ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಸುಮ್ನ ಇರಲಾರದೇ ಇರುವೆ ಬಿಟ್ಕಂಡಂತಾಯ್ತು !

ರಾಹುಲ್ ತಮ್ಮ ಪ್ರದರ್ಶನವನ್ನು ಹಾಗೂ ತಂಡದ ಜಯವನ್ನು ಅವರು ಅತಿರೇಕವಾಗಿ ಸಂಭ್ರಮಿಸು ವವರಲ್ಲ. ಅವರೇನಿದ್ದರೂ ಗೆಲುವನ್ನು ಒಳಗೊಳಗೇ ಸಂಭ್ರಮಿಸುವ ವ್ಯಕ್ತಿ. ಆದರೆ ಅಂದು ಕ್ರೀಡಾಂಗಣದಲ್ಲಿ ರಾಹುಲ್ ವೈಲೆಂಟ್ ಆದಂತೆ ಕಂಡುಬಂತು. ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಗೆದ್ದ ಜೋಶ್‌ನಲ್ಲಿ ಅವರು ತುಸು ಅಬ್ಬರದಲ್ಲೇ ಸಂಭ್ರಮಿಸಿದರು.

ಸುಮ್ನ ಇರಲಾರದೇ ಇರುವೆ ಬಿಟ್ಕಂಡಂತಾಯ್ತು !

ವಿದ್ಯಮಾನ

ಅನೇಕ ಸಂದರ್ಭಗಳಲ್ಲಿ ಆಡುವ ಅನಗತ್ಯ ಮಾತುಗಳು, ಕೆಲವು ಅಸಂಗತ ನಡೆಗಳು ವ್ಯಕ್ತಿಯ ವರ್ಚಸ್ಸಿಗೆ ಶಾಶ್ವತವಾಗಿ ಧಕ್ಕೆ ತಂದುಬಿಡುತ್ತವೆ. ಇಂಥ ಮಾತುಗಳು ಮತ್ತು ನಡವಳಿಕೆಗಳು ಅವರನ್ನು ಸಮಾಜದಲ್ಲಿ ನಕಾರಾತ್ಮಕವಾಗಿ ಬಿಂಬಿಸಿ ಬಿಡುತ್ತವೆ. ಅದರಲ್ಲೂ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾ ತಾರೆಯರು ಮುಂತಾದ ಸಾರ್ವಜನಿಕ ಉತ್ತರದಾಯಿತ್ವವನ್ನು ಹೊಂದಿ ರುವವರನ್ನಂತೂ ಜನರು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ನೋಡುತ್ತಿರುತ್ತಾರೆ. ಸಮಾಜದಲ್ಲಿ ಗಣ್ಯರು, ಸೆಲೆಬ್ರಿಟಿಗಳು ಎನಿಸಿಕೊಂಡವರ ನಡೆ-ನುಡಿಗಳಲ್ಲಿ ಸ್ವಲ್ಪ ವ್ಯತ್ಯಸ್ಥವಾದರೂ ಸಾರ್ವ ಜನಿಕರ ವಿರೋಧವನ್ನು ಎದುರಿಸಬೇಕಾಗಿ ಬಂದು, ಗಳಿಸಿದ್ದ ಗೌರವಕ್ಕೆ ಧಕ್ಕೆಯನ್ನೂ ತಂದುಕೊಳ್ಳ ಬೇಕಾಗುತ್ತದೆ. ಅಂಥ ಎರಡು ತಾಜಾ ಉದಾಹರಣೆಗಳೇ ಈ ಲೇಖನದ ವಸ್ತುವಾಗಿದೆ.

ಪಹಲ್ಗಾಮ್ ಪ್ರವಾಸಿ ತಾಣದ ಮೇಲೆ ಆಗಿರುವ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಭಾರತ ಸರಕಾರವು ಪಾಕಿಸ್ತಾನದ ವಿರುದ್ಧ ಅನೇಕ ಕಠಿಣ ರಾಜತಾಂತ್ರಿಕ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಮಿಲಿಟರಿ ಬಳಕೆಯೂ ನಮ್ಮ ಆಯ್ಕೆಯಾಗಬಹುದು ಎಂಬ ಸಂದೇಶವನ್ನು ಅದು ನೀಡಿದೆ. ಸರಕಾರವು ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಂಡು ಮಂತ್ರಾಲೋಚನೆಯಲ್ಲಿ ತೊಡಗಿರುವುದು ಜಾಗತಿಕವಾಗಿ ಕುತೂಹಲಕ್ಕೂ, ಪಾಕಿಸ್ತಾನದ ಮಟ್ಟಿಗೆ ಆತಂಕಕ್ಕೂ ಕಾರಣವಾಗಿದೆ.

KLR R

ಉಭಯ ದೇಶಗಳ ಸೇನಾಪಡೆಗಳು ಗಡಿಯತ್ತ ಮುನ್ನುಗ್ಗುತ್ತಿರುವುದರಿಂದ ಭಾರತ-ಪಾಕಿಸ್ತಾನಗಳ ನಡುವೆ ಯುದ್ಧವಾಗುವ ಸನ್ನಿವೇಶ ತಲೆದೋರಿರುವುದಂತೂ ನಿಜ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ನೀಡಿದ ಹೇಳಿಕೆಯೊಂದು ಅನೇಕ ಭಾರತೀಯ ಮನಸ್ಸುಗಳಿಗೆ ನೋವುಂಟು ಮಾಡಿರುವುದಷ್ಟೇ ಅಲ್ಲದೆ, ಪಾಕಿಸ್ತಾನದಲ್ಲೂ ವೈರಲ್ ಆಗಿ, ಭಾರತದ ಬಗ್ಗೆ ಅವರುಗಳಿಗೆ ಮಾತಾಡಲು ಅವಕಾಶ ನೀಡಿತು.

“ಪಹಲ್ಗಾಮ್‌ನಲ್ಲಿನ ಭೀಕರ ಹತ್ಯಾಕಾಂಡವು ಭದ್ರತಾ ವೈಫಲ್ಯದಿಂದ ಆಗಿರುವಂಥದ್ದು. ಈಗ ಎಷ್ಟೇ ತೀಕ್ಷ್ಣ ಕ್ರಮ ಕೈಗೊಂಡರೂ, ತೀರಿಹೋಗಿರುವ 26 ಮಂದಿಯನ್ನು ವಾಪಸ್ ತರಲು ಸಾಧ್ಯ ವಾದೀತೇ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಅಷ್ಟೇ ಅಲ್ಲದೆ, “ನಾವು ಯುದ್ಧದ ಪರ ಇಲ್ಲ" ಎಂದು ಹೇಳಿದ ಅವರು, “ಕೇಂದ್ರದ ಸೂಚನೆಯಂತೆ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆ ಗಳನ್ನು ಕಳುಹಿಸುವುದು ಇತ್ಯಾದಿ ಕ್ರಮಗಳನ್ನು ನಾವು ಪಾಲಿಸುತ್ತೇವೆ.

Sonu R

ಯುದ್ಧದ ಅಗತ್ಯವೇನಿಲ್ಲ. ಕಾಶ್ಮೀರದಲ್ಲಿ ಭದ್ರತೆಯಿದೆ ಎಂದು ನಂಬಿ ಜನರು ಹೋಗಿದ್ದರು. ಬಿಜೆಪಿ ಹೇಳುತ್ತಿದ್ದ ಭದ್ರತೆ ಕೇವಲ ಭಾಷಣದಲ್ಲಿ ಮಾತ್ರ ಇತ್ತು" ಎಂದರು. ಪ್ರಸ್ತುತ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಆಡಿರುವ ಮಾತು ಕನ್ನಡಿಗರು ಸೇರಿದಂತೆ ಸಮಸ್ತ ಭಾರತೀಯರಿಗೆ ಅಚ್ಚರಿ ಮೂಡಿಸಿತು. “ದೇಶಕ್ಕೇನಾದರೂ ಆಗಲಿ ಪರವಾಗಿಲ್ಲ, ಮತ ಸಿಕ್ಕಿದರೆ ಸಾಕು, ಅಧಿಕಾರದಲ್ಲಿದ್ದರೆ ಸಾಕು ಎಂಬ ಮನಸ್ಥಿತಿಗೆ ಬಂದಿರುವುದು ಸರಿಯಲ್ಲ. ಕೂಡಲೇ ಅವರು ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು" ಎಂದು ವಿಪಕ್ಷಗಳವರು ಆಗ್ರಹಿಸಲು ಶುರುವಿಟ್ಟುಕೊಂಡರು.

ಅವರು ಮುಂದುವರಿದು, “ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಹತ್ಯೆ ನಡೆದಾಗ ಕಾಂಗ್ರೆಸ್ಸಿನದ್ದೇ ಸರಕಾರವಿತ್ತು. ಹಾಗಾದರೆ ಅದು ಭದ್ರತಾ ವೈಫಲ್ಯವಲ್ಲವೇ? ಇಂಥ ಅತಿಗಣ್ಯರಿಗೇ ಸರಿಯಾದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗದವರಿಗೆ ಈಗ ಮಾತಾಡಲು ಯಾವ ನೈತಿಕತೆಯಿದೆ?" ಮುಂತಾದ ಉತ್ತರಿಸಲಾಗದ ಪ್ರಶ್ನೆಗಳನ್ನು ಎತ್ತಲು ಶುರುಮಾಡಿದರು.

ಪಾಕಿಸ್ತಾನದ ಟಿವಿ ಮಾಧ್ಯಮಗಳು ಸಿದ್ದರಾಮಯ್ಯನವರ ಹೇಳಿಕೆಯನ್ನು ಪದೇ ಪದೆ ತೋರಿಸುತ್ತಾ, ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ವಿಚಾರದಲ್ಲಿ ಭಾರತದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದೆ ಎಂಬಂತೆ ಬಿಂಬಿಸಿದವು. ಅಲ್ಲಿನ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಬಿತ್ತರವಾದ ವಾರ್ತೆಯ ಸಾರಾಂಶ ಹೀಗಿತ್ತು: “ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಸನ್ನದ್ಧವಾಗಿದೆ.

ಇದನ್ನೂ ಓದಿ: Vinayak V Bhat Column: ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ

ಆದರೆ ಈ ನಿರ್ಧಾರಕ್ಕೆ ಭಾರತದೊಳಗೇ ಅಸಮಾಧಾನ ಎದ್ದಿದೆ. ಕರ್ನಾಟಕ ರಾಜ್ಯದ ‘ವಜೀರೇ ಆಲಂ’ (ಮುಖ್ಯಮಂತ್ರಿ), ‘ಪಹಲ್ಗಾಮ್‌ನಲ್ಲಿ ಆಗಿರುವ ಘಟನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ದೊಂದಿಗೆ ಯುದ್ಧ ಮಾಡುವ ಅವಶ್ಯಕತೆಯೇನಿಲ್ಲ. ಪಹಲ್ಗಾಮ್ ಘಟನೆ ಕೇಂದ್ರ ಸರಕಾರದ ಭದ್ರತಾ ವೈಫಲ್ಯದಿಂದ ಆಗಿರುವಂಥದ್ದು, ಈ ವಿಚಾರದಲ್ಲಿ ಪಾಕಿಸ್ತಾನವನ್ನು ಸುಮ್ಮನೇ ಬಲಿಪಶು ಮಾಡಲು ಅದು ಹೊರಟಿದೆ’ ಎಂದು ಹೇಳಿದ್ದಾರೆ".

ಸಿದ್ದರಾಮಯ್ಯನವರ ಹೇಳಿಕೆಯನ್ನು ಸಮರ್ಥಿಸಿ ರಾಜ್ಯ ಕಾಂಗ್ರೆಸ್‌ನ ನಾಯಕರನೇಕರು ಇದೇ ಧಾಟಿಯ ಹೇಳಿಕೆಗಳನ್ನು ನೀಡಲಾರಂಭಿಸಿದರು. ಸಚಿವ ಪ್ರಿಯಾಂಕ್ ಖರ್ಗೆಯವರು, “ಎಲ್ಲಾ ಧರ್ಮಗಳಲ್ಲಿಯೂ ದಾರಿ ತಪ್ಪಿದ ಜನರಿದ್ದಾರೆ ಎಂದರು. “ಪಹಲ್ಗಾಮ್ ಹತ್ಯಾಕಾಂಡಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದುಹಾಕಿದ್ದೇ ಕಾರಣ ಎಂದು ಶಾಸಕ ರಮೇಶ್ ಬಂಡಿ ಸಿದ್ದೇಗೌಡ ಹೇಳಿದರೆ, “ದಾಳಿಕೋರರು ಧರ್ಮದ ಬಗ್ಗೆ ಕೇಳಿದರು ಎನ್ನುವುದು ಸುಳ್ಳು" ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಪದೇ ಪದೆ ಹೇಳಿದರು.

ಈ ಅಸಂಗತ ವಕ್ತವ್ಯಗಳು ಪಕ್ಷಕ್ಕೆ ಹಾನಿಯುಂಟುಮಾಡುತ್ತವೆ ಎಂಬ ಸೂಕ್ಷ್ಮವನ್ನರಿತ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, “ಪಹಲ್ಗಾಮ್‌ನಲ್ಲಾಗಿರುವ ಭೀಕರ ಹತ್ಯಾಕಾಂಡದ ಕುರಿತು ಯಾರೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು" ಎಂದು ಆದೇಶಿಸಬೇಕಾಯಿತು. ಹೀಗೆ ತಮ್ಮ ಧೋರಣೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದಂತೆ, ಅದರಲ್ಲೂ ಪಾಕಿಸ್ತಾನಿ ಮಾಧ್ಯಮ ದಿಂದಾಗಿ ವಿವಾದ ಉಲ್ಬಣಗೊಳ್ಳುತ್ತಿದ್ದಂತೆ ಸಿದ್ದರಾಮಯ್ಯನವರು ತಮ್ಮ ಮೂಲ ಹೇಳಿಕೆಗೆ ಸ್ಪಷ್ಟೀಕರಣ ನೀಡುವ ಒತ್ತಡಕ್ಕೆ ಒಳಗಾದರು.

“ನಾನು ಯುದ್ಧ ಬೇಡವೇ ಬೇಡ ಎಂದಿಲ್ಲ. ಯಾವುದೇ ದೇಶಕ್ಕೆ ಯುದ್ಧ ಕೊನೆಯ ಆಯ್ಕೆಯಾಗ ಬೇಕೇ ವಿನಾ ಮೊದಲ ಅಥವಾ ಏಕೈಕ ಆಯ್ಕೆ ಆಗಬಾರದು. ಶತ್ರುವನ್ನು ಸೋಲಿಸಲು ಇರುವ ಇತರ ಎಲ್ಲಾ ಆಯ್ಕೆಗಳು ವಿಫಲವಾದಾಗ ಮಾತ್ರವೇ ಯುದ್ಧ ಮಾಡಬೇಕು" ಎಂದು ಹೇಳಿದರು. “ಭವಿಷ್ಯದಲ್ಲಿ ಕೇಂದ್ರ ಸರಕಾರವು ಇನ್ನೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಮಗೆ ವಿಶ್ವಾಸವಿದೆ.

ಅಂಥ ಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರವೂ ಇದೆ" ಎಂದು ಅವರು ಪ್ರತಿಪಾದಿಸುತ್ತಾ, ಮಿಲಿಟರಿ ಮುಖಾಮುಖಿಯನ್ನು ಒಳಗೊಂಡಂತೆ ಕೇಂದ್ರದ ಎಲ್ಲಾ ರಕ್ಷಣಾತ್ಮಕ ಕ್ರಮಗಳನ್ನು ಬೆಂಬಲಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಭದ್ರತಾ ವ್ಯವಸ್ಥೆಯ ವೈಫಲ್ಯದ ಬಗ್ಗೆ ಮುಖ್ಯಮಂತ್ರಿ ಯವರು ಪ್ರಶ್ನೆಯೆತ್ತಿರುವುದು ಸರಿಯಾಗೇ ಇದೆ; ಈ ಲೋಪವನ್ನು ಮೊದಲು ಸರಿಪಡಿಸಬೇಕಾದ್ದು ಮತ್ತು ಭವಿಷ್ಯದಲ್ಲಿ ಅಂಥ ಕೃತ್ಯಗಳು ಸಂಭವಿಸದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿರುವುದರಲ್ಲಿ ತಪ್ಪೇನಿರಲಿಲ್ಲ.

ಆದರೆ ಹೇಳಬೇಕಿದ್ದ ಸಮಯ ಇದಾಗಿರಲಿಲ್ಲ. ಅಷ್ಟು ಹೊತ್ತಿಗಾಗಲೇ ಕಾಲ ಮಿಂಚಿಹೋಗಿತ್ತು. ಅನವಶ್ಯಕವಾದ ಮಾತಿನಿಂದ ಅವರ ವರ್ಚಸ್ಸಿಗೆ ಆಗಬೇಕಾದ ಡ್ಯಾಮೇಜ್ ಆಗಿಹೋಗಿತ್ತು. ಸರ್ವಪಕ್ಷದ ಸಭೆಯ ನಂತರ ಕಾಂಗ್ರೆಸ್ ಸೇರಿದಂತೆ ಎಲ್ಲ ವಿಪಕ್ಷಗಳೂ, ಸ್ವತಃ ರಾಹುಲ್ ಗಾಂಧಿಯವರೂ ಕೇಂದ್ರ ಸರಕಾರದ ಯಾವುದೇ ಕ್ರಮಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ ಮೇಲೂ, ದೇಶದ ಜನರ ಭಾವನೆಗಳಿಗೆ ವ್ಯತಿರಿಕ್ತವಾದ ಹೇಳಿಕೆ ನೀಡುವ ಅಗತ್ಯವಿತ್ತಾ? ಎನ್ನುವು ದಷ್ಟೇ ಇಲ್ಲಿ ಪ್ರಶ್ನೆ.

‘ಯುದ್ಧ ಬೇಕಾ, ಬೇಡವಾ?’ ಅಂತ ಪತ್ರಕರ್ತರೂ ಸೇರಿ ಯಾರೂ ಅವರನ್ನು ಕೇಳಿರಲಿಲ್ಲ. ಅದು ಅವರ ಅಧಿಕಾರದ ವ್ಯಾಪ್ತಿಗೆ ಬರುವ ವಿಷಯವೂ ಆಗಿರಲಿಲ್ಲ. ಹೀಗಿದ್ದಾಗ, “ನಾನು ಯುದ್ಧದ ಪರವಾಗಿ ಇಲ್ಲ" ಎಂಬ ಸ್ವಯಂಪ್ರೇರಿತ ಹೇಳಿಕೆಯ ಅವಶ್ಯಕತೆ ಇರಲಿಲ್ಲವೇನೋ?! ಸಿದ್ದರಾಮಯ್ಯ ನವರು ಯಾವಾಗಲೂ ಖಡಕ್ ಮಾತುಗಳಿಗೆ ಹೆಸರಾದವರು, ಯಾರನ್ನೂ ಮೆಚ್ಚಿಸಲು ಮಾತಾಡು ವವರಲ್ಲ.

ಯಾವುದೇ ನಾಟಕೀಯತೆಯಿಲ್ಲದ ನೇರ ನಡೆ-ನುಡಿಗಳಿಗಾಗಿ ಅನೇಕ ಬಾರಿ ನಿಷ್ಠುರಕ್ಕೆ ಒಳಗಾಗಿರುವ ಸಿದ್ದರಾಮಯ್ಯನವರು ಎತ್ತಿದ ಪ್ರಶ್ನೆಗೆ ಕೇಂದ್ರ ಮತ್ತು ಕಾಶ್ಮೀರ ಸರಕಾರಗಳು ಇಂದಲ್ಲಾ ನಾಳೆ ಖಂಡಿತವಾಗಿಯೂ ಉತ್ತರಿಸಲೇಬೇಕಾಗುತ್ತದೆ. ಹೀಗಾಗಿ, ಪ್ರಶ್ನಿಸಿದ ಸಿದ್ದರಾಮಯ್ಯ ರಂಥವರನ್ನು ಖಳನಾಯಕರನ್ನಾಗಿಸಿ ಜಾರಿಕೊಳ್ಳಲಾಗದು.

ಇತ್ತೀಚಿನ ತಮ್ಮ ಅನುಚಿತ ಮತ್ತು ಅಸಂಗತ ನಡವಳಿಕೆಯಿಂದಾಗಿ ತಮ್ಮದೇ ಜನರ ಮನಸ್ಸಿನಿಂದ ದೂರವಾದ ಇನ್ನೊಬ್ಬರೆಂದರೆ ನಮ್ಮ ರಾಜ್ಯದ ಹೆಮ್ಮೆಯ ಕ್ರಿಕೆಟಿಗ ಕೆ.ಎಲ್. ರಾಹುಲ್. ಮೊನ್ನೆ ಏಪ್ರಿಲ್ 10ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಜಯಗಳಿಸಿದಾಗ, ಬೆಂಗಳೂರಿನ ಆರ್‌ಸಿಬಿ ಅಭಿಮಾನಿ ಗಳ ಮಧ್ಯೆ ನಿಂತು ಆವೇಶದಿಂದ ‘ಕಾಂತಾರ’ ಚಲನಚಿತ್ರದ ಸನ್ನಿವೇಶವನ್ನು ತೋರಿಸಿದ್ದು ಕನ್ನಡಿಗ ರಿಗೇಕೋ ಸರಿಬರಲಿಲ್ಲ.

ರಾಹುಲ್ ಕೇವಲ 53 ಎಸೆತಗಳಲ್ಲಿ ಅಜೇಯ 93 ರನ್ ಗಳಿಸಿ ಮಿಂಚಿದ್ದರು. ಅವರ ಅದ್ಭುತ ಆಟದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 6 ವಿಕೆಟ್‌ಗಳಿಂದ ಜಯಗಳಿಸಿತು. ರಾಹುಲರ ಈ ಇನ್ನಿಂಗ್ಸ್ ವಿಶೇಷವಾಗಿತ್ತು. ಏಕೆಂದರೆ ಇದು 9 ವರ್ಷಗಳ ನಂತರ ಅವರು ಬೆಂಗಳೂರಿನಲ್ಲಿ ಗಳಿಸಿದ ಮೊದಲ ಅರ್ಧಶತಕವಾಗಿತ್ತು. ಈತ ಕನ್ನಡಿಗ ಎನ್ನುವ ಕಾರಣಕ್ಕೆ ಪ್ರೇಕ್ಷಕರಿಗೆ ಸಂತೋಷವೂ ಇತ್ತು. ಆದರೆ, ಇವರ ಅನುಚಿತ ವರ್ತನೆಯನ್ನು ಮಾತ್ರ ಜನರು ತಿರಸ್ಕರಿಸಿಬಿಟ್ಟರು.

ವಾಸ್ತವವಾಗಿ ರಾಹುಲ್ ಒಬ್ಬ ಸಜ್ಜನಿಕೆಯ ಆಟಗಾರ, ತಮ್ಮ ಪ್ರದರ್ಶನವನ್ನು ಹಾಗೂ ತಂಡದ ಜಯವನ್ನು ಅವರು ಅತಿರೇಕವಾಗಿ ಸಂಭ್ರಮಿಸುವವರಲ್ಲ. ಅವರೇನಿದ್ದರೂ ಗೆಲುವನ್ನು ಮೌನ ವಾಗಿ, ಒಳಗೊಳಗೇ ಸಂಭ್ರಮಿಸುವ ವ್ಯಕ್ತಿ. ಆದರೆ ಅಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಹುಲ್ ತುಸು ವೈಲೆಂಟ್ ಆದಂತೆ ಕಂಡುಬಂತು. ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಗೆದ್ದ ಜೋಶ್‌ನಲ್ಲಿ ಅವರು ತುಸು ಅಬ್ಬರದಲ್ಲೇ ಸಂಭ್ರಮಿಸಿದರು.

ತಮ್ಮ ಬ್ಯಾಟ್ ಅನ್ನು ಮೈದಾನಕ್ಕೆ ತಾಗಿಸಿ ಒಂದು ಸುತ್ತು ಮಾಡಿದಂತೆ ತೋರಿಸಿ, ‘ಇದು ನನ್ನ ಮನೆ, ನನ್ನ ಮೈದಾನ..’ ಎಂದು ಅವರು ಘೋಷಿಸಿದಂತಿತ್ತು. ಬೇರಾವುದಾದರೂ ಕ್ರೀಡಾಂಗಣದಲ್ಲಿ, ಇನ್ನಾವುದಾದರೂ ತಂಡದ ವಿರುದ್ಧ ಹೀಗೆ ಸಂಭ್ರಮಾಚರಿಸಿದ್ದರೆ ಕನ್ನಡಿಗರಿಗೆ ಮೆಚ್ಚುಗೆಯಾಗು ತ್ತಿತ್ತೇನೋ... ಆದರೆ ತಾವಿರುವುದೆಲ್ಲಿ? ಬೆಂಗಳೂರಿನ ಪ್ರೇಕ್ಷಕರಿಗೆ ಆರ್‌ಸಿಬಿ ತಂಡದ ಕುರಿತು ಎಷ್ಟು ಗಾಢ ಸಂವೇದನೆಯಿದೆ? ತಮ್ಮ ಸಂಭ್ರಮಾಚರಣೆಯು ಅವರ ಮೇಲೆ ಯಾವ ಪರಿಣಾಮ ಬೀರಬಹುದು? ಎಂದೆಲ್ಲಾ ಅವರು ಸ್ವಲ್ಪ ಆಲೋಚಿಸಬಹುದಿತ್ತೇನೋ!

ತವರಿನಲ್ಲಿ ಆರ್ ಸಿಬಿಯ ಸತತ ಸೋಲಿನಿಂದ ನೋವಿನಲ್ಲಿದ್ದ ಅಭಿಮಾನಿಗಳಿಗೆ ಕನ್ನಡಿಗ ರಾಹುಲ್‌ರ ವಿಚಿತ್ರ ಸಂಭ್ರಮಾಚರಣೆ ಇರಿಸುಮುರಿಸು ಉಂಟುಮಾಡಿತು. ದೆಹಲಿಯಲ್ಲಿ ರಾಹುಲ್ ತಂಡವನ್ನು ಆರ್‌ಸಿಬಿ ಸೋಲಿಸಿದಾಗ, ವಿರಾಟ್ ಅವರೂ ರಾಹುಲರನ್ನು ನಕಲುಮಾಡಿದಾಗ, ರಾಹುಲ್ ಪೆಚ್ಚುಮೋರೆ ಹಾಕಿ ನಿಲ್ಲಬೇಕಾಯಿತು. ‘ರಾಹುಲ್‌ಗೆ ಇದು ಬೇಕಿತ್ತಾ?’ ಎಂದು ಅಭಿಮಾನಿ ಗಳಿಗೆ ಅನಿಸಿದರೆ ತಪ್ಪಿಲ್ಲವಲ್ಲ? ಕನ್ನಡ ಸಿನಿಮಾಗಳಲ್ಲಿ ನೂರಾರು ‘ಹಿಟ್’ ಹಾಡುಗಳನ್ನು ಹಾಡಿದ ಪ್ರಸಿದ್ಧ ಗಾಯಕ ಸೋನು ನಿಗಮ್ ಮೊನ್ನೆ ಬೆಂಗಳೂರಿನ ಕಾರ್ಯಕ್ರಮ ವೊಂದರಲ್ಲಿ ತಾಳ್ಮೆ ಕಳೆದುಕೊಂಡು ವರ್ತಿಸಿದ ರೀತಿಯೂ ಅನವಶ್ಯಕವೇ ಆಗಿತ್ತು.

ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದುದು ಕರ್ನಾಟಕದಲ್ಲಿ. ಅಲ್ಲಿ ಹಾಜರಿದ್ದ ಅಭಿಮಾನಿಗಳಲ್ಲಿ ಬಹುತೇಕರು ಕನ್ನಡಿಗರು. ಅವರು ‘ಕನ್ನಡ ಹಾಡು ಹೇಳಿ’ ಎಂದು ಕೇಳುವುದು ತಪ್ಪಾ? “ನೀವು ಕನ್ನಡ... ಕನ್ನಡ ಎನ್ನುವುದಕ್ಕೇ ಪಹಲ್ಗಾಮ್ ಅಟ್ಯಾಕ್ ಆಗಿರುವುದು" ಎಂದುಬಿಟ್ಟರು ಸೋನು. ಅವರ ಈ ಅಸಹನೆಯ ಮಾತು ಇಂದು ವಿವಾದದ ಭೂತವಾಗಿ ಅವರೆದುರು ನಿಂತಿದೆ. ಆಮೇಲೆ ಅವರು ಸ್ಪಷ್ಟೀಕರಣ ಕೊಡಲು ಯತ್ನಿಸಿದರೂ, ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಮತ್ತು ಕನ್ನಡ ಮಾಧ್ಯಮಗಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕಾಲ ಮಿಂಚಿಹೋಗಿತ್ತು.

ಶ್ರಮದಿಂದ ಗಳಿಸಿದ ಪ್ರಸಿದ್ಧಿ ಮತ್ತು ಜನರ ಅಭಿಮಾನವನ್ನು ಕ್ಷಣಮಾತ್ರದಲ್ಲಿ ಕಳೆದುಕೊಳ್ಳಲು ಒಂದು ಅನುಚಿತ-ಅಸಹನೆಯ ವರ್ತನೆ, ಅನವಶ್ಯಕ ಮಾತು ಸಾಕು ಎನ್ನುವುದಕ್ಕೆ ಈ 3 ಘಟನೆಗಳು ಸಾಕ್ಷಿಯಾದವು. ಹಾಗೆ ನೋಡಿದರೆ, ಸಿದ್ದರಾಮಯ್ಯನವರ ಧೋರಣೆ ಸರಿಯಾಗೇ ಇತ್ತು. ಆದ ಭದ್ರತಾ ಲೋಪದ ಕುರಿತು ಕೇಂದ್ರದ ಗಮನ ಸೆಳೆಯುವ ಹಕ್ಕು ಅವರಿಗೆ ಇದ್ದೇ ಇದೆ.

ಹಾಗೆಯೇ, ಸೋನು ನಿಗಮ್ ಅವರ ಉದ್ದೇಶ ಕೆಟ್ಟದಿರಲಿಕ್ಕಿಲ್ಲ- ‘ನಾವು ಜಾತಿ, ಭಾಷೆ, ಪ್ರಾದೇಶಿಕತೆ ಯ ಕುರಿತೇ ಹೆಚ್ಚು ಆಲೋಚಿಸುತ್ತಿರುವುದರ ದುರ್ಲಾಭವನ್ನು ಅನ್ಯರು ಬಳಸಿಕೊಳ್ಳುತ್ತಿದ್ದಾರೆ’ ಎನ್ನುವುದು ಅವರ ಹೇಳಿಕೆಯ ಹಿನ್ನೆಲೆಯಾಗಿರಲಿಕ್ಕೆ ಸಾಕು. ಆದರೆ ಸಂದರ್ಭ ಮತ್ತು ಹೇಳಿದ ರೀತಿ ಸಮರ್ಪಕವಾಗಿರಲಿಲ್ಲ, ಅಷ್ಟೇ.