Thursday, 19th September 2024

ನದಿ ಸ್ನಾನಗಳು ನಿಜಕ್ಕೂ ನಮ್ಮ ಪಾಪಗಳನ್ನು ತೊಳೆದಾವೇ?

ಅಭಿವ್ಯಕ್ತಿ

ಕೆ.ಪಿ.ಪುತ್ತುರಾಯ

ಒಮ್ಮೆ ಗುರುಕುಲದಲ್ಲಿ ಓದುತ್ತಿದ್ದ ಶಿಷ್ಯರು ತಮ್ಮ ಗುರುಗಳ ಬಳಿ ಬಂದು ಗುರುಗಳೇ, ನಾವೆಲ್ಲ ಪುಣ್ಯ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಳ್ಳಬೇಕೆಂದಿದ್ದೇವೆ. ತಾವು ಸಮ್ಮತಿಸಿದರೆ ಅಲ್ಲಿಯ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿ ಬರುತ್ತೇವೆ ಎಂದು
ಯಾತ್ರೆಗೈಯಲು ಅವರ ಅನುಮತಿಯನ್ನು ಕೋರಿದರು.

ನೀವು ತೀರ್ಥಯಾತ್ರೆ ಕೈಗೊಳ್ಳುತ್ತಿರುವ ಉದ್ದೇಶವಾದರೂ ಏನು?ಎಂದು ಗುರುಗಳು ಕೇಳಲಾಗಿ, ಶಿಷ್ಯರು ಪವಿತ್ರ ನದಿ ಸ್ನಾನದಿಂದ ಪಾಪಮುಕ್ತರಾಗಲು ಹಾಗೂ ನಮ್ಮ ಅಂತರಂಗ ಶುದ್ಧಿಗಾಗಿ ಈ ತೀರ್ಥಯಾತ್ರೆ ಎಂದರು. ಸಂತೋಷ, ಹೋಗಿ ಬನ್ನಿ ಶುಭವಾಗಲಿ ಎಂದ ಗುರುಗಳು ಯಾತ್ರೆಗೆ ಹೊರಟ ಶಿಷ್ಯರ ಕೈಗೆಲ್ಲಾ ಒಂದೊಂದು ಹಾಗಲಕಾಯಿಯನ್ನು ಕೊಟ್ಟು ಈ ಕಾಯಿಯನ್ನು ನಿಮ್ಮ ಜೊತೆ ತೆಗೆದುಕೊಂಡು ಹೋಗಿ, ನೀವು ಎಲ್ಲೆಲ್ಲಿ ಸ್ನಾನ ಮಾಡುತ್ತೀರೋ, ಅಲ್ಲಲ್ಲಿ ಈ ಹಾಗಲಕಾಯಿಗೂ ಸ್ನಾನ ಮಾಡಿಸಿ, ನೀವು ಎಲ್ಲೆಲ್ಲಿ ದೇವರ ದರುಶನ ಪಡೆಯುತ್ತೀರೋ, ಆ ದೇವರ ಪಾದದ ಬಳಿ ಈ ಕಾಯಿಗಳನ್ನಿಟ್ಟು ಅವುಗಳಿಗೂ ಪೂಜೆ ಮಾಡಿಸಿ ಕೊಂಡು ತನ್ನಿ ಎಂದು ಅಪ್ಪಣೆ ಕೊಡಿಸಿದರು. ಆಗಲಿ ಎಂದ ಶಿಷ್ಯರು ಹಾಗಲಕಾಯಿ ಜೊತೆ ಯಾತ್ರೆಗೆ ಹೊರಟು, ವಾರದ ಬಳಿಕ ಯಾತ್ರೆ ಮುಗಿಸಿ ಹಿಂತಿರುಗಿದರು.

ಶಿಷ್ಯರನ್ನು ಕಂಡ ಗುರುಗಳು ಏನು, ನದಿ ಸ್ನಾನದಿಂದ ನಿಮ್ಮ ಪಾಪಗಳೆಲ್ಲ ತೊಳೆದು ಹೋದವೇ? ಕ್ಷೇತ್ರ ದರುಶನದಿಂದ ನಿಮ್ಮ ಅಂತರಂಗ ಶುದ್ಧಿ ಆಯಿತೇ? ಎಂದು ಕೇಳಲು, ಎಲ್ಲಾ ಶಿಷ್ಯರು ಒಕ್ಕೂರಲಿನಿಂದ ಹೌದು ಎಂದರು. ಮತ್ತೆ ಗುರುಗಳು, ನೀವು ಯಾತ್ರೆಗೆ ಹೊರಡುವಾಗ ಜೊತೆಗೆ ಒಯ್ದಿದ್ದ ಹಾಗಲಕಾಯಿಗೂ ನದೀ ನೀರಲ್ಲಿ ಮುಳುಗಿಸಿ, ಪವಿತ್ರ ಸ್ನಾನ ಮಾಡಿಸಿದಿರಾ? ಹಾಗೂ ದೇವರ ಬಳಿ ಇಟ್ಟು ಪೂಜೆ ಮಾಡಿಸಿದಿರಾ? ಎಂದು ಕೇಳಲು ಶಿಷ್ಯರು ಹೌದೆಂದರು. ಸರಿ ಹಾಗಾದರೆ, ಈ ಹಾಗಲಕಾಯಿಗಳಿಂದ
ಇಂದಿನ ಅಡುಗೆ ಮಾಡಿಸಿ ಎಂದು ಅಪ್ಪಣೆ ಕೊಡಿಸಿದರು.

ಊಟಕ್ಕೆ ಕುಳಿತು, ಹಾಗಲಕಾಯಿ ಪಲ್ಯವನ್ನು ತಿಂದ ಗುರುಗಳು ಅಯ್ಯೋ ಇದೇನು ಇಷ್ಟೊಂದು ಕಹಿಯಾಗಿದೆ? ಎಂಬ ಅಸಮ ಧಾನವನ್ನು ವ್ಯಕ್ತಪಡಿಸಿದರು. ಅದಕ್ಕೆ ಶಿಷ್ಯರು ಅಲ್ಲ ಗುರುಗಳೇ ಹಾಗಲಕಾಯಿಯ ಗುಣವೇ ಕಹಿಯಲ್ಲವೇ? ಗುಣ ಬದಲಾಗದೆ ಅದು ಸಿಹಿ ಆಗಲು ಹೇಗೆ ಸಾಧ್ಯವೆಂದು ಹೇಳಿದರು. ಆಗ ನಸು ನಕ್ಕ ಗುರುಗಳು ಹೇಳಿದರು. ಪವಿತ್ರ ನದಿಯ ಸ್ನಾನ ಮಾಡಿ ದೇವರ ದರ್ಶನ ಮಾಡಿದ ಮಾತ್ರಕ್ಕೆ ನಮ್ಮ ಪಾಪಗಳು ತೊಳೆದುಹೋಗಿ, ಅಂತರಂಗ ಶುದ್ಧಿಗೊಳ್ಳುವುದಾದರೆ, ನಿಮ್ಮೊಂದಿಗೆ ಪವಿತ್ರ ನದಿ ಸ್ನಾನ ಮಾಡಿದ ಈ ಹಾಗಲಕಾಯಿಯ ಅಂತರಂಗವೂ ಶುದ್ಧಿಯಾಗಬೇಕಿತ್ತಲ್ಲ!

ಗುಣವೂ ಬದಲಾಗಬೇಕಿತ್ತಲ್ಲ! ಒಳಗಿನ ಕಹಿ ಹೋಗಿ ಸಿಹಿ ಆಗಿರಬೇಕಾಗಿತ್ತಲ್ಲ! ಕಹಿ ಏಕೆ ಹಾಗೇ ಉಳಿಯಿತು?. ಗುರುಗಳ ಭಾವಾರ್ಥವನ್ನು ಅರಿತ ಶಿಷ್ಯರು ತಲೆ ತಗ್ಗಿಸಿದರು. ಮತ್ತೆ ಗುರುಗಳು ಹೇಳಿದರು ಮಾಡಬಾರದ್ದೆನ್ನಲ್ಲ ಮಾಡಿ, ಪಾಪಗಳನ್ನು ಕಟ್ಟಿಕೊಂಡು ಬರೀ ನದಿ ಸ್ನಾನ ಮಾಡಿ ದೇವರ ದರ್ಶನ ಮಾಡಿದರೆ, ನಿಮ್ಮ ಪಾಪ ನಿವಾರಣೆ ಆಗೋದಿಲ್ಲ; ನೀವು ಪುನೀತ ರಾಗೋದಿಲ್ಲ.

ಪಾಪ ನಿವಾರಣೆ ಆಗಬೇಕಾದರೆ, ಪುಣ್ಯದ ಕೆಲಸಗಳನ್ನು ಮಾಡಬೇಕು. ಅಂತರಂಗ ಶುದ್ಧಿಯಾಗಲು. ಆತ್ಮಸ್ನಾನವನ್ನು ಮಾಡ ಬೇಕು. ಗುರುಗಳ ಮಾತಿನಲ್ಲಿ ಸತ್ಯಾಂಶವಿತ್ತು, ಯಥಾರ್ಥತೆ ಇತ್ತು. ನಾವು ಪ್ರಕೃತಿ ಆರಾಧಕರು. ಶಿವನ ಜಟೆಯಿಂದಲೇ ಭೂಗಿಳಿದು ಬಂದ ಗಂಗಾ ನದಿಯಿಂದಲೇ ಮೊದಲಾಗಿ ಓಂ ಗಂಗೇಚ ಯಮುನೇಚವ, ಗೋದಾವರಿ ಸರಸ್ವತೀ ನರ್ಮದೇ ಸಿಂಧು ಕಾವೇರಿ, ಜಲೈಸ್ಮಿನ್ ಸನ್ನಿದ್ದಿಂಕುರು ಎನ್ನುತ್ತಾ ದೇಶದ ಪವಿತ್ರ ಸಪ್ತ ನದಿಗಳನ್ನು ಆಹ್ವಾನಿಸಿ, ಪೂಜಾ ವಿಧಿಗಳನ್ನು ಪ್ರಾರಂಭಿ ಸೋದು ನಮ್ಮ ಸಂಪ್ರದಾಯ. ಈ ನದಿಗಳನ್ನು ಭಕ್ತಿ ಶ್ರದ್ಧಾ ಭಾವದಿಂದ ಪೂಜಿಸೋದು ಭಾವನಾತ್ಮಕವಾದ ಧಾರ್ಮಿಕ ಆಚರಣೆ.

ಅದು ಹಾಗೆಯೇ ಮುಂದುವರಿಯಲಿ. ಈ ಪುಣ್ಯ ನದಿಗಳು ನಮಗೆ ಪ್ರಾಣ ಜಲವಾಗಿ, ನಮ್ಮ ಬೆಳೆಗಳಿಗೂ ನೆರವಾಗಿ ಜನ ಜೀವನಕ್ಕೆ ಆಧಾರವಾಗಿರುವ ಜೀವನದಿಗಳು. ಇಂತಹ ನದಿಗಳಲ್ಲಿ ಮುಖ್ಯವಾಗಿ ಅವುಗಳ ಸಂಗಮ ಕ್ಷೇತ್ರದಲ್ಲಿ ಪರ್ವಕಾಲದಲ್ಲಿ ಸ್ನಾನ ಮಾಡಿದರೆ, ಗೈದ ಪಾಪಗಳ ಪರಿಹಾರವಾದೀತೆಂಬುದು ಭಾರತೀಯರ ನಂಬಿಕೆ. ಇಂತಹ ನಂಬಿಕೆಗಳಿಂದ ಅವರ ಮನೋ
ಪರಿವರ್ತನೆಗಳಾಗುವಂತಿದ್ದರೆ, ಅವಶ್ಯ ಅಂತಹ ನಂಬಿಕೆಗಳಿರಲಿ. ಆದರೆ ಪಾವಿತ್ರ್ಯತೆಯ ಜೊತೆ ಪರಿಶುದ್ಧತೆಯು, ಶಾರೀರಿಕ ಸ್ವಚ್ಛತೆಯ ಜೊತೆ, ಆಂತರಿಕ ಸ್ವಚ್ಛತೆಯೂ ಇರಬೇಕೆಂಬುದೇ ಆಶಯ. ಬರೇ ಮೈಕೈ ತೊಳೆದುಕೊಂಡ ಮಾತ್ರಕ್ಕೆ ಗೈದ ಪಾಪ ಗಳೆಲ್ಲ ಮಾಯವಾಯಿತು ಎಂಬ ಕಲ್ಪನೆ ಒಂದು ಮೂಢನಂಬಿಕೆ.

ನಾವು ಪರಿಶುದ್ಧರಾಗಬೇಕಾದರೆ ಒಂದು ಆತ್ಮಾವಲೋಕನ, ಸ್ವಯಂ ಮೌಲ್ಯಮಾಪನ ಹಾಗೂ ಗೈದ ತಪ್ಪು ಕೆಲಸಗಳ ಬಗ್ಗೆ ಪ್ರಾಯಶ್ಚಿತ ಮನೋಭಾವದ ಅತ್ಯವಶ್ಯಕ. ಈ ಸತ್ಯವನ್ನರಿತೇ ಪುರಂದರದಾಸರು ಹಾಡಿದರು ಮನಶುದ್ಧಿ ಇಲ್ಲದವನಿಗೆ ಮಂತ್ರದ ಫಲವೇನು? ತನು ಶುದ್ಧಿ ಇಲ್ಲದವಗೆ ತೀರ್ಥದ ಫಲವೇನು?. ಹೊರಗೆ ಮಿಂದು ಒಳಗೆ ಮೀಯದವರ ಕಂಡು ನಗುತ್ತಿದ್ದನೋ ನಮ್ಮ ಪುರಂದರ ವಿಠ್ಠಲ. ಮುಂದುವರಿಯುತ್ತಾ, ಮೂಢ ನಂಬಿಕೆಯ ವಿರುದ್ಧ ಢಂಬಾಚಾರದ ವಿರುದ್ಧ ಡಂಗುರವನ್ನೇ ಸಾರಿದ ಪುರಂದರ ದಾಸರು ಹಾಡಿದರು, ಹಾಡಿ ಜನರನ್ನು ಬೇಡಿಕೊಂಡರು.

ಉದರ ವೈರಾಗ್ಯದು, ನಮ್ಮ ಪದುಮನಾಭನಲ್ಲಿ ಲೇಶ ಭಕುತಿ ಇಲ್ಲ. ಉದಯ ಕಾಲದಲೆದ್ದು ಗಡಗಡ ನಡುಗುತ ನದಿಯಲಿ ಮಿಂದೆವೆನೆಂದು ತಗ್ಗುತಲಿ ಮದ, ಮತ್ಸರ, ಕ್ರೋಧವ ಒಳಗೆ ತುಂಬಿಟ್ಟುಕೊಂಡು. ಬಳಿಯಲಿದ್ದವರಗಾಶ್ಚರ್ಯ ತೋರುವುದು, ಕೊರಳೊಳು ಮಾಲೆಯ ಧರಿಸಿದರೇನು? ಬೆರಳೊಳು ಜಪಮಣಿ ತಿರುವಿದರೇನು? ಮರಳಿ ಮರಳಿ ತಾ ಹೊರಳಿ ಬೂದಿಯೊಳು ಮರುಳ ನಂದದಿ ತಾ ತಿರುಗಿದರೇನು? ತಾ ಬದಲಾಗದ ತನಕ!. ಅಂತೆಯೇ ಬಟ್ಟೆೆಯ ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರೆ, ಅದು ಮಡಿಯಲ್ಲ! ಹೊಟ್ಟೆಯೊಳಗಿನ ಕಾಮ, ಕ್ರೋಧ, ಮದ, ಮತ್ಸರವ ಬಿಟ್ಟು ನಡೆದರೆ, ಅದು ಮಡಿಯು ಎಂದು ಉಚ್ಚರಿಸಿ ದರು.

ಒಟ್ಟಿನಲ್ಲಿ ಶಾರೀರಿಕ ಮಡಿವಂತಿಕೆಯ ಜತೆ ಮಾನಸಿಕ ಮಡಿವಂತಿಕೆಯು, ಹೃದಯ ಶ್ರೀಮಂತಿಕೆಯೂ ಇರಬೇಕೆಂಬುದೇ ಇವರ ಸಂದೇಶ. ಹಾಗಂತ, ನದಿ ಸ್ನಾನಗಳಿಂದ ಏನೂ ಪ್ರಯೋಜನವಿಲ್ಲವೆಂಬ, ಅವುಗಳನ್ನು ಮಾಡಬಾರದು ಎಂಬ ಅರ್ಥವಲ್ಲ. ಮಾಡುವ ಸ್ನಾನ ಆರೋಗ್ಯವರ್ಧಕ ಹಾಗೂ ಉಲ್ಲಾಸದಾಯಕ. ಕಾರಣ, ಅದು ಹರಿಯುವ ನೀರಾಗಿರುವ ಕಾರಣ ಸ್ವಚ್ಛವಾಗಿದ್ದು, ಬೆಟ್ಟಗುಡ್ಡಗಳಿಂದ ಉಗಮಗೊಂಡು ಕೆಳಕ್ಕೆ ಹರಿದು ಬರೋದರಿಂದ, ಖನಿಜಾಂಶಗಳು, ಗಿಡಮೂಲಿಕೆಗಳೇ ಮುಂತಾದ ಔಷಧೀಯ ಗುಣಗಳುಳ್ಳ ಅಂಶಗಳನ್ನು ಹೊಂದಿರುತ್ತದೆ.

ಆದರೆ, ಹರಿಯದೆ ನಿಂತ ನೀರಲ್ಲಿ, ನೂರಾರು ಜನರು ಸ್ನಾನ ಮಾಡಿದ, ಕೊಳೆತು ನಾರುತ್ತಿರುವ ಎಣ್ಣೆ ಜಿಡ್ಡನ್ನು ಹೊಂದಿ,
ಎಲ್ಲಾ ರೀತಿಯಲ್ಲೂ ಕಲುಷಿತಗೊಂಡಿರುವ ಕ್ರಿಮಿಕೀಟಗಳ, ರೋಗಾಣುಗಳ ಉಗಮಸ್ಥಾನವಾಗು ಕೆರೆ – ಹಳ್ಳ – ಹೊಳೆಗಳಲ್ಲಿ ಸ್ನಾನ ಮಾಡಿದರೆ, ಇಲ್ಲದ ಚರ್ಮರೋಗಗಳನ್ನು, ವ್ಯಾಧಿಗಳನ್ನು ಆಹ್ವಾನಿಸಿಕೊಂಡಂತಾಗಲಾರದೇ?. ಅಂತೆಯೇ, ಅರೆ ಬೆಂದ ಹೆಣಗಳು ತೇಲಾಡುತ್ತಿರುವ, ಶವ ಸಂಸ್ಕಾರದ ಸಾಮಗ್ರಿಗಳು ತುಂಬಿ ಕೊಳೆತು ನಾರುತ್ತಿರುವ ತರತರದ ಕಸ ಕಲ್ಮಶಗಳಿಂದಲೂ, ಕಲುಷಿತಗೊಂಡಿರುವ ನದಿಗಳಲ್ಲಂತೂ ಸ್ನಾನ ಖಂಡಿತ ವಜ್ರ ಪವಿತ್ರತೆಯ ಜೊತೆ ಸ್ವಚ್ಛತೆಯೂ ಅಷ್ಟೇ ಮುಖ್ಯವಲ್ಲವೇ! ಈ ಕಾರಣದಿಂದಲೇ, ಈ ನಡುವೆ ಪುಣ್ಯ ನದಿಗಳ ಶುದ್ಧೀಕರಣ ಕಾರ್ಯ ಭರದಿಂದ ಸಾಗುತ್ತಿದೆ.

ಒಟ್ಟಿನಲ್ಲಿ, ನಮಗೆ ನಂಬಿಕೆಗಳಿರಲಿ, ಆದರೆ ಅವು ಸತ್‌ವಿಚಾರಗಳ ಮೇಲಿನ ಗಾಢ ನಂಬಿಕೆಗಳಾಗಿರಲಿ, ಆದರೆ ಮೂಢನಂಬಿಕೆ ಗಳಾಗದಿರಲಿ. ಸರಿಯಾದುದನ್ನು, ಸತ್ಯವಾದುದನ್ನು ತಿಳಿದುಕೊಳ್ಳೋದೇ ಜ್ಞಾನ. ತಿಳಿದುಕೊಳ್ಳದಿದ್ದರೆ ಅಜ್ಞಾನ. ಸರಿಯಾದು ದ್ದನ್ನು, ಸರಿಯೆಂದು ತಪ್ಪಾಗಿ ಅರ್ಥೈಸಿಕೊಂಡು ಅದನ್ನು ಆಚರಿಸೋದು ಒಂದು ಮೂಢನಂಬಿಕೆ. ಮೂಢನಂಬಿಕೆಗಳನ್ನು ವೈಭವೀಕರಿಸೋದೆಂದರೆ, ಅಜ್ಞಾನವನ್ನು ಮೆರವಣಿಗೆ ಮಾಡಿದಂತೆ!. ನಾವು ಕಟ್ಟಿಕೊಂಡ ಪಾಪಗಳು ಪ್ರಾಮಾಣಿಕವಾದ ಪ್ರಾಯಶ್ಚಿತದಿಂದ ಪರಿಹಾರಗೊಳ್ಳಬೇಕೇ ಹೊರತು, ಬರೇ ನದೀ ಸ್ನಾನಗಳಿಂದ ಸಾಧ್ಯವಾಗದು.

ಪುಣ್ಯವನ್ನು ಸತ್ಕಾರ್ಯಗಳಿಂದ, ಸನ್ಮಾರ್ಗದಲ್ಲಿ ನಡೆಯೋದರಿಂದ ಹಾಗೂ ಸಮಾಜ ಸೇವೆ ಗೈಯೋದರಿಂದ ಸಂಪಾದಿಸಬೇಕೇ ಹೊರತು, ಬರೇ ತೀರ್ಥಯಾತ್ರೆಗಳಿಂದಲ್ಲ. ಪುಣ್ಯ ನದಿಗಳ ಶುದ್ಧ ನೀರಿನ ಸ್ನಾನವೂ ಇರಲಿ; ಅನನ್ಯ ಭಕ್ತಿಯೊಂದಿಗೆ ದೇವರ
ದರ್ಶನವೂ ಇರಲಿ; ಜತೆಗೆ ಒಳ್ಳೆಯ ಮನಸ್ಸು ಇರಲಿ. ಎರಡೂ ಸೇರಿದಾಗ, ಪರಮಾತ್ಮನ ಅನುಗ್ರಹ ಕಟ್ಟಿಟ್ಟಬುತ್ತಿ. ಯಾವ ದೇಶದಲ್ಲಿ ಶಾಲೆಗಳಿಗಿಂತ, ದೇವಾಲಯಗಳು ಗಂಟೆ ಹೆಚ್ಚು ಬಾರಿಸುತ್ತದೋ, ಆ ದೇಶದಲ್ಲಿ ಅಜ್ಞಾನ ಮತ್ತು ಬಡತನವಿರುತ್ತದೆ. ಯಾವ ದೇಶದಲ್ಲಿ ದೇವಾಲಯಗಳಿಗಿಂತ, ಶಾಲೆಗಳು ಗಂಟೆ ಹೆಚ್ಚು ಬಾರಿಸುತ್ತದೋ, ಆ ದೇಶದಲ್ಲಿ ಜ್ಞಾನ ಮತ್ತು ಶ್ರೀಮಂತಿಕೆ ಇರುತ್ತದೆ ಎಂಬ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್‌ರವರ ಮಾತಿನಲ್ಲಿ ಸತ್ಯಾಂಶವಿದೆ.

ಆದರೆ ಯಾವ ದೇಶದಲ್ಲಿ ದೇವಾಲಯ ಮತ್ತು ಶಾಲೆಗಳ ಗಂಟೆಗಳೆರಡೂ ಬಾರಿಸಲ್ಪಡುತ್ತದೋ, ಆ ದೇಶದಲ್ಲಿ ಆಧ್ಯಾತ್ಮಿಕತೆ ಮತ್ತು ವಿಜ್ಞಾನ – ಜ್ಞಾನಗಳೆರಡರ ಮಿಲನವಾಗಿದೆ ಎಂದರ್ಥ. ವಿಜ್ಞಾನಕ್ಕಿಂತಲೂ ವಿವೇಕ ಶ್ರೇಷ್ಠ, ಜ್ಞಾನಕ್ಕೆ ಮೌಲ್ಯವನ್ನು ಬೆರೆಸಿದಾಗ, ಅದು ವಿವೇಕವೆನಿಸಿಕೊಳ್ಳುತ್ತದೆ. ಒಟ್ಟಿನಲ್ಲಿ, ನಮಗೆ ನಿತ್ಯ ಬೇಕೆರಡು ಸ್ನಾನಗಳು, ಹೊರಗೊಂದು ಸ್ನಾನ;
ಒಳಗೊಂದು ಸ್ನಾನ – ಅದುವೆ ಮೈಯ ಸ್ನಾನ ಮತ್ತು ಆತ್ಮ ಸ್ನಾನ!