Thursday, 19th September 2024

ಪ್ರೀತಿಸುವುದನ್ನು ಕಲಿಯಬೇಕು !

ದಾಸ್ ಕ್ಯಾಪಿಟಲ್‌

ಟಿ.ದೇವದಾಸ್, ಬರಹಗಾರ, ಶಿಕ್ಷಕ

ಪ್ರೀತಿಸುವುದಿಲ್ಲ. ಏನನ್ನೂ ಮಾಡಲಾರದವನು ಏನನ್ನೂ ಅರ್ಥ ಮಾಡಿಕೊಳ್ಳಲಾರ. ಏನನ್ನೂ ಅರ್ಥಮಾಡಿಕೊಳ್ಳದವನು ಅಪ್ರಯೋಜಕ. ಆದರೆ ಅರ್ಥಮಾಡಿಕೊಳ್ಳಬಲ್ಲವನು ಪ್ರೀತಿಸಬಲ್ಲ, ಗಮನಿಸಬಲ್ಲ, ನೋಡಬಲ್ಲ, ಅಂತರಂಗದಲ್ಲಿ ತಿಳಿವಳಿಕೆ ಯು ತುಂಬಿಕೊಂಡಂತೆಲ್ಲ, ಒಲವೂ ತುಂಬಿ ತುಳುಕುತ್ತದೆ ಎಲ್ಲ ಹಣ್ಣುಗಳೂ – ಸ್ಟಾಬೆರಿಗಳ ಹಾಗೆ – ಒಟ್ಟಿಗೆ ಪಕ್ವವಾಗು ತ್ತವೆ ಎಂದು ಭಾವಿಸಿರುವವನಿಗೆ ದ್ರಾಕ್ಷಿಗಳ ಸಂಗತಿ ಏನೂ ಗೊತ್ತಿಲ್ಲ – ಇದು ಪರಾಸೆಲ್ಸಸ್ ಮಾತು.

ಯೋಚಿಸುವುದನ್ನು, ನಿರ್ಧಾರ ಕೈಗೊಳ್ಳುವುದನ್ನು, ಕಾವ್ಯ ಬರೆಯುವುದನ್ನು, ಮನಸು ಖುಷಿಗೊಂಡಾಗ ಗುನುಗುವುದನ್ನು, ಪ್ರೀತಿಸುವುದನ್ನು ಯಾರೂ ಹೇಳಿಕೊಡಲಾಗದು. ನೋಡುವ ನೋಟದಲ್ಲಿ, ಚಿಂತಿಸುವ ಚಿಂತನೆಯಲ್ಲಿ, ಮಾಡುವ ಕಾರ್ಯ ದಲ್ಲಿ, ತಾದಾತ್ಮ್ಯ ಭಾವ ಇಲ್ಲದೆ ಹೋದರೆ ಏನೂ ಆಗುವುದಿಲ್ಲ. ಕೊನೆಯ ಪಕ್ಷ ಒಂದು ಪ್ರೀತಿಯೂ ಹುಟ್ಟುವುದಿಲ್ಲ. ಪ್ರೀತಿ ಹುಟ್ಟುವುದಕ್ಕೆ ಇಂಥದ್ದೇ ಘಟಿಸಬೇಕು ಎಂದೇನೂ ಇಲ್ಲ. ಪ್ರೀತಿಯಿಲ್ಲದೆ ಹೋದರೆ ಏನನ್ನೂ ಮಾಡಲಾರೆವು; ಕೊನೆಗೆ ದ್ವೇಷವನ್ನೂ ಸಹ. ಪ್ರೀತಿಯಿದ್ದಲ್ಲಿ ಬಂಧನವಿರುತ್ತದೆ.

ಆ ಬಂಧನದೊಳಗೇ ಸ್ವಾತಂತ್ರ್ಯವೂ ಇರುತ್ತದೆ. ಪ್ರೀತಿಗೆ ತಿಳಿವಳಿಕೆಗಿಂತ ಶುದ್ಧಾತಿಶುದ್ಧ ಭಾವವೇ ಮುಖ್ಯ. ಪ್ರೀತಿ ಬುದ್ಧಿಗೆ ನಿಲುಕುವಂಥದ್ದಲ್ಲ. ಪ್ರೀತಿಯ ಅಸ್ಮಿತೆಯನ್ನು ವ್ಯಾಖ್ಯಾನಿಸಲು ಬರುವುದಿಲ್ಲ. ಅರಿವಿನ ಅಂತರಂಗದಲ್ಲಿ ಮಾತ್ರ ಪ್ರೀತಿಗೆ ವ್ಯಾಖ್ಯಾನವಿದೆ. ಪ್ರೀತಿಯದ್ದು ಯಾವಾಗಲೂ ಏರುಮುಖದ ವಿಕಾಸ ಹಾದಿ. ಅದು ಹೊಸ ಅನುಭವಗಳನ್ನು ಕೊಡುತ್ತಲೇ
ಸಾಗುತ್ತದೆ, ಮೇಲ್ಮುಖವಾಗಿ ಉರಿಯುವ ಹಣತೆಯಂತೆ.

ಹೊಸ ಅನುಭವಗಳ ಪ್ರಪಂಚಕ್ಕೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿ ಪ್ರೀತಿಗಿದೆ. ಇಂಥ ಅನುಭವಗಳು ಸಂಬಂಧಗಳ ಮೂಲಕ ಹುಟ್ಟಿಕೊಳ್ಳುತ್ತವೆ. ಪ್ರೀತಿ ಹುಟ್ಟಿದ ಮೇಲೆ ಎಲ್ಲವೂ ಹೊಸದೇ! ಪ್ರತಿನಿತ್ಯವೂ ಕಾಣುವ ನಿತ್ಯವನ್ನು ಹೊಸತಾಗಿಯೇ ಕಾಣಿಸುವ ತಾಕತ್ತಿರುವುದು ಪ್ರೀತಿಗೆ ಮಾತ್ರ. ಪ್ರೀತಿಯಲ್ಲಿ ತ್ಯಾಗವಿರುತ್ತದೆ. ಮತ್ಸರವೂ ಇರುತ್ತದೆ. ಕೋಪ, ಹುಸಿಮುನಿಸು, ಸಣ್ಣಜಗಳ, ಮಾತು ಬಿಟ್ಟುಕೊಳ್ಳುವುದು – ಇವೆಲ್ಲವೂ ಸಾಮಾನ್ಯವಾಗಿರುತ್ತದೆ. ಆದರೆ, ಕೊನೆಯಲ್ಲಿ ಇವೆಲ್ಲವೂ ಪ್ರೀತಿಗೆ ಶರಣಾಗಿ ಬಿಡುತ್ತದೆ.

ಪ್ರೀತಿಯ ಶಕ್ತಿಯಿರುವುದು ಮೌನದಲ್ಲಿ; ಗೌಜು ಗದ್ದಲದಲ್ಲಲ್ಲ. ಹೆಣ್ಣು ಗಂಡುಗಳ ಮೆಲುದನಿಯ ಮಾತಿನಲ್ಲಿ, ನಸು ನಗುವಿ ನಲ್ಲಿ, ಕಿರುನಗುವಿನಲ್ಲಿ, ಗಂಡು – ಹೆಣ್ಣಿನ ಪರಸ್ಪರ ಸಮಾಗಮದಲ್ಲಿ. ಪ್ರೀತಿಗೆ ಸೋಲುವ ಸಾಮರ್ಥ್ಯವಿದೆ; ಹಾಗೇ ಗೆಲ್ಲುವ ಸಾಮರ್ಥ್ಯವೂ. ಪ್ರೀತಿಯಲ್ಲಿ ಬೀಳುವುದಲ್ಲ, ಏಳುವುದು! ಪ್ರೀತಿಯಲ್ಲಿ ಎದ್ದವನು ಜೀವನದಲ್ಲಿ ಯಶಸ್ಸು ಕಾಣುತ್ತಾನೆ. ಕಾರಣ
ಪ್ರೀತಿಯ ಹಿಂದಿರುವುದು ನಂಬುಗೆ. ಈ ಮನುಷ್ಯ ಸಂಬಂಧಗಳು ಇವೆಯಲ್ಲ, ಅವು ಬೇಡುವುದು ಪ್ರೀತಿಯನ್ನಲ್ಲ, ನಂಬುಗೆ ಯನ್ನು. ಬೇಕಿದ್ದರೆ ಆಲೋಚಿಸಿ ನೋಡಿ: ಪ್ರೀತಿಯೇ ಇರದಿದ್ದರೂ ಸಂಬಂಧಗಳು ಬೆಸೆದುಕೊಂಡಿರುತ್ತದೆ.

ಆದರೆ ನಂಬುಗೆಯೇ ಇಲ್ಲದಿದ್ದರೆ ಅರೆಕ್ಷಣವೂ ಇರಲು ಮನಸಿಗೆ ಸಾಧ್ಯವಾಗುವುದಿಲ್ಲ. ಅಮೂರ್ತ ರೂಪದ ಹಿಂಸೆ ಕಾಡ ತೊಡಗುತ್ತದೆ. ಅನುಮಾನ, ಸಂಶಯ, ನೆಗೆಟಿವಿಟಿ, ಸಂಕುಚಿತ ಮನಸ್ಸನ್ನು ಹೊಂದಿದ ಮನುಷ್ಯ ಯಾರನ್ನೂ ಪ್ರೀತಿಸ ಲಾರ. ಯಾರನ್ನೂ ನಂಬಲಾರ. ತನ್ನೊಳಗೇ ತಾನು ಸಂತೋಷವನ್ನೂ ಹುಟ್ಟಿಸಿಕೊಳ್ಳಲಾರ. ಯಾವುದಕ್ಕೂ ಸಂಭ್ರಮಿಸಲಾರ. ಕೊನೆಗೆ ತನ್ನನ್ನು ತಾನು ನಂಬಲಾರದ ಹಂತವನ್ನು ತಲುಪಿ ಸುತ್ತಲಿನವರನ್ನು ಒಣ ಫಿಲಾಸಫಿಯಿಂದ ಕ್ರಿಟಿಸೈಸ್ ಮಾಡುತ್ತ ಬದುಕ ತೊಡಗುತ್ತಾನೆ. ನಿಜ ಪ್ರೀತಿಯೊಂದು ಮೊಳಕೆಯೊಡೆಯುವುದಕ್ಕೂ ಆತ್ಮಾವಲೋಕನ ಬೇಕೇ ಬೇಕು. ತನ್ನ ಪ್ರೀತಿ ಎಂಥ ಬಗೆಯದ್ದು ಎಂಬ ಅವಲೋಕನವದು. ಪ್ರೀತಿಯ ಅಭಿವ್ಯಕ್ತಿಯ ದಾರಿಯಲ್ಲಿ ತಾನು ಸರಿಯಾಗಿ ಸಹಜವಾಗಿ ಇದ್ದೇನೆಯೇ
ಎಂಬ ಸಿಂಹಾವಲೋಕನವದು. ಪ್ರೀತಿಗೆ ಹಲವು ಅಭಿವ್ಯಕ್ತಿಯ ಮುಖಗಳಿದ್ದರೂ ರೂಪ ಒಂದೇ!

ತನ್ನನ್ನು ತಾನು ಹೆಣ್ಣಾಗಿ ಪ್ರೀತಿಸಿಕೊಳ್ಳಲು ಗಂಡಿಗೂ, ಮತ್ತು ಗಂಡಾಗಿ ಪ್ರೀತಿಸಿಕೊಳ್ಳಲು ಹೆಣ್ಣಿಗೂ ಸಾಧ್ಯವಾಗಬೇಕು. ಒಬ್ಬನೇ ಪ್ರೀತಿಸುವುದಲ್ಲ, ಇಬ್ಬರಾಗಿ ಪ್ರೀತಿಸುವುದು. ಯಾಕೆಂದರೆ ಶುದ್ಧ ಪ್ರೀತಿ ಯಾವತ್ತೂ ದ್ವಿಮುಖವಾಗಿರುತ್ತದೆ. Of course ಪ್ರೀತಿಯೇ ಶುದ್ಧ ಮತ್ತದು ಶುದ್ಧ ಪ್ರೀತಿಯಾಗಬೇಕಾದ ಅಗತ್ಯವಿಲ್ಲ. ಪ್ರೀತಿ ಮನ್ಮಥನಂತೆ. ಅದು ಯಾವುದನ್ನೂ ನಾಶ ಮಾಡಗೊಡುವು
ದಿಲ್ಲ. ಎಲ್ಲದರಲ್ಲೂ ವಸಂತವನ್ನೇ ತುಂಬಿಸುತ್ತದೆ. ಮನ್ಮಥನನ್ನು ಅಶುದ್ದವೆನ್ನಲು ಸಾಧ್ಯವೆ? ನಾನು ಶುದ್ಧವಾಗದೆ ನನ್ನ
ಪ್ರೀತಿ ಶುದ್ಧವಾಗಲು ಹೇಗೆ ಸಾಧ್ಯ? ಹಾಗೆ ಶುದ್ಧವಾಗಲು ವೀರತನಬೇಕು!

ಮನಸು ವೀರತನವನ್ನು ಆರೋಪಿಸಿಕೊಳ್ಳಬೇಕು. ಯಾಕೆಂದರೆ ಪ್ರೀತಿ ವೀರತನದಿಂದ ತುಂಬಿರುತ್ತದೆ. ಪ್ರೀತಿ ಗೆದ್ದಾಗ ತನ್ನಲ್ಲಿ ತುಂಬಿಸಿಕೊಳ್ಳುವ ಗೆಲುವಿನ ಬಲವಿದೆಯಲ್ಲ, ಅದು ಅಸಾಮಾನ್ಯವಾದುದು! ಗಂಡುತನವೆಂಬುದು ವೀರದ ಪ್ರತೀಕ. ಗಂಡಿ ನಲ್ಲಿಯೂ ಹೆಣ್ಣುತನವಿರುವ ಗಂಡು ಇರುತ್ತಾನೆ. ಅವನು ಹೆಣ್ಣಿಗ ಎಂಬುದರಲ್ಲಿ ಹೆಣ್ತನವಿದೆಯೆಂದೇ ಅರ್ಥ ತಾನೆ? ಆದರೂ
ಗಂಡಿನ ಪ್ರೀತಿಯಲ್ಲಿ ವೀರತನದ ಗಾಂಭೀರ್ಯವಿರುತ್ತದೆ.

ಆಡುಭಾಷೆಯಲ್ಲಿ ಒಂದು ಮಾತಿದೆ: ಅವನದ್ದು ಹುಲಿಯಂಥ ಪ್ರೀತಿಯೆಂದು. ಅಂದರೆ ಅವನದ್ದು  ಹುಲಿಯಂಥ ವೀರತನದ ಪ್ರೀತಿಯೆಂದು ಅರ್ಥ. ವೀರತ್ವದಲ್ಲೂ, ಗಾಂಭೀರ್ಯದಲ್ಲೂ ಪ್ರೀತಿಯಿರುತ್ತದೆ. ಹೆಣ್ಣಲ್ಲೂ ವೀರತನವಿರುತ್ತದೆ. ಆದರೆ ಆ ವೀರತನದಲ್ಲಿ ಶೃಂಗಾರವಿರುತ್ತದೆ. ವೀರತನದ ತುಂಬಿದ ಹೆಣ್ಣಿನ ಪ್ರೀತಿಯಲ್ಲೂ ಗಂಡಿನ ಗಾಂಭೀರ್ಯ ಇರಬಹುದು.
ಗಂಡು ಹೆಣ್ಣಿಗನಾದರೆ ಹೆಣ್ಣು ಗಂಡಿನ ವೀರತನವನ್ನು ಆವಾಹನೆ ಮಾಡಿಕೊಳ್ಳುವುದನ್ನು ಪುರಾಣೇತಿಹಾಸಗಳಲ್ಲಿ ನೋಡು ತ್ತೇವೆ.

ಪ್ರಾಣಿಗಳಲ್ಲಿ ಗಂಡೇ ಶೃಂಗಾರದ ಪ್ರತೀಕ. ಗಂಡಿನ ಶೃಂಗಾರ (ಈ ಶೃಂಗಾರಕ್ಕೆ ವ್ಯಾಖ್ಯಾನವಿರಲು ಸಾಧ್ಯವಿಲ್ಲ) ಕ್ಕೆ ಸೋತು ಹೆಣ್ಣು ಒಲಿದು ಬರುವುದು. ಸುಖದ ಸಂಸಾರ ಹೂಡುವುದು. ಮರಿಗಳಿಗೆ ತಾಯಿಯಾಗುವುದು. ಮರಿಗಳನ್ನು ಅತಿಯಾಗಿ ಪ್ರೀತಿಸುವುದು ಗಂಡು ಪ್ರಾಣಿಯೇ. ಗ್ರಹಿಸಿ ನೋಡಿ: ತನ್ನ ಮಗುವನ್ನು ಅತಿ ಜಾಗರೂಕನಾಗಿ ಆಡಿಸುತ್ತ, ಮುzಡಿಸುತ್ತ, ಅತ್ತಿಂದಿತ್ತ ಓಡಾಡುತ್ತ ಮಗುವನ್ನೆತ್ತಿ ಮಗುವಿನ ನಗುವಿನಲ್ಲಿ ತಾನು ನಗುತ್ತ ಸಂಭ್ರಮಿಸುವವನು ಅಪ್ಪನೇ!

ಅಮ್ಮನೂ ಹೀಗೆಯೇ ಅಲ್ಲವೆ ಎಂದು ಕೇಳಬಹುದು. ಹೌದು, ಅಮ್ಮನೂ ಹೀಗೆಯೇ. ಆದರೆ ಅಪ್ಪನ ಪ್ರೀತಿಯ ಅಭಿವ್ಯಕ್ತಿಯಂತೆ ಅಮ್ಮನ ಪ್ರೀತಿಯ ಅಭಿವ್ಯಕ್ತಿಯಿರುವುದಿಲ್ಲ. ಅಮ್ಮನ ಪ್ರೀತಿಯ ಅಭಿವ್ಯಕ್ತಿಯಂತೆ ಅಪ್ಪನದ್ದೂ ಇರುವುದಿಲ್ಲ. ಆದರೆ ಅಮ್ಮ ಅಪ್ಪನಾಗಬಹುದು, ಅಪ್ಪ ಅಮ್ಮನಾಗೋದು ಅಷ್ಟು ಸುಲಭವಲ್ಲ!

ಚೆಂದ ಎಂದರೆ ಹೆಣ್ಣು ಎನ್ನುವವನು ನಾನು. ಹಾಗಂತ ಚೆಂದವಿರುವುದೆಲ್ಲ ಹೆಣ್ಣಾಗಿರಬೇಕೆಂದಿಲ್ಲ. ಆದರೆ ಹೆಣ್ಣು ಚೆಂದ ಎಂಬುದು ಸತ್ಯ. ಚೆಂದ ಅಂತ ಯಾವುದಿದ್ದರೂ ಅದು ಹೆಣ್ಣಿನ ಅಂಶವನ್ನು ಹೊಂದಿರುತ್ತದೆ. ಅವನನ್ನು ನೋಡಿ, ಥೇಟು ಹುಡುಗಿಯ ಹಾಗೇ ಇzನೆ ಅಂತೇವೆ. ಯಕ್ಷಗಾನ, ರಂಗಭೂಮಿಯಲ್ಲಿ ಹೆಣ್ಣಿನ ಪಾತ್ರವನ್ನು ಗಂಡೇ ನಿರ್ವಹಿಸುತ್ತಾನೆ; ಹೆಣ್ಣು ನಾಚುವಷ್ಟು! ವೀರತನಕ್ಕೆ ಗಂಡು ಪ್ರತಿನಿಧಿ. ಹೆಣ್ಣೂ ಆಗಬಲ್ಲಳು. ಆದರೆ ಚೆಂದಕ್ಕೆ ಮಾತ್ರ ಹೆಣ್ಣೇ ಪ್ರತಿನಿಧಿ. ಪಿ.ಬಿ. ಶ್ರೀನಿವಾಸ್
ಮಾತಿನ ಮಧ್ಯೆ ಒಮ್ಮೆ ನನ್ನಲ್ಲಿ ಕೇಳಿದ್ದು: ದೇವರ ಸೃಷ್ಟಿಯಲ್ಲಿ ಚೆಂದ ಯಾವುದು? ಎಂದು. ಈ ಅದ್ಭುತ ನಿಸರ್ಗವೇ ಬಹುಚೆಂದ ಅಂದೆ ನಾನು. ಅವರು ಅಲ್ಲ ಎಂದರು. ಮತ್ತೆ ಯಾವುದು ಎಂದೆ.

ಹೆಣ್ಣು ಅಂದರು. ಹೌದು, ಹೆಣ್ಣು ಸೃಷ್ಟಿಯ ಅದ್ಭುತ ಚೆಂದಗಳಲ್ಲಿ ಒಂದಲ್ಲ, ಅದೇ ಪ್ರಧಾನವೆನಿಸಿತು. ಪ್ರೀತಿಗೆ ವಯಸ್ಸಿನ ಬಂಧನವಿಲ್ಲ ಎಂಬುದು ನಿಜ. ಆದರೂ ಯೌವನಕ್ಕೆ ಪ್ರೀತಿಯ ಸರಪಳಿಯಿದೆ. ಒಬ್ಬ ಒಬ್ಬಾಕೆಯನ್ನು ಪ್ರೀತಿಸುವುದು, ಒಪ್ಪಿ ಸ್ವೀಕರಿಸುವುದು ಈ ಹಂತದ. ಹೆಣ್ಣು ಗಂಡುಗಳು ಪರಸ್ಪರ ಆಕರ್ಷಣೆಗೆ ಒಳಪಡುವುದು ಈ ಪ್ರಾಯದ. ಪ್ರೀತಿಗೂ ಒಂದು
ಉನ್ಮಾದ ಬೇಕು. ಜೀವನಸಂಧ್ಯೆಯಲ್ಲೂ ಯವ್ವನದ ಪ್ರೀತಿಯ ಮೆಲುಕೇ ಅದರ ಉನ್ಮಾದವನ್ನು ಕೊಡುತ್ತದೆ. ಬದುಕುವ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಿಜದ ಪ್ರೀತಿ ಕಾಮವನ್ನು ಬಯಸುವುದಿಲ್ಲ. ಒಂದು ಸಂಗಾತಿಯನ್ನಷ್ಟೇ ಬಯಸುತ್ತದೆ. ಹೆಣ್ಣಿಗೆ ಗಂಡು ದಕ್ಕಿದ ಮೇಲೂ, ಗಂಡಿಗೆ ಹೆಣ್ಣು ಒಲಿದ ಮೇಲೂ ಇರುವುದು ಇದೇ ಪ್ರೀತಿಯ ಉನ್ಮಾದ!

ಬಾಲ್ಯ ಅಪ್ಪ ಅಮ್ಮನ ಪ್ರೀತಿಯನ್ನು ಬಯಸುತ್ತದೆ. ಯೌವನ ಗಂಡಿನ ಪ್ರೀತಿಯ ತೋಳನ್ನು ಬಯಸುತ್ತದೆ. ಮುಪ್ಪು ಮಕ್ಕಳ  ಪ್ರೀತಿಯನ್ನು ಬಯಸುತ್ತದೆ. ಇಡಿಯ ಬದುಕು ಪ್ರೀತಿಯನ್ನು ಬಯಸುತ್ತಲೇ ಇರುತ್ತದೆ. ಆದ್ದರಿಂದ ಪ್ರೀತಿಗೆ ಸಾವಿಲ್ಲ. ಜೀವನ ವೆಂಬುದು ಪ್ರೀತಿಯ ಬಂಧನದ ಸ್ವಾತಂತ್ರ್ಯವನ್ನು ಹುಡುಕುತ್ತದೆ. ಅದೂ ಒಂದು ಬಗೆಯ ಸ್ವಾತಂತ್ರ್ಯವೇ ಅಹುದು!
ಯಾವ ವಿರಹವೂ ಇಲ್ಲದೆ ಪ್ರೀತಿಗೆ ಬೆಲೆಯಿರುವುದಿಲ್ಲ. ವಿರಹಕ್ಕೂ ಮೊದಲು ಮಿಲನ ಆಗಿರಲೇಬೇಕಲ್ಲವೆ? ವಿರಹ ಉಂಟಾ ದಾಗಲೇ ಮತ್ತೊಮ್ಮೆ ಮಿಲನ ಸಾಧ್ಯ. ಇಲ್ಲದಿದ್ದರೆ ವಿರಹಕ್ಕೂ ಅರ್ಥವಿಲ್ಲ, ಮಿಲನಕ್ಕೂ ಸಂಭ್ರಮವಿರುವುದಿಲ್ಲ.

ಇನ್ನೊಮ್ಮೆ ಅಂತ ಹೇಳುವುದರ ಒಮ್ಮೆ ಎಂಬುದರ ಅನುಭವ ಆಗಿರುತ್ತದೆ. ಆದ್ದರಿಂದ ಪ್ರೀತಿಯ ಅನುಭವವಿಲ್ಲದೆ ವಿರಹವೂ ಹುಟ್ಟಲಾರದು. ವಿರಹವೂ ಅಷ್ಟೇ. ಪ್ರೀತಿಯಿಲ್ಲದೆ ಹುಟ್ಟಲಾರದು. ಇದು ಹೇಗೆಂದರೆ, ಸೋಲೂ ಕೂಡ ಗೆಲುವಿನ ಹಾಗೆ. ವೈಫಲ್ಯವೂ ಕೂಡ ಸಾಫಲ್ಯದ ಹಾಗೆ.

Leave a Reply

Your email address will not be published. Required fields are marked *