ಅಶ್ವತ್ಥಕಟ್ಟೆ
ranjith.hoskere@gmail.com
ಅಖಂಡ ಜನತಾದಳ ಒಡೆದು ಚೂರಾದ ಬಳಿಕ ಒಮ್ಮೆಯೂ ಪೂರ್ಣ ಪ್ರಮಾಣದ ಅಧಿಕಾರ ಅನುಭವಿಸದ ಜಾತ್ಯತೀತ ಜನತಾದಳ ಈ ಬಾರಿಯಾದರೂ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಮಹದಾಸೆಯೊಂದಿಗೆ ಚುನಾವಣೆಗೆ ಸಜ್ಜಾಗುತ್ತಿದೆ. ಅದಕ್ಕಾಗಿ 123 ಸೀಟುಗಳ ಟಾರ್ಗೆಟ್ ಇಟ್ಟುಕೊಂಡಿದ್ದರೂ ಒಳಮನಸ್ಸಿನಲ್ಲಿ ಕಿಂಗ್ ಆಗದಿದ್ದರೂ ಕಿಂಗ್ ಮೇಕರ್ ಆಗಬೇಕೆಂಬ ಹಂಬಲ ದಟ್ಟವಾಗಿದೆ. ಈ ದಿಸೆಯಲ್ಲೇ ಜೆಡಿಎಸ್ ನಾಯಕರ ನಡೆ-ನುಡಿಗಳು ಸಾಗುತ್ತಿವೆ.
ಕರ್ನಾಟಕದಲ್ಲಿ ಮುಂದಿನ ಐದಾರು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದೆ. ಒಂದೆಡೆ ಅಧಿಕಾರದಲ್ಲಿರುವ ಬಿಜೆಪಿ ಇನ್ನೊಂದು ಅವಧಿಗೆ ತಮ್ಮ ಅವಧಿಯನ್ನು ವಿಸ್ತರಣೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದರೆ, ಕಾಂಗ್ರೆಸ್ ಬಿಜೆಪಿಯನ್ನು ಪ್ರತಿಪಕ್ಷ ಸ್ಥಾನದಲ್ಲಿ ಕೂರಿಸುವ ಮೂಲಕ ಚುನಾವಣೆಯಿಂದ ಚುನಾವಣೆಗೆ ರಾಜ್ಯಗಳನ್ನು ಕಳೆದುಕೊಳ್ಳುವ ‘ಸೋಲಿನ
ಸರಪಳಿ’ಯಿಂದ ಹೊರಬರುವ ಉಮೇದಿನಲ್ಲಿದೆ. ಈ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಸ್ಪಷ್ಟ ಬಹುಮತ ಬಾರದಿದ್ದರೆ ‘ಕಿಂಗ್ ಮೇಕರ್’ ಆಗುವ ಲೆಕ್ಕಾಚಾರದಲ್ಲಿ ಜೆಡಿಎಸ್ ತನ್ನದೇಯಾದ ಯೋಜನೆಯನ್ನು ಹಾಕಿಕೊಂಡಿದೆ.
ಹೌದು, ಅಖಂಡ ಜನತಾದಳ ಒಡೆದು ಚೂರಾದ ಬಳಿಕ ರಾಜ್ಯದಲ್ಲಿರುವ ಜಾತ್ಯತೀಯ ಜನತಾದಳ ಒಮ್ಮೆಯೂ ಪೂರ್ಣ ಪ್ರಮಾಣದಲ್ಲಿ ಅಧಿಕಾರವನ್ನು ಅನುಭವಿಸಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿ ಜೆಡಿಎಸ್‌ನಿಂದ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರ ನಡೆಸಿದ್ದರೂ, ಆ ಎರಡೂ ಅವಧಿಯೂ ‘ಮ್ಯಾಜಿಕ್ ನಂಬರ್’ ತಲುಪದ ಕಾರಣಕ್ಕೆ ’ಮೈತ್ರಿ’ಯ ಬಲದೊಂದಿಗೆ.
ಅದರಲ್ಲಿಯೂ 2018ರ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿಯನ್ನು ಅಧಿಕಾರಕ್ಕೆ ತರಬಾರದು ಎನ್ನುವ ಕಾರಣಕ್ಕೆ ಕಾಂಗ್ರೆಸ್ ದೇವೇಗೌಡರ ಮನೆಗೆ ಹೋಗಿ 35 ಸೀಟುಗಳು ಬಂದಿದ್ದ ಜೆಡಿಎಸ್‌ಗೆ ‘ಮುಖ್ಯಮಂತ್ರಿ’ ಸ್ಥಾನವನ್ನು ಬಿಟ್ಟುಕೊಟ್ಟಿತ್ತು. ಈ ಇತಿಹಾಸವನ್ನು ಹೊಂದಿರುವ ಕರ್ನಾಟಕದಲ್ಲಿ ಮತ್ತೊಂದು ವಿಧಾನಸಭಾ ಚುನಾವಣೆ ಎದುರಾಗುತ್ತಿದೆ. ಈ ಸಮಯದಲ್ಲಿ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಕ್ಕೂ ತನ್ನದೇಯಾದ ನೆಗೆಟಿವ್ ಅಂಶಗಳಿರುವುದರಿಂದ ಈ ಇಬ್ಬರ ನಡುವೆ ನುಸುಳಿ ಮತ್ತೊಂದು ಅವಧಿಗೆ ಅಧಿಕಾರದ ಗದ್ದುಗೆ ಏರುವ ಲೆಕ್ಕಾಚಾರದಲ್ಲಿ ಜೆಡಿಎಸ್ ಯಿದೆ. ಬಿಜೆಪಿಯಲ್ಲಿ ‘ರಾಜ್ಯ ನಾಯ ಕತ್ವದ ಕೊರತೆ’ಯಾಗಿದ್ದರೆ, ಕಾಂಗ್ರೆಸ್‌ನಲ್ಲಿ ‘ಶಕ್ತಿಕೇಂದ್ರ’ಗಳ ಗುದ್ದಾಟದಲ್ಲಿ ಕೆಲವು ಕ್ಷೇತ್ರಗಳನ್ನು ಕಳೆದುಕೊಳ್ಳುವ ಆತಂಕವಿದೆ.
ಈ ನಡುವೆ ಜೆಡಿಎಸ್ ತನ್ನ ಭದ್ರಕೋಟೆಗಳನ್ನು ಭದ್ರಪಡಿಸಿಕೊಂಡು ಈಗಿರುವ ಸ್ಥಾನಕ್ಕಿಂತ ಕೆಲ ಹೆಚ್ಚುವರಿ ಸೀಟುಗಳನ್ನು ಪಡೆದುಕೊಂಡರೂ, ‘ನಿರ್ಣಾಯಕ ಪಾತ್ರ’ ನಿರ್ವಹಿಸುವ ಲೆಕ್ಕಾಚಾರವನ್ನು ಹಾಕಿಕೊಂಡು ಕೂತಿದೆ. ಈಗಾಗಲೇ ಹಲವು ಸಮೀಕ್ಷೆಗಳೂ ಸಹ ಕರ್ನಾಟಕದಲ್ಲಿ ಮತ್ತೊಮ್ಮೆ ಅತಂತ್ರ ಸ್ಥಿತಿಯೇ ನಿಶ್ಚಿತ ಎನ್ನುವ ವರದಿಯನ್ನು ನೀಡಿವೆ. ಬಿಜೆಪಿ 150 ಸೀಟುಗಳ ಮೇಲೆ ಕಣ್ಣಿಟ್ಟಿದ್ದರೂ, ಕಾಂಗ್ರೆಸ್ 150 ಪ್ಲಸ್ ಎಂದು ಹೇಳುತ್ತಿದ್ದರೂ, 114 ಮ್ಯಾಜಿಕ್ ನಂಬರ್ ಎರಡೂ ಪಕ್ಷಕ್ಕೂ ಸಿಗುವುದು ಕಷ್ಟ ಎನ್ನುವ ಮಾತುಗಳು ರಾಜಕೀಯ ಪರಿಣಿತರು ಹೇಳುತ್ತಿದ್ದಾರೆ.
ಆದ್ದರಿಂದ ‘ಅತಂತ್ರ’ ಸ್ಥಿತಿ ನಿರ್ಮಾಣವಾದ ಕೂಡಲೇ ಎರಡೂ ಪಕ್ಷಗಳು ಜೆಡಿಎಸ್ ಬಾಗಿಲಿಗೆ ಬರುವುದು ನಿಶ್ಚಿತ, ಆ ಸಮಯದಲ್ಲಿ ಸಮ್ಮಿಶ್ರ ಸರಕಾರದ ಪ್ರಾಥಮಿಕ ಸೂತ್ರವಾಗಿ ‘ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ’ವೆಂದು ದೇವೇಗೌಡರು ಮುಂದಿಡುವುದರಲ್ಲಿ ಅನುಮಾನವೇ ಇಲ್ಲ. ಬಿಜೆಪಿ-ಕಾಂಗ್ರೆಸ್ ಎರಡರಲ್ಲಿ ಒಂದು ಪಕ್ಷ ಇನ್ನೊಂದು ಪಕ್ಷಕ್ಕೆ ಅಧಿಕಾರ ಬಿಟ್ಟುಕೊಡುವ ಬದಲು ‘ಮೈತ್ರಿ’ಯೇ ಸೂಕ್ತ ಎನ್ನುವ ತೀರ್ಮಾನಕ್ಕೆ ಬರುವುದು ಖಚಿತ ಎನ್ನುವುದು ಜೆಡಿಎಸ್‌ನ
ತಂತ್ರಗಾರಿಕೆಯಾಗಿದೆ.
ಹಾಗೇ ನೋಡಿದರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಇರುವ ಬಹುದೊಡ್ಡ ಸಮಸ್ಯೆಯೂ ಸಹ ಇದೇ ಆಗಿದೆ. ಬಿಜೆಪಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಇಷ್ಟವಿಲ್ಲ. ಕಾಂಗ್ರೆಸ್‌ಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಬೇಕಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾದಾಗಲೆಲ್ಲ ಜೆಡಿಎಸ್‌ಗೆ ಸ್ಥಾನ ಬಿಟ್ಟುಕೊಟ್ಟಿರುವ ಉದಾಹರಣೆಯಿದೆ. ಅದು ಸರಕಾರ ರಚಿಸುವುದಿರಲಿ, ಬಿಬಿಎಂಪಿ ಯಲ್ಲಿ ಅಧಿಕಾರದ ಗದ್ದುಗೆ ಏರುವುದು ಇರಲಿ. ಆದ್ದರಿಂದ ಮತ್ತೊಮ್ಮೆ ಇಂತಹ ಇಕ್ಕಟ್ಟಿನ ಪರಿಸ್ಥಿತಿ ಬಂದರೆ ಎದುರಾಳಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಕಾರಣಕ್ಕಾಗಿ, ಜೆಡಿಎಸ್‌ಗೆ ‘ಅರ್ಹ ಸೀಟುಗಳು’ ಇಲ್ಲದಿದ್ದರೂ ರತ್ನಗಂಬಳಿ ಹಾಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನುವುದೇ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರ ಚಿಂತೆಯಾಗಿದೆ.
೨೦೧೮ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ 37 ಸ್ಥಾನವನ್ನು ಜೆಡಿಎಸ್ ಪಡೆದುಕೊಂಡಿತ್ತು. ಅದಾದ ಬಳಿಕ ನಡೆದ ಕುಮಾರಸ್ವಾಮಿ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದು, ಆಪರೇಷನ್ ಕಮಲ ಸೇರಿದಂತೆ ವಿವಿಧ ಕಾರಣಕ್ಕೆ ಕುಸಿದು ಈ ಸಂಖ್ಯೆ 32ಕ್ಕೆ ಇಳಿದಿದೆ. 37 ಕ್ಷೇತ್ರಗಳನ್ನು ಕೈಯಲ್ಲಿಟ್ಟುಕೊಂಡಿದ್ದರೂ ಅಧಿಕಾರಕ್ಕೆ ಬಂದಿದ್ದ ಜೆಡಿಎಸ್, ತನ್ನ ತಪ್ಪುಗಳಿಂದ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿತ್ತು.
ಆದ್ದರಿಂದ ಈ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹಾಗೂ ಸಂಘಟನೆಗೆ ಇನ್ನಷ್ಟು ಒತ್ತು ನೀಡುವ ಮೂಲಕ 2023ರ ಚುನಾವಣೆಯಲ್ಲಿ ಹೆಚ್ಚು ಸೀಟುಗಳನ್ನು ಪಡೆಯುವ ಲೆಕ್ಕಾಚಾರದಲ್ಲಿ ಜೆಡಿಎಸ್ ಯಿದೆ. ಹೋದ ಬಂದಲ್ಲಿ, ಕುಮಾರಸ್ವಾಮಿ, ದೇವೇಗೌಡ ಹಾಗೂ ಇತರ ನಾಯಕರು, ‘ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ನಿಶ್ಚಿತ’ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಸ್ವಬಲದ ಮೇಲೆ ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಿಲ್ಲ ಎನ್ನುವುದು ಸ್ವತಃ ಜೆಡಿಎಸ್ ನಾಯಕರಿಗೂ ಗೊತ್ತಿದೆ.
ಆದ್ದರಿಂದ ಜೆಡಿಎಸ್ ನಾಯಕರ ಮುಂದಿರುವ ಮ್ಯಾಜಿಕ್ ನಂಬರ್ ಎಂದರೆ ‘50’! ಹೌದು, 50 ಕ್ಷೇತ್ರಗಳಲ್ಲಿ ಗೆಲವು
ಕಂಡರೂ ಸರಕಾರ ರಚಿಸುವ ಸಮಯದಲ್ಲಿ ‘ದಾಳ’ ಹೂಡಬಹುದು ಎನ್ನುವ ಲೆಕ್ಕಾಚಾರವಾಗಿದೆ. ಈಗಾಗಲೇ ಸಾಲು ಸಾಲು ಯಾತ್ರೆಗಳನ್ನು ಆರಂಭಿಸಿರುವ ಜೆಡಿಎಸ್ ನಾಯಕರು ಜೆಡಿಎಸ್‌ನ ಭದ್ರಕೋಟೆಗಳನ್ನು ಹಾಗೂ ಈ ಹಿಂದೆ ಭದ್ರಕೋಟೆ ಗಳಾಗಿದ್ದ ಕ್ಷೇತ್ರಗಳನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ.
ಪ್ರಮುಖವಾಗಿ ಹಳೇ ಮೈಸೂರು ಭಾಗದಲ್ಲಿರುವ 60ಕ್ಕೂ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಇಲ್ಲಿರುವ ಒಕ್ಕಲಿಗ ಹಾಗೂ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳನ್ನು ಪಡೆದುಕೊಂಡರೆ ಜೆಡಿಎಸ್ ಇಟ್ಟುಕೊಂಡಿರುವ ಟಾರ್ಗೆಟ್ ರೀಚ್ ಆಗುವುದು ಸುಲಭ ಎನ್ನುವುದು ಜೆಡಿಎಸ್ ವರಿಷ್ಠರ ಪಕ್ಕಾ ಪ್ಲಾನ್ ಆಗಿದೆ.
ಈ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಕೆಲವು ಕ್ಷೇತ್ರಗಳು ಜೆಡಿಎಸ್‌ಗೆ ನೆಚ್ಚಿನ ಕ್ಷೇತ್ರಗಳಾಗಿದ್ದವು. ಆದರೆ ನಾಯಕತ್ವದ ಕೊರತೆ, ಸಮನ್ವಯತೆಯ ಕೊರತೆಯಿಂದಾಗಿ ಇತರ ಪಕ್ಷಗಳಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಈ ಕ್ಷೇತ್ರಗಳನ್ನು ಗಮನದಲ್ಲಿಸಿ ಕೊಂಡಿರುವ ಜೆಡಿಎಸ್, ಈ ಕ್ಷೇತ್ರಗಳನ್ನು ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಕೈಬಿಟ್ಟು ಹೋಗಿರುವ ಕ್ಷೇತ್ರಗಳಲ್ಲಿ ಈ ಹಿಂದೆ ದೇವೇಗೌಡರು ಉತ್ತರ ಕರ್ನಾಟಕ ಭಾಗದ ಕೃಷ್ಣ ಮೇಲ್ದಂಡೆ ಯೋಜನೆಯನ್ನು ಬಳಸಿಕೊಂಡು ಮತ ಸೆಳೆಯುವ ಲೆಕ್ಕಾಚಾರದಲ್ಲಿ ಜೆಡಿಎಸ್ ನಾಯಕರಿದ್ದಾರೆ.
ಜೆಡಿಎಸ್ ವರಿಷ್ಠ ದೇವೇಗೌಡರು ಈ ಹಂತದಲ್ಲಿಯೂ ‘ಮಾಸ್ ಲೀಡರ್’ ಆಗಿಯೇ ಗುರುತಿಸಿಕೊಂಡಿರುವುದರಿಂದ ‘ಅವರ
ನೇತೃತ್ವದ ಕೊನೆಯ ಚುನಾವಣೆ’ ಎನ್ನುವ ಮೂಲಕ ಮತಗಳನ್ನು ಇನ್ನಷ್ಟು ಸೆಳೆಯುವ ಲೆಕ್ಕಾಚಾರದಲ್ಲಿ ಪಕ್ಷವಿದೆ. ಇದರೊಂದಿಗೆ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ನಿಂದ ವಿಭಜನೆಯಾದರೆ ಅದರ ಲಾಭ ಜೆಡಿಎಸ್ ಪಡೆಯುವುದು ಖಚಿತ. ಆ ಕಾರಣಕ್ಕಾಗಿಯೇ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯನ್ನು ಸಿ.ಎಂ. ಇಬ್ರಾಹಿಂ ಅವರಿಗೆ ಪಕ್ಷದ ವರಿಷ್ಠರು ಬಿಟ್ಟುಕೊಟ್ಟಿದ್ದಾರೆ. ಇದರ ಪರಿಣಾಮವಾಗಿ ಚುನಾವಣಾ ಸಮಯದಲ್ಲಿ ಅಲ್ಪಸಂಖ್ಯಾತ ಮತಗಳು ಹೆಚ್ಚಿರುವ ಕೆಲ
ಕ್ಷೇತ್ರದಲ್ಲಿ ಆದರೂ, ಬದಲಾವಣೆ ಸಾಧ್ಯವಾಗುತ್ತದೆ ಎನ್ನುವುದು ದೇವೇಗೌಡರ ಪ್ಲಾನ್.
ಒಕ್ಕಲಿಗ ಹಾಗೂ ಅಲ್ಪಸಂಖ್ಯಾತ ಮತಗಳು ಒಂದಾದರೆ, ಹಲವು ಕ್ಷೇತ್ರಗಳ ಫಲಿತಾಂಶ ಏರುಪೇರಾಗಲಿದೆ ಎನ್ನುವುದರಲ್ಲಿ
ಎರಡನೇ ಮಾತಿಲ್ಲ. ಹಾಗೇ ನೋಡಿದರೆ, ಜನತಾದಳ ಎಂದಿಗೂ ‘ಸ್ಪಷ್ಟ ಬಹುಮತ’ದ ಕಣ್ಣಿಟ್ಟಿಲ್ಲ. ಈಗಿರುವ 30ರಿಂದ 35 ಸೀಟುಗಳನ್ನು 50ಕ್ಕೆ ಹೆಚ್ಚಿಸಿಕೊಂಡರೂ ತಮಗೆ ಚಾನ್ಸ್ ಸಿಗುವುದು ನಿಶ್ಚಿತ ಎನ್ನುವುದು ಪಕ್ಷದ ವರಿಷ್ಠರಿಗೆ ಗೊತ್ತಿದೆ. ಆ
ಕಾರಣಕ್ಕಾಗಿಯೇ ಹಳೇ ಮೈಸೂರಿನಲ್ಲಿಯೇ ಇನ್ನಷ್ಟು ಸೀಟುಗಳನ್ನು ಪಡೆಯುವ ಅಥವಾ ಈ ಹಿಂದೆ ಭದ್ರಕೋಟೆ ಎನಿಸಿ ಕೊಂಡಿದ್ದ ಹಳೇ ಮೈಸೂರೇತರ ಕ್ಷೇತ್ರಗಳಲ್ಲಿ ಕೆಲವು ಸೀಟುಗಳನ್ನು ಗೆಲ್ಲುವ ಮೂಲಕ ನಿರ್ಣಾಯಕ ಸ್ಥಾನದಲ್ಲಿ ಕೂರುವ ಲೆಕ್ಕಾಚಾರದಲ್ಲಿ ಜೆಡಿಎಸ್‌ಯಿದೆ.
ಕಳೆದ ನಾಲ್ಕು ಚುನಾವಣೆಗಳಲ್ಲಿ ಆಗಿರುವ ಕಾಂಗ್ರೆಸ್ ಹಾಗೂ ಬಿಜೆಪಿಯ ಎಡವಟ್ಟುಗಳಿಂದ ಜೆಡಿಎಸ್ ಅಧಿಕಾರ ಧಕ್ಕಿರುವುದನ್ನು ಗಮನಿಸಿರುವ ಎರಡೂ ರಾಷ್ಟ್ರೀಯಗಳು ಈ ಬಾರಿ ‘ಬಹುಮತ ಪಡೆಯದೇ’ ದೇವೇಗೌಡರ ಮನೆಗೆ ರೌಂಡ್ಸ್ ಹೊಡೆಯುವ ಸಂಕಷ್ಟದಿಂದ ಪಾರಾಗುವ ಲೆಕ್ಕಾಚಾರದಲ್ಲಿಯೇ ಯೋಜನೆ ರೂಪಿಸಿಕೊಳ್ಳುತ್ತಿದೆ. ಐದಾರು ತಿಂಗಳಿರು ವಾಗಲೇ, ಮೂರು ಪಕ್ಷಗಳು ಗಂಭೀರವಾಗಿ ಸಾಲು ಸಾಲು ರಥಯಾತ್ರೆ, ಜನಯಾತ್ರೆಗಳನ್ನು ಮಾಡುತ್ತಿರುವುದನ್ನು ಗಮನಿಸಿದಾಗ ಚುನಾವಣೆ ಸನಿಹವಾಗುತ್ತಿದ್ದಂತೆ ಈ ರಂಗು ಇನ್ನಷ್ಟು ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಆದರೆ ಒಂದಂತೂ
ನಿಜ, ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಪಕ್ಷವಾಗಲಿ ಮ್ಯಾಜಿಕ್ ನಂಬರ್ ಆಗಿರುವ 114ಕ್ಕೆ ನಾಲ್ಕೈದು ಸೀಟು
ಕಡಿಮೆ ಪಡೆದರೂ, ಅದರ ನೇರ ಲಾಭ ಜೆಡಿಎಸ್‌ನದ್ದೇ ಎನ್ನುವುದನ್ನು ಮರೆಯಬಾರದು