Tuesday, 27th February 2024

ಏಕಕಾಲಿಕ ಚುನಾವಣೆ ಸುತ್ತಮುತ್ತ

ಅಶ್ವತ್ಥಕಟ್ಟೆ

ranjith.hoskere@gmail.com

ಹಾಗೆ ನೋಡಿದರೆ, ಒಂದು ದೇಶ-ಒಂದು ಚುನಾವಣೆ ಎನ್ನುವುದು ಈಗ ಎದ್ದಿರುವ ಚರ್ಚೆಯಲ್ಲ, ಇದು ಹಲವು ವರ್ಷಗಳಿಂದಲೂ ನಡೆಯುತ್ತಲೇ ಬಂದಿದೆ.
ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಒಂದೇ ಬಾರಿಗೆ ನಡೆಯುವುದರಿಂದ ಆಡಳಿತಾತ್ಮಕವಾಗಿರುವ ಹಲವು ಸಮಸ್ಯೆಗಳು ದೂರವಾಗುತ್ತವೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಇಂಥ ಚುನಾವಣೆಗಳು ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಹಲವು ರೀತಿಯಲ್ಲಿ ಬದಲಾಗಿರುವುದನ್ನು ದೇಶ ಕಂಡಿದೆ. ಈ ಎಲ್ಲ ಬದಲಾವಣೆ, ಮಾರ್ಪಾಡುಗಳು ನಡೆದಿರುವುದು ನ್ಯಾಯಯುತವಾಗಿ ಜನಪ್ರತಿನಿಧಿಯ ಆಯ್ಕೆಯಾಗ ಬೇಕು ಎನ್ನುವ ಏಕೈಕ ಕಾರಣಕ್ಕೆ. ಇದೀಗ ಭಾರತದಲ್ಲಿ ಮತ್ತೊಂದು ಮಹತ್ವದ ಹಾಗೂ ಬಹುವರ್ಷದಿಂದ ಆಗಾಗ್ಗೆ ಚರ್ಚೆಯಾಗುತ್ತಲೇ ಇದ್ದ ‘ಒಂದು ದೇಶ; ಒಂದು ಚುನಾವಣೆ’ಯ ಪ್ರಸ್ತಾಪವನ್ನು ಕೇಂದ್ರ ಸರಕಾರ ಮುಂದಿಟ್ಟಿದೆ.

ಮುಂದಿನ ಐದಾರು ವರ್ಷದ ಬಳಿಕ ನಡೆಸಲು ಅದು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಪರ-ವಿರೋಧದ ಚರ್ಚೆಗಳು ದೊಡ್ಡ ಮಟ್ಟದಲ್ಲಿಯೇ ಆರಂಭಗೊಂಡಿವೆ. ಬಿಜೆಪಿಯ ಈ ನಡೆಯನ್ನು ಸಹಜವಾಗಿಯೇ ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ವಿರೋಧಿಸಿವೆ. ಇದಕ್ಕೆ ಈಗಾಗಲೇ ರಾಜಕೀಯ ಲೇಪಿತ ಹೇಳಿಕೆಗಳು ಬಹುದೊಡ್ಡ ಮಟ್ಟಿಗೆ ಹೊಮ್ಮುತ್ತಿವೆ. ಆರಂಭದಲ್ಲಿ, ೨೦೨೪ರ ಲೋಕಸಭಾ ಚುನಾವಣೆ ವೇಳೆಗೆ ಒಂದು ದೇಶ, ಒಂದು ಚುನಾವಣೆ ನಡೆಯತ್ತದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಬಳಿಕ, ೨೦೨೯ರ ವೇಳೆಗೆ ಇದನ್ನು ನಡೆಸಲಾಗುವುದು ಎಂದು ತಿಳಿದು ಬಂತು. ಹಾಗೆಂದ ಮಾತ್ರಕ್ಕೆ ಇದನ್ನು ಜಾರಿಗೊಳಿಸುವುದು ಹೇಳಿದಷ್ಟು ಸುಲಭವಲ್ಲ. ಈ ನಿಟ್ಟಿನಲ್ಲಿ ಸಾಂವಿಧಾನಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಲವು ಸಮಸ್ಯೆಗಳಿವೆ.

ಈ ಕಾರಣಕ್ಕಾಗಿಯೇ ಕೇಂದ್ರ ಸರಕಾರ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ವರದಿ ನೀಡುವಂತೆ ಹೇಳಿದ್ದು, ಈಗಾಗಲೇ ಈ ಸಮಿತಿಯೂ ತನ್ನ ಕಾರ್ಯವನ್ನು ಆರಂಭಿಸಿದೆ. ಈ ಎಲ್ಲವೂ ಸಹಜ ಪ್ರಕ್ರಿಯೆ. ಸಮಿತಿಯ ವರದಿಯ ಬಳಿಕ ಸಾಂವಿಧಾನಿಕ ತಿದ್ದುಪಡಿಯಾಗ ಬೇಕಿರುವುದರಿಂದ ಅದಕ್ಕೆ ಸಂಸತ್ ಹಾಗೂ ವಿವಿಧ ರಾಜ್ಯಗಳ ಸದನಗಳಲ್ಲಿ ಅನುಮೋದನೆ ಪಡೆದುಕೊಳ್ಳಬೇಕಿರುವುದು ಕಾನೂನಾತ್ಮಕವಾಗಿ ನಡೆಯುವ ಪ್ರಕ್ರಿಯೆ. ಆದರೆ ಒಂದು ರಾಷ್ಟ್ರ, ಒಂದು ಚುನಾವಣೆಯ ಸಾಧಕ-ಬಾಧಕಗಳ ಬಗ್ಗೆ ಹಲವು ಚರ್ಚೆ ಗಳು ನಡೆಯುತ್ತಿವೆ.

ಮೊದಲಿಗೆ ಒಂದು ದೇಶ, ಒಂದು ಚುನಾವಣೆಯನ್ನು ಮಾಡಲು ಮುಂದಾಗಿರುವುದು ಏಕೆ ಎನ್ನುವ ಬಗ್ಗೆ ಗಮನಿಸಿ, ಬಳಿಕ ಸವಾಲುಗಳೇನು ಎನ್ನುವುದರ
ಬಗ್ಗೆ ಅವಲೋಕನ ಮಾಡಬಹುದು. ಹಾಗೆ ನೋಡಿದರೆ, ಒಂದು ದೇಶ-ಒಂದು ಚುನಾವಣೆ ಎನ್ನುವುದು ಈಗ ಎದ್ದಿರುವ ಚರ್ಚೆಯಲ್ಲ. ಹಲವು ವರ್ಷಗಳಿಂದಲೂ ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಬಂದಿವೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಒಂದೇ ಬಾರಿಗೆ ನಡೆಯುವುದರಿಂದ ಆಡಳಿತಾತ್ಮಕವಾಗಿರುವ ಹಲವು ಸಮಸ್ಯೆಗಳು ದೂರವಾಗುತ್ತವೆ. ಯಾವುದೇ ಚುನಾವಣೆ ನಡೆಯುವ ೪೫ ದಿನಗಳ ಮೊದಲು ನೀತಿ ಸಂಹಿತೆ ಜಾರಿಯಾಗುತ್ತದೆ. ಒಮ್ಮೆ ನೀತಿ ಸಂಹಿತೆ ಜಾರಿಯಾದರೆ, ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಿಲ್ಲ.

ಇದರೊಂದಿಗೆ ಪದೇಪದೆ ಚುನಾವಣೆ ನಡೆಯುವುದರಿಂದ, ಚುನಾವಣಾ ಪ್ರಕ್ರಿಯೆಗಳಿಗೆ ಸರಕಾರಗಳು ಹಣವನ್ನು ವ್ಯಯಿಸಬೇಕು. ಸಂಪನ್ಮೂಲಗಳ ಕ್ರೋಡೀಕರಣ ಸೇರಿದಂತೆ ಪ್ರತಿಯೊಂದು ಬಾಬತ್ತೂ ಬಹುದೊಡ್ಡ ಸವಾಲು. ೨೦೧೯ರ ಲೋಕಸಭಾ ಚುನಾವಣೆಗೆ ಕೇಂದ್ರ ಸರಕಾರ ಸುಮಾರು ೬೦ ಸಾವಿರ
ಕೋಟಿ ರು.ಗಳನ್ನು ವ್ಯಯಿಸಿದೆ ಎನ್ನುವ ಮಾತುಗಳಿವೆ. ಇದಾದ ಬಳಿಕ ರಾಜ್ಯವಾರು ಚುನಾವಣೆ ನಡೆದರೆ, ಆಯಾ ರಾಜ್ಯಗಳು ಭಾರಿ ಅನುದಾನವನ್ನು ಚುನಾವಣೆಗೆಂದು ಮೀಸಲಿಡಬೇಕು. ಆದರೆ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯನ್ನು ಒಮ್ಮೆಗೆ ನಡೆಸಿದರೆ, ಈ ಖರ್ಚುಗಳನ್ನು ತಗ್ಗಿಸುವ ಜತೆಗೆ ಮತದಾನದ ಪ್ರಮಾಣವನ್ನು ಹೆಚ್ಚಿಸಬಹುದು ಎನ್ನುವುದು ತಜ್ಞರ ಲೆಕ್ಕಾಚಾರವಾಗಿದೆ.

ಆದರೆ ಸಮಸ್ಯೆಗಳನ್ನು ಗಮನಿಸುವುದಾದರೆ, ಸದ್ಯದ ಮಟ್ಟಿಗೆ ದೇಶಾದ್ಯಂತ ಒಂದೇ ಬಾರಿಗೆ ಚುನಾವಣೆ ನಡೆಸಿದರೆ, ಅದಕ್ಕೆ ಅಗತ್ಯವಿರುವಷ್ಟು ಇವಿಎಂ ಯಂತ್ರ ಹಾಗೂ ವಿವಿ ಪ್ಯಾಟ್‌ಗಳು ದೇಶದಲ್ಲಿಲ್ಲ. ಸದ್ಯ ದೇಶದಲ್ಲಿ ಒಂದು ರಾಜ್ಯದಲ್ಲಿ ಚುನಾವಣೆಯ ಬಳಿಕ, ಅಲ್ಲಿನ ಇವಿಎಂ ಯಂತ್ರಗಳನ್ನು ಇನ್ನೊಂದು ರಾಜ್ಯಕ್ಕೆ ಕಳುಹಿಸಲಾಗುತ್ತದೆ. ಆದರೆ ಒಂದೇ ಬಾರಿಗೆ ಚುನಾವಣೆ ನಡೆದರೆ, ದೇಶದೆಲ್ಲೆಡೆ ಇವಿಎಂ ಯಂತ್ರವನ್ನು ಒದಗಿಸಲು ಹೆಚ್ಚುವರಿಯಾಗಿ ೩೦ ಲಕ್ಷ ಇವಿಎಂ ಹಾಗೂ ವಿವಿ ಪ್ಯಾಟ್ ಅಗತ್ಯವಿದೆ ಎನ್ನಲಾಗಿದೆ.

ಇದಕ್ಕಾಗಿ ಬರೋಬ್ಬರಿ ೯೨೮೪ ಕೋಟಿ ರು. ಅಗತ್ಯವಿದೆ. ಜತೆಗೆ ಈ ಇವಿಎಂಗಳನ್ನು ಪ್ರತಿ ೧೫ ವರ್ಷಕ್ಕೊಮ್ಮೆ ಬದಲಿಸಬೇಕಾಗುವುದರಿಂದ ಆರ್ಥಿಕವಾಗಿ ಇದು ಬಹುದೊಡ್ಡ ಸವಾಲು ಎನ್ನಲಾಗುತ್ತಿದೆ. ಇದರೊಂದಿಗೆ ಒಂದೇ ಬಾರಿಗೆ ದೇಶಾದ್ಯಂತ ಚುನಾವಣೆಗಳನ್ನು ನಡೆಸಿದರೆ, ಅದಕ್ಕೆ ಬೇಕಾಗಿರುವ ಭದ್ರತೆ, ಮಾನವ ಸಂಪನ್ಮೂಲದ ಬಗ್ಗೆಯೂ ಹಲವು ಸವಾಲುಗಳಿವೆ ಎನ್ನುವುದರಲ್ಲಿ ಅನುಮಾನವಿಲ್ಲ. ಮೇಲಿನ ಸಾಧಕ-ಬಾಧಕಗಳು ಸರಕಾರ ಅಥವಾ ಚುನಾವಣಾ ಆಯೋಗದ ಮುಂದಿರುವ ಸವಾಲುಗಳು. ಆದರೆ ರಾಜಕೀಯವಾಗಿ ಯೋಚಿಸಿದಾಗ, ಒಂದು ದೇಶ-ಒಂದು ಚುನಾವಣೆ ಪರಿಕಲ್ಪನೆಯು ರಾಷ್ಟ್ರೀಯ ಪಕ್ಷಗಳಿಗೆ
ವರದಾನವಾದರೆ, ಪ್ರಾದೇಶಿಕ ಪಕ್ಷಗಳಿಗೆ ಬಹುದೊಡ್ಡ ಹೊಡೆತ ಬೀಳುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಏಕೆಂದರೆ ಸಾಮಾನ್ಯವಾಗಿ ಲೋಕಸಭಾ ಚುನಾವಣೆ ವೇಳೆ ರಾಷ್ಟ್ರೀಯ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳು ನಡೆದರೆ, ವಿಧಾನಸಭಾ ಚುನಾವಣೆ ವೇಳೆ ಸ್ಥಳೀಯ ವಿಷಯಗಳ ಆಧಾರದಲ್ಲಿ ಚುನಾವಣೆಗಳು ನಡೆಯುತ್ತವೆ. ಹೀಗಿರುವಾಗ, ಒಂದೇ ಬಾರಿಗೆ ಚುನಾವಣೆ ನಡೆದಾಗ, ಸಹಜವಾಗಿಯೇ ರಾಷ್ಟ್ರೀಯ ವಿಷಯಗಳ ಮೇಲಿನ ಚರ್ಚೆ ಮುನ್ನಲೆಗೆ ಬಂದು, ಪ್ರಾದೇಶಿಕ ಪಕ್ಷಗಳಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಇಂದಿನ ಬಿಜೆಪಿಯ ಸ್ಥಿತಿ
ಯಲ್ಲಿ ಯೋಚಿಸಿದಾಗ, ಒಂದೇ ಬಾರಿಗೆ ಚುನಾವಣೆಗೆ ಹೋದರೆ ಲೋಕಸಭೆಯೊಂದಿಗೆ, ವಿಧಾನಸಭೆಯಲ್ಲಿಯೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎನ್ನುವುದು ರಾಜಕೀಯ ಪರಿಣಿತರ ಲೆಕ್ಕಾಚಾರವಾಗಿದೆ.

ಇದರೊಂದಿಗೆ ರಾಷ್ಟ್ರಮಟ್ಟದಲ್ಲಿ ಸೃಷ್ಟಿಯಾಗುವ ‘ವೇವ್’ ರಾಜ್ಯಗಳಿಗೆ ವಿಸ್ತರಣೆಯಾಗುತ್ತದೆ. ಇದರಿಂದ ರಾಷ್ಟ್ರಮಟ್ಟ ದಲ್ಲಿ ಹಿನ್ನಡೆ ಅನುಭವಿಸುವ ಜತೆಗೆ ವಿಧಾನಸಭೆಯಲ್ಲಿಯೂ ಕೆಲವು ಪಕ್ಷಗಳಿಗೆ ಹಿನ್ನಡೆಯಾಗುತ್ತದೆ ಎನ್ನುವುದು ಅನೇಕ ಪಕ್ಷಗಳ ಆತಂಕವಾಗಿದೆ. ಉದಾಹರಣೆಗೆ, ಸದ್ಯ ಕರ್ನಾಟಕದಲ್ಲಿ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಉತ್ತಮ ಸ್ಥಿತಿಯ ಲ್ಲಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಮೋದಿ ವೇವ್ ನಲ್ಲಿ ಭಾರಿ ಹಿನ್ನಡೆ ಅನುಭವಿಸುತ್ತದೆ. ಒಂದು ವೇಳೆ ಎರಡೂ ಚುನಾವಣೆಗಳು ಒಂದೇ ಸಮಯದಲ್ಲಿ ನಡೆದರೆ, ಎರಡರ ಲ್ಲಿಯೂ ಬಿಜೆಪಿಗೆ ಸಹಜವಾಗಿಯೇ ಲಾಭವಾಗುತ್ತದೆ.

ಇದೇ ರೀತಿ ಹಲವು ರಾಜ್ಯಗಳಲ್ಲಿ ಫಲಿತಾಂಶ ಏರುಪೇರಾಗುವ ಆತಂಕ ವಿವಿಧ ರಾಜಕೀಯ ಪಕ್ಷಗಳದ್ದಾಗಿದೆ. ಈ ಎಲ್ಲ ಚರ್ಚೆಗಳ ನಡುವೆಯೂ ಬಿಜೆಪಿಯು ಇದನ್ನು ಲೋಕಸಭೆ, ವಿಧಾನಸಭೆಗೆ ಮಾತ್ರ ಸೀಮಿತಗೊಳಿಸದೆ ಸ್ಥಳೀಯ ಸಂಸ್ಥೆ ಚುನಾವಣೆಗೂ ವಿಸ್ತರಿಸುವ ಲೆಕ್ಕಾಚಾರವನ್ನು ಹೊಂದಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಂದರೆ, ಲೋಕಸಭಾ, ವಿಧಾನಸಭಾ ಚುನಾವಣೆಗಳೊಂದಿಗೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸುವ
ಲೆಕ್ಕಾಚಾರಗಳಿವೆ. ಆದರೆ ಈ ರೀತಿ ಎಲ್ಲ ಚುನಾವಣೆಗಳನ್ನು ನಡೆಸಲು ‘ಪ್ರಾಯೋಗಿಕ’ವಾಗಿ ಸಾಧ್ಯವೇ ? ಎನ್ನುವುದು ಈಗಿರುವ ಬಹುದೊಡ್ಡ ಪ್ರಶ್ನೆ. ಇದರೊಂದಿಗೆ ಅಧಿಕಾರ ವಿಕೇಂದ್ರೀಕರಣಕ್ಕಾಗಿಯೇ ಸ್ಥಳೀಯ ಸಂಸ್ಥೆಗಳನ್ನು ರಚಿಸಿರುವಾಗ, ಎಲ್ಲ ಚುನಾವಣೆಗಳು ಒಂದೇ ‘ಅಜೆಂಡಾ’ದಲ್ಲಿ ನಡೆ
ದರೆ ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಗೆ ಬಹುದೊಡ್ಡ ಹೊಡೆತ ಬೀಳುತ್ತದೆ ಎನ್ನುವುದು ಹಲವರ ಲೆಕ್ಕಾಚಾರ ವಾಗಿದೆ.

ಹಾಗೆ ನೋಡಿದರೆ ಸ್ವಾತಂತ್ರ್ಯ ಬಂದ ಬಳಿಕ ದೇಶದಲ್ಲಿ ೧೯೫೨ರಲ್ಲಿ ನಡೆದ ಮೊದಲ ಚುನಾವಣೆ ವೇಳೆ ಲೋಕಸಭೆ, ವಿಧಾನಸಭೆಗೆ ಒಂದೇ ಬಾರಿಗೆ ಜನಪ್ರತಿನಿಽಗಳ ಆಯ್ಕೆ ನಡೆದಿತ್ತು. ಅದಾದ ಬಳಿಕ ೧೯೫೭, ೧೯೬೨ ಹಾಗೂ ೧೯೬೭ರ ವರೆಗೆ ಇದು ನಡೆದುಕೊಂಡು ಬಂದಿತ್ತು. ಬಳಿಕ ಅತಂತ್ರ ಸ್ಥಿತಿ, ಪಕ್ಷಾಂತರ ಸೇರಿದಂತೆ ಹಲವು ಕಾರಣಗಳಿಗೆ ಅವಧಿಗೆ ಮೊದಲೇ ಸರಕಾರಗಳು ಪತನಗೊಂಡಿದ್ದರಿಂದ ಚುನಾವಣೆ ಗಳು ಬದಲಾಗುತ್ತಾ ಸಾಗಿವೆ. ಈಗಲೂ ಕೆಲವೇ ಕೆಲವು ರಾಜ್ಯ ಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಂದೇ ಬಾರಿ ನಡೆಯುತ್ತವೆ.

ಇನ್ನು ೨೦೨೯ಕ್ಕೆ ಒಂದು ದೇಶ ಒಂದು ಚುನಾವಣೆ ಜಾರಿಗೆ ಬಂದರೆ, ಕೆಲ ರಾಜ್ಯಗಳಿಗೆ ಲಾಭವಾದರೆ, ಇನ್ನು ಕೆಲವಕ್ಕೆ ಭಾರಿ ನಷ್ಟವಾಗುವ ಸಾಧ್ಯತೆಯಿದೆ. ಏಕೆಂದರೆ, ಲೋಕಸಭಾ ಚುನಾವಣೆಗೆ ಮುನ್ನ ಚುನಾವಣೆ ನಡೆಯಬೇಕಾದ ಎಲ್ಲ ವಿಧಾನಸಭಾ ಚುನಾವಣೆಗಳು ೨೦೨೯ರ ಲೋಕಸಭಾ ಚುನಾವಣೆ ಯವರೆಗೆ ಮುಂದುವರಿಯುವ ಮೂಲಕ ಆಯಾ ರಾಜ್ಯ ಸರಕಾರಗಳಿಗೆ ‘ಬೋನಸ್’ ಅಧಿಕಾರ ಸಿಗಲಿದೆ. ಕರ್ನಾಟಕ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ೨೦ ರಾಜ್ಯ ಸರಕಾರಗಳಿಗೆ ಹೆಚ್ಚುವರಿ ಅಧಿಕಾರ ಸಿಕ್ಕರೆ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ
ಹಾಗೂ ಮಿಝೋರಾಂ ರಾಜ್ಯ ಸರಕಾರಗಳ ಅಧಿಕಾರ ಕಡಿತಗೊಳ್ಳಲಿದೆ.

ಹೀಗೆ ಹತ್ತು ಹಲವು ಪರ-ವಿರೋಧದ ಚರ್ಚೆಯ ನಡುವೆಯೂ ೨೦೨೯ರ ವೇಳೆಗೆ ಒಂದು ದೇಶ-ಒಂದು ಚುನಾವಣೆಯ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಾರೆ.
೨೦೨೪ರ ಲೋಕಸಭಾ ಚುನಾವಣೆಯ ಬಳಿಕ ಒಂದು ದೇಶ, ಒಂದು ಚುನಾವಣೆ, ಮಹಿಳಾ ಮೀಸಲು ಸೇರಿದಂತೆ ದೇಶದ ಚುನಾವಣಾ ವ್ಯವಸ್ಥೆಗೆ ಹಲವಾರು ಬದಲಾವಣೆಗೆ ಬಿಜೆಪಿ ‘ಕೈಹಾಕುತ್ತಿರುವುದು’ ಹಲವರ ಕುತೂಹಲಕ್ಕೆ ಕಾರಣ ವಾಗಿದೆ. ಆದರೆ ಸತತ ೧೫ ವರ್ಷದ (೨೦೨೪ರಲ್ಲಿ ಮೂರನೇ ಬಾರಿಗೆ ಗೆಲುವು ಸಾಽಸಿದರೆ) ಮತ್ತೊಂದು ಅವಽಗೆ ಚುನಾವಣೆ ಎದುರಿಸುವಾಗ ಈ ರೀತಿಯ ರಿಸ್ಕ್ ತೆಗೆದುಕೊಂಡು ಹಿನ್ನಡೆಯಾದರೂ, ಪಕ್ಷಕ್ಕೆ ಬಹುದೊಡ್ಡ ಸಮಸ್ಯೆಯಾಗು
ವುದಿಲ್ಲ ಎನ್ನುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರವಾಗಿದೆ ಎನ್ನುವುದು ಅನೇಕರ ವಾದವಾಗಿದ್ದು, ಈ ಹಂತದಲ್ಲಿ ಅದನ್ನು ತಳ್ಳಿಹಾಕುವಂತಿಲ್ಲ.

ಏನೇ ಆಗಲಿ ದಶಕಗಳಿಂದ ಕೇವಲ ಹೇಳಿಕೆಗಳಿಗೆ ಅಥವಾ ಪತ್ರಕ್ಕೆ ಸೀಮಿತವಾಗಿದ್ದ ಈ ಎಲ್ಲ ಪ್ರಕ್ರಿಯೆಗಳಿಗೆ ಚಾಲನೆ ಸಿಕ್ಕಿವೆ. ಆದರೆ ಎಲ್ಲ ರೀತಿಯಲ್ಲಿಯೂ ಸವಾಲಾಗಿರುವ ‘ಒಂದು ದೇಶ; ಒಂದು ಚುನಾವಣೆ’ಯನ್ನು ಸರಕಾರ ಯಾವ ರೀತಿಯಲ್ಲಿ ಜಾರಿ ಗೊಳಿಸಲಿದೆ ಎನ್ನುವುದು ಈಗಿರುವ ಕುತೂಹಲ.

Leave a Reply

Your email address will not be published. Required fields are marked *

error: Content is protected !!