Sunday, 8th September 2024

ಪಠ್ಯದಲ್ಲಿ ಒಂಟಿಯಾದ ನಾಗೇಶ್, ರೋಹಿತ್

ಅಶ್ವತ್ಥಕಟ್ಟೆ

ರಾಜ್ಯದಲ್ಲಿ ಇತ್ತೀಚಿಗೆ ವಿವಾದವಿಲ್ಲದ ದಿನವೇ ಇಲ್ಲ ಎನ್ನುವ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ದಿನ ಒಂದಿಲ್ಲೊಂದು ವಿವಾದ ಹುಟ್ಟಿ ಕೊಳ್ಳುತ್ತದೆ ಅಥವಾ ಸೃಷ್ಟಿಯಾಗುತ್ತದೆ. ಈ ಎಲ್ಲ ವಿವಾದಗಳ ಹಿಂದೆ ಇರುವ ಸಾಮಾನ್ಯ ಸಂಗತಿ ಎಂದರೆ, ‘ಧರ್ಮ ಹಾಗೂ ಪಂಥ’.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ವಿವಾದಗಳು ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಯಾವುದಕ್ಕೂ ತಾತ್ವಿಕ ಅಂತ್ಯ ಎನ್ನುವುದಿಲ್ಲ. ಬದಲಿಗೆ ಒಂದು ವಿವಾದ ತಣ್ಣಗಾಗುವ ಮೊದಲೇ, ಮತ್ತೊಂದು ವಿವಾದ ಭೂತಾಕಾರ ದಲ್ಲಿರುತ್ತದೆ. ದೆಲ್ಲ ಬಲಪಂಥೀಯರು ತಮ್ಮ ವಾದವನ್ನು ಸಮರ್ಥ ವಾಗಿಯೇ ಮಂಡಿ ಸುತ್ತ ಬಂದರು. ಬಿಜೆಪಿಯೂ ಸಮರ್ಥ ವಾಗಿಯೇ ಪ್ರತಿಕ್ರಿಯೆ ನೀಡುತ್ತ ಬಂದಿತ್ತು. ಈ ಎಲ್ಲ ಮುಗಿಯುವ ವೇಳೆ ಶುರುವಾದ, ಪಠ್ಯ ಪರಿಷ್ಕರಣ ವಿವಾದ ದಲ್ಲಿ ಮಾತ್ರ, ಬಲಪಂಥೀಯರು ‘ತಮಗೂ ಇದಕ್ಕೂ ಸಂಬಂಧವೇ ಇಲ್ಲ’ ಎನ್ನುವಂತೆ ವರ್ತಿಸು ತ್ತಿದ್ದಾರೆ.

ಪಠ್ಯಪುಸ್ತಕದಲ್ಲಿ ಈ ರೀತಿ ಪಂಥಾಧಾರದಲ್ಲಿ ಪಠ್ಯವನ್ನು ನಿಗದಿ ಮಾಡಬಾರದು ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಆದರೆ ಬಲಪಂಥೀಯರೊಬ್ಬರು ಪಠ್ಯ ಪರಿಷ್ಕರಣಾ ಸಮಿತಿಯಲ್ಲಿದ್ದಾರೆ ಎಂದ ಮಾತ್ರಕ್ಕೆ, ಎಲ್ಲವೂ ತಪ್ಪು ಎನ್ನಲು ಸಾಧ್ಯವಿಲ್ಲವಲ್ಲ. ಪಠ್ಯ ಪರಿಷ್ಕರಣಾ ವಿಷಯದಲ್ಲಿ ಎದ್ದಿರುವ ವಿವಾದದ ಕೇಂದ್ರ ಬಿಂದುವಾಗಿರುವ ರೋಹಿತ್ ಚಕ್ರತೀರ್ಥ ಅವರ ಸಮಿತಿಯ ಮೇಲಿರುವ ಪ್ರಮುಖ ಆರೋಪಗಳು ಎಂದರೆ, ರಾಷ್ಟ್ರಕವಿ ಕುವೆಂಪು ಅವರನ್ನು ಅಪಮಾನಿಸಲಾಗಿದೆ, ಹೆಡಗೇವಾರ್ ಅವರ ಪಠ್ಯವನ್ನು ಸೇರಿಸಲಾಗಿದೆ.

ಬಸವಣ್ಣನವರ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ, ಟಿಪ್ಪು ಪಠ್ಯಕ್ಕೆ ಕತ್ತರಿ ಪ್ರಯೋಗ ಹಾಗೂ ಭಗತ್ ಸಿಂಗ್ ಅವರ ಪಠ್ಯವನ್ನು ತಗೆದು ಹಾಕಲಾಗಿದೆ ಎನ್ನುವುದು. ಇದಕ್ಕೆ ಹೊಸದಾಗಿ ಇದೀಗ, ‘ಸಂವಿಧಾನ’ ಪಾಠದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ‘ಸಂವಿ ಧಾನ ಶಿಲ್ಪಿ’ ಎಂದು ಕರೆದಿಲ್ಲ ಎನ್ನುವುದಾಗಿದೆ. ಆದರೆ, ಈಗಾಗಲೇ ಸರಕಾರವೇ ಸ್ಪಷ್ಟಪಡಿಸಿರುವಂತೆ, ಕುವೆಂಪು, ಬಸವಣ್ಣ, ಭಗತ್ ಸಿಂಗ್ ಅವರ ಪಠ್ಯದಲ್ಲಾಗಿರುವ ಬದಲಾವಣೆಯನ್ನು ಮಾಡಿರುವುದು ಬರಗೂರು ರಾಮಚಂದ್ರಪ್ಪ ನೇತೃತ್ವದ ಹಿಂದಿನ ಪರಿಷ್ಕರಣಾ ಸಮಿತಿ.

ಇನ್ನು ಟಿಪ್ಪು ಸುಲ್ತಾನ್ ಪಠ್ಯಕ್ಕೆ ಕತ್ತರಿ ಪ್ರಯೋಗವಾಗಿದೆ ಎನ್ನವ ವಾದವಿದ್ದರೂ, ವೈಭವೀಕರಣಕ್ಕೆ ಕತ್ತರಿ ಹಾಕಿದ್ದೇವೆ ಎನ್ನುವ ಮಾತನ್ನು ಸರಕಾರ ಹೇಳುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಹೆಡಗೇವಾರ್ ಅವರ ಪಠ್ಯ ಸೇರಿಸಿರುವುದಕ್ಕೆ ಆಕ್ಷೇಪವಿದೆ. ಆದರಲ್ಲಿಯೇನು ಮಹಾನ್ ತಪ್ಪು ಇಲ್ಲ ಎನ್ನುವುದನ್ನು ಒಪ್ಪಲೇಬೇಕು. ಇನ್ನು ಅಂಬೇಡ್ಕರ್ ಪಠ್ಯಕ್ಕೆ ಸಂಬಂಧಿಸಿದ್ದು, ತಪ್ಪಾಗಿದ್ದರೆ ಅದನ್ನು ಸರಿಪಡಿಸ ಬೇಕಿದೆ.

ಆದರೆ ಇಲ್ಲಿ ನೋಡಬೇಕಿರುವುದು, ಈ ಹಿಂದಿನ ಬರಗೂರು ರಾಮಚ್ರಂದಪ್ಪ ಸಮಿತಿಯಲ್ಲಾಗಿರುವ ಲೋಪವನ್ನು, ಚಕ್ರತೀರ್ಥ ಸಮಿತಿ ಮಾಡಿದೆ ಎಂದು ಹೇಳಿಕೊಂಡೇ, ದೊಡ್ಡ ವಿವಾದವನ್ನು ಎಡಪಂಥೀಯರು ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಎಬ್ಬಿಸುತ್ತಿದೆ. ಆದರೆ ಅದು ನಮ್ಮ ಕಾಲದಲ್ಲಿ ಆಗಿರುವ ತಪ್ಪಲ್ಲ ಎಂದು ವಾದಿಸುವುದಕ್ಕೆ ಮಾತ್ರ ಬಲ ಪಂಥೀಯರಾಗಲಿ, ಬಿಜೆಪಿಯಾಗಲಿ ಮುಂದಾಗುತ್ತಿಲ್ಲ. ಒಂದರ್ಥದಲ್ಲಿ ಇಡೀ ವಿವಾದದಲ್ಲಿ ಸಚಿವ ನಾಗೇಶ್ ಹಾಗೂ ಚಕ್ರತೀರ್ಥ ಅವರನ್ನು ಮುಂದೆ ಬಿಟ್ಟು, ಇನ್ನುಳಿದವರೆಲ್ಲ ಹಿಂದೆ ಸರಿದಿರುವುದು ಸ್ಪಷ್ಟವಾ ಗುತ್ತಿದೆ.

ಧರ್ಮದ ವಿಚಾರದಲ್ಲಿ ವಿವಾದಗಳು ಬಂದಾಗ, ವೀರಾವೇಶದ ಮಾತುಗಳನ್ನು ಆಡುತ್ತಿದ್ದ ಬಿಜೆಪಿ ನಾಯಕರಾಗಲಿ, ಸಚಿವರಾಗಲಿ ಈ ವಿಷಯದಲ್ಲಿ ಮಾತ್ರ ದಿವ್ಯ ಮೌನಕ್ಕೆ  ರಣಾಗಿದ್ದರು. ಆರಂಭದ ಕೆಲ ದಿನಗಳು, ಬಿಜೆಪಿಯ ಬಹುತೇಕ ನಾಯಕರು, ಪಠ್ಯ ಪರಿಷ್ಕರಣೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸಿದ್ದರು. ಆ ಹಂತ ದಲ್ಲಿ ರೋಹಿತ್ ಚಕ್ರತೀರ್ಥ ಸಮಿತಿ ಸಿದ್ಧಪಡಿಸಿರುವ
ಪಠ್ಯವನ್ನು ಸಮರ್ಥಿಸಿಕೊಳ್ಳುವುದಕ್ಕೆ ನಾಗೇಶ್ ಹೊರತಾಗಿ ಯಾರೊಬ್ಬರೂ ಮುಂದೆ ಬರಲಿಲ್ಲ.

ಈ ವಿವಾದ ರಾಷ್ಟ್ರಮಟ್ಟದಲ್ಲಿ ಸದ್ದಾಗುತ್ತಿದ್ದಂತೆ, ಬಿಜೆಪಿ ವರಿಷ್ಠರ ಎಚ್ಚರಿಕೆಯ ಬಳಿಕ ಒಬ್ಬೊಬ್ಬರೇ, ಪಠ್ಯವನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಕಾಂಗ್ರೆಸ್ ನಾಯಕರು ಬೀದಿಗಿಳಿದರೂ, ಬಿಜೆಪಿಯ ಬಹುತೇಕರು ಟ್ವೀಟ್‌ಗೆ ಸೀಮಿತವಾಗಿದ್ದರು. ಪಠ್ಯಪುಸ್ತಕ ವಿಚಾರ ವಾಗಿ, ಎಡಪಂಥೀಯರು ‘ಟೂಲ್ ಕಿಟ್’ ಬಳಸುತ್ತಿದ್ದಾರೆ ಎಂದು ಬೊಬ್ಬೆ ಹಾಕಿದ್ದಷ್ಟೇ ಹಲವು ನಾಯಕರ ಸಾಧನೆಯಾಗಿತ್ತು. ಮತ್ತೊಂದು
ವಿಚಾರವೆಂದರೆ, ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗೇವಾರ್ ಅವರ ಪಠ್ಯವನ್ನು ಸೇರಿಸಿದ್ದಕ್ಕೆ ಭಾರಿ ಪ್ರಮಾಣದ ವಿವಾದವಾಗುತ್ತಿದ್ದರೂ, ಆರ್‌ಎಸ್‌ಎಸ್‌ನ ಯಾರೊಬ್ಬರೂ ಆ ಬಗ್ಗೆ ಮಾತನಾಡಲೇ ಇಲ್ಲ. ಇನ್ನು ಬಲಪಂಥೀಯ ಚಿಂತಕರಲ್ಲಿ ಬಹುತೇಕರು, ‘ನಾವ್ಯಾಕೇ ಈ ವಿವಾದಕ್ಕೆ ಕೋಲಾಗಬೇಕು’ ಎನ್ನುವ ಮನಸ್ಥಿತಿಯಲ್ಲಿದ್ದರು.

ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಬಹಿರಂಗವಾಗಿ ಮಾತನಾಡಿದ್ದು ಹೊರತು ಪಡಿಸಿದರೆ ಇನ್ನುಳಿದ ಎಲ್ಲ ಸಾಹಿತಿಗಳೂ ಮೌನಕ್ಕೆ ಶರಣಾಗಿದ್ದರು. ಪರಿಷ್ಕರಣಾ ಸಮಿತಿಯನ್ನು ಬೆಂಬಲಿಸುವುದು ಹೋಗಲಿ, ಈ ಹಿಂದಿನ ಸಮಿತಿ ಮಾಡಿರುವ ತಪ್ಪು ಗಳೇನು ಎನ್ನುವ ಬಗ್ಗೆಯೂ ಮಾತನಾಡಲಿಲ್ಲ. ನಿತ್ಯ ಎಡಪಂಥೀಯರಿಂದ ಬರುತ್ತಿದ್ದ ಹಲವು ವಾಕ್ಸಮರದ ಬಾಣಗಳನ್ನು, ನಾಗೇಶ್ ಅಥವಾ ರೋಹಿತ್ ಚಕ್ರತೀರ್ಥ ಅವರೇ ಎದುರಿಸಬೇಕಾಯಿತು. ಬಿಜೆಪಿ ವರಿಷ್ಠರ ಎಚ್ಚರಿಕೆಯ ಬಳಿಕ ಮುಖ್ಯಮಂತ್ರಿಗಳು ಅಖಾಡಕ್ಕೆ ಇಳಿದರು ಎನ್ನುವುದು ಬೇರೆ ಮಾತು.

ಆದರೆ ಇದಕ್ಕೆ ತತ್ವಿರುದ್ಧದ ರೀತಿಯಲ್ಲಿ ಎಡಪಂಥೀಯರು ಹಾಗೂ ಕಾಂಗ್ರೆಸಿಗರು ಸರಕಾರದ ಮತ್ತು ಪಠ್ಯ ಪರಿಷ್ಕರಣಾ ಸಮಿತಿಯ ವಿರುದ್ಧ ವಾಗ್ದಾಳಿ ನಡೆಸುತ್ತ ಸಾಗಿದರು. ಸಾಲು ಸಾಲು ಸಾಹಿತಿಗಳು ಸರಕಾರದ ನಡೆಯನ್ನು ಖಂಡಿಸಿ, ಪತ್ರ ಚಳವಳಿಯನ್ನು ಆರಂಭಿಸಿ ದರು. ಒಂದು ಹಂತದಲ್ಲಿ ಬರಗೂರು ಸಮಿತಿಯೇ ಪರಿಷ್ಕರಿಸಿದ್ದ ಪಠ್ಯದ ಲೋಪಗಳೆಲ್ಲವೂ, ರೋಹಿತ್ ಸಮಿತಿ ಮೇಲೆ ಹಾಕುವ ಪ್ರಯತ್ನದಲ್ಲಿಯೂ ಯಶಸ್ವಿಯಾದರು. ಈ ಎಲ್ಲ ಪ್ರಹಸನಗಳ ಬಳಿಕ, ಅಂತಿಮವಾಗಿ ಸರಕಾರ, ಪಠ್ಯ ಪರಿಷ್ಕರಣಾ ಸಮಿತಿಯನ್ನು ಬರ್ಖಾಸ್ತುಗೊಳಿಸುವುದಾಗಿ ಘೋಷಿಸಿತ್ತು. ಈ ವೇಳೆಗೆ ಆ ಸಮಿತಿಯಿಂದ ಆಗಬೇಕಾಗಿರುವ ಕೆಲಸವೆಲ್ಲ ಮುಗಿದಿದ್ದರೂ, ಈ ಹಂತದಲ್ಲಿ ಸಮಿತಿಯನ್ನು ಬರ್ಖಾಸ್ತು ಮಾಡಿದ್ದು, ಪ್ರತಿಭಟಿಸಿದವರ ಗೆಲವು ಎಂದೇ ವಿಶ್ಲೇಷಿಸಲಾಗುತ್ತಿದೆ.

ರಾಜ್ಯದಲ್ಲಿ ಕಳೆದ ಆರೇಳು ತಿಂಗಳಲ್ಲಿ ಧರ್ಮದ ವಿಷಯದಲ್ಲಿ ನಡೆದ ಘಟನೆಗಳಿಗೆ ಬಿಜೆಪಿ ನಾಯಕರು ಕಾಂಗ್ರೆಸಿಗೆ ಬಹಿರಂಗ ಟಾಂಗ್ ಕೊಡುತ್ತಿದ್ದರು. ಆದರೆ ಪಠ್ಯ ಪರಿಷ್ಕರಣಾ ವಿಷಯದಲ್ಲಿನ ಬಿಜೆಪಿಯ ಮೌನ, ಕಾರ್ಯಕರ್ತರ ಆತಂಕ ಹಾಗೂ ಅನುಮಾನಕ್ಕೆ ಕಾರಣ ವಾಗಿದೆ. ಪಠ್ಯದ ವಿಷಯದಲ್ಲಿ ಬಿಜೆಪಿ ನಾಯಕರು ಈ ರೀತಿ ಮೌನವಾಗಿದ್ದಾರೆ. ಇದೇ ರೀತಿ ಮುಂದಿನ ದಿನದಲ್ಲಿ ಯಾವುದಾದರೂ ಸಮಸ್ಯೆಗಳು ಎದುರಾದಾಗಲೂ, ಕಾರ್ಯಕರ್ತರನ್ನು ಮುಂದಕ್ಕೆ ಹಿಂದೆ ನಿಂತರೆ ಎನ್ನುವ ಆತಂಕವನ್ನು ಅನೇಕರು ಹೊರಹಾಕಿದ್ದಾರೆ.

ಎದ್ದಿರುವ ವಿವಾದದಲ್ಲಿ ರೋಹಿತ್ ತಪ್ಪಿಲ್ಲದಿದ್ದರೂ, ಎಡಪಂಥೀಯರು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದರೂ ಬಿಜೆಪಿಗರು ಅವರನ್ನು ಬೆಂಬಲಿಸಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಚಿವ ನಾಗೇಶ್ ಅವರ ವರದಿಯನ್ನು ಆಧರಿಸಿ ರೋಹಿತ್ ಚಕ್ರತೀರ್ಥ ಅವರ ಸಮಿತಿಯನ್ನು ಬರ್ಖಾಸ್ತು ಮಾಡಲಾಗಿದೆ ಎನ್ನುವಂತೆ ಹೇಳಲಾಗಿದೆ. ಹೇಗಿದ್ದರೂ, ವರದಿ ಕೊಟ್ಟ ಬಳಿಕ ಬರ್ಖಾಸ್ತು ಆಗಬೇಕಿದ್ದ ಸಮಿತಿಯನ್ನು, ವಿವಾದದ ಕಿಡಿ ಬಿಸಿಯಾಗಿರುವಾಗಲೇ ವಜಾಗೊಳಿಸುವ ಅವಶ್ಯಕತೆ ಏನಿತ್ತು ಎನ್ನುವ
ಪ್ರಶ್ನೆಗಳು ಇದೀಗ ಶುರುವಾಗಿದೆ.

ಪಠ್ಯಪುಸ್ತಕದಲ್ಲಿ ರಾಜಕೀಯ, ಪಂಥ ಸೇರಿಸುವುದು ತಪ್ಪು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಮತ್ತೊಂದು ತಂಡದಿಂದ ಅನವಶ್ಯಕವಾಗಿ ಇರುವ, ಇಲ್ಲದ ವಿಷಯವನ್ನು ಎತ್ತಿಕೊಂಡು ವಿವಾದ ಸೃಷ್ಟಿಸುವಾಗಲಾದರೂ ನಾಗೇಶ್ ಹಾಗೂ ರೋಹಿತ್ ಪರವಾಗಿ ಬಲಪಂಥೀಯರು, ಬಿಜೆಪಿ ನಾಯಕರು ಹಾಗೂ ಸರಕಾರ ನಿಲ್ಲಬೇಕಿತ್ತು. ಅದನ್ನು ಬಿಟ್ಟು, ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತಹ ‘ಜಾಣ ಕುರುಡು’ ಪ್ರದರ್ಶನ ಮಾಡಿ ಬಳಿಕ, ಸರಕಾರ ಇಡೀ ಪ್ರಕರಣವನ್ನು ತಣ್ಣಗಾಗಿಸಲು ‘ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜನೆ’ ಮಾಡಲಾಗಿದೆ ಎಂದು ಆದೇಶ ಹೊರಡಿಸುವ ಮೂಲಕ ಹಲವು ಕಾರ್ಯಕರ್ತರ ಅಚ್ಚರಿಗೆ ಕಾರಣವಾಗಿರುವು ದಂತೂ ಸತ್ಯ.

ಮುಂದಿನ ದಿನದಲ್ಲಿ ಈ ರೀತಿಯ ಸೈದ್ಧಾಂತಿಕ ಬಿಕ್ಕಟ್ಟಿಗೆ ಹೋರಾಡಲು ಮುಂದಾಗಿ, ಅರ್ಧಕ್ಕೆ ಕೈಬಿಟ್ಟರೇ ನಾವೇನು ಮಾಡಬೇಕು ಎನ್ನುವ ಪ್ರಶ್ನೆ ಕಾಡುತ್ತಿರುವುದರಲ್ಲಿ ಅನುಮಾನವೇ ಇಲ್ಲ.

error: Content is protected !!