Sunday, 8th September 2024

ಬದುಕಿಗೊಂದು ಭರವಸೆ, ಇದು ಸೋತು ಗೆದ್ದ ಸಾಧಕಿಯ ಕಥೆ !

ಶ್ವೇತಪತ್ರ

shwethabc@gmail.com

ನಾವು ನಡೆದು ಬಂದ ಹಾದಿ ಎಂದೂ ಮರೆಯಬಾರದು. ನಾವೇನಾದರೂ ಸೋತು ಹೋದೆವು ಎಂದುಕೊಂಡರೆ ಅದು ಖಂಡಿತ ಸೋಲಲ್ಲ. ಗೆದ್ದು ವೆಂದುಕೊಂಡು ಬಿಟ್ಟರೆ ಅದು ಶಾಶ್ವತವೂ ಅಲ್ಲ. ಎಲ್ಲವೂ ಆ ಕ್ಷಣದ ಸ್ಥಿತಿ ಯಷ್ಟೇ. ಪರಿಸ್ಥಿತಿಯನ್ನು ಪ್ರಯತ್ನದಿಂದ ಬದಲಾಯಿಸಬಹುದು. ಇವನ ಅಥವಾ ಇವಳ ಕೈಲಿ ಇನ್ನೇನು ಸಾಧ್ಯವಿಲ್ಲ ಎಂದು ಜನ ತಮ್ಮ ತೀರ್ಪನ್ನು ನೀಡಿದ ಮೇಲೂ ಅವರು ಅಂದದ್ದು, ಆಡಿದ್ದು ಅವರಿಗೆ ಮಾತ್ರ ಅನ್ವಯ ಎಂದು ಎದ್ದು ನಿಂತು ನಾವು ಅಂದುಕೊಂಡದ್ದನ್ನು ಸಾಧಿಸುವುದು ಹೇಳಿದಷ್ಟು, ಅಂದುಕೊಂಡಷ್ಟು ಸುಲಭವಲ್ಲ.

ಅದಕ್ಕೆ  ಜೀವನದ ಆ ಕ್ಷಣದ ಸ್ಥಿತಿಯನ್ನು ಮೀರಿ ನಿಲ್ಲುವ ಮನೋಬಲಬೇಕು. ಜೀವನವೆನ್ನುವುದು ಒಂದೇ ನಾಣ್ಯದ ಎರಡು ಮುಖವಿದ್ದ ಹಾಗೆ ಒಮ್ಮೆ ರಾಜ, ಒಮ್ಮೆ ರಾಣಿ ಯಾವ ಕ್ಷಣದಲ್ಲಿಯಾದರೂ ಕೂಡ ಮಗ್ಗಲು ಬದಲಾಯಿಸಬಲ್ಲದು. ನನ್ನಿಂದ ಇದು ಸಾಧ್ಯವಾ? ಆಗುತ್ತದೆಯಾ? ನನಗೆ ಏಕೆ ಹೀಗಾಯಿತು ಹೀಗೆ Why (ಏಕೆ)ಗಳು ಮನಸ್ಸಿನಲ್ಲಿ ಮೂಡುತ್ತಲೇ ಹೋದರೆ ಬದುಕು ಡೆಡ್ ಎಂಡ್ – ಮುಕ್ತಾಯದ ಹಂತಕ್ಕೆ ಗೊತ್ತಿಲ್ಲದೆ ಬಂದು
ತಲುಪಿ ಬಿಟ್ಟಿರುತ್ತದೆ. ಅದೇ ನಾವು Whynot (ಯಾಕಾಗಬಾರದು) ಎಂದುಕೊಂಡರೆ ತಕ್ಷಣವೇ ಸಾಧಿಸಲು ನೂರಾರು ದಾರಿಗಳು ತೆರೆದು ಕೊಳ್ಳುತ್ತವೆ.

ಬದುಕನ್ನು ನೋಡುವ ದಿಕ್ಕು, ದೃಷ್ಟಿಕೋನ ಎರಡು ಬದಲಾಗಿ ಹೊಸ ಕಥೆಗಳ ಸೃಷ್ಟಿಯಾಗಿ ಬಿಡುತ್ತವೆ. ಇಂದು ನಾನು ಹೇಳಲು ಹೊರಟಿರುವುದು ಅಂತಹುದೇ ಸಾಧನೆ ಮಾಡಿದ ನಮ್ಮ ನಿಮ್ಮ ನಡುವೆಯೇ ಇರುವ ಸಾಮಾನ್ಯರಲ್ಲಿ ಸಾಮಾನ್ಯರ ನಿಜದ ಕಥೆಯನ್ನ. ಇವತ್ತಿನ ನನ್ನ ಅಂಕಣದ ಹೀರೋಯಿನ್ ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯರು. ಅತಿ ಮಾನುಷ ಶಕ್ತಿಯುಳ್ಳವರೇನಲ್ಲ. ಅವರು ಮಾಡಿದ್ದನ್ನು ನಾವು ಮಾಡಬಹುದು. ಅದಕ್ಕೆ ದೃಢ ಮನಸ್ಸು ಮಾಡ ಬೇಕು ಅಷ್ಟೇ.

ಇವತ್ತಿನ ನನ್ನ ಕಥೆಯ ನಾಯಕಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪ್ರಾಂಶುಪಾಲೆ. ಸವಾಲುಗಳು ಮಾತ್ರ ಮನುಷ್ಯನಲ್ಲಿರುವ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುತ್ತವೆ ಎಂದು ನಂಬಿರುವ ವ್ಯಕ್ತಿ. ಅವರೆದುರಿಗೆ ಕುಳಿತಾಗಲೆಲ್ಲ ನಾನು ಇನ್‌ಸ್ಪೈರ್ ಆಗಿ ಬಂದಿದ್ದೇನೆ. ತೀರಾ ಇತ್ತೀಚೆಗೆ ರೆಟಿನಾ ದೋಷದ ಕಾರಣ ಕಣ್ಣಿನ ಆಪರೇಷನ್ ಮಾಡಿಸಿಕೊಂಡು ಕಪ್ಪು ಕನ್ನಡಕ ಹಾಕಿ ಕೆಲಸ ಮಾಡುತ್ತಿದ್ದರು, ಭೇಟಿಯಾಗಿ ಮಾತನಾಡಿದರೆ ಮತ್ತದೇ ಜೀವನೋತ್ಸಾಹ.
ನೋಡಮ್ಮ ಶ್ವೇತ ಕರುಣಾನಿಧಿ ಕನ್ನಡಕ ಹಾಕಿಕೊಂಡೇ ಕೆಲಸಕ್ಕೆ ಬಂದಿದ್ದೇನೆ, ಮನೆಯಲ್ಲಿ ಕೂರುವುದಕ್ಕೆ ಆಗುವುದಿಲ್ಲ ಎನ್ನುವ ಅವರ ಮಾತುಗಳಲ್ಲಿ ಸದಾ ಇಣುಕುವುದು ಅದಮ್ಯ ಜೀವನ ಪ್ರೀತಿ. ಇವರ ಹೆಸರು ಪಾರ್ವತಿ.

ನನ್ನ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಾನು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದವರು, ಹಿರಿಯರು. ಈಗ ಅದೇ ಕಾಲೇಜಿನ ಪ್ರಾಂಶುಪಾಲೆ. ನನಗೆ ಅವರ ಜೊತೆ ಒಂದು ಸಣ್ಣ ಸಲುಗೆ, ಆಪ್ತತೆ. ನಾನು ಕುಗ್ಗಿದಾಗ, ಕುಸಿದಾಗ ಅವರ ಬದುಕಿನ ಕಥೆಯನ್ನು ನನ್ನೆದುರು ತೆರೆದಿಟ್ಟು ಧೈರ್ಯ ತುಂಬುವ ಒಬ್ಬ ಆಪ್ತ ಸಲಹೆಗಾರ್ತಿಯು ಹೌದು. ಅವರ ಕಥೆ ಕೇಳುವಾಗಲೆಲ್ಲ ನಿಮ್ಮ ಕಥೆ ನಾಲ್ಕು ಜನಕ್ಕೆ ಸ್ಛೂರ್ತಿಯಾಗುವಂತಿದೆ. ಅದಕ್ಕೆ ಅಕ್ಷರ ರೂಪ ಕೊಡಲೇ ಮೇಡಂ ಎಂದು ಕೇಳಿದಾಗಲೆಲ್ಲ ನಾನೇನು ಅಂತಹ ಸಾಧನೆ ಮಾಡಿದ್ದೇನಮ್ಮ ಶ್ವೇತಾ ಎಂದು ಸಂಕೋಚದಿಂದಲೇ
ಮುದುಡುವರು.

ಪಾರ್ವತಿ ಮೇಡಂ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆ. ಅಷ್ಟೇ ಅಲ್ಲದೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಚಿನ್ನದ ಪದಕ ವಿಜೇತೆ.
ಅವರ ಜೀವನದ ಮೊದಲ ಸವಾಲು ಶುರುವಾಗಿದ್ದು ಅವರಿಗೆ ಗಂಡು ನೋಡುವ ಸಂದರ್ಭದಲ್ಲಿ. ಪಾರ್ವತಿ ಮೇಡಂ ಮೂಲಾ ನಕ್ಷತ್ರದಲ್ಲಿ ಜನಿಸಿದ್ದ ರಿಂದ ಜೊತೆಗೆ ರೂಪದಲ್ಲಿ ಎತ್ತರ ಮತ್ತು ದಪ್ಪವಿದ್ದುದ್ದರಿಂದ ಬಂದ ಗಂಡುಗಳೆಲ್ಲ ಇವರನ್ನು ತಿರಸ್ಕರಿಸುತ್ತಿದ್ದರಂತೆ. ಆದರೂ ಎದೆಗುಂದದ ಮೇಡಂ, ಒಳ್ಳೆಯ ಗಂಡು ಸಿಗುತ್ತದೆ ಎಂಬ ಭರವಸೆಯಲ್ಲೇ ಇದ್ದರು. ಭರವಸೆ ಸುಳ್ಳಾಗಲಿಲ್ಲ. ಕೆನರಾ ಬ್ಯಾಂಕಿನಲ್ಲಿ ಉತ್ತಮ ಉದ್ಯೋಗದಲ್ಲಿದ್ದ ಶ್ರೀನಿವಾಸ್ ಇವರ ಬಾಳ ಸಂಗಾತಿಯಾಗುತ್ತಾರೆ.

ಹೊಸ ಬದುಕಿನ ಕನಸಿನ ಬೆಂಬತ್ತಿ ನಡೆವಾಗ ಅನೇಕ ನೋವು, ಸೋಲು, ಹತಾಶೆಗಳು ಇವರನ್ನು ಎದುರಾದದ್ದು ಸುಳ್ಳಲ್ಲ. ಮೂರು ವರುಷ ಮಕ್ಕಳಾ ಗಲಿಲ್ಲವೆಂಬ ಮನೆಯವರ ಮೂದಲಿಕೆ, ಅವಮಾನ, ನೋವು. ಇತ್ತ ವೃತ್ತಿ ಜೀವನದಲ್ಲಿ ಯುಜಿಸಿ ನಿಯಮದ ಅನುಸಾರ ಪಾರ್ವತಿ ಮೇಡಂ, ಪದವಿ ಕಾಲೇಜಿನಲ್ಲಿ ಉಪನ್ಯಾಸ ಮಾಡಲು ಆಯ್ಕೆಯಾಗುತ್ತಾರೆ. ಆದರೆ ಯಾರದ್ದೋ ಕುತಂತ್ರಕ್ಕೆ ಬಲಿಯಾಗುವ ಇವರು, ಪದವಿ ಕಾಲೇಜಿನಿಂದ ಪದವಿ ಪೂರ್ವ ಕಾಲೇಜಿಗೆ ಬಂದು ಸೇರಿಕೊಳ್ಳಬೇಕಾಗುತ್ತದೆ. ತನ್ನದೇ ಓರಿಗೆಯ ಸೇಹಿತರು, ಸಹೋದ್ಯೋಗಿಗಳು ಯುಜಿಸಿ ವೇತನ ಪಡೆಯುವಾಗ ತಾನು ಅವರಿಗಿಂತ ಕಡಿಮೆ ವೇತನಕ್ಕೆ (ಒಂದು ಲಕ್ಷದಷ್ಟು ವೇತನ ವ್ಯತ್ಯಾಸ) ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಇಷ್ಟೇ ಅಲ್ಲದೆ ಇವರು ಕೆಲಸವೇ ಬಿಟ್ಟು ಹೋಗಲಿ ಎಂದು ಇವರಿಗೆ ಕೆಲಸ ಮಾಡುವ ಜಾಗದಲ್ಲಿ ಅನೇಕ ತೊಂದರೆಗಳನ್ನು ಕಾಲೇಜಿನವರೇ ಪ್ರತಿದಿನ ನೀಡುತ್ತಲೇ ಇರುತ್ತಾರೆ. ಒಮ್ಮೆ ತುಂಬಾ ಬೇಸರ ಗೊಂಡಿದ್ದ ಪಾರ್ವತಿ ಮೇಡಂ, ನನ್ನ ಬಳಿ ತಮ್ಮ ನೋವನ್ನು ತೋಡಿಕೊಂಡ ಘಟನೆ ಈಗಲೂ ನನ್ನ ಸ್ಮೃತಿ ಪಟಲದಲ್ಲಿ ಹಸಿಯಾಗಿದೆ. ಶ್ವೇತಾ ನನ್ನ ಮಕ್ಕಳಿಬ್ಬರು ಇನ್ನೂ ಓದುತ್ತಾ ಇದ್ದಾರೆ. ಇವರು ಏನೇ ತೊಂದರೆ ಕೊಟ್ಟರೂ ನಾನು ಸಹಿಸಿಕೊಳ್ಳಲೇಬೇಕು.

ಏಕೆಂದರೆ, ನನ್ನ ಹಸ್ಬೆಂಡ್ ಕೂಡ ಸ್ವಯಂ ನಿವೃತ್ತಿ ಪಡೆದು ಮನೆಯಲ್ಲಿದ್ದಾರೆ. ಮನೆಯ ಜವಾಬ್ದಾರಿ ನನ್ನ ಹೆಗಲೇರಿದೆ. ಎಷ್ಟೇ ಕಷ್ಟ ಬಂದರೂ ಸಹಿಸಿಕೊಳ್ಳಬೇಕು ಎಂದು. ಇವರನ್ನು ಅವಮಾನಿಸುವ ಅನೇಕ ಘಟನೆಗಳು ಪ್ರತಿದಿನ ಕಾಲೇಜಿನಲ್ಲಿ ನಡೆಯುತ್ತಲೇ ಇದ್ದವಂತೆ. ಇದರ ಪರಿಣಾಮ ಒತ್ತಡ. ಇದೇ ಒತ್ತಡವು ಮನೋದೈಹಿಕ ಕಾಯಿಲೆಗಳಿಗೆ ಇವರನ್ನು ಈಡು ಮಾಡುತ್ತದೆ.

ಬಿಪಿ, ಶುಗರ್, ಹೃದಯ ಸಂಬಂಧಿ ಕಾಯಿಲೆ, ವೆರಿಕೋಸ್ ವೇನ್ಸ್ ಹೀಗೆ ಅನೇಕ ದೈಹಿಕ ಕಾಯಿಲೆಗಳು ಇವರನ್ನು ಮುತ್ತಿಕೊಳ್ಳುತ್ತವೆ. ಅಗಣಿತ ಸಮಸ್ಯೆಗಳ
ನಡುವೆಯೂ ಕೂಡ ನಮ್ಮ ದಾರಿ ಸೃಷ್ಟಿಸಿಕೊಳ್ಳಬಹುದು ಎಂಬ ಮಹತ್ವಪೂರ್ಣ ನಂಬಿಕೆಯಿಂದ ಪಾರ್ವತಿ ಮೇಡಂ ಅವರಿಗೆ ಪ್ರಾಂಶುಪಾಲರ ಹುದ್ದೆ ಒಲಿದು ಬರುತ್ತದೆ. ಇವರ ಕಾಯಿಲೆಗಳ ಪಟ್ಟಿಯನ್ನೇ ದೊಡ್ಡದು ಮಾಡಿದ ಜನ ಅಪಹಾಸ್ಯ ಮಾಡಿ ನಗುತ್ತಾರೆ. ಓಪನ್ ಮೀಟಿಂಗ್‌ಗಳಲ್ಲಿ ಇವರನ್ನು ಹೀಯಾಳಿಸುವ ಚಾಳಿಯು ಮುಂದುವರಿಯುತ್ತದೆ.

ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪಾರ್ವತಿ ಮೇಡಂ, ತಮ್ಮ ಕೆಲಸವನ್ನು ತಾವು ಶ್ರದ್ಧೆಯಿಂದ ಮುಂದುವರಿಸಿಕೊಂಡು ಹೋಗುತ್ತಾರೆ. ನಡೆಯಲು ಆಗದಂತೆ ಕಾಲು ಕಟ್ಟು ಹಾಕಿರುವ ಡಯಾಬಿಟಿಸ್ ಇಡೀ ದೇಹದ ಒತ್ತಡವನ್ನೇ ಏರುಪೇರು ಮಾಡಿಬಿಡುವ ರಕ್ತದೊತ್ತಡ, ಬೆನ್ನಿಗೆ ಬಿದ್ದು ಕಾಡುತ್ತಿದ್ದರೂ ಫೀನಿಕ್ಸ್ ಹಕ್ಕಿಯಂತೆ ಮತ್ತೆ ಮತ್ತೆ ಪುಟಿದ್ದೆದ್ದು ತಮಗೆ ಸಿಕ್ಕ ಜವಾಬ್ದಾರಿಯಿಂದ ಅನೇಕ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಿದ್ದಾರೆ. ಹೃದಯ
ನಡುಗುತ್ತಿದ್ದರೂ ವೆರಿಕೋಸ್ ವೇನ್ಸ್ ನಿಲ್ಲಲು ಸಾಧ್ಯಗೊಳಿಸದಿದ್ದರೂ, ಕಣ್ಣು ಕಾಣಿಸದೆ ಹೋದರೂ ಪ್ರತಿದಿನ ಇವರು ಕಾಲೇಜಿಗೆ ರೆಡಿಯಾಗಿ ಬರುವ ಪರಿಗೆ ಇವರಿಗೆ ಇವರೇ ಸಾಟಿ. ಬೇರೆಯವರಾಗಿದ್ದರೆ ಇಷ್ಟೊತ್ತಿಗೆ ಕುಸಿದು ಹೋಗುತ್ತಿದ್ದರು.

ಖಿನ್ನತೆಯ ಕೂಪದಲ್ಲಿ ಜಾರಿ ಬಿದ್ದುಬಿಡುತ್ತಿದ್ದರು. ಆದರೆ ಬದುಕಿನ ಬಗ್ಗೆ ಇವರದ್ದು ಭರವಸೆಯ ಹೆಜ್ಜೆ. ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ಇವರನ್ನು ಕೇಳಿದರೆ ಮಾಡಬೇಕು ಎನ್ನುವ ಉತ್ಕಟ ಬಯಕೆಯಿಂದ ಎಂದು ಮುಗುಳು ನಗುತ್ತಾರೆ. ಹಂಬಲಕ್ಕೆ ಆತ್ಮಬಲ ನೀಡಿದ ಬೆಂಬಲದಿಂದ ಎನ್ನುತ್ತಾರೆ. ನಾವೇನಾದರೂ ಆಗಬಹುದು. ಆದರೆ ನಮಗೇನು ಬೇಕು? ಏನಾಗಬೇಕು? ಎನ್ನುವ ಅರಿವು ನಮ್ಮಲ್ಲಿ ಇರಬೇಕಲ್ಲವೇ? ಅಷ್ಟಾದರೆ ಮಿಕ್ಕಿದ್ದು ತಾನಾಗೆ ಆಗುತ್ತದೆ ಎಂಬುದು ಪಾರ್ವತಿ ಮೇಡಂ ಅವರ ದೃಢ ನಂಬಿಕೆ. ಇಬ್ಬರು ಮಕ್ಕಳನ್ನು ದಡ ಮುಟ್ಟಿಸಿದ ಆತ್ಮತೃಪ್ತಿ. ಇತ್ತೀಚೆಗಷ್ಟೇ ಅಮೆರಿಕಕ್ಕೂ ಹೋಗಿ ಬಂದು ಬದುಕಿನ ಬಗೆಗೆ ಮತ್ತೊಂದಿಷ್ಟು ಪ್ರೀತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ತಮ್ಮ ಸಹೋದ್ಯೋಗಿಗಳ ಕಷ್ಟಕ್ಕೆ ಮಿಡಿಯುವ ತಮ್ಮ ಕಾಲೇಜಿನಲ್ಲಿ ಓದುತ್ತಿರುವ ಸಾವಿರದ ಐನೂರು ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವ ಇವರದ್ದು ತಾಯಿಯ ಅಂತಃಕರಣ. ಜಗತ್ತಿನ ಬಹುಪಾಲು ಜನರಿಗೆ ಕೈಕಾಲು ಕಣ್ಣು ಹೀಗೆ ಎಲ್ಲವೂ ಸರಿ ಇದೆ ಆದರೆ ಏನಾದರೂ ಮಾಡಬೇಕು ಎನ್ನುವ ಮನಸ್ಸಿರುವುದಿಲ್ಲ. ಯಾರು ಯಾವ ತರಹದ ಸನ್ನಿವೇಶದಲ್ಲಿ ಇರುತ್ತಾರೆ ಎನ್ನುವುದು ಅವರಿಗೆ ಮಾತ್ರ ಗೊತ್ತು. ಅದನ್ನು ಊರವರಿಗೆಲ್ಲಾ ಹೇಳುವ
ಅವಶ್ಯಕತೆ ಇರುವುದಿಲ್ಲ. ಹೀಗಾಗಿ ವ್ಯಕ್ತಿಯ ದೈಹಿಕ ಆಕಾರ ನೋಡಿ ನಗುವುದನ್ನು ಬಿಡೋಣ, ವ್ಯಕ್ತಿಯ ಆರೋಗ್ಯದ ಏರುಪೇರುಗಳನ್ನು ನೋಡಿ ಆಡಿಕೊಳ್ಳುವುದನ್ನು ಬಿಡೋಣ, ನಮ್ಮೆದುರಿಗೆ ಯಾವುದೇ ವ್ಯಕ್ತಿ ಕಾಣಿಸಿಕೊಂಡಾಗ ಅವರಿಗೆ ಸ್ವಂತ ಮನೆ ಇದೆಯೇ? ಕಾರು ಇದೆಯೇ? ಎನ್ನುವುದು ಕೂಡ ನಮಗೆ ಅನವಶ್ಯಕ.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅನೇಕ ವಿಚಾರಗಳು ತೆರೆದುಕೊಳ್ಳುತ್ತವೆ. ಪ್ರತಿಯೊಬ್ಬರಿಗೂ ಜೀವನ ಬೇರೆ ಬೇರೆಯದೆ ಪ್ರಶ್ನೆ ಪತ್ರಿಕೆಗಳನ್ನು ನೀಡಿರು ತ್ತದೆ. ಅದಕ್ಕೆ ಅವರವರ ಉತ್ತರವೂ ಬೇರೆ ಬೇರೆಯೇ ಇರಬೇಕು. ಸಾಧ್ಯವಾದರೆ ಒಳ್ಳೆಯದು ಮಾಡೋಣ, ಇಲ್ಲವೇ ಸುಮ್ಮನಿರೋಣ. ನಾವೇನು, ನಮ್ಮ ಸ್ಥಿತಿಯೇನು ಎನ್ನುವುದನ್ನು ನೋಡಿ ಜಗತ್ತು ಮತ್ತು ಅದರ ಸಮಾಜ ನಮ್ಮ ಬಗ್ಗೆ ಒಂದು ತೆರನಾದ ಭಾವನೆಯನ್ನು ಮೂಡಿಸಿಕೊಳ್ಳುತ್ತದೆ. ಆದರೆ ನಾವೇನು ಎನ್ನುವ ಬಗ್ಗೆ ನಾವು ಮೂಡಿಸಿಕೊಳ್ಳುವ ಭರವಸೆ ಇದೆಯಲ್ಲ ಅದು ಮುಖ್ಯ. ಕೊನೆಗೆ ಗೆಲ್ಲುವುದು ಅದೇ. ಪಾರ್ವತಿ ಮೇಡಂ ಅವರ ಕಥೆ ಯನ್ನು ನನ್ನ ಓದುಗರು ಓದಿ ಬದುಕಿನ ಬಗ್ಗೆ ಭರವಸೆ ಹೆಚ್ಚಿಸಿಕೊಳ್ಳಲಿ, ನಂಬಿಕೆಯನ್ನು ಹುಟ್ಟಿಸಿಕೊಳ್ಳಲಿ ಎನ್ನುವ ಕಾರಣಕ್ಕೆ ಬರೆದಿದ್ದೇನೆ.

ಮೂಲಾ ನಕ್ಷತ್ರವೇ ಇರಬಹುದು, ದೈಹಿಕ ಖಾಯಿಲೆಗಳ ನ್ಯೂನತೆಯೇ ಇರಬಹುದು, ಅವುಗಳಿಗೆ ಸೋಲಬಾರದು ಎಂಬ ಅರಿವಿನಿಂದ ಬದುಕಿಬಿಟ್ಟರೇ ಅದೇ ದೊಡ್ಡ ಗೆಲುವು. ಪಾರ್ವತಿ ಮೇಡಂ ತರಹದ ಸದ್ದಿಲ್ಲದ ಸಾಧಕರು ನಮ್ಮ ನಡುವೆ ಲಕ್ಷಾಂತರ ಮಂದಿ ಇದ್ದಾರೆ. ಅವರೆಲ್ಲರೂ ಸೋಲಿಗೆ ಹೆದರಿ ನಿಂತವರಲ್ಲ. ಬದುಕನ್ನು ತೊರೆದು ನಿಂತವರಲ್ಲ, ಹೋರಾಡಿ ಗೆದ್ದವರು. ಕಷ್ಟಗಳ ಉತ್ತುಂಗಕ್ಕೆ ಕರೆದುಕೊಂಡು ಹೋಗುವ ದೇವರು, ಅವೇ ಕಷ್ಟ ಗಳನ್ನು ಎದುರಿಸಲು ನಮ್ಮೊಳಗೆ ಶಕ್ತಿ ತುಂಬುವುದು ಅದೇ ದೇವರು. ನನ್ನ ಬದುಕೆಂದೂ ಹೂವಿನ ಹಾಸಿಗೆಯಾಗಿರಲಿಲ್ಲ. ಹೆಚ್ಚು ಮುಳ್ಳೆ ತುಂಬಿದ್ದ ಪಯಣವಾಗಿತ್ತು.

Winners never quit, quitters never win ಮುಳ್ಳುಗಳ ನಡುವೆಯೂ ಹೊಸ ಸಾಧ್ಯತೆಗಳನ್ನು ನೋಡುವುದೇ ಬದುಕು ಎನ್ನುವ ಪಾರ್ವತಿ ಮೇಡಂ ಅವರ ಕಥೆ ನಾಲ್ಕು ಜನಕ್ಕೆ ಬದುಕಬೇಕು ಎನ್ನುವ ಆಸೆ ಹುಟ್ಟಿಹಾಕಿದರೆ ಅಷ್ಟು ಸಾಕು, ಅಲ್ಲಿಗೆ ನನ್ನ ಬರಹದ ಉದ್ದೇಶ ಸಾರ್ಥಕ.

error: Content is protected !!