Sunday, 8th September 2024

ಆನ್‌’ಲೈನ್ ನಕಲಿ ಜಾಲಕ್ಕೆ ಸಿಲುಕುವ ಮುನ್ನ…!

ಅಭಿಮತ

ಆದರ್ಶ್ ಶೆಟ್ಟಿ, ಉಪ್ಪಿನಂಗಡಿ

adarsh.shetty207@gmail.com

ಮೊಬೈಲ್, ಇಂಟರ್‌ನೆಟ್, ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್, ಇನ್ಸ್ಟಾಗ್ರಾಮ್, ಗೂಗಲ್ ಪೇ, ಫೋನ್ ಪೇ ಎಂಬ ಆನ್ ಲೈನ್ ವ್ಯವಹಾರ ಮತ್ತು ಸಾಮಾಜಿಕ
ಜಾಲತಾಣಗಳಿಗೆ ಮನುಷ್ಯನ ಬದುಕು ಪ್ರಸ್ತುತ ಬಿಡಲಾರದ ನಂಟು ಹೊಂದಿದೆ.

ಬೆರಳ ತುದಿಯಲ್ಲಿ ಪುಟ್ಟ ಹಳ್ಳಿಯಿಂದ ಹಿಡಿದು ಜಾಗತಿಕ ರಾಷ್ಟ್ರಗಳವರೆಗೆ ಮಾಹಿತಿ, ಪ್ರಚಲಿತ ವಿಚಾರಗಳನ್ನು, ವಿದ್ಯಮಾನಗಳನ್ನು ಅರಿತುಕೊಳ್ಳುವಷ್ಟರ ಮಟ್ಟಿಗೆ ಮನುಷ್ಯ ಮುಂದುವರಿದಿರುವುದಲ್ಲದೆ, ತಂತ್ರಜ್ಞಾನವೂ ಕೂಡ ಮುಂದುವರಿದಿದೆ. ದಿನಚರಿಯ ವಸ್ತುಗಳ ಖರೀದಿಯಿಂದ ಹಿಡಿದು ಎಲ್ಲಾ ವ್ಯವಸ್ಥೆಗಳ ಜೊತೆ ವಾಹನಕ್ಕೆ ಪೆಟ್ರೋಲ್ ತುಂಬಿಸುವವರೆಗೂ ನಗದು ರಹಿತ ವ್ಯವಹಾರ ಪ್ರಸ್ತುತ ಚಾಲ್ತಿಯಲ್ಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ವಂಚಕರು, ನಕಲಿ ವ್ಯವಹಾರಗಳು ನಡೆಯು ತ್ತಿರುವಂತೆಯೇ ಪ್ರಸ್ತು ತ ಆನ್‌ಲೈನ್ ವ್ಯವಸ್ಥೆ ಮತ್ತು ಸಾಮಾಜಿಕ ಜಾಲ ತಾಣಗಳಿಗೂ ಇಂತಹ ನಕಲಿಗಳು ಲಗ್ಗೆಯಿಟ್ಟಿದ್ದಾರೆ.

ತಂತ್ರಜ್ಞಾನಗಳು ಎಷ್ಟೇ ಮುಂದುವರಿದರೂ ಜನರು ಚಾಪೆ ಕೆಳಗೆ ತೂರಿದರೆ ವಂಚಕರು ರಂಗೋಲಿಯ ಕೆಳಗೆ ತೂರುತ್ತಿದ್ದಾರೆ. ತುರ್ತು ವ್ಯವಸ್ಥೆಯಲ್ಲಿ ಹಣ ಪಡೆಯುವ ಎಟಿಎಂ ವ್ಯವಸ್ಥೆಯಲ್ಲಿ ನಕಲಿ ಕಾರ್ಡ್, ಪಿನ್ ಸಂಖ್ಯೆ ಯನ್ನು ದಾಖಲಿಸಿ ಮತ್ತೊಬ್ಬರ ಖಾತೆಯ ಹಣಕ್ಕೆ ಕನ್ನಹಾಕುವ ವಿದ್ಯಮಾನಗಳು, ಅಪರಿಚಿತ ನಂಬರ್ ಗಳಿಂದ ಕರೆಮಾಡಿ ಮೊಬೈಲ್ ಇನ್ ಬಾಕ್ಸ್ ಗೆ ಅನಧಿಕೃತ ಲಿಂಕ್ ಗಳನ್ನು ಕಳುಹಿಸಿ ಓಟಿಪಿ ಗುಪ್ತ ಸಂಖ್ಯೆ ಗಳನ್ನು ಪಡೆದು ಖಾತೆಯಿಂದ ಹಣ ದೋಚುವ ಗುಂಪುಗಳು, ಬ್ಯಾಂಕ್ ಮ್ಯಾನೇಜರ್ ಗಳ ಹೆಸರಿನಲ್ಲಿ ಕರೆಮಾಡಿ ಬ್ಯಾಂಕ್ ಖಾತೆ ಸಂಖ್ಯೆ, ಎಟಿಎಂ ಸಂಖ್ಯೆಗಳನ್ನು ಪಡೆದುಕೊಂಡು ಹಣ ಕಸಿಯುವ ಘಟನೆಗಳು ಮತ್ತು ಇದರಿಂದ ಮೋಸ ಹೋಗಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡ ವಿದ್ಯಾವಂತರು, ಅವಿದ್ಯಾವಂತರು ಸೇರಿದಂತೆ ಸಾಕಷ್ಟು ಮಂದಿಯನ್ನು ಸಮಾಜದಲ್ಲಿ ಕಾಣಬಹುದು.

ಆನ್‌ಲೈನ್ ಮೂಲಕ ಬಟ್ಟೆ, ಚಪ್ಪಲಿ, ಗೃಹೋಪಯೋಗಿ ವಸ್ತು, ಅಲಂಕಾರಿಕ ವಸ್ತುಗಳನ್ನು ಪಡೆಯು ವಾಗಲೂ ಕಳಪೆ ಗುಣಮಟ್ಟದ ವಸ್ತುಗಳನ್ನು ನೀಡುವ ಮೂಲಕ, ಅಸಮರ್ಪಕ ವಸ್ತುಗಳನ್ನು ಪಡೆಯುವ ಮೂಲಕ ಮೋಸ ಹೋದ ಮಂದಿಯಿದ್ದಾರೆ. ಇನ್ನು ಚೈನ್ ಲಿಂಕ್ ವ್ಯವಹಾರಗಳ ಮೂಲಕ ಹಣ ದ್ವಿಗುಣ ಗೊಳಿಸುವ, ವಸ್ತುಗಳ ಮಾರಾಟ ಮಾಡುವ ಮೂಲಕ ಹೆಚ್ಚೆಚ್ಚು ಸದಸ್ಯರನ್ನು ಈ ವರ್ತುಲಕ್ಕೆ ಸೇರಿಸಿದಂತೆ ಕಮಿಷನ್ ನೀಡುವ ಆಮಿಷದ ಮೂಲಕ ಕೊನೆಗೆ ಆ ಸಂಸ್ಥೆಯೇ ಮುಳುಗಿ ಹಣ ಕಳೆದುಕೊಂಡು ವ್ಯವಹಾರಸ್ಥರು ಬೀದಿಯಲ್ಲಿ ಗೋಳಾಡುವ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಕಾಣುತ್ತಿದ್ದೇವೆ. ಉದಾಹರಣೆಗೆ ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ, ಐಎಂಎ ಹಗರಣ, ರಾಯಲ್ ಹಾಲಿಡೇಸ್ ವಿಚಾರಗಳನ್ನು ಕಾಣಬಹುದಾಗಿದೆ.

ಇನ್ನು ನಾವು ದೈನಂದಿನ ಬದುಕಿನಲ್ಲಿ ಬಳಸುವ ಫೇಸ್ ಬುಕ್,ಇನ್ಸ್ಟಾಗ್ರಾಂ ಗಳಲ್ಲೂ ಪ್ರತಿಷ್ಠಿತ ವ್ಯಕ್ತಿಗಳು, ರಾಜಕಾರಣಿಗಳು, ಉದ್ಯಮಿಗಳು, ಚಲನಚಿತ್ರ ನಟರ ನಕಲಿ ಖಾತೆಗಳನ್ನು ತೆರೆದು ಮೆಸೆಂಜರ್ ಗಳ ಮೂಲಕ ಗೂಗಲ್ ಪೇ, ಫೋನ್ ಪೇ ಬರ್ ನೀಡಿ ತುರ್ತು ಹಣಕ್ಕಾಗಿ ಬೇಡಿಕೆಯಿಡುವ ವಿದ್ಯಮಾನಗಳು ನಡೆಯು ತ್ತಿರುವ ಜತೆ ಇದನ್ನೇ ನಿಜವೆಂದು ನಂಬಿ ಹಣ ವರ್ಗಾಯಿಸಿ ಕೈ ಸುಟ್ಟುಕೊಂಡ ಸಾವಿರಾರು ಮಂದಿಯನ್ನು ಕಾಣಬಹುದು. ಇನ್ನೂ ದೂರದ ಉತ್ತರ ಭಾರತ, ಮುಂಬೈ ಮೂಲದ ಮಾಯಾಂಗನೆಯ ಹೆಸರಿನಲ್ಲಿ ಫೇಸ್ ಬುಕ್ ನಲ್ಲಿ ರಿಕ್ವೆಸ್ಟ್ ಕಳುಹಿಸಿ ಮೊಬೈಲ್ ನಂಬರ್ ಪಡೆದು ಅಶ್ಲೀಲ ವೀಡಿಯೋ ಕರೆ ಮಾಡಿ ಯುವಕ ನನ್ನು ಬೆತ್ತಲಾಗಿಸಿ, ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಬೆದರಿಕೆಯೊಡ್ಡಿ ಲಕ್ಷಾಂತರ ರೂಪಾಯಿ ಹಣ ಪೀಕಿಸುವ ಹನಿಟ್ರ್ಯಾಪ್ ಜಾಲವು ಕೂಡ ಸಕ್ರೀಯವಾಗಿದೆ.

ಈ ಜಾಲಕ್ಕೆ ಸಿಲುಕಿ ಸಾಕಷ್ಟು ಮಂದಿ ಮೋಸ ಹೋಗಿರುವುದಲ್ಲದೆ ಪ್ರಭಾವಿ ರಾಜಕಾರಣಿಗಳನ್ನು ಕೂಡ ಇಂತಹ ಖೆಡ್ಡಾಗೆ ಬೀಳಿಸಿ ಅವರ ಮಾನ ಹರಾಜು ಹಾಕಿದ ವಿದ್ಯಮಾನಗಳು ಕೂಡ ನಡೆದಿರುವುದಲ್ಲದೆ, ಇಂತಹ ಚಪಲಕ್ಕೆ ಸಿಲುಕಿ ತನ್ನ ಸಚಿವ ಸ್ಥಾನವನ್ನು ಕಳೆದುಕೊಂಡಿರುವುದಲ್ಲದೆ,ಈ ದೃಶ್ಯವು ಇತ್ತೀಚೆಗೆ
ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಸದ್ದು ಮಾಡಿತ್ತು. ಆದುದರಿಂದ ಆನ್ ಲೈನ್ ವ್ಯವಹಾರದಲ್ಲಿ ಒಳಿತಿನಷ್ಟೇ ಕೆಡುಕು ಇರುವುದನ್ನು ಅಲ್ಲಗೆಳೆಯು ವಂತಿಲ್ಲ. ಯಾವುದಕ್ಕೂ ಎಚ್ಚರ ಅಗತ್ಯ.

Leave a Reply

Your email address will not be published. Required fields are marked *

error: Content is protected !!