Wednesday, 29th May 2024

ನಿರಾಶೆಯಲ್ಲೂ ಬದುಕಿನ ಅರ್ಥದ ಹುಡುಕಾಟ

ಶ್ವೇತಪತ್ರ

shwethabc@gmail.com

‘Man’s search for Meaning’ ಆಸ್ಟ್ರಿಯಾ ದೇಶದ ಮನೋವಿeನಿ ವಿಕ್ಟರ್ -ಂಕಲ್‌ರ ಪುಸ್ತಕ ಎಂದು ಕರೆದರೆ ತಪ್ಪಾದೀತು. ಇದೊಂದು ಆತ್ಮಚರಿತ್ರೆ, ಒಂದು ಧ್ಯಾನ, ಸೂರ್ತಿಯ ಪ್ರಣಾಳಿಕೆ.

ಕೆಲವು ಪುಸ್ತಕಗಳೇ ಹಾಗೆ. ಓದಿಸಿಕೊಳ್ಳುತ್ತ, ಪ್ರಭಾವಿಸುತ್ತ ಆಸೆಯ ನೆನಪು ಗಳಾಗಿ ಉಳಿದುಬಿಡುವುದಲ್ಲದೆ, ನಮ್ಮ ಅರ್ಥೈಸು ವಿಕೆಯನ್ನು ಮತ್ತೆಮತ್ತೆ ಪರಿಶೀಲಿಸುತ್ತ ಬದುಕಿನ ಬಗೆಗಿನ ನಮ್ಮ ಕಲ್ಪನೆಯನ್ನು ಮರುವಿನ್ಯಾಸ ಗೊಳಿಸುತ್ತವೆ. 2ನೇ ಮಹಾ ಯುದ್ಧದಲ್ಲಿ ಜರ್ಮನಿಯ ನಾಜಿಯ ಡಚೌ, ಬೆಲ್ಸೆನ್, ಅಶ್ವಿಟ್ಜ್ ಕಾನ್ಸಂಟ್ರೇಷನ್ ಕ್ಯಾಂಪುಗಳಲ್ಲಿ ಬಂಧನಕ್ಕೊಳಗಾಗಿದ್ದ -ಂಕಲ್, ಅಲ್ಲಿನ ವಿವಿಧ ಆಯಾಮಗಳ ವೈಯಕ್ತಿಕ ಅನುಭವಗಳನ್ನು ಇಲ್ಲಿ ಕಟ್ಟಿಕೊಡುತ್ತಾರೆ.

ಘಾಸಿಗೊಳಿಸುವ ಬದುಕಿನ ಸಂದರ್ಭಗಳಲ್ಲೂ ಮನುಷ್ಯರಿಗೆ ಇರಬೇಕಾದ ಪ್ರೀತಿ, ನಂಬಿಕೆ, ಭರವಸೆ, ಜವಾಬ್ದಾರಿ, ಆಂತರಿಕ ಸ್ವಾತಂತ್ರ್ಯ, ಲೈಫ್ ಈಸ್ ಸ್ಟಿಲ್ ಬ್ಯೂಟಿಫುಲ್ ಎಂಬ ಜೀವನ್ಮುಖಿ ಸದಾಶಯವೇ ಈ ಪುಸ್ತಕ. ಲೋಗೋ ತೆರಪಿಯ (ಲೋಗೋ- ಆತ್ಮ, ತೆರಪಿ-ಚಿಕಿತ್ಸೆ) ಮೂಲಕ ಬದುಕಿಗೆ ಅರ್ಥ ಮತ್ತು ಉದ್ದೇಶವ ತುಂಬುತ್ತ ಜನರ ವೈಯಕ್ತಿಕ ಬದುಕಲ್ಲಿ ಖುಷಿಯನ್ನು, ಯೋಗಕ್ಷೇಮವನ್ನು ಮೂಡಿಸುತ್ತಿದ್ದ ವಿಕ್ಟರ್ ಫ್ರಾಂಕಲ್, ನಾಜಿಗಳ ಆಕ್ರಮಣಶೀಲ ಕ್ಯಾಂಪ್‌ನಲ್ಲಿ ಬಂದಿಯಾಗಿ ತಮ್ಮನ್ನು ಮತ್ತು ತಮ್ಮ ಜತೆಗಾರ ಬಂಧಿತರನ್ನು ಸಮಾಧಾನಗೊಳಿಸಲು ತಮ್ಮದೇ ಚಿಕಿತ್ಸೆಯನ್ನು ಅನ್ವಯಿಸಿಕೊಳ್ಳುತ್ತ ಬದುಕಿದ್ದನ್ನು ಇಲ್ಲಿ ದಾಖಲಿಸುತ್ತ ಹೋಗುತ್ತಾರೆ.

ಹಿಟ್ಲರನ ಸೈನಿಕರು ಫ್ರಾಂಕಲ್ ದೇಹದ ಮೇಲಿನ ಒಂದು ಕೂದಲನ್ನೂ ಬಿಡದ ಹಾಗೆ ಬೋಳಿಸಿರುತ್ತಾರೆ. ಈ ಅನುಭವವನ್ನು
ಫ್ರಾಂಕಲ್ ಅದ್ಭುತವಾಗಿ ಬರೆಯುವ ಪರಿಯಿದು: ‘ನಮ್ಮಲ್ಲಿ ಅನೇಕರು ಕಠೋರವಾದ ಹಾಸ್ಯಪ್ರಜ್ಞೆಯನ್ನು ಜಯಿಸಿದ್ದೆವು. ಏಕೆಂದರೆ ಹಾಸ್ಯಾಸ್ಪದವಾದ ಬೆತ್ತಲೆ ಬದುಕನ್ನು ಬಿಟ್ಟು ನಮ್ಮ ಹತ್ತಿರ ಕಳೆದುಕೊಳ್ಳಲು ಏನೂ ಇರಲಿಲ್ಲ’. ಪುಸ್ತಕದಲ್ಲಿ ‘ಕಾನ್ಸಂಟ್ರೇಷನ್ ಕ್ಯಾಂಪಿನ ಅನುಭವಗಳು’ ಎಂಬ ಭಾಗವನ್ನು ಬರೆಯುತ್ತ ಫ್ರಾಂಕಲ್, ಮನಸ್ಸಿಗೆ ಪ್ರಜ್ಞಾಪೂರ್ವಕವಾದ ಸೂಚನೆಗಳನ್ನು ನೀಡುತ್ತ ಭೌತಿಕ ಸನ್ನಿವೇಶಗಳಿಂದ ಮನಸ್ಸನ್ನು ಬೇರ್ಪಡಿಸಿಕೊಳ್ಳುತ್ತ ಲೋಗೋ ತೆರಪಿಯ ತತ್ವಗಳಾದ
‘ಬದುಕಿಗೆ ಎಂತಹುದೇ ಸನ್ನಿವೇಶದಲ್ಲೂ ಅರ್ಥವಿದೆ, ಉದ್ದೇಶವಿದೆ’ ಎಂಬುದನ್ನು ತಾವು ಕಂಡುಕೊಂಡ ಬಗೆಯನ್ನು ವಿವರಿಸುತ್ತ ಹೋಗುತ್ತಾರೆ.

ಯೆಹೂದಿ ಎಂಬ ಕಾರಣಕ್ಕೆ ಫ್ರಾಂಕಲ್‌ರನ್ನು ಅವರ ತುಂಬು ಗರ್ಭಿಣಿ ಹೆಂಡತಿ, ತಂದೆ-ತಾಯಿ, ತಮ್ಮನೊಟ್ಟಿಗೆ ಸೆಪ್ಟೆಂಬರ್ 1942ರಲ್ಲಿ ಬಂಧಿಸುತ್ತಾರೆ. ಅಷ್ಟೊತ್ತಿಗಾಗಲೇ ಅವರು ಬಹಳ ಹೆಸರುವಾಸಿಯಾದ ಮನೋವಿಜ್ಞಾನಿಯಾಗಿರುತ್ತಾರೆ. ಜೆಕೋಸ್ಲೊವೇಕಿಯಾದ ಡಚೌ ಕ್ಯಾಂಪಿನಲ್ಲಿ ಅವರ ತಂದೆ ತೀರಿಕೊಂಡರೆ, ಮಿಕ್ಕ ಕುಟುಂಬದ ಸದಸ್ಯರು ಪೋಲೆಂಡಿನ ಅಶ್ವಿಟ್ಜ
ಕ್ಯಾಂಪಿನಲ್ಲಿ ತೀರಿಹೋಗುತ್ತಾರೆ.

ಹೀಗೆ ಇಡೀ ಕುಟುಂಬವನ್ನು, ವೃತ್ತಿಪರ ಹಸ್ತಪ್ರತಿಗಳನ್ನು, ಘನತೆಯನ್ನು ಕಳೆದುಕೊಂಡ ಫ್ರಾಂಕಲ್ ಇರುವಷ್ಟು ದಿನ ಪರಿಪೂರ್ಣವಾಗಿ ಬದುಕುವ ಆಸ್ಥೆಯನ್ನು ರೂಢಿಸಿಕೊಳ್ಳುತ್ತಾರೆ. ನಾನೇಕೆ ಬದುಕುತ್ತಿದ್ದೇನೆ? ನನ್ನ ಬದುಕಿನ ಉದ್ದೇಶ ವೇನು? ನಮ್ಮಲ್ಲಿ ಅನೇಕರು ಈ ಪ್ರಶ್ನೆಯನ್ನು ನಮ್ಮಷ್ಟಕ್ಕೆ ನಾವೇ ಸಾವಿರಸಲ ಕೇಳಿ ಕೊಂಡಿರುತ್ತೇವೆ. ಆದರೆ ಎಷ್ಟು ಜನಕ್ಕೆ ಈ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರಗಳು ದೊರಕಿವೆ? ಈ ಮೂಲಭೂತ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಡುವಲ್ಲಿ Man’s Search for Meaning ಕೃತಿ ಯಶಸ್ವಿಯಾಗುತ್ತದೆ.

ಎಂತಹುದೇ ಕೆಟ್ಟ ಸಂದರ್ಭಗಳಲ್ಲೂ ಭರವಸೆ, ಸಂವೇದನೆ, ಜೀವಂತವಾಗಿಸುವ ಚಿಕಿತ್ಸಕ ಆಶಾಭಾವನೆಯನ್ನು ಈ ಪುಸ್ತಕ ನಮಗೆ ನೀಡುತ್ತದೆ. ಕ್ಯಾಂಪಿನ ಒಳಹೋಗುವ ಮುನ್ನ ಕ್ಯೂನಲ್ಲಿ ನಿಂತಿದ್ದಾಗ ನಾಜಿ ಪಡೆಯ ದಬ್ಬಾಳಿಕೆಯನ್ನು ಫ್ರಾಂಕಲ್ ಖಂಡಿತವಾಗಿಯೂ ಊಹಿಸಿರಲಿಲ್ಲ. ತಾತ್ಕಾಲಿಕವಾಗಷ್ಟೇ ಈ ಬಂಧನವೆಂಬ ಅಂಶ ಸುಳ್ಳು ಎಂದು ಅರಿವಾಗಲು ಅವರಿಗೆ ಸಾಕಷ್ಟು ಸಮಯ ಹಿಡಿಯಲಿಲ್ಲ.

ಅಲ್ಲಿದ್ದ ಎಲ್ಲ ಖೈದಿಗಳಿಗೂ ಅವರ ಹಿಂದಿನ ಬದುಕು ಅಪ್ರಸ್ತುತವಾಗಿತ್ತು, ಕಳೆದುಹೋಗಿತ್ತು. ಜೀವ ಉಳಿಸಿಕೊಳ್ಳುವುದಷ್ಟೇ ಆ ಕ್ಷಣದ ಭರವಸೆಯಾಗಿತ್ತು. ಇತಿಹಾಸದ ಅತ್ಯಂತ ಭಯಾನಕ ಅನುಭವವನ್ನು ತಾವು ಕಂಡಿದ್ದನ್ನು ಮುಂದುವರಿಸುತ್ತ ಹೇಳಹೊರಡುವ ಫ್ರಾಂಕಲ್ ಹುಳುಗಳ ಜತೆ ತೇಲಿಬರುತ್ತಿದ್ದ ಶವಗಳಿಗಿಂತ ಹೆಚ್ಚು ವಿಕಾರವಾಗಿ ಕೇಳುತ್ತಿದ್ದದ್ದು ಸೈನಿಕರ ಬೂಟಿನ ಶಬ್ದವೆಂಬ ತಮ್ಮ ನೆನಪಿನ ವೇದನೆಯನ್ನು ಹಂಚಿಕೊಳ್ಳುತ್ತಾರೆ. ಬದುಕನ್ನು ಬಳಲುವಿಕೆ ಎಂದು ನೋಡುವವರಿಗೆ -ಂಕಲ್‌ರ ಬದುಕಿನ ಅರ್ಥದ ಹುಡುಕಾಟ ಮರು-ಮದ್ದಾಗುವುದರಲ್ಲಿ ಸಂಶಯವೇ ಇಲ್ಲ.

ಭಯಾನಕ ಹತ್ಯಾಕಾಂಡದಲ್ಲಿ ಬದುಕುಳಿದ ತಮ್ಮ ೩ ವರ್ಷಗಳ ಅನುಭವವನ್ನು ಫ್ರಾಂಕಲ್ ಈ ಪುಸ್ತಕದಲ್ಲಿ ‘ಬದುಕಿನ ಉದ್ದೇಶ’, ‘ಲೋಗೋ ತೆರಪಿ’, ‘ಬದುಕಿನ ಅರ್ಥ’ ಎಂಬ ೩ ವಿಭಾಗಗಳಲ್ಲಿ ತಾವು ಕಂಡುಕೊಂಡ ಸಾಧ್ಯತೆಗಳ ಮೂಲಕ ಕಟ್ಟಿಕೊಡುತ್ತ ಹೋಗುತ್ತಾರೆ.

ಬದುಕಿನ ಉದ್ದೇಶ: ಇಡೀ ೩ ವರ್ಷಗಳ ತಮ್ಮ ಖೈದಿವಾಸದಲ್ಲಿ ಫ್ರಾಂಕಲ್ ಕಂಡುಕೊಂಡ ಸತ್ಯವೆಂದರೆ, ಪ್ರತಿಯೊಬ್ಬರೂ ಕೆಲಸ, ಪ್ರೀತಿ ಅಥವಾ ಬಳಲುವಿಕೆಯ ಮೂಲಕ ತಮ್ಮ ತಮ್ಮ ಬದುಕಿಗೆ ಉದ್ದೇಶ ತುಂಬಬಹುದು ಎಂಬುದು. ಉದಾಹರಣೆಗೆ ತಾವು ಕ್ಯಾಂಪಿನಲ್ಲಿ ಇದ್ದಷ್ಟು ದಿನವೂ ಅಲ್ಲಿನ ತಮ್ಮ ಅನುಭವಗಳನ್ನು, ಬಿಡುಗಡೆಗೊಂಡ ನಂತರ ಪುಸ್ತಕ ರೂಪದಲ್ಲಿ ಪ್ರಕಟಿಸ ಬೇಕು ಎಂಬ ವಿಚಾರವನ್ನು ಕಲ್ಪಿಸಿಕೊಳ್ಳುತ್ತಲೇ ಇರುತ್ತಾರೆ ಫ್ರಾಂಕಲ್.

ತಮ್ಮ ಬಳಿ ಬರೆಯಲು ಯಾವುದೇ ಸಾಧನಗಳು ಇಲ್ಲದಿದ್ದರೂ ಹಸ್ತಪ್ರತಿಗಳನ್ನು ಮತ್ತೆ ಮತ್ತೆ ಮಿದುಳಿನಲ್ಲಿ ದಾಖಲಿಸುತ್ತ ಹೋಗುತ್ತಾರೆ. ಹೀಗೆ ಕ್ಲಿಷ್ಟಕರ ಸನ್ನಿವೇಶದಲ್ಲೂ ತಾವು ತಮ್ಮ ಬದುಕಿಗೆ ಅರ್ಥ ಮತ್ತು ಉದ್ದೇಶವನ್ನು ಕಂಡುಕೊಂಡ ಬಗೆಯನ್ನು ವಿವರಿಸುವ ಫ್ರಾಂಕಲ್ ಮತ್ತೊಂದು ಮನಮಿಡಿಯುವ ಉದಾಹರಣೆಯನ್ನು ನಮ್ಮೆದುರು ತೆರೆದಿಡುತ್ತಾರೆ.

ತಮ್ಮಿಂದ ದೂರಾದ ತಮ್ಮ ತುಂಬು ಗರ್ಭಿಣಿ ಹೆಂಡತಿ ಬದುಕಿದ್ದಾಳೋ ಸತ್ತಿದ್ದಾಳೋ ಎಂಬ ಯಾವುದೇ ಕಲ್ಪನೆ ಇರುವುದಿಲ್ಲ ಅವರಿಗೆ. ಆದರೆ ಮನಸ್ಸಿನಲ್ಲಿ ತಮ್ಮ ಹೆಂಡತಿಯ ಜತೆಗೆ ಮರುಮಿಲನಗೊಂಡ ಆಲೋಚನೆ ಯನ್ನು ಮನ ತುಂಬಿಸಿಕೊಳ್ಳುತ್ತ ಆಕೆಯ ಭೌತಿಕ ಇರುವಿಕೆಯನ್ನು ಸಂವೇದಿಸಿಕೊಳ್ಳುತ್ತಿರುತ್ತಾರೆ. ಇಂತಹ ಆಲೋಚನೆಗಳೇ ಅಂತಹ ಪ್ರತಿಕೂಲ ಸಂದರ್ಭ ಗಳಲ್ಲೂ ಪ್ರತಿದಿನದ ಬದುಕಿನ ಭರವಸೆಗಳಾಗಿದ್ದವು ಎಂಬುದು ಅವರ ಅಭಿಮತ.

ತಮ್ಮ ಪೂರ್ವೋತ್ತರ ಬದುಕಿನ ಬಗ್ಗೆ ಮರುಗುವುದನ್ನು ಬಿಟ್ಟು ಈ ಕ್ಷಣದ ಇರುವಿಕೆಯಲ್ಲಿ ಬದುಕನ್ನು ಕಟ್ಟತೊಡಗುತ್ತಾರೆ. ಹೆಂಡತಿಯ ಜತೆಗೆ ಮರುಮಿಲನವೋ, ಅಥವಾ ಅನುಭವದ ಪುಸ್ತಕ ಬರೆಯುವ ತವಕದ ಆಲೋಚನೆಯೋ ಒಟ್ಟಿನಲ್ಲಿ ತಮ್ಮ
ಬಳಲುವಿಕೆಯಲ್ಲೂ ಬದುಕಿಗೆ ಅರ್ಥವನ್ನು, ಉದ್ದೇಶವನ್ನು ಕಂಡುಕೊಳ್ಳುತ್ತ ಹೋಗುತ್ತಾರೆ.

ಲೋಗೋ ತೆರಪಿ: -ಂಕಲ್ ತಮ್ಮ ಜತೆಗಾರ ಕೈದಿಗಳ ಬದುಕಲ್ಲೂ ಆಶಾಭಾವನೆ ಮೂಡಿಸಲು ಅನ್ವಯಿಸಿದ್ದು ತಮ್ಮದೇ ಲೋಗೋ ತೆರಪಿಯನ್ನು. ತಮ್ಮ ಅಸ್ತಿತ್ವಕ್ಕೆ ಅರ್ಥ ಹುಡುಕಿಕೊಂಡುಬಿಟ್ಟರೆ ಅದಕ್ಕಿಂತ ಪ್ರೇರಣಾಶಕ್ತಿ ಮನುಷ್ಯನಿಗೆ ಬೇರೊಂದಿಲ್ಲ. ಈ ಚಿಕಿತ್ಸೆ ಯಾಕೆ ಮನುಷ್ಯನಿಗೆ ಮುಖ್ಯವಾಗುತ್ತದೆ ಎಂಬುದನ್ನು ವಿವರಿಸುತ್ತ ಹೋಗುವ ಫ್ರಾಂಕಲ್ ನಮ್ಮ
ಅಸ್ತಿತ್ವದ ಮೇಲೆ ನಾವು ಯಾಕೆ ಕೇಂದ್ರೀಕರಿಸಬೇಕೆಂದರೆ ಎಷ್ಟೋ ಬಾರಿ ನಾವು ಬದುಕುತ್ತಿರುವುದರ ಅರ್ಥ ಮತ್ತು ಉದ್ದೇಶವೇ ನಮಗೆ ತಿಳಿದಿರುವುದಿಲ್ಲ.

ಈ ಪ್ರಕ್ರಿಯೆ ನಮ್ಮನ್ನು ಹೆಚ್ಚು ಬಳಲುವಂತೆ ಮಾಡುತ್ತದೆ ಎಂದು ಅರ್ಥೈಸುತ್ತಾರೆ. ಇದನ್ನು ‘ಅಸ್ತಿತ್ವದ ಹತಾಶೆ’ ಎನ್ನುವ ಫ್ರಾಂಕಲ್, ‘ಈ ಹತಾಶೆ ನಮ್ಮಲ್ಲಿ ಮಾನಸಿಕ ವೇದನೆಯನ್ನು ಉಂಟುಮಾಡುವ ಒಂದು ರೀತಿಯ ಆತಂಕ; ಇದೇ ಆತಂಕ ಮುಂದೆ ಮನುಷ್ಯರಲ್ಲಿ ಖಿನ್ನತೆಯನ್ನು ಬದುಕಿನ ಅರ್ಥದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ’ ಎನ್ನುತ್ತಾರೆ.

ಕಾನ್ಸಂಟ್ರೇಷನ್ ಕ್ಯಾಂಪಿನಲ್ಲಿ ಹೀಗೆ ಬದುಕಿಗೆ ಅರ್ಥವನ್ನೇ ಮೂಡಿಸಿಕೊಳ್ಳಲು ಸೋತ ಎಷ್ಟೋ ಜನ ಬಂಽತರು ತೀವ್ರವಾಗಿ ಬದುಕುವುದಕ್ಕೆ ಹೆಣಗಾಡಿದ ಪರಿಯನ್ನು ಉದಾಹರಿಸುತ್ತಾರೆ.

ಬದುಕಿನ ಅರ್ಥ: ಒಬ್ಬ ವ್ಯಕ್ತಿ ಸಂಗೀತಗಾರನಾಗ ಬಯಸಿದರೆ ಆತ ಪ್ರತಿದಿನ ಹಗಲು-ರಾತ್ರಿ ಸಂಗೀತವನ್ನು ಅಭ್ಯಸಿಸಬೇಕು. ಇದೇ ರೀತಿ ಒಬ್ಬ ಬರಹಗಾರ ಇರಬಹುದು, ಕಲಾವಿದನಿರಬಹುದು ಅಥವಾ ವ್ಯವಹಾರಸ್ಥ ಇರಬಹುದು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ದಿನನಿತ್ಯವೂ ಪಳಗುತ್ತಲೇ ಇರಬೇಕು.

ಆಗಲೇ ತಾವು ಅಂದುಕೊಂಡಿದ್ದಕ್ಕೆ ಅರ್ಥ ಭರಿಸಲು ಸಾಧ್ಯ. ಆದರೆ ಫ್ರಾಂಕಲ್‌ರ ಬದುಕಿನ ಅರ್ಥದ ಕಲ್ಪನೆಯೇ ಬೇರೆ. ಅವರ ಪ್ರಕಾರ ಅರ್ಥಪೂರ್ಣವಾದ ಬದುಕೆಂದರೆ ಪ್ರತಿಕ್ಷಣಕ್ಕೂ ಅರ್ಥ ತುಂಬಬಲ್ಲ ಅಂಶಗಳನ್ನು ಗುರುತಿಸಬೇಕಾಗುತ್ತದೆ. ಅದು ಸಂಪೂರ್ಣವಾದ ಅರಿವಿನೊಂದಿಗೆ ಬದುಕುವ ಪ್ರಕ್ರಿಯೆಯಾಗುತ್ತದೆ. ಹಾಗಿದ್ದರೆ ಬದುಕಿಗೆ ಅರ್ಥ ಕಂಡು ಕೊಳ್ಳುವುದು
ಹೇಗೆ? ಫ್ರಾಂಕಲ್ ಪ್ರಕಾರ ಉತ್ತರ ಬಹಳ ಸರಳ. ನಮ್ಮ ದೃಷ್ಟಿಕೋನದಲ್ಲಿ ಸಣ್ಣದೊಂದು ಬದಲಾವಣೆ ತಂದುಕೊಂಡರೆ ಬದುಕಿಗೆ ಅರ್ಥ ತಾನಾಗೆ ಮೂಡುತ್ತ ಹೋಗುತ್ತದೆ.

ಅಂತಿಮವಾಗಿ ಮನುಷ್ಯನ ಬದುಕಿನ ಅರ್ಥ ಏನು ಎನ್ನುವುದನ್ನು ಕೇಳಬಾರದು. ಅವನು ಆ ಅರ್ಥಗಳನ್ನು ಗುರುತಿಸುತ್ತ ಹೋಗಬೇಕು. ಪ್ರತಿ ಮನುಷ್ಯನನ್ನು ಅವನದೇ ಬದುಕು ಪ್ರಶ್ನೆ ಕೇಳುತ್ತದೆ ಮತ್ತು ಆತ ಬದುಕುವುದರ ಮೂಲಕವೇ ಆ ಪ್ರಶ್ನೆಗೆ
ಉತ್ತರಿಸಬೇಕು ಮತ್ತು ಆ ಉತ್ತರವೂ ಜವಾಬ್ದಾರಿಯಿಂದ ಕೂಡಿರಬೇಕು. ನಮ್ಮ ಗುರಿ ಮತ್ತು ಆಕಾಂಕ್ಷೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತವೆ, ಅವು ಬದಲಾಗಬೇಕು ಕೂಡ.

ಇದನ್ನೇ ವಿವರಿಸುತ್ತ ಫ್ರಾಂಕಲ್ ಹೇಳುತ್ತಾರೆ, ‘ಮನುಷ್ಯನಿಗೆ ಬೇಕಿರುವುದು ಉದ್ವೇಗವಿಲ್ಲದ ಮನಸ್ಥಿತಿಯಲ್ಲ; ಆದರೆ ತನಗೆ
ಯೋಗ್ಯವೆನಿಸುವ ಗುರಿಗಳನ್ನು ಪಡೆಯುವ ಹೋರಾಟದ ಮನಸ್ಥಿತಿ’. ಮೂರು ವರ್ಷಗಳ ತಮ್ಮ ಬಂಧಿತಾವಧಿಯಲ್ಲಿ ಫ್ರಾಂಕಲ್ ನಮ್ಮೆಲ್ಲರ ಬದುಕಿಗೆ ಒಂದಿಷ್ಟು ಹೊಳಹುಗಳನ್ನು ಈ ಪುಸ್ತಕದಲ್ಲಿ ವ್ಯಾಖ್ಯಾನಿಸುತ್ತಾರೆ. ಅವುಗಳಲ್ಲಿ ನನಗೆ ಇಷ್ಟವಾದ ಎರಡು ಸಂಗತಿಗಳನ್ನು ನಿಮ್ಮೊಂದಿಗೆ ಮುಂದಿನವಾರ ಹಂಚಿಕೊಳ್ಳುತ್ತೇನೆ.

ಏಕೆಂದರೆ ನಮ್ಮ ನಮ್ಮ ಬದುಕುಗಳಿಗೂ ಈ ಸಂಗತಿಗಳನ್ನು ಅನ್ವಯಿಸಿಕೊಂಡು ಬಿಟ್ಟರೆ ಲೈಫ್ ಈಸ್ ಬ್ಯೂಟಿಫುಲ್..!

(ಮುಂದುವರಿಯುವುದು)

error: Content is protected !!