Friday, 18th October 2024

ರಣರಂಗದೊಳಗೆ ಪಾಪ-ಪುಣ್ಯಗಳ ಭೀತಿಯಿಲ್ಲ !

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ಯುದ್ಧದ ಸ್ಥಿತಿಯನ್ನು ನೆನಸಿಕೊಂಡಾಗ ಎಲ್ಲರ ಮೈ ಜುಮ್ ಎನಿಸಿ ಬಿಡುತ್ತದೆ. ಯುದ್ಧವೆಂದರೆ ಕೇವಲ ಹೊಡೆದಾಟ ಬಡೆದಾಟಗಳಿರುವು ದಿಲ್ಲ. ಅಲ್ಲಿ ಎರಡು ರಾಷ್ಟ್ರಗಳ ಇತಿಹಾಸ ಅಡಗಿಕೊಂಡಿರುತ್ತದೆ. ಭಾರತ ಎಂದಿಗೂ ತಾನಾಗಲೇ ಮತ್ತೊಂದು ದೇಶದ ಮೇಲೆ ದಾಳಿ ಮಾಡಿಲ್ಲ. ದೇಶದ ಮೇಲೆ ಆಕ್ರಮಣ ಮಾಡಿದವರನ್ನು ಎಂದಿಗೂ ಸುಮ್ಮನೆ ಬಿಟ್ಟಿಲ್ಲ.

ಯುದ್ಧಗಳು ಹೊಸತೇನಲ್ಲ. ಯಾವ ಯುದ್ಧಗಳೂ ಏಕಾಏಕಿ ಆರಂಭಗೊಳ್ಳುವುದಿಲ್ಲ. ಯುದ್ಧ ಘೋಷಣೆಗೂ ಮುನ್ನ ಎರಡೂ ಕಡೆಗಳಲ್ಲಿ ಸಾಕಷ್ಟು ಘರ್ಷಣೆಗಳು ಎದುರಾಗಿರುತ್ತವೆ. ಸಾಕಷ್ಟು ತಯಾರಿಯೂ ನಡೆದಿರುತ್ತದೆ. ಎಚ್ಚರಿಕೆಯ ಗಂಟೆಗಳು ಮೊಳಗಿರುತ್ತವೆ. ನುಸುಳಿ ಬರುವ ಪ್ರಯತ್ನಗಳು ಆಗಿರುತ್ತವೆ. ಬಲಾಬಲ ಪ್ರದರ್ಶನಗಳ ನಡುವೆ ಅದೆಷ್ಟು ಜೀವಗಳ ಹರಣವಾಗಿ ಹೋಗುತ್ತವೆ. ಅವರನ್ನು ನಂಬಿದ ಜೀವಗಳಿಗೆ ಶಾಶ್ವತವಾದ ನೋವನ್ನು ತಂದೊಡ್ಡುತ್ತವೆ. ಆ ನೋವನ್ನು ಅನುಭವಿಸಿದವರೇ ಬಲ್ಲರು.

ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಹೋದವರು, ಉದ್ಯೋಗ ಅರಸಿ ಹೋದವರು, ಕುಟುಂಬದ ಸದಸ್ಯರನ್ನು ನೋಡಲೆಂದು ಹೋದವರು, ಪ್ರವಾಸಕ್ಕೆಂದು ಹೋದ ವರು ಅಲ್ಲಿರಲೂ ಆಗದೇ, ಹಿಂತಿರುಗಲೂ ಆಗದೇ ಮದ್ದು ಗುಂಡುಗಳ ನಡುವೆ ಕಂಗಾ ಲಾಗಿದ್ದಾರೆ. ಇದ್ದ ಮನೆ-ಮಠ ಕಳೆದುಕೊಂಡು ಅದೆಷ್ಟು ಜನ ಉಸಿರು ತಿರುಗಿಸಿ ಕೊಳ್ಳಲೂ ಅವಕಾಶ ಸಿಗದಂತೆ ಕರಕಲಾಗಿ ಹೋದರೋ ಬಲ್ಲವರಾರು? ಅದೆಷ್ಟು ಕಂದಮ್ಮಗಳು ನೆತ್ತರ ಮಡುವಿನಲ್ಲಿ ಕರಗಿ ಹೋದರೋ ಲೆಕ್ಕವಿಟ್ಟವರಾರು? ರಣರಂಗ ದೊಳಗೆ ಪಾಪ-ಪುಣ್ಯಗಳ ಭೀತಿ ಯಾರನ್ನೂ ಕಾಡುವುದಿಲ್ಲ.

ಕೊಲ್ಲುವುದಕ್ಕೆಂದೇ ಹಿಡಿಯುವ ಗನ್ನುಗಳಿಗೆ ಕರುಣೆಯೇನೆಂಬುದರ ಅರಿವಿರುವುದಿಲ್ಲ. ಹಾಗೆಯೇ ಸಾವಿನ ಅಂಜಿಕೆಯಿರುವವರು ಯುದ್ಧ ಭೂಮಿಯೊಳಗೆ ಹೆಜ್ಜೆಯನ್ನೂ ಇಡುವುದಿಲ್ಲ. ಪ್ರತಿಯೊಬ್ಬ ಸೈನಿಕನೆದೆ ಯಲ್ಲೂ ರಣೋತ್ಸಾಹವೆಂಬುದು ಸದಾ ಜಾಗೃತವಾಗಿರುತ್ತದೆ. ಗೆಲುವಿಗಾಗಿಯೇ ಕಾದಾಡುವ ಪ್ರತಿ ಸೈನಿಕನೂ ತನ್ನ ರಾಷ್ಟ್ರವನ್ನು ಪ್ರತಿನಿಧಿಸುತ್ತಿರುತ್ತಾನೆ. ಯದ್ಧದ ಸೋಲು ಕೇವಲ ಸೈನಿಕನದು ಮಾತ್ರ ಆಗಿರುವುದಿಲ್ಲ, ಅದು ಅದು ಅವನ ರಾಷ್ಟ್ರದ್ದಾಗಿರುತ್ತದೆ. ಸೈನಿಕರ ಬುದ್ಧಿ, ಕೌಶಲ ಹಾಗೂ ಸಾಮರ್ಥ್ಯದ ಮೇಲೆ ಇಡೀ ರಾಷ್ಟ್ರ ಅವಲಂಬಿತವಾಗಿರುತ್ತದೆ.

ಒಂದು ಚೂರು ಎಚ್ಚರ ತಪ್ಪಿದರೂ ಇಡೀ ರಾಷ್ಟ್ರವೇ ಎದುರಾಳಿ ರಾಷ್ಟ್ರದೆದುರಿಗೆ ಶರಣಾಗಿ ಪರಾಭವವನ್ನು ಅನುಭವಿಸಬೇಕಾಗುತ್ತದೆ.
ಇತ್ತೀಚೆಗಷ್ಟೆ ಅಫಘಾನಿಸ್ತಾನವನ್ನು ಆಕ್ರಮಿಸಿಕೊಂಡ ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ಜೀವ ಭಯದಿಂದ ಓಡಹೋಗುತ್ತಿದ್ದ ಅಲ್ಲಿನ ಪ್ರಜೆಗಳ ಸ್ಥಿತಿಯ ಚಿತ್ರಣವಿನ್ನೂ ಕಣ್ಣ ಇದೆ. ಅಷ್ಟರ ಮತ್ತೊಂದು ಯುದ್ಧ ನಡೆಯುತ್ತಿದೆ. ಇದು ಭಾರತದೊಂದಿಗೆ ಅಲ್ಲ ಅನ್ನುವ ಸಮಾಧಾ ನವಿದ್ದರೂ ಪಕ್ಕದ ಇರುವ ಪಾಕಿಸ್ತಾನ ಹಾಗೂ ಚೀನಾ ಯಾವಾಗ ಕಾಲು ಕೆರೆದುಕೊಂಡು ಕದನಕ್ಕಿಳಿಯುತ್ತವೋ ಗೊತ್ತಿಲ್ಲ.

ಆದರೆ ಭಾರತ ಯಾವತ್ತಿಗಾದರೂ ಯಾರ ಮೇಲಾದರೂ ಹೀಗೆ ತಾನಾಗೇ ಯುದ್ಧ ಘೋಷಣೆ ಮಾಡಿದೆಯಾ? ಮೊದಲ ಜೈನ ತೀರ್ಥಂಕರರಾದ ವೃಷಭನಾಥರಿಗೆ ನಂದಾ ಹಾಗೂ ಸುನಂದಾ ಎಂಬ ಪತ್ನಿಯರಿಂದಾದ ನೂರು ಜನ ಗಂಡು ಮಕ್ಕಳಿದ್ದರು. ಇದರಲ್ಲಿ ಹಿರಿಯ ಮಗನಾದ ಭರತನು ಪರಾಕ್ರಮಿಯಾಗಿ ರಾಜ್ಯಗಳನ್ನು ಗೆದ್ದು ಚಕ್ರಾಧಿಪತಿಯಾಗಿ ಹಿಂತಿರುಗುವ ಸಮಯದಲ್ಲಿ ಆತನ ಚಕ್ರರತ್ನವು ಪುರ ಪ್ರವೇಶ ಮಾಡುವುದಿಲ್ಲ.

ಕಾರಣವೇನೆಂದು ರಾಜಪುರೋಹಿತರ ಬಳಿ ವಿಚಾರಿಸಿದಾಗ ಭರತನು ತನ್ನ ತಮ್ಮಂದಿರನ್ನು ಜಯಿಸಿಲ್ಲವೆಂಬುದು ತಿಳಿದು ಬರುತ್ತದೆ. ಆಗ ತನ್ನ ತಮ್ಮಂದಿರಿಗೆಲ್ಲ ಬಂದು ಶರಣಾಗುವಂತೆ ಸೂಚಿಸುತ್ತಾನೆ ಭರತ. ಸುನಂದೆಯ ಮಗನಾದ ಒಬ್ಬ ಬಾಹುಬಲಿಯ ಹೊರತಾಗಿ ಉಳಿದೆಲ್ಲ ಸಹೋದರರು ಮರುಮಾತಾಡದೆ ಕಾಣಿಕೆಗಳೊಡನೆ ಬಂದು ಶರಣಾಗಿ ರಾಜ್ಯ ತೊರೆದು ತಮ್ಮ ತಂದೆಯ ಬಳಿ ಹೋಗಿ ದೀಕ್ಷೆ ಪಡೆದುಕೊಳ್ಳುತ್ತಾರೆ. ಆದರೆ ತಂದೆಯ ಹೊರತಾಗಿ ಇನ್ನಾರಿಗೂ ತಲೆ ಬಾಗುವುದಿಲ್ಲವೆಂದೂ, ತಂದೆಯಿಂದ ತನಗೆ ದೊರೆತ ರಾಜ್ಯವನ್ನು
ಕೊಡುವುದಿಲ್ಲವೆಂದೂ ಇದಕ್ಕಾಗಿ ಯುದ್ಧಕ್ಕೂ ಸಿದ್ಧನೆಂದು ಬಾಹುಬಲಿ ತಿಳಿಸಿದಾಗ, ಎರಡೂ ಸೈನ್ಯಗಳ ನಡುವೆ ಯುದ್ಧ ಪ್ರಾರಂಭ ವಾಗುವ ಮುಂಚೆ ಇದರಿಂದ ಉಂಟಾಗಬಹುದಾದ ಪರಿಣಾಮಗಳನ್ನು ಅವಲೋಕಿಸಿದ ಮಂತ್ರಿಗಳು ಭರತ ಹಾಗೂ ಬಾಹುಬಲಿ ಇಬ್ಬರೂ ವಜ್ರದೇಹಿಗಳಾಗಿರುವುದರಿಂದ ವೃಥಾ ಸೈನ್ಯ ನಾಶವಾಗುವುದಲ್ಲದೆ ಈ ಇಬ್ಬರಿಗೂ ಏನೂ ಆಗುವುದಿಲ್ಲವೆಂದು ಅರಿತು ಕೇವಲ
ಅವರಿಬ್ಬರ ನಡುವೆಯೇ ದೃಷ್ಟಿಯುದ್ಧ, ಜಲಯುದ್ಧ ಹಾಗೂ ಮಲ್ಲಯುದ್ಧಗಳು ನಡೆಯುವಂತೆ ಸೂಚಿಸುತ್ತಾರೆ.

ಇದಕ್ಕೊಪ್ಪಿದ ಅಣ್ಣ-ತಮ್ಮಂದಿರಿಬ್ಬರ ನಡುವೆ ಆರಂಭಗೊಂಡ ಮೂರು ಯುದ್ಧಗಳಲ್ಲಿ ಅಪ್ರತಿಮ ವೀರನಾದ ಬಾಹುಬಲಿಯೇ ಗೆಲುವನ್ನು ಸಾಧಿಸುತ್ತಾನೆ. ಮಲ್ಲಯುದ್ಧ ಕಾಳಗದ ಆವೇಶದಲ್ಲಿ ಅಣ್ಣ ಭರತನನ್ನು ತನ್ನ ತೋಳ್ಬಲದಿಂದ ಮೇಲೆತ್ತಿದ ಬಾಹುಬಲಿಗೆ ಛೇ, ಈ ಯುದ್ಧದ
ಕಾರಣದಿಂದಾಗಿ ಒಡಹುಟ್ಟಿದ ಅಣ್ಣನಿಗೆ ತಾನು ಹೀಗೆ ಮಾಡುತ್ತಿರುವುದು ಸರಿಯಲ್ಲವೆಂದು ಅನಿಸಿ ನಿಧಾನವಾಗಿ ಕೆಳಗಿಳಿಸುತ್ತಾನೆ. ಅವಮಾನದಿಂದ ಕುದಿಯುತ್ತಿದ್ದ ಭರತನು ಮೋಸದಿಂದ ತನ್ನ ಚಕ್ರವನ್ನು ಪ್ರಯೋಗಿಸಿದರೂ ಸಹ ಅದು ಬಾಹುಬಲಿಯ ಸುತ್ತ ಪ್ರದಕ್ಷಿಣೆ ಮಾಡಿ ಅವನ ಬಳಿ ಬಂದು ನಿಂತಾಗ ಬಾಹುಬಲಿಯೇ ವಿಜಯಿಯೆಂದು ಘೋಷಿಸಲಾಗುತ್ತದೆ.

ಆದರೆ ಬಾಹುಬಲಿಗೆ ಇದರಿಂದ ವಿಜಯೋತ್ಸಾಹದ ಬದಲಿಗೆ ವೈರಾಗ್ಯವುಂಟಾಗಿ ರಾಜ್ಯವನ್ನು ತೊರೆದು ತನ್ನ ತಂದೆಯಾದ ವೃಷಭ ನಾಥರ ಬಳಿ ದೀಕ್ಷೆಯನ್ನು ಪಡೆದು ದೀರ್ಘ ತಪಸ್ಸಿನಲ್ಲಿ ತೊಡಗುತ್ತಾನೆ. ಎಲ್ಲರ ಮನದಲ್ಲಿ ಪರಾಕ್ರಮಿಯಾಗಿ ಯುದ್ಧ ಮಾಡಿದರೆ
ಬಾಹುಬಲಿಯಂತೆ ಯುದ್ಧ ಮಾಡಬೇಕು ಎನ್ನುವ ಮೆಚ್ಚುಗೆಯನ್ನು ಪಡೆಯುತ್ತಾನೆ. ಇದರಿಂದ ಚಕ್ರವರ್ತಿ ಭರತನ ತಲೆಗೇರಿದ್ದ ಪರಾ ಕ್ರಮದ ಅಮಲಿಳಿದು ಧರ್ಮ- ನೀತಿಗಳಿಂದ ರಾಜ್ಯವಾಳಲು ಆರಂಭಿಸುತ್ತಾನೆ.

ಅಂದಿನಿಂದ ಆರಂಭಗೊಂಡ ಭರತವರ್ಷ, ಭರತ ಖಂಡದ ಈ ಭರತ ಭೂಮಿ ಪರಕೀಯರಿಂದ ದಾಳಿಗೊಳಗಾಗುತ್ತಾ ಅಲ್ಪ ಸ್ವಲ್ಪ ವನ್ನು ಕಳೆದುಕೊಳ್ಳುತ್ತಾ ಹಿಂದೂಸ್ತಾನವಾಗಿ ಪರಿವರ್ತಿತಗೊಂಡಿದೆ. ಆನಂತರವೂ ದಾಳಿಗಳೇನೂ ನಿಲ್ಲಲಿಲ್ಲ, ಬಾಹ್ಯ ದಾಳಿಗಳಿಗಿಂತ ಆಂತರಿಕ ಕಲಹಗಳೇ ಹೆಚ್ಚಾಗಿ ಪಾಕಿಸ್ತಾನ ಸಿಡಿದು ನಿಂತಿತು. ಬಂಗಾಳವೂ ದೂರವಾಯ್ತು. ಇಷ್ಟಾದರೂ ಭಾರತ ಎಂದಿಗೂ ತಾನಾ ಗಿಯೇ ಯಾರ ಮೇಲೂ ದಂಡೆತ್ತಿ ಹೋಗಿಲ್ಲ. ಆಕ್ರಮಿಸಿಕೊಳ್ಳಲು ಬಂದವರಿಗೆ ಪರಾಕ್ರಮದಿಂದ ಸರಿಯಾಗಿಯೇ ಉತ್ತರ ಕೊಟ್ಟು ಗೆಲುವಿನ ನಗೆ ಬೀರಿದೆ.

ಇಂಥಾ ಯುದ್ಧ ಸನ್ನಿವೇಶದಲ್ಲಿ ರವಿ ಇದ್ದಿದ್ದರೆ… ಅನ್ನುವ ಭಾವವೊಂದು ಸದಾ ಕಾಡುತ್ತದೆ. ಯುದ್ಧಭೂಮಿಯ ಪ್ರತ್ಯಕ್ಷದರ್ಶಿಯಾಗಿ ಅಲ್ಲಿಯ ತಲ್ಲಣಗಳು ಹೇಗಿರುತ್ತವೆ ಅನ್ನುವುದನ್ನು ಅವರು ವಿವರಿಸಿದಾಗಲೇ ಅದರ ತೀವ್ರತೆ ಎಷ್ಟಿರುತ್ತದೆ ಹಾಗೂ ಅಲ್ಲಿಯ ಸಂಕಷ್ಟಗಳು ಹೇಗಿರು ತ್ತದೆ ಅನ್ನುವ ಅರಿವು ಮೂಡಿದ್ದು. 1999ರಲ್ಲಿ ಕಾರ್ಗಿಲ್ ಯುದ್ಧ ಆರಂಭವಾದಾಗ ತಮ್ಮ ನಲವತ್ತೊಂದನೇ ವಯಸ್ಸಿನಲ್ಲಿ ಅದಾವ ಧೈರ್ಯದ ಮೇಲೆ ಯುದ್ಧ ಭೂಮಿಗೆ ಹೋದರೋ? ಇಂದಿಗೂ ನೆನೆದರೆ ಭಯವಾಗುತ್ತದೆ, ಅದವರ ರಕ್ತಗುಣ. ಅಂದು ಅವರೊಂದಿಗೆ ಆರ್.ಟಿ.ವಿಠ್ಠಲಮೂರ್ತಿಯವರು ಇದ್ದರು ಅನ್ನುವುದೊಂದು ದೊಡ್ಡ ಸಮಾಧಾನ ನೀಡಿತ್ತು.

ಆಗ ಕ್ಷಣ ಕ್ಷಣದ ಸುದ್ದಿ ಹೇಳುವ ಸುದ್ದಿ ವಾಹಿನಿಗಳಿನ್ನೂ ಆರಂಭವಾಗಿರಲಿಲ್ಲ. ಹೀಗಾಗಿ ಅವರಿಂದ ನಮಗೆ E-mail ಮುಖಾಂತರ
ಮೆಸೇಜುಗಳು ತಲುಪುತಿತ್ತು. ಅದಕ್ಕಾಗಿ ಕಚೇರಿಯ ಸಿಬ್ಬಂದಿಗಳೆಲ್ಲ ಕಣ್ರೆಪ್ಪೆ ಮಿಟುಕಿಸದಂತೆ ಕಾಯುತ್ತಾ ಕೂತಿರುತ್ತಿದ್ದೆವು. ಅವರ ಕೆಲವು ಅಂಕಣಗಳನ್ನು ಇಂಗ್ಲಿಷ್ ಅಕ್ಷರಗಳಲ್ಲಿ ಕನ್ನಡವನ್ನು ಟೈಪಿಸಿ ಇ-ಮೇಲ್ ಮೂಲಕ ಕಳಿಸುತ್ತಿದ್ದರು. ವರದಿಗಳೆಲ್ಲ Fax ಮೂಲಕ ಬರುವಾಗ ರೋಮಾಂಚನ.

ಪತ್ರಿಕೆಯನ್ನು ಅಕ್ಷರ ಬಿಡದೆ ಪರಿಶೀಲಿಸಿ ಅಚ್ಚಿಗೆ ಕಳಿಸುವ ಹೊಣೆಯೆಲ್ಲ ನಿವೇದಿತಾರದ್ದೇ. ಅವೆಲ್ಲ ಮೇಲ್ ಗಳ print out ಇಂದಿಗೂ ನನ್ನೊಂದಿಗಿದೆ. ಅದಾದ ಇಪ್ಪತ್ತು ವರುಷಗಳ ನಂತರ ತಮ್ಮ ಅರವತ್ತೊಂದನೇ ವಯಸ್ಸಿನಲ್ಲೂ 2019ರಲ್ಲಿ ನಡೆದ ಪುಲ್ವಾಮಾ ದಾಳಿಯ ಸಮಯದಲ್ಲಿ ಅದೇ ಧೈರ್ಯದೊಂದಿಗೆ ಅಂಜದೆ ಕಾಶ್ಮೀರಕ್ಕೆ ಹೊರಟು ನಿಂತಾಗಲೂ ನಮಗೆಲ್ಲ ಮನದೊಳಗೊಳಗೆ ಅಳುಕು. ಆದರೂ ಅವರೊಳಗಿದ್ದ ಪತ್ರಕರ್ತ ವಿಷಯ ಸಂಗ್ರಹಣೆಗಾಗಿ ಯಾರ ಮಾತಿಗೂ ಕಿವಿಗೊಡದೆ ಹೊರಟು ನಿಂತಿದ್ದು ಅವರ ಸಾಹಸ ಗುಣಕ್ಕೆ ಸಾಕ್ಷಿ.

ಸಹಾಯಕನಾಗಿ ಲಕ್ಷಣ್ ಅವರ ಜೊತೆಗಿದ್ದು ಆರೈಕೆ ಮಾಡಿದ್ದನ್ನು ಮರೆಯಲಾಗದು. ನವೆಂಬರ್ 202012ನೇ ತಾರೀಕು ಕಚೇರಿ ಯಲ್ಲಿ ಅವರ ಟೇಬಲ್ಲಿನ ಪಕ್ಕದಲ್ಲಿದ್ದ ಪುಲ್ವಾಮಾ ದಾಳಿಯ ಬಗ್ಗೆ ಅವರು ಬರೆದ ಪುಸ್ತಕವನ್ನು ಹಿಡಿದು ಹಿಮವಂತ ಇದೇ ಪುಲ್ವಾಮಾ ವರದಿಯ ಬಗ್ಗೆ ತನ್ನಪ್ಪನಿಗೆ ಕೇಳಿದ್ದ: ಅಪ್ಪ, ನಿಮಗೆ war field ಗೆ ಹೋದಾಗ ಭಯವಾಗಲಿಲ್ವಾ? ಅಂತ. ಭಯವಿದ್ದಿದ್ರೆ ನಾನಿಷ್ಟು ದೊಡ್ಡ ಪತ್ರಕರ್ತನಾಗಲು ಸಾಧ್ಯವಿರುತ್ತಿತ್ತಾ ಮಗೂ? ಎಂದು ಅದೆಷ್ಟು ಆಪ್ತತೆಯಿಂದ ಹೇಳಿದ್ದರು.

ಆದರೆ ವಿಧಿ ಅದರ ಮಾರನೆಯ ದಿನವೇ ಅವರೆಲ್ಲ ಮಾತುಗಳಿಗೂ ಅಂತ್ಯವಿಟ್ಟು ತನ್ನೊಂದಿಗೆ ಕರೆದೊಯ್ದು ಬಿಟ್ಟಿತು. ನೆನೆದರೆ ಮನಸೆಲ್ಲ ಪ್ರಕ್ಷುಬ್ದ! ಇರಲಿ. ಕಾಲನಿರ್ಣಯದೆದುರು ಯಾರ ಮಾತೂ ನಡೆಯುವುದಿಲ್ಲ. ಇಂಥಾ ಅದೆಷ್ಟು ಜೀವಗಳನ್ನು ಹೊತ್ತೊಯ್ದಿದೆಯೋ ಈ ಯುದ್ಧಪಕ್ಷಿ! ಎಲ್ಲ ಗಡಿನಾಡಿನ ಜನರಿಗೂ ಇಂಥಾ ಅನಿರೀಕ್ಷಿತ ಕಲಹದ ಸವಾಲುಗಳನ್ನೆದುರಿಸುವುದು ಅನಿವಾರ್ಯ.

ಅದೇ ರೀತಿ ಒಂದು ದೇಶ ಸದೃಢವಾಗಿರಲು ದೇಶದ ಆಂತರಿಕ ಪರಿಸ್ಥಿತಿಯೂ ಅಷ್ಟೇ ಮುಖ್ಯ. ಸುಮಾರು ಎರಡೂವರೆ ವರುಷಗಳಿಂದ ಈ ಕಣ್ಣಿಗೆ ಕಾಣದ ಕರೋನಾ ಎಂಬ ಸೂಕ್ಷ್ಮಾಣುವಿನ ದಾಳಿಗೆ ಸಿಲುಕಿ ನೆಲ ಕಚ್ಚಿ ಹೋದ ಆರ್ಥಿಕ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಇನ್ನೂ ಸಾಕಷ್ಟು ವರುಷಗಳೇ ಬೇಕಾಗುತ್ತದೆ. ನಿಷ್ಕರುಣಿಯಾದ ಬ್ಯಾಂಕುಗಳು ಯಾವುದೇ ಮುಲಾಜಿಲ್ಲದೆ ಬಡ್ಡಿಗೆ ಬಡ್ಡಿ ಜಡಿಯುತ್ತಾ
ಸಾಲದ ಹೊರೆಯನ್ನು ಹೆಚ್ಚಿಸುತ್ತಲೇ ಹೋಗುತ್ತಿವೆ.

ಇದರ ನಡುವೆಯೇ ಮುಷ್ಕರಗಳು, ಹೋರಾಟಗಳು, ಧರಣಿಗಳು ಎಂದು ದಿನಗಳು ಸೋರಿ ಹೋಗುತ್ತಿವೆ. ಅದಕ್ಕೆ ಖರ್ಚು ಮಾಡುತ್ತಿರುವ ಹಣ ಬೆವರು ಸುರಿಸಿ ದುಡಿದ ಸಾಮಾನ್ಯ ಪ್ರಜೆಯದು ಅನ್ನುವ ಸಾಮಾನ್ಯ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾಯಕರುಗಳು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೊರೆಗಳು ಎಂದು ಹೇಳುತ್ತಾ ಅವರ ನಡುವೆಯೇ ಕೋಮು ದಳ್ಳುರಿಯನ್ನು ಬಿತ್ತುತ್ತಾ ಕಗ್ಗೊಲೆಗಳಿಗೆ ಸಂಚು ರೂಪಿಸುವ ಪ್ರಯತ್ನವಾಗುತ್ತಿದೆ.

ಅರಾಜಕತೆಯನ್ನು ಹುಟ್ಟುಹಾಕಿ ಅಧಿಪತ್ಯದ ಗದ್ದುಗೆಯನ್ನೇರುವ ಹುನ್ನಾರಗಳ ನಡುವೆಯೇ ದನಿಯೆತ್ತಿದವರ ದನಿಯಡಗಿಸುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ ನೆನಪಿರಲಿ: ಒಂದೇ ಒಂದು ಬಾಂಬು ಸಾಕು ಎಲ್ಲ ಅಹಂಕಾರಗಳನ್ನೂ ಸುಟ್ಟು ನೆಲಸಮ ಮಾಡಲಿಕ್ಕೆ. ಹುಲ್ಲು ಕೂಡ ಹುಟ್ಟದಂತೆ ಅಣುಬಾಂಬಿನ ದಾಳಿಗೆ ಬಲಿಯಾಗಿ ನರಳುತ್ತಿರುವ ಹಿರೋಶಿಮಾ-ನಾಗಾಸಾಕಿಯಂಥಾ ಜ್ವಲಂತ ಸಾಕ್ಷಿಗಳು ಕಣ್ಣೆದುರಿಗೆ ಇರುವಾಗ, ಪಕ್ಕದ ಕೇಳುತ್ತಿರುವ ರಣಕೇಕೆ ನಮ್ಮಲ್ಲಿಗೂ ಬರಲು ಹೆಚ್ಚು ಅಂತರವೇನಿಲ್ಲ. ಹಾಗಾಗದಿರಲಿ ಅನ್ನುವುದೇ ಮನದಾಳದ ಪ್ರಾರ್ಥನೆ!