Sunday, 8th September 2024

ನಿಮ್ಮೊಳಗೆ ಅವಲೋಕನವನ್ನು ಮಾಡುತ್ತಿರುವವರು ಯಾರು ?

ಶ್ವೇತಪತ್ರ

ನೀವೇನೇ ಆಲೋಚಿಸುತ್ತಿದ್ದರೂ, ಸಂವೇದಿಸುತ್ತಿದ್ದರೂ, ಏನೇ ಮಾಡುತ್ತಿದ್ದರೂ ಆ ಎಲ್ಲವನ್ನೂ ಅವಲೋಕಿಸು ತ್ತಲಿರುತ್ತದೆ ನಿಮ್ಮದೇ ಒಳಗಣ್ಣು. ಇದರ ನೋಟವಿಲ್ಲದೆ ಸ್ವಯಂ ಎಚ್ಚರಿಕೆ ಸಾಧ್ಯವಿಲ್ಲ. ನೀವು ಹುಟ್ಟಿದಾಗಿನಿಂದ ಇಲ್ಲಿಯ ತನಕ ನಿರಂತರವಾಗಿ ಬದಲಾವಣೆಗೆ ಒಳಪಡುತ್ತಿರುವುದು ನಿಮ್ಮ ಆಲೋಚನೆ ಹಾಗೂ ಸಂವೇದನೆ.

ಫ್ರೆಂಚ್ ತತ್ತ್ವಶಾಸ್ತ್ರಜ್ಞ ರೆನೆ ಡೆಕಾರ್ಟನ ’’I think, therefore I am’’ ಎಂಬ ಮಾತು ನಮ್ಮೆಲ್ಲರ ಮನದೊಳಗೆ ಅಮರವಾಗಿ ಛಾಪೊತ್ತಿಬಿಟ್ಟಿದೆ. ಸ್ವಯಂ ಆಲೋಚನೆ ಎಂಬುದು ಮಾನವನ ವಿಕಾಸದ ಪರಾಕಾಷ್ಠೆ ಎಂದರೆ ತಪ್ಪಾಗಲಾರದು. ‘ಬುದ್ಧಿ ಬೆಳೆಸಿಕೊಳ್ಳಿ’ ಹೀಗೊಂದು ಬಾಯಿಮಾತನ್ನು, ಬೈಗುಳವನ್ನು ಕೇಳಿಯೇ ಬೆಳೆದವರು ನಾವೆಲ್ಲ. ‘ನಿಮ್ಮ ಬಗ್ಗೆ ನೀವು ಯೋಚಿಸುವುದನ್ನು ಕಲಿಯಿರಿ’ ಇದನ್ನೂ ಕೇಳಿಸಿಕೊಂಡಿ ದ್ದೇವೆ, ಅಲ್ಲವೇ? ಪಾರ್ಶ್ವ ಚಿಂತನೆ, ತರ್ಕಬದ್ಧ ಚಿಂತನೆ, ಚಿಂಚನ್ ಚಿಂತನೆ, ತಾರ್ಕಿಕ ಚಿಂತನೆ, ಧನಾತ್ಮಕ ಚಿಂತನೆ, ವಿಶ್ಲೇಷಣಾತ್ಮಕ ಚಿಂತನೆ, ಆಶಾವಾದಿ ಚಿಂತನೆ ಹೀಗೆ ಚಿಂತನೆ, ಆಲೋಚನೆ ಗಳೆಂದಿಗೂ ನಮ್ಮನ್ನು, ನಮ್ಮ ವರ್ತನೆಯನ್ನು ಸದಾ ಮಾರ್ಗ ದರ್ಶಿಸುತ್ತವೆ.

ಬದುಕಿನ ಅನೇಕ ಸಮಸ್ಯೆಗಳನ್ನು ನಿಭಾಯಿಸಲು ಆಲೋಚನಾ ಕೌಶಲಗಳು ಎಂದಿಗೂ ಬಹುಮುಖ್ಯ. ನಮ್ಮ ಇರುವಿಕೆಯನ್ನು ಸಾಬೀತಪಡಿಸುವುದೇ ನಮ್ಮ ಆಲೋಚನೆಗಳು ಎಂಬುದನ್ನು ‘”I think, therefore I am’’ ಎಂಬ ಡೆಕಾರ್ಟನ ಈ ಮಾತು ಸ್ಪಷ್ಟಪಡಿಸು ತ್ತದೆ. ನಮ್ಮ ಆಲೋಚನೆಗಳು ಎಂದಾಗ, ‘ಹಾಗಿದ್ದರೆ ನಮ್ಮ ಆಲೋಚನೆ ಗಳನ್ನು ಅವಲೋಕಿಸುವವರು ಯಾರು?’ ಹೀಗೊಂದು ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ನಾನು-ನೀವೆಲ್ಲ, ‘ನಾವಲ್ಲದೆ ನಮ್ಮ ಆಲೋಚನೆಯನ್ನು ಮತ್ತಿನ್ನಾರು ಅವಲೋಕಿಸುವುದು’ ಎಂಬ ಉತ್ತರವನ್ನು ನೀಡುತ್ತೇವೆ, ಅಲ್ಲವೇ. ಅದರಲ್ಲಿ ನಾವೆಲ್ಲ ಮಾನಸಿಕವಾಗಿ ಮಾದರಿ ಯುತ ಬದಲಾವಣೆಯೆಡೆಗೆ ಹೊರಡಬೇಕಾಗಿದ್ದು, ಅದಕ್ಕಾಗಿ ನಾವಿಲ್ಲಿ ಒಂದು ಪುಟ್ಟ ಚಟುವಟಿಕೆ ಯನ್ನು ಮಾಡಬೇಕಿದೆ.

ನಾನು ಐದು ಪುಟ್ಟ ಟಿಪ್ಪಣಿಗಳನ್ನು ನೀಡುತ್ತೇನೆ. ಪ್ರತಿ ಟಿಪ್ಪಣಿಯೂ ಒಂದು ಪ್ರಶ್ನೆಯೊಂದಿಗೆ ಕೊನೆಗೊಳ್ಳುತ್ತದೆ. ಪ್ರತಿ ಟಿಪ್ಪಣಿಯ ಕೊನೆಯ ಪ್ರಶ್ನೆಯನ್ನು ಓದಿದಾಗಲೂ ನೀವು ನಿಮ್ಮ ಆ ಕ್ಷಣದ ಪ್ರತಿಕ್ರಿಯೆಯನ್ನು ಅವಲೋಕಿಸಿ. ಆ ಕ್ಷಣದ ನಿಮ್ಮ ಆಲೋಚನೆ, ಸಂವೇದನೆ ಮತ್ತು ಆ ಕ್ಷಣದಲ್ಲಿ ನಿಮ್ಮ ಮನಸ್ಸಿನಲ್ಲಿ ಮೊಳಕೆಯೊಡೆದ ಅನಿಸಿಕೆಗಳು ಹೀಗೆ ನಿಮ್ಮ ಮನಸ್ಸಿನಲ್ಲಿ ಆ ಕ್ಷಣಕ್ಕೆ ಏನನಿಸುತ್ತದೆಯೋ ಅದನ್ನು ಗುರುತಿಸಿ.  ಈ ಅಭ್ಯಾಸದ ಹೆಸರು ‘ನಾನು ಯಾರು?’.

ಮೊದಲ ಟಿಪ್ಪಣಿ: ಇದನ್ನು ಓದುವಾಗ ನೀವೇನು ಮಾಡುತ್ತಿರುವಿರೆಂದು ಹಾಗೇ ಅವಲೋಕಿಸಿ. ನೀವು ಓದುತ್ತಿರುವುದನ್ನು ಗಮನಿಸಿ. ನಿಮ್ಮ ಕಣ್ಣು ಪುಟದ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಹೊರಳುತ್ತಿದೆ, ಅದನ್ನು ಗಮನಿಸಿ. ಅದೇ ನಿಮ್ಮ ಕಣ್ಣು ಲೇಖನದ ಪ್ರತಿ ಪದದಿಂದ ಮತ್ತೊಂದು ಪದಕ್ಕೆ ದಾಟುತ್ತಿದೆ. ಈಗ ನಿಮ್ಮನ್ನು ನೀವೇ ಕೇಳಿಕೊಳ್ಳಿ- ‘ಈ ಅವಲೋಕನವನ್ನು ಮಾಡುತ್ತಿರುವವರು ಯಾರು?’.

ಎರಡನೇ ಟಿಪ್ಪಣಿ: ಮೊದಲನೇ ಟಿಪ್ಪಣಿಯ ಪ್ರಶ್ನೆಗೆ ನಿಮ್ಮ ಉತ್ತರವೇನು? ಬಹುಶಃ ನಿಮ್ಮ ಉತ್ತರ ‘ನಾನು’ ಎನ್ನುವು ದಾಗಿರುತ್ತದೆ. ಈ ಪ್ರಶ್ನೆ ಎದುರಾದಾಗ, ಸುಸಂಬದ್ಧ ಆಲೋಚನೆಗಿಂತ ಗೊಂದಲದ ಅಥವಾ ಕಿರಿಕಿರಿಯ ಅಥವಾ ಏನೂ ತೋಚದ ಮನಸ್ಥಿತಿ ನಿಮ್ಮದಾಗಿರುತ್ತದೆ. ಈಗ ಮತ್ತದೇ ಪ್ರಶ್ನೆಯನ್ನು ಕೇಳಿಕೊಳ್ಳಿ- ‘ಅವಲೋಕನವನ್ನು ಮಾಡುತ್ತಿರುವವರು ಯಾರು?’.

ಮೂರನೇ ಟಿಪ್ಪಣಿ: ಈಗ ಪ್ರತಿಕ್ರಿಯೆಗಳೇನೇ ಇರಲಿ ಹಾಗೇ ಅವಲೋಕಿಸಿ. ಈಗಲೂ ನಿಮಗೆ ಅವಲೋಕಿಸುತ್ತಿರುವುದು ‘ನಾನೇ’
(ನೀವೇ) ಎನಿಸುತ್ತಿದೆಯೇ ಅಥವಾ ಪ್ರಶ್ನೆಯಿಂದ ನಿಮಗೆ ಕಿರಿಕಿರಿಯ ಅನುಭವ ಉಂಟಾಗುತ್ತಿದೆಯೇ? ಅದನ್ನು ಅವಲೋಕಿಸಿ ಹಾಗೂ ಮತ್ತದೇ ಪ್ರಶ್ನೆಯನ್ನು ಕೇಳಿಕೊಳ್ಳಿ- ‘ನಿಮ್ಮೊಳಗೆ ಅವಲೋಕಿಸುತ್ತಿರುವವರು ಯಾರು?’.

ನಾಲ್ಕನೇ ಟಿಪ್ಪಣಿ: ಈಗ ನೀವು ಕುಳಿತಿರುವ ಭಂಗಿಯನ್ನು ಒಮ್ಮೆ ಅವಲೋಕಿಸಿ. ಹಾಗೆಯೇ ನಿಮ್ಮ ಕಾಲ ಹಾಗೂ ಪಾದದೊಳಗೆ ಆಗುತ್ತಿರುವ ಅನುಭವ ಗಳನ್ನು ಸಂವೇದಿಸಿ. ನಿಮ್ಮವೇ ಪಾದಗಳನ್ನು ಅಲುಗಾಡಿಸಿ. ಹೇಗನಿಸುತ್ತಿದೆ? ಈಗ ನಿಮ್ಮನ್ನು ನೀವೇ ಕೇಳಿಕೊಳ್ಳಿ- ‘ನಿಮ್ಮೊಳಗೆ ಅವಲೋಕಿಸುತ್ತಿರುವವರು ಯಾರು?’. ಮೇಲಿನ ನಾಲ್ಕು ಟಿಪ್ಪಣಿಯ ಪ್ರಶ್ನೆಗಳಿಗೆ ನಿಮ್ಮೆಲ್ಲರ ಉತ್ತರ ‘ನಾನು’ ಎಂದಾಗಿರುತ್ತದೆ, ಅಲ್ಲವೇ. ಈಗ ನಿಮ್ಮನ್ನು ನೀವೇ ಕೇಳಿಕೊಳ್ಳಿ- ನೀವು ಹೇಳಿದ್ದನ್ನೆಲ್ಲ ಮಾಡುತ್ತಿದ್ದುದು ನಿಮ್ಮ ಆಲೋಚನೆಯೇ, ನಿಮ್ಮ ಗ್ರಹಿಕೆಯೇ, ನಿಮ್ಮ ಸಂವೇದನೆಯೇ? ಅಥವಾ ಇವೆಲ್ಲವನ್ನು ಅವಲೋಕಿಸಿದ್ದು ಒಂದು ಜಾಗವೇ? ಉತ್ತರವನ್ನು ಹುಡುಕಲು ಪ್ರಯತ್ನಿಸಿ.

ಸ್ವಯಂ ಅವಲೋಕನ: ಮೇಲಿನ ಅಭ್ಯಾಸದಲ್ಲಿ ನಮಗೆ ಅರ್ಥವಾದ ಒಂದು ವಿಷಯವೆಂದರೆ, ನಮ್ಮ ಆಲೋಚನೆ ನಮ್ಮ ಗ್ರಹಿಕೆಗಳಲ್ಲೇ ಇರಲಿ, ಅವುಗಳಿಂದ ಪ್ರತ್ಯೇಕವಾಗಿ ನಿಮ್ಮೊಳಗೆ ನೀವಿದ್ದೀರಿ. ಇದನ್ನೇ ನಾನು ಸ್ವಯಂ ಅವಲೋಕನ ಎಂದದ್ದು.
ಈ ಸ್ವಯಂ ಅವಲೋಕನ ಎನ್ನುವ ಜಾಗದಿಂದಲೇ ನೀವು ನಿಮ್ಮ ಆಲೋಚನೆ, ಸಂವೇದನೆ, ಗ್ರಹಿಕೆ, ನೆನಪು, ಆಸೆ-ಆಕಾಂಕ್ಷೆಗಳನ್ನು ನೋಡಲು ಸಾಧ್ಯವಾಗುವುದು.

ನೀವೇನೇ ಆಲೋಚಿಸುತ್ತಿದ್ದರೂ, ಸಂವೇದಿಸುತ್ತಿದ್ದರೂ, ಏನೇ ಮಾಡುತ್ತಿದ್ದರೂ ಆ ಎಲ್ಲವನ್ನೂ ಅವಲೋಕಿಸುತ್ತಲಿರುತ್ತದೆ ನಿಮ್ಮೊಳಗಿನ ನಿಮ್ಮದೇ ಒಳಗಣ್ಣು. ಈ ಒಳಗಣ್ಣಿನ ನೋಟವಿಲ್ಲದೆ ಸ್ವಯಂ ಎಚ್ಚರಿಕೆ ಸಾಧ್ಯವಿಲ್ಲ. ನೀವು ಹುಟ್ಟಿದಾಗಿನಿಂದ ಇಲ್ಲಿಯ ತನಕ ನಿರಂತರವಾಗಿ ಬದಲಾವಣೆಗೆ ಒಳಪಡುತ್ತಿರುವುದು ನಿಮ್ಮ ಆಲೋಚನೆ ಹಾಗೂ ಸಂವೇದನೆ (ಕಳೆದ ೫ ನಿಮಿಷಗಳಲ್ಲಿ ನಿಮ್ಮ ಮನದೊಳಗೆ ಅವೆಷ್ಟು ಆಲೋಚನೆಗಳು ಸರಿದುಹೋದವು, ಗಮನಿಸಿ).

ಕೆಲವೊಂದಿಷ್ಟು ಆಲೋಚನೆಗಳು ಹಿತಕರವಾಗಿದ್ದರೆ, ಮತ್ತೆ ಕೆಲವಷ್ಟು ಆಲೋಚನೆಗಳು ಅಷ್ಟೇ ನೋವಿನಿಂದ ತುಂಬಿರುತ್ತವೆ. ಕೆಲವೊಮ್ಮೆ ನಮ್ಮವೇ ಆಲೋಚನೆಗಳು ನಮಗೆ ಅನುಕೂಲಕರವಾಗಿದ್ದರೆ, ಕೆಲವೊಮ್ಮೆ ಅವೇ ಆಲೋಚನೆಗಳು ತಮಗೆ ತಡೆಗೋಡೆಗಳಾಗಿಬಿಟ್ಟಿರುತ್ತವೆ. ಆದರೆ ಒಂದಂತೂ ಸತ್ಯ- ಆಲೋಚನೆಗಳು ಸದಾ ಬದಲಾಗುತ್ತಲೇ ಇರುತ್ತವೆ.

ಆಲೋಚನೆಗಳೊಂದಿಗೆ ಸಂಯೋಜನೆಗೊಂಡ ಭಾವನೆಗಳು ಬದಲಾಗುತ್ತಿರುತ್ತವೆ. ಕೆಲವೊಮ್ಮೆ ಕೋಪ, ಕೆಲವೊಮ್ಮೆ ಶಾಂತತೆ, ಒಮ್ಮೆ ಪೂರ್ತಿ ಲವಲವಿಕೆ, ಮತ್ತೊಮ್ಮೆ ಅದೇನೋ ನಿರಾಸಕ್ತಿ. ಇಡೀ ಬದುಕಿನ ಉದ್ದಕ್ಕೂ ನಮ್ಮ ದೇಹ-ಮನಸ್ಸುಗಳೆರಡೂ ಬದಲಾವಣೆಗೊಳ್ಳುತ್ತಲೇ ಇರುತ್ತವೆ. ನಿರಂತರವಾಗಿ ಬದಲಾಗದೆ ಉಳಿದುಬಿಡುವ ಸಂಗತಿ ಎಂದರೆ, ಅದು ‘ನಾನು’, ‘ನನ್ನೊಳಗಿನ ನಾನು’.

ಈ ನಮ್ಮೊಳಗಿನ ನಾನು…
೧. ಹುಟ್ಟಿನಿಂದ ಕೊನೆಯವರೆಗೂ ನಮ್ಮ ಜತೆಯಲ್ಲೇ ಇರುತ್ತದೆ.
೨. ಅದು ನಾವು ಮಾಡುವುದೆಲ್ಲವನ್ನೂ ಗಮನಿಸುತ್ತದೆ, ಆದರೆ ಎಂದಿಗೂ ನಮ್ಮ ಬಗ್ಗೆ ತೀರ್ಪು ನೀಡುವುದಿಲ್ಲ.
೩. ಅದನ್ನು ಯಾವುದೇ ರೀತಿಯಲ್ಲಿ ನಾವು ನೋಯಿಸಲು ಹಾಗೂ ಹಾನಿಮಾಡಲು ಸಾಧ್ಯವಿಲ್ಲ.
೪. ಅದನ್ನು ನಾವು ಗುರುತಿಸಲು ಸೋತರೂ, ಮರೆತರೂ, ಅದೆಂದಿಗೂ ನಮ್ಮ ಜತೆಯೇ ಇರುತ್ತದೆ.
೫. ನಮ್ಮನ್ನು ನಾವು ಒಪ್ಪಿಕೊಳ್ಳುವಿಕೆಯ ಮೂಲಸತ್ವವದು.

ಸ್ವಯಂ ಅವಲೋಕನವನ್ನು ನಾನು ಆಕಾಶಕ್ಕೆ ಹೋಲಿಸುತ್ತೇನೆ ಹಾಗೂ ಆಲೋಚನೆ, ಸಂವೇದನೆ, ಚಿತ್ರಣ ಇವುಗಳನ್ನು ವಾತಾವರಣಕ್ಕೆ ಹೋಲಿಸುತ್ತೇನೆ. ವಾತಾವರಣವು ದಿನದ ೨೪ ಗಂಟೆಗಳಲ್ಲಿ ಅನೇಕ ಬಾರಿ ಬದಲಾವಣೆಗೊಳ್ಳುತ್ತದೆ.
ವಾತಾವರಣದಲ್ಲಿ ಏನೇ ಬದಲಾವಣೆಗೊಂಡರೂ ಆಕಾಶವು ಅದಕ್ಕೆ ಅನುವುಮಾಡಿಕೊಡುತ್ತದೆ. ವಾತಾವರಣ ಎಷ್ಟೇ ಪ್ರತಿಕೂಲವಾಗಿದ್ದರೂ, ಗುಡುಗು ಎಷ್ಟೇ ಭೋರ್ಗರೆಯುತ್ತಿದ್ದರೂ, ಸೂರ್ಯನ ಶಾಖ ಎಷ್ಟೇ ಪ್ರಖರವಾಗಿದ್ದರೂ ಅದರಿಂದ ಆಕಾಶಕ್ಕೇನೂ ಹಾನಿ ಉಂಟಾಗುವುದಿಲ್ಲ. ಪದೇ ಪದೆ ಹವಾಮಾನ ಬದಲಾದರೂ ಆಕಾಶ ಮಾತ್ರ ಶುಭ್ರವಾಗೇ ನಿಲ್ಲುತ್ತದೆ. ಮೋಡಗಳು ಕರಗಿ ಆಕಾಶ ಹೇಗೆ ಮೈದುಂಬುತ್ತದೆಯೋ, ಹಾಗೆ ನಮ್ಮ ಋಣಾತ್ಮಕ ಆಲೋಚನೆಗಳನ್ನು ಮೀರಿ ಸ್ವಯಂ ಅವಲೋಕನದ ಮೂಲಕ ನಮ್ಮನ್ನು ನಾವು ಅರಿಯಬೇಕಿದೆ!

Leave a Reply

Your email address will not be published. Required fields are marked *

error: Content is protected !!