Sunday, 8th September 2024

ವಂಚನೆಯ ಜಾಲಕ್ಕೆ ಶಾಸಕರೂ ಬಲಿ

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಅವತ್ತು ಸಿದ್ಧರಾಮಯ್ಯಅವರ ಸಂಪುಟದಲ್ಲಿ ವಸತಿ ಸಚಿವರಾಗಿದ್ದ ಅಂಬರೀಷ್ ಒಮ್ಮೆ ವಿಧಾನಸಭೆಯ ಮೊಗಸಾಲೆಗೆ ಬಂದು ಕುಳಿತರು. ಅವರು ಬಂದು ಕುಳಿತ ಸ್ವಲ್ಪ ಹೊತ್ತಿನ ಆಡಳಿತಾರೂಢ ಕಾಂಗ್ರೆಸ್‌ನ ಶಾಸಕರೊಬ್ಬರು ಅಲ್ಲಿಗೆ ಬಂದರು.

ಹೀಗೆ ಬಂದವರು ಅಂಬರೀಷ್ ಅವರ ಬಳಿ: ಸಾರ್, ಈ ಸಲ ವಸತಿ ಯೋಜನೆಯಲ್ಲಿ ನಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಮನೆ ಗಳನ್ನು ಹಂಚಿಕೆ ಮಾಡಿ, ಮುಂದಿನ ಚುನಾವಣೆಯ ದೃಷ್ಟಿಯಿಂದ ನಮಗೆ ಅನುಕೂಲವಾಗುತ್ತದೆ ಎಂದರು.

ಅವರಾಡಿದ ಮಾತು ಕೇಳಿದ ಅಂಬರೀಷ್: ಅದ್ಯಾಕೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಮನೆಗಳನ್ನು ಹಂಚಿಕೆ ಮಾಡಬೇಕು?ಒಂದು ಅನುಪಾತದ ಅಡಿಯಲ್ಲಿ ಎಲ್ಲ ಕ್ಷೇತ್ರಗಳಿಗೂ ಹಂಚಿಕೆ ಮಾಡಬೇಕಲ್ಲವೇ? ಎಂದು ಪ್ರಶ್ನಿಸಿದರು. ಆದರೆ, ಇದನ್ನೊಪ್ಪದ ಆ ಶಾಸಕರು, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ತಮ್ಮ ಪಕ್ಷದ ಶಾಸಕರಿಗೆ ಹೆಚ್ಚು ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಜೆಡಿಎಸ್‌ನವರು ಅಧಿಕಾರದಲ್ಲಿ ದ್ದಾಗ ತಮ್ಮ ಪಕ್ಷದ ಶಾಸಕರಿಗೆ ಹೆಚ್ಚು ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಹೀಗಿರುವಾಗ ನೀವು ಸಮಾನ ಹಂಚಿಕೆಯ ಮಾತನಾಡಿದರೆ ನಮಗೆ ಅನ್ಯಾಯವಾಗುತ್ತದೆ ಎಂದು ಅಪಸ್ವರ ಎತ್ತಿದರು.

ಆದರೆ ಇದನ್ನೊಪ್ಪದ ಅಂಬರೀಷ್: ಈ ಸರಕಾರ ರಾಜ್ಯದ ಎಲ್ಲ ಜನರಿಗೆ ಸೇರಿದ್ದು. ಹೀಗಿರುವಾಗ ಅವರಿಗೊಂದು ನ್ಯಾಯ, ಇವರಿ ಗೊಂದು ನ್ಯಾಯ ಅನ್ನುವುದು ಸರಿಯಲ್ಲ. ಹಿಂದಿನವರು ತಪ್ಪು ಮಾಡಿರಬಹುದು. ಹಾಗಂತ ನಾವೂ ಅದೇ ತಪ್ಪು ಮಾಡಿದರೆ ಹೇಗೆ? ಎಲ್ಲಾ ಒಂದು ಕಡೆ ಈ ಅಸಮಾನತೆ ಸರಿಯಾಗಬೇಕಲ್ಲವಾ? ಎಂದರು.

ಅದಕ್ಕೆ ಆ ಶಾಸಕರು: ಅಯ್ಯೋ, ನೀವು ನ್ಯಾಯ, ನೀತಿ, ಧರ್ಮ ಅಂತ ಕುಳಿತರೆ ಅನ್ಯಾಯ ಮಾಡೋರು ಮಾಡುತ್ತಲೇ ಇರುತ್ತಾರೆ. ನಾವು ಕೊಳೀಬೇಕಾಗುತ್ತೆ ಅಷ್ಟೇ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಮಾಡಬಾರದ್ದನ್ನ ಮಾಡ್ತಿಲ್ಲವಲ್ಲ? ಅವರ ಕಾಲದಲ್ಲಿ ನಮಗಾದ ಅನ್ಯಾಯವನ್ನು ಸರಿಪಡಿಸಿಕೊಳ್ತಿದೀವಿ ಅಷ್ಟೇ ಎಂದರು. ಈ ಮಾತು ಕೇಳಿ ಸಿಟ್ಟಿಗೆದ್ದ ಅಂಬರೀಷ್, ರೀ ನಮ್ದು, ನಮ್ದು ಅಂತ ಅದೇನು ಬಡ್ಕೋತೀರ್ರೀ? ಜನ ಯಾವ ಪಕ್ಷದಲ್ಲಿದ್ದರೂ ನಮ್ಮವರೇ ಅಲ್ಲವೇನ್ರೀ ಎಂದು ಪ್ರಶ್ನಿಸಿದರು.

ಯಾವಾಗ ಅಂಬರೀಷ್ ಸಿಟ್ಟಿಗೆದ್ದರೋ, ಆಗ ಏನು ಹೇಳಬೇಕು ಅಂತ ಗೊತ್ತಾಗದ ಆ ಶಾಸಕರು: ಹೋಗ್ಲಿ ಬಿಡಿ ಸಾರ್, ಇದನ್ನು ಮುಖ್ಯಮಂತ್ರಿಗಳಿಗೇ ಹೇಳ್ತೀವಿ ಅಂತ ಅಲ್ಲಿಂದ ಹೊರಟು ಹೋದರು.
**

ಈ ಘಟನೆಯನ್ನು ಏಕೆ ನೆನಪಿಸಿಕೊಳ್ಳಬೇಕೆಂದರೆ ಇವತ್ತು ಪ್ರತಿಪಕ್ಷದ ಶಾಸಕರು ಮಾತ್ರವಲ್ಲ, ಆಡಳಿತ ಪಕ್ಷದ ಶಾಸಕರಲ್ಲೂ ಒಂದು ಅಸಮಾಧಾನ ವ್ಯಾಪಕವಾಗಿದೆ. ಅದೆಂದರೆ, ಸರಕಾರದ ಮಟ್ಟದಲ್ಲಿ ತಾವು ಹೇಳುವ ಕೆಲಸಗಳಾಗುತ್ತಿಲ್ಲ ಎಂಬುದು.

ಸಾಮಾನ್ಯವಾಗಿ ಶಾಸಕರು ಮುಖ್ಯಮಂತ್ರಿಯವರ ಬಳಿ ಅಹವಾಲು ತೆಗೆದುಕೊಂಡು ಹೋಗುತ್ತಾರೆ. ಈ ಅಹವಾಲು ಸ್ವೀಕರಿಸುವ ಮುಖ್ಯಮಂತ್ರಿಗಳು ಅದನ್ನು ತಮ್ಮ ಪ್ರಧಾನ ಕಾರ್ಯದರ್ಶಿಗಳಿಗೆ ಕೊಡುತ್ತಾರೆ. ಇದನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಇತ್ಯರ್ಥ ಮಾಡಿಕೊಡುವುದು ಪ್ರಧಾನ ಕಾರ್ಯದರ್ಶಿಗಳ ಕೆಲಸ. ಆದರೆ, ಬೊಮ್ಮಾಯಿ ಸರಕಾರದಲ್ಲಿ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಗಳ ನಡುವೆ ಹೊಂದಾಣಿಕೆಯಿಲ್ಲ ಎಂಬುದು ಶಾಸಕರ ದೂರು.

ಇದೇ ದೂರು ಮಂತ್ರಿಗಳು, ಅಽಕಾರಿಗಳ ಮಟ್ಟದಲ್ಲೂ ಪುನರಾವರ್ತನೆ ಆಗುತ್ತದೆ. ಅವರು ತಮಗೆ ಬೇಕಾದ ಅರ್ಜಿಗಳನ್ನು ವಿಲೇವಾರಿ ಮಾಡುತ್ತಾರೆ ಎಂದು ಶಾಸಕರು ದೂರುತ್ತಾರೆ. ಕುತೂಹಲದ ಸಂಗತಿ ಎಂದರೆ ಆಡಳಿತ ಪಕ್ಷದ ಬಹುತೇಕ ಶಾಸಕರಿಗೂ ಸಮಸ್ಯೆ ಇದೆ. ಪ್ರತಿಪಕ್ಷಗಳ ಬಹುತೇಕ ಶಾಸಕರಿಗೂ ಸಮಸ್ಯೆ ಇದೆ. ಇಂತಹ ಸಮಸ್ಯೆಗಳೇ ಬೊಮ್ಮಾಯಿ ಸರಕಾರದ ಅಂತರಂಗವನ್ನು ಸುಡುತ್ತಿದೆ.
ಗಮನಿಸಬೇಕಾದ ಸಂಗತಿ ಎಂದರೆ ಪಕ್ಷ ಯಾವುದೇ ಇರಲಿ, ಆದರೆ ಪ್ರಭಾವ ಇರುವ ಶಾಸಕರು ಪ್ರತಿ ವರ್ಷ ತಮ್ಮ ಕ್ಷೇತ್ರಗಳ
ಅಭಿವೃದ್ಧಿಗೆ ಅಂತ ಸಾವಿರಾರು ಕೋಟಿ ರುಪಾಯಿ ಬಾಚಿಕೊಂಡು ಹೋಗುತ್ತಾರೆ.

ಪ್ರಭಾವ ಇಲ್ಲದ, ಬಾಯಿಲ್ಲದ ಹಲವು ಶಾಸಕರು ತಮ್ಮ ಕ್ಷೇತ್ರಗಳಿಗೆ ಪುಡಿಗಾಸು ತೆಗೆದುಕೊಂಡು ಹೋಗಲೂ ಕಷ್ಟ ಪಡುತ್ತಾರೆ. ರಾಜ್ಯ ದಲ್ಲಿ ಅಸಮಾನತೆಯ ಕಂದಕ ದೊಡ್ಡದಾಗಿರುವುದು ಈ ಕಾರಣಕ್ಕೆ. ಇಂತಹ ಅಸಮಾನತೆಯನ್ನು ನಿವಾರಿಸುವ ಗಂಭೀರ ಪ್ರಯತ್ನ ನಡೆದೇ ಇಲ್ಲ. ಇವತ್ತು ರಾಜ್ಯದ ವಾರ್ಷಿಕ ಬಜೆಟ್ 2.64 ಕೋಟಿ ರುಪಾಯಿ. ಈ ಪೈಕಿ ಅರ್ಧದಷ್ಟು ಹಣ ಯೋಜನೇತರ ವೆಚ್ಚಗಳಿಗೆ ಬಳಕೆಯಾಗುತ್ತದೆ. ಹೀಗೆ ಯೋಜನೇತರ ವೆಚ್ಚಕ್ಕೆ ಅಂತ ಖರ್ಚಾದ ನಂತರ ಯೋಜನೆಗೆ ಅಂತ ಉಳಿಯುವುದು ಸುಮಾರು ಒಂದು ಲಕ್ಷದ ಮೂವತ್ತು ಸಾವಿರ ಕೋಟಿ.

ಈ ಪೈಕಿ ನಿರ್ದಿಷ್ಟ ಯೋಜನೆಗಳಿಗೆ ಕ್ಷೇತ್ರವಾರು ಮಾನದಂಡ ಅನುಸರಿಸದಿದ್ದರೂ, ಉಳಿದಂತೆ ಪ್ರತಿ ಶಾಸಕರ ಕ್ಷೇತ್ರಗಳಿಗೆ ಸರಾಸರಿ ಮುನ್ನೂರು ಕೋಟಿ ರುಪಾಯಿಗಳಷ್ಟಾದರೂ ಹಣ ಬರಬೇಕು. ಆದರೆ, ಸರಕಾರ ಮಂಜೂರು ಮಾಡುವ ಯೋಜನೆಗಳಲ್ಲಿ ಬಹುತೇಕ ಕ್ಷೇತ್ರಗಳಿಗೆ ಸಮಪಾಲು ದೊರೆಯುವುದಿಲ್ಲ. ಉಳಿದಂತೆ ಪ್ರಭಾವಿ ಶಾಸಕರು ಯಾವ ಪಕ್ಷಗಳಲ್ಲಿದ್ದರೂ ತಮ್ಮ ಕ್ಷೇತ್ರಗಳಿಗೆ ಸಾವಿರಾರು ಕೋಟಿ ರು. ಗಳಷ್ಟು ಹಣ ಒಯ್ಯುತ್ತಾರೆ. ಅಸಹಾಯಕ ಶಾಸಕರು ಕೊರಗುತ್ತ ಕೂರುತ್ತಾರೆ.

ತುಂಬ ದೂರ ಹೋಗುವುದೇನೂ ಬೇಡ. ಕಳೆದ ವರ್ಷ ಯಡಿಯೂರಪ್ಪ ಅವರ ಪದಚ್ಯುತಿಗೆ ಆಟ ಶುರುವಾಯಿತಲ್ಲ? ಆ ಸಂದರ್ಭದಲ್ಲಿ ಅಽಕಾರ ಉಳಿಸಿಕೊಳ್ಳಲು ಯಡಿಯೂರಪ್ಪ ಹರಸಾಹಸ ನಡೆಸಿದರು. ತಮ್ಮ ಸಾಹಸಕ್ಕೆ ಜತೆ ನೀಡಿದ ಹಲ ಶಾಸಕರ ಕ್ಷೇತ್ರಗಳಿಗೆ ಸರಕಾರದಿಂದ ದಂಡಿಯಾಗಿ ಅನುದಾನ ಬಿಡುಗಡೆ ಒದಗಿಸಿದರು.

ಯಾವ ಕಾರಣಕ್ಕೂ ಸಿಎಂ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಬಾರದು. ಒಂದು ವೇಳೆ ಅವರನ್ನು ಕೆಳಗಿಳಿಸಿದರೆ ರಾಜ್ಯ ದಲ್ಲಿ ಬಿಜೆಪಿ ನೆಲ ಕಚ್ಚುತ್ತದೆ ಎಂದು ಬೀದಿಯಲ್ಲಿ ನಿಂತು ಈ ಬೆಂಬಲಿಗ ಶಾಸಕರು ಧ್ವನಿ ಎತ್ತಿದ್ದೇ ದೊಡ್ಡ ಸಾಧನೆ. ಜತೆಗೆ ಕರ್ನಾಟಕಕ್ಕೆ ಬಂದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ, ರಾಜ್ಯ ಬಿಜೆಪಿಯ ಏಕೈಕ ಜನನಾಯಕ ಅಂತಿದ್ದರೆ ಅದು ಯಡಿಯೂ ರಪ್ಪ ಅವರು ಮಾತ್ರ. ಉಳಿದ ಯಾರೇ ಇರಲಿ, ಅವರು ಯಡಿಯೂರಪ್ಪ ಅವರಿಗೆ ಸಮನಲ್ಲ ಅಂತ ವಿವರಿಸಿದ್ದೇ ಹೆಗ್ಗಳಿಕೆ. ಇಷ್ಟನ್ನು ಮಾಡಿದ ಶಾಸಕರ ಕ್ಷೇತ್ರಗಳಿಗೆ ಯಡಿಯೂರಪ್ಪ ಅವರು ಮಂಜೂರು ಮಾಡಿದ ಹಣದ ಪ್ರಮಾಣ ತುಂಬ ದೊಡ್ಡದು.

ಹೀಗೆ ಬಾಯಿದ್ದವರು ಸನ್ನಿವೇಶಕ್ಕೆ ಅನುಗುಣವಾಗಿ ಹೆಜ್ಜೆ ಇಟ್ಟು ತಮ್ಮ ಕ್ಷೇತ್ರಗಳಿಗೆ ಸಾವಿರಾರು ಕೋಟಿ ಹಣ ತೆಗೆದುಕೊಂಡು ಹೋದರೆ ಬಾಯಿಲ್ಲದ ಶಾಸಕರ ಗತಿ ಏನು? ಹಣ ಹಂಚಿಕೆಯ ತಾರತಮ್ಯ ಎಂಬುದು ಮೇಲುಹಂತದಲ್ಲಿ ಹೇಗಿದೆ ಎಂಬುದಕ್ಕೆ ಇದು ಉದಾಹರಣೆ. ಅಂದ ಹಾಗೆ ಕಳೆದ ಜುಲೈ ತಿಂಗಳಲ್ಲಿ ನಡೆದ ಈ ಪ್ರಹಸನದಲ್ಲಿ ಯಡಿಯೂರಪ್ಪ ಇಲ್ಲದೆ ಬಿಜೆಪಿ ಇಲ್ಲ ಎಂಬಂತೆ ಕೂಗಾಡಿದವರು ಇವತ್ತಿಗಾಗಲೇ ಪ್ಲೇಟು ಬದಲಿಸಿ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಡೈನಿಂಗ್ ಟೇಬಲಿನ ಮುಂದೆ ಕುಳಿತಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ನೀವಿರದೆ ಬೇರೆ ಯಾರೇ ಇದ್ದಿದ್ದರೂ ಸರಕಾರದ ಪರಿಸ್ಥಿತಿ ಕಷ್ಟಕರವಾಗಿರುತ್ತಿತ್ತು ಎಂಬುದು ಅವರ ಲೇಟೆಸ್ಟ್ ಹೊಗಳಿಕೆ.

ಪರಿಣಾಮ? ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲೂ ಈ ಶಾಸಕರು ತಮ್ಮ ಕ್ಷೇತ್ರಗಳಿಗೆ ದಂಡಿಯಾಗಿ ಅನುದಾನ ಒಯ್ಯಲು ತಯಾರಾಗಿzರೆ. ಹಾಗಂತ ಹಣ ಹಂಚಿಕೆ ಯ ತಾರತಮ್ಯ ಎಂಬುದು ಯಡಿಯೂರಪ್ಪ, ಬೊಮ್ಮಾಯಿ ಕಾಲದ ಮಹಿಮೆ ಏನಲ್ಲ. ಈ ಹಿಂದಿದ್ದ ಸರಕಾರಗಳ ಅವಧಿಯಲ್ಲೂ ಇಂತಹ ಆಟಗಳೇ ನಡೆದಿವೆ. ಲೊಕೇಶನ್ನು, ಸೀಕ್ವೆನ್ಸುಗಳು ಬೇರೆ ಅಷ್ಟೇ.

ಅದು ಧರ್ಮಸಿಂಗ್ ಅವರ ಕಾಲವಿರಬಹುದು, ಕುಮಾರಸ್ವಾಮಿ, ಸಿದ್ಧರಾಮಯ್ಯ ಅವರ ಕಾಲವೇ ಇರಬಹುದು. ಒಟ್ಟಿನಲ್ಲಿ ಈ ರೀತಿಯ ತಾರತಮ್ಯ ಕಳೆದ ಕೆಲ ದಶಕಗಳಿಂದ ನಡೆದು ಬಂದ ಪರಿಣಾಮವಾಗಿ ಬಹುತೇಕ ಕ್ಷೇತ್ರಗಳು ಇನ್ನೂ ನಲುಗುತ್ತಿವೆ. ಇನ್ನು ಅಽಕಾರದ ತುತ್ತ ತುದಿಯಲ್ಲಿರುವವರು ಯೋಜನೆಗಳನ್ನು ರೂಪಿಸುವಾಗ ಪಡೆಯುವಾಗ ಕಮಿಷನ್ ಪಡೆಯುತ್ತಾರೆ ಎಂಬ ದೂರೂ ಹೊಸತಲ್ಲ. ಇಂತಹ ದೂರು ಕಾಲಾನುಕಾಲಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಸಿದ್ಧರಾಮಯ್ಯ ಅವರ ನೇತೃತ್ವದ ಸರಕಾರ ಇದ್ದ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಕರ್ನಾಟಕಕ್ಕೆ ಬಂದು, ಇದು ಇಪ್ಪತ್ತು ಪರ್ಸೆಂಟ್ ಕಮಿಷನ್ನಿನ ಸರಕಾರ ಎಂದು ಆರೋಪಿಸಿದ್ದರು.

ಆದರೆ ಈಗ ಬಿಜೆಪಿ ಸರಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘ ಒಂದಲ್ಲ, ಎರಡಲ್ಲ, ಮೂರು ಬಾರಿ ಆರೋಪ ಮಾಡಿದೆ.
ಇದು ನಲವತ್ತು ಪರ್ಸೆಂಟ್ ಕಮಿಷನ್ನಿನ ಸರಕಾರ. ಈ ಕುರಿತು ನಮ್ಮ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ ಕನಿಷ್ಠ ಇಪ್ಪತ್ತೈದು ಶಾಸಕರು ರಾಜೀನಾಮೆ ಕೊಡುವ ಸ್ಥಿತಿ ಬರುತ್ತದೆ ಎಂದಿzರೆ. ಯಥಾ ಪ್ರಕಾರ ಇವರು ಸರಕಾರದ ಮಟ್ಟದಲ್ಲಿ ಪ್ರಭಾವಿ ಶಾಸಕರು. ಯಾರೇ ಮುಖ್ಯಮಂತ್ರಿಗಳಾಗಲಿ, ಅವರಿಂದ ದಂಡಿಯಾಗಿ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವವರು.

ಅಂದ ಹಾಗೆ ಹಾಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಸಂವಿಧಾನದ ಬಗ್ಗೆ, ಚುನಾವಣಾ ಸುಧಾರಣೆಗಳ ಬಗ್ಗೆ ಶಾಸನಸಭೆಯಲ್ಲಿ ವಿಶೇಷ ಚರ್ಚೆಗೆ ಅನುವು ಮಾಡಿಕೊಟ್ಟಿzರೆ. ಆ ಮೂಲಕ ಸ್ವಾಗತಾರ್ಹ ಹೆಜ್ಜೆ ಇಟ್ಟಿದ್ದಾರೆ. ಅವರು ಮುಂದಿನ ಅಽವೇಶನದಲ್ಲಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಏಳೂವರೆ ದಶಕಗಳಲ್ಲಿ ಸರಕಾರದಿಂದ ಮಂಜೂರಾದ ಹಣವೆಷ್ಟು? ಆ ಹಣದಿಂದ ವಿಧಾನಸಭಾ ಕ್ಷೇತ್ರಗಳು ಎಷ್ಟು ಅಭಿವೃದ್ಧಿ ಹೊಂದಿವೆ? ಅನ್ನುವ ಕುರಿತು ವಿಶೇಷ ಚರ್ಚೆಗೆ ಅನುವು ಮಾಡಿಕೊಡಬೇಕು.

ಅಂದ ಹಾಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗೆ ಸರಕಾರಗಳಿಂದ ಮಂಜೂರಾದ ಹಣವೆಷ್ಟು? ಎಂಬುದಕ್ಕೆ ಸರಕಾರದ ಲೆಕ್ಕ ಸಿಗುತ್ತದೆ. ಅ ಲೆಕ್ಕವನ್ನು ಮುಂದಿಟ್ಟುಕೊಂಡು ಚರ್ಚೆ ನಡೆಸಿದರೆ ರಾಜ್ಯದಲ್ಲಿರುವ ಅಸಮಾನತೆಗೆ ಏನು ಕಾರಣ?ಇದನ್ನು ಸರಿಪಡಿಸುವ ಮಾರ್ಗವೇನು? ಅನ್ನುವುದು ತಿಳಿಯುತ್ತದೆ. ಒಂದು ವೇಳೆ ಇದಾಗದಿದ್ದರೆ ಶಾಸಕರ ಅಸಮಾಧಾನ ಎಂಬುದೂ ನಿರಂತರವಾಗಿರುತ್ತದೆ. ರಾಜ್ಯದ ಅಭಿವೃದ್ಧಿ೦= ಯೂ ಮರೀಚಿಕೆಯಾಗುತ್ತದೆ.

error: Content is protected !!