Friday, 20th September 2024

ಜ್ಞಾನ-ಹುಸಿಜ್ಞಾನಗಳ ಕೊಂಡಿ – ರಸವಿದ್ಯೆ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

nasomeshwara@gmail.com

ನಮ್ಮ ಪೂರ್ವಜರ ಜಂಘಾಬಲವನ್ನು ಉಡುಗಿಸಿದ್ದು ರೋಗಗಳು ಮತ್ತು ಸಾವು. ಹಾಗಾಗಿ ಎಲ್ಲಿಯೋ ಒಂದು ಕಡೆ, ಸಾವನ್ನು ಗೆಲ್ಲುವಂತಹ ಪ್ರಯತ್ನವನ್ನು ತಾವು ಮಾಡಬೇಕು ಹಾಗೂ ರೋಗಗಳೇ ಬರದ ಹಾಗೆ ತಡೆಯಬಲ್ಲ ವಿಧಾನವನ್ನು ಕಂಡುಹಿಡಿಯಬೇಕು ಎಂದು ಅವರಿಗೆ ಅನಿಸಿದ್ದರೆ, ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ. ಈ ಹಿನ್ನೆಲೆಯಲ್ಲಿ ‘ರಸವಿದ್ಯೆ’ ಅಥವಾ ‘ಆಲೆಖ್ಯ’ ಎನ್ನುವ ಜ್ಞಾನವು ಹುಟ್ಟಿತು. ಈ ರಸವಿದ್ಯೆಯು ನಂತರದ ದಿನಗಳಲ್ಲಿ ‘ಕೀಳು ಧಾತು’ಗಳನ್ನು (ಕಬ್ಬಿಣ, ತಾಮ್ರ, ಸೀಸ, ಪಾದರಸ ಇತ್ಯಾದಿ) ಚಿನ್ನವನ್ನಾಗಿ ಪರಿವರ್ತಿಸುವತ್ತ ಹೆಚ್ಚು ಮಗ್ನವಾದದ್ದು ಒಂದು ‘ದುರಂತ’.

ಸಾವನ್ನು ಗೆಲ್ಲುವ ಹಾಗೂ ಸರ್ವರೋಗಗಳನ್ನು ಗುಣಪಡಿಸುವ ‘ಅಮೃತ’ವನ್ನು ತಯಾರಿಸುವ ಮಹದಾಸೆಯು ಬಹುಶಃ ಏಕಕಾಲಕ್ಕೆ ಜಗತ್ತಿನ ಹಲವು ಭೌಗೋಳಿಕ ಪ್ರದೇಶದಲ್ಲಿ -ಈಜಿಪ್ಟ್, ಭಾರತ ಮತ್ತು ಚೀನಾ- ಹುಟ್ಟಿರ ಬೇಕು. ಕಾಲಾಂತರದಲ್ಲಿ ಈ ಮೂರು ಪ್ರದೇಶಗಳಲ್ಲಿ ವಾಸವಾಗಿದ್ದ ಜನರ ನಡುವೆ ಜ್ಞಾನದ ಕೂಡುಕೊಳ್ಳುವಿಕೆ ನಡೆದಿರಬೇಕು. ಈಜಿಪ್ಷಿಯನ್ನರ ರಸವಿದ್ಯೆಯು ಗ್ರೀಕರ ಅವಧಿಯಲ್ಲಿ ಪರಾಕಾಷ್ಠೆಯನ್ನು ತಲುಪಿತು.

ಮುಂದೆ ಇದೇ ಗ್ರೀಕ್ ರಸವಿದ್ಯೆಯು ಅರಾಬಿಕ್ ರಸವಿದ್ಯೆಗೆ ಜನ್ಮನೀಡಿತು. ಅರೇಬಿಯವು ಭೌಗೋಳಿಕವಾಗಿ ಗ್ರೀಸ್, ಭಾರತ ಮತ್ತು ಚೀನಾದ ನಡುವೆ ಇದ್ದ ಕಾರಣ, ಈ ಮೂರೂ ಸಂಸ್ಕೃತಿಗಳಲ್ಲಿ ಅರಳಿದ ರಸವಿದ್ಯೆಯ ಸಾರವನ್ನೆಲ್ಲ ಇವರು ಗ್ರಹಿಸಿ ಇಸ್ಲಾಮಿಕ್ ರಸವಿದ್ಯೆಯು ಆರ್ಭವವಾಯಿತು. ಮುಂದೆ ಈ ರಸವಿದ್ಯೆ ಯು ಯೂರೋಪನ್ನು ಪ್ರವೇಶಿಸಿತು. ಯೂರೋಪಿನಲ್ಲಿ ಸಾವನ್ನು ಗೆಲ್ಲಬಲ್ಲ ಅಮೃತ (ಎಲಿಕ್ಸರ್)ಕಂಡು ಹಿಡಿಯುವು ದರ ಜೊತೆಯಲ್ಲಿ ಮೂಲ ಧಾತು ಗಳಾದ ಸೀಸ ಇಲ್ಲವೇ ತಾಮ್ರವನ್ನು, ಚಿನ್ನವನ್ನು ಪರಿವರ್ತಿಸುವ ಪ್ರಯತ್ನ ಗಳು ನಡೆದವು. ಕೀಳುಲೋಹಗಳನ್ನು ಚಿನ್ನವನ್ನಾಗಿ ಪರಿವರ್ತಿಸಬಲ್ಲ ಸ್ಪರ್ಶಮಣಿಗಾಗಿ (ಫಿಲಾಸಫರ್ಸ್ ಸ್ಟೋನ್) ಹುಡುಕಾಟವು ತೀವ್ರವಾಗಿ ನಡೆತು. ಪುನರುತ್ಥಾನ ಅಥವಾ ರಿನೇಜಾನ್ಸ್ ಹೊತ್ತಿಗೆ ಈ ಆಲ್ಕೆಮಿಯೇ, ಕೆಮಿಸ್ಟ್ರಿ ಅಥವಾ ರಸಾಯನ ವಿಜ್ಞಾನಕ್ಕೆ ಜನ್ಮ ನೀಡಿತು.

ರಸಾಯನ: ಭಾರತದಲ್ಲಿ ಸೋಮಬ್ಳಿಯಿಂದ ಸೋಮರಸವನ್ನು ತೆಗೆಯುವ ತಂತ್ರವೇ ಬಹುಶಃ ರಸವಿದ್ಯೆಯ ಮೊದಲ ಉದಾಹರಣೆಯಿರಬೇಕು. ಅಥರ್ವಣ ವೇದವಂತು ಸೋಮರಸವನ್ನು ‘ಅಮೃತ’ ಎಂದೇ ವರ್ಣಿಸುತ್ತದೆ. ವೇದಗಳಲ್ಲಿ ಔಷಧಿಯುಕ್ತ ಮೂಲಿಕೆಗಳ ವರ್ಗೀಕರಣದೆ. ‘ಆಯುಷ್ಯಾನಿ’ ಮತ್ತು ‘ಭೈಷಜ್ಯಾನಿ’. ಆಯುಷ್ಯಾನಿ ವರ್ಗದಲ್ಲಿ ಬರುವ ಮೂಲಿಕೆಗಳು ಮತ್ತು ಪ್ರಯೋಗಗಳು ನಮ್ಮ ಆಯಸ್ಸನ್ನು ಹೆಚ್ಚಿಸ ಬಲ್ಲಂತಹವು. ಭೈಷಜ್ಯಾನಿಯಲ್ಲಿ ಬರುವ ಮೂಲಿಕೆಗಳು ನಾನಾ ರೋಗಗಳನ್ನು ಗುಣಪಡಿಸ ಬಲ್ಲಂತಹವು. ಮುಂದೆ ಈ ಆಯುಷ್ಯಾನಿ ಭಾಗವೇ ‘ರಸಾಯನ’ ಭಾಗಕ್ಕೆ ಜನ್ಮವೀಯಿತು ಎನ್ನಬಹುದು. ರಸ+ಆಯನ= ರಸಾಯನ. ‘ರಸ’ಎಂದರೆ ನಮ್ಮ ಶರೀರದಲ್ಲಿ ಜೀವಧಾತುವಾಗಿರುವ ಎಲ್ಲ ರಸಗಳು. ‘ಅಯನ’ ಎಂದರೆ ಪಥ (ಸೂರ್ಯ ಚಲನಾ ಪಥವಾದ ಉತ್ತರಾಯನ ಮತ್ತು ದಕ್ಷಿಣಾಯನವನ್ನು ನೆನೆಪಿಸಿ ಕೊಳ್ಳಬಹುದು) ರಸಾಯನವು ಆಯುರ್ವೇದದ ಅಷ್ಟಾಂಗಗಳಲ್ಲಿ ಒಂದಾಗಿ ಇಂದಿಗೂ ಅಸ್ತಿತ್ವದಲ್ಲಿದೆ.

ನಮ್ಮ ಶರೀರದಲ್ಲಿರುವ ರಸಗಳೆಲ್ಲ ಸರಿಯಾದ ಪಥದಲ್ಲಿ ಚಲಿಸುವಂತೆ ಮಾಡುವುದರ ಮೂಲಕ ಆಯಸ್ಸನ್ನು ಹೆಚ್ಚಿಸಲು ನೆರವಾಗುವ ವಿದ್ಯೆಯಿದು. ರಸಾಯನ ಮತ್ತು ವಾಜೀಕರಣಗಳು ಆರೋಗ್ಯವನ್ನು ಹಾಗೂ ದೀರ್ಘಾಯಸ್ಸನ್ನು ನೀಡುತ್ತವೆ ಎನ್ನಲಾಗಿದೆ. ಆದರೆ ಸಾವನ್ನು ಗೆಲ್ಲಬಲ್ಲ ಹಾಗೂ ರೋಗವೇ ಬರದ ಹಾಗೆ
ತಡೆಗಟ್ಟಬಲ್ಲ ‘ಅಮೃತ’ವನ್ನು ಸಿದ್ಧಪಡಿಸಲು ಆಗಲೇ ಇಲ್ಲ. ಚರಕ, ಸುಶೃತರ ಕಾಲದಲ್ಲಿ ರಸಾಯನ ಎಂದರೆ ಅದು ಆಯಸ್ಸನ್ನು ಹೆಚ್ಚಿಸುವ ವಿದ್ಯೆಯೇ! ಕೀಳು ಧಾತುವನ್ನು ಚಿನ್ನವನ್ನಾಗಿ ಪರಿವರ್ತಿಸುವ ವಿದ್ಯೆ ಎಂಬ ಅರ್ಥದಲ್ಲಿ ಪ್ರಯೋಗವಾಗಿಲ್ಲ. ಕ್ರಿ.ಪೂ.400ರಲ್ಲಿ ರಚಿತವಾದ ಕೌಟಿಲ್ಯನ ಅರ್ಥಶಾಸ್ತ್ರವೂ ಸಹ ಕಬ್ಬಿಣವನ್ನು ಚಿನ್ನವನ್ನಾಗಿ ಪರಿವರ್ತಿಸುವ ದ್ಯೆಯ ಬಗ್ಗೆ ಪ್ರಸ್ತಾಪಿಸುವುದಿಲ್ಲ.

ಕ್ರಿ.ಶ.ನೆಯ ಶತಮಾನಕ್ಕೆ ಸೇರಿರಬಹುದಾದ ‘ರಸಸೇಶ್ವರ ದರ್ಶನ’ವು ಪಾದರಸವನ್ನು ಬಳಸಿ ಶರೀರಕ್ಕೆ ಸಾವೇ ಬರದ ಹಾಗೆ ಮಾಡುವ ಬಗ್ಗೆ ಪ್ರಸ್ತಾಪಿಸು ತ್ತದೆ. ಗೋವಿಂದ ಭಾಗವತ, ಸರ್ವಜ್ಞ ರಾಮೇಶ್ವರರು ಬರೆದ ‘ರಸಹೃದಯ’ ಮತ್ತು ‘ರಸೇಶ್ವರ ಸಿದ್ಧಾಂತ’ಗಳು ಈ ದರ್ಶನಕ್ಕೆ ಆಧಾರ ಗ್ರಂಥಗಳು. ಪಾದರಸ ವನ್ನು ಬಳಸುವ 18ಕ್ಕಿಂತಲೂ ಹೆಚ್ಚಿನ ವಿಧಾನಗಳನ್ನು ವರಿಸುವ ಈ ಗ್ರಂಥದಲ್ಲಿ ಪಾದರಸವು ದೇಹಕ್ಕೆ ವಿಷಕಾರಿ ಎನ್ನುವ ವಿಚಾರದ ಪ್ರಸ್ತಾಪವಿಲ್ಲ; ಆದರೆ ಪಾದರಸದ ಮೂಲಕ ಮೋಕ್ಷವನ್ನು ಪಡೆಯಬಹುದು ಎನ್ನುತ್ತದೆ. ಕ್ರಿ.ಶ.4ನೆಯ ಶತಮಾನಕ್ಕೆ ಸೇರಿರಬಹುದಾದ ‘ಮಾತೃಕಾ ಭೇದ ತಂತ್ರ’ದಲ್ಲಿ ತಾಮ್ರವನ್ನು ಬೆಳ್ಳಿಯನ್ನಾಗಿ ಪರಿವರ್ತಿಸುವ ವಿಧಾನದ ವರದೆ.

ಕ್ರಿ.ಶ.6ನೆಯ ಶತಮಾನಕ್ಕೆ ಸೇರಿದ ‘ಕುಬ್ಜಿಕಾ ತಂತ್ರ’ದಲ್ಲಿ ತಾಮ್ರವನ್ನು ಪಾದರಸದ ನೆರನಿಂದ ಚಿನ್ನವನ್ನಾಗಿ ಪರಿವರ್ತಿಸುವ ಬಗ್ಗೆ ಪ್ರಸ್ತಾಪವಿದೆ. ಭಾರತೀಯರ ರಸವಿದ್ಯೆಯು ಬೌದ್ಧ ಸನ್ಯಾಸಿ ನಾಗಾರ್ಜುನನ (ಕ್ರಿ.ಶ. 931) ಪ್ರಸ್ತಾಪವಿಲ್ಲದೆ ಪೂರ್ಣವಾಗದು. ಈತನು ಬಹುಶಃ 7-8ನೆಯ ಶತಮಾನದಲ್ಲಿ ಜೀವಿಸಿದ್ದಿರಬೇಕು. ಈತನು ಬರೆದ ‘ರಸರತ್ನಾಕರ’ದಲ್ಲಿ ಕೀಳುಧಾತುಗಳನ್ನು ಚಿನ್ನ, ಬೆಳ್ಳಿಯನ್ನಾಗಿ ಪರಿವರ್ತಿಸುವ ವಿಧಾನಗಳನ್ನು ಪ್ರಸ್ತಾಪವಿದೆ. ಅದಿರಿನಿಂದ ಸೀಸ, ಪಾದರಸ, ತಾಮ್ರ ಇತ್ಯಾದಿಗಳನ್ನು ತಯಾರಿಸಲು ಬಳಸಬಹುದಾದ ಎರಡು ಡಜ಼ನ್ನಿಗೂ ಹೆಚ್ಚಿನ ಉಪಕರಣಗಳ ಪ್ರಸ್ತಾಪವಿದೆ. ಇದೊಂದು ಅದ್ಭುತ ರಸವಿದ್ಯೆಯ ಗ್ರಂಥ ಎನ್ನುವುದರಲ್ಲಿ ಅನುಮಾನವಿಲ್ಲ.

12ನೆಯ ಶತಮಾನದಲ್ಲಿ ‘ರಸಾರ್ಣವ’ ಎನ್ನುವ ಶೈವತಂತ್ರದ ಗ್ರಂಥವು, ಕೀಳುಧಾತುಗಳನ್ನು ಚಿನ್ನವನ್ನಾಗಿ ಪರಿವರ್ತಿಸುವ ವಿದ್ಯೆಯ ಜೊತೆಯಲ್ಲಿ, ರಾಸಾ ಯನಿಕಗಳನ್ನು ಬಳಸಿ ಮೃತ ಶರೀರವನ್ನು ಕೆಡದಂತೆ ಸಂರಕ್ಷಿಸ ಬಲ್ಲ ವಿವರಗಳನ್ನೂ ನೀಡುತ್ತದೆ. ಸೋಮದೇವನ ‘ರಸೇಂದ್ರ ಚೂಡಾಮಣಿ’ (12-13ನೆಯ ಶತಮಾನ), ಯಶೋಧರನ ‘ರಸಪ್ರಕಾಶ ಸುಧಾಕರ’ (13ನೆಯ ಶತಮಾನ) ಮತ್ತು ‘ರಸಕಲ್ಪ’ವೆಂಬ ರಸವಿದ್ಯೆಯ ಕೃತಿಗಳು ಮುಖ್ಯವಾದವು.

ಅಮೋಘವಜ್ರ (705-774) ಎಂಬ ಬೌದ್ಧ ಭಿಕ್ಷುವು ರಸವಿದ್ಯೆಯನ್ನು ನೇಪಾಳ ಮತ್ತು ಚೀನಾ ದೇಶಗಳಿಗೆ ಕೊಂಡೊಯ್ದ. 12ನೆಯ ಶತಮಾನದಲ್ಲಿ ಮುಸ್ಲೀ ಮರು ಭಾರತದ ಮೇಲೆ ದಾಳಿಯನ್ನು ಮಾಡಿ ತಕ್ಷಶಿಲಾ, ಓದಂತಪುರಿ, ನಳಂದ ವಿಶ್ವ ವಿದ್ಯಾನಿಲಯಗಳನ್ನು ನೆಲಸಮ ಮಾಡಿದಾಗ ಅಲ್ಲಿದ್ದ ರಸವಾದಿಗಳು ಟಿಬೆಟ್, ನೇಪಾಳ, ಬರ್ಮ ಮತ್ತು ಕಾಂಬೋಜ (ಇಂದಿನ ಆಫ್ಘಾನಿಸ್ತಾನ) ದೇಶಗಳಿಗೆ ಪಲಾಯನವನ್ನು ಮಾಡಿದರು. ಕ್ರಿ.ಶ. 3ನೆಯ ಶತಮಾನದಲ್ಲಿ ಬೋಗರ್ ಮತ್ತು ಪುಲಿಪಾನಿ ಎಂಬ ಚೀನೀಯರು ತಮಿಳುನಾಡಿನ ಸಿದ್ಧರ ಬಳಿಗೆ ಬಂದು ರಸವಿದ್ಯೆಯನ್ನು ಕಲಿತು ಚೀನಾಕ್ಕೆ ಹೋದರು ಎನ್ನಲಾಗಿದೆ.

ಆಭರಣಗಳು: ಮಾನವ ಜನಾಂಗದಲ್ಲಿ ಮೊದಲ ಬಾರಿಗೆ ಲೋಹ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಕರಗತಗೊಳಿಸಿಕೊಂಡವರು ಈಜಿಪ್ಷಿಯನ್ನರು.  ಕ್ರಿ.ಪೂ.6000ದ ಹೊತ್ತಿಗೆ ಚಿನ್ನ ಮತ್ತು ಬೆಳ್ಳಿಯನ್ನು ಬಳಸಿ ಆಭರಣಗಳನ್ನು ಮಾಡುವುದನ್ನು ಕಲಿತರು. ಮೆಸೊಪೊಟೋಮಿಯನ್ನರು ಹಾಗೂ ಬಾಲ್ಕನ್ನರು ಕ್ರಿ.ಪೂ.4000 ಚಿನ್ನ ಲೋಹವಿಜ್ಞಾವನ್ನು ಪರಿಚಯ ಮಾಡಿಕೊಂಡರು. ಸಿಂಧುಸರಸ್ವತಿ ಸಂಸ್ಕೃತಿಯವರು ಚಿನ್ನವನ್ನು ಕರ್ನಾಟಕದ ಕೋಲಾರ ಮತ್ತು
ಹಟ್ಟಿಯಿಂದ ತರಿಸಿಕೊಳ್ಳುತ್ತಿದ್ದರು. ಆಫ್ಘಾನಿಸ್ತಾನದಿಂದಲೂ ಚಿನ್ನದ ಪೂರೈಕೆಯಾಗುತ್ತಿತ್ತು. ಆದರೆ ಅವರಿಗೆ ಅವರದ್ದೇ ಆದ ಚಿನ್ನದಗಣಿಗಳಿರಲಿಲ್ಲ. ಈಜಿಪ್ಟಿನ ಅಲೆಗ್ಸಾಂಡ್ರಿಯವು ರಸವಿದ್ಯೆಯ ಸ್ವರ್ಗವಾಗಿತ್ತು.

ಕ್ರಿ.ಪೂ.322ರಲ್ಲಿ ಅಲೆಗ್ಸಾಂಡರ್ ದಿ ಗ್ರೇಟ್ ಅಲೆಗ್ಸಾಂಡ್ರಿಯವನ್ನು ಗೆದ್ದ. ತನ್ನ ಜೊತೆಯಲ್ಲಿ ರಸವಾದಿಗಳನ್ನು ಹಾಗೂ ರಸವಿದ್ಯೆಯನ್ನು ಗ್ರೀಸ್ ದೇಶಕ್ಕೆತಂದ. ಇಂದು ಗ್ರೀಕ್‌ರಸವಿದ್ಯೆಯ ವಿವರಗಳು ಬೈಜಾಂಟೈನ್ ಹಸ್ತಪ್ರತಿಗಳಲ್ಲಿ ಉಳಿದಿದೆ. ಕ್ರಿ.ಶ.7ನೆಯ ಶತಮಾನದ ಹೊತ್ತಿಗೆ ಅರಬ್ಬಿ ನೆಲದಲ್ಲಿ ರಸವಿದ್ಯೆಯು ಪ್ರವರ್ಧಮಾನಕ್ಕೆ ಬಂದಿತು. ಇವರಲ್ಲಿ ಪ್ರಮುಖ ಪರ್ಷಿಯನ್ ದೇಶದ ಅಬು ಮೂಸಾ ಜಾಬಿರ್ ಇಬ್ನ್ ಹಯ್ಯಾನ್ (ಜೆಬರ್; ಮರಣ 806-816). ಈತನು
ಆಲ್ಕೆಮಿಯನ್ನು ರಸಾಯನ ವಿಜ್ಞಾನವನ್ನಾಗಿ ಪರಿವರ್ತಿಸುವುದರಲ್ಲಿ ಯಶಸ್ವಿಯಾದ ಮೊದಲಿಗ.

ಹಾಗಾಗಿ ಈತನನ್ನು ‘ರಸಾಯನ ವಿಜ್ಞಾನದ ಪಿತಾಮಹ’ ಎಂದು ಕರೆಯುವುದುಂಟು. ಈತನ ಬರಹಗಳಲ್ಲಿ ಕೀಳು ಲೋಹಗಳನ್ನು ಚಿನ್ನವನ್ನಾಗಿ ಪರಿವರ್ತಿಸುವ ಸ್ಪರ್ಶಮಣಿ (ಫಿಲಾಸಫರ್ಸ್ ಸ್ಟೋನ್) ಮತ್ತು ಅಮೃತ (ಎಲಿಕ್ಸಿರ್) ಗಳೆರಡರ ಪ್ರಸ್ತಾಪದೆ. ಈತನ ಬರಹಗಳು ಲ್ಯಾಟಿನ್ ಭಾಷೆಗೆ ಅನುವಾದವಾಗಿ ಯೂರೋಪಿ ಯನ್ ರಸವಿದ್ಯೆಯ ಪ್ರಮುಖ ಆಕರವಾಯಿತು. ಜರ್ಮನ್-ಸ್ವಿಸ್ ವೈದ್ಯ ಮತ್ತು ರಸವಾದಿ ಪ್ಯಾರಾಸೆಲ್ಸಸ್‌ಅಮೃತವನ್ನು ಕಂಡು ಹಿಡಿಯುವ ದಿಶೆಯಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದ.

ಪ್ಯಾರಾಸೆಲ್ಸಸ್(1493-1541) ಕೀಳು ಲೋಹಗಳನ್ನು ಚಿನ್ನವನ್ನಾಗಿಸುವ ವಿದ್ಯೆಯನ್ನು ಟೀಕಿಸಿ, ಅನಾರೋಗ್ಯವನ್ನು ನಿವಾರಿಸುವ ಹಾಗೂ ಆಯಸ್ಸನ್ನು ಹೆಚ್ಚಿಸುವ ವೈದ್ಯ ವಿದ್ಯೆಯೇ ಶ್ರೇಷ್ಠವೆಂದ. ಈತನ ಮಾತು ಮಧ್ಯಯುಗದ ಯೂರೋಪಿಯನ್ ರಸವಾದಿಗಳ ಮೇಲೆ ಅಪಾರ ಪರಿಣಾಮವನ್ನು ಬೀರಿ, ತಮ್ಮ ಪ್ರಯೋಗಗಳಲ್ಲಿ ಸಸ್ಯರಸಗಳ ಬದಲು ವಿವಿಧ ರಾಸಾಯನಿಕಗಳನ್ನು ಬಳಸಲಾರಂಭಿಸಿದರು. ಹಾಗಾಗಿ ಹೈಡ್ರೋಕ್ಲೋರಿಕ್ ಆಸಿಡ್, ನೈಟ್ರಿಕ್ ಆಸಿಡ್,
ಪೊಟಾಶ್, ಸೋಡಿಯಂ ಕಾರ್ಬೋನೇಟ್ ಸಂಯುಕ್ತಗಳ ಜೊತೆಯಲ್ಲಿ ಅರ್ಸೆನಿಕ್, ಆಂಟಿಮನಿ ಮತ್ತು ಬಿಸ್ಮತ್ ಧಾತುಗಳು ಬಳಕೆಗೆ ಬಂದವು.

ಇಷ್ಟೆಲ್ಲ ಆದರೂ ವಿಶ್ವದ್ಯಾಲಯಗಳಲ್ಲಿ ಆಲ್ಕೆಮಿಯನ್ನು ವಿಜ್ಞಾನವೆಂದು ಪರಿಗಣಿಸದ ಕಾರಣ, ಗುರು-ಶಿಷ್ಯ ಪರಂಪರೆಯಲ್ಲಿಯೇ ಮುಂದುವರೆತು. ಚರ್ಚ್ ಸಹ, ರಸವಾದಿಗಳನ್ನು ವಿಜ್ಞಾನಿಗಳು ಎಂದು ಪರಿಗಣಿಸುವ ಬದಲು ಅಭಿಚಾರಿಗಳ ವರ್ಗಕ್ಕೆ ಸೇರಿಸಿದ್ದು ನೈಜರಸಾಯನ ಶಾಸ್ತ್ರ ಉಗಮಕ್ಕೆ ಅಡ್ಡಗಾಲನ್ನು ಹಾಕಿತು.