Friday, 20th September 2024

ಬಂದರೆ ಇತ್ತ ಹೋದರೆ ಅತ್ತ ಕಿಬ್ಬೇರ…

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ವರ್ಷದಲ್ಲಿನ ಆರು ತಿಂಗಳು ಇಲ್ಲಿನ ಜನ ಹಂತಹಂತವಾಗಿ ಮನೆಗಳ ಮೇಲ್ಭಾಗಕ್ಕೆ ವಾಸ್ತವ್ಯ ಬದಲಾಯಿಸುತ್ತಿರುತ್ತಾರೆ. ಅದಕ್ಕಾಗಿ ಪ್ರತಿ ಮನೆಗಳೂ ಕನಿಷ್ಠ ಎರಡು ಮಹಡಿಯ ಮನೆಗಳು. ಅರ್ಧ ವರ್ಷ ಮೇಲೆ ಅರ್ಧ ವರ್ಷ ಕೆಳಗೆ.

ಇಲ್ಲಿ ಈಗಲೂ ಜಗತ್ತಿನ ಅತ್ಯಂತ ಪುರಾತನ ವ್ಯವಹಾರವಾದ ‘ವಿನಿಮಯ’ (ಬಾರ್ಟರ್ ಸಿಸ್ಟಂ) ಪದ್ಧತಿ ಜಾರಿಯಲ್ಲಿದೆ. ಅದಕ್ಕಾಗಿ ಪ್ರಾಣಿಗಳನ್ನು ಸಾಕುವುದು ಮತ್ತು ಅವುಗಳನ್ನು ರಾಜ್ಯದ ಇನ್ನೊಂದು ಮೂಲೆ ಯಲ್ಲಿರುವ ಲಡಾಖ್‌ಗೆ ಕಳಿಸುವುದೇ ಅತಿ ದೊಡ್ಡ ಉತ್ಪನ್ನದ ಮೂಲ. ಇದೆಲ್ಲ ಕಳೆದು ಹಿಮದ ಹೊಡೆತ ಕಡಿಮೆಯಾಗಿ ಬಿಸಿಲು ನಿಧಾನಕ್ಕೆ ಕಣ್ಬಿಡುತ್ತದಲ್ಲ ಆಗ ಊರ ಹೊರಭಾಗಕ್ಕೆ ತೆರೆದುಕೊಳ್ಳುತ್ತದೆ.

ಈ ಅವಧಿ ಇಲ್ಲಿನ ಮನೆಗಳೆಲ್ಲ ಹೋಮ್‌ಸ್ಟೇಗಳಾಗಿ ಬದಲಾಗುತ್ತವೆ. ಪ್ರತಿ ಮನೆಯಲ್ಲೂ ಕನಿಷ್ಠ ಒಬ್ಬಿಬ್ಬರು ಪ್ರವಾಸಿಗರು, ಚಾರಣಿಗರು. ಜಗತ್ತಿನಲ್ಲೇ ಅತ್ಯಂತ ಎತ್ತರದಲ್ಲಿರುವ ಹಳ್ಳಿ ಎಂದು ಕರೆಸಿಕೊಳ್ಳುತ್ತಿದೆ. ಸಮುದ್ರ ಮಟ್ಟದಿಂದ 14200 ಅಡಿ ಇದರ ಎತ್ತರ. ಇದಕ್ಕೂ ಮೇಲ್ಭಾಗದಲ್ಲಿ ಇದ್ದಾವು. ಹೊರಭಾಗದವರೆಗೆ ಮಾತ್ರ ವಾಹನ ಪ್ರವೇಶಕ್ಕೆ ಅನುಮತಿ ಇರುವ ಊರಿನಲ್ಲಿ ಪ್ರತಿಯೊಬ್ಬರು ಬೌದ್ಧರು ಅಥವಾ ಟಿಬೇಟಿಯನ್ ಮೂಲದ ಭಾರತೀಯರು. ಹೆಸರು ಕಿಬ್ಬೇರ್. ಪಕ್ಕದಲ್ಲಿರುವ ಕೀ ಮಾನೆಸ್ಟ್ರಿ ಬೌದ್ಧರ ಮತ್ತು ಟಿಬೇಟಿಯನ್‌ರ ಆರಾಧ್ಯ ದೈವ ಸ್ಥಳ.

ಹಿಮಾಚಲ ಪ್ರದೇಶದ ಲಾಹುಲ್ ಸ್ಪಿಟಿ ವ್ಯಾಲಿಯ ಕೊನೆಯ ಮೂಲೆಯಲ್ಲಿರುವ ಕಿಬ್ಬೇರದ ನೇರ ವ್ಯವಹಾರ ಮಾತ್ರ ಜಮ್ಮು ಕಾಶ್ಮೀರದ ಲಡಾಖ್‌ನೊಂದಿಗೆ ಮಿಳಿತಗೊಂಡಿದೆ. ಕಾರಣ ಇತಿಹಾಸ ಪ್ರಸಿದ್ಧ ಸಿಲ್ಕ್‌ರೂಟ್ ಹೇಗೆ ಈಗಲೂ ಚಾಲ್ತಿಯಲ್ಲಿದ್ದು ಗಮನ ಸೆಳೆಯುತ್ತಿದೆಯೋ ಹಾಗೆ ಸ್ಥಳೀಯರು ಮಾತ್ರ ಧೈರ್ಯ ಮಾಡಬಹುದಾದ ಪ್ರವಾಸಿಗರಿಗೆ ಅಪರಿಚಿತವಾದ ಪುರಂಗ್ ಲಾ ಎನ್ನುವ ಪರ್ವತ ಪ್ರದೇಶದ ನುಸುಳು ದಾರಿ ಇವರಿಗೆ ಸಲೀಸು. ನನ್ನ ಎರಡನೆಯ ಭೇಟಿಯ ಈ ಅವಧಿಯಲ್ಲೂ ಕಿಬ್ಬೇರ್ ದಾಟಿ ‘ಪುರಾಂಗ್ ಲಾ’ ನುಸುಳುವ ಯೋಜನೆ ಕೈಗೊಡಲಿಲ್ಲ.

ಇಲ್ಲಿಂದ ನುಸುಳುವ ಪುರಾಂಗ್ ಲಾ ಮೂಲಕ ಸುರಂಗ ಮಾದರಿಯ ರಸ್ತೆಯಲ್ಲಿ ನೇರವಾಗಿ ಏರು ಮುಖದಲ್ಲಿ ಚಲಿಸಿದರೆ ಅತ್ಯಂತ ವೇಗವಾಗಿ ಲಡಾಖ್ ಭೂ ಭಾಗಕ್ಕೆ ತೆರೆದುಕೊಳ್ಳುತ್ತದಂತೆ. ಸುಮಾರು ಅರ್ಧಕ್ಕಿಂತಲೂ ಹೆಚ್ಚಿನ ದೂರ ಕಡಿಮೆಯಾಗುತ್ತದೆ ಎನ್ನುತ್ತಾರೆ. ಕಿಬ್ಬೇರ್ ವಾಹನ ಸೌಕರ್ಯದ ಸೌಲಭ್ಯ ಮುಗಿದು ಅನಾಮತ್ತು ಹದಿನಾಲ್ಕು ಕಿ.ಮೀ. ಪರ್ವತದ ಸೆರಗಿನಲ್ಲಿ ತುಂಬ ಅಪಾಯಕಾರಿ ಇಳಿಜಾರಿನಲ್ಲಿ ದಾರಿ ಕ್ರಮಿಸಬೇಕು. ಹೊರ ಜಗತ್ತಿನೊಂದಿಗೆ ಎರಡು ವಾರಕಾಲ ನಿಮ್ಮ ಸಂಪರ್ಕ ತೀರ ಕಡಿದು ಹೋಗುತ್ತದೆ. ಅದಕ್ಕೆ ನಾವು ಸಿದ್ಧರಿರಲಿಲ್ಲ. ಈ ಮಾರ್ಗದ ಮೂಲಕ ಸ್ಥಳೀಯರು ಅನಾಯಾಸವಾಗಿ ವಿನಿಮಯ ಪದ್ಧತಿ ಅನುಸರಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಬಾಹ್ಯ ಸಂಪರ್ಕ ಕಡಿದುಕೊಳ್ಳುವ ಸಡಿಲು ಭೂಮಿಯ ಪದರದ ಸುರಂಗ ಮತ್ತು ಎರಡು ಕಣಿವೆಗಳ ಸಣ್ಣ ಇರುಕಿನ ಗ್ಯಾಪ್‌ನಲ್ಲಿ ಗುರುತಿಸಲಾದ ದಾರಿಗೆ ನಮ್ಮ ತಂಡದ ಧೈರ್ಯ ಸಾಕಾಗಲಿಲ್ಲ. ಸಕಲ ಸರಂಜಾಮು ಮತ್ತು ಸುರಕ್ಷತೆಯ ವ್ಯವಸ್ಥೆಯೊಂದಿಗೆ ಮತ್ತೊಮ್ಮೆ ಪ್ರಯತ್ನಿಸಲು ಆವತ್ತಿಗೆ ಪುರಾಂಗ್ ಲಾ ಬಕೆಟ್ ಲಿಸ್ಟ್ ಸೇರಿತ್ತು. ಹಿಮಾಲಯದ ಶೀತ ಮರುಭೂಮಿ ಎಂದೇ ಕಿಬ್ಬೇರನ್ನು ಗುರುತಿಸಲಾಗುತ್ತಿದ್ದು, ಯಾವ ವ್ಯವಸಾಯಕ್ಕೂ ಇದು ಲಾಯಕ್ಕಾಗಿಲ್ಲ. ಸಡಿಲು ನೆಲ ಮತ್ತು ಆರು ತಿಂಗಳು ಕಾಲ ಮೂವತ್ತಡಿಗೂ ಮಿಗಿಲು ಹಿಮದಡಿಯಲ್ಲಿ ನಲುಗುವ ಹಳ್ಳಿಯ ನೆಲದಲ್ಲಿ ಜೌಗು ಬಿಟ್ಟರೆ ಬೇರೇನೂ ಇಲ್ಲ.

ಹಾಗಾಗಿ ಒಂದಿಷ್ಟು ಒಣ ಬೇಸಾಯದಲ್ಲಿ ಭತ್ತ ಮತ್ತು ಅಲೂಗಡ್ಡೆ ಬೆಳೆಯುತ್ತಾರೆ ಪ್ರಯಾಸ ಪಟ್ಟು. ಇನ್ನುಳಿದಂತೆ ಮಾಂಸಕ್ಕಾಗಿ ಮಾರಲು ಯಾಕ್ ಮತ್ತು ಕುದುರೆ ಸಾಕಣಿಕೆ ಪ್ರಮುಖ ವ್ಯವಹಾರ. ಹಿಮಗಾಲದ ಆರು ತಿಂಗಳು ಮನೆಯಲ್ಲಿ ಕೂತಿದ್ದು ಇಲ್ಲಿನ ಪ್ರಮುಖ ಆಕರ್ಷಣೆ ಮತ್ತು ಆದಾಯದ ಮೂಲವಾಗಿರುವ ‘ಥಾಂಗ್ಕಾಸ್’ (ಸಿಲ್ಕ್ ಮತ್ತು ಕಾಟನ್ ಬಟ್ಟೆಗಳ ಮೇಲೆ ಮಾಡುವ ಪೇಂಟಿಂಗ್, ನೇಯ್ಗೆ) ಮ್ಯೂರಲ್ ಕಲೆಯ ಕೆಲಸ ಮಾಡುತ್ತಿರುತ್ತಾರೆ. ಇಲ್ಲಿನ ಹವಾಗುಣ ನಿವಾಸಿಗಳನ್ನು ಆದಷ್ಟು ಮನೆಯೊಳಗೆ ಇರುವಂತೆ ಪ್ರೇರೇಪಿಸುವುದರಿಂದ ಪೂರ್ತಿ ಹಳ್ಳಿ ಬಿಕೋ ಎನ್ನುತ್ತಿರುತ್ತದೆ.

ಎಲ್ಲಿ ನಿಂತರೂ ಯಾರಾದರೂ ಕಾಣುತ್ತಾರಾ ಅಥವಾ ಊರೇ ಪೂರ್ತಿ ಖಾಲಿ ಬಿದ್ದಿದೆಯಾ ಎನ್ನುವ ಭಾವನೆ ಸಾಮಾನ್ಯ. ಯಾವ ಮನೆಗಳಿಂದಲೂ ಶಬ್ದ ಇತ್ಯಾದಿ
ಸುಲಭಕ್ಕೆ ದಕ್ಕುವುದಿಲ್ಲ. ಸಣ್ಣ ಗ್ಯಾಪ್‌ನಿಂದ ಗಾಳಿ ಒಳ ನುಗ್ಗಿದರೂ ಮನೆ ಪೂರ್ತಿ ಮೈನಸ್ ಟೆಂಪರೇಚರ್‌ಗೆ ತಿರುಗುತ್ತದೆ ಅದಕ್ಕಾಗಿ ಶಬ್ದಗಳೂ ಆಚೆಗೆ ಬರುವುದಿಲ್ಲ. ಅದು ನಿಜ ಕೂಡಾ. ಆ ಎತ್ತರದಲ್ಲಿ ಹಗಲಿನ ಕೊರೆಯುವ ಬಿಸಿಲಿಗೂ ಚಳಿಯನ್ನು ಓಡಿಸುವ ಶಕ್ತಿ ಇಲ್ಲದಿದ್ದಾಗ ಮತ್ತು ಎಲ್ಲ ಕಾಲದಲ್ಲೂ ಒಂದೇ ಸಮನೆ ಬೀಸುತ್ತಲೇ ಇರುವ ಹಿಮ ಸವರಿ ಬರುವ ಗಾಳಿಗೆ ಮನೆಗಳು ಏರ್ ಟೈಟ್ ಬೇಕೇ ಬೇಕು. ಮನೆ ಸೇರುವ ಪ್ರತಿ ಪ್ರವಾಸಿಯೂ ಅಲ್ಲಿನ ಅಗ್ಗಿಸ್ಟಿಕೆ ಬಿಟ್ಟು
ಎದ್ದೇಳುವುದು ಕಮ್ಮಿ.

ಒಳ ಭಾಗದಲ್ಲಿ ಪ್ರತಿ ನೆಲವೂ ಪ್ರತಿ ಕೋಣೆಯೂ ಕರಾರುವಾಕ್ ಆಗಿ ತಿವಾಸಿಗಳಿಂದ ಕೂಡಿರುತ್ತದೆ. ತಲೆಗೆ ಕಿವಿ ಸೇರಿಸಿ ಕೂರಿಸುವ ಕ್ಯಾಪು, ಹ್ಯಾಂಡ್ ಗ್ಲೊವ್ಸೂ, ಕಾಲಿಗೆ ಉಣ್ಣೆ ಚೀಲಗಳು ಕಂಪಲ್ಸರಿ. ಇಲ್ಲವಾದರೆ ಚಳಿ ಮತ್ತು ಶೀತ ಯಾವ ತುದಿಯಿಂದ ಒಳ ಪ್ರವೇಶಿಸಿ ಹೈರಾಣಾಗಿಸಬಲ್ಲದು ಹೇಳಲಾಗುವುದಿಲ್ಲ. ಅಂಗೈ ಮೇಲೆ ತಟ್ಟುವ ದಪ್ಪನೆಯ ಗೋಧಿ ಮಿಶ್ರಿತ ಕೆಂಡ ರೊಟ್ಟಿಯನ್ನು ದಾಲ್ಚಿನ್ನಿ ಮಿಶ್ರಿತ ಚಹಾದಲ್ಲಿ ಅದ್ದಿ ತಿನ್ನುವ, ಹುರಿದ ಮೆಣಸಿನಕಾಯಿ, ಕಡಲೆ ಹಿಟ್ಟಿನ ಮುದ್ದೆಗಳು ಸಹಜ ಆಹಾರ ಪದ್ಧತಿ. ಬಟಾಟೆ ಸುಟ್ಟು ಅದರ ಸಿಪ್ಪೆ ಸುಲಿದು, ಮಸಾಲೆ ಸೇರಿಸಿ ಬಡಿಸುತ್ತಾರೆ.

ಇದು ಕಾಮನ್. ಎಲ್ಲ ಅಗ್ಗಿಸ್ಟಿಕೆಗಳ ಬುಡದಲ್ಲಿ ಶಾಖಕ್ಕೆ ಬಟಾಟೆ ಹದವಾಗಿ ಬೇಯುತ್ತಲೇ ಇರುತ್ತದೆ. ಸ್ವಚ್ಚವಾದ, ಮಾಲಿನ್ಯ ರಹಿತ ವಾತಾವರಣ, ಆಕಾಶ
ವೀಕ್ಷಕರಿಗೆ ಹೇಳಿ ಮಾಡಿಸಿದ ಎತ್ತರದ ಜತೆಗೆ ಆಕಾಶಕ್ಕೆ ಬಾಯ್ದೆರೆದುಕೊಂಡಂತಿರುವ ಹಳ್ಳಿಗೆ ನಕ್ಷತ್ರ ವೀಕ್ಷಕ ಪರಿಣಿತರ ದಂಡು ದಾಳಿ ಮಾಡುವುದು ಸಾಮಾನ್ಯ. ಒಮ್ಮೆ ಹಿಮ ಕರಗಿ ‘ಕಾಝಾ’ದಿಂದ ರಸ್ತೆ ಸಂಪರ್ಕ ಸಾಧ್ಯವಾಗುತ್ತಿದ್ದಂತೆ ಹಳ್ಳಿಯ ಬೆಟ್ಟಗಳ ಹಿಂಭಾಗದಲ್ಲಿ ಆಕಾಶಕ್ಕೆ ಲೆನ್ಸ್ ಹೂಡುವವರು ಎಲ್ಲೆಲ್ಲೂ ಕಂಡು ಬರುತ್ತಾರೆ. ಹಲವು ಖಾಸಗಿ ಮತ್ತು ಕ್ರಿಯಾತ್ಮಕ ಗುಂಪುಗಳ ನಕ್ಷತ್ರ ವಿಕ್ಷಣೆ, ಹೊಸ ಹೊಸ ಕಾಯಗಳ ಪರಿಚಯಕ್ಕೆ ನಡೆಸುವ ತರಗತಿಯ ಬ್ಯಾಚ್‌ಗಳು,
ಆಕಾಶಕಾಯ ವಿಕ್ಷಣೆ ಕೋರ್ಸುಗಳ ಪ್ರಾಕ್ಟಿಕಲ್ ಸೆಶನ್ ಎಲ್ಲ ಇಲ್ಲಿ ನಡೆಯುತ್ತಿರುತ್ತದೆ.

ಕಾರಣ ರಾತ್ರಿ ಹೊತ್ತಿಗೆ ದಕ್ಕುವ ಅತ್ಯಂತ ಶುಭ್ರ ಮತ್ತು ಕತ್ತಲ ಆಕಾಶ. ಇಂತಹ ಪರಿಸರಕ್ಕಾಗಿ ಅಕಾಶ ವಿಕ್ಷಣೆಗೆ ಕಾಯ್ದು ಕುಳಿತುಕೊಳ್ಳುವ ಹವ್ಯಾಸಿಗಳಿಗೆ
ದಂಡಮ್ಚಾನ ಪರ್ವತ ಮತ್ತು ಅದರ ಮಗ್ಗುಲಿನ ಚಿಕ್ಕ ಪುಟ್ಟ ಬೆಟ್ಟಗಳ ನೆತ್ತಿಗಳು ಹೇಳಿ ಮಾಡಿಸಿದ ತಾಣವಾಗಿವೆ. ಇವರೊಂದಿಗೆ ಪರ್ವತಕ್ಕೆ ಲಗ್ಗೆ ಹಾಕುವ ವಿದೇಶಿಯರು ಕಿಬ್ಬೇರನ ಸೆರಗಿನಲ್ಲಿರುವ ಅಗಾಧ ಎತ್ತರದ ಪರ್ವತ ದಂಡಮ್ಚಾನನ ಅಡಿಗೆ ಬೀಡು ಬಿಟ್ಟು ಹತ್ತಿಳಿಯಲು ಶ್ರಮ ಹಾಕುತ್ತಿರುತ್ತಾರೆ. ಇವರೆಲ್ಲ ಬೇಸ್ ಕ್ಯಾಂಪು ಈ ಕಿಬ್ಬೇರ್‌ನ ಹೊರವಲಯವೇ. ಏನಿದ್ದರೂ ಪೇಯಿಂಗ್ ಗೆಸ್ಟ್ ಮತ್ತವರ ಲಗೇಜ್‌ಗಳಿಗೆ ಮಾತ್ರ ಪರವಾನಗಿ. ಬಾಕಿ ಎಲ್ಲ ಹೊರಗೆ.

ಇವರೆಲ್ಲರ ಸುತ್ತಮುತ್ತಲಿನ ಗೌಜಿ ಹೊರತು ಪಡಿಸಿದರೆ ಅಧಿಕೃತವಾಗಿ ಎಂಭತ್ತು ಮನೆಗಳಿರುವ ಕಿಬ್ಬೇರ ಹಳ್ಳಿ ತೀರ ತಣ್ಣಗೆ ಮಲಗಿದ್ದಂತೆ ಭಾಸವಾಗುತ್ತದೆ. ಸಮುದಾಯ ಭವನಲ್ಲಿರುವ ಏಕೈಕ ಟಿ.ವಿ.ಯಲ್ಲಿ ಆಗೀಗ ಸುದ್ದಿ ಬಿತ್ತರಗೊಳ್ಳುತ್ತದೆ. ಉಳಿದಂತೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಅಂಚೆ ಬಟವಾಡೆ ನಡೆಯುತ್ತದೆ. ಪುಟ್ಟ ಶಾಲೆ ಮತ್ತು ಒಂದು ಆಸ್ಪತ್ರೆ ಇದ್ದೂ ಇಲ್ಲದಂತಿವೆ. ಒಟ್ಟೂ ನಾನೂರರ ಹತ್ತಿರ ಜನಸಂಖ್ಯೆಯ ಊರಿನಲ್ಲಿ ಎಂಭತ್ತಕ್ಕೂ ಹೆಚ್ಚು ಮಕ್ಕಳೆ
ಇವೆ. ಮಾಸ್ತರರು, ಜನ ಎಲ್ಲ ಬಂದರೆ ಇತ್ಲಾಗೆ ಹೋದರೆ ಅತ್ಲಾಗೆ.

ಮನಾಲಿ ಅಥವಾ ಶಿಮ್ಲಾ ಕಡೆಯಿಂದ ಲಾಹುಲ್ ಸ್ಪಿಟಿ ಕಣಿವೆ ಸಂದರ್ಶಿಸುವ ಪ್ರವಾಸಿಗರು ಒಮ್ಮೆ ಭೇಟಿ ಕೊಟ್ಟು ವಿಭಿನ್ನತೆ ಸವಿಯಬಹುದಾದ ಕೊನೆಯ ಹಳ್ಳಿ ಕಿಬ್ಬೇರ್ ಕೊಂಚ ಪ್ರಯಾಸದಲ್ಲಿ ಕೈಗೆಟುಕುವ ಹಳ್ಳಿ. ಖಾಜಾದಿಂದ ಕಿಬ್ಬೇರ್ ತಲುಪುವ ಮುನ್ನಿನ ಹೇರ್‌ಪಿನ್ ರಸ್ತೆ ಚಾಲನೆಗೊಂದು ಸವಾಲು. ಫೋಟೊಗ್ರಾಫಿಗೆ ಹೇಳಿ ಮಾಡಿಸಿದ ಜಾಗ. ಕಿಬ್ಬೇರ್ ತಲುಪಲು ಮನಾಲಿ ಅಥವಾ ಶಿಮ್ಲಾ ಎರಡೂ ಮಾರ್ಗವಾಗಿ ಸಾಧ್ಯವಿದೆ. ಆದರೆ ಗಂಟೆಗೆ ಇಪ್ಪತ್ತೈದು ಕಿ.ಮೀ. ವೇಗ ದಕ್ಕುವ, ಕ್ರಮಿಸಬಹುದಾದ ದಾರಿಗಳಾದ್ದರಿಂದ ದಿನಕ್ಕೊಂದೇ ಸ್ಥಳ ಎನ್ನುವ ಲೆಕ್ಕಾಚಾರ ಒಳ್ಳೆಯದು.

ಹತ್ತಿರದ ನಗರ ‘ಖಾಝಾ’ ಇದು ಹಿಮಾಚಲದ ಲಾಹುಲ್ ಜಿಲ್ಲೆಯಲ್ಲಿದ್ದು ಮನಾಲಿ ಕಡೆಯಿಂದ ಬಂದರೆ ಕೀಲಾಂಗ್ ಮಾರ್ಗವಾಗಿ (ಒಂದಿನವಿಡಿ ಪ್ರಯಾಣ) ತಲುಪಿ ಅಲ್ಲಿಂದ ಸ್ಥಳೀಯ ವಾಹನದ ಮೂಲಕ ಕಿಬ್ಬೇರ್ ತಲುಪಬಹುದು. ಆದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ತೀರ ಅಪರೂಪಕ್ಕೊಮ್ಮೆ ಲಭ್ಯ. ಅದಕ್ಕೆ ಕಿಬ್ಬೇರ ಎಂದರೆ ಹೇಳಿದ್ದು ಬಂದರೆ ಇತ್ಲಾಗೆ.. ಹೋದರೆ ಅತ್ಲಾಗೆ..ಅಂತ.