Sunday, 8th September 2024

ಪ್ರೀತಿಯಲ್ಲಿ ಇರೋ ಸುಖ ಗೊತ್ತು ಮಾಡಿಕೊಳ್ಳಿರಲ್ಲ

ಶ್ವೇತಪತ್ರ

shwethabc@gmail.com

ಪ್ರೀತಿಗೆ ಎರಡು ಮುಖ. ಒಂದು ಭೂಮಿಯೆಡೆಗೆ ತಿರುಗಿದ್ದರೆ, ಮತ್ತೊಂದು ಆಕಾಶದೆಡೆಗೆ ಮುಖ ಮಾಡಿರುತ್ತದೆ. ಪ್ರೀತಿ ಎಂಬುದೊಂದು ಸಮನ್ವಯ. ಕೆಸರಲ್ಲಿ ಅರಳಿದ ತಾವರೆಯಂತೆ. ಪ್ರೀತಿ… ಹಾಗೆಂದರೇನು? ಅದು ನಮ್ಮನ್ನೆಲ್ಲಾ ಸೆಳೆಯುವ ಒಂದು ದೊಡ್ಡ ಮಾಂತ್ರಿಕತೆ.

ಅದರೊಳಗೊಂದು ಆಯಸ್ಕಾಂತದ ಸೆಳೆತವಿದೆ, ಅದಕ್ಕೇ falling in love ಎನ್ನುವುದು. ಪ್ರೀತಿಯ ಸೆಳೆತ ದಿಂದ ತಪ್ಪಿಸಿಕೊಳ್ಳಲು ಯಾರಿಗಾದರೂ ಸಾಧ್ಯವೇ? ಪ್ರೀತಿಯ ಆಕರ್ಷಣೆಯೇ ಅಂಥದ್ದು, ಅದು ನಮ್ಮನ್ನು ತನ್ನೆಡೆಗೆ ಕರೆಸಿಕೊಳ್ಳುತ್ತದೆ. ಪ್ರೀತಿ ಅದೊಂದು ದೊಡ್ಡ ಪವಾಡ, ಅದು ನಮ್ಮಲ್ಲಿ ಮೂಡಿದ ಮರುಗಳಿಗೆ ನಾವು ಸಾಮಾನ್ಯರಾಗಿ ಉಳಿಯುವುದಿಲ್ಲ, ನಮ್ಮ ಪ್ರeಯೊಳಗೊಂದು ಅದ್ಭುತ ಬದಲಾವಣೆ ಮೂಡುತ್ತದೆ. ಪ್ರೀತಿ ನಮ್ಮನ್ನು ಮಾರ್ಪಡಿಸುತ್ತದೆ. ಬುದ್ಧನ ಪ್ರೀತಿಗೆ ಕರಗಿದ ಡಕಾಯಿತ ಅಂಗುಲಿಮಾಲ ಭಿಕ್ಕುವಾದ ಕಥೆ ನಮ್ಮೆದುರಿಗೆ ಇದೆ.

ಅಡಿಪಾಯವನ್ನು ಎತ್ತರಿಸುವ, ಭೂಮಿ ಆಕಾಶವನ್ನು ಒಂದು ಮಾಡುವ ಶಕ್ತಿ ಪ್ರೀತಿಗಿದೆ. ಪ್ರೀತಿಯು ನಮ್ಮೊಳಗಿನ ಅಧ್ಯಾತ್ಮ. ಪ್ರೀತಿ ಅದೊಂದು ಭಾವಪರವಶತೆ ಮತ್ತು ಪರಿವರ್ತನೆಯ ಶಕ್ತಿ. ಬದುಕು ಮತ್ತು ಬೆಳಕಿನ ನಡುವಿನ ಸೇತುವೆಯೇ ಪ್ರೀತಿ. ವಾಸ್ತವವನ್ನು ಅದಿರುವಂತೆ ಅರ್ಥೈಸುವುದಕ್ಕೆ ಸಾಧ್ಯವಾಗುವುದೇ ಪ್ರೀತಿಯ ಕಣ್ಣುಗಳಿಂದ. ಎಲ್ಲವನ್ನೂ ತರ್ಕದ ಆಧಾರದ ಮೇಲೆ ನೋಡುವುದಾದರೆ ನಮಗೆ ಅರ್ಥವಾಗುವುದು ಕೆಲವು ವಿಚಾರಗಳಷ್ಟೇ. ಪ್ರೀತಿಯ ಕಣ್ಣುಗಳಿಂದ ನೋಡಿದಾಗ ಗೋಚರವಾಗುವುದು ಇಡೀ ಬ್ರಹ್ಮಾಂಡ. ಮನುಷ್ಯರ ಭಾಷೆಗಳಲ್ಲಿ ಪ್ರೀತಿಯೊಂದು ಮಹತ್ವದ ಪದ, ಏಕೆಂದರೆ ಪ್ರೀತಿ ನಮ್ಮೆಲ್ಲರ ಅಸ್ತಿತ್ವದ ಭಾಷೆ. ಪ್ರೀತಿಯ ಭಾಷೆಯೊಳಗೆ ಲೆಕ್ಕಾಚಾರಗಳಿಗೆ ಜಾಗವಿಲ್ಲ, ಅಲ್ಲಿ ಫಲಿತಾಂಶವನ್ನು ಕಂಡುಹಿಡಿಯಲಾಗುವುದಿಲ್ಲ.

ಪ್ರೀತಿಗೆ ಭವಿಷ್ಯ ಎಂಬುದು ಅಸ್ತಿತ್ವದಲ್ಲಿ ಇರುವುದಿಲ್ಲ, ಅದು ಬದುಕುವುದು ಬರೀ ಈ ಕ್ಷಣಗಳೊಳಗೆ. ಪ್ರೀತಿಯೊಳಗೆ ಯಾವ ಯೋಜನೆಗಳೂ ಸಾಧ್ಯವಿಲ್ಲ.
ಪ್ರತಿ ಮಗುವು ಅಗಾಧವಾದ ಪ್ರೀತಿಯ ಶಕ್ತಿಯೊಂದಿಗೆ ಜಯಿಸುತ್ತದೆ. ಮಗುವೆಂದರೆ ತುಂಬು ಪ್ರೀತಿ, ನಂಬಿಕೆ. ಇದೇ ಪ್ರೀತಿಯ ನಂಬಿಕೆಯಲ್ಲಿ ಮಗುವೊಂದು ಹಾವಿನೊಂದಿಗೆ ಆಡಬಲ್ಲದು. ಆದರೆ ಮುಂದೆ ಇದೇ ಮಗುವಿಗೆ ನಾವು ಅನುಮಾನಿಸುವುದನ್ನು ಕಲಿಸುತ್ತೇವೆ. ತರ್ಕಿಸುವುದು, ಸಂದೇಹಿಸುವುದು, ಎಚ್ಚರ ವಾಗಿರುವುದು ಹೀಗೆ ಎಲ್ಲವನ್ನೂ ಕಲಿಸುತ್ತೇವೆ. ಆಗ ಪ್ರೀತಿ ನಿಧಾನಕ್ಕೆ ಕಮರಿಬಿಡುತ್ತದೆ.

ಇಂದು ಎಲ್ಲಕ್ಕಿಂತ ಹೆಚ್ಚಾಗಿ, ಒಬ್ಬರನ್ನು ನಂಬದಿರುವುದು ಹೇಗೆ? ಅವಮಾನಿಸುವುದು ಹೇಗೆ? ಎಂಬುದನ್ನು ನಾವೆಲ್ಲ ಕಲಿಯುತ್ತಿದ್ದೇವೆ. ಜತೆಗೆ ಮನುಷ್ಯರಿಗಿಂತ ವಸ್ತುಗಳೊಡನೆ ನಮ್ಮದು ಹೆಚ್ಚಿನ ಬಾಂಧವ್ಯ. ಮನುಷ್ಯರನ್ನು ಪ್ರೀತಿಸುತ್ತೇವೆ ಆದರೆ ಅವರಿಗೊಂದು ಪಾತ್ರವನ್ನು ನೀಡಿ ಅವರನ್ನು ಕುಗ್ಗಿಸಿಬಿಡುತ್ತೇವೆ. ಪ್ರೀತಿಸುವುದಕ್ಕೆ ಶುರುವಿಟ್ಟ ಮರುಗಳಿಗೆ ಹಿಡಿತ ಸಾಧಿಸಲು ತೊಡಗುತ್ತೇವೆ. ಆಗ ಅಲ್ಲೊಂದು ಘರ್ಷಣೆ ಉದ್ಭವಿಸುತ್ತದೆ. ಗಂಡ-ಹೆಂಡತಿ, ಅಕ್ಕ-ತಂಗಿ,
ಅಪ್ಪ-ಮಗಳು ಇಲ್ಲಿ ನಾನು ಹೇಳಿದಂತೆ ನೀನು ಕೇಳಬೇಕು ಎಂಬ ವ್ಯಾಖ್ಯಾನವೇ ಹೆಚ್ಚು.

ಪ್ರೀತಿ ಘಾಸಿಗೊಳ್ಳುವುದೇ ಎರಡು ವಿಚಾರಗಳಿಂದ- ಅದನ್ನು ಕೇವಲ ತರ್ಕದ ಆಧಾರದಲ್ಲಿ ನೋಡುವುದರಿಂದ ಹಾಗೂ ಅದರ ಅಗತ್ಯಗಳನ್ನು ವಸ್ತುಗಳೊಡನೆ ಸಮೀಕರಿಸುವುದರಿಂದ. ನಾವು ಕಳೆದುಹೋಗುವುದೇ ಇಲ್ಲಿ. ಈ ಮರುಭೂಮಿ ಮತ್ತೆಂದೂ ಸಮುದ್ರವನ್ನು ಸೇರಲಾಗದಂತೆ, ಮರುಭೂಮಿಯಲ್ಲಿ ಚದುರಿ
ಆವಿಯಾಗಿಬಿಡುತ್ತೇವೆ. ಅಲ್ಲಿಗೆ ನಮ್ಮ ಬದುಕೇ ಮುಕ್ತಾಯದ ಹಂತಕ್ಕೆ ಬಂದು ನಿಂತುಬಿಡುತ್ತದೆ. ಇಂದು ಪ್ರೀತಿಯನ್ನು ಕಳೆದುಕೊಂಡು ತರ್ಕಬದ್ಧರಾಗಿದ್ದೇವೆ.
ಜೀವಿಸುವುದನ್ನು ನಿಲ್ಲಿಸಿ ಸ್ಥಿರವಾದ ವಿನ್ಯಾಸಕ್ಕೆ ಅಂಟಿಕೊಂಡು ಪ್ರತಿ ಹೆಜ್ಜೆಯನ್ನು ಯೋಜಿಸುತ್ತಾ, ಯೋಚಿಸುತ್ತಾ ಬದುಕುತ್ತಿದ್ದೇವೆ.

ಮಾರುಕಟ್ಟೆಯಲ್ಲಿರುವ ಸರಕುಗಳಂತೆ ಬರಿಯೇ ನಿಶ್ಶಬ್ದ. ಸಂಭ್ರಮ ಸೋತ ಬದುಕು ನಮ್ಮದಾಗಿದೆ. ಸರಕುಗಳನ್ನು ಆವರಿಸುತ್ತಾ ಪ್ರೀತಿಸುವುದನ್ನು ನಿಲ್ಲಿಸಿ ದ್ದೇವೆ. ಆದ್ದರಿಂದ ಪ್ರೀತಿ ಪ್ರಾರ್ಥನೆಯಾಗಬೇಕು. ಪ್ರೀತಿ ಇದ್ದೆಡೆಯಲ್ಲ ಜಗತ್ತು ಅತ್ಯುತ್ತಮ ಜಾಗವಾಗುತ್ತಾ ಹೋಗುತ್ತದೆ. ಪ್ರೀತಿಯು ರೂಪವಿಜ್ಞಾನದ ಒಂದು ಸುಂದರ ಪಟ. ಇಡೀ ಮಾನವ ಜನಾಂಗದ ಸಂಕೀರ್ಣತೆಯನ್ನು ಅದು ಒಳಗೊಳ್ಳುತ್ತದೆ. ಬದುಕಿನ ಪ್ರತಿ ಹಂತದಲ್ಲೂ ನಾವು ಅಭಿವ್ಯಕ್ತಿಸುವ ಸಂವೇದನೆಯೇ ಪ್ರೀತಿ. ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಜತೆ ಆಳವಾಗಿ ಮತ್ತು ಅರ್ಥಪೂರ್ಣವಾಗಿ ಒಡನಾಡಲು ಸಾಧ್ಯವಾಗಿಸುವುದೇ ಪ್ರೀತಿ. ಭಾವನೆ ಸಂವೇದನೆ ಗಳನ್ನು ಹಂಚಿಕೊಳ್ಳುತ್ತಾ ನಾವು ಪೂರ್ಣಗೊಳ್ಳುವುದೇ ಪ್ರೀತಿಯಲ್ಲಿ. ಪ್ರೀತಿಯನ್ನು ಪಡೆಯುವುದೆಂದರೆ ಸಂತೋಷವನ್ನು ಪಡೆದಂತೆ. ಬದುಕಿನ ಪಯಣದ ನಿರಂತರ ಅನ್ವೇಷಣೆ ಪ್ರೀತಿ. ನಮ್ಮದೇ ಆದ ಸೂತ್ರವನ್ನು ಅನ್ವಯಿಸುತ್ತಾ ಸಾಗಿದರೆ ಮನಸ್ಸಿನಾಳದಲ್ಲಿ ಪ್ರೀತಿಯ ಪಯಣ ಶುರು. ಆ ಪಯಣದಲ್ಲಿ ನಾವು ಮತ್ತು
ನಾವಷ್ಟೇ. ಪ್ರೀತಿಗೆ ಹೋಲಿಕೆಗಳಿಲ್ಲ. ಅದನ್ನು ಹೋಲಿಸಿ ನೋಡಲು ಹೋದಷ್ಟೂ ನಿರಾಶೆಯೇ ಹೆಚ್ಚು.

ಪ್ರೀತಿಯನ್ನು ಹೊರಗೆ ಕಾಣುವುದಲ್ಲ, ಅದು ಆಂತರ್ಯದ ಸಂಗತಿ. ನಿಜ ಪ್ರೀತಿ ನಮ್ಮನ್ನು ನಾವು ಮರು ಅನ್ವೇಷಿಸಿಕೊಳ್ಳಲು ಸಿಗುವ ಸ್ವಯಂಜ್ಞಾನ, ನಮ್ಮನ್ನು ನಾವು ಆಳವಾಗಿ ಅರ್ಥೈಸುತ್ತಾ ಒಪ್ಪಿಕೊಳ್ಳುತ್ತಾ ಹೋದಂತೆ ಪ್ರೀತಿಯ ಪದರಗಳು ತೆರೆದುಕೊಳ್ಳುತ್ತವೆ. ಆ ಆಳವಾದ ಅರ್ಥಪೂರ್ಣ ಪ್ರೀತಿಗೆ ಬದುಕನ್ನೇ ಬದಲಾಯಿಸುವ ಶಕ್ತಿ ಇದೆ. ಮನುಷ್ಯರ ಸಂಬಂಧದಲ್ಲಿ ಪ್ರೀತಿ ಏಕೆ ಸೋಲುತ್ತದೆ ಗೊತ್ತೇ? ಗುರಿ ತಲುಪಲು ನಾವು ಅಡ್ಡ ದಾರಿಗಳನ್ನು ಹಿಡಿದಿರುತ್ತೇವೆ.
ಅಡ್ಡದಾರಿ ಎಂದಿಗೂ ನಮ್ಮನ್ನು ಪ್ರೀತಿಯೆಡೆಗೆ ತಲುಪಿಸಲು ಸಾಧ್ಯವಾಗಿಸುವುದಿಲ್ಲ.

ನಮ್ಮದೇ ತಳಹದಿಯನ್ನು, ಒತ್ತಡಗಳನ್ನು, ಆಸೆಗಳನ್ನು ಅರ್ಥೈಸುವ ಅಧ್ಯಾತ್ಮಿಕ ಪಕ್ವತೆ ಇಲ್ಲವಾದರೆ ಎದುರಿಗಿರುವವರ ಭಾವನಾತ್ಮಕ ಅವಶ್ಯಕತೆಗಳಿಗೆ ಸ್ಪಂದಿಸಲು ಸಾಧ್ಯವಾಗುವುದು ಹೇಗೆ? ಆಗ ಮತ್ತೆ ನಮ್ಮನ್ನು ಕಾಡುವ ಅದೇ ಪ್ರಶ್ನೆ ‘ಪ್ರೀತಿ ನಮ್ಮ ಬದುಕಿಗೆ ಏಕೆ ಮುಖ್ಯ?’ ಎಂಬುದು. ಬದುಕಿನ ಎಲ್ಲದರ ಕುರಿತು ಪ್ರೀತಿ ನಮಗೆ ಕಲಿಸುತ್ತದೆ. ಬದುಕಿನ ಪುಟಗಳ ಮುಖ್ಯ ಪಾಠಗಳನ್ನು ಅದು ನಮಗೆ ಅಭ್ಯಸಿಸುತ್ತದೆ. ಸ್ವಯಂ ಮೆಚ್ಚುಗೆ, ಸ್ವಯಂ ಅರಿವು, ಜ್ಞಾನ ಹೀಗೆ ಎಲ್ಲವನ್ನು ತಿಳಿಸಿಕೊಡುತ್ತಾ ಸಂತೋಷದ ಬಾಗಿಲುಗಳು ಬದುಕಿಗೆ ತೆರೆಯುವಂತೆ ಮಾಡುವುದೇ ಪ್ರೀತಿ.

ನಮ್ಮನ್ನು, ಜಗತ್ತನ್ನು ಹಾಗೂ ಬದುಕನ್ನು ಬದಲಾಯಿಸಲು ಸಾಧ್ಯವಾಗುವುದು ಪ್ರೀತಿಯೆಂಬ ಎರಡಕ್ಷರದಿಂದ ಮಾತ್ರ. ಪ್ರೀತಿ ಅದೊಂದು ಆಂತರಿಕ ಪ್ರೇರಣೆ ಮತ್ತು ಸ್ಪೂರ್ತಿ. ನಮ್ಮನ್ನು ಗಟ್ಟಿಗೊಳಿಸುತ್ತಾ, ಉತ್ತಮಗೊಳಿಸುತ್ತಾ ಬದುಕಿನ ಬಗ್ಗೆ ಆಶಾವಾದ ರೂಢಿಸಿಕೊಳ್ಳುವುದನ್ನು ಸಾಧ್ಯವಾಗಿಸುವ ಸಂಗತಿಯದು.
ಬದುಕಿಗೆ ಬಣ್ಣ ತುಂಬುತ್ತಾ ಎಲ್ಲರನ್ನೂ ಪ್ರಭಾವಿಸುತ್ತ ಸಾಗುವ ಸೆಳೆತವದು ಪ್ರೀತಿ. ಬದುಕಿಗೆ ಭರವಸೆಯನ್ನು, ಬದುಕು ಕತ್ತಲಲ್ಲಿ ಕಳೆದುಹೋದಾಗ ಬೆಳಕಿನ ಕಿರಣವನ್ನು ಮೂಡಿಸುವುದೇ ಪ್ರೀತಿ. ಒಬ್ಬರಿಂದ ಮತ್ತೊಬ್ಬರಿಗೆ ಬೆಸೆಯುವ ಸಾಧನವಾಗಿ ಪ್ರೀತಿ ಪೂರ್ಣಭಾವದ ಅನುಭವವನ್ನು ನೀಡುತ್ತದೆ.

ಹೆಚ್ಚುತ್ತಿರುವ ಮಾನಸಿಕ ಖಿನ್ನತೆ, ಆತಂಕಗಳಿಗೂ ಪ್ರೀತಿಯೇ ಮದ್ದು. ನಮ್ಮ ನಗುವಿಗೆ ಡಿಸ್ಟರ್ಬ್ ಆಗುವ ಅನೇಕ ಜನರು ನಮ್ಮ ಸುತ್ತಲಿದ್ದಾರೆ. ಅವರೆಲ್ಲರೂ ಬದುಕು ಆಟವಲ್ಲವೆಂಬುದನ್ನು ಸದಾ ನಮಗೆ ತಿಳಿಸಬಯಸುತ್ತಾರೆ. ಈ ತೆರನಾದ ಜನರು ಸ್ವಭಾವತಃ ರೋಗಗ್ರಸ್ತರು. ಬದುಕಿನ ಅನೇಕ ಸಂಗತಿಗಳನ್ನು ಅವರು ಕಳೆದುಕೊಂಡಿರುತ್ತಾರೆ. ಹಾಗಾಗಿ ಬೇರೆಯವರ ಖುಷಿಗಳಿಗೂ ಅಡ್ಡಿಪಡಿಸುತ್ತಾರೆ. ಜತೆಗೆ ನಮ್ಮೊಳಗೊಂದು ಅಪರಾಧಿ ಪ್ರಜ್ಞೆಯನ್ನು ಮೂಡಿಸುತ್ತಾ ಹೋಗು ತ್ತಾರೆ. ಹಾಗಾಗಿ ನಾವು ಸಂಪೂರ್ಣ ವಾಗಿ ಪ್ರೀತಿಸುವುದಕ್ಕೆ, ನಗುವುದಕ್ಕೆ ಹಿಂಜರಿಯುತ್ತೇವೆ.

ಮನಸ್ಸಿನಾಳದಲ್ಲಿ ನಮ್ಮನ್ನು ಯಾವುದೋ ಶಕ್ತಿ ಮತ್ತೆ ಮತ್ತೆ ಹಿಂದಕ್ಕೆ ಎಳೆಯುತ್ತಿರುತ್ತದೆ. ಆದರೆ ನೆನಪಿರಲಿ, ಪ್ರೀತಿ ಎಂಬುದು ನಮ್ಮ ಆಳದಲ್ಲಿರುವ ಕಾಂತಿ. ಪ್ರೀತಿ ಅದೊಂದು ಅನುಭವ-ಅನುಭಾವ, ಅಸ್ತಿತ್ವ. ಪ್ರೀತಿಯನ್ನು ಉಪ್ಪಿನ ರುಚಿಗೆ ಹೋಲಿಸಬಹುದು. ನಾವು ಉಪ್ಪನ್ನು ತಿಂದಿಲ್ಲವಾದರೆ ಅದರ ವರ್ಣನೆ ನೀಡಲು ಸಾಧ್ಯವಿಲ್ಲ. ಒಮ್ಮೆ ಉಪ್ಪಿನ ರುಚಿ ನಮಗೆ ತಿಳಿದು ಹೋದರೆ ಮತ್ತೆಂದಿಗೂ ನಾವು ಅದನ್ನು ಮರೆಯುವುದಿಲ್ಲ. ಪ್ರೀತಿ ಅದೆಂದಿಗೂ ಹೊಸ ಹೊಸ ಪ್ರದೇಶಗಳಿಗೆ ಸಾಗುತ್ತಲೇ ಇರುವ ಪಯಣ. ಪ್ರೀತಿಯಲ್ಲಿರುವುದೆಂದರೆ ಸ್ಥಿರವಾಗಿರುವುದಲ್ಲ, ಅದು ಭಾವ ಪರವಶವಾಗಿರುವುದು. ಪ್ರೀತಿ ನಮ್ಮೊಳಗಿನ ಶಕ್ತಿ ಹಾಗೂ ದೈವಿಕತೆ ಯ ನಡುವಿನ ‘ಕಣ್ಣಾಮುಚ್ಚೆ ಕಾಡೆಗೂಡೆ’ ಎಂಬ ಸುಂದರ ಆಟ. ಈ ಆಟಕ್ಕೆ ಎಂದಿಗೂ ಕೊನೆಯಿಲ್ಲ. ಕಣ್ಣಾಮುಚ್ಚೆ ಕಾಡೆಗೂಡೆ ಆಡುತ್ತಲೇ ಅಲ್ಲೇ ಇರುವ
ಪ್ರೀತಿಯ ಕೂಡೋಣ.

Leave a Reply

Your email address will not be published. Required fields are marked *

error: Content is protected !!