Friday, 19th April 2024

ನಾಗರಹೊಳೆಯ ಕಾಡಿನ ಜೀವ ಚಿಣ್ಣಪ್ಪ ಕಣ್ಮರೆ

ಸ್ಮರಣೆ

ಹೆಚ್.ಟಿ.ಅನಿಲ್

ಸುಡುಬಿಸಿಲಿನಲ್ಲಿ ನೂರಾರು ವಿದ್ಯಾರ್ಥಿಗಳೊಂ ದಿಗೆ.. ಹೆಜ್ಜೆ ಹಾಕುತ್ತ, ಕಾಡ್ಗಿಚ್ಚಿನಿಂದ ಕಾಡನ್ನು ರಕ್ಷಿಸಿ, ಅರಣ್ಯದಲ್ಲಿ ಬೆಂಕಿಗೆ ಅವಕಾಶ ಮಾಡಿಕೊಡಬೇಡಿ ಎಂಬ ಸಂದೇಶ ನೀಡುತ್ತಿದ್ದ ಕೊಡಗಿನ ಎತ್ತರದ ಜೀವಿ ಪರಿಸರ ತಜ್ಞ ಕೆ.ಎಂ.ಚಿಣ್ಣಪ್ಪ ಅವರನ್ನು ಪ್ರತೀವರ್ಷದಂತೆ ಕಾಡಲ್ಲಿ ಇನ್ನು ಪರಿಸರಪ್ರೇಮಿಗಳು ಕಾಣಲು ಸಾಧ್ಯವಿಲ್ಲ. ನೀಳಕಾಯದ ಕೊಟ್ರಂಗಡ ಚಿಣ್ಣಪ್ಪ ಎಂಬ ಕಾಡಿನ ಜೀವಿ ಕಾಡಿನಿಂದ ಮತ್ತೆ ಮರಳಿ ಬಾರದ ಲೋಕಕ್ಕೆ ತೆರಳಿಬಿಟ್ಟಿದ್ದಾರೆ.

ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ನಾಗರಹೊಳೆಗೆ ಚಿಣ್ಣಪ್ಪ ವಿದಾಯ ಹೇಳಿಬಿಟ್ಟಿದ್ದಾರೆ. ಸೇನೆಯಲ್ಲಿದ್ದ ತಂದೆಯ ಬಳಿಯಿದ್ದ ಕೋವಿಯನ್ನು
ನೋಡಿಯೇ ಚಿಣ್ಣಪ್ಪ ಅವರಲ್ಲಿಯೂ ಕೋವಿ ಬಗ್ಗೆ ಒಲವು ಮೂಡಿರಬೇಕು. ಹೀಗಾಗಿಯೇ ಕಾಲೇಜು ಶಿಕ್ಷಣ ಪಡೆಯಲಾಗದ ಚಿಣ್ಣಪ್ಪ ತಂದೆಯಂತೆ ಕೋವಿ ಕೈಗೆತ್ತಿಕೊಂಡರು. ವ್ಯತ್ಯಾಸ ಇಷ್ಟೇ. ತಂದೆ ದೇಶ ರಕ್ಷಣೆಗೋಸ್ಕರ ಕೋವಿ ಹಿಡಿದಿದ್ದರೆ ಮಗ ಚಿಣ್ಣಪ್ಪ ಕಾಡಿನ ಸಂರಕ್ಷಣೆಗಾಗಿ ಕೋವಿ ಹಿಡಿದು ಕೊಂಡರು.

ಮನಸ್ಸು ಮಾಡಿದ್ದರೆ ತನ್ನಲ್ಲಿದ್ದ ಅಗಾಧ eನಕ್ಕೋಸ್ಕರವಾಗಿ ಚಿಣ್ಣಪ್ಪ ಮಹಾನಗರಗಳಲ್ಲಿದ್ದುಕೊಂಡು ಐಷಾರಾಮಿ ಜೀವನ ಕಳೆಯಬಹುದಿತ್ತು. ಆದರೆ ಚಿಣ್ಣಪ್ಪ ನಾಗರಹೊಳೆ ಬಿಟ್ಟು ಹೊರಹೋಗಲಿಲ್ಲ. ಕಾಡು ಮತ್ತ ವನ್ಯಜೀವಿಗಳು ಚಿಣ್ಣಪ್ಪ ಜೀವನದ ಅವಿಭಾಜ್ಯ ಅಂಗಗಳಾಗಿಬಿಟ್ಟಿದ್ದವು. ಒಬ್ಬ
ತಪಸ್ವಿಯಂತೆ ಕಾಡನ್ನು ಚಿಣ್ಣಪ್ಪ ಧ್ಯಾನಿಸಿದರು. ಒಬ್ಬ ಸೈನಿಕನಂತೆ ಕಾಡನ್ನು ಅವರು ಕಾಪಾಡಿಕೊಂಡರು. ಒಂದು ಮಗುವಿನಂತೆ ಕಾಡಿನಲ್ಲಿ ತಾಯಿಯನ್ನು ಚಿಣ್ಣಪ್ಪ ನೋಡಿದರು.

ಇಂಥ ಜೀವಿಗಳು ಅಪರೂಪದಲ್ಲಿ ಅಪರೂಪ. ನಾಗರಹೊಳೆ ಅಥವಾ ರಾಜೀವ್ ಗಾಂಧಿ ರಾಷ್ಟ್ರೀಯ ಅಭಯಾರಣ್ಯ ಇಂದು ದಟ್ಟ ಕಾಡಾಗಿ, ವನ್ಯ ಸಂಕುಲಗಳ ಬೀಡಾಗಿ ದೇಶಾದ್ಯಂತ ಖ್ಯಾತಿ ಪಡೆಯಲು ಮುಖ್ಯ ಕಾರಣ ಎಂದರೆ ಇದೇ ಕೆ.ಎಂ.ಚಿಣ್ಣಪ್ಪ ಅವರ ಪರಿಶ್ರಮ. ಅರಣ್ಯಾಧಿಕಾರಿಯಾಗಿದ್ದು ಕೊಂಡು ನಾಗರಹೊಳೆ ಕಾಡನ್ನು ಬೇಟೆಗಾರರಿಂದ ದೂರವಿಟ್ಟರು. ವನ್ಯಜೀವಿಗಳನ್ನು ಹಂತಕರಿಂದ ರಕ್ಷಿಸಲು ನಾನಾ ಕಾರ್ಯಯೋಜನೆ ಹಮ್ಮಿ ಕೊಂಡರು. ಕಾಡಿನ ವ್ಯಾಪ್ತಿಯ ಆದಿವಾಸಿಗಳೂ ಸೇರಿದಂತೆ ಅನೇಕರು ಕಾನನದೊಳಕ್ಕೆ ನುಗ್ಗಿ ಜಾಗ ಅತಿಕ್ರಮಣ ಮಾಡುವುದು ತಪ್ಪಿಸಿದರು.

ಕಾಡನ್ನು ಯಾವ ಪರಿ ಚಿಣ್ಣಪ್ಪ ಪ್ರೀತಿಸುತ್ತಿದ್ದರೆಂದರೆ, ಯಾರಾದರೂ ಅವರಲ್ಲಿಗೆ ತೆರಳಿ ಇದೆಲ್ಲ ಉಸಾಬರಿ ಯಾಕೆ ಎಂದರೆ ಸಾಕು ಆಕ್ರೋಶದಿಂದ ಸಿಡಿದೇಳುತ್ತಿದ್ದರು. ‘ಈ ನಾಗರಹೊಳೆ.. ಕಾಡಿನ ಪ್ರಾಣಿಗಳಿಗೇ ಸೇರಿದ್ದೇ ಹೊರತು ಮನುಷ್ಯ ಪ್ರಾಣಿಗಳಿಗಲ್ಲ’ ಎಂದು ಅಬ್ಬರಿಸುತ್ತಿದ್ದರು. ಈ ಕಾಡು ನಿಮ್ಮಂಥವರಿಗಲ್ಲ. ಹೊರಡಿ ಇಲ್ಲಿಂದ ಎಂದು ಮನೆಯಿಂದ, ಕಚೇರಿಯಿಂದ ದಬ್ಬಿದ್ದೂ ಇದೆ. ಕಾಡಿನ ಬಗ್ಗೆ ಸಮಗ್ರ ಮಾಹಿತಿ ಅವರಲ್ಲಿತ್ತು. ವಿದ್ಯಾರ್ಥಿ
ಗಳು, ಆಸಕ್ತರು ನಾಗರಹೊಳೆಗೆ ತೆರಳಿ ಮಾಹಿತಿ ಕೇಳಿದರೆ ಸಾಕು; ಯಾವುದೇ ಪ್ರೊ-ಸರ್‌ಗೆ ಕಮ್ಮಿಯಿಲ್ಲದಂತೆ ವನ ಮತ್ತು ವನ್ಯಜೀವಿಗಳ ಬಗ್ಗೆ ಗಂಟೆ ಗಟ್ಟಲೆ ಮಾಹಿತಿ ನೀಡುತ್ತಿದ್ದರು. ವನ ಮತ್ತು ವನವಾಸಿ ಪ್ರಾಣಿಗಳನ್ನು ಹೊರತುಪಡಿಸಿ ಚಿಣ್ಣಪ್ಪ ಬೇರೆ ಯಾವುದೇ ವಿಚಾರದ ಬಗ್ಗೆಯೂ ಮಾತನಾ
ಡಿದ್ದಿಲ್ಲ. ಅಂಥ ವಿಚಾರಗಳ ಬಗ್ಗೆ ಅವರಿಗೆ ಆಸಕ್ತಿಯೂ ಇರಲಿಲ್ಲ. ಗೊತ್ತೂ ಇರಲಿಲ್ಲ. ಕಾಡು ಮತ್ತು ಪ್ರಾಣಿಗಳನ್ನು ಆ ರೀತಿ ಅವರು ಪ್ರೀತಿಸಿದ್ದರು.

ಅದರೊಂದಿಗೆ ಜೀವಿಸಿದ್ದರು. ಅವುಗಳೇ ಚಿಣ್ಣಪ್ಪರ ಉಸಿರಾಗಿತ್ತು. ನಾಗರಹೊಳೆ ಸಂರಕ್ಷಣೆಗಾಗಿಯೇ ಜೀವಿಸಿದ್ದಂತೆ ಇದ್ದ ಚಿಣ್ಣಪ್ಪ ಅವರಿಗೆ ಶತ್ರು ಪಡೆಯೂ ಬಹಳ ದೊಡ್ಡದಾಗಿಯೇ ಇತ್ತು. ಪ್ರಾಣಿ ಬೇಟೆಗಾರರು, ಅರಣ್ಯ ಒತ್ತುವರಿದಾರರ ಕಿರುಕುಳ, ಮಾನಸಿಕ ಮತ್ತು ದೈಹಿಕ ಹಿಂಸೆಗಳನ್ನು ಚಿಣ್ಣಪ್ಪ ಸಹಿಸಿಕೊಂಡೇ ಜೀವಿಸಿದ್ದರು. ಹೇಗಾದರೂ ಮಾಡಿ ಚಿಣ್ಣಪ್ಪ ಅವರನ್ನು ನಾಗರಹೊಳೆಯಿಂದ ಹೊರದಬ್ಬಲು ಷಡ್ಯಂತ್ರಗಳು ಸಾಕಷ್ಟು ರೀತಿಯಲ್ಲಿ ನಡೆದವು. ಇವುಗಳಿಗೆ ಎದೆಗುಂದದ ಚಿಣ್ಣಪ್ಪ ಧೈರ್ಯವಾಗಿಯೇ ಎಲ್ಲ ಹಿಂಸೆಗಳನ್ನು, ಸವಾಲುಗಳನ್ನು ಎದುರಿಸಿದರು.

ಇದೆಲ್ಲದರ ಪರಿಣಾಮ ಎಂಬಂತೆ ಕ್ಷುಲ್ಲಕ ವಿಚಾರಗಳಿಗೆ ನಾಗರಹೊಳೆ ಬೆಂಕಿಗೆ ಆಹುತಿಯಾಗಿತ್ತು. ಅದರ ಹೊಣೆಯನ್ನು ಚಿಣ್ಣಪ್ಪ ತಲೆಗೆ ಕಟ್ಟುವ ಪ್ರಯತ್ನಗಳು ನಡೆದವು. ಚಿಣ್ಣಪ್ಪ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಸುಳ್ಳು ದೂರಿನಿಂದಾಗಿ ಕೆ.ಎಂ.ಚಿಣ್ಣಪ್ಪ ಎಂಬ ‘ಕಾಡಿನ
ಸಂರಕ್ಷಕ’ ೧೨ ದಿನಗಳ ಕಾಲ ಸೆರೆಮನೆ ವಾಸವನ್ನೂ ಅನುಭವಿಸುವಂಥ ಘಟನಾವಳಿ ನಾಗರಹೊಳೆಯಲ್ಲಿ ೮೦ ರ ದಶಕದಲ್ಲಿ ಸಂಭವಿಸಿದ್ದವು. ಚಿಣ್ಣಪ್ಪ ನಿರಪರಾಧಿ ಎಂದು ನ್ಯಾಯಾಲಯ ಆದೇಶಕ್ಕೆ ಹೆಚ್ಚು ದಿನ ಬೇಕಾಗಲಿಲ್ಲ. ಆದರೂ ಸಾಲು ಸಾಲಾದ ಹಿಂಸೆಯಿಂದ ಬೇಸತ್ತ ಚಿಣ್ಣಪ್ಪ ಕೊನೆಗೂ ಮಾನಸಿಕವಾಗಿ ಜರ್ಜರಿತರಾಗಿ ಅರಣ್ಯ ಇಲಾಖೆಯ ಸೇವೆಗೆ ವಿದಾಯ ಹೇಳಲು ಮುಂದಾದರು.

ಸರ್ಕಾರಿ ಕರ್ತವ್ಯದಿಂದ ದೂರವಾದರೂ ನಾಗರಹೊಳೆ ವ್ಯಾಪ್ತಿಯಿಂದ ಚಿಣ್ಣಪ್ಪ ಹೊರಹೋಗಲಿಲ್ಲ. ಅಲ್ಲಿದ್ದುಕೊಂಡೇ ಪ್ರಾಣಿಹಂತಕರನ್ನು ಕಾಡಿ ನೊಳಕ್ಕೆ ಬಾರದಂತೆ ನೋಡಿಕೊಂಡರು. ನಾಗರಹೊಳೆಯ ಸಂರಕ್ಷಣೆಯೇ ಅವರ ಮುಖ್ಯ ಕಾಯಕವಾಗಿತ್ತು. ‘ವೈಲ್ಡ್ ಲೈಫ್ ಫಸ್ಟ್’ ಎಂಬ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷರಾದ ಚಿಣ್ಣಪ್ಪ ಈ ಸಂಸ್ಥೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಕಾಡು ಸಂರಕ್ಷಣೆಯ ನಿಟ್ಟಿನಲ್ಲಿ ಹಮ್ಮಿಕೊಂಡು ಅದರಲ್ಲಿ ಯಶಸ್ವಿಯಾದರು.

ಒನ್ ಮ್ಯಾನ್ ಆರ್ಮಿಯಂತೆ ನಾಗರಹೊಳೆಯನ್ನು ೪ ದಶಕಗಳ ಕಾಲ ಕಾಪಾಡಿಕೊಂಡು ಬಂದಿದ್ದ ಕೆ.ಎಂ.ಚಿಣ್ಣಪ್ಪ ಅವರ ಪ್ರಯತ್ನದ ಫಲವಾಗಿಯೇ ನಾಗರಹೊಳೆಯಲ್ಲಿ ನಿರ್ಭಿತವಾಗಿ ಪ್ರಾಣಿಗಳು ಓಡಾಡಿಕೊಂಡಿದ್ದವು. ಪಕ್ಷಿಗಳ ಕಲರವ ಮಾರ್ಧನಿಸುವಂತಿತ್ತು. ಸೂರ್ಯ ರಶ್ಮಿಗಳು ದಟ್ಟ ನಾಗರಹೊಳೆ ಯೊಳಕ್ಕೆ ನುಸುಳಲು ಸಾಹಸ ಪಡುವಂತಾಗಿತ್ತು. ಸಾಮಾನ್ಯವಾಗಿ ಹುಲಿಗಳು ಆಹಾರ ಅರಸಿ ಕಾಡಿನಲ್ಲಿ ೨೦೦ ಚದರ ಕಿ.ಮೀ. ಸುತ್ತಾಡುವ ಪರಿಸ್ಥಿತಿ ಯಿರುತ್ತದೆ. ಆದರೆ ನಾಗರಹೊಳೆಯಲ್ಲಿ ಕೇವಲ ೧೨ ಚ.ಕಿ.ಮೀ.ಯನ್ನು ಹುಲಿಗಳು ತಮ್ಮ ಬೇಟೆಗೆ ಸೀಮಿತಗೊಳಿಸಿದ್ದವು. ಇದು ಸಂರಕ್ಷಿತ ಪ್ರಾಣಿ ಗಳಿಗೆ ಸಿಕ್ಕಿದ ಭಕ್ಷೀಸ್ ಎಂದು ಚಿಣ್ಣಪ್ಪ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಪ್ರಾಣಿ ಹತ್ಯೆ ವಿರೋಧಿಸುತ್ತಿದ್ದ ಚಿಣ್ಣಪ್ಪ ಸಸ್ಯಾಹಾರಿಯಾಗಿಯೇ ಜೀವಿಸಿದ್ದರು.

ಕಾಡಿನ ರಕ್ಷಣೆಗೆ ಏನು ಮಾಡಬೇಕು ಎಂದು ಚಿಣ್ಣಪ್ಪ ಅವರನ್ನು ಪ್ರಶ್ನಿಸಿದ್ದೆ. ಮೊದಲು ಮಾನವನ ಹಸ್ತಕ್ಷೇಪ ಬಿಟ್ಟುಬಿಡಿ, ಕಾಡನ್ನು ಕಾಡಾಗಿಯೇ ನೋಡಿ. ಕಾಡು ನೋಡಲು ಬನ್ನಿ. ಕಾಡನ್ನು ಕಾಡಲು ಬರಬೇಡಿ ಎಂದು ಬಹಳ ಸರಳವಾಗಿ ಚಿಣ್ಣಪ್ಪ ಹೇಳಿದ್ದರು. ಕಾಡಿನಲ್ಲಿ ಯಾರ ಹಸ್ತಕ್ಷೇಪ, ಅತಿ
ಕ್ರಮಣ ಇಲ್ಲದೇ ಹೋದರೆ ಅಷ್ಟೇ ಸಾಕು. ಭಾರತದ ಅರಣ್ಯಗಳು ವಿದೇಶಗಳ ದಟ್ಟ ಕಾಡನ್ನೂ ಮೀರಿಸುವಂತೆ ಕಂಗೊಳಿಸುತ್ತದೆ ಎಂಬುದು ಚಿಣ್ಣಪ್ಪ ಸಲಹೆಯಾಗಿತ್ತು.

ಚಿಣ್ಣಪ್ಪ ಅವರ ಜತೆ ಅವರ ಬೆನ್ನೆಲುಬಾಗಿ ನಿಂತ ಧೈರ್ಯಸ್ಥ ಹೆಣ್ಣು ಮಗಳೆಂದರೆ ಅವರ ಪತ್ನಿ ರಾಧಾ. ಖಂಡಿತವಾಗಿಯೂ ಬೇರೆ ಯಾರೇ ಆಗಿದ್ದರೂ ಚಿಣ್ಣಪ್ಪ ಅವರು ಎದುರಿಸಿದ್ದ ಕಷ್ಟಗಳನ್ನು ನೋಡಿ ದೂರವಾಗುತ್ತಿದ್ದರೇನೋ. ಆದರೆ ರಾಧಾ ಮಾತ್ರ ಸದಾ ಕಾಲ ಚಿಣ್ಣಪ್ಪ ಅವರ ಬೆಂಗಾವಲಾಗಿ
ನಿಂತರು. ೧೯೭೦ – ೮೦ ರ ಕಾಲಘಟ್ಟದಲ್ಲಿ ನಾಗರಹೊಳೆಯಲ್ಲಿ ಚಿಣ್ಣಪ್ಪ ಅವರು ಇಲ್ಲದೇ ಹೋಗಿದ್ದರೆ ಖಂಡಿತವಾಗಿಯೂ ನಾಗರಹೊಳೆ ಇಂದು ಸಂರಕ್ಷಿತ ಕಾಡಾಗಿ ಉಳಿಯುತ್ತಿರಲಿಲ್ಲ.

ಅತಿಕ್ರಮಣ, ವನ್ಯಜೀವಿಗಳ ಬೇಟೆಯಿಂದಾಗಿ ನಾಗರಹೊಳೆ ಇಷ್ಟು ಹೊತ್ತಿಗಾಗಲೇ ಬರಡು ಭೂಮಿಯಾಗುತ್ತಿತ್ತು. ನಾಗರಹೊಳೆಯ ನಿಜವಾದ ಸಂರಕ್ಷಕನಾಗಿ ಚಿಣ್ಣಪ್ಪ ಅಲ್ಲಿದ್ದರು. ಆನೆ ಮತ್ತು ಮಾನವನ ಸಂಘರ್ಷ ಖಂಡಿತವಾಗಿಯೂ ನಮ್ಮ ಜನರನ್ನು ಹೈರಾಣ ಮಾಡುತ್ತದೆ ಎಂದು ಚಿಣ್ಣಪ್ಪ
ಹೇಳಿದ್ದು ೧೯೯೦ರ ಸುಮಾರಿಗೆ. ಈ ಎಚ್ಚರಿಕೆ ಆಗ ಯಾರಿಗೂ ಅರ್ಥವಾಗಲಿಲ್ಲ. ಕಾಡನ್ನು ಕಡಿಯಬೇಡಿ. ಮತ್ತೆ ಕಾಡು ಸಷ್ಟಿಸಲು ನಮಗೆ ಯಾರಿಗೂ ಆಗುವುದಿಲ್ಲ. ದೇವರನ್ನು ಪೂಜಿಸುತ್ತೀರಿ. ದೇವರ ಸೃಷ್ಟಿಯಾದ ಕಾಡನ್ನು ಕಡಿದು ಹಿಂಸೆ ಮಾಡಬೇಡಿ, ನಾಶವಾಗುತ್ತೀರಿ ಎಂದು ಚಿಣ್ಣಪ್ಪ ಖಡಕ್ ಆಗಿ ಹೇಳಿದಾಗ ನಕ್ಕವರೇ ಹೆಚ್ಚು. ಕೊಡಗಿನಲ್ಲಿ ಪ್ರತೀ ಗ್ರಾಮಕ್ಕೊಂದು ಕಾಡಿದೆ.

ಅಭಿವೃದ್ಧಿಯ ಹೆಸರಿನಲ್ಲಿ, ಪ್ರವಾಸೋದ್ಯಮದ ನೆಪದಲ್ಲಿ ಕಾಡು ನಾಶ ಮಾಡಿ ಮನೆ, ರೆಸಾರ್ಟ್ ಕಟ್ಟಬೇಡಿ, ಇದು ಕೊಡಗಿಗೆ ಮಾತ್ರವಲ್ಲ, ಜನರಿಗೂ ಮುಳುವಾಗುತ್ತದೆ ಹುಷಾರ್ ಎಂಬ ಚಿಣ್ಣಪ್ಪ ಅವರ ಎಚ್ಚರಿಕೆಯ ಸಂದೇಶ ಕೂಡ ಯಾರಿಗೂ ಅರಿವಾಗಲೇ ಇಲ್ಲ. ಎಲ್ಲರೂ ಚಿಣ್ಣಪ್ಪ ದೈಹಿಕವಾಗಿ
ನೀಳಕಾಯವಾಗಿದ್ದರು. ಎತ್ತರವಾಗಿದ್ದರು ಎಂದು ತಲೆ ಮೇಲೆತ್ತಿ ನೋಡಿದರೆ ವಿನಾ ಪರಿಸರದ ಬಗ್ಗೆ ಅವರಿಗಿದ್ದ ಎತ್ತರದ ಜ್ಞಾನವನ್ನು ಯಾರೂ ಅರಿತು ಕೊಳ್ಳಲು ಹೋಗಲೇ ಇಲ್ಲ.

ಈಗ ಚಿಣ್ಣಪ್ಪ ನಮ್ಮನ್ನು ಅಗಲಿದ್ದಾರೆ. ನಾಗರಹೊಳೆ ಕಾಡಿನಲ್ಲಿ ಮೌನ ಆವರಿಸಿದೆ. ಪ್ರಾಣಿಗಳು ಮೂಕವಾಗಿ ರೋಧಿಸುತ್ತಿರಬಹುದು. ನಾಗರಹೊಳೆಗೆ ಒಬ್ಬರೇ ಚಿಣ್ಣಪ್ಪ, ಅಂಥ ಕಾಡಿನ eನಿ ಮತ್ತೊಬ್ಬರು ಬರುವುದು ಕಷ್ಟ ಕಷ್ಟ. ಮನುಷ್ಟನಿಲ್ಲದೇ ಕಾಡು ಉಳಿದುಕೊಳ್ಳುತ್ತದೆ. ಆದರೆ ಕಾಡಿಲ್ಲದೇ ಮನುಷ್ಯನ ಉಳಿವಿಲ್ಲ ಎಂಬ ಚಿಣ್ಣಪ್ಪ ಅವರ ಅತ್ಯಮೂಲ್ಯ ಸಂದೇಶ ಮಾತ್ರ ಸದಾ ಜೀವಂತವಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!