Sunday, 8th September 2024

ಸಮಚಿತ್ತದ ಅವಲೋಕನವೇ ನೋವಿಗೆ ಮದ್ದು

ಶ್ವೇತಪತ್ರ

shwethabc@gmail.com

‘ನೋವಿನ ಬಗ್ಗೆ ನಿಮಗೆ ಅರಿವಿದೆಯೇ? ನೀವದನ್ನು ತಡೆಯಲು ಪ್ರಯತ್ನಿಸುವಿರೇ? ಏಕೆಂದರೆ ಆ ನೋವು ಮತ್ತಷ್ಟು ನೋವು ಗಳನ್ನು ಆಹ್ವಾನಿಸಬಹುದೆಂದು ನಿಮಗನಿಸುವುದೇ? ನೋವಿನ ಕಾರಣವ ಹುಡುಕುವುದು ಸುಮ್ಮನೆ ಕಾಲಹರಣವೆನ್ನುತ್ತೀರೇ? ಹಾಗಿದ್ದರೆ ಏನಾಗುತ್ತದೆ? ನಿಮ್ಮ ನೋವಿನ ಕಾರಣವನ್ನು ಹುಡುಕುವುದಕ್ಕೆ ನೀವು ಯಾವುದೇ ಮಾನಸಿಕ ಶಕ್ತಿಯನ್ನು ವ್ಯಯಿಸಿಲ್ಲವೆಂದರ್ಥ.

ನಿಮ್ಮ ಹೃದಯದ ಸುತ್ತಲೂ ನೋವನ್ನು ತಡೆಯಲು ಗೋಡೆ ಎಬ್ಬಿಸಬೇಡಿ, ನೋವನ್ನು ಮತ್ತಷ್ಟು ಮಗದಷ್ಟು ಮುಚ್ಚಿಡಲು ಪ್ರಯತ್ನಿಸಬೇಡಿ. ನಿಮ್ಮ ಸಂಪೂರ್ಣ ಗಮನವನ್ನು ನೋವಿನೆಡೆಗೆ ತಿರುಗಿಸಿ ಮತ್ತು ನೋಡಿ, ಅಲ್ಲಿ ನೋವಿರುವುದಿಲ್ಲ. ಆಗಲೇ ನೀವು ಪ್ರೀತಿಯನ್ನು ಕಾಣಲು ಸಾಧ್ಯವಾಗು ವುದು’- ಹೀಗೆನ್ನುತ್ತಾರೆ ಚಿಂತಕ ಜಿಡ್ಡು ಕೃಷ್ಣಮೂರ್ತಿ ತಮ್ಮ ೧೯೭೪ರ ಮದ್ರಾಸ್ ಭಾಷಣದಲ್ಲಿ.

ನಾವೆಲ್ಲ ಮನುಷ್ಯರು. ದುರಾದೃಷ್ಟವಶಾತ್ ಮನಸ್ಸಿನೊಳಗೆ ಗೋಡೆ ಕಟ್ಟಿಕೊಂಡು ಬದುಕಿಬಿಟ್ಟಿದ್ದೇವೆ. ನನಗೆ ನೋವಾಯಿತು, ಶಾಕ್ ಆಯ್ತು, ಬೇಸರವಾಯಿತು, ಅವಮಾನವಾಯಿತು-ಹೀಗೆ ಅನೇಕ ನೋವುಗಳು ನಮ್ಮನ್ನು ಸುತ್ತುವರಿದು  ಬಂಧಿ ಯಾಗಿಸಿವೆ. ಈ ಸಮಸ್ಯೆಯನ್ನು ಎದುರಿ ಸುವುದು ಹೇಗೆ? ನೋವನ್ನು ಎದುರಿಸಲು ನನ್ನ ದಾರಿಗಳು ನೋವನ್ನು ಮುಕ್ತ ವಾಗಿಸಬಲ್ಲವೇ? ನೋವಿನ ಪ್ರೇರಣೆಯಿಂದ ನಾನು ದೂರ ಉಳಿಯಬೇಕೇ? ಹೀಗೆ ಅನೇಕ ಪ್ರಶ್ನೆಗಳು ನಮ್ಮನ್ನು ಮುತ್ತುವುದು ಸಹಜ.

ಹೀಗೆ ಪ್ರಶ್ನೆಗಳು ಮನಸ್ಸನ್ನು ಮುತ್ತಿದಾಗ ನಾವೆಲ್ಲ ನೋವಿನಿಂದ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಅದಾಗಲೇ ಹುಡುಕ ತೊಡಗುತ್ತೇವೆ. ಈ ಹುಡುಕುವಿಕೆ ಏಕೆಂದರೆ ಅದು ನೋವಿಗೆ ಪರಿಹಾರವನ್ನು ಪಡೆಯುವುದಕ್ಕೆ ಮಾರ್ಗದರ್ಶಿ ಆಗಿರುತ್ತದೆ. ಹಾಗಾಗಿಯೇ ನಾವೆಲ್ಲ ಮಾನಸಿಕವಾಗಿ ಬಂಽತರು. ನೋವಿಗೆ ಒಂದು ಪ್ರೇರಣೆ ಇದೆ. ಅದು ಸದಾ ನಮ್ಮೊಳಗೆ ಬೇಡದ ಕಾರಣಗಳನ್ನು ತನಿಖೆ ಮಾಡುವುದಕ್ಕೆ ಮಾರ್ಗಗಳನ್ನು ಪೋಷಿಸುತ್ತಲೇ ಇರುತ್ತದೆ.

ನೋವಿಗೆ ಕಾರಣಗಳೂ ಬೇಡವೆಂಬ ನಂಬಿಕೆ ನಮ್ಮೊಳಗಿದ್ದರೂ ನಾವು ತನಿಖೆಗಿಳಿಯುತ್ತೇವೆ. ಏಕೆಂದರೆ ನಮ್ಮೊಳಗಿನ ನೋವಿನ ಹಾಗೂ ಅದರ ಕಾರಣಗಳ ಕುರಿತಾದ ಪೂರ್ವಗ್ರಹದಿಂದ. ಹಾಗಾಗಿಯೇ ನಾವೆಲ್ಲ ಮನುಷ್ಯರು, ಬಂಧನಕ್ಕೊಳ ಗಾದವರು. ನಾವು ಮತ್ತು ನಮ್ಮ ಸುತ್ತಲಿನ ಸಮಾಜ ನಮ್ಮೊಳಗೆ ಸೃಷ್ಟಿಸಿರುವ ಈ ಮಾನಸಿಕ ಬಂಧನದಿಂದ ಮುಕ್ತವಾಗ ಬೇಕೆ? ಹಾಗಿದ್ದರೆ ನೋವಿಗೆ ಪುಷ್ಟಿ ತುಂಬುವ ಪ್ರೇರಣೆಯನ್ನು ಹೊಡೆದುಬಿಡಬೇಕು.

ಹೀಗೆ ಹೊಡೆಬಿಟ್ಟರೆ ಮನಸ್ಸು ಯಾವುದೇ ತನಿಖೆಯನ್ನು ನಡೆಸುತ್ತಾ ನಮ್ಮಲ್ಲಿ ಬೇಡಿಕೆ ಇಡುವುದಿಲ್ಲ. ನಮಗೆ ಇಲ್ಲಸಲ್ಲದ ನೋವಿನ ಮಾರ್ಗಗಳನ್ನು ಹಾಕಿ ಕೊಡುವುದಿಲ್ಲ. ನಿಧಾನವಾಗಿ ನಮ್ಮನ್ನು ನಾವು ನಂಬತೊಡಗುತ್ತೇವೆ, ಹೊರಗಿನ ಪ್ರೇರಣೆಗಳನಲ್ಲ. ಧರ್ಮಗಳೆಡೆಗೆ, ಜಾತಿಗಳೆಡೆಗೆ ಕಂದಕಗಳೇಳುವುದು ಇದೇ ಕಾರಣಕ್ಕೆ. ಇದಕ್ಕೆ ಪೂರ್ವಗ್ರಹಗಳು ದಾರಿ ಹಾಕಿಕೊಡುತ್ತವೆ. ನೋವು ಮರುಗಟ್ಟಿ ಪ್ರೇರೇಪಿಸುತ್ತದೆ ಮತ್ತು ಮನಸ್ಸಿಗೆ ಅದನ್ನು ನಂಬುವಂತೆ ಮನವರಿಕೆ ಮಾಡಿಕೊಡು ತ್ತದೆ.

ಅಲ್ಲಿಗೆ ಎಲ್ಲವೂ ಮುಕ್ತಾಯ ಹಂತಕ್ಕೆ ಬಂದು ನಿಂತುಬಿಟ್ಟಿರುತ್ತದೆ. ಹೀಗೆ ನಾವೆಲ್ಲ ಮನುಷ್ಯರು. ವಿನಾಕಾರಣ ಬೇಡದ ವಿಷಯಗಳಿಗೆ, ವಿಚಾರಗಳಿಗೆ ನೋಯುತ್ತಲೇ ಇರುತ್ತೇವೆ. ಈ ನೋವನ್ನು ದಾಟುವ ಸ್ವಾತಂತ್ರ್ಯವನ್ನು ನಾವೆಲ್ಲ ಬೆಳೆಸಿಕೊಳ್ಳ ಬೇಕು. ಆದರದು ಹೇಗೆ? ನಮ್ಮ ಬದುಕಿನ ಅನೇಕ ನೋವು, ಗಾಯಗಳು ನಮ್ಮನ್ನು ಸಹಜವಾಗೇ ಕುಗ್ಗುವಂತೆ ಮಾಡುತ್ತವೆ. ಮುಟ್ಟಿದರೆ ಚಿಪ್ಪಿನೊಳಗೆ ಮುದುಡುವ ಬಸವಣ್ಣನ ಹುಳುವಿನ ಹಾಗೆ.

ಕೆಲವೊಮ್ಮೆ ನಮ್ಮ ಪರಿಸ್ಥಿತಿ ಹೇಗಾಗಿರುತ್ತದೆಂದರೆ ನೋವು ಎಂದ ಕೂಡಲೇ ಏನಾಗಿತ್ತು? ಇದು ನಮ್ಮ ಮೊದಲ ಪ್ರಶ್ನೆ ಯಾಗಿರುತ್ತದೆ. ನೋವಿನ ಜೊತೆಗೆ ನಮ್ಮ ನೆನಪು ಬೆಸೆಯುತ್ತಾ ಹೋಗುತ್ತದೆ. ಚಿಕ್ಕ ವಯಸ್ಸಿನಲ್ಲಿ ನನಗೆ ಹೀಗಾಗಿತ್ತು, ಮನೆಯಲ್ಲಿ ಹೀಗಾಗಿತ್ತು, ಶಾಲಾ-ಕಾಲೇಜು ದಿನಗಳಲ್ಲಿ ಹೀಗಾಗಿತ್ತು, ಕೆಲಸ ಮಾಡುವ ಜಾಗದಲ್ಲಿ ಹೀಗಾಗಿತ್ತು-ಹೀಗೆ ಒಂದಲ್ಲ
ಒಂದು ಕಾರಣಗಳಿಗೆ, ಸೂಕ್ಷ್ಮತೆಗೆ ನಾವು ನೋಯುತ್ತಲೇ ಇರುತ್ತೇವೆ. ಈ ಎಲ್ಲಾ ಹಳೆಯ ನೋವಿನ ನೆನಪು ಹಾಗೂ
ಅನುಭವಗಳು ನೋವು ಎಂದಾಕ್ಷಣ ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸುವಂತೆ ಮಾಡುತ್ತವೆ.

ನಮ್ಮೊಳಗೆ ನಾವೇ ಗೋಡೆ ಕಟ್ಟಿ ಸುತ್ತುವರಿಯ ತೊಡಗುತ್ತೇವೆ. ಮಜಾ ಏನು ಗೊತ್ತಾ? ನಮ್ಮೊಬ್ಬರಿಗೆ ಈ ನೋವಿಲ್ಲ, ಅಯ್ಯೋ ಎಲ್ಲರಿಗೂ ಅವರವರದ್ದೇ ನೋವುಗಳಿರುತ್ತವೆ- ಹೀಗೆ ಸಾಮಾನ್ಯೀಕರಿಸುತ್ತಾ ಅದರಲ್ಲೂ ಸಮಾಧಾನ ಹುಡುಕು ತ್ತೇವೆ. ಯಾವಾಗಲೋ ನಾವು ಚಿಕ್ಕವರಿದ್ದಾಗ ನೋವಾಗಿರುತ್ತದೆ ಮತ್ತು ಎಷ್ಟೋ ಜನರಿಗೆ ಆ ನೋವು ಬದುಕಿನ ಉದ್ದಕ್ಕೂ ಕಾಡುತ್ತಲಿರುತ್ತದೆ. ನಿಧಾನವಾಗಿ ಅದು ಹೊರೆಯಾಗಿ ಪರಿಣಮಿಸ ತೊಡಗುತ್ತದೆ.

ಬದುಕಲ್ಲಿ ಹಾಗಿದ್ದರೆ, ಈಗಿನ ಹಾಗೂ ಹಳೆಯ ನೋವನ್ನು ಅಂಟಿಸಿಕೊಳ್ಳದೆ ಬದುಕಿಬಿಡಲು ಸಾಧ್ಯವೇ ಇಲ್ಲವೇ? ಎಲ್ಲದಕ್ಕೂ
ಗುಣಪಡಿಸಬಹುದಾದ ಪ್ರಕ್ರಿಯೆ ಇದ್ದೇ ಇರುತ್ತದೆ. ಜಸ್ಟ್ ಇನೋಸೆಂಟ್ ಮಗುವಿನ ಹಾಗೆ ಮುಗ್ಧವಾಗಿದ್ದು ಬಿಡುವುದೊಂದೆ ಹಳೆಯ, ಹೊಸತಿನ ಮತ್ತು ಈ ಕ್ಷಣದ ನೋವಿಗೂ ಮದ್ದು ಎನ್ನುತ್ತಾರೆ ಜಿಡ್ಡು ಕೃಷ್ಣಮೂರ್ತಿ. ನೋವಿಗೆ ಪರಿಹಾರವೇನು ಎಂಬ ಪ್ರಶ್ನೆಗೆ ಉತ್ತರಿಸುವ ಕೃಷ್ಣಮೂರ್ತಿಯವರು ನೋವಿನ ಆಳಕ್ಕೆ ಇಳಿಯದೇ ಅದಕ್ಕೆ ಪರಿಹಾರಬೇ ಎಂಬ ಮರು ಪ್ರಶ್ನೆಯನ್ನೇ
ನಮ್ಮೆದುರಿಗೆ ಇಡುತ್ತಾರೆ.

ಮುಂದುವರಿಯುತ್ತಾ ಅವರು ನಮಗೆ ಕೇಳುವ ಮತ್ತೊಂದು ಪ್ರಶ್ನೆ-‘ಎಷ್ಟೊಂದು ತಾಳ್ಮೆ ಕಳೆದುಕೊಂಡ ಬದುಕು ನಿಮ್ಮದು. ಎಲ್ಲದಕ್ಕೂ ನಿಮಗೆ ತತ್ತಕ್ಷಣದ ಪರಿಹಾರಗಳು ಬೇಕು. ನಿಮಗೆ ಉಪಶಮನ ಮಾಡಿಬಿಡುವ ಮಾತ್ರೆಯಿಂದ ಹಿಡಿದು, ತ್ವರಿತವಾದ ನಿರ್ವಹಣಾ, ಧ್ಯಾನ ಎಲ್ಲವೂ ಬೇಕು’ ಎನ್ನುವ ಅವರ ಮಾತುಗಳು ನಮ್ಮನ್ನು ಎಚ್ಚರಿಸುವಂತಿವೆ. ನೋವನ್ನು
ಕುರಿತಾಗಿ ಮುಂದುವರಿಯುವ ಅವರ ಮಾತು ನನಗೆ ನೋವಾಯಿತು.

ಇಲ್ಲಿ ನೋವಾಗಿದ್ದು ಯಾರಿಗೆ? ನಮ್ಮ ಬಗ್ಗೆ ನಾವೇ ರಚಿಸಿಕೊಂಡ ಒಂದು ಚಿತ್ರಣಕ್ಕೆ (ಇಮೇಜ್) ಹೌದಲ್ಲವೇ?! ಹಾಗಿದ್ದರೆ ನೀವೇ ಕೇಳಿಕೊಳ್ಳಿ ನೀವು ಮತ್ತು ನಿಮ್ಮ ಬಗ್ಗೆ ನೀವು ರಚಿಸಿಕೊಂಡ ಚಿತ್ರಣಕ್ಕೆ ಏನಾದರೂ ವ್ಯತ್ಯಾಸವಿದೆಯೇ ಎಂದು? ನೀವು ಆ ಚಿತ್ರಣವೇ ಎಂದು ಭಾಸವಾಗುತ್ತದೆ ಏಕೆಂದರೆ ಅದನ್ನು ಬೆಳೆಸಿಕೊಂಡವರು ನೀವೇ ಅಲ್ಲಿಗೆ ನಿಮಗೂ ನೀವು ನಿಮ್ಮ ಬಗ್ಗೆ ಬೆಳೆಸಿಕೊಂಡ ಚಿತ್ರಣಕ್ಕೂ ವ್ಯತ್ಯಾಸವೇ ಇಲ್ಲವಾಗಿ ಬಿಡುತ್ತದೆ ಹಾಗಾಗಿ ಏನಾದರೂ ಅಹಿತಕರವಾದುದನ್ನು ಕೇಳಿದಾಗ ನಿಮ್ಮ ಜೊತೆ ನೀವು ಬೆಳೆಸಿಕೊಂಡ ಚಿತ್ರಣವು ನೋಯತೊಡಗುತ್ತದೆ. ಇದಕ್ಕೆ ಏನು ಮಾಡುತ್ತೀರಿ ಎನ್ನುವ ಕೃಷ್ಣಮೂರ್ತಿ ಉತ್ತರವನ್ನು ದೊರಕಿಸಿಕೊಡುವ ಪ್ರಯತ್ನವನ್ನು ಮಾಡುತ್ತಾರೆ.

ಅವರೇ ಹೇಳುವಂತೆ ನೋವು ಬೇಡದ ಎಲ್ಲಾ ಕೊಳಕಿನೊಳಗೆ ನಮ್ಮನ್ನು ಬಂಧಿಸುತ್ತದೆ. ನೋವಿನ ಬಂಧನದಿಂದ ಬಿಡಿಸಿ ಕೊಳ್ಳಬೇಕಾದರೆ ನಮಗೊಂದು ಶಕ್ತಿ ಬೇಕಾಗುತ್ತದೆ ಮತ್ತು ಆ ಶಕ್ತಿಯೇ ಅವಲೋಕನ. ಈ ಅವಲೋಕನವೆಂಬ ಶಕ್ತಿ ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡರೆ ಯಾವುದೇ ನೋವುಗಳು ನಮ್ಮೊಳಗೆ ದಾಖಲಾಗುವುದಿಲ್ಲ. ಯಾವುದೋ ಒಂದು ಅವಮಾನಕ್ಕೆ ನಾವು ಪೂರ್ಣವಾದ ನಮ್ಮ ಗಮನವನ್ನು ನೀಡಿದರೆ ಅದು ನೋವಾಗಿ ದಾಖಲಾಗುವುದಿಲ್ಲ. ಅದೇ ಯಾವಾಗ ನಾವು ಯಾವುದೇ ಅವಮಾನವನ್ನು ಮತ್ತಿನ್ನೇನನ್ನೋ ಸರಿಯಾಗಿ ಅವಲೋಕಿಸದೆ ಗಮನಿಸದೇ ಹೋದಾಗ ಮಾತ್ರ ಅದು ನೋವಾಗಿ ಬದಲಾಗುತ್ತದೆ.

ಇದೊಂದು ಸೂಕ್ಷ್ಮತೆ ಬೇಡುವ ಕೆಲಸ. ಆದರೆ ನಮ್ಮ ಶಕ್ತಿಯನ್ನು ಸಮಂಜಸವಾಗಿ ಅವಲೋಕಿಸಲು ಸಾಧ್ಯವಾಗದೇ
ಹೋದಾಗ ಅದು ಘರ್ಷಣೆಯಾಗಿ ಬದಲಾಗುತ್ತದೆ. ನನಗೆ ನೋವೇ ಆಗಿಲ್ಲ, ನಾನೇ ಬೇರೆ ನೋವೇ ಬೇರೆ, ಈ ನೋವಿಗೆಲ್ಲ ನನ್ನ ಹತ್ತಿರ ಮುಲಾಮಿದೆ ಎಂದೋ ಇಲ್ಲ ನೋವಿನಿಂದ ತಪ್ಪಿಸಿಕೊಳ್ಳಲು ಓಡಿ ಹೋಗಲು ಅದುಮಿಡಲು ಪ್ರಯತ್ನಿಸುವುದಿದೆ ಯಲ್ಲ, ಬೇಡದ ಮೇಲಿನ ವಿಚಾರಗಳು ಮನಸ್ಸಿಗೆ ಮುತ್ತಿ ಮತ್ತು ಭಾರವೆನಿಸತೊಡಗುತ್ತದೆ.

ಆದರೆ ನೋವನ್ನು ಅವಲೋಕಿಸಿದರೆ ಸೂಕ್ಷ್ಮವಾಗಿ ಗಮನಿಸಿಬಿಟ್ಟರೆ ಮೇಲಿನ ಹಾಗೆ ಬೇಡದ ಹೊರೆಗಳು ಮನಸ್ಸನ್ನು
ಭಾರವಾಗಿಸುವುದಿಲ್ಲ ಬದಲಾಯಿಸುತ್ತವೆ. ಅವಲೋಕನ ನೋವನ್ನು ಆ ಮೂಲಕ ಬದಲಾಯಿಸುತ್ತದೆ. ಹಾಗಿದ್ದರೆ ಇನ್ನು ನೋವಿಗೆ ಜಾಗವೆಲ್ಲಿ? ಇಷ್ಟು ತಿಳುವಳಿಕೆ ಮನಸ್ಸಿಗೆ ಇಳಿದುಬಿಟ್ಟರೆ ಮುಂದೆ ಯಾರೇ ನಮ್ಮನ್ನು ಅವಮಾನಿಸಿದರು, ನೋಯಿಸಿದರು, ಬೇಸರಿಸಿದರೂ ಅದು ನಮ್ಮೊಳಗೆ ಇಳಿಯುವುದಿಲ್ಲ, ನಮ್ಮೊಳಗೆ ದಾಖಲಾಗುವುದಿಲ್ಲ. ನಮ್ಮೊಳಗೆ ನಾವು
ಸುತ್ತುವರಿಯುವುದನ್ನು ಬಿಡಬೇಕು, ಮನಸ್ಸಿನ ಸುತ್ತ ಕಟ್ಟಿದ ಗೋಡೆಗಳನ್ನು ಕೆಡವಬೇಕು.

ನೋವನ್ನು ಕಂಟ್ರೋಲ್ ಮಾಡಲು ಹೊರಡಬಾರದು, ಅದನ್ನು ಬದಲಾಯಿಸಲು ಹೆಣಗಬಾರದು, ಅದನ್ನು ಅದುಮಿಡಲು ಪ್ರಯತ್ನಿಸಬಾರದು, ಅದರಿಂದ ಓಡಿ ಹೋಗಲು ಬಾರದು, ಅದನ್ನು ತದೇಕಚಿತ್ತವಾಗಿ ಗಮನಿಸಬೇಕು, ಅವಲೋಕಿಸಬೇಕು, ಸಹಜವಾಗೇ ಅಲ್ಲಿ ನೋವಿರು ವುದಿಲ್ಲ. ಬೆಳಗಾಗೇಳುವುದರಲ್ಲಿ ಇದನ್ನು ಸಾಧಿಸಲಾಗುವುದಿಲ್ಲ, ಅವಲೋಕನವು ನಿತ್ಯದ ಜಪವಾಗಬೇಕು.

error: Content is protected !!