Friday, 20th September 2024

ಉ.ಕ.ದ ಸಾಂಸ್ಕೃತಿಕ ರಾಯಭಾರಿಗೆ ಅರವತ್ತು!

ಪ್ರೊ. ಎಂ. ಕೃಷ್ಣೇಗೌಡ

ನಮ್ ಉತ್ತರ ಕರ್ನಾಟಕದ ಮಂದಿ ಅದಾರಲ್ರಿ, ನಾವು ಮಾತಾಡಿದರ ಹೊಳ್ಳ್ಯಾಡಿ ಹೊಳ್ಳ್ಯಾಡಿ ನಗತಾರ್ರಿ. ಹೊಟ್ಟಿ, ಎದಿ ಹೊಯ್ಕೊೊಂಡು ನಗತಾರ, ನೆಲದಾಗ ಧೂಳಿದ್ರ ಧೂಳೆರಚಿಕೊಂಡು ನಗತಾರ, ಕಣ್ಣಾಗ ನೀರು ಸುರಿಯೋ ತನಾ ನಗತಾರ.. ಆದರೆ, ರೊಕ್ಕ ಕೊಡಾಂಗಿಲ್ರಿ!.. ಅದಾ ಈ ಹಳೀ ಮೈಸೂರ ಮಂದಿ, ಅಂದ್ರ, ಈ ಬೆಂಗಳೂರು, ಮೈಸೂರು, ತುಮಕೂರು ಕಡೀ ಮಂದಿ ಈಟೀಟಾ ನಗತಾರ.. ಮತ್ತ ಕೆಲವ್ರ ನಗಾಂಗೇ ಇಲ್ಲರೀ.

ಆದರ ಹೋಗೂ ಮುಂದ ಕೈ ತುಂಬ ರೊಕ್ಕ ಕೊಡತಾರ. ಅದಕ್ಕ ನಾನು ರೊಕ್ಕ ಬೇಕಂದ್ರ ಈ ಬೆಂಗಳೂರ್, ಮೈಸೂರ್ ಕಡೀ ಹೋಕ್ಕೀನಿ. ಹೊಟ್ಟಿ ಹೊಯ್ಕೊೊಂಡ್ ನಗಾವ್‌ರ್‌ ನೋಡ ಬೇಕಂದರ ನಮ್ಮ ಉತ್ತರ ಕರ್ನಾಟಕದ ಕಡೀ ಹೋಕ್ಕೀನಿ..’’
ಹಾಗಂತ ಸಣ್ಣಗೆ, ಪ್ರೀತಿಯಿಂದ ಛೇಡಿಸಿಕೊಂಡೇ ಜನರನ್ನು ನಗಿಸುತ್ತಾ ಹಾಸ್ಯೋತ್ಸವಗಳ ಸ್ಟಾರ್ ಆಗಿ ಬೆಳೆದವರು ಗೆಳೆಯ ಗಂಗಾವತಿ ಪ್ರಾಣೇಶ್. ಈಗ ಪ್ರಾಣೇಶ್‌ಗೆ ಕರ್ನಾಟಕದ ಎಲ್ಲ ಊರುಗಳಿಂದ, ವಿದೇಶಗಳಿಂದ ಡಿಮ್ಯಾಾಂಡಪ್ಪೋ ಡಿಮ್ಯಾಾಂಡು!

ಅವರ ಕ್ಯಾಲೆಂಡರಿನಲ್ಲಿ ಕನಿಷ್ಠ ಆರು ತಿಂಗಳ ವರೆಗೆ ಎಲ್ಲಾ ಡೇಟುಗಳೂ ಬುಕ್ ಆಗಿರುತ್ತವೆ. ಎಷ್ಟೇ ಒತ್ತಾಯ ಬಂದರೂ, ಎಷ್ಟೋ ಕಾರ್ಯಕ್ರಮಗಳಿಗೆ ಅವರು ಹೋಗುವುದಕ್ಕೇ ಆಗುವುದಿಲ್ಲ. ಸುಮಾರು ಇಪ್ಪತ್ತು ವರ್ಷಗಳಿಂದ ಹಾಸ್ಯ ಕ್ಷೇತ್ರದಲ್ಲಿ ನಮ್ಮ ಗಂಗಾವತಿ ಪ್ರಾಣೇಶ್ ಬೆಳೆದ ಪರಿಯನ್ನು ನಾನು ಕಣ್ಣಾರ ನೋಡುತ್ತಿದ್ದೇನೆ. ಈ ಬೆಳವಣಿಗೆಯನ್ನು ಕಂಡು ನನಗೆ
ಯಾವಾಗಲೂ ಅಚ್ಚರಿ ಮತ್ತು ಸಂತೋಷ!

ಪ್ರಾಣೇಶ್ ಅವರನ್ನು ನಾನು ಮೊದಲು ನೋಡಿದ್ದು ತುಮಕೂರಿನ ‘ಹಾಸ್ಯಲೋಕ’ದ ಕಾರ್ಯಕ್ರಮದಲ್ಲಿ. ಈ ಹಾಸ್ಯಲೋಕದ ಸ್ಥಾಪಕರು ನನಗೆ ಅತ್ಯಂತ ಆತ್ಮೀಯರೂ, ಹಿರಿಯರೂ ಆಗಿದ್ದ, ಈಗ ದಿವಂಗತರಾಗಿರುವ ಕೆ.ವೈ.ಮೃತ್ಯುಂಜಯ. ಅವರು ಸಾವಿರ ಜನ ಸದಸ್ಯರಿಂದ ತಲಾ ಒಂದು ಸಾವಿರ ರೂಪಾಯಿಗಳ ಸದಸ್ಯತ್ವದ ಹಣ ಸಂಗ್ರಹಿಸಿ, ಆ ಹತ್ತು ಲಕ್ಷ ರೂಪಾಯಿಗಳನ್ನು ಬ್ಯಾಾಂಕಿನಲ್ಲಿಟ್ಟು ಅದರಿಂದ ಬರುವ ಬಡ್ಡಿ ಹಣದಿಂದ ಪ್ರತಿ ತಿಂಗಳು ತುಮಕೂರಿನಲ್ಲಿ ಒಂದು ಹಾಸ್ಯ ಕಾರ್ಯಕ್ರಮವನ್ನು ಏರ್ಪಾಡು ಮಾಡುತ್ತಿದ್ದರು.

ಅದಲ್ಲದೆ ವರ್ಷಕ್ಕೆ ಒಂದು ದೊಡ್ಡ ಕಾರ್ಯಕ್ರಮ. ಅದನ್ನು ಒಂದು ಕಾರ್ಯಕ್ರಮ ಎನ್ನುವುದಕ್ಕಿಿಂತ ಜಾತ್ರೆ ಅನ್ನಬೇಕು. ಕರ್ನಾಟಕದ ಹಲವಾರು ಜನ, ಸಿನಿಮಾ ನಾಟಕ ಕ್ಷೇತ್ರದ ಹಾಸ್ಯ ಕಲಾವಿದರು, ಹವ್ಯಾಸೀ ಹಾಸ್ಯ ಭಾಷಣಕಾರರ ದಂಡೇ ಅಲ್ಲಿಗೆ ಬರುತ್ತಿತ್ತು. ಬಹುಷಃ ಪ್ರಾಣೇಶ್ ಅವರಿಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ದಕ್ಷಿಣ ಕರ್ನಾಟಕದ ಬಾಗಿಲು ತೆಗೆದವರೇ
ಮೃತ್ಯುಂಜಯ ಹಾಗೂ ತುಮಕೂರಿನ ಹಾಸ್ಯಲೋಕ. ತುಮಕೂರಿನಲ್ಲಿ ಇಂಥದೊಂದು ಸಂಸ್ಥೆೆ ಪ್ರತಿ ತಿಂಗಳು ಹಾಸ್ಯ
ಕಾರ್ಯಕ್ರಮ ನಡೆಸುತ್ತದೆ ಎಂಬ ವಿಷಯ ಗೊತ್ತಾಗಿ, ಆವರೆಗೆ ಉತ್ತರ ಕರ್ನಾಟಕದಲ್ಲಿ ಹಾಸ್ಯ ಕಾರ್ಯಕ್ರಮ ಮಾಡುತ್ತಿದ್ದ ಪ್ರಾಣೇಶ್, ಮೃತ್ಯುಂಜಯ ಅವರನ್ನು ಪತ್ರ ಮುಖೇನ ಸಂಪರ್ಕಿಸಿದ್ದರು.

ಮೃತ್ಯುಂಜಯ, ಪ್ರಾಣೇಶ್ ಅವರನ್ನು ಗಂಗಾವತಿಯಿಂದ ಕರೆಸಿಕೊಂಡು ಹಾಸ್ಯ ಭಾಷಣ ಮಾಡಿಸಿದರು. ಅದಾದ ಕೆಲವು ದಿನಗಳ ನಂತರ ಮೃತ್ಯುಂಜಯ ನನ್ನನ್ನೂ ತುಮಕೂರಿಗೆ ಹಾಸ್ಯ ಭಾಷಣಕ್ಕೆೆ ಅಂತ ಕರೆಸಿದರು. ಆಗ ಮೃತ್ಯುಂಜಯ ನನಗೆ ಹೇಳಿದ ಒಂದು ಮಾತು ‘ಸಾರ್, ಗಂಗಾವತಿಯಲ್ಲಿ ಪ್ರಾಣೇಶ ಅಂತ ಒಬ್ಬ ಯುವಕ ಇದ್ದಾರೆ.  ಅವರನ್ನು ಅಲ್ಲಿ ‘ಗಂಗಾವತಿ ಬೀಚಿ’ ಅಂತ ಕರೀತಾರೆ. ನಾನು ಇಲ್ಲಿಯವರೆಗೆ ಕರೆಸಿದ ಹಲವಾರು ಹಾಸ್ಯ ಭಾಷಣಕಾರರಲ್ಲಿ ಅವರು ಏಒನ್! ನನಗನ್ಸುತ್ತೆೆ, ಮುಂದೆ ಅವರು ಬಹಳ ದೊಡ್ಡ ಕಲಾವಿದರಾಗಿ ಬೆಳೆಯುತ್ತಾರೆ’. ಮೃತ್ಯುಂಜಯ ಆವತ್ತು ಹೇಳಿದ ಆ ಮಾತುಗಳು ನಿಜವಾದದ್ದನ್ನು ಅವರೂ, ನಾನೂ ಕಣ್ಣಾರೆ ನೋಡಿದೆವು.

ನಾನೂ ಓರ್ವ ಹಾಸ್ಯ ಭಾಷಣಕಾರನೇ ಆದರೂ ನನಗೆ ಇದು ಹವ್ಯಾಸ, ವೃತ್ತಿಯಲ್ಲ. ಆದರೆ ಪ್ರಾಣೇಶ್ ಅಂಥವರಿಗೆ
ಇದೇ ವೃತ್ತಿ. ಇಂಥದನ್ನು ವೃತ್ತಿಯಾಗಿ ಆರಿಸಿಕೊಂಡವರು ಅದೆಷ್ಟು ಕಷ್ಟಪಟ್ಟು ಒಂದೊಂದೇ ಮೆಟ್ಟಿಲೇರುತ್ತಾ ಎತ್ತರಕ್ಕೇರಿ ದ್ದಾರೆಂಬುದಕ್ಕೆೆ ಪ್ರಾಣೇಶ್ ನಮ್ಮೆದುರಿನ ಸಾಕ್ಷಿ. ಸುಮಾರು 2003ನೇ ಇಸವಿಯಿಂದ ಈ ‘ಹಾಸ್ಯೋತ್ಸವ’ ಅನ್ನುವುದು ನಾವೊಂದೈದಾರು ಮಂದಿಗೆ ಬಹಳ ದೊಡ್ಡ ಡಿಮ್ಯಾಾಂಡ್ ಸೃಷ್ಟಿಸಿತು.

ನಾನು, ಪ್ರಾಣೇಶ್, ರಿಚರ್ಡ್ ಲೂಯಿಸ್, ಎಂ.ಎಸ್. ನರಸಿಂಹ ಮೂರ್ತಿ ಮತ್ತು ಸುಧಾ ಬರಗೂರು ಈ ತಂಡ ಇಡೀ ಕರ್ನಾಟಕದ ತುಂಬಾ ಗಿರಗಿಟ್ಲೆಯಾಗಿಬಿಟ್ಟೆೆವು. ಪ್ರತಿಯೊಬ್ಬರೂ ಒಂದೊಂದು ದಿನಕ್ಕೆ ಎರಡು ಮೂರು ಕಾರ್ಯಕ್ರಮ ನಡೆಸಿದ್ದೂ ಇದೆ. ನಮ್ಮ ಕಾರ್ಯಕ್ರಮಗಳನ್ನು ಜನರು ಎಷ್ಟು ಸಂತೋಷದಿಂದ ಅನುಭವಿಸಿದರೋ, ಅದಕ್ಕಿಿಂತ ಹೆಚ್ಚು ಸಂತೋಷದಿಂದ
ನಾವು ಒಟ್ಟೊಟ್ಟಿಗೆ ಪ್ರವಾಸ ಮಾಡುತ್ತಿದ್ದೆೆವು. ಕಾರ್ಯಕ್ರಮ ಮುಗಿದ ನಂತರ ನಮ್ಮ ಭಾಷಣಗಳ ಬಗೆಗೆ ನಾವೇ ವಿಮರ್ಶೆ
ಮಾಡಿಕೊಳ್ಳುತ್ತಿದ್ದೆವು. ಪ್ರಾಣೇಶ್ ಈಗ, ತಾನೇ ಒಂದು ಸಂಸ್ಥೆೆಯಾಗಿಬಿಟ್ಟಿದ್ದಾರೆ. ಅವರದೇ ತಂಡ ಕಟ್ಟಿಕೊಂಡಿದ್ದಾರೆ.

ಸುಮಾರು ಇಪ್ಪತ್ತು ಜನ ಕಲಾವಿದರು ಪ್ರಾಣೇಶ್ ಅವರ ಶಿಷ್ಯರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಂತೂ ಪ್ರಾಣೇಶ್ ಹುಟ್ಟುಹಾಕಿದ ಈ ಟ್ರೆೆಂಡ್ ನಿಂದಾಗಿ, ಮನೆಗೊಬ್ಬ ಕಲಾವಿದ ಕಾಣಸಿಗುತ್ತಾನೆ. ಜತೆಗೆ, ಈ ಎರಡು ದಶಕಗಳಲ್ಲಿ ಪ್ರಾಣೇಶ್ ಭಾಷಣಕಾರರಾಗಿಯೂ ಬಹಳ ಪ್ರಬುದ್ಧರಾಗಿದ್ದಾರೆ.ಒಂದು ಗಂಟೆ  ಭಾಷಣ ಮಾಡಿದರೆ, ಐದಾರು ಸೆಕೆಂಡುಗಳಿಗೊಮ್ಮೆ ನಗೆಯ
ಅಲೆಯೆಬ್ಬಿಸಬಲ್ಲ ಪ್ರಾಣೇಶ್, ಹಾಸ್ಯದ ಕ್ವಾಟಿಯ ಜತೆ ಯಾವಾಗಲೂ ರಾಜಿ ಮಾಡಿಕೊಂಡಿಲ್ಲ. ಅದಕ್ಕಿಿಂತಲೂ ನನಗಾದ ದೊಡ್ಡ ಅಚ್ಚರಿಯೆಂದರೆ ಪ್ರಾಣೇಶ್ ‘ವಿಶ್ವವಾಣಿ’ ದಿನಪತ್ರಿಕೆಯ ಅಂಕಣಕಾರರಾಗಿಯೂ ಯಶಸ್ವಿಯಾದದ್ದು.

‘ವಿಶ್ವವಾಣಿ’ ಒದಗಿಸಿದ ಆ ಅವಕಾಶದಿಂದಾಗಿ ಪ್ರಾಣೇಶ್ ಅವರ ಲೇಖನ ಕಲೆಯೂ ಚಂದಗೊಂಡಿದೆ. ಗೆಳೆಯ ಪ್ರಾಣೇಶ್‌ಗೆ ಅರವತ್ತಾಗುತ್ತಿದೆ ಎಂಬುದನ್ನು ಕೇಳಿ ಸಂತೋಷವಾಗಿದೆ. ಈ ಅರವತ್ತು ವರ್ಷಗಳ ಬದುಕು ಪ್ರಾಣೇಶ್ ಅವರನ್ನು ಇಂದು ಅತ್ಯಂತ ಎತ್ತರದಲ್ಲಿ ನಿಲ್ಲಿಸಿದೆ. ಅವರೀಗ ‘ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ’. ಅವರ ಅರವತ್ತರಾಚೆಯ ಬದುಕು ಅವರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ. ಅವರಿಗೆ ಎಲ್ಲ ಶುಭಗಳೂ ಇರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.