Saturday, 27th July 2024

ಮೋದಿ-ಸಿದ್ದು ಇಬ್ಬರೂ ಖುಷ್ !

ಮೂರ್ತಿಪೂಜೆ

ಮೊನ್ನೆ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಖುಷಿಯಿಂದ ದಿಲ್ಲಿಗೆ ವಾಪಸ್ಸಾಗಿದ್ದಾರೆ. ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಳ ಪೈಕಿ ೨೦ರಿಂದ ೨೫ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ರಾಜ್ಯ ಬಿಜೆಪಿ ನಾಯಕರ ಪ್ರಾಮಿಸ್ಸೇ ಇದಕ್ಕೆ ಕಾರಣ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಬಂದಾಗ ರಾಜ್ಯ ಬಿಜೆಪಿಯ ನಾಯಕರು ೧೮ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ರಿಪೋರ್ಟು ಕೊಟ್ಟಿದ್ದರು. ಆದರೆ ಈ ರಿಪೋರ್ಟನ್ನು ನಂಬದ ಅಮಿತ್ ಶಾ ಅವರು, ಇವತ್ತಿನ ಸ್ಥಿತಿಯಲ್ಲಿ ಚುನಾವಣೆ ನಡೆದರೆ ಬಿಜೆಪಿ ಮೈತ್ರಿಕೂಟ ೧೬ ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಬಹುದು ಎಂದಿದ್ದರಲ್ಲದೆ, ಯಾವ ತಪ್ಪುಗಳನ್ನು ಸರಿಪಡಿಸಿಕೊಂಡರೆ ನಾವು ೨೦ ಸೀಟುಗಳ ಗಡಿ ದಾಟಬಹುದು ಎಂದು ಪಾಠ ಮಾಡಿದ್ದರು.

ಇದಾದ ನಂತರ ರಾಜ್ಯ ಬಿಜೆಪಿಯಲ್ಲಿ ಒಂದು ಬಗೆಯ ಸಂಚಲನ ಮೂಡಿದ್ದಲ್ಲದೆ, ಸ್ವತಃ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಲೋಕಸಭಾ ಕ್ಷೇತ್ರಗಳಲ್ಲಿದ್ದ ಭಿನ್ನಮತವನ್ನು ನಿವಾರಿಸುವ ಕೆಲಸಕ್ಕೆ ಮುಂದಾಗಿದ್ದರು. ಅವರ ಈ ಯತ್ನ ಸಂಪೂರ್ಣ ಯಶಸ್ವಿಯಾಗದೆ ಇರಬಹುದು. ಆದರೆ ಒಂದು ಮಟ್ಟದಲ್ಲಿ ಬಿಜೆಪಿಯ ಭಿನ್ನಮತ ಕೂಲ್ ಆಗುತ್ತಿರುವುದು ನಿಜ. ಇಂಥ ಸಂದರ್ಭದಲ್ಲೇ ಶನಿವಾರ ಕರ್ನಾಟಕಕ್ಕೆ ಬಂದ ಪ್ರಧಾನಿ ಮೋದಿ, ‘ಹೇಗಿದೆ ಕರ್ನಾಟಕದ ಪರಿಸ್ಥಿತಿ?’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಜ್ಯದ ಬಿಜೆಪಿ ನಾಯಕರು, ಕರ್ನಾಟಕದಲ್ಲಿ ಪಕ್ಷವು ಗೆಲ್ಲುವ ಕ್ಷೇತ್ರಗಳು ಯಾವುವು? ಗೆಲ್ಲುವ ಸಾಧ್ಯತೆ ಫಿಫ್ಟಿ-ಫಿಫ್ಟಿ ಇರುವ ಕ್ಷೇತ್ರಗಳು ಯಾವುವು? ಕಾಂಗ್ರೆಸ್ ಪಕ್ಷಕ್ಕಿಂತ ಹಿಂದಿರುವ ಕ್ಷೇತ್ರಗಳು ಯಾವುವು ಅಂತ ವಿವರಿಸಿದ್ದಾರೆ.

ಅಷ್ಟೇ ಅಲ್ಲ, ‘ಈ ಸಲ ಕರ್ನಾಟಕದ ಚುನಾವಣೆಯಲ್ಲಿ ತುಂಬ ಎಫೆಕ್ಟಿವ್ ಆಗಿರುವುದು ನಿಮ್ಮ ಹೆಸರಿನ ಅಲೆ. ಹೀಗಾಗಿ ರಾಜ್ಯದ ಹಲ ಕ್ಷೇತ್ರಗಳಲ್ಲಿ ಬಂಡಾಯದ ಕುರುಹು ಇತ್ತಾದರೂ ಮತದಾರರೇ ನಿಮ್ಮ ಜತೆಗಿರುವುದರಿಂದ ಅಸಮಾಧಾನವಿದ್ದವರೂ ಅಸಹಾಯಕರಾಗಿದ್ದಾರೆ. ಪರಿಣಾಮವಾಗಿ ಇವತ್ತು ಚುನಾವಣೆ ನಡೆದರೂ ನಾವು ಮಿನಿಮಮ್ ೨೦ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸುತ್ತೇವೆ. ಹಾಗಂತ ೨೦ ಕ್ಷೇತ್ರಗಳಲ್ಲಿ ಮಾತ್ರ ಅಂತಲ್ಲ, ಪರಿಸ್ಥಿತಿ ದಿನದಿಂದ ದಿನಕ್ಕೆ ಇಂಪ್ರೂವ್ ಆಗ್ತಿರೋದ್ರಿಂದ ನಾವು ೨೫ ಕ್ಷೇತ್ರಗಳಲ್ಲಿ ಗೆಲುವು ಗಳಿಸಿದರೂ ಅಚ್ಚರಿಯಿಲ್ಲ.

ಆದರೆ ನಾವೀಗ ಗೆದ್ದೇ ಗೆಲ್ಲುವ ಕ್ಷೇತ್ರಗಳ ಬಗ್ಗೆ ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಸರ್’ ಎಂದಿದ್ದಾರೆ. ಹೀಗೆ ರಾಜ್ಯ ಬಿಜೆಪಿಯ ನಾಯಕರು ಕೊಟ್ಟ ರಿಪೋರ್ಟನ್ನು ನೋಡಿದ ಪ್ರಧಾನಿ ಮೋದಿ ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಹೆಸರಿನ ಅಲೆ ಕರ್ನಾಟಕದಲ್ಲಿ ಪವರ್ ಫುಲ್ ಆಗಿದೆ ಎಂಬ
ಮಾಹಿತಿ ಅವರಿಗೆ ಮತ್ತಷ್ಟು ಸಮಾಧಾನ ನೀಡಿದೆ.

ಕಮಲ ಅರಳುವ ಕ್ಷೇತ್ರಗಳು

ಅಂದ ಹಾಗೆ, ಪ್ರಧಾನಿ ಮೋದಿ ಅವರಿಗೆ ಪಕ್ಷವು ಗೆಲ್ಲುವ ೨೦ ಕ್ಷೇತ್ರಗಳ ವಿವರ ನೀಡಿರುವ ಬಿಜೆಪಿ ನಾಯಕರಿಗೆ ರಾಜಧಾನಿ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದೆ.

ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪಿ.ಸಿ.ಮೋಹನ್ ಮತ್ತು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಗೆಲ್ಲುತ್ತಾರೆ ಎಂಬುದು ಈ ನಾಯಕರ ವಿಶ್ವಾಸ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರಿಗೆ ಫೈಟು ಕೊಡುತ್ತಿರುವುದು ಮತ್ತು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಬಿಗಿ ಫೈಟು ಎದುರಿಸುತ್ತಿರುವುದು ನಿಜವಾದರೂ ಅಂತಿಮವಾಗಿ ಮೋದಿ ಅಲೆ ಈ ಇಬ್ಬರನ್ನು ಸಂಸತ್ತಿಗೆ ಕಳಿಸಲಿದೆ ಎಂಬುದು ಬಿಜೆಪಿ ನಾಯಕರ ನಂಬಿಕೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ಕಾಂಗ್ರೆಸ್ ಪಕ್ಷದ ಡಿ.ಕೆ.ಸುರೇಶ್ ಅವರಿಗೆ ಟಫ್ ಫೈಟು ಕೊಡುತ್ತಿದ್ದು, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳಲ್ಲಿ ಲೀಡು ಪಡೆದು, ಉಳಿದ ಕಡೆ ಕಾಂಗ್ರೆಸ್ಸಿನ ಲೀಡು ಕಡಿಮೆ ಮಾಡುವುದರಿಂದ ಗೆಲುವು ಸಾಧಿಸಲಿದ್ದಾರೆ ಎಂಬುದು ಬಿಜೆಪಿ ಪಾಳಯದ ವಿಶ್ವಾಸ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದಲ್ಲಿ ತಮ್ಮ ಅಭ್ಯರ್ಥಿ ಯದುವೀರ್ ಒಡೆಯರ್ ನಿರಾ ಯಾಸವಾಗಿ ಗೆಲುವು ಗಳಿಸಲಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡದಲ್ಲಿ ಬ್ರಿಜೇಶ್ ಚೌಟ, ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ, ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಗೆಲುವು ಗಳಿಸುವುದು
ನಿಶ್ಚಿತ. ಬೀದರ್‌ನಲ್ಲಿ ಭಗವಂತ ಖೂಬಾ, ಬಳ್ಳಾರಿಯಲ್ಲಿ ಬಿ. ಶ್ರೀರಾಮುಲು, ಬಾಗಲಕೋಟೆಯಲ್ಲಿ ಪಿ.ಸಿ.ಗದ್ದಿಗೌಡರ್, ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ, ಕೋಲಾರದಲ್ಲಿ ಮಲ್ಲೇಶ್ ಬಾಬು, ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ, ತುಮಕೂರಿನಲ್ಲಿ ವಿ.ಸೋಮಣ್ಣ, ಬೆಳಗಾವಿಯಲ್ಲಿ ಜಗದೀಶ್
ಶೆಟ್ಟರ್, ಬಿಜಾಪುರದಲ್ಲಿ ರಮೇಶ್ ಜಿಗಜಿಣಗಿ, ಧಾರವಾಡದಲ್ಲಿ ಪ್ರಲ್ಹಾದ್ ಜೋಷಿ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು ಗಳಿಸಲಿದ್ದಾರೆ.

ಇನ್ನು ಚಿಕ್ಕೋಡಿಯಲ್ಲಿ ಪಕ್ಷದ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ, ಚಾಮರಾಜನಗರದಲ್ಲಿ ಬಾಲರಾಜ್, ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರ್, ಕೊಪ್ಪಳದಲ್ಲಿ ಬಸವರಾಜ ಕ್ಯಾವಟೋರ್ ಪರಿಸ್ಥಿತಿ ಟಫ್ ಆಗಿದ್ದು, ಉಳಿದಂತೆ ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ್, ಗುಲ್ಬರ್ಗದಲ್ಲಿ ಉಮೇಶ್ ಜಾಧವ್, ರಾಯಚೂರಿನಲ್ಲಿ ಅಮರೇಶ್ವರ್ ನಾಯಕ್, ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಫಿಫ್ಟಿ-ಫಿಫ್ಟಿ ಲೆವೆಲ್ಲಿನಲ್ಲಿದ್ದಾರೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಅಂದ ಹಾಗೆ, ಸದ್ಯದ ಪರಿಸ್ಥಿತಿ ಹೀಗಿದ್ದರೂ ಮುಂದಿನ ದಿನಗಳಲ್ಲಿ ಮೋದಿ ಅಲೆ ಮತ್ತಷ್ಟು ಪ್ರಬಲವಾಗಿ ಬೀಸುವ ಲಕ್ಷಣ ಸ್ಪಷ್ಟವಾಗಿದ್ದು, ಇದರ ಪರಿಣಾಮವಾಗಿ ಪಕ್ಷ ಗೆಲ್ಲುವ ಸೀಟುಗಳ ಸಂಖ್ಯೆ ೨೫ಕ್ಕೇರಿದರೂ ಅಚ್ಚರಿಯಿಲ್ಲ ಎಂಬುದು ಅವರ ಥಿಂಕಿಂಗು.

ಕೈಗೆ ಹದಿನೆಂಟರ ಗಂಟು
ರಾಜ್ಯ ಬಿಜೆಪಿ ಪಾಳಯದ ಲೆಕ್ಕಾಚಾರ ಹೀಗಿದ್ದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಾಳಯಕ್ಕೆ ೧೮ ಸೀಟುಗಳನ್ನು ಗೆಲ್ಲುವ ವಿಶ್ವಾಸ ಬಂದಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಸಿಎಂ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಅವರು ನಿರಾಯಾಸವಾಗಿ ಗೆಲುವು ಗಳಿಸುತ್ತಾರೆ ಎಂಬ ನಂಬಿಕೆ ಇದೆ. ಇದೇ ರೀತಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮನ್ಸೂರ್ ಅಲಿ ಖಾನ್, ಚಿಕ್ಕಬಳ್ಳಾಪುರದಲ್ಲಿ ರಕ್ಷಾರಾಮಯ್ಯ, ಚಾಮರಾಜನಗರದಲ್ಲಿ
ಸುನೀಲ್ ಬೋಸ್, ಹಾಸನದಲ್ಲಿ ಶ್ರೇಯಸ್ ಪಟೇಲ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗಡೆ, ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ ಕುಮಾರ್ ಗೆಲ್ಲಲಿದ್ದಾರೆ ಎಂಬುದು ಅದರ ನಂಬಿಕೆ.

ರಾಯಚೂರಿನಲ್ಲಿ ಕುಮಾರನಾಯ್ಕ್, ಬಳ್ಳಾರಿಯಲ್ಲಿ ತುಕಾರಾಂ, ಗುಲ್ಬರ್ಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ, ಉತ್ತರ ಕನ್ನಡದಲ್ಲಿ ಅಂಜಲಿ ನಿಂಬಾಳ್ಕರ್, ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್, ಚಿಕ್ಕೋಡಿಯಲ್ಲಿ ಸಚಿವ ಸತೀಶ್ ಜಾರಕಿ ಹೊಳಿ ಅವರ ಪುತ್ರಿ ಪ್ರಿಯಾಂಕ, ಬೀದರ್‌ನಲ್ಲಿ ಸಾಗರ್ ಖಂಡ್ರೆ, ಕೊಪ್ಪಳದಲ್ಲಿ ರಾಜಶೇಖರ ಇಟ್ನಾಳ್, ತುಮಕೂರಿನಲ್ಲಿ ಮುದ್ದಹನುಮೇಗೌಡ, ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಮತ್ತು ಚಿತ್ರದುರ್ಗದಲ್ಲಿ ಬಿ.ಎನ್.ಚಂದ್ರಪ್ಪ ಗೆದ್ದೇ ಗೆಲ್ಲುತ್ತಾರೆ ಎಂಬುದು ಕೈ ಪಾಳಯದ ವಿಶ್ವಾಸ.

ಉಳಿದಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಲಕ್ಷ್ಮಣ್ ಅವರು ಬಿಜೆಪಿಯ ಎದುರಾಳಿಗಳನ್ನು ಸೋಲಿಸಿ ಸಂಸತ್ ಪ್ರವೇಶಿಸಿದರೂ ಅಚ್ಚರಿಯಿಲ್ಲ ಎಂದು ನಂಬಿರುವ ಕೈ ಪಾಳಯ, ಕರ್ನಾಟಕದಲ್ಲಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ಇಂಡಿಯಾ ಒಕ್ಕೂಟಕ್ಕೆ ಗಿಫ್ಟ್ ನೀಡುವ ಲೆಕ್ಕಾಚಾರದಲ್ಲಿದೆ.

ಡಿಸಿಎಂ ಪೋಸ್ಟಿಗೆ ಜಮೀರ್ ಲಗ್ಗೆ
ಈ ಮಧ್ಯೆ ಸಚಿವ ಜಮೀರ್ ಅಹ್ಮದ್ ಸದ್ದಿಲ್ಲದೆ ದೊಡ್ಡ ಟಾಸ್ಕ್ ಅನ್ನು ಕೈಗೆತ್ತಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ಸಾಲಿಡ್ಡಾಗಿ ಮತದಾನ ಮಾಡಬೇಕು ಎಂಬುದು ಈ ಟಾಸ್ಕು. ಅಂದ ಹಾಗೆ, ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರು ಗಣನೀಯ ಪ್ರಮಾಣದಲ್ಲಿ ಮತಗಟ್ಟೆಗೆ ಬರುತ್ತಾರಾದರೂ ಲೋಕಸಭೆ ಚುನಾವಣೆಯಲ್ಲಿ ನಿರಾಸಕ್ತಿ ತೋರಿಸುತ್ತಿದ್ದಾರೆ ಎಂಬುದು ಜಮೀರ್ ಅಹ್ಮದ್ ಕೈಲಿರುವ ರಿಪೋರ್ಟು.

ಅದರ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ ಮತಗಟ್ಟೆಗೆ ಬರುತ್ತಿರುವ ಮುಸ್ಲಿಮರ ಪ್ರಮಾಣ ಶೇ.೩೫ರಷ್ಟು ಮಾತ್ರ. ಆದರೆ ಈ ಸಲ ಮುಸ್ಲಿಮರ ಮತ
ದಾನದ ಪ್ರಮಾಣ ಶೇ.೮೫ಕ್ಕೇರುವಂತೆ ನೋಡಿಕೊಳ್ಳಬೇಕು ಎಂಬುದು ಜಮೀರ್ ಹೊತ್ತುಕೊಂಡಿರುವ ಟಾಸ್ಕು. ಹೀಗಾಗಿ ಸದ್ದಿಲ್ಲದೆ ಮುಸ್ಲಿಂ ಮತ ಕೋಟೆಗೆ ನುಗ್ಗಿರುವ ಅವರು ಈ ಕಾರ್ಯದಲ್ಲಿ ಯಶಸ್ವಿಯಾದರೆ ನಿಶ್ಚಿತವಾಗಿ ಕಾಂಗ್ರೆಸ್ಸಿಗೆ ಲಾಭವಾಗುತ್ತದೆ. ಅದೇ ರೀತಿ ಈ ಕೆಲಸದಲ್ಲಿ ಯಶಸ್ಸು ಗಳಿಸಿದರೆ ಮುಂದಿನ ದಿನಗಳಲ್ಲಿ ಅವರು ಡಿಸಿಎಂ ಹುದ್ದೆಯ ರೇಸಿಗೆ ಎಂಟ್ರಿ ಕೊಡುವುದು ನಿಶ್ಚಿತ.

ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಈಗಾಗಲೇ ಡಿಸಿಎಂ ಹುದ್ದೆಯ ರೇಸಿನಲ್ಲಿರುವ ಗೃಹ ಸಚಿವ ಜಿ.ಪರಮೇಶ್ವರ್, ಲೋಕೋಪ ಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಹೆಸರಿನ ಜತೆ ಜಮೀರ್ ಅಹ್ಮದ್ ಹೆಸರೂ ಇಣುಕಲಿದೆ.

ದಕ್ಷಿಣದಲ್ಲಿ ‘ಗರುಡ ಪುರಾಣ’

ಈ ಮಧ್ಯೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ವಿರುದ್ಧ ಚಿಕ್ಕಪೇಟೆಯ ಶಾಸಕ ಉದಯ್ ಗರುಡಾಚಾರ್ ತಿರುಗಿ ಬಿದ್ದ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ತೇಜಸ್ವಿ ಸೂರ್ಯ ಅವರು ತಮ್ಮನ್ನು ಕೇಳದೆ ಚಿಕ್ಕಪೇಟೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಸಿದರು ಎಂಬ ಕಾರಣಕ್ಕಾಗಿ ಶುರುವಾದ ಉದಯ್ ಗರುಡಾಚಾರ್ ಅವರ ಸಿಟ್ಟು ಈಗ ತೇಜಸ್ವಿ ಸೂರ್ಯ ವಿರುದ್ಧ ಸ್ಪರ್ಧಿಸಿರುವ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರ ಬೆಂಬಲಕ್ಕೆ ನಿಲ್ಲುವ ಹಂತಕ್ಕೆ ಹೋಗಿದೆ. ಈ ಮಧ್ಯೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಗೆದ್ದು ಸಂಸತ್ತಿಗೆ ಹೋಗಿ ಅಂತ ಸೌಮ್ಯರೆಡ್ಡಿ ಅವರಿಗೆ ಉದಯ ಗರುಡಾಚಾರ್
ಹಾರೈಸಿದ್ದಾರೆ ಎಂಬ ಸುದ್ದಿ ಹರಡುತ್ತಲೇ ಅವರನ್ನು ತೇಜಸ್ವಿ ಸೂರ್ಯ ಸಂಪರ್ಕಿಸಿದರಂತೆ. ‘ನೀವು ಹೀಗೆ ಮಾಡಿದರೆ ಹೇಗೆ?’ ಅಂತ ತೇಜಸ್ವಿ ಸೂರ್ಯ ಕೇಳಿದರೆ, ‘ನನ್ನನ್ನು ಕೇಳದೆ ನನ್ನ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡಿದ್ದೇಕೆ?’ ಎಂದು ಗರುಡಾಚಾರ್ ಕೇಳಿದ್ದಾರೆ.

‘ಅರೆ, ನಾನು ಸಂಸದ. ಆ ಕ್ಷೇತ್ರ ನನ್ನ ವ್ಯಾಪ್ತಿಗೂ ಬರುತ್ತದೆ’ ಅಂತ ತೇಜಸ್ವಿ ಸೂರ್ಯ ಹೇಳಿದರೆ ಗರುಡಾಚಾರ್ ‘ಯೇ, ಅವೆಲ್ಲ ನಡಿಯಲ್ಲ,
ಇಲ್ಲೇನಿದ್ರೂ ನಂದೇ’ ಎಂದರಂತೆ. ಹೀಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶುರುವಾದ ‘ಗರುಡ ಪುರಾಣ’ ದಿನದಿಂದ ದಿನಕ್ಕೆ ಹೊಸರೂಪ ಪಡೆಯುತ್ತಿದ್ದು ಎಲ್ಲಿಗೆ ಹೋಗಿ ತಲುಪಲಿದೆ ಎಂಬುದನ್ನು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!