತ್ವವನ್ನು ಬಾಥರೂಮಿಗೂ ನೀಡಲಾಗುತ್ತಿದೆ. ಅಲ್ಲಿ ಕಳೆಯುವ ಸಮಯದ ಪ್ರಮಾಣವೂ ಜಾಸ್ತಿಯಾಗುತ್ತಿದೆ. ಐವತ್ತು ವರ್ಷಗಳ ಹಿಂದೆ, ಅಲ್ಲಿ ದಿನದಲ್ಲಿ ಆರರಿಂದ ಹನ್ನೆರಡು ನಿಮಿಷಗಳನ್ನು ಕಳೆದರೆ, ಆ ಪ್ರಮಾಣ ಈಗ, ನಲವತ್ತು ನಿಮಿಷಗಳಿಂದ ಒಂದು ಗಂಟೆಗೆ ಏರಿದೆ.

ಇದಕ್ಕೆ ತಕ್ಕ ಹಾಗೆ, ಬಾಥರೂಮ್‌ಗೆ ಮೀಸಲಿಡುವ ಜಾಗದ ವಿಸ್ತೀರ್ಣವೂ ಹೆಚ್ಚಿದೆ. ಕೆಲವರು ರೂಮಿನ ಅರ್ಧದಷ್ಟು ಪ್ರಮಾಣ ವನ್ನುಅದಕ್ಕಾಗಿ ಮೀಸಲಿಡುತ್ತಾರೆ. ದಿನ ಕಳೆದಂತೆ, ಬಾಥರೂಮಿನ ವಿನ್ಯಾಸ, ರಚನೆ, ಅಂದ, ಶೃಂಗಾರಗಳೆ ಬದಲಾಗುತ್ತಿವೆ. ಆಧುನಿಕಮನೆಗಳಲ್ಲಿ, ಬಾಥರೂಮ್ ರಚನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.

ಇಂದು ಬಾಥರೂಮ್ ಒಂದು ಪುಟ್ಟ ಪ್ರಪಂಚವಾಗಿ ಪರಿವರ್ತನೆಯಾಗಿದೆ. ಬಾಥರೂಮ್ ಚಿಂತನೆ, ಬಾಥರೂಮ್ ಸಾಹಿತ್ಯ, ಬಾಥರೂಮ್ ಸಂಗೀತ, ಬಾಥರೂಮ್ ರೀಡಿಂಗ್, ಬಾಥರೂಮ್ ರೈಟಿಂಗ್.. ಹೀಗೆ ನಾನಾ ಪ್ರಕಾರಗಳು ಹುಟ್ಟುಕೊಂಡಿವೆ. ಬಾಥರೂಮ್ ಅಂದರೆ ಕೇವಲ ಬಹಿರ್ದೆಸೆಗೆ ಹೋಗುವ ತಾಣವಲ್ಲ. ನೆಮ್ಮದಿಯಿಂದ, ನಿರಾಳವಾಗಿ, ಮನಸ್ಸಿಗೆ ತೋಚಿದಂತೆ, ಬಿಡುಬೀಸಾಗಿ, ಏಕಾಂತದಲ್ಲಿ, ಏಕಾಂಗಿಯಾಗಿ ಇರಬಹುದಾದ ಪ್ರಶಸ್ತ ತಾಣವಾಗಿದೆ.

ಇಂಥ ಮನಸ್ಸುಳ್ಳವರಿಗಾಗಿ ಈ ಪತ್ರಿಕೆ ಮೀಸಲು. ಪ್ರತಿ ಸಂಚಿಕೆಯಲ್ಲಿ ಬಾಥರೂಮಿನ ವಿಶ್ವದರ್ಶನ ಮಾಡಿಸುವ ಪ್ರಯತ್ನವಿದೆ. ಬಾಥರೂಮ್ ಕೂಡ ನಮ್ಮ ಚಿಂತನೆ ಮತ್ತು ವ್ಯಕ್ತಿತ್ವವನ್ನು ಹೇಗೆ ರೂಪಿಸಬಲ್ಲದು, ಪ್ರತಿದಿನವನ್ನು ಬಾಥರೂಮಿನಿಂದ ಹೇಗೆಪರಿಣಾಮಕಾರಿಯಾಗಿ ಆರಂಭಿಸಬಹುದು, ಬಾಥರೂಮಿನಲ್ಲಿ ಇರಲೇಬೇಕಾದ ಸಾಮಾನುಗಳೇನು, ಅದರ ವಿನ್ಯಾಸ ಹೇಗೆ …. ಅನೇಕ ಸಂಗತಿಗಳ ಬಗ್ಗೆ ತಜ್ಞರ ಲೇಖನ, ಅಭಿಪ್ರಾಯಗಳನ್ನು ಈ ಪತ್ರಿಕೆಯಲ್ಲಿ ನೀಡಲಾಗುತ್ತಿದೆ.

ತಮಾಷೆಯೆಂದರೆ, ಈ ಪತ್ರಿಕೆಯಲ್ಲಿಕವನ, ಕಥೆಗಳಿಗೂ ಪುಟಗಳನ್ನೂ ಮೀಸಲಿಡಲಾಗಿದೆ. ಅವು ಬಾಥರೂಮ್ ಬಗ್ಗೆಯೇ ಇರುವುದು ವಿಶೇಷ. ಬಾಥರೂಮ್ ಅಂದರೆ ಬಚ್ಚಲುಮನೆಯಲ್ಲ, ಅದೂ ಕೂಡ ಮನೆಯ ಅತ್ಯಂತ ಪ್ರಮುಖ ಕೋಣೆ ಎಂಬುದನ್ನು ಈ ಪತ್ರಿಕೆ ಓದಿದಯಾರಿಗಾದರೂ ಅನಿಸದೇ ಇರದು.

ಪೈಲಟ್ ಮಾಡಿದ ಪವಾಡ
ಬೆಂಗಳೂರಿನಿಂದ ದಿಲ್ಲಿಗೆ ಹೋಗುವ ವಿಮಾನ ಆಗಷ್ಟೇ ಟೇಕಾಫ್ ಆಯಿತು. ಎಕಾನಮಿ ಕ್ಲಾಸಿನಲ್ಲಿ ಕುಳಿತಿದ್ದ ರಾಜಕಾರಣಿ ಯೊಬ್ಬಎದ್ದು ಬಿಜಿನೆಸ್ ಕ್ಲಾಸಿಗೆ ಹೋಗಿ ಕುಳಿತುಕೊಂಡ. ಇದನ್ನು ಗಗನಸಖಿಯೊಬ್ಬಳು ನೋಡಿದಳು. ಸಾರ್, ನೀವು ಇಲ್ಲಿ ಕುಳಿತುಕೊಳ್ಳುವ ಹಾಗಿಲ್ಲ. ನಿಮಗೆ ಮೀಸಲಾದ ಸೀಟಿನಲ್ಲಿಯೇ ಆಸೀನರಾಗಬೇಕು. ಇದು ಬಿಜಿನೆಸ್ ಕ್ಲಾಸ್. ಎಕಾನಮಿ ಕ್ಲಾಸಿಗೆ ಹೋಗಿ ಕುಳಿತುಕೊಳ್ಳಿ’ ಎಂದು ಹೇಳಿದಳು.

ಅದಕ್ಕೆ ಆ ರಾಜಕಾರಣಿ, ನಾನು ಯಾರು ಗೊತ್ತಾ? ನಾನು ಈ ದೇಶದ ನೇತಾ. ನಾನು ಯಾವತ್ತೂ ಬಿಜಿನೆಸ್ ಕ್ಲಾಸಿನಲ್ಲಿಯೇ ಪ್ರಯಾಣಿಸೋದು. ಎಕಾನಮಿ ಕ್ಲಾಸ್ ಟಿಕೆಟ್ ತೆಗೆದುಕೊಂಡರೂ, ಬಿಜಿನೆಸ್ ಕ್ಲಾಸ್ ಖಾಲಿಯಿದ್ದರೆ, ಅಲ್ಲಿಯೇ ಹೋಗಿ ಕುಳಿತು ಕೊಳ್ಳೋದು. ಇದರಿಂದ ನಿಮಗೇನು ತೊಂದರೆ?’ ಎಂದ ಧಿಮಾಕಿನಿಂದ.

ಅದಕ್ಕೆ ಗಗನಸಖಿ, ಇರಬಹುದು ಸಾರ್, ಆದರೆ ನೀವು ಬಿಜಿನೆಸ್ ಕ್ಲಾಸ್ ಖಾಲಿಯಿದೆಯೆಂದು ಅಲ್ಲಿ ಪಯಣಿಸುವ ಹಾಗಿಲ್ಲ. ದಯವಿಟ್ಟು ನಿಮ್ಮ ಮೂಲ ಸ್ಥಾನವಾದ ಎಕಾನಮಿ ಕ್ಲಾಸಿಗೆ ಮರಳಿ’ ಎಂದು ವಿನಂತಿಸಿಕೊಂಡಳು. ಆದರೆ ರಾಜಕಾರಣಿ ಜಗ್ಗಲಿಲ್ಲ. ಬಿಜಿನೆಸ್ ಕ್ಲಾಸಿನಲ್ಲಿಯೇ ಕುಳಿತೇ ಇದ್ದ. ಗಗನಸಖಿ ಈ ವಿಷಯವನ್ನು ಪೈಲಟ್‌ಗೆ ತಿಳಿಸಿದಳು. ಮುಖ್ಯ ಪೈಲಟ್ ತನ್ನ ಕಿರಿಯ ಪೈಲಟ್‌ಗೆ ಪರಿಸ್ಥಿತಿಯನ್ನು ನಿಭಾಯಿಸುವಂತೆಹೇಳಿದ. ಕಿರಿಯ ಪೈಲಟ್ ರಾಜಕಾರಣಿಯ ಹತ್ತಿರ ಹೋಗಿ, ಎಕಾನಮಿ ಕ್ಲಾಸಿಗೆ ಮರಳುವಂತೆ ವಿನಂತಿಸಿಕೊಂಡ. ಆದರೆ ರಾಜಕಾರಣಿಆಗಲೂ ಜಗ್ಗಲಿಲ್ಲ.

ಗಗನಸಖಿ ಜತೆ ವಾದ ಮಾಡಿದಂತೆ, ಮೊಂಡು ಹಠ ಮಾಡಿದ. ಯಾವುದೇ ಕಾರಣಕ್ಕೂ ಬಿಜಿನೆಸ್ ಕ್ಲಾಸ್ ಬಿಟ್ಟು ಕದಲುವುದಿಲ್ಲ
ಎಂದು ಹೇಳಿದ. ಕಿರಿಯ ಪೈಲಟ್ ಕೈಚೆಲ್ಲಿದ. ಮುಖ್ಯ ಪೈಲಟ್‌ಗೆ ಹೋಗಿ ನಡೆದುದನ್ನು ವಿವರಿಸಿದ. ಪೈಲಟ್ ತಾನೇ ಖುದ್ದಾಗಿ ಹೋಗಿ, ರಾಜಕಾರಣಿಯ ಜತೆ ಮಾತಾಡಲು ನಿರ್ಧರಿಸಿದ. ಒಂದು ನಿಮಿಷದಲ್ಲಿ ಅವರ ಮಾತುಕತೆಮುಗಿದು ಹೋಯಿತು. ತಟ್ಟನೆ
ರಾಜಕಾರಣಿ ಎದ್ದು ತನ್ನ ಮೂಲ ಆಸನವಿರುವ ಎಕಾನಮಿ ಕ್ಲಾಸಿಗೆ ಹೋಗಿ ಕುಳಿತುಕೊಂಡ. ಮುಖ್ಯ ಪೈಲಟ್ ಕಾಕ್ ಪಿಟ್‌ಗೆ
ಮರಳುತ್ತಿದ್ದಂತೆ, ಗಗನಸಖಿ ಮತ್ತು ಕಿರಿಯ ಪೈಲಟ್ ಆಶ್ಚರ್ಯದಿಂದ, ಕ್ಯಾಪ್ಟನ್, ಇದೇನುಮಾಡಿದಿರಿ? ಒಂದೇ ನಿಮಿಷದಲ್ಲಿ ಆ ರಾಜಕಾರಣಿಯನ್ನು ಎಕಾನಮಿ ಕ್ಲಾಸಿಗೆ ಓಡಿಸಿಬಿಟ್ಟಿರಿ. ಅದೇನು ಪವಾಡ ಮಾಡಿದಿರಿ?’ ಎಂದು ಕೇಳಿದರು.

ಅದಕ್ಕೆ ಪೈಲಟ್ ಹೇಳಿದ – ‘ಸಿಂಪಲ್, ಬಿಜಿನೆಸ್ ಕ್ಲಾಸ್‌ನಲ್ಲಿ ಕುಳಿತರೆ ದಿಲ್ಲಿಗೆ ಹೋಗುವುದಿಲ್ಲ. ಅದು ಲಕ್ನೋಕ್ಕೆ ಹೋಗುತ್ತೆ ಅಂತಹೇಳಿದೆ. ಅಷ್ಟಕ್ಕೇ ಆತ ಓಡೋಡಿ ಎಕಾನಮಿ ಕ್ಲಾಸಿಗೆ ಹೋಗಿ ಕುಳಿತುಕೊಂಡ.’

Leave a Reply

Your email address will not be published. Required fields are marked *

error: Content is protected !!