Sunday, 8th September 2024

ಒಂದು ರಾಷ್ಟ್ರ, ಒಂದು ಚುನಾವಣೆ ಕಾರ್ಯಸಾಧುವೇ ?

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪ್ರಕ್ರಿಯೆಗಳು ಬಹುಮುಖ್ಯ ಪಾತ್ರವಹಿಸುತ್ತದೆ. ದೇಶ ಅಥವಾ ರಾಜ್ಯವನ್ನು ಯಾರು ಆಳಬೇಕು ಎನ್ನುವ ಜನಾದೇಶ ಚುನಾವಣೆ ಮೂಲಕ ಮಾತ್ರ ಸಾಧ್ಯ.

ಆದ್ದರಿಂದ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ, ಮತದಾನಕ್ಕೆ ತನ್ನದೇಯಾದ ಮಹತ್ವವಿದೆ. ಈ ವ್ಯವಸ್ಥೆ ಯನ್ನು ಸುಧಾರಿಸಲು ವಿಶ್ವದ ಹಲವು ದೇಶಗಳು ಆಗಿದ್ದಾಂಗೆ ಬದಲಾವಣೆ, ಆ ಮಾರ್ಪಾಡು ಹಾಗೂ ಅಪ್‌ಗ್ರೇಡ್ ಮಾಡುವುದು ನಿರಂತರ ಪ್ರಕ್ರಿಯೆ. ಅದರಲ್ಲಿಯೂ ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಸಲೀಸಾಗಿ ನಡೆಸುವುದು ಸುಲಭದ ಕೆಲಸವಲ್ಲ. ಆದ್ದರಿಂದ ಚುನಾವಣಾ ಆಯೋಗ, ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳೊಂದಿಗೆ
ಚುನಾವಣೆ ನಡೆಸುತ್ತಿದೆ.

ಕೆಲವು ದಿನಗಳಿಂದ ಚುನಾವಣೆಗೆ ಸಂಬಂಧಿಸಿದ ಮಹತ್ವದ ಬದಲಾವಣೆಗೆ ಕೇಂದ್ರ ಸರಕಾರ ಮುಂದಾಗಿದೆ. ಈ ಘೋಷಣೆ ಬಿಜೆಪಿ ಚುನಾವಣಾ ಪ್ರಣಾಳಿಕೆಯ ಒಂದು ಪ್ರಮುಖ ಅಂಶವಾಗಿತ್ತು. ಆದರೆ ಚುನಾವಣಾ ಬಳಿಕ ಈ ವಿಷಯದ ಬಗ್ಗೆ ಹೆಚ್ಚು ಚರ್ಚೆಯಾ ಗಿರಲಿಲ್ಲ. ಆದರೆ ಕೆಲವು ದಿನಗಳ ಹಿಂದೆ ನಡೆದ ಪೀಠಾಸೀನಾಧಿಕಾರಿಗಳ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪುನಃ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಧ್ವನಿ ಎತ್ತಿದ್ದಾರೆ.

ಇದರೊಂದಿಗೆ ಎಲ್ಲ ರಾಜ್ಯಗಳಲ್ಲಿಯೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಧಾನಮಂಡಲ ಅಧಿವೇಶನದಲ್ಲಿಯೂ ಈ ಬಗ್ಗೆ ಚರ್ಚಿಸಬೇಕು ಎನ್ನುವ ಸಲಹೆಯನ್ನು ಮೋದಿ ಅವರು ನೀಡಿದ್ದಾರೆ. ಇದರ ಭಾಗವಾಗಿ ರಾಜ್ಯದಲ್ಲಿ ಆರಂಭವಾಗಿರುವ ಚಳಿಗಾಲದ ಅಧಿವೇಶನದ ಕೊನೆಯ ಎರಡು ದಿನ ವಿಧಾನಸಭೆಯಲ್ಲಿ ವಿಶೇಷ ಚರ್ಚೆಗೆ ಅವಕಾಶ ನೀಡಲಾಗಿದೆ.

ಮೇಲ್ನೋಟಕ್ಕೆ ರಾಷ್ಟ್ರಕ್ಕೊಂದು ಚುನಾವಣೆ ಎನ್ನುವ ಕಲ್ಪನೆ ಬಹುದೊಡ್ಡ ಸಮಸ್ಯೆ ಏನಲ್ಲ. ಆದರೆ ಇದನ್ನು Ground
level ಗೆ ಇಳಿದು ನೋಡಿದರೆ ಅಥವಾ ರಾಜಕೀಯವಾಗಿ ನೋಡಿದರೆ ಇದು ಭಾರಿ ಜಟಿಲ ವಿಷಯ ಎನ್ನುವುದರಲ್ಲಿ ಅನುಮಾನ ವಿಲ್ಲ. ಬಿಜೆಪಿ ನಾಯಕರು ಹೇಳುತ್ತಿರುವಂತೆ ಇದನ್ನು ಕಾರ್ಯಗತಗೊಳಿಸುವುದು ಸುಲಭದ ವಿಷಯವಲ್ಲ ಎನ್ನುವುದು ಸ್ಪಷ್ಟ.
ಒಂದು ರಾಷ್ಟ್ರ ಒಂದು ಚುನಾವಣೆಯ ಸಾಧಕ, ಬಾಧಕವನ್ನು ನೋಡುವ ಮೊದಲು, ಈ ಪರಿಕಲ್ಪನೆಯಲ್ಲಿ ಏನು ಎನ್ನುವು ದನ್ನು ಅರಿಯಬೇಕು.

ಲೋಕಸಭಾ ಹಾಗೂ ಎಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆ ಒಟ್ಟಿಗೆ ನಡೆಯುವುದಕ್ಕೆ ಹೀಗೆಂದು ವ್ಯಾಖ್ಯಾನಿಸಲಾಗಿದೆ. ಹಾಗೆ
ನೋಡಿದರೆ, ದೇಶಕ್ಕೆ ಸ್ವಾತಂತ್ರ್ಯದ ನಂತರ ಎದುರಾದ ಚುನಾವಣೆಗಳು ಇದೇ ಮಾನದಂಡದಲ್ಲಿ ನಡೆದಿದ್ದವು. ಹತ್ತು ಹಲವು ಸುತ್ತಿನಲ್ಲಿ ನಡೆದರೂ, ಒಂದೇ ಬಾರಿಗೆ ಚುನಾವಣಾ ಫಲಿತಾಂಶ ಹೊರಬಂದಿತ್ತು. ಸ್ವಾತಂತ್ರ್ಯ ನಂತರ ನಡೆದ 1952, 1957, 1962 ಹಾಗೂ 1967ರ ಚುನಾವಣೆ ಮಾದರಿಯಲ್ಲಿ ನಡೆದಿತ್ತು. ಆದರೆ 1968-69ರಲ್ಲಿ ಈ ಸಂಪ್ರದಾಯ ಮುರಿದು, ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳು ನಡೆಯುತ್ತಾ ಬಂದವು.

ಬಳಿಕವೇ ಎರಡು ಚುನಾವಣೆಗಳನ್ನು ಪ್ರತ್ಯೇಕವಾಗಿ ನಡೆಸಲು ಚುನಾವಣಾ ಆಯೋಗ ಶುರುಮಾಡಿತು. ಚುನಾವಣೆಗಳು ಪ್ರತ್ಯೇಕವಾಗಿ ನಡೆಯುವುದಕ್ಕೂ ಹಲವು ಕಾರಣಗಳಿದ್ದವು. ಪ್ರಮುಖವಾಗಿ 1967ರ ಚುನಾವಣೆಯಲ್ಲಿ ಕೆಲ ರಾಜ್ಯಗಳಲ್ಲಿ ಪಕ್ಷ ಗಳಿಗೆ ಸ್ಪಷ್ಟಬಹುಮತ ಬಂದಿರಲಿಲ್ಲ. ಆದ್ದರಿಂದ ಆ ರಾಜ್ಯಗಳಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಈ ರೀತಿ ಸರಕಾರ ವನ್ನು ರಚಿಸಿದ ಪಕ್ಷಗಳು ಕೆಲ ದಿನಗಳಲ್ಲಿಯೇ ಮುನಿಸಿಕೊಂಡು, ಮೈತ್ರಿಯನ್ನು ಕಳಚಿಕೊಂಡು ಸರಕಾರ ಅತಂತ್ರಕ್ಕೆ
ಸಿಲುಕಿ ದವು. ಆ ಸಮಯದಲ್ಲಿ, ಅನಿವಾರ್ಯವಾಗಿ ಮರು ಚುನಾವಣೆ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು.

ಅಂದಿನಿಂದ ಲೋಕಸಭೆ ಹಾಗೂ ಅಲ್ಲಿನ ವಿಧಾನಸಭಾ ಚುನಾವಣೆ ಪ್ರತ್ಯೇಕವಾಗಿ ನಡೆಯಲು ಶುರುವಾಗಿ, ಅದೇ ಸಂಪ್ರದಾಯ ಮುಂದುವರಿದಿತ್ತು. ಆದರೀಗ ಬಿಜೆಪಿ ಸರಕಾರ ಪುನಃ ಒಂದು ರಾಷ್ಟ್ರ ಒಂದು ಚುನಾವಣೆ ನಡೆಸಲು ಉತ್ಸುಕತೆ ತೋರುತ್ತಿದೆ. ಆದರೆ ಇದನ್ನು ಜಾರಿಗೊಳಿಸುವುದರಿಂದ ಲಾಭ ಎಷ್ಟು ಇದೆಯೋ ಅಷ್ಟೇ ಸವಾಲುಗಳಿವೆ. ಅದರಲ್ಲಿಯೂ ಭಾರತದಂಥ
ಬೃಹತ್ ಪ್ರಜಾಪ್ರಭುತ್ವ ದೇಶದಲ್ಲಿ ಒಟ್ಟಿಗೆ ಚುನಾವಣೆ ನಡೆದರೆ ಅದಕ್ಕೆ ಬೇಕಿರುವ ಸಿದ್ಧತೆಯೂ ಅಷ್ಟೇ ಬೃಹತ್ ಪ್ರಮಾಣದಲ್ಲಿ ಬೇಕಿರುತ್ತದೆ. ಅದಕ್ಕೆ ನಮ್ಮ ಸರಕಾರ ಸಿದ್ಧತೆ ನಡೆಸಿಕೊಂಡಿವೆಯೇ ಎನ್ನುವುದಕ್ಕೆ ಸ್ಪಷ್ಟ ಉತ್ತರವಿಲ್ಲ.

ಒಂದು ರಾಷ್ಟ್ರ, ಒಂದು ಚುನಾವಣೆಯ ಲಾಭವನ್ನು ನೋಡುವ ಮೊದಲು ಸವಾಲುಗಳನ್ನು ನೋಡುವುದಾದರೆ, ಪ್ರಮುಖವಾಗಿ 125 ಕೋಟಿಗೂ ಹೆಚ್ಚಿರುವ ಜನಸಂಖ್ಯೆಗೆ ಒಂದೇ ಬಾರಿಗೆ ಚುನಾವಣೆ ನಡೆಸಿದರೆ, ಅದಕ್ಕೆ ಬೇಕಾಗುವ ಮಾನವ ಸಂಪನ್ಮೂಲ ವೂ ಹೆಚ್ಚಾಗುತ್ತದೆ. ಪ್ರತಿ ಚುನಾವಣೆ ನಡೆದಾಗ ಮತಗಟ್ಟೆಯಲ್ಲಿರುವ ಅಧಿಕಾರಿಗಳು ಮಾತ್ರವಲ್ಲದೇ, ಲಕ್ಷಾಂತರ ಮಂದಿ ರಕ್ಷಣಾ ಸಿಬ್ಬಂದಿ, ವಿಚಕ್ಷಣಾ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಹಲವಾರು ಮಂದಿ ಅಗತ್ಯವಿರುತ್ತದೆ. ಸಾಮಾನ್ಯ ಮತಗಟ್ಟೆ
ಯಲ್ಲಿಯೂ ಕನಿಷ್ಠ ಐದು ಮಂದಿ ಸಿಬ್ಬಂದಿ, ನಾಲ್ಕೈದು ರಕ್ಷಣಾ ಸಿಬ್ಬಂದಿ ಅಗತ್ಯವಿರುತ್ತದೆ.

ಆದರೆ ಒಂದೇ ಬಾರಿಗೆ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳು ನಡೆದಾಗ, ಕನಿಷ್ಠ ಒಂದು ಬೂತ್‌ಗೆ ಏಳೆಂಟು ಮಂದಿ
ಸಿಬ್ಬಂದಿ, ರಕ್ಷಣಾ ಸಿಬ್ಬಂದಿಗಳು ಹೆಚ್ಚಾಗಬೇಕಾಗುತ್ತದೆ. ಒಮ್ಮೆಗೆ ಚುನಾವಣೆಯನ್ನು ಮಾಡಿದಾಗ, ರಕ್ಷಣಾ ಸಿಬ್ಬಂದಿಯನ್ನು ಹೊಂದಿಸುವುದೇ ಚುನಾವಣಾ ಆಯೋಗ ಹಾಗೂ ಸರಕಾರಕ್ಕೆ ಬಹುದೊಡ್ಡ ಸಮಸ್ಯೆಯಾಗುತ್ತದೆ. ಹಂತ – ಹಂತವಾಗಿ ಚುನಾವಣೆಯನ್ನು ನಡೆಸಿದರೂ, ರಕ್ಷಣಾ ಸಿಬ್ಬಂದಿ ಅದರಲ್ಲಿಯೂ, ಬಿಎಸ್‌ಎಫ್, ಅರೆಸೇನಾ ಪಡೆಗಳನ್ನು ರವಾನಿಸುವುದು ಕಠಿಣವಾಗಲಿದೆ.

ಇದರೊಂದಿಗೆ ರಾಜಕೀಯವಾಗಿ ಈ ರೀತಿ ಎರಡು ಚುನಾವಣೆಗಳು ನಡೆದರೆ, ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಹೊಡೆತ ಬೀಳು ವುದು ಪ್ರಾದೇಶಿಕ ಪಕ್ಷಗಳಿಗೆ. ಹೌದು, ಸಾಮಾನ್ಯವಾಗಿ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ವಿಷಯಕ್ಕಿಂತ ಹೆಚ್ಚಾಗಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಷಯಗಳನ್ನಿಟ್ಟುಕೊಂಡೇ ಪ್ರಚಾರ, ಪ್ರಣಾಳಿಕೆ ಆಗುವುದು. ಆ ಸಮಯದಲ್ಲಿ ಪ್ರಾದೇಶಿಕ ಪಕ್ಷಗಳಿಗಿಂತ ರಾಷ್ಟ್ರೀಯ ಪಕ್ಷಗಳಿಗೆ ಹೆಚ್ಚಿನ ಲಾಭವಿರುತ್ತದೆ. ಉದಾಹರಣೆಗೆ ಬಿಜೆಪಿ ರಾಷ್ಟ್ರೀಯತೆ ವಿಷಯವನ್ನಿಟ್ಟು ಕೊಂಡು,
ಕಾಂಗ್ರೆಸ್ ಕಾಶ್ಮೀರ ಸಮಸ್ಯೆಯನ್ನಿಟ್ಟುಕೊಂಡು ಚುನಾವಣೆ ನಡೆಸುತ್ತವೆ. ಈ ರೀತಿ ರಾಷ್ಟ್ರೀಯತೆ ವಿಷಯದ ಮೇಲೆ ಚುನಾವಣೆ ನಡೆಯುವ ಸಮಯದಲ್ಲಿ, ಜೆಡಿಎಸ್ ಪ್ರಾದೇಶಿಕ ವಿಷಯವನ್ನಿಟ್ಟುಕೊಂಡು ಚುನಾವಣೆಗೆ ಹೋದರೆ, ಮತದಾರ ಸಹಜವಾ ಗಿಯೇ ರಾಷ್ಟ್ರೀಯ ಪಕ್ಷಗಳತ್ತ ಮುಖಮಾಡುತ್ತಾನೆ.

ಅದರಲ್ಲಿಯೂ ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ಶೇ.77ರಷ್ಟು ಮಂದಿ, ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆದರೆ, ಒಂದೇ ಪಕ್ಷಕ್ಕೆ ಮತ ನೀಡುತ್ತಾರೆ ಎನ್ನುವ ಅಂಶ ಬಹಿರಂಗವಾಗಿದೆ. ಇದರಿಂದ ಪ್ರಾದೇಶಿಕ ಪಕ್ಷಗಳಿಗೆ ಲೋಕ ಸಭಾ ಚುನಾವಣಾ ನೆಪದಲ್ಲಿ ವಿಧಾನಸಭೆಯಲ್ಲಿಯೂ ಸ್ಥಾನಗಳನ್ನು ಕಳೆದುಕೊಳ್ಳುವ ಆತಂಕವಿದೆ. ಆದ್ದರಿಂದಲೇ ಬಹುತೇಕ ಪಕ್ಷಗಳು, ಪ್ರಧಾನಿ ನರೇಂದ್ರ ಮೋದಿ ಅವರ ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳುತ್ತಿಲ್ಲ.

ಇದಿಷ್ಟೇ ಅಲ್ಲದೇ, ದೇಶದಲ್ಲಿ ಒಟ್ಟು 543 ಸಂಸದರ ಕ್ಷೇತ್ರ ಹಾಗೂ 31ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 4120 ವಿಧಾನಸಭಾ ಕ್ಷೇತ್ರಗಳಿವೆ. ಈ ಎಲ್ಲವಕ್ಕೂ ಒಂದೇ ಬಾರಿಗೆ ಚುನಾವಣೆ ನಡೆದು, ಮತ ಎಣಿಕೆಗೆ ಕೂತರೆ ಸ್ಪಷ್ಟ ಫಲಿತಾಂಶ ಬರುವುದಕ್ಕೆ ದಿನಗಟ್ಟಲೇ ಆದರೂ ಅಚ್ಚರಿಯಿಲ್ಲ. 2018ರಲ್ಲಿ ನಡೆದ ಲೋಕಸಭಾ ಚುನಾವಣೆ ಒಂದನೇ ಏಳು ಹಂತದಲ್ಲಿ ನಡೆಸಲಾಗಿತ್ತು. ಇನ್ನು ಲೋಕಸಭಾ ಹಾಗೂ ಎಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಒಟ್ಟಿಗೆ ನಡೆದರೆ ಎಷ್ಟು ಸುತ್ತಾಗ ಬಹುದು ಎನ್ನುವುದನ್ನು ಯೋಚಿಸಬೇಕಾಗುತ್ತದೆ.

ಈ ಎಲ್ಲ ಸವಾಲುಗಳು ಒಂದು ಭಾಗವಾದರೆ, ಇನ್ನೊಂದು ಬಹುದೊಡ್ಡ ಸವಾಲು ಎದುರಾಗುವುದು ಅಧಿಕಾರವನ್ನು ಕಡಿತ ಗೊಳಿಸುವಾಗ. ಲೋಕಸಭೆ ಹಾಗೂ ಇತರ ವಿಧಾನಸಭೆ ಚುನಾವಣೆಗಳು ವಿವಿಧ ಸಮಯದಲ್ಲಿ ನಡೆಯುವುದರಿಂದ, ಒಂದೇ ಬಾರಿಗೆ ಚುನಾವಣೆ ನಡೆಯಬೇಕಾದರೆ, ಲೋಕಸಭೆ ಅಥವಾ ವಿಧಾನಸಭೆ ಅವಧಿಯಲ್ಲಿ ಒಂದನ್ನು ಕಡಿತಗೊಳಿಸಬೇಕು. ಒಂದೆರೆಡು ವರ್ಷ ಅಧಿಕಾರ ಇರುವಾಗ ಯಾವ ಪಕ್ಷವೂ, ತಮ್ಮ ಅಧಿಕಾರವನ್ನು ಮೊಟಕುಗೊಳಿಸಿ ಚುನಾವಣೆಗೆ ಗುವುದಿಲ್ಲ.

ಇದೇ ರೀತಿ ಲೋಕಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗುವುದು ಸುಲಭದ ಮಾತಲ್ಲ. ಇದರೊಂದಿಗೆ ಎದುರಾಗ ಬಹುದಾದ ಮತ್ತೊಂದು ಸವಾಲು ಎಂದರೆ, ಸ್ಪಷ್ಟ ಬಹುಮತಬಾರದೇ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುವುದು ಸಹಜ. ಕೆಲ ದಿನಗಳ ಬಳಿಕ ಎರಡು ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಸರಕಾರ ಅಲ್ಪಮತಕ್ಕೆ ಕುಸಿದು ಮಧ್ಯಂತರ ಚುನಾವಣೆ ಎದುರಾದರೆ, ಆ ಒಂದು ರಾಜ್ಯಕ್ಕೆ ಚುನಾವಣೆ ನಡೆದು, ಬಳಿಕ ಪುನಃ ಸಾರ್ವತ್ರಿಕ ಚುನಾವಣೆ ವೇಳೆ ಮತ್ತೊಂದು ಚುನಾವಣೆ ನಡೆಯಬೇಕಾಗುತ್ತದೆ. ಇದಕ್ಕೆ ರಾಜಕೀಯ ಪಕ್ಷಗಳು ಒಪ್ಪುವುದಿಲ್ಲ.

ಇದನ್ನು ಯಾವ ರೀತಿ ನಿಭಾಯಿಸುವುದು ಎನ್ನುವುದು ಸಹ ಇದೀಗ ಮುಂದಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಈ ಎಲ್ಲ ಸಾಲು ಸಾಲು ಸವಾಲುಗಳ ನಡುವೆಯೂ, ಒಂದು ರಾಷ್ಟ್ರ – ಒಂದು ಚುನಾವಣೆಯಿಂದ ಹಲವು ಸಕಾರಾತ್ಮಕ ವಿಷಯಗಳಿವೆ. ಪ್ರಮುಖವಾಗಿ ಯಾವುದೇ ಒಂದು ಚುನಾವಣೆ ನಡೆದರೆ, ಭಾರಿ ದೊಡ್ಡ ಪ್ರಮಾಣದ ಅನುದಾನವನ್ನು ಅದಕ್ಕೆ ಆಯಾ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ನೀಡಬೇಕಾಗುತ್ತದೆ. ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆದಾಗ ಎರಡೆರಡು ಬಾರಿ ಅನುದಾನ ನೀಡಬೇಕಾಗುತ್ತದೆ.

ಮೂಲವೊಂದರ ಪ್ರಕಾರ 2009ರ ಲೋಕಸಭಾ ಚುನಾವಣೆಗೆ 1483 ಕೋಟಿ ರು.ಗಳನ್ನು ಖರ್ಚು ಮಾಡಿತ್ತು. ಅದೇ 2014ರ ವೇಳೆಗೆ ಈ ಖರ್ಚು 3870 ಕೋಟಿ ರು.ಗೆ ಏರಿಕೆಯಾಗಿದೆ. ಆದರೆ ಇದಕ್ಕೂ ಒಂದು ವರ್ಷ ಮೊದಲು ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಗೆ 500 ಕೋಟಿ ರು. ಗೂ ಹೆಚ್ಚು ಹಣ ವ್ಯಯಿಸಲಾಗಿತ್ತು. ಈ ರೀತಿ ಎರಡು ಬಾರಿ ಚುನಾವಣೆ ನಡೆಸುವ ಬದಲು ಒಂದೇ ಬಾರಿ ನಡೆಸಿದಾಗ, ವ್ಯಯಿಸುವ ಖರ್ಚಿ ಮೊತ್ತ ಇಳಿಕೆಯಾಗಲಿದೆ ಎನ್ನುವುದು ತಜ್ಞರ ಲೆಕ್ಕಾಚಾರ. ಹಣ ಉಳಿತಾಯ ಒಂದು ಭಾಗವಾದರೆ, ಮತ್ತೊಂದು ಮಹತ್ವದ ಸಂಗತಿಯೆಂದರೆ, ಸುಲಲಿತ ಆಡಳಿತ.

ಹೌದು, ಯಾವುದೇ ಚುನಾವಣೆ ಘೋಷಣೆಯಾದರೂ, ನೀತಿ ಸಂಹಿತೆಯ ಹೆಸರಲ್ಲಿ ಸರಿಸುಮಾರು ಒಂದರಿಂದ ಒಂದುವರೆ
ತಿಂಗಳು ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಂತೆ ನಿರ್ಬಂಧ ಹೇರಲಾಗುತ್ತದೆ. ವರ್ಷಕ್ಕೊಮ್ಮೆ, ಎರಡು ವರ್ಷಕ್ಕೊಮ್ಮೆ ಈ ರೀತಿ ಚುನಾವಣೆಯ ಹೆಸರಲ್ಲಿ ನೀತಿ ಸಂಹಿತೆಯನ್ನು ಘೋಷಿಸಿದರೆ, ಆಡಳಿತ ನಡೆಸುವ ಪಕ್ಷಕ್ಕೆ ಅಭಿವೃದ್ಧಿ ಕಾರ್ಯ ಮಾಡಲು ಆಗ್ಗಾಗೆ ಸಮಸ್ಯೆಯಾಗುತ್ತದೆ.

ಇದರೊಂದಿಗೆ ಚುನಾವಣೆ ಘೋಷಣೆಯಾಗುವ ಕೆಲ ತಿಂಗಳ ಹಿಂದೆ ಹಾಗೂ ಚುನಾವಣೆ ಮುಗಿದ ಕೆಲ ತಿಂಗಳ ಕಾಲ ಸರಕಾರ ಅಧಿಕಾರಿಗಳನ್ನು, ಚುನಾವಣಾ ಕರ್ತವ್ಯದ ಮೇಲೆ ಆಯೋಗಕ್ಕೆ ನಿಯೋಜನೆ ಮಾಡಲಾಗುತ್ತದೆ. ಇದರಿಂದ ಮಾತೃ ಇಲಾಖೆ ಯಲ್ಲಿ, ಕೆಲಸಗಳು ಬಾಕಿ ಉಳಿಯುತ್ತಾ ಹೋಗುತ್ತದೆ. ಒಂದೇ ಬಾರಿಗೆ ದೇಶದೆಲ್ಲೆಡೆ ಚುನಾವಣೆ ನಡೆದರೆ, ಈ ಎಲ್ಲವನ್ನು ತಪ್ಪಿಸ ಬಹುದು ಎನ್ನುವ ಲೆಕ್ಕಾಚಾರದಲ್ಲಿ ಅನೇಕರಿದ್ದಾರೆ.

ಒಂದೇ ಬಾರಿಗೆ ದೇಶದೆಲ್ಲೆಡೆ ಚುನಾವಣೆ ನಡೆಯುವುದರಿಂದ ಅಭಿವೃದ್ಧಿ ಕಾರ್ಯಗಳು ಮಾತ್ರವಲ್ಲದೇ, ಕಾರ್ಯಾಂಗದಲ್ಲಿರುವ ಅಧಿಕಾರಿಗಳು ತಮ್ಮ ಮಾತೃ ಸಂಸ್ಥೆಗೆ ಕೆಲಸ ಮಾಡಬಹುದು. ಇದರೊಂದಿಗೆ ಆಡಳಿತ ನಡೆಸುವ ಸರಕಾರಗಳು, ಜನಪರ ಯೋಜನೆಯ ಹೆಸರಲ್ಲಿ ಅನಾವಶ್ಯಕ ಯೋಜನೆಗಳನ್ನು ಘೋಷಿಸುವುದನ್ನು ತಪ್ಪಿಸಬಹುದು. ಕಳೆದ ಕೆಲ ವರ್ಷಗಳ ಹಿಂದೆ ಚುನಾವಣೆಯಲ್ಲಿ ಮತದಾರ ರನ್ನು ಒಲಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿಯೇ, ತಮಿಳುನಾಡಿನಲ್ಲಿ ಜಯಲಲಿತಾ ಅವರು ಉಚಿತ ಕುಕ್ಕರ್, ಟಿವಿಯನ್ನು ಘೋಷಿಸುವ ಮೂಲಕ ಸೆಳೆಯುವ ಕೆಲಸವನ್ನು ಮಾಡಿದ್ದರು. ಇದರಿಂದ ರಾಜ್ಯದ ಜನರ ಅಭಿವೃದ್ಧಿ ಹೆಸರಲ್ಲಿ, ಸರಕಾರದ ಖಜಾನೆ ಖಾಲಿಮಾಡುವ ಕೆಲಸವನ್ನು ಸರಕಾರಗಳು ಮಾಡುತ್ತವೆ.

ಮೊದಲೇ ಹೇಳಿದಂತೆ ಸ್ವಾತಂತ್ರ್ಯದ ಬಳಿಕ ಸುಮಾರು ಎರಡು ದಶಕದ ಕಾಲ ಭಾರತದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆಯಲ್ಲಿ ಚುನಾವಣೆ ನಡೆದಿತ್ತು. ಸ್ವೀಡನ್, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಜರ್ಮನಿ, ಸ್ಪೇನ್‌ನಲ್ಲಿ ಈಗಲೂ ಇದೇ ರೀತಿ ಚುನಾವಣೆ ನಡೆಯುತ್ತದೆ. ಆದರೆ ಅಲ್ಲಿನ ಜನಸಂಖ್ಯೆಗೂ ಭಾರತದ ಜನಸಂಖ್ಯೆ ಹಾಗೂ ವಿಸ್ತೀರ್ಣಕ್ಕೂ ಅಜಗಜಾಂತರವಿರು ವುದು ಗಮನಿಸಬೇಕಾಗುತ್ತದೆ.

ಬಿಜೆಪಿ ನಾಯಕರು ಈ ರೀತಿಯ ಚುನಾವಣೆಗೆ ಆಸಕ್ತಿ ವಹಿಸುತ್ತಿರುವುದು ಸಹ, ರಾಜಕೀಯ ಕಾರಣಕ್ಕೆ ಎಂದರೆ ತಪ್ಪಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ಚುನಾವಣೆಯನ್ನು ಗೆಲ್ಲುವುದು ಸುಲಭವಾಗಿದೆ. ಇದರೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಜನ ಬೆಂಬಲವಿರುತ್ತದೆ. ವಿಧಾನಸಭಾ ಚುನಾವಣೆ ಗಿಂತ ಹೆಚ್ಚು ವಿಷಯಗಳು ಲೋಕಸಭಾ ಚುನಾವಣೆಯಲ್ಲಿ ಜನರನ್ನು ರೀಚ್ ಆಗುವುದು ಸುಲಭ. ಆದ್ದರಿಂದ 2014 ಲೋಕಸಭಾ ಚುನಾವಣೆ ಆದಾಗಿನಿಂದಲೂ ಒಂದೇ ರಾಷ್ಟ್ರ ಒಂದು ಚುನಾವಣೆ ಎನ್ನುವ ಮಾತನ್ನು ಹೇಳಿಕೊಂಡು ಬರುತ್ತಿದೆ.

ಆದರೆ ಒಂದು ವೇಳೆ ಇದು ಜಾರಿಯಾದರೆ, ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳಿಗೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ಯಿದೆ. ಆದ್ದರಿಂದ ಬಿಜೆಪಿ ಹೊರತು ಇನ್ಯಾವ ಪಕ್ಷಗಳು, ಈ ಯೋಜನೆಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ದೇಶದಲ್ಲಿ ಚರ್ಚಾ ವಿಷಯವಾಗಿರುವ ‘ಒಂದು ರಾಷ್ಟ್ರ ಒಂದು ಚುನಾವಣೆ’ ಜಾರಿಗೊಳಿಸುವುದಕ್ಕೆ ಹಲವು ಸವಾಲುಗಳಿವೆ. ಆದರೆ ದೇಶದ ಏಕತೆ, ಭವಿಷ್ಯದ ದೃಷ್ಟಿಯಿಂದ ಈ ನಿರ್ಣಯ ಅನಿವಾರ್ಯ ಎನ್ನುವ ಮಾತನ್ನು ಬಿಜೆಪಿ ಹೇಳುತ್ತಿದೆ. ಆದರೆ ಮೇಲೆ ಹೇಳಿರುವ ಸಾಧಕ – ಬಾಧಕಗಳ ಬಗ್ಗೆ ಪಕ್ಷಾತೀತವಾಗಿ ಆಲೋಚಿಸಿ, ನಿರ್ಣಯ ಕೈಗೊಳ್ಳುವುದು ಸೂಕ್ತ.

Leave a Reply

Your email address will not be published. Required fields are marked *

error: Content is protected !!