Sunday, 23rd June 2024

ಈಶ್ಬರಪ್ಪ ಅವರಿಗೆ ಬಂಪರ‍್ ಆಫರ್‌

KSE

ಮೂರ್ತಿಪೂಜೆ

ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ರಾಧಾಮೋಹನದಾಸ್ ಅಗರ್ವಾಲ್ ಮೊನ್ನೆ ಈಶ್ವರಪ್ಪ ಅವರನ್ನು ಸಂಪರ್ಕಿಸಿ
ದ್ದಾರೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಅವರಿಗೆ ಸೆಡ್ಡು ಹೊಡೆದಿರುವ ಈಶ್ವರಪ್ಪ ಅವರನ್ನು ಸಮಾಧಾನಿಸುವುದು ಅಗರ್ವಾಲ್ ಅವರ ಉದ್ದೇಶ.

ಅಂದ ಹಾಗೆ, ಈ ಕ್ಷೇತ್ರದಲ್ಲಿ ಈಶ್ವರಪ್ಪ ಅವರು ಒಂದು ‘ಗರಂ ಹವಾ’ ಸೃಷ್ಟಿಸಿರುವುದು ನಿಜವಾದರೂ ಅದರ ಹೊಡೆತಕ್ಕೆ ರಾಘವೇಂದ್ರ ಕುಸಿದುಹೋಗುತ್ತಾರೆ ಅಂತೇನೂ ಇಲ್ಲ. ಆದರೆ ಪಕ್ಷದ ಅಭ್ಯರ್ಥಿಯ ವಿರುದ್ಧ ಈಶ್ವರಪ್ಪ ತೊಡೆ ತಟ್ಟುತ್ತಾ ಹೋಗುವುದು ಆರೆಸ್ಸೆಸ್ ವರಿಷ್ಠರಿಗೆ ಬೇಕಾಗಿಲ್ಲ. ಎಷ್ಟೇ ಅದರೂ ಈಶ್ವರಪ್ಪ ಸಂಘ ಪರಿವಾರದ ನಿಷ್ಠರು. ಕರ್ನಾಟಕದಲ್ಲಿ ಯಡಿಯೂರಪ್ಪ, ಅನಂತಕುಮಾರ್ ಅವರ ಜತೆ ಸೇರಿ ಬಿಜೆಪಿಯನ್ನು ಕಟ್ಟಿದವರು. ಅಂಥವರು ಮಗನಿಗೆ
ಲೋಕಸಭೆ ಸ್ಪರ್ಧೆಗೆ ಟಿಕೆಟ್ ಸಿಗಲಿಲ್ಲ ಅಂತ ಸಿಟ್ಟಾಗಿರುವುದೇನೋ ಸಹಜ.

ಹಾಗಂತ ಅವರನ್ನು ಸಮಾಧಾನಿಸದೆ ಸುಮ್ಮನಿರುವುದು ಸರಿಯಲ್ಲ ಎಂಬುದು ಆರೆಸ್ಸೆಸ್ ವರಿಷ್ಠರ ಯೋಚನೆ. ಹಾಗಂತಲೇ ಅವರು ಕೇಂದ್ರ ಗೃಹ ಸಚಿವ
ಅಮಿತ್ ಶಾ ಅವರಿಗೆ ಈ ಅಂಶವನ್ನು ವಿವರಿಸಿದ್ದಾರೆ. ಯಾವಾಗ ಈಶ್ವರಪ್ಪ ಅವರ ವಿಷಯದಲ್ಲಿ ಆರೆಸ್ಸೆಸ್ ವರಿಷ್ಠರು ಮೃದುಧೋರಣೆ ಹೊಂದಿದ್ದಾರೆ ಎಂಬುದು ಕನ್ ಫರ್ಮ್ ಆಯಿತೋ, ಅಮಿತ್ ಶಾ ತಮ್ಮ ವರಸೆ ಬದಲಿಸಿ ರಾಧಾಮೋಹನದಾಸ್ ಅಗರ್ವಾಲ್ ಅವರಿಗೆ ಮೆಸೇಜು ಮುಟ್ಟಿಸಿದ್ದಾರೆ. ಈಶ್ವರಪ್ಪ ಅವರ ಮನವೊಲಿಸಲು ಏನು ಮಾಡಬೇಕೋ ಅದನ್ನೆಲ್ಲ ಮಾಡಿ ಎಂದಿದ್ದಾರೆ.

ಹೀಗೆ ಸೂಚನೆ ಸಿಕ್ಕಿದ್ದೇ ತಡ, ಮೊನ್ನೆ ಈಶ್ವರಪ್ಪ ಅವರನ್ನು ಸಂಪರ್ಕಿಸಿದ ರಾಧಾಮೋಹನದಾಸ್ ಅಗರ್ವಾಲ್ ನೇರವಾಗಿ ವಿಷಯ ಪ್ರಸ್ತಾಪಿಸಿದ್ದಾರೆ. ‘ಈಶ್ವರಪ್ಪಾಜೀ, ನೀವು ಪಕ್ಷ ನಿಷ್ಠರು. ಹೀಗಾಗಿ ಯಾವುದೇ ಕಾರಣಕ್ಕೂ ನಿಮ್ಮನ್ನು ಕಳೆದು ಕೊಳ್ಳುವುದು ವರಿಷ್ಠರಿಗೆ ಇಷ್ಟವಿಲ್ಲ. ಇವತ್ತು ನಿಮಗೆ ನೋವಾ
ಗಿರುವುದು ನಿಜ. ಅದು ವರಿಷ್ಠರ ಗಮನಕ್ಕೂ ಬಂದಿದೆ. ಆದರೆ ಈಗಾಗಲೇ ಪಕ್ಷ ಒಂದು ನಿರ್ಧಾರ ತೆಗೆದುಕೊಂಡು ಮುಂದಡಿ ಇಟ್ಟಿದ್ದಾಗಿದೆ. ಹೀಗಾಗಿ ನೀವು ಕೂಲ್ ಆಗಬೇಕು. ಮೋದೀಜಿ ಪುನಃ ಪ್ರಧಾನಿ ಆಗಬೇಕು ಎಂಬ ವಿಷಯದಲ್ಲಿ ನೀವು ಎಷ್ಟು ಪರ್ಟಿಕ್ಯುಲರ್ ಅಂತ ನಮಗೆ ಗೊತ್ತು.

ಹೀಗಾಗಿ ಅಮಿತ್ ಶಾ ಅವರು ಎರಡು ವಿಷಯಗಳನ್ನು ನಿಮಗೆ ತಿಳಿಸಲು ಹೇಳಿದ್ದಾರೆ. ಮೊದಲನೆಯದು, ಲೋಕಸಭಾ ಚುನಾವಣೆಯ ನಂತರ ನೀವು ಗವರ್ನರ್ ಆಗಬೇಕು ಎಂಬುದು ಪಕ್ಷದ ಇಚ್ಛೆ. ಒಂದು ವೇಳೆ ನಿಮಗೆ ರಾಜ್ಯ ಬಿಟ್ಟು ಬರಲು ಮನಸ್ಸಿಲ್ಲದಿದ್ದರೆ ವಿಧಾನಪರಿಷತ್ ಸದಸ್ಯರಾಗಿ ಪ್ರತಿಪಕ್ಷ ನಾಯಕರಾಗಬಹುದು. ನಿಮಗೇ ಗೊತ್ತಿರುವಂತೆ ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನಿಸ್ಸಂಶಯವಾಗಿ ಸಂಸತ್ತಿಗೆ ಹೋಗುತ್ತಾರೆ. ಹೀಗಾಗಿ ಈ ಜಾಗಕ್ಕೆ ಬರಲು ನಿಮಗೆ ಯಾವ ಅಡ್ಡಿಯೂ ಇಲ್ಲ’ ಅಂತ
ರಾಧಾಮೋಹನದಾಸ್ ಅಗರ್ವಾಲ್ ಹೇಳಿದ್ದಾರೆ.

ಈ ಮಾತು ಕೇಳಿದ ಈಶ್ವರಪ್ಪ ಅವರು, ‘ಸರ್, ನಾನು ತುಂಬ ಮುಂದೆ ಬಂದಿದ್ದೇನೆ. ಹೀಗಾಗಿ ಕಣದಿಂದ ಹಿಂದೆ ಸರಿಯಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಿಜೆಪಿಗೇ ವಾಪಸ್ಸಾಗ ಬೇಕು ಎಂಬುದು ನನ್ನಿಚ್ಛೆ’ ಎಂದಿದ್ದಾರೆ. ಆದರೆ ಪಟ್ಟು ಬಿಡದ ರಾಧಾಮೋಹನದಾಸ್ ಅಗರ್ವಾಲ್, ‘ನೋ ನೋ, ನೀವು ಚುನಾವಣೆಯ ಕಣದಿಂದ ಹಿಂದೆ ಸರಿಯಬೇಕು. ನಾಮಪತ್ರ ವಾಪಸ್ ಪಡೆಯಲು ಇನ್ನೂ ಟೈಮ್ ಇದೆ. ಅರಾಮವಾಗಿ ಯೋಚಿಸಿ. ಒಂದು ಪಾಸಿಟಿವ್ ಡಿಸೀಷನ್ನಿಗೆ ಬನ್ನಿ’ ಅಂತ ಮನವಿ ಮಾಡಿದ್ದಾರೆ. ಮುಂದೇನು ಕತೆಯೋ? ಸೋಮಣ್ಣ ಗೆಲ್ಲಲೇಬೇಕು ಅಂದ್ರು ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಕಳೆದ ವಾರ ಸದಾಶಿವನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ರಾಧಾಮೋಹನ ದಾಸ್ ಅಗರ್ವಾಲ್ ಅವರು ಅಮಿತ್ ಶಾ ಕೊಟ್ಟ ಸಂದೇಶವನ್ನು ದಾಟಿಸಿದ್ದಾರೆ.

‘ನೋಡಿ ಅಧ್ಯಕ್ಷರೇ, ನೀವೆಷ್ಟೇ ಹೇಳಿದರೂ ಕರ್ನಾಟಕದ ನೆಲೆಯಲ್ಲಿ ಬಿಜೆಪಿ ವೇಗ ನಿರೀಕ್ಷಿಸಿದಂತಿಲ್ಲ. ಅದೇ ಕಾಲಕ್ಕೆ ಕಾಂಗ್ರೆಸ್ ಪರಿಸ್ಥಿತಿ ದಿನದಿಂದ ದಿನಕ್ಕೆ ಉತ್ತಮವಾಗುತ್ತಾ ಹನ್ನೆರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಮೊದಲು ನಮ್ಮಲ್ಲಿನ ಅನೈಕ್ಯತೆ ನಿವಾರಣೆಯಾಗಬೇಕು. ಉದಾಹರಣೆಗೆ ತುಮಕೂರಿನಲ್ಲಿ ನಮ್ಮ ಅಭ್ಯರ್ಥಿ ವಿ.ಸೋಮಣ್ಣ ಅವರನ್ನೇ ತೆಗೆದುಕೊಳ್ಳಿ. ಸರಿಯಾದ ದಾರಿಯಲ್ಲಿ ನಾವು ಹೋರಾಡಿದರೆ ಸೋಮಣ್ಣ ಗೆಲ್ಲಲೇಬೇಕು. ಆದರೆ ಕ್ಷೇತ್ರದ ವ್ಯಾಪ್ತಿಯಲ್ಲಿ ನೊಣಬ ಲಿಂಗಾಯತರು ತಿರುಗಿ ಬೀಳುವಂತೆ ಕಾಣುತ್ತಿದೆ. ಇದೇ ರೀತಿ ಸ್ಥಳೀಯವಾಗಿ ಸ್ವಪಕ್ಷೀಯರನ್ನು ಎತ್ತಿ ಕಟ್ಟಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಆದರೆ ಯಾವ ಕಾರಣಕ್ಕೂ ತುಮಕೂರಿನಲ್ಲಿ ಸೋಮಣ್ಣ ಸೋಲಬಾರದು. ಹೀಗಾಗಿ ನೀವು ಮತ್ತು ಯಡೂರಪ್ಪಾಜಿ ಇದನ್ನು ಸರಿಪಡಿಸಬೇಕು ಎಂಬುದು ಅಮಿತ್ ಶಾ ಅವರ ಸೂಚನೆ’ ಎಂದಿದ್ದಾರೆ. ಹಾಗೆಯೇ ಮುಂದುವರಿದು, ‘ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ರೇಣುಕಾಚಾರ್ಯ ಆಂಡ್ ಟೀಮು ಅಡ್ಡಗಾಲು ಹಾಕುತ್ತಿದೆ. ಕೊಪ್ಪಳದಲ್ಲಿ ಟಿಕೆಟ್ ತಪ್ಪಿದ ಮೇಲೆ ಕರಡಿ ಸಂಗಣ್ಣ ಅವರನ್ನು ಸಮಾಧಾನಿಸುವ ಕೆಲಸ ಪ್ರಾಪರ್ ಆಗಿ ನಡೆದಿಲ್ಲ. ಬೆಳಗಾವಿ ಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಕೋರೆ, ಕವಟಗಿ ಮಠ ಪ್ರಾಬ್ಲಂ ಆಗಿದ್ದಾರೆ. ಧಾರವಾಡದಲ್ಲಿ ಪ್ರಲ್ಹಾದ್ ಜೋಷಿ ವಿರುದ್ಧ ಲಿಂಗಾಯತರನ್ನು ಕನ್‌ಸಾಲಿಡೇಟ್ ಮಾಡುವ ಕೆಲಸವಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಅವರಿಗೆ ಒಳ ಏಟು ಬೀಳುವ ಲಕ್ಷಣಗಳು ಕಾಣುತ್ತಿವೆ.

ಹೀಗಾಗಿ ಈ ಎಲ್ಲ ಅಂಶಗಳ ಮೇಲೆ ನೀವು ಗಮನ ಹರಿಸಬೇಕು ಅಂತ ಅಮಿತ್ ಶಾ ಮೆಸೇಜು ಕೊಟ್ಟಿದ್ದಾರೆ. ಒಂದು ವೇಳೆ ಇವೆಲ್ಲ ಸರಿಯಾಗದಿದ್ದರೆ ಲೋಕಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಪಕ್ಷವನ್ನು ಪುನರ್‌ರಚಿಸುವುದು ಅನಿವಾರ್ಯವಾಗಬಹುದು ಎಂಬುದು ಅಮಿತ್ ಶಾ ಅವರ ಯೋಚನೆ’ ಎಂದಿದ್ದಾರೆ. ಯಾವಾಗ ರಾಧಾಮೋಹನದಾಸ್ ಅಗರ್ವಾಲ್ ಅವರು ಈ ಮೆಸೇಜು ಕೊಟ್ಟರೋ, ತುಮಕೂರು, ಬೆಳಗಾವಿ, ಕೊಪ್ಪಳ, ದಾವಣಗೆರೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿಯ ಭಿನ್ನಮತ ಕೂಲ್ ಆಗುವ ಲಕ್ಷಣ ಗಳು ಕಾಣುತ್ತಿವೆ. ಅರ್ಥಾತ್, ಯಡಿಯೂರಪ್ಪ ಮತ್ತು ವಿಜಯೇಂದ್ರ ಖುದ್ದಾಗಿ ಭಿನ್ನಮತೀಯ ನಾಯಕರನ್ನು ಕಂಟ್ರೋಲು ಮಾಡತೊಡಗಿದ್ದಾರೆ.

ಪರಿಣಾಮ? ಕುಸಿಯುತ್ತಿದ್ದ ಬಿಜೆಪಿಯ ಗ್ರಾಫ್ ಏರುಮುಖ ಕಾಣುತ್ತಿದೆ ಎಂಬುದು ಕಮಲ ಪಾಳಯದ ವಿಶ್ವಾಸ,

ಅರಮನೆಗೆ ಹೊಸ ಕಿಂಡಿ?

ಈ ಮಧ್ಯೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ ಒಡೆಯರ್ ಮುಂದಿದ್ದಾರಾದರೂ ಕೈ ಪಾಳಯಕ್ಕೆ ಪವಾಡದ ಕನಸು ಬೀಳುತ್ತಿದೆ. ಮೈಸೂರು ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಲಕ್ಷ್ಮಣ್ ಕಾಂಗ್ರೆಸ್ ಅಭ್ಯರ್ಥಿಯಾದರೂ ಆಳದಲ್ಲಿ ಇದು ಸಿಎಂ ಸಿದ್ದರಾಮಯ್ಯ ಅವರಿಗೆ ‘ಇಜ್ಜತ್ ಕಿ ಸವಾಲ್’ನ ಕ್ಷೇತ್ರವಾಗಿ ಪರಿಣಮಿಸಿದೆ ಅಂದ ಹಾಗೆ, ಬೇರೆಲ್ಲ ಕ್ಷೇತ್ರಗಳಲ್ಲಿ ಅಹಿಂದ ಮತಗಳನ್ನು ಕ್ರೋಡೀಕರಿಸುವುದಕ್ಕೂ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಅಹಿಂದ ಮತಗಳನ್ನು ಕ್ರೋಡೀಕರಿಸುವುದಕ್ಕೂ ವ್ಯತ್ಯಾಸವಿದೆ.

ಯಾಕೆಂದರೆ ಮೈಸೂರಿನಲ್ಲಿ ದಲಿತ ವರ್ಗಕ್ಕೆ ಸೇರಿದ ನಾಯಕ ಸಮುದಾಯದ ಗಣನೀಯ ಮತಗಳು ರಾಜಮನೆತನದ ಜತೆಗಿವೆ. ಇದೇ ರೀತಿ ರಾಜಮನೆತನದ ಮೇಲಿನ ಪ್ರೀತಿಗಾಗಿ ಒಂದಷ್ಟು ಮುಸ್ಲಿಂ ಮತಗಳು ಯದುವೀರ್ ಪಾಲಾಗಲಿವೆ. ಹೀಗಾಗಿ ಒಕ್ಕಲಿಗ, ಲಿಂಗಾಯತ ಮತಗಳ ಜತೆ ಇವೂ ಸೇರಿ ಒಡೆಯರ್ ವೇಗ  ವನ್ನು ಹೆಚ್ಚಿಸಿವೆ. ಇಷ್ಟಾದರೂ ಕಾಂಗ್ರೆಸ್ ಪಾಳಯದ ನಾಯಕರು, ‘ನೋಡುತ್ತಿರಿ. ಪವಾಡ ನಡೆದು ನಮ್ಮ ಅಭ್ಯರ್ಥಿ ಗೆಲ್ಲುವುದು ಗ್ಯಾರಂಟಿ’ ಎನ್ನುತ್ತಿದ್ದಾರೆ.

ಈ ಪಾಳಯದ ಪ್ರಕಾರ, ಇವತ್ತು ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಜತೆಗಿರುವ ಒಕ್ಕಲಿಗ ಮತಬ್ಯಾಂಕ್ ಹೋಳಾಗಲಿದೆ. ಹೀಗೆ ಅದು ಹೋಳಾಗಲು ಆ ಪಕ್ಷದ ಕೆಲ ನಾಯಕರು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಈ ಕೆಲಸ ಕಾಂಗ್ರೆಸ್ಸಿನ ಒಕ್ಕಲಿಗ ಅಭ್ಯರ್ಥಿಗೆ ಗಣನೀಯ ಪ್ರಮಾಣದ ಒಕ್ಕಲಿಗ ಮತಗಳನ್ನು ತಂದುಕೊಡಲಿದೆ. ಆ ಮೂಲಕ ಮೈಸೂರಿನಲ್ಲಿ ಕೈ ಬಾವುಟ ಹಾರಲಿದೆ.

ಬಿಲ್ಲವ ಕೋಟೆಗೆ ಪೂಜಾರಿ ಅಸ್ತ್ರ

ಕಳೆದ ಮೂರು ದಶಕಗಳಿಂದ ಬಿಜೆಪಿ ವಶದಲ್ಲಿರುವ ‘ದಕ್ಷಿಣ ಕನ್ನಡ’ ಕೋಟೆಯ ವಶಕ್ಕೆ ‘ಪೂಜಾರಿ ಅಸ್ತ್ರ’ ಪ್ರಯೋಗಿಸಲು ಕಾಂಗ್ರೆಸ್ ಸಜ್ಜಾಗಿದೆ. ಈ ಕೋಟೆಯ ರಕ್ಷಣೆಗೆ ನಿಂತಿರುವ ಬಿಲ್ಲವ ಮತಬ್ಯಾಂಕನ್ನು ಸೆಳೆಯುವುದು ಅದರ ಉದ್ದೇಶ. ಅಂದ ಹಾಗೆ, ಹಿರಿಯ ನಾಯಕ ಜನಾರ್ದನ ಪೂಜಾರಿಯವರು ರಾಜಕೀಯವಾಗಿ ಹಿಂದೆ ಸರಿದ ಮೇಲೆ ಬಿಲ್ಲವ ಸಮುದಾಯಕ್ಕೆ ಸಮರ್ಥ ನಾಯಕತ್ವದ ಕೊರತೆ ಇದೆ.

ಹೀಗಾಗಿ ಬಿಲ್ಲವ ಮತಬ್ಯಾಂಕ್ ಬಿಜೆಪಿಗೆ ಸಾಲಿಡ್ಡು ಬೆಂಬಲ ಕೊಡುತ್ತಾ ಬಂದಿದೆ. ಕ್ಷೇತ್ರದಲ್ಲಿ ನಿರ್ಣಾಯಕ ಶಕ್ತಿಯಾಗಿರುವ ಬಿಲ್ಲವ ಮತಗಳನ್ನು ಸೆಳೆಯದೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆಲುವಿನ ಕನಸು ಕಾಣುವಂತಿಲ್ಲ. ಇದನ್ನು ಬಲ್ಲ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಡಿಸಿಎಂ ಡಿಕೆಶಿ ಈಗ ಪೂಜಾರಿ ಅಸ್ತ್ರ ಬಿಡಲು ತಯಾರಿ ಮಾಡಿಕೊಂಡಿದ್ದಾರೆ. ಯಾವ ನೆಲದಲ್ಲಿ ತಮ್ಮ ಸೋಲಿನೊಂದಿಗೆ ಬಿಲ್ಲವ ಸಮುದಾಯಕ್ಕೆ ಅವಮಾನದ ಪರಂಪರೆ ಶುರುವಾಯಿತೋ, ಆ
ಅವಮಾನಕ್ಕೆ ಪ್ರತಿಯಾಗಿ ಕೈ ಅಭ್ಯರ್ಥಿ ಪದ್ಮರಾಜ್ ಅವರನ್ನು ಗೆಲ್ಲಿಸುವುದರೊಂದಿಗೆ ಬಿಲ್ಲವರು ತಕ್ಕ ಉತ್ತರ ನೀಡಬೇಕು ಅಂತ ಈ ವಾರ ಜನಾರ್ದನ ಪೂಜಾರಿ ಭಾವುಕ ಅಸ್ತ್ರ ಪ್ರಯೋಗಿಸಲಿದ್ದಾರೆ.

ಯಾವಾಗ ಈ ಅಸ್ತ್ರದ ಸುಳಿವು ಸಿಕ್ಕಿತೋ, ಭಾನುವಾರ ಸಂಜೆ ಮಂಗಳೂರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ‘ನಾ ನಿಮ್ಮವನು, ನಿಮ್ಮ ಮನೆ ಮಗನು’ ಅಂತ ಬಿಲ್ಲವರಿಗೆ ಮೆಸೇಜು ಕೊಟ್ಟಿದ್ದಾರೆ. ಅಲ್ಲಿಗೆ ದ.ಕ. ಕೋಟೆಯ ವಶಕ್ಕೂ ಮುನ್ನ ಬಿಲ್ಲವ ಸೈನ್ಯವನ್ನು ಸೆಳೆಯಲು ಕೈ-ಕಮಲ ಪಾಳಯಗಳು ವಿಧ್ಯುಕ್ತ ಹೋರಾಟ ಆರಂಭಿಸಿವೆ.

ಕೈಗೆ ಲೋಕಪೋಲ್ ಟಾನಿಕ್

ಇನ್ನು ರಾಜ್ಯ ಕಾಂಗ್ರೆಸ್ಸಿಗೆ ಲೋಕಪೋಲ್ ಸರ್ವೆ ಟಾನಿಕ್ಕು ನೀಡಿದೆ. ಅದರ ಪ್ರಕಾರ ರಾಜ್ಯದ ೨೮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ೧೫ರಿಂದ ೧೭ ಸ್ಥಾನಗಳನ್ನು ಗೆಲ್ಲಲಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ೧೧ರಿಂದ ೧೩ ಸ್ಥಾನಗಳನ್ನು ಗೆಲ್ಲಲಿದೆ. ಅಂದ ಹಾಗೆ, ಈ ಸರ್ವೆ ವಿಷಯದಲ್ಲಿ ಕಾಂಗ್ರೆಸ್‌ಗೆ ವಿಶೇಷ ನಂಬಿಕೆ ಬಂದಿದೆ. ಕಾರಣ? ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇದೇ ಲೋಕಪೋಲ್ ಸರ್ವೆ ಕಾಂಗ್ರೆಸ್ಸಿಗೆ ೧೨೯ರಿಂದ ೧೩೪ ಸ್ಥಾನ ಸಿಗಲಿದೆ. ಬಿಜೆಪಿಗೆ ೫೩ ರಿಂದ ೬೫ ಸ್ಥಾನ ಸಿಗಲಿದೆ ಅಂತ ಹೇಳಿತ್ತು. ಮತ್ತದು ಬಹುತೇಕ ನಿಜವೂ ಆಯಿತು. ಹೀಗಾಗಿ ಈಗ ಅದು ಹೇಳಿರುವುದೂ ನಿಜವಾಗಲಿದೆ ಎಂಬುದು ಕಾಂಗ್ರೆಸ್ ನಂಬಿಕೆ. ಅದರ ನಂಬಿಕೆ ಎಷ್ಟು ಬಲವಾಗಿದೆ ಎಂದರೆ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಸೇರಿದಂತೆ ಹಳೆ ಮೈಸೂರಿನ ಬಹುತೇಕ ಕ್ಷೇತ್ರಗಳು ಕೈ ತೆಕ್ಕೆಗೆ ಬರಲಿವೆ ಎಂಬಲ್ಲಿಗೆ ತಲುಪಿದೆ.

Leave a Reply

Your email address will not be published. Required fields are marked *

error: Content is protected !!