Saturday, 28th September 2024

ಸಂಸದೀಯ ಚುನಾವಣೆ ಹೇಳಿ ಹೋದ ಪಾಠಗಳು

ಅಭಿಮತ

ಪ್ರೊ.ಆರ್‌.ಜಿ.ಹೆಗಡೆ

ಚುನಾವಣೆ ಎಬ್ಬಿಸಿದ ಧೂಳು ಗಾಳಿಯಲ್ಲಿ ಕರಗಿಹೋಗಿ ವಾತಾವರಣ ಸ್ವಚ್ಛವಾದಂತೆ ಅದು ಹೇಳಿ ಹೋದ ಪಾಠಗಳು ಸ್ಪಷ್ಟವಾಗಿ ಗೋಚರಿಸಲಾ ರಂಭಿಸಿವೆ.

ಮೊದಲ ಪಾಠ ‘ಬಹಿರಂಗ’ ಪ್ರಚಾರದ ಸಂಪೂರ್ಣ ಅಪ್ರಸ್ತುತತೆ ಮತ್ತು ಅದನ್ನು ರಾಜಕೀಯ ಪಕ್ಷಗಳು ಹಾಗೂ ಜನತೆ ಗುರುತಿಸಿದಂತಿರುವುದು. ಬಹಿರಂಗ ಪ್ರಚಾರ ಎಂದರೇನು ಎಂಬುದು ಎಲ್ಲರಿಗೂ ಗೊತ್ತಿದೆ. ರಾಜಕೀಯ ಪಕ್ಷಗಳು ಜನರನ್ನು ತಮ್ಮ ಕಡೆ ಸೆಳೆಯಲು ಪ್ರಚಾರ ನಡೆಸುತ್ತವೆ. ಇಂತಹ ಪ್ರಚಾರದ ಭಾಗವಾಗಿ ಪಕ್ಷಗಳ ದೊಡ್ಡ ದೊಡ್ಡ ನಾಯಕರು ದೇಶದ ವಿವಿಧ ಭಾಗಗಳಿಗೆ ಹೋಗುತ್ತಾರೆ. ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಭಾಷಣ ಮಾಡುತ್ತಾರೆ.

ತಮ್ಮ ರಾಜಕೀಯ ತತ್ವಜ್ಞಾನವನ್ನು ಜನರ ಮುಂದೆ ಪ್ರಸ್ತುತ ಪಡಿಸುತ್ತಾರೆ. ಅದನ್ನು ಒಪ್ಪಿಕೊಳ್ಳುವಂತೆ ಹಾಗೂ ತಮ್ಮ ವಿರೋಧಿಗಳ ವಿಚಾರಧಾರೆ ಯನ್ನು ತಿರಸ್ಕರಿಸುವಂತೆ ಜನರ ಮನವೊಲಿಸಲು ಪ್ರಯತ್ನಿಸುತ್ತಾರೆ. ಇನ್ನೊಂದು ತಂತ್ರ ರೋಡ್ ಶೋಗಳನ್ನು ನಡೆಸುವುದು. ಬೈಸಿಕಲ್ ಅಥವಾ ಮೋಟರ್ ಸೈಕಲ್ ರ‍್ಯಾಲಿಗಳೂ ಇದರ ಭಾಗ. ಅಂದರೆ ನಾಯಕರು ಬೀದಿಗಳಲ್ಲಿ ನಡೆದುಕೊಂಡು ಅಥವಾ ವಾಹನಗಳ ಮೇಲೆ ನಿಂತು ಜನರ ಹತ್ತಿರದ ಸಂಪರ್ಕಕ್ಕೆ ಬರುವುದು. ಆ ಮೂಲಕ ಪಕ್ಷ ಮತ್ತು ಜನರ ನಡುವೆ ಮಾನಸಿಕ ಸಂಪರ್ಕ ಏರ್ಪಡಿಸಲು ಪ್ರಯತ್ನಿಸುವುದು.

ಕಾರ್ಯಕರ್ತರು ಗುಂಪು ಗುಂಪಾಗಿ ಮನೆ ಮನೆಗೆ ತೆರಳಿ ಜನರ ಮನವೊಲಿಸುವುದು ಮತ್ತೊಂದು ತಂತ್ರ. ಮೈಕುಗಳು ಮೊಳಗುತ್ತಿರುತ್ತವೆ. ಗೌಜು ಗದ್ದಲ ವಿರುತ್ತದೆ. ಜನ ತಮಗೆ ಮತ ನೀಡುವ ರೀತಿಯ ಮಾನಸಿಕ ‘ಹವಾ’ ಸೃಷ್ಟಿಸುವುದು ನಾಯಕರ/ ಪಕ್ಷಗಳ ಗುರಿ. ಸುದ್ದಿ ಮಾಧ್ಯಮಗಳು ಕಡಿಮೆಯಿದ್ದ,
ದೃಶ್ಯ ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾ ಇಲ್ಲದೆಯೇ ಹೋಗಿದ್ದ ಹಿಂದಿನ ದಿನಗಳಲ್ಲಿ ಇವೆಲ್ಲವುಗಳ ಅಗತ್ಯತೆ ಇತ್ತು. ನಾಯಕರನ್ನು ನೋಡಲು ಅಥವಾ ಕೇಳಲು ಬಹಿರಂಗ ಪ್ರಚಾರ ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ.

ಹಾಗಾಗಿ ಸಭೆಗಳಿಗೆ ಜನ ಸೇರುತ್ತಿದ್ದರು. ಸಹಜವಾಗಿ ಚುನಾವಣೆಗಳು ಗದ್ದಲದ ಸಂತೆಗಳಾಗಿದ್ದವು. ರಾಜಕೀಯ ಜಾತ್ರೆಗಳಾಗಿದ್ದವು. ಜನ ಆಯಾ ಪಕ್ಷದ ಗುರುತಾದ ಬಣ್ಣದ ಶಾಲು ಹೊದೆದು, ಹಣೆಗೆ ಬಣ್ಣಬಣ್ಣದ ತಿಲಕ ಹಚ್ಚಿ, ಕೈ ಮುಗಿಯುತ್ತ, ಕಾಲು ಹಿಡಿಯುತ್ತ ಗಡಿಬಿಡಿಯಲ್ಲಿ ಅಡ್ಡಾಡುತ್ತಿದ್ದರು. ತಮ್ಮಟೆಗಳು, ಜಾಗಟೆಗಳು, ಡೋಲುಗಳು ಇತರ ಕರ್ಕಶ ವಾದ್ಯಗಳು ಕಿವಿಯನ್ನು ಅಪ್ಪಳಿಸುತ್ತಿದ್ದವು.

ಮತ್ತೆ ಕೆಲವು ವರ್ಷಗಳ ಹಿಂದೆ ಬೇರೆಯವೂ ಇದ್ದವು. ಅಪರಿಮಿತ ಪೋಸ್ಟರ್‌ಗಳು, ಪಕ್ಷಗಳ ಧ್ವಜಗಳು, ಪತಾಕೆಗಳು, ಗೋಡೆಬರಹಗಳು, ಭಿತ್ತಿಚಿತ್ರಗಳು ಬಹಿರಂಗ ಪ್ರಚಾರದ ಭಾಗವಾಗಿದ್ದವು. ಆದರೆ ಟಿ.ಎನ್ ಶೇಷನ್ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ ಬಂದು ಅವಕ್ಕೆಲ್ಲ ಕಡಿವಾಣ ಹಾಕಿದ ನಂತರ ಕ್ರಮೇಣ ಅಂಥವು ಕಡಿಮೆಯಾಗುತ್ತ ಹೋಗಿ ಈಗಂತೂ ಅವೆಲ್ಲ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿ ಹೋಗಿವೆ. ಉಳಿದಂತೆ ಮೇಲೆ ಹೇಳಿದ ರೀತಿಯ ಬಹಿರಂಗ ಪ್ರಚಾರ, ಗೌಜು ಗದ್ದಲ ಕಡಿಮೆಯಾಗುತ್ತ ಬಂದರೂ ಉಳಿದೇ ಇತ್ತು,

ಇತ್ತೀಚಿನವರೆಗೂ. ಆದರೆ ಈ ಚುನಾವಣೆಯ ವಿಶೇಷವೆಂದರೆ ಹೆಚ್ಚುಕಡಿಮೆ ಬಹಿರಂಗ ಪ್ರಚಾರ ಅಪ್ರಸ್ತುತವೇ ಆಗಿಹೋಗಿದ್ದು. ಹಾಗೆಯೇ ಅದರ ಅಪ್ರಸ್ತುತತೆ ರಾಜಕಾರಣಿ ಗಳಿಗೆ ಹಾಗೂ ಜನತೆಗೆ ಸಂಪೂರ್ಣವಾಗಿ ಅರ್ಥವಾಗಿ ಹೋಯಿತು ಅನಿಸುತ್ತದೆ. ಏಕೆಂದರೆ ರಾಜಕಾರಣಿಗಳು ಮೊದಲಿನ ರೀತಿಯಲ್ಲಿ ಬಹಿರಂಗ ಪ್ರಚಾರದಲ್ಲಿ ತೊಡಗಲೇ ಇಲ್ಲ. ಅಥವಾ ಬಹಳ ಕಡಿಮೆ. ಬಹುಶಃ ಇದಕ್ಕೆ ಹಲವು ಕಾರಣಗಳಿವೆ. ಒಂದನೆಯದು,
ರಾಷ್ಟ್ರೀಯವಾಗಿ ಜನರನ್ನು ಸೆಳೆಯುವ ಆಕರ್ಷಣೆ ಇರುವ ನಾಯಕರು ಈಗ ಇರುವುದು ಒಬ್ಬರು ಅಥವಾ ಇಬ್ಬರು. ಹಿಂದಿನಂತೆ ಇಡೀ ಜನಸಮೂಹ ವನ್ನು ತಮ್ಮ ಮಾತಿನ ತಾಳಕ್ಕೆ ಕುಣಿಸಬಲ್ಲ ಪ್ರಖರ ವಾಗ್ಮಿಗಳು ತೀರ ಕಡಿಮೆ. ಒಬ್ಬಿಬ್ಬರು ಮಾತ್ರ.

ಇನ್ನೊಂದು ಕಡೆಯಿಂದ ನೋಡಿದರೆ ಇರುವ ಮಹಾ ನಾಯಕರ ಇಡೀ ಭಾಷಣವನ್ನು ಕೇಳುವ ಪುರುಸೊತ್ತು ಇರುವ ಜನ ಕೂಡ ಕಡಿಮೆಯೇ. ದ್ರಶ್ಯ
ಮಾಧ್ಯಮ ಕೈ ಬೆರಳ ತುದಿಯಲ್ಲಿ ಲಭ್ಯವಿರುವ ಇಂದಿನ ದಿನಗಳಲ್ಲಿ ಮನೆಗಳಲ್ಲಿ ಕುಳಿತು, ಅಥವಾ ಮೊಬೈಲುಗಳಲ್ಲಿ ಮಾತನ್ನು ‘ನೋಡುವುದು’ ಸುಖ
ಎಂಬ ಭಾವನೆ ಜನರಿಗೆ ಬಂದಿದೆ. ಹೀಗಾಗಿ ಸಾರ್ವಜನಿಕ ಪ್ರಚಾರದಲ್ಲಿ ಭಾಗವಹಿಸುವುದು ಅವರಿಗೆ ಇಷ್ಟವಿಲ್ಲ. ಮನೆಯಿಂದ ಹೊರಬರುವುದೂ ಹೆಚ್ಚಿ
ನವರಿಗೆ ಇಷ್ಟವಿಲ್ಲ. ಅಲ್ಲದೆ ಹಲವು ಜನರ ಅಭಿಪ್ರಾಯದಲ್ಲಿ ರಾಜಕಾರಣಿಗಳ ಮಾತಿನಲ್ಲಿ ಅಂತಹ ಕೇಳಲೇಬೇಕಾದ ವಿಷಯವೇನೂ ಇರುವುದಿಲ್ಲ.
ಅಲ್ಲಿರುವುದು ಬರೀ ಕೆಸರು ಚೆಲ್ಲಾಟ ಎನ್ನುವ ಭಾವನೆ ಅವರದು.

ಬಹುಶಃ ರಾಜಕಾರಣಿಗಳ ಅಭಿಪ್ರಾಯ ಇದಕ್ಕೆ ವಿರುದ್ಧವಾಗಿದೆ. ಅವರ ಪ್ರಕಾರ ದೊಡ್ಡ ದೊಡ್ಡ, ರಾಷ್ಟ್ರೀಯ- ಅಂತಾರಾಷ್ಟ್ರೀಯ ವಿಷಯ ಹೇಳಿದರೆ
ಜನರಿಗೆ ಅರ್ಥವಾಗುವುದೇ ಇಲ್ಲ. ಅದೆಲ್ಲ ಅವರಿಗೆ ಬೇಡ. ಸರಕಾರಗಳಿಂದ, ರಾಜಕಾರಣದಿಂದ ತಮಗೇನು ಸಿಗುತ್ತದೆ ಎನ್ನುವುದಷ್ಟೇ ಜನರಿಗೆ  ಕಿರುವುದು. ಹಾಗೆಯೇ ರಾಜಕಾರಣಿಗಳ ಅಭಿಪ್ರಾಯದಲ್ಲಿ ಜನರನ್ನು ‘ಸೇರಿಸುವುದು’ ಬಹಳ ಕಠಿಣವಾದ, ಅಲ್ಲದೆ ತುಟ್ಟಿಯ ವಿಷಯ. ಬರುವ ಜನರಿಗೆ ಊಟ, ತಿಂಡಿ, ಆಳು ಪಗಾರು, ‘ಮತ್ತಿತರ’ ವ್ಯವಸ್ಥೆ ಮಾಡ ಬೇಕು. ವಾಹನ ಬಾಡಿಗೆ ಭರಿಸಬೇಕು.

ಇದೆಲ್ಲ ಮಾಡುವುದಕ್ಕಿಂತಲೂ ನೇರವಾಗಿ ಜನರಿಗೆ ಕವರ್ ನಲ್ಲಿ ಹಾಕಿ ‘ವ್ಯವಸ್ಥೆ’ ಮಾಡಿಬಿಟ್ಟರೆ ಹೆಚ್ಚು ಕೊಡಲು ಪೂರೈಸುತ್ತದೆ. ಅಲ್ಲದೆ ಬರುವವರು ಹೆಚ್ಚು ಕಡಿಮೆ ಬಾಡಿಗೆ ಜನ. ಎಲ್ಲ ಪಕ್ಷದ ರ‍್ಯಾಲಿಗಳಿಗೂ ಬರುವವರು ಅವರೇ. ಬಂದವರೆಲ್ಲ ಪರವಾಗಿ ಮತಹಾಕಿ ಬಿಡುತ್ತಾರೆ ಎಂದೇನೂ ಇಲ್ಲ. ಮತ್ತೆ ರಾಜಕಾರಣಿಗಳಿಗೆ ಗೊತ್ತಿದೆ. ಬಹಿರಂಗ ಪ್ರಚಾರಕ್ಕಿಂತಲೂ ‘ಅಂತರಂಗ’ ಪ್ರಚಾರವೇ ಮೇಲು. ಅದಕ್ಕೇ ಹೆಚ್ಚಿನ ‘ಶಕ್ತಿ’ ಇದೆ. ಬಹಿರಂಗದ ಮಾತು ಜೊಳ್ಳಾಗಿ
ಹಾರಿಹೋಗುತ್ತದೆ.

ಈ ಕಾರಣಗಳಿಂದಾಗಿ ಬಹಿರಂಗ ಪ್ರಚಾರದ ವಿಷಯದಲ್ಲಿ ರಾಜಕಾರಣಿಗಳು ಮತ್ತು ಜನರ ಆಶಯ, ಲೆಕ್ಕ, ಹೋಗಿ, ಹೋಗಿ, ಒಂದೇ ಕಡೆ ಕೂಡಿ ಬಿಡುತ್ತವೆ. ಹಾಗಾಗಿ ಬಹುಶಃ ಎರಡೂ ಕಡೆಯವರಿಗೂ ಬಹಿರಂಗ ಪ್ರಚಾರದಲ್ಲಿ ವಿಶೇಷ ಆಸಕ್ತಿಯಿಲ್ಲ. ಈ ದೃಷ್ಟಿಯಿಂದ ಈ ಚುನಾವಣೆ ಹಿಂದಿನ ಚುನಾವಣೆಗಳಂತಿರಲಿಲ್ಲ. ಬಹುತೇಕ ಕಡೆ ಅಬ್ಬರ, ಗದ್ದಲ, ಜೈಕಾರ ಇತ್ಯಾದಿ ಕೇಳಿಸಲೇ ಇಲ್ಲ. ಡೋಲು, ತಮಟೆ, ತಾಳ ಇತ್ಯಾದಿ ವಾದ್ಯಗಳ ಗೌಜು ಬಹಳ ಕಡಿಮೆ ಇತ್ತು. ಚುನಾವಣೆ ಬಂದಿದ್ದು ಹೋಗಿದ್ದು ತಿಳಿಯಲೇ ಇಲ್ಲ.ಪ್ರಚಾರಕ್ಕೆ ಜನರ ಪ್ರತಿಕ್ರಿಯೆಯ ರೀತಿ ಎಷ್ಟು ನೀರಸವಾಗಿತ್ತೆಂದರೆ ಸಾರ್ವಜನಿಕ ಪ್ರಚಾರದ ಅವಧಿಯನ್ನು ಅರ್ಧಕ್ಕೆ ಇಳಿಸಿದರೂ ಸಾಕು ಅನಿಸುತ್ತದೆ.

ಹೇಗೂ ಚುನಾವಣೆಗೆ ಸ್ಪರ್ಧಿಸಿದವರ ವಿವರ ಇತ್ಯಾದಿಗಳು ಜನರಿಗೆ ಮಾಧ್ಯಮಗಳ ಮೂಲಕ ಬೇಕಾದಷ್ಟು ತಿಳಿದಿರುತ್ತವೆ. ಅಂತರಂಗದ ಪ್ರಚಾರಕ್ಕೆ ಅಷ್ಟೊಂದು ದಿನಗಳೇನೂ ಬೇಡ. ಈ ಸಲದ ಚುನಾವಣೆಯಲ್ಲಿ ಬಸ್ಸುಗಳಲ್ಲಿ, ಅಂಗಡಿ ಕಟ್ಟೆಗಳ ಮುಂದೆ, ಬಾರುಗಳಲ್ಲಿ ಅಂತಹ ಸ್ಥಳಗಳಲ್ಲಿ ರಾಜಕೀಯ ಚರ್ಚೆಗಳೂ ಮೆಲುದನಿಯಲ್ಲೇ ಇದ್ದವು. ಸಾಮಾನ್ಯವಾಗಿ ಹಿಂದೆಲ್ಲ ಇಂತಹ ಸ್ಥಳಗಳಲ್ಲಿ ಏರುದನಿಯ ಜೋರು, ಬಿಸಿಬಿಸಿ ಚರ್ಚೆ
ನಡೆದಿರುತ್ತಿತ್ತು. ಮಾತು ಮೆಲುವಾಗಿದ್ದಕ್ಕೆ ಕಾರಣ ವಿದೆ. ಏನೆಂದರೆ ಜನರಿಗೆ ಗೊತ್ತಾಗಿದೆ. ರಾಜಕೀಯ, ಸಮಾಜ ತೀವ್ರವಾಗಿ (ಭಯಾನಕವಾಗಿ) ಒಡೆದು
ಹೋಗಿರುವ ದಿನಗಳು ಇವು. ಇಂದಿನ ದಿನಗಳಲ್ಲಿ ತಮ್ಮ ರಾಜಕೀಯ ನಿಲುವನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಬಹಳ ಅಪಾಯಕಾರಿ ಕೂಡ.

ಮನಸ್ಸಿನಲ್ಲಿದ್ದುದನ್ನು ಸಾರ್ವಜನಿಕವಾಗಿ ಕೇಳಿಸುವಂತೆ ಹೇಳಿಬಿಡುವುದು ದೊಡ್ಡ ಭಾನಗಡಿಗೆ ಕಾರಣವಾಗಬಹುದು.ಯಾರಾದರೂ ಮಾತನ್ನು
ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸಂಬಂಧಪಟ್ಟವರಿಗೆ ಮುಟ್ಟಿಸಿಬಿಡಬಹುದು ಎಂಬ ಭಯ ಜನತೆಯಲ್ಲಿ ಸ್ರಷ್ಟಿಯಾಗಿದೆ. ಒಮ್ಮೆ ಹಾಗೆ ಆದರೆ ಮಾತನಾಡಿದ ಮನುಷ್ಯ ಇಂತಹ ಪಕ್ಷದವನು ಎಂದು ಬ್ರ್ಯಾಂಡ್ ಆಗುತ್ತಾನೆ. ಯಾವುದೋ ಒಂದು ಪಕ್ಷದ ವಿರೋಧಿ ಎಂದು ಗುರುತಿಸಲ್ಪಡುತ್ತಾನೆ. ಆತ ತನ್ನ ಮಾತುಗಳನ್ನು ಮುಗ್ಧವಾಗಿ ಹೇಳಿದ್ದರೂ ಕೂಡ.

ಈಗಿನ ರಾಜಕೀಯದಲ್ಲಿ ಮಧ್ಯಮಕ್ಕೆ, ತಟಸ್ಥ ಅಭಿಪ್ರಾಯಗಳಿಗೆ ಕೂಡ ಸ್ಥಾನವಿಲ್ಲ. ಹೆಚ್ಚಿನ ಜನ ತೀವ್ರ ಎಡ ಅಥವಾ ತೀವ್ರ ಬಲ. ಮತ್ತು ಇವೆರಡರ ನಡುವೆ ಹಾವು ಮುಂಗಸಿಯ ಸಂಬಂಧವಿದೆ. ಹಾಗಾಗಿ ಬೇಡವಾದ ಅಭಿಪ್ರಾಯ ಯಾರಾದರೂ ವ್ಯಕ್ತ ಪಡಿಸಿದರೆ ವಿರೋಧ ಪಕ್ಷದವರು ಕಾದು ನೋಡಿ ಅವನಿಗೆ ಸಮಸ್ಯೆ ಸೃಷ್ಟಿಸುತ್ತಾರೆ. ಆತನಿಗೆ ಅರಿವಿಲ್ಲದೆಯೇ. ಆಯಾ ವ್ಯಕ್ತಿಯ ಲೆವೆಲ್‌ನ ಕಿರುಕುಳ ಬರುತ್ತದೆ. ಅವಮಾನಿಸಲಾಗುತ್ತದೆ. ಎಷ್ಟರ ಮಟ್ಟಿನ ದೆಂದರೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರಕ್ಕೆ ನಿಂತಿದ್ದರೆ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ತೇಲಿಬಿಡಲಾಗುತ್ತದೆ. ಅಥವಾ ವ್ಯಕ್ತಿಗೆ ಎಲ್ಲಿ ಸಾಧ್ಯವೋ ಅಲ್ಲೆಲ್ಲ ಕಿರುಕುಳ ನೀಡಲಾಗುತ್ತದೆ.ಈ ಹಿನ್ನೆಲೆಯಲ್ಲಿ ರಾಜಕೀಯದಲ್ಲಿ ಕೈ ಹಾಕಿಕೊಳ್ಳಬಾರದು ಎಂಬ ವಿಷಯ ಎಲ್ಲರಿಗೂ ಅರ್ಥವಾದಂತಿದೆ. ಹಾಗಾಗಿ ರಾಜಕೀಯ, ಚುನಾವಣೆ ವಿಷಯ ಈಗ ಜನ ಸಾರ್ವಜನಿಕವಾಗಿ ಮಾತನಾಡುವುದು ಕಡಿಮೆ.

ಅದಕ್ಕಾಗಿಯೂ ಗೌಜು ಗದ್ದಲ ಕಡಿಮೆ. ಮತ್ತು ಬಹಿರಂಗ ಪ್ರಚಾರ, ಮಾತು ಕಡಿಮೆ. ಆಳವಾಗಿ ವಿಭಜನೆಗೊಂಡಿರುವ ಇಂತಹ ರಾಜಕೀಯದಿಂದಾಗಿಯೇ ಈ ಬಾರಿ ಜನ ತಿಂಗಳುಗಟ್ಟಲೆ ಮೊದಲೇ ಯಾರಿಗೆ ಮತಹಾಕುವುದು ಎನ್ನುವುದನ್ನು ನಿರ್ಧಾರ ಮಾಡಿದಂತಿತ್ತು. ಈ ಕಾರಣದಿಂದಾಗಿಯೂ ಸಾರ್ವಜನಿಕ ಪ್ರಚಾರ ಅಪ್ರಸ್ತುತವಾಗಿ ಹೋಯಿತು. ಕೆಲವು ಜಿಲ್ಲೆಗಳಲ್ಲಿಯಂತೂ ‘ಅಂತರಂಗ’ ಪ್ರಚಾರ ಕೂಡ ಕಡಿಮೆಯೇ ಇದ್ದಂತಿತ್ತು. ಏಕೆಂದರೆ ಹಣ
ಹರಿಯುತ್ತಿದ್ದರೆ ಗೊತ್ತಾಗಿಬಿಡುತ್ತದೆ. ಆಗ ಚುನಾವಣೆಯ ‘ಪರಿಮಳ’ ಮೂಗಿಗೆ ಹೊಡೆಯುವಂತೆ ಹರಡಿರುತ್ತದೆ. ಮತ್ತೆ ರಸ್ತೆಗಳ ನಡುವೆ ಒಬ್ಬೊಬ್ಬರೇ
ನಿಂತು ಜೋರಾಗಿ ಭಾಷಣ ಮಾಡುತ್ತಿರುತ್ತಾರೆ.

ಆದರೆ ಈ ವರ್ಷ ಅಂಥವರು ವಿಶೇಷ ಕಾಣಲಿಲ್ಲ. ಕಾರ್ಯಕರ್ತರ ನಾಯಕರ, ಮಟ್ಟದಲ್ಲಿ ಹಣ ಹರಿದಿರಬಹುದು ಅಥವಾ ಇಲ್ಲದಿರಬಹುದು. ಹೇಳಲಾಗುವುದಿಲ್ಲ. ಆದರೆ ಸಾರ್ವಜನಿಕವಾಗಿ ಅಷ್ಟೊಂದು, ಹರಿಯಲಿಲ್ಲ ಎಂದೇ ಭಾವನೆ. ಅಥವಾ ತೆಗೆದುಕೊಂಡರೂ ಕೂಡ ಜನ ಮತ ಮಾತ್ರ ಯಾರಿಗೆ ಹಾಕಬೇಕಿತ್ತೋ ಅಲ್ಲಿಗೇ ಹಾಕಿದರು ಎಂದೇ ಭಾವನೆ. ಅಂದರೆ ಹಣ ಚುನಾವಣಾ -ಲಿತಾಂಶವನ್ನು ತೀವ್ರವಾಗಿ ಬದಲಾಯಿಸಲಿಲ್ಲ. ಖರ್ಚು ಮಾಡಿದಂತೆ ಅನಿಸಿದವರು ಸೋತರು. ಮಾಡದಿದ್ದಂತೆ ಅನಿಸಿದವರು ಗೆದ್ದರು. ಅಥವಾ ಮಾಡಿದ ಖರ್ಚಿಗೂ, ಬಿದ್ದ ಮತಕ್ಕೂ ಸಂಬಂಧವೇ ಇರಲಿಲ್ಲ.

ಹೇಳಬೇಕಾಗಿ ದ್ದೆಂದರೆ ಹಣ ಅಥವಾ ಬೇರೆ ಬೇರೆ ಸಂಪನ್ಮೂಲಗಳು ಕೂಡ ಪ್ರಸ್ತುತ ಚುನಾವಣೆಯಲ್ಲಿ ಅಪ್ರಸ್ತುತವಾಗಿಯೇ ಹೋದವು. ಖರ್ಚು  ಮಾಡುವವರು ಮಾಡಿದರು. ಇಲ್ಲದವರು ಮಾಡಲಿಲ್ಲ. ಆದರೆ ಫಲಿತಾಂಶ ಸ್ಪಷ್ಟಪಡಿಸಿದ್ದೆಂದರೆ ಖರ್ಚು ಮಾಡುವುದಕ್ಕೂ/ ಮಾಡದೆ ಇರುವುದಕ್ಕೂ ಗೆಲ್ಲುವುದಕ್ಕೂ ಸಂಬಂಧವಿಲ್ಲ. ಬಹುಶಃ ಈ ರೀತಿಯ ಮಹತ್ವದ ಬೆಳವಣಿಗೆ ನಡೆದಿದ್ದು ಈ ಚುನಾವಣೆಯಲ್ಲಿ. ಅಂದರೆ ಹಣ ಕೂಡ ಅಪ್ರಸ್ತುತವಾಗಿ ಹೋಯಿತು.

ಇಂತಹ ಹೊಸ ಬೆಳವಣಿಗೆಗೆ ಬಹುಶಃ ಒಂದು ಮುಖ್ಯ ಕಾರಣವಿದೆ. ಏನೆಂದರೆ ಈ ಸಲದ ಚುನಾವಣೆ ರಾಜಕೀಯ ತತ್ವ ಜ್ಞಾನಗಳ ನಡುವೆ ನಡೆದ
ಹಣಾಹಣಿ: ‘ಬಲಪಂಥ’ ಮತ್ತು ‘ಎಡಪಂಥಗಳ’ ನಡುವೆ. ಹಾಗೆಯೇ ‘ಜಾಗತೀಕರಣದ ರಾಜಕೀಯ’ ಮತ್ತು ರಿಸರ್ವೇಶನಿಷ್ಟ್ ರಾಜಕೀಯಗಳ ನಡುವೆ.
ಅಥವಾ ಆಧುನಿಕತೆ ಬಯಸುವ ಭಾರತದ ‘ನವಮ ಧ್ಯಮ ವರ್ಗ’ ಮತ್ತು ‘ಸಾಮಾಜಿಕ ನ್ಯಾಯ’ದ ಪರವಾಗಿರುವ ವರ್ಗಗಳ ನಡುವೆ. ಇಂತಹ
ತತ್ವಜ್ಞಾನಗಳನ್ನು ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳು ಪ್ರತಿನಿಽಸಿ ಎದುರುಬದುರಾಗಿ ನಿಂತವ.

ಇಂತಹ ಹಣಾಹಣಿಯಲ್ಲಿ ತಮ್ಮ ಬೆಂಬಲಿತ ವರ್ಗ ಸೋತರೆ ಏನಾಗುತ್ತದೆಂಬ ಕಲ್ಪನೆ ಮತ್ತು ಭಯ ಎರಡೂ ತತ್ವಜ್ಞಾನದ ಬೆಂಬಲಿಗರಿಗೆ ಇತ್ತು. ಹಾಗಾಗಿ ಬೆಂಬಲಿಗರು ಬೇರೆ ಯಾವ ಆಮಿಷಕ್ಕೂ ಒಳಗಾಗದೆ ನೇರವಾಗಿ ತಮ್ಮ ತಮ್ಮ ಪ್ರಾತಿನಿಽಕ ಪಕ್ಷಗಳಿಗೆ ಮತ ನೀಡಿಬಿಟ್ಟರು. ಅಂದರೆ ಈ ಚುನಾವಣೆ ಹೇಳಿದ ಮೂರನೆಯ ಪಾಠವೆಂದರೆ ‘ತತ್ವಜ್ಞಾನ’ ಆಧರಿತ ಚುನಾವಣೆಯಲ್ಲಿ ಆಮಿಷಗಳು ಕೆಲಸ ಮಾಡುವುದಿಲ್ಲ. ಮತ ಬೀಳುವುದು, ಬಿದ್ದಿದ್ದು ಅಭ್ಯರ್ಥಿಗಳಿಗಲ್ಲ. ತತ್ವಜ್ಞಾನಗಳಿಗೆ. ಹೀಗಾಗಿ ಕಾರ್ಲ್ ಮಾರ್ಕ್ಸ್ ಹೇಳಿದ ಮಾತು ’Seಛ್ಟಿಛಿ ಜಿo ಟಠಿeಜ್ಞಿಜ ಞಟ್ಟಛಿ mಟಡಿಛ್ಟ್ಛ್ಠ್ಝಿ ಠಿeZ Z ಜಿbಛಿZ ಡಿeಟoಛಿ ಠಿಜಿಞಛಿ eZo ಟಞಛಿ’ಸತ್ಯವೆಂದು ಸಾಬೀತಾಗಿ ಹೋಯಿತು.

ಚುನಾವಣೆಯ ಫಲಿತಾಂಶವೂ ಕೂಡ ಒಂದು ಮಹತ್ವದ ಪಾಠ ಹೇಳಿದೆ. ಏನೆಂದರೆ ದೇಶದಲ್ಲಿ ‘ಎಡ’ ಮತ್ತು ‘ಬಲ’ ವನ್ನು ಸಮರ್ಥಿಸುವ (ಎರಡು) ವರ್ಗಗಳು ಸಾಕಷ್ಟು ಬಲಿಷ್ಟವಾಗಿಯೇ ಇವೆ. ಅವುಗಳ ನಡುವೆ ತೀವ್ರ ಹಣಾಹಣಿ ಇದೆ. ಇದು ಬಹಳ ಆಳವಾದ ವಸ್ತುವನ್ನುಳ್ಳ ಯುದ್ಧ. ಮತ್ತು ತೀವ್ರ ಭಾವನಾತ್ಮಕ ಯುದ್ಧ ಕೂಡ ಹೌದು. ಈ ಎರಡು ಧ್ರುವಗಳು ಅಥವಾ ವಸ್ತುಗಳಿಗೆ ತಲಾ ಸುಮಾರು ಎರಡು ನೂರು ಸೀಟು ಗೆಲ್ಲುವ ಸಾಮರ್ಥ್ಯವಿದೆ. ಅದರ ಮುಂದಿನ ಸ್ಥಾನಗಳಿಗಾಗಿ ತೀವ್ರ ಹೋರಾಟ ಸ್ಪರ್ಧೆ ನಡೆಯುತ್ತದೆ.