Saturday, 23rd November 2024

ಶ್ಲೇಷೋದ್ಯಾನದಿ ಶಬ್ದವ ಕಸಿ ಮಾಡಿ ಬೆಳೆಸಿದ ಪದಾರ್ಥ

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಭಾಷೆಯಲ್ಲಿ ಅಲಂಕಾರ ಇರುವುದೇ ಓದುಗನ, ಕೇಳುಗನ ಆಹ್ಲಾದ ಹೆಚ್ಚಿಸುವುದಕ್ಕೆ. ಶ್ಲೇಷೆಯಂತೂ ಮನಸ್ಸಿಗೆ ಆಹ್ಲಾದಕರವಷ್ಟೇ ಅಲ್ಲ ಪುಟ್ಟದೊಂದು ಅಚ್ಚರಿಯನ್ನೂ ತಂದುಕೊಡುತ್ತದೆ. ತರ್ಕಬದ್ಧ ಯೋಚನೆಗೆ ಹಚ್ಚುತ್ತದೆ. ಮೆದುಳನ್ನು ಚುರುಕಾಗಿಸುತ್ತದೆ. ಆದ್ದರಿಂದ ಶ್ಲೇಷೋದ್ಯಾನ ವಿಹಾರ ಆರೋಗ್ಯಕ್ಕೆ ತುಂಬ ಒಳ್ಳೆಯದು.

ಅ. ರಾ.ಮಿತ್ರರು ಛಂದೋಮಿತ್ರ ಪುಸ್ತಕದಲ್ಲಿ ಶ್ಲೇಷೆಯನ್ನು ಹೀಗೆ ವಿವರಿಸಿದ್ದಾರೆ: ‘ಶ್ಲೇಷೋ ದ್ಯಾನದಿ ಶಬ್ದವ ಕಸಿಮಾಡಿ| ಹೊಸತು ಪದಾರ್ಥವ ಬೆಳೆಸುವರು| ಇಮ್ಮಡಿ ಮುಮ್ಮಡಿ ನಾಲ್ವಡಿ ಬಹುಪಡಿ| ಯಾಗುತ ಧ್ವನಿಗಳು ಮೆರೆಯುವುವು|’ ಇದರ ಮೊದಲೆರಡು ಸಾಲುಗಳೇ ಸಾಕು ಶ್ಲೇಷೆ ಅಂದರೆ ಏನು ಅಂತ ಅರ್ಥ ಮಾಡಿಕೊಳ್ಳಲಿಕ್ಕೆ.

ಶ್ಲೇಷೆ ಅಂದರೆ ಒಂದಕ್ಕಿಂತ ಹೆಚ್ಚು ಅರ್ಥಗಳನ್ನು ಕೊಡುವ ಶಬ್ದಗಳ ಜೋಡಣೆ. ಅದೊಂದು ಸಾಹಿತ್ಯಿಕ ಅಲಂಕಾರ ಕೂಡ. ಮಿತ್ರರು ಹೊಸೆದ ಇನ್ನೊಂದು ಪದ್ಯ ನೋಡಿ: ‘ಏಳು ಹೆಡೆಗಳಾ ಆದಿ ಶ್ಲೇಷನಿಗೆ| ದೇಹವು ಒಂದೇ ಕಾಣ| ಅದರ ಮೇಲೆಯೇ ಪವಡಿಸುವಾತನು| ಶಬ್ದಾರ್ಥದ ಲಕ್ಷ್ಮೀರಮಣ|’ ಇಲ್ಲಿ ಏಳು ಹೆಡೆಗಳೆಂದರೆ ಒಂದೇ ಶಬ್ದವು ಏಳು ವಿವಿಧ ಅರ್ಥಗಳಿಂದ ರಾರಾಜಿಸಿದೆಯೆಂಬ ಕಲ್ಪನೆ. ಏಳು ಅಂದರೆ ಏಳೇ ಇರಬೇಕೆಂದೇ ನಿಲ್ಲ.

ಒಂದಕ್ಕಿಂತ ಹೆಚ್ಚು ಅರ್ಥ ಇದ್ದರಾಯ್ತು. ಎರಡಿದ್ದರೂ ಸಾಕು.ಮಿತ್ರರದೇ ಇನ್ನೊಂದು ರಚನೆಯಲ್ಲಿ ದ್ವಂದ್ವಾ ರ್ಥಗಳು ಮೇಳೈಸಿದ ಪರಿಯನ್ನು ಗಮನಿಸಿ: ‘ಪೀತವರ್ಣಪ್ರೀತೆ ಗೃಹಪತ್ರಕರ್ತೆ| ದೋಷದ ಕರಡು ತಿದ್ದದ ಮನೆಯ ಸಂಪಾದಕ| ಇಬ್ಬರಿಂ ಹಾಳಾಯ್ತು ಮನೆಯಚ್ಚುಕೂಟ| ಬತ್ತಿ ಹೋಯಿತು ಕೇಳು ಅರ್ಥ ಜೀವನದಿ|’ – ಈ ಪದ್ಯದಲ್ಲಿ ಪ್ರತಿಯೊಂದು ಪದದಲ್ಲೂ ಎನ್ನುವ ಮಟ್ಟಿಗೆ ದ್ವಂದ್ವಾರ್ಥ ತುಂಬಿದೆ.

ಪೀತವರ್ಣ ಪ್ರೀತೆ ಅಂದರೆ ಹಳದಿ ಲೋಹವನ್ನು (ಚಿನ್ನವನ್ನು) ಬಯಸುವವಳು. ಪೀತಪತ್ರಿಕೋದ್ಯಮ (ಯೆಲ್ಲೋ ಜರ್ನಲಿಸಂ) ಮಾಡುವವರಂತೆ ಯೂಸ್‌ಲೆಸ್ ಗಾಸಿಪ್ ನಡೆಸುವವಳು ಎಂಬ ಅರ್ಥವೂ ಬಂತು. ಗೃಹಪತ್ರಕರ್ತೆ ಅಂದರೆ ಗೃಹಿಣಿಯೆಂಬ ಪತ್ರಕರ್ತೆ; ಗೃಹಪತ್ರ ಅಂದರೆ ಮನೆಯ  ಖರ್ಚುವೆಚ್ಚಗಳ ಲೆಕ್ಕಪತ್ರ. ಅದರ ಜವಾಬ್ದಾರಿ ನೋಡಿಕೊಳ್ಳುವವಳು. ಸಂಪಾದಕ ಅಂದರೆ ಪತ್ರಿಕಾ ಸಂಪಾದಕ ಅಂತನೂ ಆಗುತ್ತದೆ, ಹಣ ಸಂಪಾದಿ
ಸುವವನು (ಯಜಮಾನ) ಎಂಬರ್ಥವೂ ಬರುತ್ತದೆ. ಅಚ್ಚುಕೂಟ ಅಂದರೆ ಅಚ್ಚುಕಟ್ಟುತನ, ಸಂಸಾರದ ಶಿಸ್ತು. ಪ್ರಿಂಟಿಂಗ್ ಪ್ರೆಸ್ ಸಹ. ಅರ್ಥ ಅಂದರೆ ಹಣ ಮಾತ್ರವಲ್ಲ ಸಾರ, ಸ್ವಾರಸ್ಯ ಕೂಡ.

ಜೀವನದಿ = ಜೀವನದಲ್ಲಿ. ಅಥವಾ ಜೀವವೆಂಬ ನದಿ ಎಂದು ಕೂಡ ಅರ್ಥೈಸಬಹುದು. ಅರ್ಥ(ಹಣ)ವೆಂಬ ಜೀವ ನದಿಯು ದುಂದುವೆಚ್ಚದಿಂದ ಬತ್ತಿಹೋಯಿತು ಎಂಬ ಅರ್ಥವೂ ಸರಿಹೋಗುತ್ತದೆ. ಪದ ಪದದಲ್ಲೂ ದ್ವಂದ್ವಾರ್ಥವಿದ್ದರೂ ಎಲ್ಲೂ ಅಶ್ಲೀಲತೆಯಿಲ್ಲ. ಮುಜುಗರವೆನಿಸುವ ಅಂಶ ಗಳಿಲ್ಲ. ಅದು ಅ.ರಾ. ಮಿತ್ರರ ತಾಕತ್ತು! ವಿಪರ್ಯಾಸವೆಂದರೆ ಬಹುಮಟ್ಟಿಗೆ ದ್ವಂದ್ವಾರ್ಥ ಅಥವಾ ಡಬಲ್ ಮೀನಿಂಗ್ ಅಂದರೆ ಅದೊಂಥರ ಪೋಲಿ, ಅಶ್ಲೀಲ, ನಾನ್‌ವೆಜ್ಜು, ಸಭ್ಯತೆಯ ಚೌಕಟ್ಟು ಮೀರಿದ್ದಾಗಿರುತ್ತದೆ ಅಂತಲೇ ತಿಳಿದುಕೊಳ್ಳುತ್ತೇವೆ. ಹಾಗೊಂದು ಮಿಥ್ಯೆ ಸಮಾಜದಲ್ಲಿ ಬೇರೂರಿದೆ.

ಆ ಮಿಥ್ಯೆಯನ್ನು ಹೋಗಲಾಡಿಸಬೇಕಾದರೆ ಅಶ್ಲೀಲವೆನಿಸದ ಸುಂದರ ಸ್ವಾರಸ್ಯಕರ ದ್ವಂದ್ವಾರ್ಥ ಪ್ರಯೋಗಗಳನ್ನು ನಾವು ಹೆಚ್ಚುಹೆಚ್ಚು ಗುರುತಿಸ ಬೇಕು. ಅಂತಹ ರಚನೆಗಳನ್ನು ನಮ್ಮ ಮಾತಿನಲ್ಲಿ, ಬರಹದಲ್ಲಿ ಹೆಚ್ಚುಹೆಚ್ಚು ಬಳಸಬೇಕು. ಏಕೆಂದರೆ ದ್ವಂದ್ವಾರ್ಥ ಅರ್ಥಾತ್ ಶ್ಲೇಷೆಯೂ ಸಾಹಿತ್ಯದ ಒಂದು ಪ್ರಮುಖ ಅಲಂಕಾರವೇ ತಾನೆ? ಭಾಷೆಯಲ್ಲಿ ಅಲಂಕಾರ ಇರುವುದೇ ಓದುಗನ, ಕೇಳುಗನ ಆಹ್ಲಾದ ಹೆಚ್ಚಿಸುವುದಕ್ಕೆ.ಶ್ಲೇಷೆಯಂತೂ ಮನಸ್ಸಿಗೆ ಆಹ್ಲಾದಕರವಷ್ಟೇ ಅಲ್ಲ ಪುಟ್ಟದೊಂದು ಅಚ್ಚರಿಯನ್ನೂ ತಂದುಕೊಡುತ್ತದೆ. ತರ್ಕಬದ್ಧ ಯೋಚನೆಗೆ ಹಚ್ಚುತ್ತದೆ.

ಮೆದುಳನ್ನು ಚುರುಕಾಗಿಸುತ್ತದೆ. ಆದ್ದರಿಂದ ಶ್ಲೇಷೋದ್ಯಾನ ವಿಹಾರ ಆರೋಗ್ಯಕ್ಕೆ ತುಂಬ ಒಳ್ಳೆಯದು. ನೋಡುವ ಕಣ್ಣುಗಳಿದ್ದರೆ, ಸ್ವಲ್ಪ ತರ್ಲೆ-ತರ್ಕ ಬುದ್ಧಿಯ ತಲೆಯಿದ್ದರೆ, ಎಲ್ಲೆಲ್ಲೂ ಶ್ಲೇಷೆಯೇ! ಹೇಗಂತೀರಾ? ಒಂದು ಸಿಂಪಲ್ ಉದಾಹರಣೆ ಕೊಡುತ್ತೇನೆ. ಕೆಎಸ್ಸಾರ್ಟಿಸಿ ಬಸ್ಸುಗಳ ಮೇಲೆ ‘ಕರ್ನಾಟಕ ಸಾರಿಗೆ’ ಎಂದು ಬರೆದದ್ದಿರುತ್ತದೆ. ನೀವೂ ನೋಡಿಯೇ ಇರುತ್ತೀರಿ. ಆದರೆ ಶ್ಲೇಷೆಯೆಂದು ಗುರುತಿಸಿರುವುದಿಲ್ಲ ಅಷ್ಟೇ. ಈಗ, ‘ಕರ್ನಾಟಕ  ಸಾರಿಗೆ’ ಎಂದಿ ರುವುದರ ಪಕ್ಕದಲ್ಲೇ ‘ತಮಿಳುನಾಡು ಸಾಂಬಾರಿಗೆ’ ಅಂತಿದೆಯೆಂದು ಊಹಿಸಿ.

ಒಂದು ಮಂದಹಾಸ ಮಿನುಗುತ್ತದೆ ನಿಮ್ಮ ಮುಖ ದಲ್ಲಿ. ‘ಸಾರಿಗೆ’ ಎಂಬ ಪದಕ್ಕೆ ಬೇರೆಯೇ ಒಂದು ಅರ್ಥ ಕಲ್ಪಿಸಿದ್ದರಿಂದ. ‘ಸುರಕ್ಷತೆಯತ್ತ ಗಮನ: ಸಾರಿಗೆ ಸಚಿವರ ಭರವಸೆ’ ಎಂದು ಪತ್ರಿಕೆಯಲ್ಲಿ ಹೆಡ್‌ಲೈನ್ ಓದುತ್ತೀರಿ. ಆಯ್ತು, ಸಾರಿಗೇನೋ ಭರವಸೆ ಸಿಕ್ಕಿತು; ಪಲ್ಯ, ತೊವ್ವೆ, ಹುಳಿ, ತಂಬುಳಿಗಳ
ಗತಿಯೇನು? ನಿಮ್ಮಲ್ಲೇ ಪ್ರಶ್ನಿಸಿಕೊಳ್ಳುತ್ತೀರಿ. ‘ಸಾರಿಗೆ ಬಸ್ಸು ಬಿದ್ದು ನಾಲ್ವರು ಜಖಂ’ ಎಂಬ ಇನ್ನೊಂದು ತಲೆಬರಹ. ಅರೆರೆ! ಸಾರಿಗೆ ಬಸ್ಸು ಬಿದ್ದರೆ ಟೊಮೆಟೊ ಚಟ್ನಿ ಆದೀತೇ ಹೊರತು ಜನರಿಗೇಕೆ ಜಖಂ ಆಗಬೇಕು? ನೋಡಿದಿರಾ ‘ಸಾರಿಗೆ’ ಪದ ಹುಟ್ಟಿಸಿದ ಶ್ಲೇಷೆ, ಆಶ್ಲೇಷೆಯ ಮಳೆಯಂತೆ!

ಸಾರಿಗೆಯಂತೆಯೇ ‘ಕಾಡಿಗೆ’ ಕೂಡ. ಅಂಗಡಿಯಿಂದ ಐಬ್ರೋ ಪೆನ್ಸಿಲ್ಸ್ ತರಲಿಕ್ಕೆ ಹೊರಟಿದ್ದಾರೆ ಅಂದಗಾತಿ ಅಂಬುಜಮ್ಮ. ಶುದ್ಧ ಕನ್ನಡದಲ್ಲಿ ‘ಕಾಡಿಗೆ ತರಲಿಕ್ಕೆ ಹೊರಟಿದ್ದೀನಿ’ ಎಂದುತ್ತರಿಸುತ್ತಾರೆ ಎದುರಿಗೆ ಸಿಕ್ಕಿದ ಮೀನಾಕ್ಷಮ್ಮನ ಪ್ರಶ್ನೆಗೆ. ಆಕೆಯಾದರೋ ಅರ್ಥವಾದರೂ ಬೇಕಂತಲೇ ಕೆಣಕುತ್ತಾರೆ, ‘ಏನನ್ನು ತರಲಿಕ್ಕೆ ಕಾಡಿಗೆ ಹೊರ್ಟಿದ್ದೀರಿ ಅಂಬುಜಮ್ಮನವರೇ? ಕಾಡಿಗೆ ಹೋಗುವ ನಾರೀಮಣಿಗಳು ವ್ಯಾನಿಟಿಬ್ಯಾಗ್ ಹಿಡ್ಕೊಂಡು ಹೋಗೋದಲ್ಲ, ಸೀತೆಯಂತೆ ನಾರುಡೆ ಉಡ್ಬೇಕಲ್ವಾ?’ ಎನ್ನುತ್ತ ಟಂಗ್-ಇನ್-ಚೀಕ್ ಮಾಡುತ್ತಾರೆ.

ಹೀಗೆ ಒಂದು ಪದ ಬೇರೆಬೇರೆ ಅರ್ಥಗಳನ್ನು ಪಡೆದಾಗ ಸ್ವಾರಸ್ಯ ಬಂದೇಬರುತ್ತದೆ. ಇಲ್ಲಿ ಗಮನಿಸಬೇಕಾದ್ದೆಂದರೆ ಚಕಿತಗೊಳಿಸುವ, ಅನಿರೀಕ್ಷಿತ ಎನಿಸುವ ಶ್ಲೇಷೆ. ನಮ್ಮ ಯೋಚನಾಲಹರಿ ಸಾಮಾನ್ಯ ಧಾಟಿಯಲ್ಲಿ ಸಾಗುತ್ತಿರುವಾಗ ಹಠಾತ್ತಾಗಿ ಎದುರಾಗುವ ಸೋಜಿಗ. ಬೇಂದ್ರೆಯವರು ಬರೆದ ‘ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೇ…’ ಅತಿಪ್ರಖ್ಯಾತ ಕವಿತೆಯನ್ನೊಮ್ಮೆ ನೆನಪಿಸಿಕೊಳ್ಳಿ. ಬೇಂದ್ರೆಯವರು ಈ ಕವಿತೆಯಲ್ಲಿ ಖಂಡಿತವಾಗಿಯೂ ಶ್ಲೇಷೆಯ ಉದ್ದೇಶ ಇಟ್ಟುಕೊಂಡಿರಲಾರರು. ಆದರೇನಂತೆ? ನಾವು ಕವಿತೆಯನ್ನು ‘ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ… ಬಂತು ಬೀಡಿಗೇ’ ಎಂದು ಓದಿಕೊಂಡು ಮನಸ್ಸಿನಲ್ಲೇ ‘ಸಿಗರೇಟಿಗೆ ಇಲ್ವಾ?’ ಎಂದು ಕೇಳಿಕೊಂಡರೆ ಸೂಪರ್ ಶ್ಲೇಷೆ! ಬಹುಶಃ ಸಿಗರೇಟಿಗೆ, ಪ್ರತಿವರ್ಷ ಬಜೆಟ್‌ನಲ್ಲಿ ಹೆಚ್ಚಾಗುವ ಅದರ ರೇಟಿಗೆ, ಶ್ರಾವಣ ಅಲ್ಲ ಬರಗಾಲದಲ್ಲಿ ಅಧಿಕಮಾಸ ಬಂತೆಂದುಕೊಳ್ಳುತ್ತಾರೆ ಧೂಮಪಾನಿಗಳು.

ಅಂದಹಾಗೆ ಬೇಂದ್ರೆಯವರು ಶ್ರಾವಣ ಬಂತು ಕವಿತೆಯಲ್ಲೇನೂ ಶ್ಲೇಷೆ ಬಳಸಿಲ್ಲವಾದರೂ, ಅಪ್ರತಿಮ ಶಬ್ದಗಾರುಡಿಗರಾದ ಅವರು ಪಕ್ಕಾ ಶ್ಲೇಷಾ ಲಂಕಾರಪ್ರಿಯರೇ. ಅವರ ‘ತುಂ ತುಂ ತುಂ ತುಂ ತುಂಬಿ ಬಂದಿತ್ತಾ…’ ಕವಿತೆಯೊಂದೇ ಸಾಕು ಇದನ್ನು ಪ್ರೂವ್ ಮಾಡಲಿಕ್ಕೆ. ತುಂ ತುಂ ಎಂದು ಗುಂಯ್‌ಗುಡುತ್ತ ದುಂಬಿಯಷ್ಟೇ ಬಂದದ್ದಲ್ಲ, ಹೊಳೆಯಲ್ಲಿ ನೀರು ತುಂಬಿ ಬಂತು; ಬಸವಣ್ಣನವರ ಜಲಸಮಾಧಿ ಕ್ಷಣಕ್ಕೆ ಕಾಲ ತುಂಬಿ ಬಂತು ಎಂಬ ಅರ್ಥವನ್ನೂ ಹೆಣೆದು ಅದ್ಭುತಕಾವ್ಯವಾಗಿಸಿದ್ದಾರೆ. ಅದೇ ‘ತುಂಬಿ’ ಬೇಂದ್ರೆಯವರ ಗಂಗಾವತರಣ (‘ಇಳಿದು ಬಾ ತಾಯೇ ಇಳಿದು ಬಾ…’) ಕವಿತೆ ಯಲ್ಲೂ ಬರುತ್ತದೆ.

‘ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ…’ ಅಷ್ಟಾಗಿ ಈ ತುಂಬಿ ಬೇಂದ್ರೆಯವರ ಬಳಿಗೆ ಬಂದದ್ದು ಬಸವಣ್ಣನವರ ಪ್ರಭಾವದಿಂದ ಎನ್ನುತ್ತಾರೆ ಕೆಲವು ವಿಮರ್ಶಕರು. ಏಕೆಂದರೆ ಬಸವಣ್ಣ ಸಹ ‘ತುಂಬಿ’ಪ್ರಿಯ. ‘ವಚನದಲ್ಲಿ ನಾಮಾಮೃತ ತುಂಬಿ| ನಯನದಲ್ಲಿ ನಿಮ್ಮ ಮೂರುತಿ ತುಂಬಿ| ಮನದಲ್ಲಿ ನಿಮ್ಮ ನೆನಹು ತುಂಬಿ| ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ| ಕೂಡಲಸಂಗಮದೇವಾ ನಿಮ್ಮ ಚರಣಕಮಲದೊಳಗಾನು ತುಂಬಿ’ ಎಂದವರು.

ಮೊದಲ ನಾಲ್ಕು ಚರಣಗಳಲ್ಲಿ ಬೇರೆಯೇ ಅರ್ಥವನ್ನು ತುಂಬಿಕೊಂಡ ತುಂಬಿ, ಕೊನೆಯ ಚರಣದಲ್ಲಿ ಕೂಡಲಸಂಗಮದೇವನ ಚರಣ ಕಮಲದಲ್ಲಿ ಸೇರಿಕೊಂಡ ತುಂಬಿ ಆಗುತ್ತದೆ! ಬೇಂದ್ರೆಯವರ ಶಬ್ದಶಕ್ತಿಯ ಬಗ್ಗೆ ಗೌರೀಶ ಕಾಯ್ಕಿಣಿಯವರು ಒಂದುಕಡೆ ಹೀಗೆನ್ನುತ್ತಾರೆ: ‘ಈ ಕವಿಯು ಒಂದೊಂದು ಶಬ್ದದ ಎಲ್ಲ ಸತ್ತ್ವ-ಶಕ್ತಿಗಳನ್ನು ಹೀರಿ ಸೂರೆಗೊಳ್ಳುವ ಲೂಟಿಗಾರ. ಸಾಮಾನ್ಯ ಓದುಗ ಅರ್ಥೈಸಿಕೊಳ್ಳಬಹುದಾದ ನೆಲೆಗಳಿಗಿಂತ ಹೆಚ್ಚಿನ ಹಂತಗಳ ಅರ್ಥದ ಮರ್ಮವನ್ನು ಈ ಕವಿಯು ಅಂಗೈಯ ನೆಲ್ಲಿಯಂತೆ ಸಲೀಸಾಗಿ ಚೆಂಡಾಡಿಸಬಲ್ಲ. ಆಗ ಆ ಬಡ ಓದುಗ ಬೆಕ್ಕಸ ಬೆರಗಾಗದಿದ್ದರೇ ಅದೊಂದು ಬೆರಗು.

ಒಂದು ಶಬ್ದದ ಒಂದಕ್ಕಿಂತ ಹೆಚ್ಚು ಅರ್ಥದೊಂದಿಗೆ ಚಿನ್ನಾಟ (ಶ್ಲೇಷೆ), ಶಬ್ದಸಾಮ್ಯದ ಅರ್ಥಸಾಮ್ಯದ ಮೇಲಿನ ಕಸರತ್ತು, ಸ್ವೈರ-ಸ್ವಚ್ಛಂದ ಶಬ್ದಸಾ ಹಚರ್ಯ, ನಾದ ಸಾಹಚರ್ಯ, ಹಾಗೆಯೇ ಕಲ್ಪನಾ ಸಾಹಚರ್ಯ, ವಿಚಾರ ಸಾಹಚರ್ಯ – ಇಂತಹ ಪರಿಪರಿಯ ಬೆಡಗಿನ ಲೀಲೆಯನ್ನು ಈ ನಾದಲೋಲ ಕವಿಯು ತನ್ನ ಎಂಥ ಪುಟ್ಟ ಕವನದಲ್ಲಿಯೂ ತೋರಿಸದೆ ಹೋಗುವುದಿಲ್ಲ. ‘ಕಾಣುವಂಥವನಲ್ಲ’, ‘ಮುಂದೇನೇ ನಿನ್ನ ಮುಂದೇನೇ?’, ‘ಸಾವಿರದ ಮನೆಗಳಲ್ಲಿ ಸಾವ್ ಇರದ ದೀಪ’ ಮುಂತಾದವು ಸರಳ ಶ್ಲೇಷೆಗೆ ಮಾದರಿ.

ಒಂದು ಕವನದಲ್ಲಿ ‘ಮೈನಾ’ ಹಕ್ಕಿಯ ಹೆಸರು ಎರಡು ಸಲ ಬರುವುದೇ ತಡ, ಕವಿಯ ಭೃಂಗವಾಹನ ಕಲ್ಪನೆ ಅದರ ಬೆನ್ನೇರಿ ‘ಮೈ ನಾಚೂಂಗೀ’
ಎಂದು ಮೀರಾಭಜನೆಯ ಸೊಲ್ಲೊಂದು ಸುತ್ತುತ್ತದೆ. ಇನ್ನೊಂದು ಕವನದಲ್ಲಿ ‘ತಾಷ್ಕಂದ’ ಶ್ಲೇಷೆಯಲ್ಲಿ ‘ತಾಸೆಕೆಂಡಿನಲಿ’ ಎಂಬ ರೂಪ ತಾಳುತ್ತದೆ. ನಾದಪ್ರಧಾನ ರಚನೆಯಲ್ಲಿ ಸಜೆಸ್ಟಿವ್ ಸೌಂಡ್ ಮುಖ್ಯವಾಗಿ ಕವಿಗೆ ಕನ್ನಡ ಸಂಸ್ಕೃತ ಆಂಗ್ಲ ಹಿಂದೀ ಮರಾಠಿ ಎಲ್ಲ ನಾದಸಾಮ್ಯದ ಶಬ್ದಗಳೂ ನುಡಿಯ ಭಾವಕ್ಕೆ ದನಿ ಗೂಡಿಸುತ್ತವೆ. ಎಪ್ಪತ್ತೆರಡಕ್ಕೆ ಮರಾಠಿ ಶಬ್ದ ‘ಬಾಹತ್ತರ’.

ಅದರಿಂದ ಕವಿ ಕೇಳಿಸಿದ ಕನ್ನಡದ ಧ್ವನಿ ಬಾ ಹತ್ತರ! ‘ಬಾ ಹತ್ತರಕೆ| ಪ್ರಶ್ನೋತ್ತರಕೆ| ನಿನ್ನುತ್ತರಕೆ| ನಿನ್ನೆತ್ತರಕೆ| ನನ್ನೆತ್ತರಕೆ’ ಇಲ್ಲಿ ಹತ್ತರ, ಉತ್ತರ, ಎತ್ತರ, ನೆತ್ತರ ಎಲ್ಲವೂ ಮೇಳವಿಸಿ ಯಾವದೋ ಧ್ವನಿ ಮುಗಿಲಾಗಿತ್ತು ಎಂಬಂತಿದೆ. ಉತ್ತರದ ಅರ್ಥಗಳೂ, ನನ್ನೆತ್ತರದಲ್ಲಿ ನನ್-ನೆತ್ತರದ ಛಾಯೆಯೂ ಕೂಡಿ-ಕೊಂಡಿವೆ!’ ದಾಸವರೇಣ್ಯರು ಶ್ಲೇಷೆ ಮಾಡಿಲ್ಲವೆಂದೇ? ಖಂಡಿತ ಮಾಡಿದ್ದಾರೆ.

ಪುರಂದರದಾಸರು ‘ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ…’ ಕೀರ್ತನೆಯಲ್ಲಿ ರಾಗಿ ಎಂದರೆ ಧಾನ್ಯ ಎಂಬ ಅರ್ಥದಿಂದಲೇ ತೊಡಗಿದರೂ, ಮುಂದೆ ‘ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು…’ ಎನ್ನುವಾಗ ರಾಗಿ ಪದವನ್ನು ಅನಿರೀಕ್ಷಿತ ರೀತಿಯಲ್ಲಿ ಶ್ಲೇಷೆಯಾಗಿಸುತ್ತಾರೆ. ಮತ್ತೊಂದು ಜನಪ್ರಿಯ ಕೃತಿಯಾದ ‘ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ…’ ಕೀರ್ತನೆಯಲ್ಲೂ ಮೇಲ್ನೋಟಕ್ಕೆ ಅದು ನಾಯಿಯ ಚಿತ್ರಣ ಬರುವಂತೆ ರಚಿಸಿದ್ದಾದರೂ ಅದರಲ್ಲಿನ ಡೊಂಕುಬಾಲದ ನಾಯಕ ಎಂದರೆ ಬೇರಾರೂ ಅಲ್ಲ, ಪುರಂದರರೇ ದಾಸರಾಗುವ ಮೊದಲು ಜಿಪುಣಾಗ್ರೇಸರ
ಶ್ರೀನಿವಾಸ ನಾಯಕ ಆಗಿದ್ದರಲ್ವಾ ಆ ವ್ಯಕ್ತಿ! ವಿಷಯಸುಖಗಳ ಬೆನ್ನಟ್ಟಿ ಸಾಗುತ್ತಿದ್ದ ತನ್ನ ಜೀವನ ಹೇಗಿತ್ತು ಎಂದು ಮರುಕಪಡುತ್ತ, ಇನ್ನುಮುಂದೆ ಹಾಗಾಗದಂತೆ ಎಚ್ಚರ ವಹಿಸುತ್ತ ತನಗೆ ತಾನೇ ಬೋಧನೆ ಮಾಡಿಕೊಳ್ಳುವ ರೀತಿ.

ಹಾಗೆಯೇ ಆತ್ಮವು ಶರೀರವನ್ನು ತೊರೆದು ಹೋಗುವ ಪ್ರಕ್ರಿಯೆಯನ್ನು ಪುರಂದರ ದಾಸರು ಮಾರ್ಮಿಕವಾಗಿ ಬಣ್ಣಿಸುತ್ತಾರೆ- ‘ಒಂಬತ್ತು ಬಾಗಿಲ
ಮನೆಯಲ್ಲಿ ತುಂಬಿತುಂಬಿ ಮಂದಿಯಿರಲು ಕಂಬ ಮುರಿದು ಡಿಂಬ ಬಿದ್ದು ಅಂಬರಕ್ಕೆ ಹಾರಿತಲ್ಲೋ… ರಾಮಾ… ಗಿಳಿಯು ಪಂಜರದೊಳಿಲ್ಲ…’ ಇನ್ನು, ಕನಕದಾಸರು ಒಂದು ಕೀರ್ತನೆಯಲ್ಲಿ ತರಕಾರಿ ಮಾರುತ್ತಿದ್ದಾರೇನೊ ಅನ್ನಿಸುವಂತೆ ‘ಪರಮ ಪುರುಷ ನೀನೆಲ್ಲಿಕಾಯಿ| ಸರಸಿಯೊಳಗೆ  ಕರಿಕೂಗಲು ಕಾಯಿ| ಹಿರಿದು ಮಾಡಿದ ಪಾಪ ನುಗ್ಗೇಕಾಯಿ| ಹರಿ ನಿನ್ನ ಧ್ಯಾನ ಬಾಳೇಕಾಯಿ| ಸರುವ ಜೀವರ್ಗುಣಿಸಿಯುಂಬದನೆಕಾಯಿ| ಅರಿಷಡ್ವರ್ಗ ಗಳೊದಗಿಲಿಕಾಯಿ…’ ಎನ್ನುತ್ತಾರೆ.

ಇಲ್ಲಿ ಕಾಯಿ ಎಂದರೆ ಭಗವಂತನಲ್ಲಿ ಮೊರೆ, ನೀನೇ ಕಾಪಾಡಬೇಕಪ್ಪಾ ಎಂದು. ಈಗ ನಿಮಗೆ ‘ನಾರದ ಮುನಿ ಪರಿಮಳಕ್ಕೆ ಅತ್ತರು’ ಎನ್ನುವ ಒಂದು ಭಲೇ ತಮಾಷೆಯ ಶ್ಲೇಷೆಯನ್ನು ಬಣ್ಣಿಸುತ್ತೇನೆ. ನಾರದ ಮಹರ್ಷಿಗಳು ತ್ರಿಲೋಕಸಂಚಾರಿ. ತಂಬೂರಿ ಹಿಡಿದುಕೊಂಡು ಹೊರಟರೆಂದರೆ ತಿರುಗಾಟ ದಲ್ಲೇ ಬಿಜಿಯಾಗುತ್ತಾರೆ. ಒಮ್ಮೆ ಅನಂತನಾಗ್ ರೂಪದಲ್ಲಿ ಭೂಲೋಕಕ್ಕೂ ಬಂದಿದ್ದರಲ್ಲ? ‘ಇದು ಎಂಥಾ ಲೋಕವಯ್ಯಾ…’ ಎಂದು ಹಾಡಿಕೊಳ್ಳುತ್ತ ಬೆಂಗಳೂರಿನ ರಸ್ತೆಗಳಲ್ಲಿ ಸೈಕಲ್ ಮೇಲೆ ಓಡಾಡಿದ್ದರಲ್ಲ? (ಈಗಾದರೆ ಮೆಟ್ರೊ ರೈಲಿನಲ್ಲೂ ಕಾಣಿಸಿಕೊಳ್ಳುತ್ತಿದ್ದರೋ ಏನೋ).

ಅಂತಹ ನಾರದ ಮಹರ್ಷಿಗಳ ಒಂದು ಖಾಸಗಿ ವಿಚಾರ ಮಾತ್ರ ನಿಮಗೆ ಗೊತ್ತಿಲ್ಲ ಎಂದುಕೊಳ್ಳುತ್ತೇನೆ. ಯಾವ ಪುರಾಣದಲ್ಲೂ ಉಲ್ಲೇಖಗೊಂಡಿರದ ವಿಚಾರವಿದು. ಏನಪ್ಪಾ ಅಂತಂದ್ರೆ ನಾರದ ಮಹರ್ಷಿಗಳದು ಒಂದು ರೀತಿಯ ವಿಶಿಷ್ಟ ಭೌತಿಕ ಲಕ್ಷಣ. ಅವರ ಮೈಕೈ ಬೆವರುವುದಿಲ್ಲ. ಮೈಗೆ ಕೊಳೆ ಅಂಟುವುದಿಲ್ಲ. ಹಾಗಾಗಿ ದಿನಾ ಸ್ನಾನ ಮಾಡಬೇಕಂತಲೂ ಇಲ್ಲ. ಮೂರು ಲೋಕಗಳ ಟೂರ್‌ನಲ್ಲಿ ಇರುವಾಗ ಟೈಮೂ ಸಿಗಲಿಕ್ಕಿಲ್ಲ, ಕೆಲವೊಮ್ಮೆ ಅನುಕೂಲವೂ ಆಗಲಿಕ್ಕಿಲ್ಲ ಎನ್ನಿ. ಯಾವಾಗ ನೋಡಿದರೂ ತಾಜಾ ಮೈ ಕಾಂತಿ.

ಕೊಳೆತು ನಾರುವ ಚಾನ್ಸೇ ಇಲ್ಲ. ಅದಕ್ಕೇ ಅವರಿಗೆ ‘ನಾರದ’ ಮಹರ್ಷಿ ಎಂದು ಹೆಸರು! ಅದ್ಸರಿ, ಅವರು ಅತ್ತದ್ದಾದ್ದರೂ ಏಕೆ? ಕಲಹಪ್ರಿಯನಾಗಿ ಬೇರೆಯವರನ್ನು ಅಳಿಸುವವರು ತಾವೇ ಕಣ್ಣೀರುಗರೆದದ್ದೇಕೆ? ಅದು ಹಾಗಲ್ಲ. ನಾರದ ಮಹರ್ಷಿಗೂ ನಮ್ಮೆಲ್ಲರಂತೆಯೇ ಸೆಂಟಿನ ಶೋಕಿ. ಮೂರು ಲೋಕಗಳಲ್ಲಿ ಸಂಗ್ರಹಿಸಿದ ಒಳ್ಳೊಳ್ಳೆಯ ಹೂವುಗಳಿಂದ ಭಟ್ಟಿಯಿಳಿಸಿ ತೆಗೆದ ಸುಗಂಧದ್ರವ್ಯ ‘ಅತ್ತರು’ ತುಂಬಿಸಿದ ಸಣ್ಣಸಣ್ಣ ಬಾಟ್ಲಿಗಳ ದೊಡ್ಡ
ಸಂಗ್ರಹ ಅವರಲ್ಲಿದೆ. ತಮ್ಮದು ನಾರದ ಶರೀರವಾದರೂ ನಾರಾ ಯಣ ನಾರಾಯಣ ಎನ್ನುತ್ತ ಅತ್ತರು ಸ್ಪ್ರೇ ಮಾಡಿಕೊಳ್ಳುತ್ತಾರೆ.

ನಾರಾಯಣ ನಾರಾಯಣ! ಇದೊಂದು ಕಪೋಲಕಲ್ಪಿತ ಕಟ್ಟುಕಥೆಯಂತ ನಿಮಗಾಗಲೇ ಗೊತ್ತಾಗಿರುತ್ತದೆ. ಶ್ಲೇಷೆ ವಿಶ್ಲೇಷಣೆಗೆಂದೇ ನಾನಿದನ್ನು ಕಟ್ಟಿದ್ದು. ಆದರೆ ಒಂದು ಕಿವಿಮಾತು. ‘ನಾರದ’ ಮಹರ್ಷಿಯೇ ಅತ್ತರು ಚಿಮುಕಿಸಿಕೊಳ್ಳುತ್ತಾರಾದರೆ ಭೂಲೋಕದ ‘ನಾರಿ’ಯರು ಇಷ್ಟೆಲ್ಲ ಪ್ರಸಾಧನ ಸಾಮಗ್ರಿ ಬಳಸಿಕೊಳ್ಳುವುದು, ಸೆಂಟು ಸಿಂಪಡಿಸಿಕೊಳ್ಳುವುದು, ಹೂ ಮುಡಿ ದುಕೊಳ್ಳುವುದು ಯಾಕಂತ ಈಗ ತಿಳಿಯಿತು ಎಂಬ ಹೊಸ ಲಾಜಿಕ್ ಮಾತ್ರ ಶುರುಮಾಡಬೇಡಿ. ‘ಹೂವಿನೊಡನೆ ನಾರಿಗೂ ಗೌರವ’ದಲ್ಲಿ ಗೌರವ ಪಡೆಯುವುದು ನಾರು ಅಲ್ಲ ನಾರಿ!

ಇರಲಿ, ಅಂತೂ ಶ್ಲೇಷೆಯ ಬಹುವಿಧಗಳನ್ನು ಮೆಲುಕುಹಾಕಿದಾಗ ನಿಮಗೆ ಡುಂಡಿರಾಜರ ಹನಿಗವನಗಳಲ್ಲಿ ದಂಡಿಯಾಗಿ ಸಿಗುವ ಶ್ಲೇಷೆಗಳು ಕೆಲವಾ ದರೂ ನೆನಪಾಗಬಹುದು. ‘ಕ್ಯಾಷ್ ಕೌಂಟರಿನ| ಹುಡುಗಿಯರ ಮುಖದಲ್ಲಿ| ನಗು ಹುಡುಕಿದರೂ ಸಿಗದು| ಅದಕ್ಕೇ ಇರಬೇಕು| ಹಾಕಿದ್ದಾರೆ ಬೋರ್ಡು| ನಗದು.’ ಇದಂತೂ ನೆನಪಾಗಲೇಬೇಕು. ಹಾಗೆಯೇ ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕದಲ್ಲಿ ಕೊಡುತ್ತಿದ್ದ, ಮತ್ತೀಗ ವಿಶ್ವವಾಣಿಯಲ್ಲಿ ಕೊಡುತ್ತಿರುವ ಥರಾವರಿ ಶ್ಲೇಷೆ ತಲೆಬರಹಗಳೂ ನೆನಪಾಗಬಹುದು. ‘ಬಟ್ಟೆ ಬಿಚ್ಚಲಿಕ್ಕೆ ನಾನೇಕೆ ಅಂಜಲಿ?’ ಎಂಬೊಂದು ಹಳೆಯ ತಲೆಬರಹ ನನಗೆ ನೆನಪಾಗುತ್ತಿರು ತ್ತದೆ.

‘ಕಾವಲಿಯಿಂದ ಏಳು ದೋಸೆ; ತಟ್ಟೆಯಲ್ಲಿ ಆರು ದೋಸೆ; ಬಾಯಿಗೆ ಹತ್ತು ದೋಸೆ. ಒಟ್ಟು ಎಷ್ಟು ದೋಸೆ? ಉತ್ತರ: ಒಂದೇ ದೋಸೆ’ಯಂಥ ಶ್ಲೇಷೆ ಒಗಟುಗಳು; ‘ನಾರಿ ಮುನಿದರೆ ಮಾರಿ’ ಅಂತಾದ್ರೆ ಗಿರಾಕಿಗಳಿದ್ದರೆ ಅವಶ್ಯವಾಗಿ ಬೇಗನೇ ಮಾರಿಬಿಡಿ ರೀತಿಯ ವಕ್ರತುಂಡೋಕ್ತಿಗಳು ಕೂಡ. ‘ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ…’ ಚಿತ್ರಗೀತೆಯನ್ನು ಗುನುಗುನಿಸುವಾಗ- ಬೇಲೂರಿನ ಗುಡಿಯಲ್ಲಿ ಯಾರೋ ಪ್ರವಾಸಿಗರು ಪ್ರಸಾದದ ಪಂಚ ಕಜ್ಜಾಯ ಚೆಲ್ಲಿದರೇ? ಹಾಗಾಗಿ ಇರುವೆಗಳು ಬಂದವೇ? ಎಂಬ ತರ್ಲೆ ಪ್ರಶ್ನೆ.

ತರಗತಿಯಲ್ಲಿ ಪರಮದಡ್ಡ ಎನಿಸಿದ್ದ ಗುಂಡ ನನ್ನು ಗುರುಗಳು ‘ಗುಂಡಣ್ಣಾ ಎದ್ದೇಳೋ. ಲೋಪಸಂಧಿಗೆ ಒಂದು ಉದಾಹರಣೆ ಕೊಡು’ ಎಂದಾಗ ಗುಂಡ ಯಥಾಪ್ರಕಾರ ತಲೆಕೆರೆದುಕೊಳ್ಳುತ್ತ ಕ್ಷೀಣದನಿಯಲ್ಲಿ ಹೇಳುವ ‘ಗೊತ್ತಿಲ್ಲ’ ಎಂಬ ಸರಿ ಉತ್ತರ… ಶ್ಲೇಷೋದ್ಯಾನದ ಬಗೆಬಗೆಯ ಹೂವುಗಳಿವು. ಇವೆಲ್ಲಕ್ಕಿಂತಲೂ ಹದಿನಾರಾಣೆ ಶ್ಲೇಷೆಯೆಂದರೆ ಎಲ್.ಆರ್. ಈಶ್ವರಿ ಹಾಡಿದ ‘ದೂರದಿಂದ ಬಂದಂಥ ಸುಂದರಾಂಗ ಜಾಣ…’ ಹಾಡಿನಲ್ಲಿ ‘ನಾಕಾಣೆ ನಾಕಾಣೆ ನನ್ನದೇವರಾಣೆ ಭಲಾರೇ…’ ಎನ್ನುವಾಗ ಎರಡೂ ನಾಕಾಣೆಗಳನ್ನು ಎಂಟಾಣೆ ಮಾಡಿಕೊಂಡರೆ ಒಟ್ಟು ಹದಿನಾರಾಣೆ ಆಗುವುದು!