ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಸಾಲುತಿಲ್ಲವೇ.. ಸಾಲುತಿಲ್ಲವೇ.. ಎಂಬ ಶುದ್ಧ ಕಳ್ಳನೆಪ !

ನಾವು ಎಷ್ಟೊಂದು ನೆಪ ಹೇಳುತ್ತೇವೆ. ಕೆಲಸಕ್ಕೆ ಕಳ್ಳ ಬೀಳುತ್ತೇವೆ. ಮನೆಯಲ್ಲಿ ಯಾರಿಗೋ ಹುಷಾರಿಲ್ಲ, ನನಗೆ ಸಣ್ಣ ತಲೆನೋವಿದೆ. ಊರಿಗೆ ಹೋಗಿ ಬಂದು ಸುಸ್ತಾಗಿದ್ದೇನೆ. ಮನಸ್ಸು ಸರಿ ಇಲ್ಲ. ಡಿಪ್ರೆಶನ್ನು. ಬರೆಯೋ ಮೂಡ್ ಇಲ್ಲ. ಕೆಲಸ ಮಾಡುವ ಮೂಡ್ ಇಲ್ಲ. ಹೀಗೆಲ್ಲ ನೆಪ ಹುಡುಕುತ್ತೇವೆ. ಹೀಗೆ ನೆಪ ಹುಡುಕುವ ನಾವು, ಮೊಬೈಲ್ ಸ್ಕ್ರೋಲಿಂಗ್ ನಿಲ್ಲಿಸಿರೋದಿಲ್ಲ. ಸಂಬಳಕ್ಕೆ ದುಡಿಯುವ ಕಡೆ ಮಾತ್ರ ನಮಗೆ ಇವೆಲ್ಲವೂ ನೆಪವಾಗಿ ಅಡ್ಡಿ ಬರುತ್ತವೆ. ನಮಗೆ ನಾವು ಆಳಾಗಿ ಉಳಿಯವುದು ಹೀಗೆಯೇ. ಇಂಥ ಮನಸ್ಥಿತಿಯಲ್ಲಿ ನಾವು ಯಾವತ್ತಿಗೂ ಬಾಸ್ ಆಗಲು ಸಾಧ್ಯವೇ ಇಲ್ಲ.

ಸಾಲುತಿಲ್ಲವೇ...ಸಾಲುತಿಲ್ಲವೇ...ಎಂಬ ಶುದ್ಧ ಕಳ್ಳನೆಪ !

ಪದಸಾಗರ

ಯಾವುದಕ್ಕೂ ಟೈಮ್ ಸಿಗುತ್ತಿಲ್ಲ.. ಸಾಲುತ್ತಿಲ್ಲ. ತುಂಬ ಬ್ಯುಸಿ.. ಈ ಮಾತುಗಳು ಇತ್ತೀಚೆಗೆ ಬಹಳ ನಿರರ್ಥಕ ಅನಿಸುವುದಕ್ಕೆ ಶುರುವಾಗಿದೆ. ಬದಲಿಗೆ A busy man has time for everything ಎಂಬ ಮಾತು ಸತ್ಯವೆನಿಸತೊಡಗಿದೆ. ಮುಖಸ್ತುತಿ ಅನಿಸಿದರೂ ಸರಿಯೇ, ಈ ಅಭಿಪ್ರಾಯ ನನ್ನಲ್ಲಿ ರೂಪುಗೊಳ್ಳುವುದಕ್ಕೆ ಕಾರಣ ನಮ್ಮ ಸಂಪಾದಕರಾದ ವಿಶ್ವೇಶ್ವರ ಭಟ್ಟರು. ಕಳೆದ ಹತ್ತು ವರ್ಷ ಗಳಲ್ಲಿ ಒಂದು ಎಂಡ್‌ಲೆಸ್ ಅಚ್ಚರಿಯಿಂದಲೇ ಅವರನ್ನು ಗಮನಿಸಿಕೊಂಡು ಬಂದಿದ್ದೇನೆ. ಅದು ಹತ್ತಾರು ಪಟ್ಟು ಹೆಚ್ಚಾದದ್ದು ಈ ಆರು ತಿಂಗಳಲ್ಲಿ.

‘ಪ್ರವಾಸಿ ಪ್ರಪಂಚ’ದ ಆರು ತಿಂಗಳ ಪ್ರಿ-ಪ್ರೊಡಕ್ಷನ್ ಮತ್ತು ಬಿಡುಗಡೆಯಾದ ನಂತರದ ಈ ಒಂದು ತಿಂಗಳು ನನ್ನ ಯೋಚನಾಕ್ರಮವನ್ನು ಬದಲಿಸಿದೆ. ಕಾರಣ ಹೊಸ ಪತ್ರಿಕೆ ಅಲ್ಲ. ಭಟ್ಟರ ದಿನಚರಿ, ಅವರ ಓದು, ಅವರ ಕನಸು ಕಾಣುವಿಕೆ, ದೂರದೃಷ್ಟಿತ್ವ, ತಾಳ್ಮೆ, ಬದ್ಧತೆ ಮುಂತಾದ ಹಲವಾರು ವಿಚಾರಗಳು ನನ್ನನ್ನು ಬದಲಾಯಿಸಿವೆ. ಪೂರ್ತಿಯಾಗಿ ಬದಲಾಗಿದ್ದೇನಾ? ಇಲ್ಲ.

ಆದರೆ ಆತ್ಮಾವಲೋಕನಕ್ಕಂತೂ ಒಳಪಡುತ್ತಲೇ ಇರುತ್ತೇನೆ. ನಾವು ಯಾರದ್ದೇ ಆತ್ಮಚರಿತ್ರೆ, ಸಿನಿಮಾ ಅಥವಾ ವಿದೇಶಿ ದಾರ್ಶನಿಕನ ಕೋಟು ಇಂಥವನ್ನು ಓದಿಯೇ ಪ್ರೇರೇಪಿತರಾಗಬೇಕಿಲ್ಲ. ಅಕ್ಕಪಕ್ಕದ, ಜತೆಯ ನಮ್ಮ ಜೀವನಪಠ್ಯಗಳು ಇರುತ್ತವೆ. ಆದರೆ ಹಿತ್ತಲ ಗಿಡ ಮದ್ದೆನಿಸುವುದೇ ಇಲ್ಲ.

ಇದನ್ನೂ ಓದಿ: Naveen Sagar Column: ಹಣೆ ಮೇಲೆ ಬೋರ್ಡ್‌ ಹಾಕ್ಕೊಂಡ್‌ ಓಡಾಡಬೇಕಾ ?

ಮೇ 23, 1999 ಸಚಿನ್ ತೆಂಡೂಲ್ಕರ್ ಕೀನ್ಯಾ ವಿರುದ್ಧ ಶತಕ ಗಳಿಸುತ್ತಾನೆ. ಮರುದಿನ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ‘ತಂದೆಯ ನಿಧನದ ದುಃಖದಲ್ಲೂ ಶತಕ ಬಾರಿಸಿದ ಸಚಿನ್’, ‘ದೇಶಕ್ಕಾಗಿ ಖಾಸಗಿ ದುಃಖವನ್ನು ಬದಿಗಿಟ್ಟ ಸಚಿನ್’ ಅಂತ. ಸಾಲು ಸಾಲು ಸ್ಪೂರ್ತಿ ಕತೆಗಳು ಬರುತ್ತವೆ. ವಿರಾಟ್ ಕೊಹ್ಲಿ ಕೇವಲ ಹದಿನೆಂಟು ವರ್ಷದವನಿದ್ದಾಗ ತಂದೆಯನ್ನು ಕಳೆದುಕೊಳ್ಳುತ್ತಾನೆ.

ಮರುದಿನವೇ ಕೊಹ್ಲಿ ಅಂಡರ್ 19 ಪಂದ್ಯವೊಂದಕ್ಕೆ ಹಾಜರಾಗಿ ತೊಂಬತ್ತು ರನ್ ಗಳಿಸುತ್ತಾನೆ. ಕೊಹ್ಲಿ ಮುಂದೆ ಖ್ಯಾತನಾದಾಗ ಈ ಕಥೆ ಹೊರಗೆ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಡಿಸೆಂಬರ್ 30, 2022ರಲ್ಲಿ ತಮ್ಮ 99ನೇ ವಯಸ್ಸಲ್ಲಿ ನಿಧನರಾದರು. ಸರಳವಾಗಿ ಅವರ ಅಂತ್ಯಕ್ರಿಯೆ ಮುಗಿಸಿ ಬಂದ ಮೋದಿಯವರು ಕೆಲವೇ ಗಂಟೆಗಳ ನಂತರ ತಮ್ಮ ಕರ್ತವ್ಯಕ್ಕೆ ಹಾಜರಾಗುತ್ತಾರೆ.

ನಮ್ಮಿಂದ ದೂರವಿರೋ ಪಬ್ಲಿಕ್ ಪರ್ಸನಾಲಿಟಿಗಳ ಇಂಥ ವಿಚಾರಗಳನ್ನು ಕೇಳಿದಾಗ ಅವರ ಬಗ್ಗೆ ಒಂದು ಅಭಿಮಾನ ಹುಟ್ಟುತ್ತದೆ, ಮೆಚ್ಚುಗೆ ಮೂಡುತ್ತದೆಯೇ ಹೊರತು ನಾವು ರಾತ್ರೋರಾತ್ರಿ ಅವರಂತಾಗಿಬಿಡುವುದಿಲ್ಲ. ಆದರೆ ನಮ್ಮ ಸುತ್ತಲೇ, ನಮ್ಮ ಹತ್ತಿರದವರ ಇಂಥದ್ದೊಂದನ್ನು ನೋಡಿದಾಗ ಅದು ಮನಸ್ಸಿಗೆ ಬೇರೆಯದೇ ರೀತಿಯಲ್ಲಿ ನಾಟುತ್ತದೆ.

‘ಪ್ರವಾಸಿ ಪ್ರಪಂಚ’ ಪತ್ರಿಕೆ ಬಿಡುಗಡೆಯಾಗಿ ಒಂದು ಸಂಚಿಕೆ ಹೊರ ಬಂದಿತ್ತು. ಅದರ ಸಂಭ್ರಮವೂ ಮುಗಿದಿರಲಿಲ್ಲ. ವಾರ ಕಳೆದು ಎರಡನೇ ಸಂಚಿಕೆ ಪ್ರಕಟಣೆಗೆ ಕ್ಷಣಗಣನೆ ಶುರುವಾಗಿ ಬಿಟ್ಟಿತ್ತು. ನನಗೋ, ‘ವಾರಕ್ಕೆ ಬರೀ ಏಳು ದಿನ ಯಾಕೆ? ಈ ಏಳು ದಿನ ಯಾಕೆ ಇಷ್ಟು ಬೇಗ ಸರಿದು ಹೋಗ್ತಾ ಇದೆ? ಈಗಲೂ ದಿನಕ್ಕೆ ಇಪ್ಪತ್ನಾಲ್ಕೇ ಗಂಟೆಯಾ ಅಥವಾ ಹತ್ತು ಹನ್ನೆರಡು ಗಂಟೆಗೆ ದಿನ ಮುಗಿದು ಹೋಗ್ತಾ ಇದೆಯಾ? ‘ಪ್ರವಾಸಿ ಪ್ರಪಂಚ’ ವಾರಕ್ಕೊಂದು ಬೇಕಿತ್ತಾ? ಹದಿನೈದು ದಿನಕ್ಕೊಂದು ಇದ್ದಿದ್ದರೆ ಆಗ್ತಿರಲಿಲ್ವಾ?’ ಹೀಗೆ ಅನಿಸುತ್ತಿದ್ದರೆ, ಭಟ್ಟರು ಮಾತ್ರ ಮುಂದಿನ ಸಂಚಿಕೆ ಗಾಗಿ ಹೊಸ ಹೊಸ ಯೋಜನೆ, ಲೇಖನ, ಪ್ರವಾಸ ಇವೆಲ್ಲವನ್ನೂ ಯೋಚಿಸುತ್ತಿದ್ದರು.

ನನಗೆ ‘ಪ್ರವಾಸಿ ಪ್ರಪಂಚ’ ಒಂದೇ. ಆದರೆ ಅವರಿಗೆ ‘ವಿಶ್ವವಾಣಿ’ ಇದೆ. ‘ಗ್ಲೋಬಲ್ ಅಚೀವರ್’ ಕಾರ್ಯಕ್ರಮಗಳಿವೆ, ‘ವಿಶ್ವವಾಣಿ ಪುಸ್ತಕ’ ಪ್ರಕಾಶನ, ಮಾಧ್ಯಮ ಅಕಾಡೆಮಿ, ಕ್ಲಬ್‌ಹೌಸ್, ‘ವಿಶ್ವವಾಣಿ ಟಿವಿ’, ಹೀಗೆ ಒಂದೇ ಎರಡೇ? ಈ ಮಧ್ಯ ಕಾಲಿಗೆ ಚಕ್ರ, ಮೈಗೆ ರೆಕ್ಕೆ ಅಂಟಿಸಿಕೊಂಡು ವಿದೇಶಕ್ಕೆ ಹಾರುತ್ತಾರೆ.

ವಿದೇಶಕ್ಕೆ ಹೋಗಿಲ್ಲವೆಂದರೆ ಈ ದೇಶದ ನೂರಾರು ಕಿಲೋಮೀಟರ್ ಸುತ್ತುತ್ತಾರೆ. ಯಾವ್ಯಾವುದೋ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾರೆ. ಇದರ ಮಧ್ಯ ಅದೆಷ್ಟು ಓದುತ್ತಾರೆ, ಬರೆಯುತ್ತಾರೆ. ನಡುವೆ ಹಿರಿಯ ಜೀವ ಭೈರಪ್ಪನವರೊಂದಿಗೆ ತಪ್ಪದೇ ಕಾಲ ಕಳೆಯುತ್ತಾರೆ. ಬೆಳಬೆಳಗ್ಗೆ ವಾಕಿಂಗೋ ಡ್ರೈವಿಂಗೋ ಹೋಗಿ ಅಲ್ಲಿ ಡ್ರೋನ್ ಹಾರಿಸಿ ಬರುತ್ತಾರೆ.

ಕುಟುಂಬಕ್ಕೂ, ಆಫೀಸಿನ ಸ್ಟಾಫಿಗೂ ಸಮಯ ಕೊಡುತ್ತಾರೆ. ವಾರಕ್ಕೆ ಎಂಟು-ಹತ್ತು ಅಂಕಣ ಗಳನ್ನು ಮಿಸ್ ಮಾಡದೇ ಬರೆಯುತ್ತಾರೆ. ಇಷ್ಟೆಲ್ಲ ಮಾಡಿಯೂ ಫ್ರಿಜ್ಜಿಂದ ತೆಗೆದ ಹಣ್ಣಿನಷ್ಟು ತಾಜಾ ಮತ್ತು ತಣ್ಣಗೆ ಇರ್ತಾರೆ. ಸಾಮಾನ್ಯ ಮನುಷ್ಯನಿಂದ ಹೇಗೆ ಸಾಧ್ಯ? ಮತ್ತೆ ನೆನಪಾಗೋದು ಅದೇ ಮಾತು. ಅತ್ಯಂತ ಬ್ಯುಸಿ ಮನುಷ್ಯ ಅಂದ್ರೆ ಎಲ್ಲದಕ್ಕೂ ಸಮಯ ಇರುವವನು.

ಎರಡನೇ ಸಂಚಿಕೆ ನಾಳೆ ಮುದ್ರಣಕ್ಕೆ ಹೋಗಬೇಕು ಎಂಬ ಗಳಿಗೆಯಲ್ಲಿ ಭಟ್ಟರ ಅತ್ಯಂತ ಆಪ್ತರ ನಿಧನ ವಾರ್ತೆ ಬರುತ್ತದೆ. ಅವರೇ ಮುಂದೆ ನಿಂತು ಎಲ್ಲವನ್ನೂ ನಡೆಸಿಕೊಡಬೇಕಾದಷ್ಟು ಆಪ್ತರು. ಇಂಥ ಸಮಯದಲ್ಲಿ ಭಟ್ಟರು ಫೋನ್ ಮಾಡಿ ಸುದ್ದಿ ತಿಳಿಸಿ, ಅಂತ್ಯಕ್ರಿಯೆ ಮುಗಿಸಿ ಬಂದವನೇ ಲೇಖನಗಳನ್ನು ಬರೆದು ಕಳಿಸ್ತೀನಿ ಅಂದಾಗ, ನನಗೆ ಹೇಗೆ ಪ್ರತಿಕ್ರಿಯಿಸಬೇಕು ಅಂತಲೇ ತಿಳಿಯಲಿಲ್ಲ.

ಭಟ್ಟರು ಮಾತಿಗೆ ತಪ್ಪಲಿಲ್ಲ. ಶೋಕದ ನಡುವೆಯೇ ಒಂದಾದ ಮೇಲೊಂದು ಅಂತ ಬರೋಬ್ಬರಿ ನಾಲ್ಕು ಲೇಖನಗಳನ್ನು ಅಂದ್ರೆ ಸುಮಾರು ಮೂರೂವರೆ ಸಾವಿರ ಪದಗಳಷ್ಟು ಬರೆದು ಕಳಿಸಿದರು. ಪತ್ರಿಕೆ ಸಮಯಕ್ಕೆ ಸರಿಯಾಗಿ ಪ್ರಿಂಟ್‌ಗೆ ಹೋಯ್ತು. ಇದು ನನ್ನ ಆಲೋಚನಾಕ್ರಮವನ್ನು ಬದಲಿಸಿದ್ದು. ಶುಕ್ರವಾರ ರಾತ್ರಿಯೇ ‘ಪ್ರವಾಸಿ ಪ್ರಪಂಚ’ಕ್ಕೆ ಡೆಡ್‌ಲೈನ್. ನನ್ನ ಅಂಕಣಕ್ಕೂ ಶುಕ್ರವಾರವೇ ಡೆಡ್‌ಲೈನ್. ಹೇಗೆ ಬರೆಯೋದು? ಕಾಲಂ ನಿಲ್ಲಿಸಿ ಬಿಡೋಣ ಅಥವಾ ಬೇರೆ ದಿನಕ್ಕೆ ಶಿಫ್ಟ್‌ ಮಾಡಿಕೊಳ್ಳೋಣ ಅಂತೆಲ್ಲ ಯೋಚಿಸುತ್ತಿದ್ದ ನಾನು, ಇಲ್ಲ, ಇದೇ ದಿನವೇ ಅಂಕಣ ಬರೆಯುತ್ತೇನೆ ಎಂದು ನಿರ್ಧರಿಸಿಕೊಂಡೆ.

ನಾನು ಬ್ಯುಸಿ, ಸಮಯ ಸಾಕಾಗ್ತಾ ಇಲ್ಲ ಎಂಬ ಪದವನ್ನು ಅಕ್ಷರಶಃ ಮನಸಿನಿಂದ ತೆಗೆದು ಹಾಕಿದೆ. ನಾನು ಇತ್ತೀಚಿನ ದಿನಗಳಲ್ಲಿ ಇಂಥದ್ದೇ ಉತ್ಸಾಹ ಎನರ್ಜಿ, ಕನಸು, ಕಸುವು ಎಲ್ಲ ಕಂಡದ್ದು ಬಹುಶಃ ವೀರಕಪುತ್ರ ಶ್ರೀನಿವಾಸ್, ರಂಗಸ್ವಾಮಿ ಮೂಕನಹಳ್ಳಿ ಈ ಇಬ್ಬರಲ್ಲಿ. ಆದರೆ ಭಟ್ಟರನ್ನು ಅತ್ಯಂತ ಹತ್ತಿರದಿಂದ ನೋಡುತ್ತಿರುವುದರಿಂದ ಅವರು ನನ್ನ ಮೇಲೆ ದೊಡ್ಡ ಪರಿಣಾಮ ಬೀರಿದರು.

ನಾವು ಎಷ್ಟೊಂದು ನೆಪ ಹೇಳುತ್ತೇವೆ. ಕೆಲಸಕ್ಕೆ ಕಳ್ಳ ಬೀಳುತ್ತೇವೆ. ಮನೆಯಲ್ಲಿ ಯಾರಿಗೋ ಹುಷಾರಿಲ್ಲ, ನನಗೆ ಸಣ್ಣ ತಲೆನೋವಿದೆ. ಊರಿಗೆ ಹೋಗಿ ಬಂದು ಸುಸ್ತಾಗಿದ್ದೇನೆ. ಮನಸ್ಸು ಸರಿ ಇಲ್ಲ. ಡಿಪ್ರೆಶನ್ನು. ಬರೆಯೋ ಮೂಡ್ ಇಲ್ಲ. ಕೆಲಸ ಮಾಡುವ ಮೂಡ್ ಇಲ್ಲ. ಹೀಗೆಲ್ಲ ನೆಪ ಹುಡುಕುತ್ತೇವೆ. ಹೀಗೆ ನೆಪ ಹುಡುಕುವ ನಾವು, ಮೊಬೈಲ್ ಸ್ಕ್ರೋಲಿಂಗ್ ನಿಲ್ಲಿಸಿರೋದಿಲ್ಲ.

ಊಟ ತಿಂಡಿ ನಿದ್ದೆ ಬಿಟ್ಟಿರುವುದಿಲ್ಲ. ಸಂಬಳಕ್ಕೆ ದುಡಿಯುವ ಕಡೆ ಮಾತ್ರ ನಮಗೆ ಇವೆಲ್ಲವೂ ನೆಪವಾಗಿ ಅಡ್ಡಿ ಬರುತ್ತವೆ. ನಮಗೆ ನಾವು ಆಳಾಗಿ ಉಳಿಯವುದು ಹೀಗೆಯೇ. ಇಂಥ ಮನಸ್ಥಿತಿಯಲ್ಲಿ ನಾವು ಯಾವತ್ತಿಗೂ ಬಾಸ್ ಆಗಲು ಸಾಧ್ಯವೇ ಇಲ್ಲ. ಇಂಥ ಪರೀಕ್ಷೆಗಳನ್ನು ಪಾಸ್ ಮಾಡಿದರೇನೇ ಬದುಕು. ಇವತ್ತಿಗೂ ಅದೆಷ್ಟೋ ಮಂದಿ ಸೀರಿಯಲ್‌ಗೆ ಸಂಭಾಷಣೆ ಬರೆಯುತ್ತಿದ್ದಾರೆ.

ಹೊತ್ತುಗೊತ್ತಿಲ್ಲದಂತೆ ಕೀಬೋರ್ಡ್ ಕುಟ್ಟುತ್ತಾರೆ. ಹಿಮಾಲಯಕ್ಕೆ ಹೋಗಿದ್ದರೂ ಅ ಕೂತು ಬರೆಯುತ್ತಾರೆ. ಮನೆಯಲ್ಲಿ ಸಾವಾಗಿದ್ದರೂ ಬದಿಯ ಕೂತು ಕಣ್ಣೀರು ಒರೆಸಿಕೊಳ್ಳುತ್ತಾ ಹಾಸ್ಯದ ಎಪಿಸೋಡ್ ಬರೆಯುತ್ತಾರೆ. ಅದು ಕೆಲವರ ಬದ್ಧತೆ, ಕೆಲವರಿಗೆ ಅನಿವಾರ್ಯತೆ. ಅಂಥ ಸಂದರ್ಭ ಗಳೇ ನಮ್ಮನ್ನು ಅಳೆಯೋದು. ಬರವಣಿಗೆ ಅನ್ನೋದು ಕ್ರಿಯೇಟಿವ್ ಕೆಲಸ, ಅದಕ್ಕೆ ಮೂಡ್ ಅಗತ್ಯ ಎಂಬುದು ಒಂದು ಮಟ್ಟಿಗೆ ನಿಜವೇ ಆದರೂ, ಎಂಥ ಕ್ರಿಯೇಟಿವ್ ಕೆಲಸವೂ ಕಾಲಕ್ರಮೇಣ ಮೆಕ್ಯಾನಿಕಲ್ ಆಗುತ್ತದೆ ಎಂಬುದೂ ಅಷ್ಟೇ ನಿಜ.

ಮೂಡ್ ಮೇಲೆ ಡಿಪೆಂಡ್ ಆಗಿ ಕೆಲಸ ಮಾಡುವವರಿಗೆ ಇದು ಕಾಲವಲ್ಲ. ಶೋ ಮಸ್ಟ್ ಗೋ ಆನ್. ನಮ್ಮನ್ನು ಬಿಟ್ಟು ಕೂಡ ಶೋ ನಡೆಯುತ್ತದೆ. ನಾವು ನಮ್ಮ ಪಾತ್ರ ಕಳೆದುಕೊಳ್ಳಬಾರದು. ಅಷ್ಟೆ. ಜಗತ್ತಿನಲ್ಲಿ ಸಚಿನ್, ಮೋದಿ, ವಿರಾಟ್ ಮಾತ್ರವಲ್ಲ, ನಮ್ಮ ಸುತ್ತ ಲಕ್ಷಾಂತರ ಮಂದಿ ಹೀಗೆ ಎಲ್ಲ ಕಷ್ಟಗಳ ನಡುವೆ ಕರ್ತವ್ಯಕ್ಕೆ ಹಾಜರಾಗುವವರಿದ್ದಾರೆ. ಕೇವಲ ಹಾಜರಾಗುವುದು ಮಾತ್ರ ಮುಖ್ಯ ವಾಗುವುದಿಲ್ಲ. ಪರ್ಫಾರ್ಮೆನ್ಸ್ ಕೂಡ ಮುಖ್ಯವಾಗುತ್ತದೆ. ಅವತ್ತು ಸಚಿನ್ ಮತ್ತು ವಿರಾಟ್ ಬ್ಯಾಟಿನಿಂದ ರನ್ ಹರಿದು‌ ಬರದೇ ಇದ್ದಿದ್ದರೆ, ಈ ಕಥೆಗಳು ಅ ಸತ್ತು ಹೋಗುತ್ತಿದ್ದವು. ಸಿನಿಮಾ ನಟ-ನಟಿಯರು ನಿಜಜೀವನದ ದಾರುಣ ಘಟನೆಗಳ ಬೆನ್ನ ಶೂಟಿಂಗಿಗೆ ಬಂದು ಕ್ಯಾಮೆರಾ ಎದುರು ತದ್ವಿರುದ್ಧ ಮೂಡ್‌ನ ದೃಶ್ಯದಲ್ಲಿ ನಟಿಸಿ ಸೈ ಎನಿಸಿಕೊಂಡ ಉದಾಹರಣೆಗಳಿವೆ.

ಮನುಷ್ಯನೆಂಬ ಭಾವುಕ ಪ್ರಾಣಿಗೆ, ದುಃಖದಿಂದ ಹೊರಬಂದು ಕೆಲಸದತ್ತ ಚಿತ್ತ ಹರಿಸುವುದು ಖಂಡಿತ ಸುಲಭದ ವಿಷಯವೇನಲ್ಲ. ಆದರೆ ಕರ್ತವ್ಯ ಬದ್ಧತೆ ಅವೆಲ್ಲವನ್ನೂ ಮೀರಿ ನಿಲ್ಲಲೇಬೇಕು. ಸಮಯವಿಲ್ಲ ಅನ್ನೋ ಮಾತುಗಳು, ಕೆಲಸ ಜಾಸ್ತಿ ಆಗ್ತಿದೆ ಎಂಬ ಗೊಣಗುಗಳು ಎಲ್ಲವೂ ಅಂತಿಮ ವಾಗಿ ನೆಪಗಳಷ್ಟೆ.

ವಿಮಾನ ನಿಲ್ದಾಣದಲ್ಲಿ ಮಧ್ಯರಾತ್ರಿ ಮೂರೂವರೆ ರಾತ್ರಿಯಲ್ಲಿ ಕೂತು ಭಟ್ಟರು ‘ಪ್ರವಾಸಿ ಪ್ರಪಂಚ’ದ ಪ್ರೂಫ್ ಚೆಕ್ ಮಾಡಬಲ್ಲರು, ಫಿಲಿಪೀನ್ಸ್‌ ನ ತಿರುಗಾಟದ ನಡುವೆಯೇ ಕೂತು ರಾಶಿ ರಾಶಿ ಬರೆದು‌ (ಒಂದಕ್ಷರವೂ ತಪ್ಪಿಲ್ಲದಂತೆ) ಕಳಿಸಬಲ್ಲರು, ಸಾವಿರ ಜಂಜಡಗಳ ಮಧ್ಯೆಯೂ ಹಸನ್ಮುಖ ಇಟ್ಟುಕೊಂಡು ಓದಿ ಓದಿ ಬರೆಯಬಲ್ಲರು ಅಂದ್ರೆ, ಸಮಯವಿಲ್ಲ, ಮೂಡ್ ಇಲ್ಲ ಎಂಬ ಪದಗಳಿಗೆ ಅರ್ಥವೆಲ್ಲಿದೆ?

ಬ್ರ್ಯಾಕೆಟ್ ಬರಹ: ಈಗ ನಮ್ಮ ನಡುವೆ ಇಲ್ಲದ ನಿರ್ದೇಶಕ ನೊಬ್ಬ ಈಗೊಂದು ಏಳು ವರ್ಷದ ಹಿಂದೆ ಖಾಸಗಿ ವಾಹಿನಿಯಲ್ಲಿ ರಿಯಾಲಿಟಿ ಶೋ ಜಡ್ಜ್ ಆಗಿದ್ದ.

ಆ ಸಮಯದಲ್ಲಿ ಆತನ ತಂದೆ ನಿಧನ ಹೊಂದಿದರು. ಆಗ ಆತ ಚಾನೆಲ್ಲಿಗೆ ಫೋನ್ ಮಾಡಿ ಹೇಳಿದನಂತೆ- “ನನ್ನ ತಂದೆ ಹೊಗೆ ಹಾಕಿಸಿಕೊಂಡಿದಾರೆ. ಇವತ್ತೇ ಶೂಟ್ ಇಟ್ಕೊಂಡ್ ಬಿಡಿ, ಶೂಟ್ ಆದ ಹಾಗೂ ಆಗತ್ತೆ, ಅಪ್ಪ ಸತ್ತರೂ ಶೂಟಿಂಗಿಗೆ ಬಂದಿದಾನೆ ಅಂತಾನೂ ಆಗತ್ತೆ. ಬೇಕಾದ್ರೆ ಗೊಳೋ ಅಂತ ಅತ್ತುಬಿಡ್ತೀನಿ. ನಿಮಗೆ ಟಿಆರ್‌ಪಿನೂ ಹೆವಿಯಾಗಿ ಬರುತ್ತೆ" ಅಂತ.

ಚಾನೆಲ್‌ನವರು ಆತನ ಬಗ್ಗೆ ಅಸಹ್ಯಪಟ್ಟುಕೊಂಡು, “ಬೇಡ ಸರ್, ನೀವು ಎಲ್ಲ ಕಾರ್ಯ ಮುಗಿಸಿ ಬನ್ನಿ. ನಂತರ ಶೂಟ್ ಇಟ್ಟುಕೊಳ್ಳೋಣ" ಅಂದರಂತೆ. ಇಂಥದ್ದನ್ನೆಲ್ಲ ಬದ್ಧತೆ ಎಂದು ಕನ್‌ ಫ್ಯೂಸ್ ಮಾಡಿಕೊಂಡು ಯಾರೂ ಪ್ರೇರಣೆ ಪಡೆಯಬಾರದು.