ವಿದೇಶ ವಾಸಿ
ಕಿರಣ್ ಉಪಾಧ್ಯಾಯ ಬಹ್ರೈನ್
ಪಾಪ್ ಸೂಪರ್ ಸ್ಟಾರ್ ಗಾಯಕಿ, ಅಭಿನೇತ್ರಿ ಮಡೋನಾಗೂ ಫುಟ್ಬಾಲ್ ಲೋಕದ ತಾರೆ ಮರಡೋನಾಗೂ ಏನು ಸಂಬಂಧ
ಎಂದರೆ ಬಹುಶಃ ರಾಮನವಮಿಗೂ ರಹೀಮ್ ಚಾಚಾನಿಗೂ ಇರುವ ಸಂಬಂಧ ಎಂದೇ ಹೇಳಬಹುದು.
ಮಡೋನಾ ಜೀವಮಾನದಲ್ಲಿ ಒಮ್ಮೆಯೂ ಫುಟ್ಬಾಲ್ ಆಡಿರಲಿಕ್ಕಿಲ್ಲ, ಮರಡೋನಾ ಒಮ್ಮೆಯೂ ಸಂಗೀತ ಕಚೇರಿ ನಡೆಸಿರ ಲಿಕ್ಕಿಲ್ಲ. ಇಬ್ಬರೂ ಅವರವರ ಕ್ಷೇತ್ರದಲ್ಲಿ ಸಾಕಷ್ಟು ಶ್ರಮಪಟ್ಟು ಶ್ರೇಯಸ್ಸಿನ ಉತ್ತುಂಗಕ್ಕೆ ಏರಿದವರು, ಕೀರ್ತಿಯ ಪರಾಕಾಷ್ಟೆ ತಲುಪಿದವರು. ತಮ್ಮ ಪ್ರತಿಭೆ ಮತ್ತು ಶೈಲಿಯಿಂದ ಲೆಕ್ಕವಿಲ್ಲದಷ್ಟು ಜನರನ್ನು ತಮ್ಮೆಡೆಗೆ ಸೆಳೆದವರು. ತಾವಿರುವ ಕ್ಷೇತ್ರಕ್ಕೆ ತಮ್ಮ ಸಾಮರ್ಥ್ಯದಿಂದ ಹೊಸಬರನ್ನು ಜೋಡಿಸಿದವರು.
ಆದರೂ ಇವರಿಬ್ಬರ ಹೆಸರು ಸಾಕಷ್ಟು ಸಲ ಜನರಿಗೆ ಗೊಂದಲ ಉಂಟುಮಾಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಮೊನ್ನೆ ಯಷ್ಟೇ ನಮ್ಮನ್ನು ಅಗಲಿದ ಮರಡೋನಾ ಬದಲು ಮಡೋನಾಗೆ ಕೆಲವರು ಶ್ರದ್ಧಾಂಜಲಿ ಅರ್ಪಿಸಿದ್ದೇ ಅದಕ್ಕೆ ಸಾಕ್ಷಿ. ತಿಳಿಯದೆಯೋ ಅಥವಾ ‘ನಮ್ಮ ಮೊದಲು’ ಆಗಬೇಕೆಂಬ ಅತ್ಯುತ್ಸಾಹದಲ್ಲಿಯೋ, ಸಾಕಷ್ಟು ಮಂದಿ ಇನ್ನೂ ಬದುಕಿರುವ ಮಡೋನಾಳನ್ನು ಕೊಂದದ್ದೇ ಕೊಂದದ್ದು. ದುರಂತವೆಂದರೆ ಈ ತಪ್ಪು ಮಾಡಿದವರು ಸಾಮಾಜಿಕ ಜಾಲತಾಣಗಳಲ್ಲಿಯೇ ಬುದ್ಧಿವಂತರೆಂದು ಕರೆಸಿಕೊಳ್ಳುವ ಟ್ವೀಟಿಗರು! ಅವರ ಬಗ್ಗೆ ನನಗೆ ಲವ ಮಾತ್ರ ಆಕ್ರೋಶವೂ ಇಲ್ಲ, ಆಕ್ಷೇಪವೂ ಇಲ್ಲ.
ಮರಡೋನಾ ಹೆಸರು ನಾನು ಮೊದಲು ಕೇಳಿದ್ದು 1986ರಲ್ಲಿ. ಅಲ್ಲಿಯವರೆಗೆ ಮರಡೋನಾ ಬಿಡಿ, ಫುಟ್ಬಾಲ್ ವಿಷಯದಲ್ಲಿ ಏನೂ ತಿಳಿದಿರಲಿಲ್ಲ. ಶಾಲಾ ದಿನಗಳಲ್ಲಿ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಖೋ ಖೋ ಬಿಟ್ಟರೆ ಇನ್ಯಾವ ಆಟವೂ ಚಾಲ್ತಿ ಯಲ್ಲಿರಲಿಲ್ಲ. ಪತ್ರಿಕೆಗಳಲ್ಲಿ ಕ್ರಿಕೆಟ್, ಹಾಕಿ ಸುದ್ದಿಗಳ ಕೆಳಗೆ ಆಗೊಮ್ಮೆ ಈಗೊಮ್ಮೆ ಒಂದು ಮೂಲೆಯಲ್ಲಿ ಬರುತ್ತಿದ್ದ ಫುಟ್ಬಾಲ್
ವಿಷಯ ಕೆಲವೊಮ್ಮೆ ಅಪ್ಪಿ ತಪ್ಪಿ ಕಣ್ಣಿಗೆ ಬೀಳುತ್ತಿತ್ತು. ಆಗ ಗೋವಾದ ಸಲಗಾವ್ಕರ್ ಮತ್ತು ಪಶ್ಚಿಮ ಬಂಗಾಲದ ಮೋಹನ್ ಬಾಗನ್ ಬಿಟ್ಟರೆ ಬೇರೆ ತಂಡದ ಅಥವಾ ಫುಟ್ಬಾಲ್ ಆಟಗಾರನ ಹೆಸರೇ ನನಗೆ ಗೊತ್ತಿರಲಿಲ್ಲ.
ಫುಟ್ಬಾಲ್‌ನಲ್ಲಿ ನಾನು ಕೇಳಿದ ಮೊದಲ ಆಟಗಾರನ ಹೆಸರೇ ಮರಡೋನಾ. ಅದಕ್ಕೂ ಮುಂಚೆ ನಾನು ಪಿಲೆ ಹೆಸರನ್ನೂ ಕೇಳಿರಲಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ನಮ್ಮ ಹೈಸ್ಕೂಲ್ ದಿನಗಳಲ್ಲಿ ಪಾಪ್ ಗಾಯಕಿ ಮಡೋನಾ ಹೆಸರು ಸಾಕಷ್ಟು ಜನಪ್ರಿಯವಾಗಿತ್ತು. ‘ಮಡೋನಾ’ ಮತ್ತು ‘ಲೈಕ್ ಎ ವರ್ಜಿನ್’ ಆಡಿಯೋ ಕ್ಯಾಸೆಟ್‌ಗಳು ಮಾರುಕಟ್ಟೆಯಲ್ಲಿ
ಬಿರುಗಾಳಿ ಎಬ್ಬಿಸಿದ್ದವು. ಕ್ಯಾಸೆಟ್ ಕವರ್ ಮೇಲೆ ಸುಂದರಿ ಮಡೋನಾ ಚಿತ್ರ ಬೇರೆ ಎಂದರೆ ಕೇಳಬೇಕೆ? ಮೊದಲೇ ಉಲ್ಲಾಸ, ಮೇಲಿಂದ ಫಲ್ಗುಣ ಮಾಸ!
ಹೀಗಿರುವಾಗ, ಇದ್ದಕ್ಕಿದ್ದಂತೆ ಒಂದು ದಿನ ಒಬ್ಬರು ಈ ಸಲ ಅರ್ಜೆಂಟೈನಾ ಫುಟ್ಬಾಲ್ ಕಪ್ ಗೆದ್ದಿದೆ, ಅದರ ನಾಯಕ ಮರಡೋನಾ ಹೆಸರು ಕೇಳಿದ್ದಿಯಾ?’ ಎಂದಾಗ ಆಕಾಶದತ್ತ ಮುಖ ಮಾಡಿ ಮಡೋನಾ ಗೊತ್ತು, ಮರಡೋನಾ ಗೊತ್ತಿಲ್ಲ’
ಎಂದಿದ್ದೆ. ಅಂದು ನನ್ನಂತೆ ಉತ್ತರಿಸಿದವರು ಬಹಳಷ್ಟು ಜನರಿದ್ದರು ಎಂಬುದೇ ಸಮಾಧಾನ! ಇರಲಿ, ವಿಷಯ ಅದಲ್ಲ, ಅಂದು ಮರಡೋನಾ ಬಗ್ಗೆ ಆಸಕ್ತಿ ತಳೆದ ನಾನು ಆತನ ಬಗ್ಗೆ ಆಗಾಗ ಬೇಕಾದ, ಬೇಡವಾದ ಕಥೆಗಳನ್ನು ಕೇಳುತ್ತಲೇ ಇದ್ದೆ.
ಪ್ರಾಯಶಃ ನಾನು ತಿಳಿದುಕೊಂಡ ಮೊದಲ ಫುಟ್ಬಾಲ್ ಆಟಗಾರ ಆತ ಆದದ್ದರಿಂದಲೋ ಏನೋ ನನ್ನ ದೃಷ್ಟಿಯಲ್ಲಿ ಇಂದಿಗೂ ಆತನೇ ಫುಟ್ಬಾಲ್ ಹೀರೋ, ಪಿಲೆಗೆ ಎರಡನೇ ಸ್ಥಾನ. ನನ್ನ ಪಟ್ಟಿಯಲ್ಲಿ ಈಗಿನ ಮೆಸ್ಸಿ, ರೊನಾಲ್ಡೊ, ರೊನಾಲ್ಡಿನೋ ಎಲ್ಲರಿಗೂ
ನಂತರದ ಸ್ಥಾನವೇ. ಅಂತಹ ಫುಟ್ಬಾಲ್ ದಂತಕಥೆ ಇಂದು ನಮ್ಮೊಂದಿಗಿಲ್ಲ. ಮರಡೋನಾಗೆ ಒಂದು ಅಂತಿಮ ನಮನ.
ಒಬ್ಬ ವ್ಯಕ್ತಿ ಜನಪ್ರಿಯನಾಗಬೇಕಾದರೆ ಒಂದೋ ಗೆಲುವು ಸಾಧಿಸಬೇಕು, ಯಶಸ್ವಿ ಎನಿಸಿಕೊಳ್ಳಬೇಕು ಅಥವಾ ಏನಾದರೂ ಒಂದು ವಿಶೇಷ ಗುಣ ಹೊಂದಿರಬೇಕು. ಕೆಲವೊಮ್ಮೆ ತೀರಾ ಚಿಕ್ಕ ಸಾಧನೆಯೂ ಅತಿ ದೊಡ್ಡ ಪರಿಣಾಮ ಬೀರುತ್ತದೆ. ಒಂದು ಕಾಲದಲ್ಲಿ
ನನ್ನ ತಂದೆಯವರಿಗೂ ಕ್ರಿಕೆಟ್ ಆಟಕ್ಕೂ ಎಣ್ಣೆ ಸೀಗೆಕಾಯಿ ಸಂಬಂಧ. ಒಂದಿಷ್ಟು ಮಕ್ಕಳು ಕ್ರಿಕೆಟ್ ಆಡುತ್ತಾರೆ ಎಂಬ ವಿಷಯ ಬಿಟ್ಟರೆ, ಪ್ರತಿನಿತ್ಯ ದಿನಪತ್ರಿಕೆ ಓದುತ್ತಿದ್ದುದರಿಂದ ಭಾರತದ ಒಂದು ಕ್ರಿಕೆಟ್ ತಂಡವಿದೆ, ಅದು ವಿಶ್ವಕಪ್ ಗೆದ್ದಿದೆ, ಅದರ ನಾಯಕ ಕಪಿಲ್ ದೇವ್ ಆಗಿದ್ದ ಎಂಬ ವಿಷಯಕ್ಕಿಂತ ಹೆಚ್ಚೇನೂ ತಿಳಿದಿರಲಿಲ್ಲ.
1987ರ ವಿಶ್ವಕಪ್ ಗೊತ್ತಲ್ಲ, ಆ ವರ್ಷ ನಮ್ಮ ಮನೆಗೆ ಮೊದಲ ಬಾರಿ ಟೆಲಿವಿಶನ್ ಸೆಟ್ ಬಂದಿತ್ತಾದರೂ ಸಿಗ್ನಲ್ ಸರಿಯಾಗಿ
ಬರುತ್ತಿರಲಿಲ್ಲ. ಕೆಲವೊಮ್ಮೆ ಸಿಗ್ನಲಾಗಿ ಅಂಟೆನ್ನಾ ತಿರುಗಿಸುವುದು ಒಂದು ಪೂರ್ಣಾವಧಿಯ ಕೆಲಸವೇ ಆಗಿರುತ್ತಿತ್ತು. ನಡುವೆ ಅಷ್ಟಷ್ಟು ಹೊತ್ತಿಗೆ ವಿದ್ಯುತ್ ವ್ಯತ್ಯಯ ಬೇರೆ. ಎಲ್ಲ ಅಡೆತಡೆಗಳ ನಡುವೆಯೂ ಮ್ಯಾಚ್ ನೋಡುವ ಬಯಕೆ. ಹಾಗಿದ್ದರೂ ನಮ್ಮ ಮನೆ ಪ್ರೌಢ ಶಾಲೆ ಮತ್ತು ಕಾಲೇಜ್ ಪಕ್ಕದ ಇದ್ದುದರಿಂದ ತಮ್ಮ ಬಿಡುವಿನ ಸಮಯದಲ್ಲಿ ಕೆಲವು ಶಿಕ್ಷಕರು, ಅಧ್ಯಾಪಕರು ಮ್ಯಾಚ್ ನೋಡಲು ಬರುತ್ತಿದ್ದರು. ಶಿಕ್ಷಕರು ನಮ್ಮ ಮನೆಗೆ ಬಂದು ಆಟ ನೋಡುವಾಗ ತಾನು ಜೊತೆಗೆ ಕುಳಿತುಕೊಳ್ಳದಿದ್ದರೆ ಹೇಗೆ ಎಂಬ ಒಂದೇ ಕಾರಣಕ್ಕೆ ಕ್ರಿಕೆಟ್ ಆಟದ ಗಂಧಗಾಳಿಯನ್ನೂ ತಿಳಿಯದ ನಮ್ಮ ತಂದೆ ಟಿವಿ ಸೆಟ್‌ನ ಮುಂದೆ ಕುಳಿತಿರು ತ್ತಿದ್ದರು.
ಸುಮಾರು ಮೂರು ನಾಲ್ಕು ವರ್ಷ ತಂಡದಿಂದ ಹೊರಗಿದ್ದ ನವಜೋತ್ ಸಿಂಗ್ ಸಿದ್ದು ಆ ವರ್ಷ ಭಾರತದ ತಂಡದಲ್ಲಿ
ಮರಳಿ ಸ್ಥಾನ ಪಡೆದು ಆರಂಭಿಕ ಆಟಗಾರನಾಗಿ ಇನ್ನಿಂಗ್ಸ್ ಆರಂಭಿಸುತ್ತಿದ್ದರು. ಆಸ್ಟ್ರೇಲಿಯಾದ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಸಿದ್ದು ಐದು ಸಿಕ್ಸರ್ ಬಾರಿಸಿ ಅರ್ಧ ಶತಕ ಗಳಿಸಿ ಗಮನ ಸೆಳೆದರೂ ತಂಡ ಒಂದು ರನ್ನಿಂದ ಸೋತಿತ್ತು.
ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೆಯ ಪಂದ್ಯದಲ್ಲಿಯೂ ಅರ್ಧ ಶತಕ ಸಿಡಿಸಿದ ಸಿದ್ದು ನಾಲ್ಕು ಸಿಕ್ಸರ್ ಹೊಡೆದಿದ್ದರು.
ನಂತರದ ಎರಡು ಪಂದ್ಯಗಳಲ್ಲೂ ಅರ್ಧ ಶತಕ ಬಾರಿಸಿದ ಸಿದ್ದು ಒಂದರ ಬೆನ್ನಿಗೆ ಒಂದರಂತೆ ಸತತ ನಾಲ್ಕು ಅರ್ಧಶತಕ ಗಳಿಸಿ, ಆಡಿದ ಮೊದಲ ನಾಲ್ಕು ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ ಆಟಗಾರನೆಂಬ ಇತಿಹಾಸ ಬರೆದರು. ಅದಾಗಲೇ ಕ್ರಿಕೆಟ್ ಪ್ರೇಮಿಗಳು ಅವರನ್ನು ‘ಸಿಕ್ಸರ್ ಸಿದ್ದು’ ಎಂದು ಕರೆಯಲಾರಂಭಿಸಿದ್ದರು, ನಮ್ಮ ತಂದೆಯೂ ‘ಸಿಕ್ಸರ್ ಸಿದ್ದು’ನ ದೊಡ್ಡ ಫ್ಯಾನ್ ಆಗಿದ್ದರು.
ನಂತರ ನಡೆದ ಏಷ್ಯಾ ಕಪ್‌ನಲ್ಲೂ ಸಿದ್ದು ಮೂರು ಅರ್ಧ ಶತಕ ಬಾರಿಸಿ ಸರಣಿ ಪುರುಷರಾದರು. ಸಿ ಕ್ರಿಕೆಟ್ ಆಡುವಷ್ಟು ದಿನವೂ ಅವರು ಕ್ರಿಕೆಟ್ ನೋಡುತ್ತಿದ್ದರು. ಸಿದ್ದು ನಿಲ್ಲಿಸಿದಾಗ ಅವರೂ ನಿಲ್ಲಿಸಿದರು. ಇಷ್ಟರ ನಡುವೆ ಯಾರೇ ಉತ್ತಮ ಆಟ ಆಡಿದರೂ, ಶತಕ ಗಳಿಸಿದರೂ ಅವರ ಮನಸ್ಸಿನಲ್ಲಿದ್ದ ಸಿದ್ದು ಸ್ಥಾನವನ್ನು ತುಂಬಲಾಗಲಿಲ್ಲ. ಐಪಿಎಲ್ ಸರಣಿ ಆರಂಭವಾದ ನಂತರ ಸೆಹ್ವಾಗ್, ಮಕಲ್ಲಮ, ಕ್ರಿಸ್ ಗೇಲ್ ಸಿಕ್ಸರ್ ಮಳೆ ಸುರಿಸುತ್ತಿದ್ದಾಗ ಅವರನ್ನು ಆಟ ನೋಡಲು ನಾವು ಆಹ್ವಾನಿಸುತ್ತಿದ್ದೆವು.
ಆಗಲೂ ಅವರ ಪ್ರಶ್ನೆ ಒಂದೇ ಇರುತ್ತಿತ್ತು; ‘ಸಿಕ್ಸರ್ ಸಿದ್ದು ಇದ್ದನಾ ಹೇಳಿ, ಅವನಿದ್ದರೆ ನೋಡುತ್ತೇನೆ.’ ಸಿದ್ದು ಎಂದರೆ ಅಂಥಾ ಭಕ್ತಿ. ಮಜವೆಂದರೆ ಕಪಿಲ್ ಶರ್ಮಾನ ಕಾಮಿಡಿ ನೈಟ್‌ನಲ್ಲಿ ಬಂದು ಶಾಯರಿ ಹೇಳುವ ಸಿದ್ದುವನ್ನಾಗಲೀ, ರಾಜಕಾರಣಿ ಸಿದ್ದು ವನ್ನಾಗಲೀ ಅವರು ಅವರು ಒಂದು ದಿನವೂ ಇಷ್ಟಪಡಲಿಲ್ಲ. ನನಗಿಂತ ವಯಸ್ಸಿನಲ್ಲಿ ಹಿರಿಯರಾದ ನನ್ನ ಮಿತ್ರರೊಬ್ಬರಿದ್ದಾರೆ
ಅವರ ಲೆಕ್ಕಾಚಾರದಲ್ಲಿ ದೇವರ ನಂತರದ ಸ್ಥಾನವೇನಾದರೂ ಇದ್ದರೆ ಅದು ಸಚಿನ್ ತೆಂಡೂಲ್ಕರ್‌ಗೆ. ಅವರು ಕ್ರಿಕೆಟ್ ನೋಡಲು ಆರಂಭಿಸಿದ್ದೇ ಸಚಿನ್‌ನಿಂದ. ಆಗಷ್ಟೇ ಭಾರತ ಕ್ರಿಕೆಟ್ ತಂಡಕ್ಕೆ ಹದಿನಾರು ವರ್ಷ ಪ್ರಾಯದ ಸಚಿನ್ ಆಯ್ಕೆಯಾಗಿದ್ದರು.
ಪಾಕಿಸ್ತಾನದಲ್ಲಿ ನಡೆದ ಒಂದು ಪಂದ್ಯದಲ್ಲಿ ಸಚಿನ್ ಮೂಗಿಗೆ ಚೆಂಡು ಬಡಿದು ರಕ್ತಸುರಿಯುತ್ತು. ಆದರೂ ಆಟ ಮುಂದು ವರಿಸಿದ ಸಚಿನ್‌ನನ್ನು ಕಂಡು ಅವರು ಅಕ್ಷರಶಃ ಅತ್ತಿದ್ದರು. ಅವರು ಯಾವಾಗಲೂ ಹೇಳುತ್ತಿದ್ದ ಮಾತು ಒಂದೇ, ‘ಸಚಿನ್ ತೆಂಡೂಲ್ಕರ್ ನನ್ನ ಮಗನಾಗಬೇಕಿತ್ತು’ ಎಂದು. ಸಚಿನ್ ನಿವೃತ್ತನಾದ ದಿನದಿಂದ ಕ್ರಿಕೆಟ್ ನೋಡುವುದನ್ನೇ ಬಿಟ್ಟ ಆತ್ಮ ಅದು!
ಈಗಲೂ ಸಚಿನ್ ಬಗ್ಗೆ ಯಾರೇ ಏನೇ ಅಪಸ್ವರ ಎತ್ತಿದರೂ ಅವರು ಬೆಂಕಿ ಉಗುಳುವ ಡ್ರಾಗನ್ ಅವತಾರ ತಾಳುತ್ತಾರೆ. ನಮ್ಮಲ್ಲಿ ಇಂಥವರು ಸಾಕಷ್ಟಿದ್ದಾರೆ. ಕೆಲವು ವ್ಯಕ್ತಿತ್ವವೇ ಹಾಗೆ, ಯಾವುದೋ ಕ್ಷಣದಲ್ಲಿ, ಯಾವುದೋ ರೀತಿಯಲ್ಲಿ ನಮಗರಿವಿಲ್ಲದಂತೆಯೇ
ನಮಗೆ ಆಪ್ತವಾಗಿಬಿಡುತ್ತದೆ. ಅದಕ್ಕೆ ಕೆಲವೊಮ್ಮೆ ದಾಖಲೆ ಬೇಕೆಂದಿಲ್ಲ, ಗೆಲುವು ಬೇಕೆಂದಿಲ್ಲ. ರಾಹುಲ್ ದ್ರಾವಿಡ್ ಹೆಚ್ಚು ಆಪ್ತ ವಾಗುವುದು ಆತನ ದಾಖಲೆಗಳಿಗಿಂತ ಆತನ ಶೈಲಿಯಿಂದಾಗಿ. ಅನಿಲ್ ಕುಂಬ್ಳೆಯ ಬಗ್ಗೆ ಎದೆ ಉಬ್ಬುವುದು ಆತ ಒಂದು ಇನ್ನಿಂಗ್ಸ್‌ನಲ್ಲಿ ಹತ್ತು ವಿಕೆಟ್ ಉರುಳಿಸಿದ ಎನ್ನುವುದಕ್ಕಿಂತ ದಾಡೆ ಮುರಿದಾಗಲೂ ಪಟ್ಟಿ ಕಟ್ಟಿಕೊಂಡು ಬಂದು ಬೌಲ್ ಮಾಡಿ ತಂಡವನ್ನು ಗೆಲ್ಲಿಸಿದ್ದ ಎನ್ನುವುದಕ್ಕಾಗಿ.
ಇಪ್ಪತ್ತು ಗ್ರಾಂಡ್ ಸ್ಲಾಮ್ ಗೆದ್ದ ಫೆಡೆರರ್ ಮತ್ತು ನಡಾಲ್‌ಗಿಂತ ಎಂಟು ಗ್ರಾಂಡ್ ಸ್ಲಾಮ್ ಗೆದ್ದ ಬೋಳು ತಲೆಯ ಆಂಡ್ರ್ಯೂ ಅಗಾಸ್ಸಿ ಪ್ರಿಯವಾಗುವುದು ಕಿವಿಯೋಲೆ ಧರಿಸಿ, ಜುಟ್ಟಿನ ಕ್ಯಾಪ್ ತೊಡುತ್ತಿದ್ದ ಆತನ ಸ್ಟೆಲಿನಿಂದಾಗಿ. ನನ್ನ ಮಿತ್ರನೊಬ್ಬನಿಗೆ ಆತ ಪ್ರಿಯವಾದದ್ದು ಸ್ಟೆಫಿ ಗ್ರಾಫನ್ನು ಮದುವೆಯಾದದ್ದಕ್ಕಾಗಿ!
ಬಹಳಷ್ಟು ಬಾರಿ ಗೆಲುವು ಅಥವಾ ಯಶಸ್ಸು ಜನರನ್ನು ಆಕರ್ಷಿಸುತ್ತದೆ. ನಮ್ಮ ದೇಶದಲ್ಲಿ ಕ್ರಿಕೆಟ್ ಒಂದು ಧರ್ಮದಂತೆಯೇ, ಮನೆ, ಮಠ, ಕೆಲಸ ಕಾರ್ಯ ಎಲ್ಲ ಬಿಟ್ಟು ಕ್ರಿಕೆಟ್ ಮ್ಯಾಚ್ ನೋಡುವ ಜನ ನಮ್ಮಲ್ಲಿದ್ದಾರೆ. ನಮ್ಮಲ್ಲಿ ಕ್ರಿಕೆಟ್ ಬಗ್ಗೆ ಪ್ರೀತಿ ಇತ್ತಾದರೂ ಹುಚ್ಚು ಎಂದು ಶುರುವಾದದ್ದು ಭಾರತ ವಿಶ್ವಕಪ್ ಜಯಿಸಿದ ನಂತರವೇ. 1983ರಲ್ಲಿ ಕಪಿಲ್ ದೇವ್ ನೇತೃತ್ವದ ತಂಡ ಎಲ್ಲರ ಊಹೆಗೂ ಮೀರಿ ಕಪ್ ಎತ್ತಿದ್ದರು. ಈಗಲೂ 83ರ ವಿಶ್ವಕಪ್ ಎಂದಾಗ ನಮಗೆ ಅಂತಿಮ ಪಂದ್ಯಕ್ಕಿಂತಲೂ
ಮೊದಲು ನೆನಪಾಗುವುದು ಭಾರತ ಮತ್ತು ಝಿಂಬಾಬ್ವೆ ತಂಡದ ನಡುವಿನ ಪಂದ್ಯ. ಆರಂಭಿಕ ಆಟಗಾರರಾದ ಸುನೀಲ್ ಗವಾಸ್ಕರ್ ಮತ್ತು ಕೆ. ಶ್ರೀಕಾಂತ್ ಸೊನ್ನೆ ಸುಳಿದ ನಂತರ ಭಾರತ ಹದಿನೇಳು ರನ್‌ಗೆ ಐದು ವಿಕೆಟ್ ಕಳೆದುಕೊಂಡಿತ್ತು.
ಆಗ ಆಡಲು ಬಂದ ನಾಯಕ ಕಪಿಲ್ ದೇವ್ ಆರು ಸಿಕ್ಸರ್ ಸಿಡಿಸಿ 175ರನ್ ಹೊಡೆದು ಔಟಾಗದೇ ಉಳಿದದ್ದು ಈಗ ಇತಿಹಾಸ. ಈ ಪಂದ್ಯವನ್ನು ಅಂದು ಪ್ರತ್ಯಕ್ಷವಾಗಿ ಎಷ್ಟು ಜನ ಕಂಡಿದ್ದರೋ ಅಷ್ಟೇ. ಈ ಪಂದ್ಯದ ನೇರ ಪ್ರಸಾರವಾಗಲೀ ರೆಕಾರ್ಡಿಂಗ್ ಆಗಲೀ
ಇರಲಿಲ್ಲವೆಂಬುದು ಖೇದಕರ ಸತ್ಯ. ಆದ್ದರಿಂದ ಇನ್ನು ಮುಂದೆಯೂ ಆ ಪಂದ್ಯದ ಒಂದು ತುಣುಕೂ ಎಲ್ಲಿಯೂ ನೋಡಲು ಸಿಗಲಿಕ್ಕಿಲ್ಲ. ಆದರೂ ಪ್ರತಿಯೊಬ್ಬ ಅಪ್ಪಟ ಕ್ರಿಕೆಟ್ ಪ್ರೇಮಿಗೂ ಕಪಿಲ್ ದೇವ್‌ನ 175 ರನ್‌ನ ಆ ಬಾರಿ ಗೊತ್ತು. ಅಂತಿಮ ಪಂದ್ಯದಲ್ಲಿಯೇ ಆದರೂ ಮೊದಲು ನೆನಪಾಗುವುದು ವಿವಿಯನ್ ರಿಚಡ್ಸ್ ಗಾಳಿಯಲ್ಲಿ ಬಾರಿಸಿದ ಚೆಂಡನ್ನು ಓಡುತ್ತ ಹೋಗಿ ಕ್ಯಾಚ್ ಮಾಡಿದ ಕಪಿಲ್ ದೇವ್. ನಂತರವೇ ಮೋಹಿಂದರ್ ಅಮರನಾಥ್, ರೋಜರ್ ಬಿನ್ನಿ, ಮದಮ್ ಲಾಲ್ ಮತ್ತು ಇತರರು ನೆನಪಿಗೆ ಬರುವುದು.
ಅಂದು ಭಾರತ ವಿಶ್ವಕಪ್ ಗೆಲ್ಲದಿದ್ದರೆ ಭಾರತದಲ್ಲಿ ಕ್ರಿಕೆಟ್ ಜ್ವರ ಇಷ್ಟೊಂದು ಏರುತ್ತಿರಲಿಲ್ಲ ಎಂಬುದಂತೂ ಸತ್ಯ. ನಮ್ಮ ದೇಶದಲ್ಲಿ ಪ್ರಕಾಶ್ ಪಡುಕೋಣೆ, ಪಿ.ಗೋಪಿಚಂದ್, ಪಿ. ವಿ. ಸಿಂಧು, ಸೈನಾ ನೆಹ್ವಾಲ್ ಇಲ್ಲದಿದ್ದರೆ ಎಷ್ಟು ಜನ ಬ್ಯಾಡ್ಮಿಂಟನ್ ಆಟದೆಡೆಗೆ ಹೆಚ್ಚಿನ ಆಸಕ್ತಿ ಹೊಂದುತ್ತಿದ್ದರು? ಗೀತ್ ಸೇಠಿ, ಪಂಕಜ್ ಅಡ್ವಾನಿ ಇಲ್ಲದಿದ್ದರೆ ಜನ ಈಗಲೂ ಬಿಲಿಯರ್ಡ್ ಕಡೆ ತಲೆ ಹಾಕಿ ಕೂಡ ಮಲಗುತ್ತಿರಲಿಲ್ಲ, ಅಭಿನವ್ ಬಿಂದ್ರಾ, ರಾಜ್ಯವರ್ಧನ್ ಸಿಂಗ್ ರಾಥೋಡ್ ಶೂಟಿಂಗ್‌ಗೆ ಹೊಸ ಭಾಷ್ಯ ಬರೆಯ ದಿದ್ದರೆ ಜನ ಆ ಕಡೆ ಮುಖ ಮಾಡಿಯೂ ಕುಳಿತುಕೊಳ್ಳುತ್ತಿರಲಿಲ್ಲ ಎಂದು ಅನ್ನಿಸುವುದಿಲ್ಲವಾ? ಒಬ್ಬ ವಿಶ್ವನಾಥನ್ ಆನಂದ್ ಇಲ್ಲದ ಭಾರತದ ಚೆಸ್ ಆಟವನ್ನು ಊಹಿಸಿಕೊಳ್ಳಲು ಸಾಧ್ಯವಾ? ಓಟದಲ್ಲಿ ಪಿ. ಟಿ. ಉಷಾ, ಬಾಕ್ಸಿಂಗ್‌ನಲ್ಲಿ ಮೇರಿ ಕೋಂ, ಜಿಮ್ನಾಸ್ಟಿಕ್‌ನಲ್ಲಿ ದೀಪಾ ಕೌರ್, ವೇಟ್ ಲಿಫ್ಟಿಂಗ್‌ನಲ್ಲಿ ಕರ್ನಮ್ ಮಲ್ಲೇಶ್ವರಿ ಮೊದಲಾದವರು ನಮ್ಮ ದೇಶದಲ್ಲಿ ತಮ್ಮ ಕ್ರೀಡೆಗೆ ಹೆಚ್ಚಿನ ಜನರನ್ನು ಆಕರ್ಷಿಸುವಲ್ಲಿ ಸಫಲರಾದವರು.
ಎಷ್ಟೋ ವರ್ಷದಿಂದ ತಮ್ಮ ಕ್ಷೇತ್ರದಲ್ಲಿ ಇದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಕೆಲವರು ಅಧಿಕ ಸಂಖ್ಯೆಯ ಜನರ ಮನದಲ್ಲಿ ಛಾಪು ಮೂಡಿಸುವಲ್ಲಿ ಶಕ್ತರಾಗುವುದಿಲ್ಲ. ಸಾಮಾನ್ಯ ಆಟಗಾರರಾಗಿ ನಿವೃತ್ತರಾಗುತ್ತಾರೆ. ಕೆಲವೊಮ್ಮೆ ದಾಖಲೆಗಳೂ ಜನರಲ್ಲಿ ಶಾಶ್ವತವಾಗಿ ನೆನಪಿನಲ್ಲಿರುವುದಿಲ್ಲ. ಆದರೆ ಅವರ ವಿಭಿನ್ನ ನಡೆ, ಆಚರಣೆ ಅಥವಾ ಶೈಲಿ ಜನರ ಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ, ಆತ ಹೀರೋ ಆಗುತ್ತಾನೆ. ಅಷ್ಟೇ ಅಲ್ಲ, ತನ್ನ ವೈಯಕ್ತಿಕ ಪ್ರತಿಭೆಯಿಂದಲೋ, ಶೈಲಿಯಿಂದಲೋ
ಹೆಚ್ಚಿನವರನ್ನು ಆಕರ್ಷಿಸುತ್ತಾನೆ, ಆ ಕ್ಷೇತ್ರದಲ್ಲಿ ಅಭಿರುಚಿ ಇಲ್ಲದವರೂ ಒಮ್ಮೆ ಆಸಕ್ತಿ ತಾಳುವಂತೆ ಮಾಡುತ್ತಾನೆ.
ತಾನಿರುವ ಕ್ಷೇತ್ರಕ್ಕೆ ಹೊಸ ಆಯಾಮ ಕಟ್ಟಿಕೊಡುತ್ತಾನೆ. ಅವನಿಂದಾಗಿ ಆ ಕ್ಷೇತ್ರದೆಡೆಗೆ ಜನರು ಹೆಚ್ಚಿನ ಗಮನ ಹರಿಸುವಂತೆ ಮಾಡುತ್ತಾನೆ. ಮೊದಲಿನಿಂದಲೇ ಅಭಿರುಚಿ ಇದ್ದವರಿಗೆ ಹುಚ್ಚು ಹಿಡಿಸುತ್ತಾನೆ, ಭಕ್ತರನ್ನಾಗಿಸುತ್ತಾನೆ. ಆ ಕ್ಷೇತ್ರದಲ್ಲಿ ಹಳೆಯ ದಾಖಲೆ ಮುರಿದು ಹೊಸ ದಾಖಲೆಗಳ ನಿರ್ಮಾಣವಾಗುತ್ತಿದ್ದರೂ ಆತ ಮಾತ್ರ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿರುತ್ತಾನೆ.
ಇಲ್ಲವಾದರೆ, ಒಂದೇ ಒಂದು ವಿಶ್ವ ಚಾಂಪಿಯನ್‌ಷಿಪ್ ಗೆಲ್ಲದಿದ್ದರೂ ಕರಾಟೆಯಲ್ಲಿ ಜೋ ಲೇವಿಸಿಗಿಂತ ಬ್ರೂಸ್ ಲೀ ಆಪ್ತನಾಗು ತ್ತಿರಲಿಲ್ಲ. ವಿಜಯ, ಆನಂದ್ ಅಮೃತರಾಜ್ ಸಹೋದರರಿಗಿಂತಲೂ, ಲಿಯಾಂಡರ್ ಫೇಸ್, ಭೂಪತಿ ಜೋಡಿಗಿಂತಲೂ ಸಾನಿಯಾ ಮಿರ್ಜಾ ಜನಪ್ರಿಯಳಾಗುತ್ತಿರಲಿಲ್ಲ.
ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಜಹೀರ್ ಅಬ್ಬಾಸ್, ಇಂಜಮಾಮ, ವಸೀಮ್ ಅಕ್ರಂಗಿಂತ ಶಾಹಿದ್ ಅಫ್ರಿದಿ, ಶೋಯಬ್ ಅಖ್ತರ್
ಹೀರೋಗಳಾಗುತ್ತಿರಲಿಲ್ಲ. ನಮ್ಮ ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಹೊಡೆಯದಿದ್ದರೆ, ಚೇತನ್ ಶರ್ಮಾ ಭಾರತಕ್ಕೆ ಮೊದಲ ಹ್ಯಾಟ್ರಿಕ್ ಪಡೆಯದಿದ್ದರೆ ಇತರರಂತೆ ಹತ್ತರೊಂದಿಗೆ ಹನ್ನೊಂದು, ಹನ್ನೆರಡನೆಯವರಾಗಿ ಸೇರಿಹೋಗು ತ್ತಿದ್ದರು.
ಕೆಲವರು ತಮ್ಮ ಕ್ಷೇತ್ರದೊಂದಿಗೆ ತಮ್ಮ ಹೆಸರನ್ನು ಶಾಶ್ವತವಾಗಿ ಪೋಣಿಸಿ ಹೋಗುತ್ತಾರೆ. ಆ ಕ್ಷೇತ್ರ ಅಸ್ತಿತ್ವದಲ್ಲಿ ಇರುವವರೆಗೆ ಅವರ ಹೆಸರೂ ಅದಕ್ಕೆ ಹೊಂದಿಕೊಂಡಿರುತ್ತದೆ. ಬಾಕ್ಸಿಂಗ್ ಇರುವವರೆಗೆ ಮೊಹಮ್ಮದ್ ಅಲಿ ಮತ್ತು ಮೈಕ್ ಟೈಸನ್, ಗಾಲ
ಇರುವವರೆಗೆ ಟೈಗರ್‌ವುಡ್, ಫಾರ್ಮುಲಾ ವನ್ ಕಾರ್ ರೇಸ್ ಇರುವವರೆಗೆ ಮೈಕಲ್ ಶೂಮಾಕರ್, ಕ್ರಿಕೆಟ್ ಇರುವವರೆಗೆ ಬ್ರಾಡ್ಮನ್, ಹಾಕಿ ಇರುವವರೆಗೆ ಧ್ಯಾನ್ ಚಂದ್, ಕನ್ನಡ ಚಿತ್ರರಂಗ ಇರುವವರೆಗೆ ಡಾ.ರಾಜಕುಮಾರ್, ಯಕ್ಷಗಾನ ಇರುವವರೆಗೆ ಕಾಳಿಂಗ ನಾವಡ ಮೊದಲಾದವರ ಹೆಸರುಗಳು ಶಾಶ್ವತವಾಗಿ ಇರುವಂಥದ್ದು. ಇವರೆಲ್ಲ ತಮ್ಮ ಪ್ರತಿಭೆಯಿಂದ, ತಮ್ಮದೇ
ಶೈಲಿಯಿಂದ ಆಯಾ ಕ್ಷೇತ್ರದಲ್ಲಿ ಇತಿಹಾಸ ಬರೆದವರು.
ತಮ್ಮ ಪ್ರತಿಭೆಯಿಂದ ತಮ್ಮೆಡೆಗಷ್ಟೇ ಅಲ್ಲದೆ ತಮ್ಮ ಕ್ಷೇತ್ರಕ್ಕೂ ಜನರನ್ನು ಸೆಳೆದವರು. ಡಿಯಾಗೋ ಮರಡೋನಾ ಈ ಪಂಕ್ತಿಗೆ ಸೇರಿದವರು.