Sunday, 8th September 2024

ಸುಮ್ಮನೆ ಸೂಪರ್‌ ಅನ್ನಬೇಡ್ರಿ, ಇದು ಒಂದು ಸುಪಾರಿ, ಭಾರಿ ದೊಡ್ಡ ಪಿತೂರಿ !

ಅವಲೋಕನ

ಜಿ.ಪ್ರತಾಪ್‌ ಕೊಡಂಚ

ಈಗೇನಿದ್ರೂ ಖುಲ್ಲಂಖು ಲೈಕ್, ಡಿಸ್ಲೈಕ್ ಹೋರಾಟದ ಯುಗ. ತನ್ನದಲ್ಲದ ವಿಷಯ ದಲ್ಲಿ ಮೂಗು ತೂರಿಸಿ ಪ್ರಚಲಿತದಲ್ಲಿರುವ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ಸರ್ವೇ ಸಾಮಾನ್ಯ.

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ | ಚಿನ್ನದಾತುರಕಿಂತ ಹೆಣ್ಣು ಗಂಡೊಲವು|| ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ| ತಿನ್ನುವುದಾತ್ಮವನೆ ಮಂಕುತಿಮ್ಮ||

ಡಿವಿಜಿಯವರ ಕಗ್ಗದ ಸಾಲುಗಳಿಗಿಂತ ಚೆನ್ನಾಗಿ ಈ ಮನ್ನಣೆಯ ದಾಹ ವರ್ಣಿಸಲಸಾಧ್ಯ. ಅಂತಾರಾಷ್ಟ್ರೀಯ ಪಾಪ್ ಗಾಯಕಿ ರೀಹಾನಾ ಭಾರತದ ರೈತರ ಚಳುವಳಿಯ ಕುರಿತ ಸಿಎನ್‌ಎನ್ ಸುದ್ದಿಯ ತುಣುಕೊಂದನ್ನು ಲಗತ್ತಿಸಿ, ಈ ಕುರಿತು ನಾವ್ಯಾಕೆ ಮಾತಾಡುತ್ತಿಲ್ಲ?! (Why aren’t we talking about this?!FarmersProtest) ಮಾಡಿದ ಟ್ವೀಟ್ 9 ಲಕ್ಷಕ್ಕೂ ಅಧಿಕ ಲೈಕ್ ಗಿಟ್ಟಿಸಿ, ಬಹುತೇಕ ಭಾರತೀಯರ ಕೆಂಗಣ್ಣಿಗೂ ಗುರಿಯಾಯಿತು.

ಹದಿಹರಯದ ಜಗದ್ವಿಖ್ಯಾತ ಹೋರಾಟಗಾರ್ತಿ, ಗ್ರೇಟಾ ಥನ್‌ಬಗ್ ರಂತೂ ಟ್ವೀಟಿಸುತ್ತಾ ಆನ್‌ಲೈನ್ ಮಾರ್ಗ ದರ್ಶನವನ್ನೇ
ಆರಂಭಿಸಿದ್ದರು. ರೈತರ ಮೇಲಿನ ಕರುಣೆ ಉಕ್ಕಿ ಹರಿಸಿದ್ದ ರಿಹಾನಾ, ಗ್ರೇಟಾರ ಟ್ವೀಟು ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಬಂದಿದ್ದು ಕಾಕತಾಳೀಯ ವೇನು? ಗ್ರೇಟಾರ ಇನ್ನೊಂದು ಟ್ವೀಟು. ಆಂದೋಲನದ ವೇಳಾಪಟ್ಟಿ ಎಲ್ಲಿ, ಹೇಗೆಲ್ಲ ಪ್ರತಿಭಟಿಸ ಬೇಕೆಂಬ ಸಂಯೋಜಿತ ಸಂಚಿನ ಒಡಲನ್ನೇ ತೆರೆದಿಟ್ಟಿತು.

ಜಾಲತಾಣಗಳಲ್ಲಿಯೇ ಚರ್ಚೆ ನಡೆದು, ಇದು ಮನ್ನಣೆಯ ದಾಹಕ್ಕೂ ಮೀರಿದ ಹಣ ಪಡೆದು ಮಾಡಿದ ಸುಪಾರಿ, ಭಾರತದ ಒಡೆಯುವ ವಿದೇಶಿ ಷಡ್ಯಂತ್ರ ಎಂಬಂಶಗಳೂ ಕೂಡಾ ಬಯಲಾಯಿತು. ಅದಕ್ಕೆ ಸುಮ್ಮನೇ ಸೂಪರ್ ಅನ್ನಬೇಡ್ರಿ, ಇದೂ
ಒಂದು ಸುಪಾರಿ, ಭಾರಿ ದೊಡ್ಡ ಪಿತೂರಿ!, ಅಂದಿದ್ದು. ಪ್ರತಿ ಬೇಸಿಗೆಯಲ್ಲಿ ಮನೆ ಖರ್ಚಿಗಾಗುವಷ್ಟು ಕೊತ್ತಂಬರಿ, ಮೆಂಥ್ಯೆ,
ಹರಿವೆ, ಟೊಮೇಟೊ ಬೆಳೆಸುವ ಪ್ರಯತ್ನ ಮಾಡ್ತಿನಾದ್ರೂ, ಅದಕ್ಕೂ ಹೆಚ್ಚಿನ ರೈತ ನಾನಲ್ಲ!

ಚಿಕ್ಕದೊಂದು ತೆಂಗಿನ ತೋಟ ಉಳಿಸಿಕೊಳ್ಳುವ ಪ್ರಯತ್ನ ಪಟ್ಟಿರುವುದರಿಂದ ಸಣ್ಣ, ಮಧ್ಯಮ ಹಿಡುವಾಳಿದಾರರ ಕಷ್ಟ,
ನಷ್ಟದ ಕಿಂಚಿತ್ತು ಅರಿವು ನನಗಿದೆ. ಎರಡೊತ್ತಿನ ಊಟ, ತೋಟವೆಂಬ ತೃಪ್ತಿಗೂ ಮೀರಿದ, ಸಂಪತ್ತು ಅವರಿಗೆ ಸಿಗುವುದು ಅನುಮಾನ. ಹಸಿವು ತಣಿಸುವ ಶ್ರಮಿಕ ರೈತರ ಜೀವನಮಟ್ಟ ಉತ್ತಮಗೊಳ್ಳಬೇಕು, ಇನ್ನಷ್ಟು ಯುವಜನತೆ ಕೃಷಿಯತ್ತ ತಿರುಗಿ ಸದೃಢ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕೆಂಬ ಪ್ರಾಮಾಣಿಕ ತುಡಿತ ನನಗಿದೆ.

ನನ್ನ ಅಫಿದಾವಿಟ್ ಏನೆಂದರೆ, ನಾನು ಪ್ರಭುತ್ವದ ಅಂಧ ಭಕ್ತನೂ ಅಲ್ಲ. ರೈತ ವಿರೋಧಿಯಂತೂ ಅಲ್ಲವೇ ಅಲ್ಲ. ನಾನಿಲ್ಲಿ ಬಿಚ್ಚಿಡುತ್ತಿರುವುದು ದೇಶದಲ್ಲಿ ಅಸ್ಥಿರತೆ ಮೂಡಿಸುವ ಷಡ್ಯಂತ್ರ, ಮತ್ತು ತಿಳಿದೂ, ತಿಳಿಯದಂತೆ ತಂತಮ್ಮ ಲಾಭಕ್ಕೆ
ಬೆಂಕಿಗೆ ತುಪ್ಪ ಸುರಿದು, ಚಳಿ ಕಾಯಿಸಿಕೊಳ್ಳುತ್ತಿರುವ ಸಮಯ ಸಾಧಕರ ಮುಖವಾಡ.

ಹೋರಾಟ ಆರಂಭಗೊಂಡಾಗಲೇ ಕೆನಾಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಬೆಂಬಲಿಸಿದ್ದರು. ಇದರ ಹಿಂದೆ ಸಿಖ್ ಪ್ರತ್ಯೇಕತಾವಾದಿ ಖಲೀಸ್ಥಾನ ಬೆಂಬಲಿಗರ ಒತ್ತಡದ ವಾಸನೆ ಬಂದಿತ್ತು. ಇನ್ನು, ನೆರೆಯ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರಂತೂ, ತಮ್ಮ ಸಂಪೂರ್ಣ ಹೃದಯ(?) ಪಂಜಾಬಿನ ರೈತರಿಗಾಗಿ ಮಿಡಿಯುತ್ತಿದೆ ಎಂದು ಮರುಗಿಬಿಟ್ಟಿದ್ದರು. ಅಷ್ಟಕ್ಕೇ ನಿಲ್ಲದೇ, ಬ್ರಿಟನ್ನಿನ ಪಾಕಿಸ್ತಾನಿ ಹಿತಾಸಕ್ತಿಗಳು, ಈ ವರ್ಷದ ಗಣರಾಜ್ಯೋತ್ಸವದ ಅತಿಥಿಯಾಗಿ ಬರಬೇಕಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮೇಲೆ ಒತ್ತಡ ಹೇರಿ, ತಡೆಯುವ ಪ್ರಯತ್ನ ಕೂಡ ನಡೆಸಿತ್ತು.

ಭಾರತವೊಂದು ಸ್ವತಂತ್ರ ಪ್ರಜಾಪ್ರಭುತ್ವ ಎಂಬುದನ್ನೇ ಮರೆತಿದ್ದ ಕೆಲ ಬ್ರಿಟನ್ ಸಂಸದರು ಭಾರತದ ರೈತರ ಪ್ರತಿಭಟನೆಯ ಕುರಿತು ಬ್ರಿಟನ್ ಪಾರ್ಲಿಮೆಂಟ್‌ನಲ್ಲಿ ಚರ್ಚಿಸಬೇಕೆಂಬ ಒತ್ತಡವೂ ತಂದರು. ತವರಿನಲ್ಲಿ ಕೋವಿಡ್ ಪರಿಸ್ಥಿತಿ ಬಿಗಡಾಯಿಸಿ ದ್ದರಿಂದ ಜಾನ್ಸನ್ ಗಣರಾಜ್ಯೋತ್ಸವಕ್ಕೆ ಬರಲಿಲ್ಲವೆನ್ನಿ. ಇಲ್ಲದಿದ್ದರೆ ಅವರೂ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಜತೆಗೆ
ಕಿಡಿಗೇಡಿಗಳೇರಿಸಿದ ಇನ್ನಿತರ ಧ್ವಜಗಳ ದರ್ಶನ ಪಡೆಯಬೇಕಿತ್ತು.

ಇದೊಂದು ಕಾರಣ ಕ್ಕಾದರೂ ನಾವೆ ಕೋವಿಡ್‌ಗೆ ಕೃತಜ್ಞರಾಗಬಹುದೇನೊ? ನಿರ್ಗಮಿತ ಅಧ್ಯಕ್ಷರ ಜತೆಗೆ ಚರ್ಚಿಸುವ ಅವಕಾಶ
ವಂಚಿತರಾಗಿದ್ದ ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡೆನ್, ಆಂತರಿಕ ಚರ್ಚೆ ಮೂಲಕ ಬಗೆಹರಿಸಿಕೊಳ್ಳಿ ಎಂಬರ್ಥದ ಸಂದೇಶ ಹರಿಬಿಟ್ಟರು. ಇದೆಲ್ಲ ನೋಡಿದರೆ ಡಿವಿಜಿಯವರ ಇನ್ನೊಂದು ಕಗ್ಗ ಪ್ರಸ್ತುತವೆನಿಸುತ್ತೆ.

ಸರ್ವರುಂ ಸಾಧುಗಳೇ ಸರ್ವರುಂ ಬೋಧಕರೇ|
ಜೀವನಪರೀಕ್ಷೆ ಬಂದಿದಿರು ನಿಲುವನಕ|| ಭಾವಮರ್ಮಂಗಳೇಳುವುವಾಗ
ತಳದಿಂದ| ದೇವರೇ ಗತಿಯಾಗ ಮಂಕುತಿಮ್ಮ||.

ಕೆನಡಾ, ಬ್ರಿಟನ್, ಅಮೆರಿಕಾ, ರಿಹಾನಾಮ್ಮನ ಬಾರ್ಬಡೋಸ್, ಗ್ರೇಟಾರ ಸ್ವೀಡನ್ ಈ ಎಲ್ಲಾ ಕಡೆಯೂ ಗುತ್ತಿಗೆ ಕೃಷಿ (Contract
Farming) ಅಧಿಕೃತ. ಬಹುತೇಕ ಈ ಎಲ್ಲ ದೇಶಗಳಲ್ಲಿ ಕನಿಷ್ಠ ಬೆಂಬಲ ಬೆಲೆಯ ಭದ್ರತೆಯೂ ರೈತರಿಗಿಲ್ಲ! ಅಲ್ಲಿನ ಬಹುಪಾಲು ಕೃಷಿ ಕಾರ್ಗಿಲ್‌, ಟೈಸನ್ ಫುಡ್ಸ್, ಅಲ್ಟೇಕ್, ಮೋನ್ಸ್ಯಾಂಟೋ, ಬಿಆರ್‌ಎಫ್, ನೆಸ್ಲೆ ಮುಂತಾದ ಕಾರ್ಪೊರೇಟ್ ದೈತ್ಯರ ಹಿಡಿತದಲ್ಲಿದೆ. ಹೀಗಿರುವಾಗ, ಇದನ್ನೇ ವಿರೋಧಿಸಿ ಬೀದಿಗಿಳಿದ ನಮ್ಮ ರೈತರ ಬೆಂಬಲಕ್ಕೆ ಧುಮಿಕಿರುವ ಇವರೆಲ್ಲರ ಹಿಂದಿನ ಉದ್ದೇಶ ಏನಿರಬಹುದೆಂಬ ಪ್ರಶ್ನೆ ಮೂಡದಿರುತ್ತದೆಯೇ? ರಿಹಾನಾ ಪ್ರತಿಭಾವಂತ ಹಾಡುಗಾರ್ತಿ.

ರಿಹಾನಾಮ್ಮನ ಪೂರ್ವಾಪರ ಕೊಂಚ ಗೂಗಲಿಸಿದರೆ, ಪಾಕಿಸ್ತಾನದ ಪ್ರಧಾನಿಗಳ ವಿಶೇಷ ಸಹಾಯಕ, ಬ್ರಿಟಿಷ್ ಕೈಗಾರಿಕೋದ್ಯಮಿ ಜುಲಿ ಬುಖಾರಿಯವರ ಹತ್ತಿರದ ಒಡನಾಟ ಕಂಡುಬರುತ್ತದೆ. ಪ್ರಸಿದ್ಧಿ ಪಡೆದವರ ಜತೆ ಹಲವರು ಕಾಣಿಸಿಕೊಳ್ಳುತ್ತಾರೆ ಇರಲಿ ಬಿಡಿ. ಶ್ರೀಮಂತ ಪ್ರಸಿದ್ಧರಂತೆ ತನ್ನದೇ ಕ್ಲಾರಾ ಲಿಯೋನೆಲ್ ಫೌಂಡೇಶನ್ ಎಂಬ ದತ್ತಿಯ ಮೂಲಕ ಪ್ರಶಂಸನೀಯ ಸಾಮಾಜಿಕ
ಕಾರ್ಯಗಳನ್ನೂ ರಿಹಾನಾಮ್ಮ ಮಾಡುತ್ತಿದ್ದಾರೆ. ಮಾಯ್ ಲಸ್ಸಿಟರ್ ಎಂಬ ಗೃಹಿಣಿ ಕೂಡ ಇದೇ ದತ್ತಿಯ ಒಬ್ಬ ನಿರ್ದೇಶಕಿ. ಇವರು ಅಮೆರಿಕಾದ ಮಾಜಿ ಅಧ್ಯಕ್ಷ ಓಬಾಮಾ, ಹಿಲರಿ ಕ್ಲಿಂಟನ್ ಚುನಾವಣೆಗಳಲ್ಲಿ ನಿಧಿ ಸಂಗ್ರಹದ ಹೊಣೆ ಹೊತ್ತವರೂ ಮತ್ತು ಸ್ವತಃ ಗಮನಾರ್ಹ ಮೊತ್ತದ ಚುನಾವಣಾ ನಿಧಿ ಸಮರ್ಪಿಸಿದ ದಾನಿಗಳು.

ಅವರಿಬ್ಬರರ ಚುನಾವಣಾ ಪ್ರಚಾರಕ್ಕೆ ಸ್ವತಃ ಮಾಯ್ ಲಸ್ಸಿಟರ್ ಮತ್ತು ರಿಹಾನಾ ಕೂಡಾ ಕಾಣಸಿಕೊಂಡಿದ್ದರು. ಅವರವರ ರಾಜಕೀಯ ನಿಲುವು ಬಿಡಿ. ಮಾಯ್ ಲಸ್ಸಿರ್ಟ, ರಿಹಾನಾ, ಗ್ರೇಟಾ ನಡುವಿನ ಸಂಪರ್ಕದ ಜಾಡು ಹುಡುಕಿ ಹೊರಟರೆ ಅಮೇರಿಕಾದ ಮಾಜಿ ಉಪಾಧ್ಯಕ್ಷ, ಜಾಗತಿಕ ತಾಪಮಾನದ ಜಾಗೃತಿಯಲ್ಲಿ ಗುರುತಿಸಿಕೊಂಡ ಉದ್ಯಮಿ ಅಲ್ಗೋರ್,
ಹಾಗೂ ಸರ್ವಾಧಿಕಾರದ ವಿರೋಧಿ ತಾನೆಂದು ಬಿಂಬಿಸಿಕೊಂಡು  ಹಲವುದೇಶಗಳಲ್ಲಿ ರಾಜಕೀಯ ಪಲ್ಲಟನೆ ಗಳ ಸೂತ್ರಧಾರ ನೆನಿಸಿಕೊಂಡ ಶ್ರೀಮಂತ ಜಾರ್ಜ್ ಸಾರೊಸ್ ತನಕದ ಕುಣಿಕೆಗಳು ಕಾಣಿಸುತ್ತದೆ.

ಜಾರ್ಜ್ ಸಾರೊಸ್ ಭಾರತ ಮತ್ತು ಪ್ರಸಕ್ತ ಭಾರತ ಸರಕಾರದ ಮೇಲೆ ಬಹಿರಂಗ ಯುದ್ಧ ಸಾರಿದ ಮಹನೀಯರು ಕೂಡಾ!
ಅವರೆಲ್ಲ ಸೇರಿ ರೈತ ಚಳುವಳಿಯ ಬೆಂಬಲಕ್ಕೆ ಧುಮಿಕಿದರೆಂಬ ದಾಖಲೆ ಕೊಡಿ ಎನ್ನುವ ನಮ್ಮ ನಡುವಿನ ಬುದ್ಧಿವಂತರಿಗೆ, ಸಾರ್ವಜನಿಕವಾಗಿ ದೊರಕುವ ಕುಣಿಕೆಯ ಏಣಿ ಕಾಣದಿರುವುದು ವಿಪರ್ಯಾಸ. ರಿಹಾನಾ, ಗ್ರೇಟಾರ ಟ್ವೀಟು, ಹಂಚಿಕೊಂಡ ಚೀಟ್ ಶೀಟು, ಅಭಿಯಾನದ ಹಿಂದೆ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಷಡ್ಯಂತ್ರದ ನೆರಳು ಗೋಚರಿಸುತ್ತದೆ. ನಮ್ಮ ರೈತರ ಪರಿಸ್ಥಿತಿ, ಅವರ ಬೇಡಿಕೆಗಳ ಅರಿವೇ ಇರದ ಇವರೆಲ್ಲ, ಜಗತ್ತಿನ ಎಲ್ಲ ಆಗು ಹೋಗು ಗಳನ್ನು ಬಿಟ್ಟು, ಧಸ್ಸಕ್ಕನೆ ಮರುಗಿ, ಮನಕಲುಕಿ ಬೆಂಬಲಿಸುತ್ತಿದ್ದಾರೆ ಎಂಬುದನ್ನು ನನಗಂತೂ ಒಪ್ಪಿಕೊಳ್ಳಲಾಗುತ್ತಿಲ್ಲ.

ಹಣ ಪಡೆದು ಟ್ವೀಟಿಸಿದರೆಂಬ ವರ್ತಮಾನ ಹರಿದಾಡಿದ್ದರೂ, ಬರಿ ಹಣಕ್ಕೆ ಈ ಪ್ರಮಾಣದ ಸಂಯೋಜಿತ ಟ್ವೀಟಾಟ ನಡೆದಿರಲಿಕ್ಕಿಲ್ಲ! ಹಣ ಪಾವತಿಸಿರುವುದಾದರೂ ಯಾರು? ಉದ್ದೇಶವೇನಿರಬಹುದು ಎಂಬ ಪ್ರಶ್ನೆ ಮೂಡದಿರುತ್ತದೆಯೇ?
ನನ್ನಂಥ ಸಾಮಾನ್ಯನಿಗೇ, ತುಸು ಗೂಗಲಿಸಿ ಇಷ್ಟು ಮಾಹಿತಿ ಸಿಕ್ಕಿದ್ದರೆ, ಭಾರತದ ವಿದೇಶಾಂಗ ಸಚಿವಾಲಯಕ್ಕೆ ಇದರ ಹಿನ್ನಲೆ
ಗೊತ್ತಾಗದಿರುತ್ತದೆಯೇ? ಭಾರತದ ವಿದೇಶಾಂಗ ಸಚಿವಾಲಯ, ನಾವೆ ಒಂದಾಗಿದ್ದೇವೆ, ದುರುದ್ದೇಶದ ಪ್ರಚಾರಕ್ಕೆ ವಿರೋಧವಿದೆ
(IndiaTogether, IndiaAgainstPropogand) ಎಂಬರ್ಥದ ಟ್ವೀಟ್ ಅಭಿಯಾನ ಆರಂಭಿಸಿತು.

ತಾರೆಯರೂ, ಗಣ್ಯರೂ ಸೇರಿ ಹಲವು ಭಾರತೀಯ ನಾಗರಿಕರು ಬೆಂಬಲಿಸಿ ಟ್ವೀಟಿಸಿದರು. ಅಷ್ಟಕ್ಕೇ ಶುರುವಾಗಿದ್ದು ಇನ್ನೊಂದು ಗಲಾಟೆ. ಅವರೆಲ್ಲ ಪ್ರಭುತ್ವಕ್ಕೆ ತಮ್ಮನ್ನೇ ಮಾರಿಕೊಂಡವರು, ರೈತ ವಿರೋಽಗಳು ಎಂಬರ್ಥದ ಕುಹಕ! ರಾಜಕಾರಣಿಯೇ ಅಲ್ಲದ, ವಿದೇಶಾಂಗ ನೀತಿ, ವ್ಯವಹಾರದ ಪರಿಣತ ನಮ್ಮ ವಿದೇಶಾಂಗ ಸಚಿವರನ್ನೇ ಕುಟುಕುವ ಅಸಹ್ಯವೂ ಕಾಣಿಸಿ ಕೊಂಡಿತು. ಭಾರತ ಒಂದಾಗಿದೆ ಎಂಬ ಸಂದೇಶ ಟ್ವೀಟಿಸಿದ ತೆಂಡೂಲ್ಕರ್, ಕುಂಬ್ಳೆ, ಕೊಹ್ಲಿ, ಲತಾ ಮಂಗೇಶ್ಕರ್, ಅಜಯ್ ದೇವಗನ್, ಅಕ್ಷಯ್
ಕುಮಾರ್ ಸೇರಿ ಯಾರೊಬ್ಬರೂ ನಾವು ರೈತ ವಿರೋಧಿಗಳು ಎಂದಾಗಲಿ, ರೈತರ ಬೇಡಿಕೆ ಸರಿಯಿಲ್ಲ ಎಂದೇನೂ ಹೇಳಿಲ್ಲವಲ್ಲ.

ಅದ್ಯಾಕೆ ಈ ರೀತಿಯ ಪೂರ್ವಾಗ್ರಹ? ಸದ್ಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಜೆಪಿಗರ ವಶದಲ್ಲಿದೆ. ಅದಕ್ಕೆ ತೆಂಡೂಲ್ಕರ್, ಕುಂಬ್ಳೆ ಸಹಿತ ನಿವೃತ್ತ ಕ್ರಿಕೆಟಿಗರೂ, ಕೊಹ್ಲಿ ಮುಂತಾದ ಹಾಲಿ ಕ್ರಿಕೆಟಿಗರೂ ಬಿಜೆಪಿ ಅಣತಿಯಂತೆ ನಡೆಯುತ್ತಿದ್ದಾರೆ ಎಂಬ ವಾದವೂ ಹುಟ್ಟಿಕೊಂಡಿತು. ಹಾಗಾದರೆ ಕ್ರಿಕೆಟ್ ನಿಯಂತ್ರಣ ಶರದ್ ಪವಾರ್, ರಾಜೀವ್ ಶುಕ್ಲಾ, ಮಾಧವ್ ರಾವ್ ಸಿಂಧ್ಯಾ ಮೊದಲಾದ
ಬಿಜೆಪಿ ಹೊರಗಿನವರ ಹಿಡಿತದಲ್ಲಿzಗ ಕೂಡ ಹೀಗೆ ಅಣತಿ ಕೊಡಲಾಗುತ್ತಿತ್ತಾ? ಭಾರತದ ಪ್ರಮುಖ ರೈತರಬ್ಬರಾದ ಮಾಜಿ ಕೃಷಿ
ಸಚಿವ, ಭಾರತೀಯ, ಅಂತಾರಾಷ್ಟ್ರೀಯ ಕ್ರಿಕೆಟಿನ ಸಾಮ್ರಾಟ, ಶರದ್ ಪವಾರ್ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತೆಂಡೂಲ್ಕರ್‌ಗೆ, ನಿಮ್ಮದಲ್ಲದ ಕ್ಷೇತ್ರದ ಕುರಿತು ಮಾತನಾಡುವಾಗ ನಿಯಂತ್ರಣವಿರಲಿ, ಎಂಬ ಎಚ್ಚರಿಕೆ ಯನ್ನೇ ಕೊಟ್ಟರು. ಹಲವು ದಶಕಗಳ ಕಾಲ ಕ್ರಿಕೆಟ್ ನಿಯಂತ್ರಿಸುತ್ತಿದ್ದ ಶ್ರೀಯುತರು, ಪರಿಣತ ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದರೇನು?
ಮಹಾರಾಷ್ಟ್ರದ ಸರಕಾರವಂತೂ ಬಾಲಿವುಡ್ ತಾರೆಯರೆಲ್ಲ ಒಂದೇ ರೀತಿಯ ಟ್ವೀಟ್, ಸುಮಾರಾಗಿ ಒಂದೇ ಸಮಯದಲ್ಲಿ ಮಾಡಿದ್ದಾರಲ್ಲ? ಹಿಂದೆ ಯಾರಿರ ಬೇಕು ಎಂಬ ತನಿಖೆಗೆ ಆದೇಶಿಸಿ ನಗೆಪಾಟಲಿ ಗೀಡಾಗಿದೆ!

ದುರುದ್ದೇಶಪೂರಿತ ಪ್ರಚಾರಕ್ಕೆ ಉತ್ತರ ರೂಪವಾಗಿ ಭಾರತದ ವಿದೇಶಾಂಗ ಸಚಿವಾಲಯವೇ ಆರಂಭಿಸಿದ್ದು ನಾವೆ ಒಂದಾಗಿ ದ್ದೇವೆ ಅಭಿಯಾನ. ಸಮರ್ಥಿಸುವವರೆಲ್ಲ ಅದೇ ನುಡಿಗಳನ್ನು ಬಳಸಿಕೊಂಡಿದ್ದಾರಷ್ಟೇ! ಯಾವುದೇ ಟ್ವೀಟ್ ಟ್ರೆಂಡ್ ಆಗಬೇಕಾದರೆ ಅದೇ ನುಡಿಗಳು ಹೆಚ್ಚೆಚ್ಚು ಹಂಚಿಕೊಳ್ಳಬೇಕೆಂಬುದರ ಅರಿವು ಮಹಾರಾಷ್ಟ್ರ ಸರಕಾರಕ್ಕಿಲ್ಲವೇ? ಚುನಾಯಿತ ಸರಕಾರ ಪ್ರಜೆಗಳ ಬೇಡಿಕೆಗಳನ್ನು ಆಲಿಸಬೇಕು. ಜತೆಯಾಗಿ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಎರಡೂ ಕಡೆಯವರು ಸ್ವಪ್ರತಿಷ್ಠೆ ಮಾಡಿಕೊಂಡು ನಿಂತಾಗಲೇ ಈ ರೀತಿ ಮೂರನೆಯವರು ಬಂದು ಬೇಳೆ ಬೇಯಿಸಿಕೊಳ್ಳಲು ಅವಕಾಶ ದೊರೆಯು ವುದು.

ರೈತ ಪರ ಕಾಳಜಿಯಿದ್ದರೆ ವಿರೋಧ ಪಕ್ಷಗಳೆಲ್ಲ ಜತೆಯಾಗಿ ರೈತರ ಬೇಡಿಕೆಯನ್ನು ಬೆಂಬಲಿಸಿ ಸರಕಾರದ ಜತೆಗೆ ಸಂವಹನ ಕೊಂಡಿಯಾಗುವ ಜವಾಬ್ದಾರಿ ತೆಗೆದುಕೊಳ್ಳಲಿ. ತಮ್ಮದೇ ಪ್ರಣಾಳಿಕೆಯಲ್ಲಿ ಹೇಳಿಕೊಂಡ ಅಂಶಗಳನ್ನೇ ವಿರೋಧಿಸುವ ವಿರೋಧ ಪಕ್ಷಗಳ ನಿಲುವೇ ಹಾಸ್ಯಾಸ್ಪದ. ಹೆಚ್ಚಿನವರು ಸರಕಾರದ ವಿರುದ್ಧದ ತಮ್ಮ ಹಗೆತನ ಹೊರಹಾಕಲು, ಇಲ್ಲವೇ ವಿದೇಶಿ
ಶಕ್ತಿಗಳ ಕೈಗೊಂಬೆಗಳಾಗಿ ರೈತರ ಹೆಗೆಲೇರಿದ, ಮ(ಣಿ)ನಿ ಶಂಕರರು!

ಸೂಕ್ತ ಬೇಡಿಕೆಗಳಿಗಾಗಿ ಆರಂಭಗೊಂಡ ಹೋರಾಟ, ತಂತಮ್ಮ ಬೇಳೆ ಬೇಯಿಸಿಕೊಳ್ಳುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮಯಸಾಧಕ ದುರುಳರ ಹಿಡಿತಕ್ಕೆ ಸಿಕ್ಕಿ ನುಜ್ಜುಗುಜ್ಜಾಗಿದ್ದು ಬಹುದೊಡ್ಡ ದುರಂತ. ಸಮರ್ಥರ ಉಳಿವು ಜಗದ ನಿಯಮ. ಭಿನ್ನಾಭಿಪ್ರಾಯ ಮರೆತು ರೈತ ಸಂಘಟನೆಗಳು ಸಮಾನ ಧ್ಯೇಯೋದ್ಧೇಶ ಕಂಡುಕೊಳ್ಳಬೇಕು. ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ನಮ್ಮಂತ ಗ್ರಾಹಕರೂ ಸ್ಥಳೀಯವಾಗಿ ರೈತರು ಬೆಳೆದ ವಸ್ತುಗಳನ್ನು ಸೂಕ್ತ ಬೆಲೆ ಕೊಟ್ಟು ಖರೀದಿಸಿ ಬೆಂಬಲಿಸಬೇಕು.

ಸ್ಥಳೀಯ ಬೆಳೆಗಳಿಗೆ ಬೆಲೆ ಹೆಚ್ಚಂತಲೊ, ಗುಣಮಟ್ಟ ಸಿಗುತ್ತಿಲ್ಲವೆಂತಲೋ, ದೊಡ್ಡ ದೊಡ್ಡ ಅಂಗಡಿಗಳಲ್ಲಿ ಸ್ಥಳೀಯವಲ್ಲದ
ಉತ್ಪನ್ನಗಳನ್ನು ಖರೀದಿಸುವುದು ನಿಲ್ಲಿಸಬೇಕು. ಮಾವು ಬೆಳೆಯದ ಸಮಯದಲ್ಲಿ ಮಾವು ಬೇಕೆಂದು ಚೈನಾದ್ದೋ, ಥೈಲ್ಯಾಂಡ್‌ದೋ ಮಾವು, ಸೇಬು ಹುಡುಕುವ ನಾವೂ ಕೂಡಾ ಸ್ಥಳೀಯ ರೈತರ ದುಸ್ಥಿತಿಗೆ ಕಾರಣರೆನಿಸುವುದಿಲ್ಲವೇ?
ಸರಕಾರ ಮತ್ತು ರೈತರು ಇಬ್ಬರೂ ಹಠಮಾರಿ ನಿಲುವು ಬಿಟ್ಟು ಸಾಧಕ ಬಾಧಕ ಚಿಂತಿಸಿ, ಶ್ರಮಿಕರ ಮತ್ತು ದೇಶದ ಬೆಳವಣಿಗೆಗೆ ಹಿತಕರವಾದ ದಾರಿ ಹಿಡಿಯಬೇಕು.

ಹಾಗಲ್ಲದೆ ಅಂಬಾನಿ, ಅದಾನಿಯಂತ ಕಂಪನಿಗಳು ತಿಂದು ಮುಗಿಸುತ್ತಾರೆ ಎಂಬ ವಿಷಮ ಕಲ್ಪನೆಯೊಂದೇ ಇಟ್ಟುಕೊಂಡರೆ, ದೇಶಿಯ ಉದ್ಯಮಿಗಳನ್ನೂ ಬಿಟ್ಟು ಅಂತಾರಾಷ್ಟ್ರೀಯ ಉದ್ಯಮಿಗಳ ಕೈಗೆ ನಮ್ಮ ಹಿಡಿತ ಕೊಟ್ಟು ತಲೆ ಚಚ್ಚಿಕೊಳ್ಳುವ ಕಾಲ
ಬಂದಿತಷ್ಟೇ!

Leave a Reply

Your email address will not be published. Required fields are marked *

error: Content is protected !!