Sunday, 8th September 2024

ಕೊರೆಯುವ ಚಾಳಿಯ ಬಗ್ಗೆ ಒಂದಿಷ್ಟು ಕೊರೆತಗಳು

ಶಿಶಿರಕಾಲ

shishirh@gmail.com

ಅವರು ಜವಳಿ ಕಾಮತರು ಎಂದೇ ಫೇಮಸ್ಸು. ಅವರ ಜವಳಿ ಅಂಗಡಿಯಲ್ಲಿ ಸಿಗುತ್ತಿದ್ದ ಸೀರೆ, ಬಟ್ಟೆಗಳೆಂದರೆ ಅತ್ಯುತ್ತಮ ಎಂದು ಇಡೀ ತಾಲೂಕಿನಲ್ಲಿ ಜನಜನಿತವಾಗಿತ್ತು. ಚಂದದ, ಹೊಸ ಸ್ಟೈಲಿನ, ದೀರ್ಘ ಬಾಳಿಕೆ ಬರುವ ಬಟ್ಟೆ ಬೇಕೆಂದರೆ ಅವರ ಅಂಗಡಿಗೇ ಹೋಗಬೇಕು. ಅದು ತಾಲೂಕಾಮಟ್ಟದ ‘ಜನರಲ್ ನಂಬಿಕೆ’. ತವರಿಗೆ ಬರುವ ಹೆಣ್ಣುಮಕ್ಕಳಿಗಂತೂ ಅವರ ಅಂಗಡಿ ನೊಸ್ಟಾಲ್ಜಿಯಾ. ನಮ್ಮೂರಿನ ಕಿರಾಣಿ, ಹಾರ್ಡವೆರ್, ಬಟ್ಟೆ ಮೊದಲಾದ ಅಂಗಡಿಕಾರರು ದೂರದ ಹುಬ್ಬಳ್ಳಿಗೆ ಹೋಗಿ ಹೋಲ್ಸೇಲ್ ಬೆಲೆಯಲ್ಲಿ ಸಾಮಾನುಗಳನ್ನು ತಂದು ಇಲ್ಲಿ ಮಾರಾಟ ಮಾಡುವುದು.

ಅವರೆಲ್ಲರೂ ಹುಬ್ಬಳ್ಳಿಗೆ ಎರಡು ವಾರಕ್ಕೊಮ್ಮೆ, ಬುಧವಾರ ಹೋಗುತ್ತಿದ್ದರು. ಆದರೆ ನಮ್ಮ ಜವಳಿ ಕಾಮತರು ಆ ದಿನ ಹೋಗುತ್ತಿರಲಿಲ್ಲ. ಅವರು
ಎಲ್ಲಿಂದ ತಮ್ಮ ಅಂಗಡಿಗೆ ಬಟ್ಟೆ ತರುತ್ತಿದ್ದರು ಎಂಬುದೇ ಊರಿನ ಟಾಪ್ ಸೀಕ್ರೆಟ್, ಬಹುಚರ್ಚಿತ ವಿಷಯವಾಗಿತ್ತು. ಅಷ್ಟೊಳ್ಳೆ ಗುಣಮಟ್ಟದ ಬಟ್ಟೆ ಸಿಗುತ್ತಿದ್ದರೂ ಕಾಮತರ ಅಂಗಡಿಗೆ ಹೋಗಲು ಜನರು ಹೆದರುತ್ತಿದ್ದರು. ಹೆದರಿಕೆಗೊಂದು ಸಕಾರಣವಿತ್ತು. ಬಟ್ಟೆ ಖರೀದಿಗೆ ಹೋದರೆ ಖುದ್ದು
ಕಾಮತರೇ ಪ್ರತಿಯೊಂದು ಬಟ್ಟೆಯನ್ನು ತೋರಿಸುತ್ತಿದ್ದರು.

ತೋರಿಸುವುದೆಂದರೆ ಹೇಗೆ? ಒಂದು ಸೀರೆ ಹಿಡಿದು ಅದರ ಪಲ್ಲು, ಬಾರ್ಡರ್, ಫಲಕು, ಈ ಡಿಸೈನು, ಈ ಮಟೀರಿಯಲ್ಲು ಹೀಗೆ ಸಾವಿರದೆಂಟು ವಿವರ. ಒಂದೊಂದು ಸೀರೆಗೆ ಕನಿಷ್ಠ ಹತ್ತು ನಿಮಿಷದ ವಿವರಣೆ. ಖರೀದಿಸಲು ಬಂದವರಿಗೆ ಸೀರೆ ಮೊದಲ ನೋಟದಲ್ಲಿ ಇಷ್ಟವಾಗಲಿ, ಬಿಡಲಿ, ಆದಷ್ಟು ವಿವರ ಹೇಳಿಯೇ ಕಾಮತರು ಮುಂದಿನ ಸೀರೆಯನ್ನು ತೋರಿಸುತ್ತಿದ್ದುದು. ಜತೆಯಲ್ಲಿ ಬಂದ ಗಂಡಸರ ಕಥೆ ಬಿಡಿ, ಖುದ್ದು ಖರೀದಿಗೆ ಹೋದ ಹೆಂಗಸರಿಗೇ
ಸುಸ್ತಾಗಿಹೋಗುತ್ತಿತ್ತು.

ಕಾಮತರ ಅಂಗಡಿಯಲ್ಲಿ ಗಂಡಸರ ಬಟ್ಟೆ ಅಷ್ಟಾಗಿ ಇಡುತ್ತಿರಲಿಲ್ಲ. ಆದರೆ ಅವರಲ್ಲಿ ಒಳ್ಳೆಯ ಅಂಡರ್‌ವೇರ್ ಸಿಗುತ್ತಿತ್ತು. ಅಂಗಡಿಗೆ ಖರೀದಿಗೆ ಬರುವ ಗಂಡಸರು ಗದಲ್ಲಿ ಕೂತ ಕಾಮತರನ್ನು ನಾಚಿಕೆಯಲ್ಲಿ ಮೆಲ್ಲಗೆ ಅಂಡರ್‌ವೇರ್ ಬೇಕೆಂದು ಕೇಳಿದರೆ, ಕಾಮತರು ಗಟ್ಟಿಯಾಗಿ ಒಳಗಿರುವ ಸೇಲ್ಸ್ ಗರ್ಲ್‌ಗೆ ಇವಳೇ, ‘ಯಜಮಾನರಿಗೆ ಅಂಡರ್‌ವೇರ್ ತೋರ್ಸು’ ಎಂದು ಗಟ್ಟಿಯಾಗಿ ಕೂಗುತ್ತಿದ್ದರು. ಇದನ್ನು ಕೇಳಿ ಹೆಂಗಸರು ಮುಸಿ ಮುಸಿ ನಗುತ್ತಿದ್ದರು. ಕೊನೆ ಕೊನೆಗೆ ಅವರ ಈ ವಿವರಿಸುವ ಚಾಳಿ ಎಷ್ಟಾಯಿತೆಂದರೆ ನೆರೆದ ಸಮಸ್ತ ಹೆಂಗಸರ ನಡುವೆ ಅಂಡರ್‌ವೇರ್ ಖರೀದಿಗೆ ಧೈರ್ಯ ಮಾಡಿದ ಗಂಡಸಿಗೆ ಅಂಡರ್‌ವೇರ್‌ನ ಬಗ್ಗೆಯೂ ನಿಲ್ಲಿಸಿ ಹತ್ತು ನಿಮಿಷ ವಿವರಣೆ ಕೊಡುತ್ತಿದ್ದರು. ಈ ಎಲ್ಲ ಕಾರಣಗಳಿಂದ ಗಂಡಸರು ಅವರ ಅಂಗಡಿಗೆ ಹೋಗುವುದೆಂದರೆ
ಅಧೀರರಾಗುತ್ತಿದ್ದರು.

ಅವರ ಅತಿಯಾದ ವಿವರಣೆಯನ್ನು ಯಾರೋ ಒಂದಿಬ್ಬರು ಸುಮ್ಮನೆ ಹೊಗಳಿರಬೇಕು. ಕೊನೆಕೊನೆಯಲ್ಲಿ ಅವರ ವಿವರಣೆಯೇ ಮುಗಿಯುತ್ತಿರಲಿಲ್ಲ. ಅವರ ಅಂಗಡಿಗೆ ಹೋದರೆ ಗ್ರಾಹಕ ಗೊಂದಲಕ್ಕೊಳಗಾಗುತ್ತಿದ್ದ. ಏನನ್ನು ಖರೀದಿಸಬೇಕು, ಯಾವ ಬಟ್ಟೆ ತನಗೆ ಇಷ್ಟ ಎಂಬುದನ್ನೇ ಮರೆತು ಅವರ ವಿವರಗಳ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ. ಈ ಗೊಂದಲದ ಮಧ್ಯೆ ನಿಮಗೆ ಈ ಬಟ್ಟೆಯೇ ಸರಿ ಎಂದು ಕಾಮತರೇ ತೀರ್ಮಾನ ಮಾಡಿಬಿಡುತ್ತಿದ್ದರು.
ಅದು ಬಿಟ್ಟು ಬೇರೆ ಬಟ್ಟೆ ಖರೀದಿಸಬೇಕೆಂದರೆ ಅವರಿಗೊಂದು ಸಕಾರಣ ಕೊಡಬೇಕು. ಇಲ್ಲದಿದ್ದರೆ ಮತ್ತಷ್ಟು ವಿವರಣೆ.

ಇದರಿಂದಾಗಿ ಅವರಲ್ಲಿ ಅತ್ಯುತ್ತಮ ಬಟ್ಟೆಗಳಿದ್ದರೂ, ಅವು ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದರೂ ಅವರಲ್ಲಿ ವ್ಯಾಪಾರ ಕಡಿಮೆಯಾಗುತ್ತ ಬಂತು. ಅನಿವಾರ್ಯದಲ್ಲಿ ಮಾತ್ರ ಅವರ ಅಂಗಡಿಗೆ ಜನರು ಹೋಗುವಂತಾಯಿತು. ತಾಲೂಕಿನ ಗಂಡು ಪ್ರಬೇಧಗಳಂತೂ ಕಾಮತರ ಅಂಗಡಿಗೆ ಬರುವುದನ್ನು
ಸಂಪೂರ್ಣ ನಿಲ್ಲಿಸಿಬಿಟ್ಟರು. ಅವರ ಅಂಗಡಿಯಲ್ಲಿ ಅವರ ಅತಿಯಾದ ಮಾತೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಇದರಿಂದಾಗಿ ಅವರು ದೊಡ್ಡ ಗ್ರಾಹಕವರ್ಗವನ್ನು ಅನವಶ್ಯಕ ಕಳೆದುಕೊಂಡಿದ್ದರು. ಅದರ ಸುಳಿವು ಕೂಡ ಅವರಿಗಿದ್ದಂತಿರಲಿಲ್ಲ.

ಕೆಲವರಿಗೆ ಇದೊಂದು ದುರಭ್ಯಾಸವಾಗಿಬಿಟ್ಟಿರುತ್ತದೆ. ಏನನ್ನೇ ಕೇಳಿ, ಅವರಲ್ಲಿ ಒಂದು ಮಾPನ ಉತ್ತರವೇ ಇರುವುದಿಲ್ಲ. ವಿಷಯದ ಪೂರ್ವಾಪರ ನಿಮಗೆ ಗೊತ್ತಿರಲಿ ಬಿಡಲಿ, ಅವರು ಹೇಳುವುದನ್ನು ಹೇಳುವುದೇ. ಹಿಂದೆ ಹೇಳಿದ ವಿಷಯ ಮುಂದೇನಾಯಿತು ಎಂದು ಕೇಳಿದರೆ ಮತ್ತೆ ಅ,ಆ, ಇ, ಈ, ಏಕ್ ಡಾ ತೀನ್ ಇಂದಲೇ ಶುರುವಾಗುವುದು. ಹನುಮಂತ ಲಂಕೆಯನ್ನು ಹೇಗೆ ಸುಟ್ಟ ಎಂದು ಕೇಳಿದರೆ ಕೈಕೇಯಿ ಪಾಯಸ ತಿಂದಾಗಿನಿಂದ ಇವರ ಕಥೆ ಆರಂಭವಾಗುತ್ತದೆ. ಹೌದು ಅಥವಾ ಅಲ್ಲ ಎಂಬ ಒಂದೇ ಶಬ್ದದ ಪ್ರಶ್ನೆಗೆ ಅವರದು ಅರ್ಧಗಂಟೆಯ ಉತ್ತರವಿರುತ್ತದೆ. ಏನನ್ನೇ ಕೇಳಿದರೂ ಅತಿ ಎನಿಸುವ ವಿವರಣೆ. ಇವರಿಗೆ ಕ್ರಮೇಣ ಅದುವೇ ಅಭ್ಯಾಸವಾಗಿ ಬಿಟ್ಟಿರುತ್ತದೆ.

ಇಂಥವರ ಜತೆ ಪಬ್ಲಿಕ್ ಸೆಟ್ಟಿಂಗ್, ಸ್ನೇಹ ಬಳಗದಲ್ಲಿ, ಕಾರ್ಯಕ್ರಮಗಳಲ್ಲಿ ಸಿಕ್ಕಿಹಾಕಿಕೊಂಡರೆ ಅಲ್ಲಿಂದ ‘ಎಸ್ಕೇಪ್’ ಆಗುವುದು ಹೇಗೆ ಎಂದೇ ಜನರು ಯೋಚಿಸುತ್ತಿರುತ್ತಾರೆ. ಏನೋ ಒಂದು ಕಾರಣ ಸಿಕ್ಕರೆ ತಕ್ಷಣ ಅಲ್ಲಿಂದ ಜಾರಿಕೊಳ್ಳುತ್ತಾರೆ. ಇವರ ವಿಲಂಬಿತ ಮಾತಿನ ಚಾಳಿ ಅವರ ಚರ್ಮ ಗಟ್ಟಿಯಾಗಿ ಸಿರುತ್ತದೆ. ಅವರಿಗೆ ಎದುರಿಗಿನವರ ಚಿಕ್ಕ ಅಥವಾ ಸ್ಪಷ್ಟ ನಿರ್ಲಕ್ಷದ ನಡೆ ಗ್ರಹಿಕೆಗೇ ಬರುವುದಿಲ್ಲ. ಎದುರಿಗಿನವರ ನಿರುತ್ಸಾಹವನ್ನೂ ಮೀರಿ ಅವರು ಮಾತನಾಡುತ್ತಲೇ ಇರುತ್ತಾರೆ.

ಅದೊಂದು ಕಾಲವಿತ್ತು. ಜನರಲ್ಲಿ ಬೇಕಾದಷ್ಟು ಸಮಯವಿತ್ತು. ಆಗ ಇದೊಂದು ಸಮಸ್ಯೆ ಎಂದೆನಿಸಿರಲಿಲ್ಲ. ಈಗ ಹಾಗಲ್ಲ. ಉದ್ಯೋಗವಿರಲಿ, ಮಾಡಲು ಕೆಲಸವಿಲ್ಲದಿರಲಿ, ಯಾರಿಗೂ ಪುರುಸೊತ್ತಿಲ್ಲ. ನೂರೆಂಟು ತಾಂತ್ರಿಕತೆ, ಮೊಬೈಲ್ ಮೊದಲಾದ ಸಮಯ ಉಳಿಸುವ, ಆದರೆ ಖುದ್ದು ತಾನೇ ಸಮಯ ನುಂಗುವ ಸಲಕರಣೆಗಳು. ಇವು ನಮ್ಮಲ್ಲಿ ಕೇಳುವ ತಾಳ್ಮೆಯನ್ನು ತಗ್ಗಿಸಿವೆ. ಸಾಮಾಜಿಕ ಹಂತದಲ್ಲಿಯೇ ತಾಳ್ಮೆಯ ಮಟ್ಟ ಕುಸಿದಿದೆ. ನಮಗೆ ಉದ್ದುದ್ದದ ವಿಡಿಯೊಗಳಿಗಿಂತ ಚಿಕ್ಕ ರೀಲ್ಸಗಳೇ ಇಂದು ಇಷ್ಟವಾಗುವುದು. ಇಂದು ಸ್ನೇಹವರ್ಗದಲ್ಲಿರಲಿ, ಆಫೀಸಿನಲ್ಲಿ, ಉದ್ಯೋಗ, ವ್ಯಾಪಾರ,
ಕಾರ್ಪೊರೇಟ್ ಜಗತ್ತಿನಲ್ಲಿರಲಿ, ಮಾತಿನ ಸ್ಪಷ್ಟತೆ ಮತ್ತು ಸಂಕ್ಷಿಪ್ತತೆ ಬಹಳ ಮುಖ್ಯ.

ಕಾರ್ಪೊರೇಟ್ ಜಗತ್ತಿನಲ್ಲಿ ಇಂತಹ ಕೊರೆತಗಾರರು ಹೇರಳವಾಗಿ ಎದುರಾಗುತ್ತಾರೆ. ಇವರಲ್ಲಿ ಕೆಲವರು ಮೂಲತಃ ಅಷ್ಟು ಮಾತನಾಡುವವರಲ್ಲ. ಆದರೆ ಅವರಿಗೆ ಮಾತನಾಡಿದರೆ ಮಾತ್ರ ಬೆಲೆ, ಗುರುತು ಎಂಬ ತಪ್ಪು ಗ್ರಹಿಕೆ ಇದ್ದಂತಿದೆ. ಇಂದು ಕಂಪನಿಗಳ ಕೆಲಸದ ಜೀವಾಳ ಮೀಟಿಂಗುಗಳು. ಪ್ರತಿಯೊಬ್ಬ ಕಾರ್ಪೊರೇಟ್‌ನಲ್ಲಿ ಕೆಲಸ ಮಾಡುವವನು ದಿನಕ್ಕೆ ಎರಡು ಮೂರು ಮೀಟಿಂಗುಗಳಲ್ಲಿ ಭಾಗಿಯಾಗವುದು ಸಾಮಾನ್ಯ. ಔದ್ಯೋಗಿಕವಾಗಿ ಮೇಲಕ್ಕೇರಿ ದಂತೆ ಮೀಟಿಂಗುಗಳ ಸಂಖ್ಯೆ ಏರುತ್ತದೆ. ಪ್ರತೀ ಮೀಟಿಂಗ್‌ಗಳಿಗೆ ಒಂದು ಉದ್ದೇಶವಿರುತ್ತದೆ. ಅರ್ಧ ಗಂಟೆಯ ಮೀಟಿಂಗಿನಲ್ಲಿ ಇಂತಿಂಥದ್ದು ಚರ್ಚಿಸಿ ಮುಗುಸಬೇಕು.

ಆದರೆ ಟೀಮಿನಲ್ಲಿ ಕೊರೆಯುವ ವ್ಯಕ್ತಿಯೇನಾದರೂ ಇದ್ದಾರೆ ಮುಗಿಯಿತು. ಏನೋ ಒಂದು ವಿಷಯ ಕೇಳಿಬಿಟ್ಟರೆ ಸಂಬಂಧವಿರುವ, ಇಲ್ಲದಿರುವ ಏನೇನೋ ವಿಷಯವನ್ನು ಹೇಳಿ ಇಡೀ ಮೀಟಿಂಗಿನ ಮುಕ್ಕಾಲು ಭಾಗ ಆತನೇ ತೆಗೆದುಕೊಂಡುಬಿಡುತ್ತಾನೆ. ಇದರಿಂದ ಕೆಲವೊಮ್ಮೆ ಮೀಟಿಂಗ್ ಅನ್ನು ಇನ್ನಷ್ಟು ಲಂಬಿಸಬೇಕು, ಅಥವಾ ಇನ್ನೊಮ್ಮೆ ಅದೇ ಉದ್ದೇಶಕ್ಕೆ ಎಲ್ಲ ಸೇರಬೇಕು. ಏಕ್ದಂ ಕಡಿಮೆ ಸಮಯವಿರುವ ಪ್ರಾಜೆಕ್ಟುಗಳಾದರೆ ಇಂಥವರನ್ನು
ಸೇರಿಸಿಕೊಳ್ಳುವಾಗ ಹತ್ತು ಬಾರಿ ಯೋಚಿಸಬೇಕಾಗುತ್ತದೆ.

ಏಕೆಂದರೆ ಇವರ ಉದ್ದುದ್ದದ- ಅತಿವಿವರದ ಮಾತಿನಲ್ಲಿ ಸಮಯ ವ್ಯರ್ಥವಾಗುತ್ತದೆ. ಅಷ್ಟೇ ಅಲ್ಲ, ಇಡೀ ತಂಡದ ಮೇಲೆ ಇದು ಋಣಾತ್ಮಕತೆ ಬೀರು ತ್ತದೆ. ಅದೆಷ್ಟೋ ಬಾರಿ ಇಂಥಹ ಮಾತನಾಡುವವರ ಉದ್ದೇಶ ಒಳ್ಳೆಯದೇ ಇರುತ್ತದೆ. ಆದರೆ ವಿವರಣೆ ಅದೆಷ್ಟೆಂದರೆ ಅದರಿಂದ ಇನ್ನಷ್ಟು ಗೊಂದಲ ಗಳು. ಮಾತನಾಡುವ ವಿಷಯವುಳ್ಳ ಬಾಕಿಯವರೂ ಮೌನಕ್ಕೆ ಜಾರಿಬಿಡುತ್ತಾರೆ. ಪ್ರಾಜೆಕ್ಟ್ ಮ್ಯಾನೇಜರ್‌ಗೆ ಇಂತಹ ಸನ್ನಿವೇಶವನ್ನು ನಿಭಾಯಿಸುವುದು ಸುಲಭವಲ್ಲ. ಕ್ರಮೇಣ ಅಂಥವರನ್ನು ಕಂಡರೆ ಟೀಮಿನಲ್ಲಿ ಗೌರವವಿರುವುದಿಲ್ಲ. ಮುಖ್ಯ ಚರ್ಚೆಗಳಿಂದ ಅವನನ್ನು ಹೊರಗಿಡ ಲಾಗುತ್ತದೆ. ಕ್ರಮೇಣ ಟೀಮ್ ಅಂಥವನನ್ನು ಪ್ರತ್ಯೇಕಿಸಿಟ್ಟುಬಿಡುತ್ತದೆ.

ಕಾರ್ಪೊರೇಟ್ ಅಥವಾ ಯಾವುದೇ ಉದ್ಯೋಗವಿರಲಿ, ಅಧಿಕಾರದಲ್ಲಿ ಮೇಲಕ್ಕೆ ಏರಿದಂತೆ ಜವಾಬ್ದಾರಿ ಹೆಚ್ಚುತ್ತದೆ. ಒಂದು ಹಂತದ ನಂತರದ ಉನ್ನತ ಉದ್ಯೋಗಗಳು ವಿಷಯ ಗ್ರಹಿಕೆ ಮತ್ತು ನಿರ್ಧಾರ ಎರಡಕ್ಕೇ ಸೀಮಿತವಾಗಿರುತ್ತದೆ. ಡೈರೆಕ್ಟರ್, ಸುಪರಿಂಟೆಂಡೆಂಟ್, ವೈಸ್ ಪ್ರೆಸಿಡೆಂಟ, ಸಿಇಒ
ಮೊದಲಾದ ಹುದ್ದೆಗಳೆಂದರೆ ನಿರಂತರ ನಿರ್ಧಾರಗಳು. ಈ ಹಂತದವರಿಗೆ ರಿಪೋರ್ಟ್ ಮಾಡುವವರು ಕೂಡ ಇದನ್ನು ಚೆನ್ನಾಗಿ ಅರಿತುಕೊಂಡಿರಬೇಕು. ನಮ್ಮ ಮೇಲಿನ ಅಧಿಕಾರಿಗೆ ಎಷ್ಟು ವಿವರ ಬೇಕು, ಯಾವ ವಿವರ ಸಮಂಜಸ ಇವೆಲ್ಲವೂ ಕೆಳ ಅಧಿಕಾರಿಗೆ ತಿಳಿದಿರಬೇಕು. ಏನು ಹೇಳಬೇಕು, ಯಾವುದು ಪ್ರಸ್ತುತ, ಏನು ಅನವಶ್ಯಕ ಎಂಬುದು ತಿಳಿದು ಮಾತನಾಡುವುದು ಅತ್ಯಂತ ಮುಖ್ಯವಾದ ವಿಷಯ.

ಮಾತಿನಲ್ಲಿ ಸ್ಪಷ್ಟತೆ ಮತ್ತು ಸಂಕ್ಷಿಪ್ತತೆ ಇರುವ ಉದ್ಯೋಗಿಯನ್ನೇ ಉನ್ನತ ಅಧಿಕಾರಿಗಳು ಇಷ್ಟಪಡುವುದು. ತಮ್ಮ ಸುತ್ತಲೂ ಅಂಥವರಿರಬೇಕೆಂದೇ ಬಯಸುವುದು. ಟೈಟಾನಿಕ್ ಎಂಬ ಮುಳುಗಿದ ಹಡಗಿನ ಕಥೆ ಕೇಳಿರುತ್ತೀರಿ. ಆ ಬೃಹತ್ ಹಡಗು ದೊಡ್ಡ ಮಂಜುಗಡ್ಡೆಗೆ ಅಪ್ಪಳಿಸಿದಾಗ ಅದರ ಕ್ಯಾಪ್ಟನ್ ಎಡ್ವರ್ಡ್ ಸ್ಮಿಥ್‌ಗೆ ಆಕಾಶವೇ ತಲೆಯ ಮೇಲೆ ಕಳಚಿಬಿದ್ದಂತಾಗಿತ್ತು. ಏನು ಮಾಡಬೇಕು, ಹಡಗಿಗೆ ಎಷ್ಟು ಹಾನಿಯಾಗಿದೆ, ಮುಂದೇನಾಗಬಹುದು, ಹೀಗೆ
ನೂರೆಂಟು ಪ್ರಶ್ನೆ, ನಿರ್ಧಾರವನ್ನು ಕ್ಯಾಪ್ಟನ್ ಆದ ಆತ ತ್ವರಿತವಾಗಿ ಮಾಡಬೇಕಿತ್ತು. ಹಡಗು ಮಂಜುಗಡ್ಡೆಗೆ ಅಪ್ಪಳಿಸಿದ್ದೇ ತಡ, ಹಡಗಿನ ಒಂದೊಂದು ಮೂಲೆಯಿಂದ ಒಬ್ಬೊಬ್ಬರು ಓಡಿ ಬಂದು ವಿವರಗಳನ್ನು ಕೊಡತೊಡಗಿದರು.

ಅನೋ ಮುರಿಯಿತಂತೆ, ಇ ನೀರು ಒಳನುಗ್ಗಿತಂತೆ ಎಂಬಿತ್ಯಾದಿ ಸುಮಾರು ಐವತ್ತು ವಿವರಗಳು ಅವನ ಮುಂದೆ ಬಂದವು. ಈ ಎಲ್ಲ ವಿವರಗಳ ನಡುವೆ ಆತ ಹಡಗಿನಲ್ಲಿದ್ದ ಲೈಫ್ ಬೋಟ್‌ಗಳನ್ನು ಸಮುದ್ರಕ್ಕಿಳಿಸಲು ಆಜ್ಞಾಪಿಸುವುದನ್ನೇ ಮರೆತುಬಿಟ್ಟ. ವಿವರಗಳ ಪ್ರವಾಹದ ಮಧ್ಯೆ ಅತ್ಯಾವಶ್ಯವಿದ್ದ ನಿರ್ಧಾರವನ್ನು ಆತ ತೆಗೆದುಕೊಂಡಿರಲಿಲ್ಲ. ತರುವಾಯ ಅದೆಷ್ಟೋ ಮಂದಿ ಆ ದಿನ ನೀರಿನಲ್ಲಿ ಸಮಾಧಿಯಾದರು.

ಅತಿಯಾಗಿ ವಿವರಿಸುವವರ ಅಭ್ಯಾಸಕ್ಕೆ ಹಲವಾರು ಕಾರಣಗಳಿರುತ್ತವೆ. ಇದನ್ನು ಬೆಳೆದು ಬಂದ ವಾತಾವರಣಕ್ಕೆ ಆರೋಪಿಸುವವರಿದ್ದಾರೆ. ಯಾವ ವ್ಯಕ್ತಿಯಲ್ಲಿ ಆತಂಕ ಅಥವಾ ಅಭದ್ರತೆ, ಕೀಳರಿಮೆ ಇರುತ್ತದೆಯೋ ಅಂಥವರು ಅತಿಯಾದ ವಿವರಣೆಯ ಕೆಲಸಕ್ಕೆ ಕೈ ಹಾಕುವುದು ಸಾಮಾನ್ಯ. ಕೆಲವ ರಲ್ಲಿ ತಾವು ಹೇಳಿದ್ದು ತಪ್ಪಾಗಿ ಗ್ರಹಿಸಬಹುದೆಂಬ ನಿರಂತರ ಅಪನಂಬಿಕೆ ಇರುತ್ತದೆ. ಅದಕ್ಕೆ ಹಿಂದೆಂದೋ ನಡೆದ ಘಟನೆ ಕಾರಣವಿರಬಹುದು. ಆತ್ಮವಿಶ್ವಾಸದ ಕೊರತೆ ಕೂಡ ಅತಿಯಾಗಿ ವಿವರಿಸುವಂತೆ ಮಾಡುತ್ತದೆ. ಹೀಗೆ ಹೇಗೋ ಆರಂಭವಾದ ಅತಿ ವಿವರಿಸುವ ಚಾಳಿ ಕ್ರಮೇಣ ವ್ಯಕ್ತಿತ್ವದ
ಭಾಗವೇ ಆಗಿಬಿಡುತ್ತದೆ. ವೃತ್ತಿಪರ ಉದ್ಯೋಗದಲ್ಲಿ ಮೇಲಧಿಕಾರಿಗಳ ಶಭಾಷ್ ಗಿರಿ ಪಡೆಯುವ ಉದ್ದೇಶದಿಂದ ಕೂಡ ಇಂತಹ ರೂಢಿ ಬೆಳೆಸಿಕೊಂಡ ವರಿರುತ್ತಾರೆ.

ಪ್ರತಿಯೊಬ್ಬ ವ್ಯಕ್ತಿಗೂ ಇಂತಿಷ್ಟು ತಾಳ್ಮೆ, ಸಹನೆ, ವಿಷಯವನ್ನು ಸಂಸ್ಕರಿಸುವ ಶಕ್ತಿ ಇರುತ್ತದೆ. ಕೆಲಸ, ಔದ್ಯೋಗಿಕ ಜವಾಬ್ದಾರಿ ಹೆಚ್ಚಿದಂತೆ ವಿಷಯ ಸಂಸ್ಕರಣೆಯ ವೇಗ ಹೆಚ್ಚಿಸಿಕೊಳ್ಳಬೇಕಾದದ್ದು ಅವಶ್ಯಕತೆ. ದೊಡ್ಡ ಜವಾಬ್ದಾರಿಯ ಹುದ್ದೆಗಳಲ್ಲಿ ಅತಿಯಾದ ವಿವರಣೆ ಎಂದರೆ ದೊಡ್ಡ ಹಿಂಸೆ, ಗೊಂದಲ ಇತ್ಯಾದಿ. ಅಷ್ಟೇ ಅಲ್ಲ, ಇದರಿಂದಾಗಿ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ಅತಿಯಾಗಿ ವಿವರಿಸುವ ಕೊರಕರನ್ನು
ಮೇಲಧಿಕಾರಿಗಳು ದೂರವಿಟ್ಟುಬಿಡುತ್ತಾರೆ. ಇಂಥವರಿಗೆ ಬಡ್ತಿ ಸಹಜವಾಗಿ ಸಿಗುವುದಿಲ್ಲ. ಅದು ಸರಿಯೋ, ತಪ್ಪೋ, ಆದರೆ ಕಾರ್ಪೊರೇಟ್ ಜಗತ್ತು ಇರುವುದೇ ಹಾಗೆ. ಮಾತಿನಲ್ಲಿ ಸ್ಪಷ್ಟತೆ, ನೇರತನ, ಅದನ್ನು ಚಿಕ್ಕದಾಗಿ ಹೇಳುವ ಚಾಕಚಕ್ಯತೆ ಇಂದಿನ ಬಹುತೇಕ ಉದ್ಯೋಗಗಳ, ಅಂತೆಯೇ
ವ್ಯಾಪಾರಗಳ ಯಶಸ್ಸಿಗೆ ಅತ್ಯವಶ್ಯಕ.

೧೯೮೬. ನಾಸಾದ ನೌಕೆ ಚಾಲೆಂಜರ್ ಏಳು ಗಗನಯಾನಿ ಗಳನ್ನು ಅಂತರಿಕ್ಷಕ್ಕೆ ಒಯ್ಯುವುದಿತ್ತು. ಎಲ್ಲ ತಯಾರಿಯೂ ನಡೆಯಿತು. ಪ್ರೊಜೆಕ್ಟ್ ನ ಕೊನೆಯ ಹಂತ, ಇನ್ನೇನು ಹಾರಿಸಲು ಕೆಲವು ದಿನಗಳಿವೆ. ಆಗ ಕಿರಿಯ ವಿಜ್ಞಾನಿಯೊಬ್ಬ ಸುಮಾರು ಐವತ್ತು ಪುಟದ ವಿವರವುಳ್ಳ ಒಂದು ವರದಿಯನ್ನು ನಾಸಾ ಮುಖ್ಯಸ್ಥರ ಮುಂದಿಟ್ಟಿದ್ದ. ಅಷ್ಟು ದಪ್ಪದ ವಿವರಣೆಗಳನ್ನು ನೋಡಿ ಮುಖ್ಯಸ್ಥ ಅದನ್ನು ಅಲ್ಲಿಯೇ ಪಕ್ಕಕ್ಕಿಟ್ಟುಬಿಟ್ಟ. ನೌಕೆ ಹಾರುವ ದಿನ ಬಂತು, ನಭಕ್ಕೆ ಹರಿಸಿದ್ದೂ ಆಯಿತು. ಕೇವಲ ೭೨ ಸೆಕೆಂಡಿನಲ್ಲಿ ಆಕಾಶದಲ್ಲಿ ನೋಡನೋಡುತ್ತಲೇ ಆ ನೌಕೆ, ಅದರಲ್ಲಿದ್ದ ಯಾನಿಗಳೆಲ್ಲರೂ ಭಸ್ಮವಾಗಿ ಬಿಟ್ಟರು.

ನಂತರ ಅದರ ಪೂರ್ವಾಪರ ತನಿಖೆ ನಡೆಯಿತು. ಆಮೇಲೆ ತಿಳಿದದ್ದೇನೆಂದರೆ ಆ ನೌಕೆಯ ಒಂದು ದೊಡ್ಡ ಸಮಸ್ಯೆಯ ಬಗ್ಗೆ ಎಲ್ಲ ವಿವರಗಳೂ ಆ ಕಿರಿಯ ವಿಜ್ಞಾನಿ ಕೊಟ್ಟ ವರದಿಯಲ್ಲಿತ್ತು. ಆ ವರದಿ ಸಲ್ಲಿಸಿದ ವಿಜ್ಞಾನಿ ಪ್ರಾಜೆಕ್ಟ್ ಮ್ಯಾನೇಜರ್‌ಗೆ ಎಲ್ಲ ವಿವರಿಸಿದ್ದ, ಆದರೆ ಇದರಿಂದ ನೌಕೆ ಸುಟ್ಟು ಭಸ್ಮವಾಗುತ್ತದೆ ಎಂಬುದನ್ನೇ ತನ್ನ ವಿವರಗಳ ನಡುವೆ ಪ್ರತ್ಯೇಕಿಸಿ ಉಲ್ಲೇಖಿಸುವುದನ್ನು ಮರೆತಿದ್ದ. ಇದರಿಂದಾಗಿ, ಅತಿಯಾದ ವಿವರಣೆಯಿಂದಾಗಿ ಅದರ ನಾಸಾ ಮುಖ್ಯಸ್ಥ ತಪ್ಪು ನಿರ್ಧಾರ ತೆಗೆದುಕೊಂಡಿದ್ದ.

ಇಂತಹ ಅದೆಷ್ಟೋ ಉದಾಹರಣೆಗಳಿವೆ. ಕೆಲವೊಮ್ಮೆ ಅತಿ ಯಾದ ವಿವರ ಕೊಡುವುದು ವೈಯಕ್ತಿಕ ಹಾನಿಗೂ ಕಾರಣವಾಗುವುದಿದೆ. ನಿಮಗೆ ಬಂಗಾಳದ ನವಾಬ ಸಿರಾಜ-ಉದ್ -ದೌಲನ ಕಥೆ ಗೊತ್ತಿರುತ್ತದೆ. ಸಿರಾಜ್ ತನ್ನೆಲ್ಲ ಯುದ್ಧ ಯೋಜನೆಯ ವಿವರವನ್ನು ಅನವಶ್ಯಕ ಮೀರ್ ಜಾಫರ್‌ಗೆ ವಿವರಿಸಿದ್ದ. ಮೀರ್ ಜಾಫರ್ ಬ್ರಿಟೀಷರಿಗೆ ಇದೆಲ್ಲವನ್ನು ಹೇಳಿ ಯುದ್ಧದಲ್ಲಿ ಸೋಲಾಯಿತು. ಅಷ್ಟೇ ಅಲ್ಲ, ಪ್ಲಾಸಿ ಕದನದ ಸೋಲು ಮುಂದಿನ ಎರಡು ಶತಮಾನದ ಬ್ರಿಟಿಷ್ ಆಳ್ವಿಕೆಗೆ ನಾಂದಿಯಾಯಿತು. ಹೀಗೆ ಅನವಶ್ಯಕ ವಿವರಗಳಿಂದ ಲಾಭಕ್ಕಿಂತ ವೈಯಕ್ತಿಕ ಹಾನಿಯಾಗುವುದೇ ಜಾಸ್ತಿ.

ಎಷ್ಟು ಬೇಕೋ ಅಷ್ಟನ್ನು, ಸ್ಪಷ್ಟವಾಗಿ ಹೇಳುವುದು ಜಾಣತನ. ಐನ್‌ಸ್ಟಿನ್ ಯಾವತ್ತೋ ಹೇಳಿದ್ದಾನಲ್ಲ – If you can’t explain it simply, you don’t
understand it well enough. ಚಿಕ್ಕದಾಗಿ ಚೊಕ್ಕ ದಾಗಿ ವಿವರವನ್ನು ಹೇಳುವುದು ಇಂದಿನ ಜಮಾನಾದ ಅತ್ಯಂತ ಮುಖ್ಯವಾದ ಸಾಫ್ಟ್ ಸ್ಕಿಲ್. ವಿಪರ್ಯಾಸವೆಂದರೆ ಇದನ್ನು ಯಾವುದೇ ಶಿಕ್ಷಣ ಕಲಿಸುವುದಿಲ್ಲ. ಎಷ್ಟು ಮಾತನಾಡಬೇಕು, ಎಷ್ಟು ವಿವರ ಕೊಡಬೇಕು ಎಂಬುದನ್ನು ಅರಿತವನು ಸಮಾಜದಲ್ಲಿ ಬೇಗ ಬೆಳೆಯಬಲ್ಲ. ಮಾತಿನಲ್ಲಿ ಸ್ಪಷ್ಟತೆ ರೂಢಿಸಿಕೊಂಡಷ್ಟು ಸಾಮಾಜಿಕ ಗೌರವ ಜಾಸ್ತಿ. ಜಗತ್ತು ಎಷ್ಟು ಬೇಕೋ ಅಷ್ಟನ್ನು ಮಾತಾಡು ವವನನ್ನೇ ಬುದ್ಧಿವಂತನೆಂದು ಗ್ರಹಿಸುವುದು. ಅದು ಬಿಟ್ಟು ಒಂದೇ ವಾಕ್ಯವನ್ನು ಹೇಳಬೇಕಾದಲ್ಲಿ ಇಪ್ಪತ್ತೈದು ವಾಕ್ಯ ಹೇಳಿ ಯಶಸ್ವಿಯಾಗ ಬೇಕೆಂದರೆ ನೀವು ಕನ್ನಡ ಸುದ್ದಿ ಟಿವಿಗಳ ಆಂಕರ್ ಉದ್ಯೋಗಕ್ಕೆ ಸರಿಹೊಂದಬಹುದು. ಇನ್ನುಳಿದ ಕಡೆ ಅತಿ ವಿವರಣೆ ಮಾರಕವಾಗುವುದೇ ಜಾಸ್ತಿ. ಈ ಸೂಕ್ಷ್ಮವನ್ನು ಅರಿತಲ್ಲಿ ಔದ್ಯೋಗಿಕ, ವ್ಯಾಪಾರಿಕ ಸಾಧ್ಯತೆಗಳು ಇನ್ನಷ್ಟು ತೆರೆದುಕೊಳ್ಳುತ್ತವೆ.

ಮಾತಿನ ಸರಳತೆ ರೂಢಿಸಿಕೊಂಡಲ್ಲಿ ಯಶಸ್ಸು ಸುಲಭ ವಾಗುತ್ತದೆ. ಲೋಕಾಭಿರಾಮವಾಗಿ ಮಾತನಾಡುವಾಗಲೂ ಕೂಡ ವಿವರಣೆಯ ಹಂತ ಮೀರಿ ಲಂಬಿಸಿದರೆ ಅದು ಸ್ನೇಹ-ಸಂಬಂಧಗಳಲ್ಲಿಯೂ ರುಚಿಸುವುದಿಲ್ಲ. ಜವಳಿ ಕಾಮತರಂತೆ – ಗುಣವಿದ್ದರೂ ಅಂಥವರನ್ನು ಸಮಾಜ ಕ್ರಮೇಣ ದೂರ ವಿಟ್ಟುಬಿಡುತ್ತದೆ. ಮಾತಿನೆಡೆಗಿನ ಚಿಕ್ಕ ಜಾಗೃತೆ, ಗ್ರಾಹಕರನ್ನು ಸಂಧಿಸುವಾಗ, ಮೀಟಿಂಗ್ ಮೊದಲಾದವು ಇದ್ದಾಗ ಹೇಳಬೇಕಾದ ವಿಚಾರಗಳ ಹರಿವನ್ನು ಪಟ್ಟಿಮಾಡಿಕೊಳ್ಳುವುದು, ಅದಕ್ಕೊಂದು ಮಾನಸಿಕ ತಯಾರಿ ಮಾಡಿಕೊಂಡರೆ ಇದೆಲ್ಲವನ್ನು ತಪ್ಪಿಸಬಹುದು. ಏಳ್ಗೆಗೆ ಮಾತಿನ ಹರಿವಿನ ಅವಲೋಕನ ಅತ್ಯವಶ್ಯಕ. ಉದ್ಯೋಗ ಯಾವುದೇ ಇರಲಿ, ಮಾತು ಜಾಗೃತ ಆಯ್ಕೆಯಾದರೆ ಮಾತ್ರ ಯಶಸ್ಸು ಒಲಿಯುತ್ತದೆ.

Leave a Reply

Your email address will not be published. Required fields are marked *

error: Content is protected !!