Friday, 18th October 2024

ರಾಜಕೀಯ ಅಸ್ತ್ರವಾದ ನ್ಯಾಯಮೂರ್ತಿಗಳ ಟಿಪ್ಪಣಿ

ವರ್ತಮಾನ

maapala@gmail.com

ಶಾಸಕಾಂಗ, ಕಾರ್ಯಾಂಗಗಳು ವಿಶ್ವಾಸ ಕಳಕೊಂಡಿದ್ದರೂ ನ್ಯಾಯಾಂಗ ಮಾತ್ರ ಇನ್ನೂ ಜನರಲ್ಲಿ ವಿಶ್ವಾಸ ಉಳಿಸಿಕೊಂಡಿದೆ. ಆದರೆ, ನ್ಯಾಯಮೂರ್ತಿಗಳ ಟಿಪ್ಪಣಿಗಳನ್ನು ಮುಂದಿಟ್ಟುಕೊಂಡು ಪಕ್ಷಗಳು ಬೇಳೆ ಬೇಯಿಸಿಕೊಳ್ಳಲು ಹೊರಟರೆ ನ್ಯಾಯಾಂಗದ ಬಗ್ಗೆಯೂ ಅನುಮಾನ ಪಡುವ ದಿನಗಳು ಬರಬಹುದು.

‘ಹೊರಗಿನವರು ತಮ್ಮ ಲಾಭಕ್ಕಾಗಿ ಕೋರ್ಟ್ ಆದೇಶವನ್ನು ಬಳಸಿದರೆ ನಾನೇನು ಮಾಡಬೇಕು. ಹೊರಗಿನ ವಿಚಾರದ ಬಗ್ಗೆ ಏನೂ ಮಾಡಲಾಗುವುದಿಲ್ಲ. ಕೋರ್ಟ್ ಮುಂದಿ ರುವ ವಿಷಯವನ್ನಷ್ಟೇ ಪರಿಶೀಲಿಸಲಾಗುವುದು’. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿ ಗಳ ಕಾರ್ಯವೈಖರಿ ವಿರುದ್ಧ ತಾವು ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ರಾಜಕಾರಣಕ್ಕಾಗಿ ಕೆಲವರು ದುರ್ಬಳಕೆ ಮಾಡಿ ಕೊಳ್ಳುತ್ತಿರುವ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು ಹೀಗೆಂದು ಪ್ರತಿಕ್ರಿಯಿಸಿದ್ದರು.

ಆದರೆ, ದೇಶದಲ್ಲಿ ಈಗ ಆಗುತ್ತಿರುವುದೇನು? ದೇಶದ ನ್ಯಾಯಾಂಗ ವ್ಯವಸ್ಥೆ ಎರಡು ಕಾರಣಗಳಿಗಾಗಿ ಅತ್ಯಂತ ಚರ್ಚೆಯ ವಿಷಯವಾಗಿದೆ. ಒಂದು ಪ್ರವಾದಿ ಮಹಮದ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೆ.ಪಿ.ಪರ್ದೀವಾಲಾ ಅವದಿದ್ದ ವಿಭಾಗೀಯ ಪೀಠ ಮಾಡಿದ ಟಿಪ್ಪಣಿ ಹಾಗೂ ಇನ್ನೊಂದು ಎಸಿಬಿ ವಿರುದ್ಧ ಚಾಟಿ ಬೀಸಿದ್ದ ಕ್ಕಾಗಿ ನನಗೆ ಬೆದರಿಕೆ ಕರೆ ಬಂದಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್
ತೆರೆದ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆ.

ಈ ಎರಡು ಹೇಳಿಕೆಗಳು ಕಾನೂನಾತ್ಮಕ ವಿಚಾರಗಳಿಗಿಂತ ಹೆಚ್ಚು ರಾಜಕೀಯ ಚರ್ಚೆಗೆ ಕಾರಣವಾಗಿವೆ. ನ್ಯಾಯಮೂರ್ತಿಗಳ ಹೇಳಿಕೆಗಳನ್ನು ಆಧರಿಸಿ ಪ್ರತಿಪಕ್ಷಗಳು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಮುಗಿಬಿದ್ದಿವೆ. ಎರಡೂ ಪ್ರಕರಣಗಳಲ್ಲಿ ನ್ಯಾಯಾಂಗ ವಲಯ ಮತ್ತು ರಾಜಕೀಯ ವಲಯದಿಂದ ವಿಭಿನ್ನ ರೀತಿಯ ಹೇಳಿಕೆಗಳು ಬರುತ್ತಿವೆ. ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್
ನ್ಯಾಯಮೂರ್ತಿಗಳು ಮಾಡಿದ ಟಿಪ್ಪಣಿಯನ್ನೇ ತೆಗೆದುಕೊಳ್ಳೋಣ.

ಉದಯಪುರದ ಘಟನೆಗೆ (ಕನ್ಹಯ್ಯಲಾಲ್ ಎಂಬಾತನನ್ನು ಮತಾಂಧರು ಕತ್ತು ಸೀಳಿ ಕೊಲೆ ಮಾಡಿರುವ ಪ್ರಕರಣ) ನೂಪುರ್ ಶರ್ಮಾ ಹೇಳಿಕೆಯೇ ಕಾರಣ. ಈ ವಿವಾದಾತ್ಮಕ ಹೇಳಿಕೆ ಇಡೀ ದೇಶಕ್ಕೇ ಬೆಂಕಿ ಹಚ್ಚಿದೆ. ಪ್ರವಾದಿ ಮಹಮ್ಮದ್ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ
ಭಾವನೆಗೆ ಧಕ್ಕೆ ತಂದಿದ್ದಕ್ಕೆ ಅವರು ಇಡೀ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಕಿಡಿ ಕಾರಿತ್ತು.

ಹೌದು, ಪ್ರವಾದಿ ಮಹಮ್ಮದ್ ಕುರಿತಾಗಿ ನೂಪುರ್ ಶರ್ಮಾ ಹೇಳಿಕೆ ಖಂಡನೀಯ ಮಾತ್ರವಲ್ಲ, ಅಕ್ಷಮ್ಯ. ಆಕೆಯ ಹೇಳಿಕೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಅದಕ್ಕೆ ಆಕೆ ಕ್ಷಮೆ ಯಾಚಿಸಬೇಕು ಎಂದು ನ್ಯಾಯಪೀಠ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಸದ್ಯ ಮುಂದಿರುವ ಪ್ರಶ್ನೆ ಎಂದರೆ, ನ್ಯಾಯಪೀಠದ ಈ ಟೀಪ್ಪಣಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಎಲ್ಲಾ ಪ್ರಕರಣಗಳಿಗೂ ಅನ್ವಯವಾಗುವುದೇ ಎಂಬುದು. ಏಕೆಂದರೆ, ಭಾರತದಂತಹ ರಾಷ್ಟ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದೇ ಕೆಲವರ ಕೆಲಸವಾಗಿದೆ.

ಹೀಗಾಗಿ ನ್ಯಾಯಾಂಗದ ಈ ಅಭಿಪ್ರಾಯ ನೂಪುರ್ ಶರ್ಮಾ ಅವರಂತಹ ಅನೇಕರು ನೀಡಿದ ಹೇಳಿಕೆಗೆ ಅನ್ವಯವಾಗುವುದೇ? ಯಾರೋ ಒಬ್ಬರು ಏನೋ ಹೇಳಿಕೆ ನೀಡಿದರು ಎಂಬ ಕಾರಣಕ್ಕೆ ಹಿಂಸಾಚಾರ ಎಸಗುವುದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಸರಿಯೇ? ಅದಕ್ಕೆಲ್ಲಾ ಆ ಹೇಳಿಕೆ ಕಾರಣ ಎಂದು ಹೇಳಿ ಹಿಂಸಾಚಾರ, ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದವರ ಬಗ್ಗೆ ಮೃದು ಧೋರಣೆ ತಳೆಯಲು ಸಾಧ್ಯವೇ? ಈ ದೇಶದಲ್ಲಿ ಹಿಂದೂ ದೇವತೆಗಳನ್ನು ಅಪಮಾನ ಮಾಡಿದ, ಹಿಂದೂ ಧಾರ್ಮಿಕ ಭಾವೆಗಳಿಗೆ ಧಕ್ಕೆ ತಂದ ಅದೆಷ್ಟೋ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇ ಇದೆ.

ಆ ರೀತಿ ಮಾಡಿದವರನ್ನು ರಾಜಕೀಯ ಪಕ್ಷಗಳು ಸಮರ್ಥಿಸಿಕೊಂಡಿದ್ದೂ ಆಗಿದೆ. ಆದರೆ, ಯಾವತ್ತೂ ನೂಪುರ್ ಶರ್ಮಾ ಹೇಳಿಕೆ ಸೇರಿದಂತೆ ಪ್ರವಾದಿ ಮಹಮ್ಮದ್ ವಿರುದ್ಧದ ಹೇಳಿಕೆಗಳನ್ನು ಖಂಡಿಸಿ ನಡೆದಂತೆ ಹಿಂಸಾಚಾರಗಳು ಹಿಂದೂಗಳ ಧಾರ್ಮಿಕ ಭಾವವೆ ಗಳಿಗೆ ಧಕ್ಕೆ ತಂದಾಗ ನಡೆದ ಉದಾಹರಣೆಗಳಿಲ್ಲ. ಪ್ರತಿಭಟನೆಗಳು, ಹೇಳಿಕೆಗಳ ವಿರುದ್ಧ ಕಾನೂನು ಹೋರಾಟ ನಡೆದಿವೆಯೇ ಹೊರತು ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿಲ್ಲ.

ಹೀಗಿರುವಾಗ ನೂಪುರ್ ಶರ್ಮಾ ಹೇಳಿಕೆಗೆ ಸಂಬಂಽಸಿದಂತೆ ಹಿಂಸಾಚಾರ ನಡೆದರೆ ಅದಕ್ಕೆ ಆ ಹೇಳಿಕೆಯೇ ಕಾರಣ ಎಂದು ಸಂವಿಧಾನದ ಸರ್ವೋಚ್ಛ ಅಂಗವಾದ ಸುಪ್ರೀಂ ಕೋರ್ಟ್ ಹೇಳಿದರೆ ಹಿಂಸಾಚಾರಗಳಿಗೆ ಕೊನೆ ಎಲ್ಲಿ ಬಂತು? ಈ ಕಾರಣಕ್ಕಾಗಿಯೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಹೇಳಿಕೆ ವಿಚಾರದಲ್ಲಿ ವಿಭಿನ್ನ ರೀತಿಯ ಚರ್ಚೆಗಳು ನಡೆಯುತ್ತಿರುವುದು. ಪ್ರತಿಪಕ್ಷಗಳು, ಎಡ
ಪಂಥೀಯ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಈ ಹೇಳಿಕೆಗಳನ್ನು ಬಳಸಿಕೊಂಡು ಕೇಂದ್ರ ಸರಕಾರದ ವಿರುದ್ಧ ಆರೋಪ ಗಳನ್ನು ಮಾಡುತ್ತಿದ್ದಾರೆ.

ಮತ್ತೊಂದೆಡೆ ನ್ಯಾಯಮೂರ್ತಿಗಳ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ನ್ಯಾಯಮೂರ್ತಿಗಳ ಟಿಪ್ಪಣಿ ಖಂಡಿಸಿ ೧೫ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರು, 77 ಮಾಜಿ ಅಧಿಕಾರಿಗಳು, ಸಶಸ ಪಡೆಗಳ ೨೫ ನಿವೃತ್ತ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ನ್ಯಾಯಪೀಠ ಲಕ್ಷ್ಮಣ ರೇಖೆ ದಾಟಿದೆ ಎಂದು ಆರೋಪಿಸಿದ್ದಾರೆ.

ಇವರೆಲ್ಲರ ಆತಂಕಕ್ಕೆ ಕಾರಣ, ನ್ಯಾಯಪೀಠದ ಟಿಪ್ಪಣಿ ಭವಿಷ್ಯದಲ್ಲಿ ನಾನಾ ಸಮಸ್ಯೆಗಳಿಗೆ ಎಡೆಮಾಡಿಕೊಡಬಹುದು. ರಾಜಕಾರಣಿ ಗಳು ಇದನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗಬಹುದು.  ಎಂಬುದಾಗಿದೆ. ಇನ್ನು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಎಸಿಬಿ ಅಧಿಕಾರಿಗಳ ವಿಚಾರದಲ್ಲಿ ಹೇಳಿದ ಮಾತುಗಳು ಕೂಡ ರಾಜಕೀಯ ಚರ್ಚೆಗೆ ಹೆಚ್ಚು ಅವಕಾಶ ಮಾಡಿಕೊಟ್ಟಿದೆ. ಎಸಿಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಎಸಿಬಿ ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ ಎಂದು ಹೇಳಿದ್ದಕ್ಕಾಗಿ ನಿನ್ನ ವರ್ಗಾವಣೆಯಾದೀತು ಹುಷಾರ್ ಎಂದು ನ್ಯಾಯಮೂರ್ತಿ ಯೊಬ್ಬರು ನನಗೆ ಬೆದರಿಕೆಯೊಡಿದ್ದಾರೆ ಎಂದು ನ್ಯಾಯಾಲಯದಲ್ಲಿ ಹೇಳಿದ ಮಾತು ಪ್ರತಿಪಕ್ಷ ಕಾಂಗ್ರೆಸ್‌ಗೆ ಆಡಳಿತಾರೂಢ ಬಿಜೆಪಿಯನ್ನು ಟೀಕಿಸಲು, ಬಿಜೆಪಿ ಸರಕಾರದ ವಿರುದ್ಧ ಆರೋಪಗಳನ್ನು ಮಾಡಲು ಅಸ್ತ್ರವಾಗಿದೆ.

ನ್ಯಾಯಮೂರ್ತಿಗಳು ಸರಕಾರದ ಬಗ್ಗೆ ಅಥವಾ ಬಿಜೆಪಿಯನ್ನು ಕುರಿತಾಗಿ ಯಾವುದೇ ಮಾತುಗಳನ್ನು ಹೇಳದೇ ಇದ್ದರೂ ಕಾಂಗ್ರೆಸ್ ಅದನ್ನು ಮೀರಿ ರಾಜಕೀಯ ಸರಕಾಗಿ ಬಳಸಿಕೊಳ್ಳುತ್ತಿದೆ. ನ್ಯಾ.ಎಚ್.ಪಿ.ಸಂದೇಶ್ ಅವರ ಮಾತು ಮುಂದಿಟ್ಟುಕೊಂಡು ಬಿಜೆಪಿ ಸರಕಾರ ಅಧಿಕಾರದಲ್ಲಿರುವ ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಭದ್ರತೆಯಿಲ್ಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿ ದ್ದಾರೆ.

ಮತ್ತೊಂದೆಡೆ, ಈ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು, ಈ ಗಂಭೀರ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ಸಮಿತಿ ರಚಿಸುವಂತೆ ಕೋರಲಾಗುವುದು. ೨೦೧೪ರ ನಂತರ (ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ) ನ್ಯಾಯಾಂಗ ವ್ಯವಸ್ಥೆ ಮೇಲೆ ಕಾಣದ ಶಕ್ತಿಗಳು ಈ ರೀತಿ ಒತ್ತಡ ಹೇರುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿನ ದಿನಗಳಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆ ಹಾಗೂ ನ್ಯಾಯಮೂರ್ತಿಗಳ ಮೇಲೆ ನಡೆಯುತ್ತಿರುವ ದಾಳಿ ಕಾಕತಾಳಿಯವಲ್ಲ. ಇದು ಬಿಜೆಪಿಯ ಸಂಘಟಿತ ಹಾಗೂ ಪೂರ್ವನಿಯೋಜಿತ ದಾಳಿಯಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕ ಅಭಿಷೇಕ್ ಮನು ಸಿಂ
ಆರೋಪಿಸಿದ್ದಾರೆ.

೨೦೧೪ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಽಕಾರ ಕಳೆದುಕೊಂಡು ನರೇಂದ್ರ ಮೋದಿ ನೇತೃತ್ವದ ಸರಕಾರ ಅಽಕಾರಕ್ಕೆ ಬಂದ ಮೇಲೆ ನ್ಯಾಯಾಲಯಗಳು ನೀಡಿದ ಕೆಲವು ತೀರ್ಪುಗಳ ಬಗ್ಗೆ ತೀರ್ಪು ನೀಡಿದ ನ್ಯಾಯಮೂರ್ತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ, ತೀರ್ಪಿನ ಬಗ್ಗೆ ಮತ್ತು ನ್ಯಾಯಮೂರ್ತಿಗಳ ಬದ್ಧತೆ ಪ್ರಶ್ನಿಸಿದ್ದ ಕಾಂಗ್ರೆಸ್ ಇದೀಗ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗಳ ಟಿಪ್ಪಣಿಗಳನ್ನು ಮುಂದಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಹೋರಾಟಕ್ಕೆ ಇಳಿದಿವೆ. ಪ್ರತಿಪಕ್ಷ ಹೋರಾಟಕ್ಕಿಳಿ ದಿದೆ ಎಂದರೆ ಆಡಳಿತ ಪಕ್ಷ ಅದಕ್ಕೆ ತಿರುಗೇಟು ನೀಡುವುದು ಸಹಜ. ಆಗ ಮತ್ತೆ ನ್ಯಾಯಾಂಗ ಕ್ಷೇತ್ರ ಟೀಕೆಗೊಳಗಾಗಬೇಕಾಗುತ್ತದೆ. ರಾಜಕಾರಣಿಗಳ ಸ್ವಾರ್ಥಕ್ಕೆ ನ್ಯಾಯಾಂಗ ಬಲಿಪಶುವಾಗಬೇಕಾಗುತ್ತದೆ.

ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಈ ಎಲ್ಲಾ ಟಿಪ್ಪಣಿಗಳನ್ನು ನಮೂದಿಸಿದ್ದರೆ ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ವಿದೆ. ಆದರೆ, ಅದು ಕೇವಲ ಬಾಯಿಮಾತಿನ ಟಿಪ್ಪಣಿಯೇ ಆಗಿದ್ದರೆ ಅದರ ಬಗ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಈ ಕಾರಣ ಕ್ಕಾಗಿಯೇ ಹಿಂದೆ ಹಲವಾರು ನ್ಯಾಯಮೂರ್ತಿಗಳು ತಮ್ಮ ಮೌಖಿಕ ಹೇಳಿಕೆಗಳನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದರು. ಆದರೂ ಅಂತಹ ಮೌಖಿಕ ಹೇಳಿಕೆಗಳು ವರದಿಯಾಗುತ್ತಲೇ ಇವೆ.  ಆದರೆ, ನ್ಯಾಯ ಮೂರ್ತಿಗಳು ವಿಚಾರಣೆ ವೇಳೆ ಮಾಡುವ ಟಿಪ್ಪಣಿಗಳು ರಾಜಕೀಯ ಹೋರಾಟಕ್ಕೆ ಅಸಗಳಾಗುತ್ತಿರುವುದು ಮಾತ್ರ ಈ ದೇಶದ ದುರಂತ.

ಲಾಸ್ಟ್ ಸಿಪ್: ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು.