Friday, 13th December 2024

ಕೋಸಲೇಂದ್ರ ಸಂಭ್ರಮವು ಬರೆಸಿದ ರೀತಿಯೇ ಈ ಕೋಸಂಬರೀ

ತಿಳಿರುತೋರಣ

srivathsajoshi@yahoo.com

ಅತಿಮಧುರವೂ ಆಹ್ಲಾದಕರವೂ ಸರಳವೂ ಆದ ‘ರಾಮ’ ಎಂಬ ನಾಮಧೇಯವನ್ನು ಮನಸಾ ಆಲೋಚಿಸಿ ವಸಿಷ್ಠ ಮಹರ್ಷಿ ಆ ಹೆಸರನ್ನು ಸೂಚಿಸಿ ದ್ದಂತೆ. ಹಾಗೆ, ಕೌಸಲ್ಯೆಯ ಗರ್ಭಾಂಬುಧಿಯಲ್ಲಿ ಹುಟ್ಟಿದ ಕಂದನಿಗೆ ದಶರಥನು ರಾಮ ಎಂದು ಹೆಸರಿಟ್ಟನಂತೆ. ನೀವಿದನ್ನು ಪುರಾಣದ ಕಟ್ಟುಕಥೆ ಇರಬಹುದು ಎಂದು ಹಾರಿಸಿಬಿಡಬೇಡಿ! ಶಬ್ದಪ್ರಪಂಚದಲ್ಲಿ ಅರ್ಥ ಪ್ರಪಂಚದಲ್ಲಿ ನಿಜವಾಗಿಯೂ ರಾಮ ಅಂದರೆ ಆಹ್ಲಾದಕರವೇ. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟನ್ನು ಬೇಕಿದ್ದರೆ ತೆರೆದು ನೋಡಿ.

ಅಲ್ಲಿಯೂ ರಾಮ ಎಂಬ ಪದಕ್ಕೆ- ಸಂತೋಷಗೊಳಿಸುವ, ಆನಂದಕರವಾದ, ಮನೋಹರವಾದ, ಸುಂದರವಾದ ಮುಂತಾದ ಇನ್ನೂ ಹಲವಾರು ಅರ್ಥಗಳನ್ನೇ ಮೊದಲಿಗೆ ಕೊಟ್ಟು ಆಮೇಲಷ್ಟೇ ವಿಷ್ಣುವಿನ ಏಳನೆಯ ಅವತಾರ, ದಶರಥನ ಮಗ, ರಾಘವ ಎಂಬ ಅರ್ಥವನ್ನೂ ವಿವರಿಸಿದ್ದಾರೆ. ‘ಶ್ರೀರಾಮ ದೇವ ಅಷ್ಟೇಅಲ್ಲ, ನಮ್ಮೆಲ್ಲರ ಮನಸ್ಸು ಮತ್ತು ಹೃದಯದೊಳಗಿನ ಭಾವ’ ಎಂದು ಮೊನ್ನೆ ಒಬ್ಬರು ಪ್ರಾಸಬದ್ಧವಾಗಿ ಬರೆದುಕೊಂಡಿದ್ದರು. ಎಷ್ಟು ಸತ್ಯವಾದ ಮಾತು! ರಾಮಭಕ್ತರ ರಾಷ್ಟ್ರಗೀತೆಯೇ ಆಗಿಹೋಗಿರುವ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ…’ ಸಾಲುಗಳು ಧ್ವನಿಸುವುದೂ ಅದನ್ನೇ.

ರಾಮ ಅಂದರೆ ಆನಂದ. ರಾಮ ಅಂದರೆ ಸಂತೋಷ. ಅದು ನಮಗೆ ಇನ್ನಷ್ಟು ಬೇಕು ಮತ್ತಷ್ಟು ಬೇಕು. ಅಯೋಧ್ಯೆಯಲ್ಲಿ ನಾಳೆ ನಡೆಯಲಿರುವ ರಾಮ ಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ಜಗತ್ತಿನಾದ್ಯಂತ ಭಾರತೀಯರ ಸಂಭ್ರಮ ಸಡಗರಗಳು ಮುಗಿಲು ಮುಟ್ಟಿರುವುದನ್ನು ಗಮನಿಸಿದರೆ ಯಾರಿಗೇ ಆದರೂ ಇದು ಅರ್ಥವಾಗುತ್ತದೆ. ಸಂತೋಷ ಸಂಭ್ರಮಗಳನ್ನು ಹೃದಯದಲ್ಲೇ ಗಂಟು ಕಟ್ಟಿಡುವುದೂ ಆಗದ ಮಾತು. ಒಂದಿಲ್ಲೊಂದು ರೀತಿಯಲ್ಲಿ ಅದು ಅಭಿವ್ಯಕ್ತಗೊಳ್ಳಲೇಬೇಕು. ಆದ್ದರಿಂದಲೇ ಅಲ್ಲಾರೋ ಒಬ್ಬರು ಥರ್ಮೋಕೂಲ್‌ನಲ್ಲಿ ರಾಮ ಮಂದಿರದ ಪ್ರತಿಕೃತಿ ರಚಿಸಿ ತಮ್ಮ ಸಂತೋಷವನ್ನು ಪ್ರಕಟಿಸಿದರು.

ಮತ್ತೊಬ್ಬರು ಮೈಲುದ್ದದ ಊದುಬತ್ತಿ ತಯಾರಿಸಿ ಲಾರಿಯಲ್ಲಿ ಅಯೋಧ್ಯೆಗೆ ಒಯ್ದರು. ಇನ್ನೊಬ್ಬರು ರೇಷ್ಮೆ ಶಾಲಿನ ಮೇಲೆ ರಾಮಾಯಣದ ಪ್ರಮುಖ
ದೃಶ್ಯಾವಳಿಯನ್ನೆಲ್ಲ ನೇಯ್ದು ಸೀತಾಮಾತೆಯ ವಿಗ್ರಹಕ್ಕೆ ಅರ್ಪಿಸಲಿಕ್ಕೆ ಸಿದ್ಧಗೊಳಿಸಿದರು. ಮತ್ತ್ಯಾರೋ ಒಬ್ಬರು ರಾಮನ ಬಗೆಗೊಂದು ಪದ್ಯ ಬರೆದು ಹಾಡಿ ಸಂಭ್ರಮಿಸಿದರು. ಮತ್ತೊಬ್ಬರು ನೃತ್ಯದಲ್ಲಿ ರಾಮಜನ್ಮದ ಸಂಭ್ರಮವನ್ನು ಅಭಿನಯಿಸಿ ತೋರಿಸಿದರು. ಮಗದೊಬ್ಬ ಕಲಾವಿದರು ನೀರಿನ ಮೇಲೆ ರಂಗೋಲಿ ಹುಡಿಯಿಂದ ಅದ್ಭುತವಾದ ರಾಮ ಮಂದಿರದ ಚಿತ್ರ ಬಿಡಿಸಿದರು.

ಉಸ್ಮಾನ್ ಮೀರ್ ಹಾಡಿದ ‘ರಾಮ್‌ಜೀ ಪಧಾರೇ ಶ್ರೀರಾಮ್‌ಜೀ ಪಧಾರೇ…’ ಮತ್ತು ಕನ್ನಡಿತಿ ಶಿವಶ್ರೀ ಸ್ಕಂದಪ್ರಸಾದ್ ಹಾಡಿದ ‘ಪೂಜಿಸಲೆಂದೇ ಹೂಗಳ ತಂದೇ…’ ವಿಡಿಯೊ ಹಾಡುಗಳನ್ನೆಲ್ಲ ಪ್ರಧಾನಿ ನರೇಂದ್ರ ಮೋದಿಯವರೂ ಗಮನಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಇವೆಲ್ಲ ಪತ್ರಿಕೆಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ದಿನವೂ ಹರಿದುಬರುತ್ತಿರುವ ತುಣುಕು ಗಳಿಂದ ನಾಲ್ಕೈದಷ್ಟನ್ನೇ ನಾನು ನೆನಪಿಸಿಕೊಂಡದ್ದು. ಇನ್ನು, ನನ್ನ ಪರಿಚಿತರ, ಆತ್ಮೀಯ ಸ್ನೇಹಿತರ ಸಂಭ್ರಮಗಳನ್ನು ಬರೆದರೆ ಅದೇ ಒಂದು ದೊಡ್ಡ ಪಟ್ಟಿ ಆದೀತು. ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಆಸ್ಥಾನಶಿಲ್ಪಿ ಹರಿದಾಸ್ ಲಹರಿ ಮತ್ತು ತಂಡದವರು ಕಟ್ಟಿಗೆಯಿಂದ ರಾಮ ಮಂದಿರದ ಭವ್ಯವಾದ ಪ್ರತಿಕೃತಿಯೊಂದನ್ನು ನಿರ್ಮಿಸಿದ್ದಾರೆ.

ಸವಿತಾ ರಾವ್ ತಂಡದವರು ಅದಕ್ಕೆ ರಂಗೋಲಿ ಸಿಂಗಾರ ಮಾಡಿದ್ದಾರೆ. ವಿದ್ಯುದ್ದೀಪಾಲಂಕೃತವಾಗಿ ಅದೀಗ ಪ್ರದರ್ಶನಕ್ಕೆ ಸಿದ್ಧವಾಗಿದೆ. ಇಲ್ಲಿನ ಭಕ್ತ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕಳೆದವಾರ ಒಂದು ದಿನ ಮುಸ್ಸಂಜೆ ಹೊತ್ತು ನೂರು ಟೆಸ್ಲಾ ಕಾರುಗಳನ್ನು ಇಂಗ್ಲಿಷ್‌ನ RAM ಅಕ್ಷರಗಳ
ವಿನ್ಯಾಸದಲ್ಲಿ ಪಾರ್ಕ್ ಮಾಡಿ ಹೆಡ್‌ಲೈಟ್ಸ್ ಮಿನುಗಿಸಿ ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಮಾಡಿದ ಬೆಳಕು ಪ್ರದರ್ಶನದ ಡ್ರೋನ್ ವಿಡಿಯೊ ಈಗಾಗಲೇ ಲಕ್ಷಗಟ್ಟಲೆ ದೇಖಾವೆಗಳನ್ನು ಕಂಡಿದೆ. ಅಮೆರಿಕನ್ನಡಿತಿ ಅಮ್ಮ+ಮಗಳು ಜೋಡಿ ಅಟ್ಲಾಂಟದ ಶ್ರುತಿ ಪ್ರದೀಪ್ ಮತ್ತು ಪಾವನಿ ಹಾಡಿದ ರಾಮ ಪರಿವಾರ ಸ್ತುತಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದನ್ನು ಸಾವಿರಾರು ಮಂದಿ ನೋಡಿ ಆನಂದಿಸಿದ್ದಾರೆ.

ಇಲ್ಲಿನ ನೃತ್ಯವಿದುಷಿ ವಾಣಿ ರಮೇಶ್ ಅದಕ್ಕೆ ಕೊರಿಯೊಗ್ರಫಿ ಮಾಡಿ ತನ್ನ ವಿದ್ಯಾರ್ಥಿಗಳಿಂದ ನೃತ್ಯ ಮಾಡಿಸುತ್ತೇನೆ ಎಂದಿದ್ದಾರೆ. ಬೆಂಗಳೂರಿನ ಇನ್ನೊಬ್ಬ ಅಮ್ಮ+ಮಗಳು ಜೋಡಿ ಸವಿತಾ ಮತ್ತು ಶರ್ವಾಣಿ ಆ ಹಾಡಿನಿಂದ ಪ್ರೇರಿತರಾಗಿ ತಾವೂ ಹಾಡಿದ್ದಾರೆ, ನಾಳೆ ಅವರ ಮನೆಹತ್ತಿರದ ದೇವಸ್ಥಾನ
ದಲ್ಲಿಯೂ ಹಾಡುತ್ತೇವೆಂದಿದ್ದಾರೆ. ಇನ್ನೊಬ್ಬ ಪ್ರತಿಭಾನ್ವಿತ ಅಮೆರಿಕನ್ನಡಿತಿ ಸವಿತಾ ರವಿಶಂಕರ್ ಬರೆದ ‘ರಾಮ ಬಂದಾನೋ…’ ಹಾಡು ಬೆಂಗಳೂರಿ ನಲ್ಲಿ ಸಂಗೀತಬದ್ಧವಾಗಿ ಮತ್ತೆ ಅಮೆರಿಕನ್ನಡಿಗ ಗಾಯಕ ರವಿ ಗುತ್ತಿ ಅವರ ಧ್ವನಿ ಸೇರಿಕೊಂಡು, ಇಂದು ಅದರ ವರ್ಲ್ಡ್ ಪ್ರೀಮಿಯರ್ ಆಗುವುದಿದೆ.

ಇನ್ನು, ಶಿರಸಿಯ ಚಿನ್ಮಯೀ ಹೆಗಡೆ ಮೊನ್ನೆ ಸಂಕ್ರಾಂತಿಯಂದು ಬಿಡಿಸಿದ್ದ ರಾಮ ಮಂದಿರ ರಂಗವಲ್ಲಿ, ಬೆಂಗಳೂರಿನ ಪದ್ಮಶ್ರೀ ಅವರು ಹೆಣೆದ ಕನ್ನಡ ವರ್ಣಮಾಲೆಯಿಂದ ಸಿಂಗರಿಸಿದ ಸರಳ ರಾಮಾಯಣ ಕಥನ, ರೋಹಿತ್ ಚಕ್ರತೀರ್ಥ ಬರೆದು ಐರ್ ಲ್ಯಾಂಡಿನ ಅಮಿತಾ ರವಿಕಿರಣ್ ಹಾಡಿದ ಅಯೋಧ್ಯಾಗಮನ ಹಾಡು, ಮುಂಬಯಿಯ ಅನು ಪಾವಂಜೆ-ಚಿತ್ರಮಿತ್ರ ಕಲಾವಿದ ದಂಪತಿ ರಚಿಸುತ್ತಿರುವ ಚಿತ್ತಾಕರ್ಷಕ ರಾಮ-ಹನುಮ ಚಿತ್ರ
ದೃಶ್ಯಾವಳಿಗಳ ಸರಣಿ… ಒಂದೇ ಎರಡೇ! ನನಗೆ ತುಂಬ ಮೆಚ್ಚುಗೆ ಯಾದ ಇನ್ನೂ ಒಂದು ಕ್ಯೂಟ್ ಸಂಭ್ರಮವನ್ನೂ ಈ ಪಟ್ಟಿಯಲ್ಲಿ ಸೇರಿಸಲೇಬೇಕು. ಅದೇನು ಗೊತ್ತೇ? ಮೊನ್ನೆ ಶುಕ್ರವಾರ ಇಲ್ಲಿ ಭಾರೀ ಹಿಮಪಾತವಾಗಿದ್ದು ಸುತ್ತಮುತ್ತಲೆಲ್ಲ ಒಂದೆರಡಡಿಯಷ್ಟು ಹಿಮ ಬಿದ್ದಿದೆ. ಮೃಣಾಲಿನಿ ಗುಡಿ ಎಂಬುವವರು ತಮ್ಮ ಮನೆಮುಂದೆ ಹಿಮದ ಮೇಲೆಯೇ ದೇವನಾಗರಿಯಲ್ಲಿ ದೊಡ್ಡ ಅಕ್ಷರಗಳಲ್ಲಿ ಜೈ ಶ್ರೀರಾಮ್ ಎಂದು ಬರೆದು ಫೋಟೊ ಕ್ಲಿಕ್ಕಿಸಿ
ಸಂಭ್ರಮಿಸಿದ್ದಾರೆ!

ಹೀಗೆ ಜನಮನವನ್ನು ರಂಜಿಸುತ್ತಿರುವ ರಾಮಭಕ್ತಿರಸವು ಸಾಂಕ್ರಾಮಿಕವಾಗಿ ಹಬ್ಬುವುದಕ್ಕೆ ಕಾರಣವಾದ ಒಂದೆರಡು ಪ್ರಸ್ತುತಿಗಳನ್ನು ನಾನು ಶತಾವ ಧಾನಿ ಡಾ.ಆರ್.ಗಣೇಶರೊಂದಿಗೂ ಹಂಚಿಕೊಂಡಿದ್ದೆ. ಪ್ರತಿಕ್ರಿಯಿಸುತ್ತ ಅವರಾಡಿದ ಈ ಮಾತು ಎಷ್ಟು ಆಪ್ಯಾಯವಾಗಿದೆ, ಸಾಮಾನ್ಯಾ ತಿಸಾಮಾನ್ಯರ ಶ್ರೀರಾಮಸಂಭ್ರಮ ವನ್ನು ಎಷ್ಟು ಚೆನ್ನಾಗಿ ಪ್ರತಿಫಲಿಸಿದೆ ನೋಡಿ: ‘ಈ ಒಂದು ವಿಶೇಷ ಸಂದರ್ಭದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿಷ್ಠಾ ಪನಾ ಸುಮುಹೂರ್ತದಲ್ಲಿ ಅದೆಷ್ಟು ಜನರ ಶ್ರದ್ಧೆ, ಅದೆಷ್ಟು ಜನರ ಪ್ರೀತಿ, ಅದೆಷ್ಟೆಲ್ಲ ರೀತಿಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತ ಇದೆ ಅಂತ ನೋಡಿದಾಗ ತುಂಬ ರೋಮಾಂಚನವಾಗುತ್ತದೆ! ನಿಜವೇ.

ಶುದ್ಧವಾದ ಕಲಾಮೌಲ್ಯದಿಂದ, ತತ್ತ್ವಮೌಲ್ಯದಿಂದ ನೋಡಿದಾಗ ಇಂತಹ ಎಷ್ಟೋ ಪ್ರಯತ್ನಗಳಲ್ಲಿ ಪಾಕವಾಗಲೀ ಪರಿಷ್ಕಾರವಾಗಲೀ ಪ್ರೌಢಿಮೆ ಯಾಗಲೀ ಹೇಳಿಕೊಳ್ಳುವಂಥ ಸೌಂದರ್ಯವಾಗಲೀ ಇಲ್ಲದಿರಬಹುದು. ಆದರೇನಂತೆ, ಪ್ರತಿಯೊಬ್ಬರೂ ತಮ್ಮತಮ್ಮ ದಾದ ಒಂದು ಭಾವದಿಂದ ಅರ್ಪಣೆ ಮಾಡಬೇಕು ರಾಮನಿಗೆ ಅಂತ ಇದೆಯಲ್ಲ ಇದು ತುಂಬ ದಿವ್ಯವಾದದ್ದು, ಬಹಳ ದೊಡ್ಡದು!’ ಹಾಗಿದ್ದರೆ ನನ್ನ ಸಂಭ್ರಮ ಯಾವ ರೀತಿಯದು ಅಂತೀರಾ? ನಾನೂ ರಾಮಭಕ್ತನೇ! ಅಯೋಧ್ಯೆಯಲ್ಲಿ ಈ ಐತಿಹಾಸಿಕ ಘಟನೆಯ ಅವಿಸ್ಮರಣೀಯ ದಿನ ನಮ್ಮ ಜೀವಿತಾವಧಿಯಲ್ಲಿಯೇ ನಡೆದಿದೆ, ಇದಕ್ಕೆ ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೆಮ್ಮೆಪಡುವವರಲ್ಲಿ ನಾನೂ ಇದ್ದೇನೆ.

ಆದರೆ ಸಂಭ್ರಮವನ್ನು ಇದೊಂದು ಚಿಕ್ಕ ಅವಧಿಗೆ ಸೀಮಿತಗೊಳಿಸದೆ, ನನಗೂ ‘ಶ್ರೀರಾಮ ದೇವ ಅಷ್ಟೇಅಲ್ಲ, ಮನಸ್ಸು ಮತ್ತು ಹೃದಯದೊಳಗಿನ ಭಾವ’ ಆಗಿದ್ದಾನೆಯೇ ಎಂದು ಈ ಸಂರ್ಭದಲ್ಲಿ ಒಂದು ಸಿಂಹಾವಲೋಕನ ಮಾಡಿದೆ. ರಾಮ ನನ್ನ ಬದುಕನ್ನಷ್ಟೇ ಅಲ್ಲ ಆಗೊಮ್ಮೆ ಈಗೊಮ್ಮೆ ಬರಹ ಗಳನ್ನೂ ರೂಪಿಸಿದ್ದಾನೆ ಎಂದು ತಿಳಿದುಕೊಂಡೆ. ತುಂಬ ಖುಷಿಯೆನಿಸಿತು. ಆ ಹಿನ್ನೋಟದ ಕೆಲ ಸ್ವಾರಸ್ಯಕರ ಮುಖ್ಯಾಂಶಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅದೇ ಇಂದಿನ ತಲೆಬರಹದಲ್ಲಿ ಸೂಚ್ಯವಾಗಿ ತಿಳಿಸಿದ ಕೋ.ಸಂ.ಬ.ರೀ!

ನನ್ನ ತಂದೆಯವರ ಹೆಸರು ರಾಮ. ತಾಯಿಯವರ ಹೆಸರು ಸೀತಾ. ಇದಕಿಂತ ಸೌಭಾಗ್ಯ ಇನ್ನೇನು ಬೇಕು! ಈಗ ಇಬ್ಬರೂ ಇಲ್ಲ. ಆದರೆ ಜೀವಿತಕಾಲದಲ್ಲಿ ನಮ್ಮ ತಂದೆಯವರೂ ಮರ್ಯಾದಾ ಪುರುಷೋತ್ತಮರಾಗಿಯೇ ಬಾಳಿದವರು. ತಾಯಿಯವರೂ ಸೀತೆಯಂತೆಯೇ ಕಷ್ಟಗಳನ್ನು ನುಂಗಿ ಬದುಕಿನಲ್ಲಿ ಸಂತಸಕಂಡ ವರು. ಹಾಗಾಗಿ, ಗಣೇಶನು ಹೇಗೆ ಪ್ರಪಂಚಪರ್ಯಟನೆಯೆಂದು ತಂದೆತಾಯಿಗೇ ಒಂದು ಪ್ರದಕ್ಷಿಣೆ ಬಂದನೋ ರಾಮಭಕ್ತಿಯ ವಿಷಯ ದಲ್ಲಿ ನಾನು, ನನ್ನ ಸಹೋದರ ಸಹೋದರಿಯರೆಲ್ಲ ಅದೇ ಜಾಣ್ಮೆಯವರು. ನಮ್ಮ ಊರಿನಲ್ಲಿರುವುದು ಪರಶುರಾಮ ದೇವಸ್ಥಾನವಾದರೂ ಅಲ್ಲಿ ಪ್ರತಿವರ್ಷ ರಾಮನವಮಿಯಂದು ನಮ್ಮ ಕುಟುಂಬದ ವತಿಯಿಂದಲೇ ಇಡೀ ದಿನದ ಸೇವೆ, ಪೂಜೆ, ಉತ್ಸವ ನಡೆಯುತ್ತದೆ. ಅದೇ ದೇವಸ್ಥಾನದಲ್ಲಿ ಪಾಠಾಳಿಯೂ ಆಗಿದ್ದ ದೊಡ್ಡಪ್ಪ ವಿಽಲೀಲೆಯೋ ಎಂಬಂತೆ ರಾಮನವಮಿಯಂದೇ ದೈವಾಧೀನರಾದರು.

ಆಮೇಲಿಂದ ನಮ್ಮ ದೊಡ್ಡಮ್ಮ ಬದುಕಿದ್ದಷ್ಟೂ ಕಾಲ ಮತ್ತಷ್ಟು ಉತ್ಕಟ ರಾಮಭಕ್ತೆಯಾಗಿದ್ದರು. ಅವರ ಮನೆಯಲ್ಲೇ ಚಂದದ ರಾಮವಿಗ್ರಹ ವೊಂದನ್ನು ಪುಟ್ಟ ತೊಟ್ಟಿಲಲ್ಲಿಟ್ಟು ಆಗಾಗ ಅದನ್ನು ಜೀಕುತ್ತ, ಮನೆಗೆ ಬಂದವರಿಗೂ ‘ನೋಡಿ. ಇವನೇ ನನ್ನ ರಾಮ’ ಎಂದು ತೋರಿಸುತ್ತ ಭಾವಪರ
ವಶರಾಗುತ್ತಿದ್ದರು. ನನ್ನ ದೊಡ್ಡಪ್ಪನ ಮಗ ಶಂಕರಣ್ಣ ಸಹ ಅಪ್ಪಟ ರಾಷ್ಟ್ರವಾದಿ ಅಪ್ರತಿಮ ರಾಮಭಕ್ತ. ಕರಸೇವಕರಾಗಿ ಅಯೋಧ್ಯೆಗೆ ಹೋಗಿ ಬಂದವರು. ಬದುಕಿದ್ದಿದ್ದರೆ ಈ ಶುಭಗಳಿಗೆಯನ್ನು ಅದೆಷ್ಟು ಸಂಭ್ರಮಿಸುತ್ತಿದ್ದರೋ! ವರ್ಷಗಳ ಹಿಂದೆ ಅವರ ಅಭಿನಂದನಾ ಗ್ರಂಥ ಸಂಘಜೀವಿ ಪ್ರಕಟವಾದಾಗ ತಿಳಿರುತೋರಣದಲ್ಲಿ ಬರೆದಿದ್ದೇನೆ. ಅಂದಹಾಗೆ ನಾನು ‘ಎಳೆಯರ ರಾಮಾಯಣ’ ಪುಸ್ತಕವನ್ನೋದಿ ಪರೀಕ್ಷೆ ಬರೆದು ಪದಕ ಗಳಿಸಿದ್ದು ಶಂಕರಣ್ಣನ ಪ್ರಚೋದನೆಯಿಂದಲೇ ಎಂದು ನೆನಪು.

ಅದಷ್ಟು ಬಾಲ್ಯದಲ್ಲಿ ನನ್ನ ಮನೆ-ಕುಟುಂಬದಲ್ಲಿ ರಾಮಭಕ್ತಿಯ ವಿಚಾರವಾದರೆ, ನಾನೋದಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (ಅದೂ ಈಗ ಮುಚ್ಚಿದೆ ಎನ್ನಲು ವಿಷಾದವೆನಿಸುತ್ತಿದೆ) ನಾವು ಪ್ರತಿ ಶುಕ್ರವಾರ ಭಜನೆಯ ಕೊನೆಗೆ ‘ಜಯ ಜಯ ಆರತ ರಾಮ ತುಮ್ಹಾರೇ ಪ್ರಾಣನಾಥ ರಘುನಾಥ ಮುರಾರೇ…’ ಹಾಡುತ್ತಿದ್ದೆವು. ಅವಧಿ ಭಾಷೆಯ ಆ ಹಾಡು ಎಷ್ಟು ಅರ್ಥ ವಾಗಿತ್ತೋ ರಾಮನಿಗೇ ಗೊತ್ತು. ಆದರೆ, ಸದಾ ಎನ್ನ ನಾಲಗೆಯಲಿ ಬರಲಿ ರಾಮನಾಮ…, ರಾಮ ಮಂತ್ರವ ಜಪಿಸೋ.., ರಾಮ ರಾಮ ರಾಮ ರಾಮ ರಾಮನಾಮ ತಾರಕಂ… ಮುಂತಾದ ಭಜನೆಹಾಡುಗಳು ಆಗ ಬಾಯಿಪಾಠ ಆದವು ಈಗಲೂ ಇವೆ.

ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಶುಕ್ರವಾರ ಭಜನೆ ಇತ್ತು. ಅಲ್ಲಿ ಮುಕ್ತಾಯದ ಹಾಡು ಇದ್ದದ್ದು ರಘುಪತಿ ರಾಘವ ರಾಜಾ ರಾಮ್ ಪತಿತ ಪಾವನ ಸೀತಾರಾಮ್. ಹಾಗೆಯೇ ನಮ್ಮೂರಿನ ದೇವಸ್ಥಾನದಲ್ಲಿ ಏಕಾದಶಿಯಂದು ಭಜನೆ ಇರುತ್ತಿತ್ತು. ಚಂದ್ರ ಶೇಖರ ಡೋಂಗ್ರೆ ಎಂಬುವವರು ಓ ರಾಮ ನೀನಾಮಮೇಮಿ ರುಚಿರಾ ಎಂಬ ಹಾಡೊಂದನ್ನು ಕಲಿಸಿಕೊಡುತ್ತಿದ್ದರು. ಅದು ಭದ್ರಾಚಲ ರಾಮದಾಸರ ಕೃತಿ ಎಂದು ನನಗೆ ಆಗ ಗೊತ್ತಿರಲಿಲ್ಲ.
ಉದ್ಯೋಗನಿಮಿತ್ತ ಹೈದರಾಬಾದ್‌ಗೆ ಹೋಗುವುದಕ್ಕೆ ಹತ್ತಿಪ್ಪತ್ತು ವರ್ಷಗಳ ಮುಂಚೆಯೇ ನನ್ನ ಕಿವಿಗಳೊಳಗೆ ತೆಲುಗು ಹೊಕ್ಕಿದ್ದು ಆ ರಾಮನಾಮದ ರೀತಿಯಲ್ಲೇ. ಶಾಲಾದಿನಗಳನ್ನು ನೆನಪಿಸಿ ಕೊಂಡಾಗ ಸಿಗುವ ಇನ್ನೊಂದು ಶ್ರೀರಾಮ ಸ್ಮರಣೆಯೆಂದರೆ ಶ್ರೀರಾಮ ಕಾಪಿ ಪುಸ್ತಕ. ಕನ್ನಡಕ್ಕೆ ಎರಡು ಗೆರೆಗಳದು, ಹಿಂದೀಗೆ ಮೂರು ಗೆರೆಗಳದು, ಇಂಗ್ಲಿಷ್‌ಗೆ ನಾಲ್ಕು ಗೆರೆಗಳದು- ಅಂತಹ ಶ್ರೀರಾಮ ಕಾಪಿ ಪುಸ್ತಕಗಳಲ್ಲಿ ಬರೆದೇ ನನ್ನ ಕೈಬರಹವನ್ನು
ತಕ್ಕಮಟ್ಟಿಗೆ ಚಂದವಾಗಿಟ್ಟುಕೊಂಡಿದ್ದೇನೆ.

ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾಗಿನ ಒಂದು ನೆನಪೆಂದರೆ ಅಲ್ಲಿ ಪಿ.ಜೆ.ಬಡಾವಣೆಯಲ್ಲಿರುವ ಶ್ರೀರಾಮ ದೇವಸ್ಥಾನಕ್ಕೆ ನಾವು ಆಗಾಗ ಹೋಗುತ್ತಿದ್ದೆವು. ಕೆಲವರು ಸೆಮಿಸ್ಟರ್ ಪರೀಕ್ಷೆಗಳ ಮುನ್ನ ಹಾಲ್‌ಟಿಕೇಟ್ ತಗೊಂಡುಹೋಗಿ ಅದಕ್ಕೆ ಪೂಜೆ ಮಾಡಿಸಿ ಕೊಂಡು ಬರುತ್ತಿದ್ದರು. ಕಂಪ್ಯೂ ಟರ್ ಸೈನ್ಸ್ ವಿದ್ಯಾರ್ಥಿಗಳು ತಮ್ಮ Random Access Memory (RAM)ಅನ್ನು ದಕ್ಷಗೊಳಿ ಸುವಂತೆ ರಾಮನಲ್ಲಿ ಕೇಳುತ್ತಿದ್ದರೇನೋ. ರಾಮರಕ್ಷಾ ಸ್ತೋತ್ರವು ಚಿಕ್ಕಂದಿನಲ್ಲಿ ಪ್ರತಿದಿನ ಸಂಜೆಹೊತ್ತು ಬಾಯಿಪಾಠದ ಒಂದು ಭಾಗ. ಅದರಲ್ಲಿ ಬರುವ ‘ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ| ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ|’ ಶ್ಲೋಕವನ್ನು ಸೀತಾ ಕಲ್ಯಾಣ ಹರಿಕಥೆಯಲ್ಲಿ ಭದ್ರಗಿರಿ ಕೇಶವದಾಸರು ಬಣ್ಣಿಸುತ್ತ
ರಾಮನನ್ನು ಯಾರ್ಯಾರು ಯಾವ್ಯಾವ ಹೆಸರುಗಳಿಂದ ಕರೆಯು ತ್ತಿದ್ದರು ಎಂದು ವಿವರಿಸಿದ್ದು ಅತಿಸ್ವಾರಸ್ಯಕರ. ಅದನ್ನು ನಾನು ನನ್ನ ಅಂಕಣ ಬರಹಗಳಲ್ಲೂ ಒಂದೆರಡು ಸರ್ತಿ ಉಲ್ಲೇಖಿಸಿದ್ದಿದೆ. ಅಂತೆಯೇ ‘ರಾಮೋ ರಾಜಮಣಿಸ್ಸದಾ ವಿಜಯತೇ ರಾಮಂ ರಮೇಶಂ ಭಜೇ…’ ಶ್ಲೋಕದಲ್ಲಿ
ಪ್ರಥಮಾದಿಂದ ಸಂಬೋಧನಾ ವರೆಗೆ ಎಂಟೂ ವಿಭಕ್ತಿಗಳು ಬರುವುದು ಬುಧಕೌಶಿಕ ಋಷಿಯ ಬಗ್ಗೆ ನನಗೆ ಅಭಿಮಾನ ಹೆಚ್ಚಾಗಲಿಕ್ಕೆ ಕಾರಣ.

ಮದುವೆ-ಮುಂಜಿ ಸಮಾರಂಭಗಳ ಭೋಜನಕಾಲದಲ್ಲಿ ಚೂರ್ಣಿಕೆಯಾಗಿ ಹೇಳುವ ಏಕಶ್ಲೋಕೀ ರಾಮಾಯಣ ‘ಪೂರ್ವಂ ರಾಮ ತಪೋವನಾ ದಿಗಮನಂ ಹತ್ವಾ ಮೃಗಂ ಕಾಂಚನಂ…’ ನನಗೆ ಅಚ್ಚುಮೆಚ್ಚು. ನನ್ನ ದೊಡ್ಡಅಣ್ಣನಿಂದ ಕಲಿತ ‘ಹುಟ್ಟಿ-ಕಟ್ಟಿ-ಕುಟ್ಟಿ-ಮುಟ್ಟಿ’ ನಾಲ್ಕೇ ನಾಲ್ಕು ಪದಗಳ ರಾಮಾಯಣ ಸಹ. ಇವೆಲ್ಲವನ್ನೂ ತಿಳಿರು ತೋರಣದಲ್ಲಿ ಈಹಿಂದೆ ದಾಖಲಿಸಿದ್ದೇನೆ. ಅಂತೆಯೇ ಗ.ದಿ. ಮಾಡಗೂಳಕರರ ಗೀತರಾಮಾಯಣ, ವಾಲ್ಮೀಕಿ ರಾಮಾಯಣ ದಲ್ಲಿ ಬರುವ ಶಾಪಗಳು ಮತ್ತು ವರಗಳು, ಹಲಸಿನ ಮರವೂ ಸೇರಿದಂತೆ ವಿವಿಧ ಸಸ್ಯಸಂಪತ್ತಿನ ಉಲ್ಲೇಖಗಳು, ತುಲಸೀದಾಸರ ದೆನ್ನಲಾದ ರಾಮಗಣಿತ (ಯಾರದೇ ಹೆಸರಾದರೂ ಸರಿ, ಅದರಲ್ಲಿರುವ ಅಕ್ಷರಗಳನ್ನು ಎಣಿಸಿ ನಾಲ್ಕರಿಂದ ಗುಣಿಸಿ ಗುಣಲಬ್ಧಕ್ಕೆ ಐದನ್ನು ಕೂಡಿಸಿ ಆಗ ಬಂದ ಸಂಖ್ಯೆಯನ್ನು ದುಪ್ಪಟ್ಟು ಮಾಡಿ ಬಂದ ಉತ್ತರವನ್ನು ಎಂಟರಿಂದ ಭಾಗಿಸಿದಾಗ ಭಾಗಲಬ್ಧ ಎಷ್ಟೇ ಇರಲಿ, ಶೇಷ ಉಳಿಯುವುದು ಎರಡೇ.

ಆ ಎರಡು ಅಕ್ಷರಗಳೇ ರಾಮ!) ಚಮತ್ಕಾರ- ಇವೂ ಈಹಿಂದೆ ತೋರಣದ ಎಲೆಗಳಾಗಿರುವವೇ. ಚಿತ್ರಗೀತೆಗಳ ವಿಚಾರಕ್ಕೆ ಬಂದರೆ ಭೂಕೈಲಾಸ ಚಿತ್ರಕ್ಕಾಗಿ
ಸಿರ್ಗಾಳಿ ಗೋವಿಂದರಾಜನ್ ಹಾಡಿದ ‘ರಾಮನ ಅವತಾರ ರಘು ಕುಲ ಸೋಮನ ಅವತಾರ…’ ನನಗೆ ಸದಾ ನೆನಪಲ್ಲಿರುವಂಥದ್ದು. ಹೇಮಾವತಿ ಚಿತ್ರದ ‘ಗುಹನಲ್ಲಿ ಸೋದರವಾತ್ಸಲ್ಯ ಕಂಡೆ…’ ಕೂಡ ತುಂಬ ಇಷ್ಟದ್ದು. ಈ ಹಾಡಿಗೆ ಸಂಬಂಧಿಸಿದಂತೆ ಒಂದು ವಿಶೇಷ ವಿದೆ. ಕೆಲ ವರ್ಷಗಳ ಹಿಂದೆ ವಿಚಾರ ವ್ಯಾಧಿಯೊಬ್ಬ ಯಥಾಪ್ರಕಾರ ರಾಮಾಯಣದ ಬಗ್ಗೆ ಕೆಟ್ಟ ಮಾತಾಡಿದ್ದ. ಅದನ್ನು ಖಂಡಿಸಿ ನಾನು ಫೇಸ್‌ಬುಕ್‌ನಲ್ಲಿ ಬರೆದಿದ್ದೆ.

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ ಹಾಡಿನ ಸಾಲನ್ನು ಅರ್ಥಮಾಡ್ಕೊಂಡಿದ್ದರೂ ಸಾಕಿತ್ತು ಆ ಆಸಾಮಿ ಎಂದು ನನ್ನ ಪೋಸ್ಟ್ ಅನ್ನು ಅನುಮೋದಿಸಿ ಕಾಮೆಂಟ್ ಮಾಡಿದ್ದ ಅಲೆಕ್ಸಾಂಡರ್ ಮೈಕೇಲ್ (ಹಾಸನ ಮೂಲದವರು ಈಗ ಟೆಕ್ಸಸ್ ಕೌಬಾಯ್ ಕನ್ನಡಿಗ) ಎಂಬೊಬ್ಬ ಪ್ರತಿಭಾವಂತ ಸಜ್ಜನ ನನಗೆ
ಸ್ನೇಹಿತನಾಗಿ ದೊರೆತದ್ದು ಸ್ಮರಣೀಯ. ಅದೇ ತೆರನಾದ ಅಚ್ಚರಿ ನಿನ್ನೆಯಷ್ಟೇ ಇನ್ನೊಂದು ನಡೆಯಿತು. ಕನ್ನಡ ವರ್ಣಮಾಲೆಯಿಂದ ಸಿಂಗರಿಸಿದ ಸರಳ ರಾಮಾಯಣ ಕಥನವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೆ ಎಂದೆನಷ್ಟೆ? ವಾಟ್ಸಪ್‌ನಲ್ಲಿ ಒಬ್ಬರು ಚಂದದ ಕೈಬರಹದಲ್ಲಿ ಈರೀತಿ ಬರೆದು ಪಟ ತೆಗೆದು ಕಳುಹಿಸಿ ಪ್ರತಿಕ್ರಿಯಿಸಿದರು:  ‘ಅಹಾ! ನಮ್ಮ ರಾಮನಿಗೆ ಅಕ್ಷರಾಂಜಲಿ. ಆಗಾಗ್ಗೆ ಹೀಗೆ ರಾಮನ ಕಥೆ ಕೇಳುವಂತಾಗಲಿ; ಇಷ್ಟೇ ಸರಳ ಸುಂದರ. ಈಗ ಎಲ್ಲ ಕಾಂಡ ಓದಬಹುದು. ಪದ್ಮಶ್ರೀಯವರ ರಾಮಪ್ರಸಾದ ನಮ್ಮೆಲ್ಲರಿಗೂ ತಲುಪಿತು.’

ಹಾಗೆ ಬರೆದು ಕಳಿಸಿದವರು ಮಂಗಳೂರಿನ ಒಬ್ಬ ಮಹಿಳೆ. ಆಕಾಶವಾಣಿಯ ವಾಟ್ಸಪ್ ಗ್ರೂಪ್‌ನಲ್ಲಿ ನನಗೆ ಪರಿಚಯ. ಹೆಸರು ಗೊತ್ತೇ? ಸಫಿಯಾ ಹಮೀದ್. ಭಾರತೀಯ ಸಂಸ್ಕೃತಿಯನ್ನು ಗೌರವಿಸುವವರು. ಸಾಹಿತ್ಯಪ್ರಿಯರು. ರಾಮಭಕ್ತೆ ಎಂದು ಬೇರೆ ಹೇಳಬೇಕಿಲ್ಲ! ‘ಶ್ರೀರಾಮ ದೇವ ಅಷ್ಟೇ ಅಲ್ಲ, ನಮ್ಮೆಲ್ಲರ ಮನಸ್ಸು ಮತ್ತು ಹೃದಯದೊಳಗಿನ ಭಾವ’ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಈಗ ಎಲ್ಲೆಲ್ಲೂ ಗರಿಗೆದರಿ ವಿಜೃಂಭಿಸುತ್ತಿರುವುದು ಅದೇ- ರಾಮ ಎಂಬ ಅತಿಮಧುರ, ಆಹ್ಲಾದಕರ, ಆನಂದದಾಯಕ ಭಾವನೆ. ಎದೆಯಲ್ಲಿ ಹದಿನಾರಾಣೆ ಅಭಿಮಾನವುಳ್ಳ ಭಾರತೀಯರೆಲ್ಲರ ಅಸ್ಮಿತೆ.