Sunday, 8th September 2024

ನೋವಿನ ಪ್ರಜ್ಞೆ – ಜೀವ ವಿಸ್ಮಯ 5

ಶಿಶಿರ ಕಾಲ

shishirh@gmail.com

ಉತ್ತರ ಕನ್ನಡವೆಂದರೆ ಅದೊಂದು ವಿಶೇಷ ಜಿಲ್ಲೆ. ಪ್ರಾಣಿ ಸಂಕುಲ ವೈವಿಧ್ಯ ಈ ಜಿಲ್ಲೆಲ್ಲಿದ್ದಷ್ಟು ಕರ್ನಾಟಕದ ಬೇರಾವ ಜಿಲ್ಲೆಯಲ್ಲಿಯೂ ಇಲ್ಲವೆಂದರೆ ಅತಿಶಯವಾಗಲಿಕ್ಕಿಲ್ಲ. ಕಾರಣ ಇಷ್ಟೆ – ಇಲ್ಲಿ ಕರಾವಳಿ, ಮಲೆನಾಡು, ಬಯಲುಸೀಮೆ ಹೀಗೆ ನಾನಾ ವೆರೈಟಿಗಳು ಒಂದೇ ಜಿಲ್ಲೆಯಲ್ಲಿದೆ.

ಪಶ್ಚಿಮ ಘಟ್ಟವಿದೆ, ಅತಿ ಹೆಚ್ಚು ಕಾಡು ಇಲ್ಲಿದೆ. ಕುಮಟಾದ ಹತ್ತಿರದ ನಮ್ಮ ಊರಿನ ಮನೆಯ ತಾರಸಿಯ ಮೇಲೆ ನಿಂತರೆ ಆರೆಂಟು ಕಿಲೋಮೀಟರ್ ದೂರದ ಸಮುದ್ರದ ಭೋರ್ಗರೆತ ಕೇಳಿಸುತ್ತದೆ. ಹುಣ್ಣಿಮೆ ಬಂತೆಂದರೆ ಕಡಲಬ್ಬರ ಜಾಸ್ತಿ. ಮನೆಯ ಹಿತ್ತಲಿಂದ ಹಿಂದಕ್ಕೆಲ್ಲ ಮುಗಿಲು ಚುಂಬಿಸುವ ಪಶ್ಚಿಮ ಘಟ್ಟ. ಒಂದುಕಡೆ ಸಹ್ಯಾದ್ರಿ, ಒಂದು ಕಡೆ ಕಡಲು. ನಮ್ಮೂರಿಂದ ಸ್ವಲ್ಪ ಉತ್ತರಕ್ಕೆ ಹೋದರೆ ಯಾಣ, ಅಂಕೋಲಾ, ಗೋಕರ್ಣ ಇತ್ಯಾದಿ. ಅಂಕೋಲಾ ಮೊದಲಾದಲ್ಲಿ ಪಶ್ಚಿಮಘಟ್ಟ ಮತ್ತು ಕರಾವಳಿಯ ಮಧ್ಯೆ ಸ್ವಲ್ಪ ಬಯಲಿನ ಅಂತರವಿದೆ. ನಮ್ಮಲ್ಲಿನ ಕೆಲವು ಊರುಗಳು ಥೇಟ್ ತೇಜಸ್ವಿಯವರ ಜುಗಾರಿಕ್ರಾಸಿನಲ್ಲಿ ಬರುವ ಊರಿನಂತೆ.

ಎತ್ತೆತ್ತರದ ಗುಡ್ಡ, ಮಳೆಗಾಲ ಬಂತೆಂದರೆ ಕವಿದ ಮೋಡಗಳಿಗೆ ತಾವು ಸರಿದು ಸೂರ್ಯನಿಗೆ ದಾರಿ ಮಾಡಿಕೊಡಬೇಕೆಂಬು ದವ ಸೌಜನ್ಯವಿಲ್ಲ. ಕಾರ್ಮೋಡದ ಜಾಪಿನ ಮುಂದೆ ಕೆಲವೊಮ್ಮೆ ವಾರಗಟ್ಟಲೆ ಸೂರ್ಯನ ಅಡ್ರಸ್ಸೆ ಇರುವುದಿಲ್ಲ. ಹಠ ಹಿಡಿದು ಹೊಯ್ಯುವ ಮಳೆ. ಇಲ್ಲಿ ಮಳೆಗಾಲದಲ್ಲಿ ಸ್ವಲ್ಪ ಒಳನಾಡು, ಅರೆ ಮಲೆನಾಡಿನಲ್ಲಿ ಉಂಬುಳದ (ಲೀಚ್/ ಜವಳೆ) ಕಾಟ ಅತಿ ಹೆಚ್ಚು. ಸ್ವಚ್ಛವಾದ ನೀರಿನ ತೊರೆಯಿದೆಯೆಂದು ಸ್ನಾನಕ್ಕೆ, ಅಥವಾ ಕಾಲದ್ದಿದರೆ ಒಂದೆರಡು ನಿಮಿಷದಲ್ಲಿ ಅದೆಲ್ಲಿಂದಲೋ ಅರಿವಿಗೇ ಬಾರದಂತೆ ಮೈ ಮೇಲೆ, ಕೈ ಕಾಲುಗಳ ಸಂಧಿಯಲ್ಲಿ ಅಂಟಿಕೊಂಡು ನಯವಾಗಿ ರಕ್ತ ಹೀರುತ್ತವೆ.

ವೇಂಪೈರ್ ಬ್ಯಾಟ್ – ರಕ್ತ ಹೀರುವ ಬಾವಲಿ ದಕ್ಷಿಣ ಅಮೆರಿಕಾದಲ್ಲಿ ಜಾಸ್ತಿ. ನಾನು ಉರುಗ್ವೆಯಲ್ಲಿರುವಾಗ ಒಮ್ಮೆ ಈ ಬಾವಲಿ ಯನ್ನು ನೋಡಲೆಂದೇ ಅರ್ಜೆಂಟೀನಾದ ಗಡಿಗೆ ಹೋಗಿದ್ದೆ. ಇದು ಸಂಪೂರ್ಣ ಇನ್ನೊಂದು ಜೀವಿಯ ರಕ್ತವನ್ನೇ ಆಹಾರ ವಾಗಿಸಿ ಬದುಕುವ ಜೀವಿ. ರಾತ್ರಿಯಾಯಿತೆಂದರೆ ತಾವು ವಾಸಿಸುವ ಮರದ ಪೊಟರೆಯಿಂದ ಕೆಳಕ್ಕಿಳಿದು ಬರುತ್ತವೆ. ಮೆಲ್ಲಗೆ ಕೃಷಿಕರು ಕಟ್ಟಿ ಹಾಕಿದ ದನದ ಕಾಲ ಗೊರಸಿನ ಮೇಲ್ಗಡೆ ಅಥವಾ ದನದ ಕಿವಿಯ ಹಿಂಬಾಗಕ್ಕೆ ತನ್ನ ಅತ್ಯಂತ ಹರಿತವಾದ ಹಲ್ಲಿನಿಂದ ಸಣ್ಣಗೆ ಗಾಯಗೊಳಿಸಿ ರಕ್ತ ಹೊರಸೂಸುವಂತೆ ಮಾಡುತ್ತವೆ.

ಇವು ರಕ್ತವನ್ನು ಹೀರುವ ಜೀವಿಗಳಲ್ಲ – ಬದಲಿಗೆ ರಕ್ತವನ್ನು ನೆಕ್ಕಿ ನೆಕ್ಕಿ ಕುಡಿಯುತ್ತವೆ. ಒಂದೇ ದಿನ ರಕ್ತ ಸಿಗಲಿಲ್ಲವೆಂದರೂ ಆ ಬಾವಲಿಗಳು ಬದುಕುವುದಿಲ್ಲ. ಪ್ರತೀ ದಿನ ಒಂದು ಹಿಡಿ ರಕ್ತ ಬೇಕೇ ಬೇಕು. ಈ ಬಾವಲಿಗಳು ಹೀಗೆ ರಕ್ತ ಕುಡಿದದ್ದು ಈ ಪ್ರಾಣಿ ಗಳ ಅನುಭವಕ್ಕೇ ಬರುವುದಿಲ್ಲ. ಒಟ್ಟಾರೆ ನೋವಿನ ಅನುಭವಕ್ಕೆ, ಪ್ರಜ್ಞೆಗೆ ಬಾರದಂತೆ ರಕ್ತ ಹೀರುವ ಈ ಜೀವಿಗಳು ವಿಶೇಷವೇ ಹೌದು. ಲೀಚ್ ಅಥವಾ ವೇಂಪೈರ್ ಬ್ಯಾಟ್ ಅಥವಾ ಇನ್ನೊಂದು ಈ ರೀತಿ ರಕ್ತ ಹೀರುವ ಜೀವಿಗಳೇನು ಮಾರಣಾಂತಿಕವಲ್ಲ, ಒಂದೆರಡು ಕಚ್ಚಿ, ರಕ್ತಹೀರಿದರೆ ಅಂಥದ್ದೇನೂ ಆಗುವುದಿಲ್ಲ.

ಆದರೆ ನಮ್ಮ, ಪ್ರಾಣಿಗಳ ತೀರಾ ಬೇಸಿಕ್ ಪ್ರeಯಾದ ನೋವಿನ ಅನುಭವವಕ್ಕೆ ಬಾರದಂತೆ, ಮರಗಟ್ಟಿಸುವ ವಿಶೇಷ ರಾಸಾ
ಯನಿಕವನ್ನು ತನ್ನಲ್ಲಿ ಉತ್ಪಾದಿಸಿ ಅದನ್ನು ತನ್ನ ಬದುಕಿಗೆ, ಆಹಾರಕ್ಕೆ ಬಳಸಿಕೊಳ್ಳುವುದು ಅದೆಂತಹ ವಿಸ್ಮಯವಲ್ಲವೇ!
ತಮ್ಮ ದೇಹಕ್ಕೆ ಬೇಕಾಗುವ ರಾಸಾಯನಿಕವನ್ನು ಉತ್ಪಾದಿಸುವುದು ಜೀವಿಗಳಲ್ಲಿ ಸಾಮಾನ್ಯ. ನಾವು ಕೂಡ ಅದೆಷ್ಟೋ
ಕೆಮಿಕಲ್‌ಗಳನ್ನು, ಎಂಜೈಮ್‌ಗಳನ್ನು ದೇಹದೊಳಕ್ಕೆ ತಯಾರಿಸಿಕೊಳ್ಳುತ್ತೇವೆ.

ಆದರೆ ತನ್ನ ಶಿಕಾರಿಯ ಬೇಸಿಕ್ ಪ್ರಜ್ಞೆಯಾದ ನೋವನ್ನು ಯಾಮಾರಿಸುವ ರಾಸಾಯನಿಕವನ್ನು ಉತ್ಪಾದಿಸಿ ಬಳಸುವುದು ಬಹಳಷ್ಟು ಬಾರಿ ವಿಕಾಸ ವಾದದ ಜಿಜ್ಞಾಸೆಗೆ ಮೀರಿದ್ದು ಎಂದೆನಿಸುತ್ತದೆ. ಈ ರೀತಿ ನೋವಾಗದಂತೆ ರಕ್ತ ಹೀರುವ ಅದೆಷ್ಟೋ ಜೀವಿಗಳಿವೆ. ಒಂದು ವೇಳೆ ಇಂತಹ ಶಕ್ತಿ ಸೊಳ್ಳೆಗಿದ್ದಿದ್ದರೆ ನಮ್ಮ ಅವಸ್ಥೆ ಹೇಗಾಗಿರುತ್ತಿತ್ತು ಅಲ್ಲವೇ? ನಮ್ಮ ಪುಣ್ಯ.

ನಮಗೆ ಕೈಗೋ, ಕಾಲಿಗೋ ಏನೋ ಒಂದು ಗಾಯವಾಗಿ ನೋವಾದಾಗ ಈ ನೋವು ಎನ್ನುವ ಪ್ರಜ್ಞೆಯೇ ಇಲ್ಲದಿದ್ದರೆ ಒಳ್ಳೆಯ ದಿತ್ತೇನೋ ಎಂದು ಅನ್ನಿಸುವುದಿದೆ. ಹಲ್ಲು ನೋವಾದಾಗ, ಅಥವಾ ಕಿಡ್ನಿಯಲ್ಲಿ ಅಥವಾ ಗಾಲ್ ಬ್ಲಾಡರ್‌ನಲ್ಲಿ ಕಲ್ಲು ಉಂಟಾಗಿ ನೋವಾದಾಗ ಬದುಕೇ ಸಾಕೋ ಸಾಕೆನ್ನಿಸುವುದುಂಟು. ಹಲವರಿಗೆ ಈಗೀಗ ಬೆನ್ನು ನೋವು ನಿರಂತರವಾಗಿ ಕಾಡುತ್ತಲೇ ಇರುತ್ತದೆ. ಗಾಯ, ನೋವು ಚಿಕ್ಕದಿರಲಿ, ದೊಡ್ಡದಿರಲಿ ಯಾರಿಗೂ ಬೇಡ. ಇಂತಹ ಒಂದು ನೋವಿನ ಪ್ರಜ್ಞೆ – ಸೆನ್ಸ್ ಅನ್ನು ಆ ಭಗವಂತ ನಮಗೆಲ್ಲ ಕೊಟ್ಟದ್ದಾದರೂ ಏಕೆ? ಈ ಲೀಚ್‌ಗಳು ತಮ್ಮಲ್ಲಿ ತಯಾರಿಸುವ ರಾಸಾಯನಿಕ ನಮ್ಮ ದೇಹದಲ್ಲೂ ತಯಾರಾಗಿ ಸಂಪೂರ್ಣ ನೋವೇ ಆಗ ದಂತಿದ್ದರೆ ಎಷ್ಟು ಒಳ್ಳೆಯದಿತ್ತಲ್ಲ ಎಂದೆಲ್ಲ ಅನ್ನಿಸುವುದುಂಟು.

ಅದೆಲ್ಲ ಅನ್ನಿಸುವುದು ನಮಗೆ ನೋವಾಗಿ ನರಳುವಾಗ ಮಾತ್ರ. ದೇಹದಲ್ಲಿ ನೋವಾದಾಗ ತಕ್ಕ ಮಟ್ಟಿಗೆ ಎಂಡೋರ್ಫಿನ್
ತಯಾರಾದರೂ ಅವು ನೋವಿನ ಪ್ರಮಾಣವನ್ನು ತಗ್ಗಿಸುತ್ತವೆಯೇ ಹೊರತು ನೋವನ್ನು ಶೂನ್ಯವಾಗಿಸುವುದಿಲ್ಲ. ಒಂದೊಮ್ಮೆ ನಮ್ಮ ದೇಹದಲ್ಲಿ ನೋವಿನ ಪ್ರಜ್ಞೆಯೇ ಇಲ್ಲದಿರುತ್ತಿದ್ದರೆ ಹೇಗಿರುತ್ತಿತ್ತು? ಕೆಲ ವರ್ಷಗಳ ಹಿಂದೆ ಸೈನ್ಸ್ ಮ್ಯಾಗಜಿನ್‌ನಲ್ಲಿ ಒಂದು ವರದಿ ಪ್ರಕಟವಾಗಿತ್ತು. ಪಾಕಿಸ್ತಾನದ ಲಾಹೋರಿನ ಒಂದು ಖುರೇಷಿ ಮನೆತನದಲ್ಲಿ ಹಲವರಿಗೆ ನೋವಿನ ಪ್ರeಯೇ ಸಂಪೂರ್ಣವಾಗಿ ಇಲ್ಲ ಎಂದು.

ಅವರಿಗೆ ಸೂಜಿ ಚುಚ್ಚಿದರೆ, ಬೆಂಕಿ ಮುಟ್ಟಿದರೆ ಉರಿಯಾಗುತ್ತಿತ್ತು, ಆದರೆ ಗಾಯವಾದರೆ ಅಥವಾ ಯಾವುದಾದರೂ ಒಂದು
ಅಂಗಕ್ಕೆ ಪೆಟ್ಟು ಬಿದ್ದರೆ ಅಗುವ ನೋವಿನ ಅನುಭವ ಅವರಿಗಾಗುತ್ತಿರಲಿಲ್ಲ. ಅವರನ್ನು ಅಭ್ಯಾಸ ಮಾಡಲು ಒಂದಿಷ್ಟು ವಿಜ್ಞಾನಿ ಗಳ ದಂಡೇ ಅಲ್ಲಿಗೆ ಅಂದು ಧಾವಿಸಿತ್ತು. ಅಲ್ಲಿ ನೋಡಿದಾಗ, ಅವರಬ್ಬ ತುಟಿಯನ್ನು ಕಚ್ಚಿಕೊಂಡು ಗಾಯ ಮಾಡಿಕೊಂಡಿದ್ದ. ಆ ಗಾಯವನ್ನೇ ಮತ್ತಷ್ಟು ಕಡಿಯುತ್ತಿದ್ದ. ಇನ್ನೊಬ್ಬ ತನ್ನ ನಾಲಿಗೆಯ ತುದಿಯನ್ನು ತಾನೇ ಕಡಿದುಕೊಂಡು ಮೊಂಡು ಮಾಡಿ ಕೊಂಡಿದ್ದ. ಹೀಗೆ ನೋವಿನ ಅರಿವಾಗದ ಆ ಕುಟುಂಬದ ಎಲ್ಲರ ಒಂದಿಂದು ಅಂಗಕ್ಕೆ ಹತ್ತಾರು ಗಾಯಗಳಿದ್ದವು ಅಥವಾ ಊನವಿತ್ತು. ಅದೆಲ್ಲವೂ ಅವರೇ ಮಾಡಿಕೊಂಡದ್ದು. ಅವರೆಲ್ಲರಿಗೆ ನೋವಿನ ಪ್ರಜ್ಞೆ ಇಲ್ಲದುದರಿಂದ ಈ ಗಾಯದ ಬಗ್ಗೆ ಅವರಿಗೆ ವಿಶೇಷ ಗಮನವೇ ಇರಲಿಲ್ಲ.

ನಂತರದಲ್ಲಿ ಅವರ ಮೇಲೆ ಅದೆಷ್ಟೋ ಪರೀಕ್ಷೆಗಳೆಲ್ಲ ನಡೆದವು. ಕೊನೆಯಲ್ಲಿ ತಿಳಿದದ್ದೇನೆಂದರೆ ಜೀನ್ಸ್‌ನದ ಒಂದು ಪರಾಮಶಿ ಮ್ಯುಟೇಷನ್ ನಿಂದಾಗಿ ಅವರೆಲ್ಲ ಇಂಥದ್ದೊಂದು ಸ್ಥಿತಿಗೆ ತಲುಪಿದ್ದರು. ಒಂದು ವೇಳೆ ಮನುಷ್ಯನಿಗೆ ನೋವಿನ ಪ್ರಜ್ಞೆಯೇ ಇಲ್ಲದಿರುತ್ತಿದ್ದರೆ ನಾವೆ ಅಕರಾಳ ವಿಕಾರವಾಗಿರುತ್ತಿzವು ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಇನ್ನೊಂದು ಬೇಡವೆನ್ನಿಸುತ್ತದೆ.

ಬಹುಶಃ ನಾವೆಲ್ಲ ಈ ಖುರೇಷಿ ಖಾಂದಾನ್‌ನಂತೆ ಪ್ರತಿಯೊಬ್ಬರೂ ಒಂದೊಂದು ವಿಕಾರ ಮಾಡಿಕೊಳ್ಳುತ್ತಿದ್ದೆವು. ನಾವು ನೀವೆಲ್ಲ ಒಂದಿಂದು ಸಮಯದಲ್ಲಿ ದೇಹದ ಒಂದಾದರೂ ಭಾಗವನ್ನು ಸುಟ್ಟುಕೊಂಡಿರುತ್ತೇವೆ. ಈ ಸುಟ್ಟುಕೊಂಡಾಗ ತಕ್ಷಣ ಸೂಜಿ ಚುಚ್ಚಿದಂತೆ ಅನುಭವವಾಗಿ ನಾವು ದೇಹದ ಉಷ್ಣ ತಾಗಿದ ಭಾಗವನ್ನು ಹಿಂದಕ್ಕೆ ಎಳೆದುಕೊಳ್ಳುವುದು ಮೊದಲ ನೆಯದು. ಆದರೆ ನಂತರ ಅನುಭವಿಸುವ ಉರಿ ನಮ್ಮನ್ನು ಇನ್ನೆಂದೂ ಬಿಸಿಯ ರಿಸ್ಕ್‌ಗೆ ಒಳಗಾಗದಂತೆ, ನೆನಪಿನಲ್ಲಿಡುವಂತೆ ಮಾಡುತ್ತದೆ. ಹೀಗೆ ನೋವು ಎನ್ನುವುದು ಪರೋಕ್ಷವಾಗಿ ನಮ್ಮ ದೇಹಕ್ಕೆ ಘಾಸಿಯಾಗದಂತೆ ನಮ್ಮನ್ನು ಒತ್ತಾಯಿಸಿ ಬದುಕಿಸುತ್ತದೆ. ಈ ಎಲ್ಲ ಕಾರಣಕ್ಕೆ ಬೇಡವೆನ್ನಿಸುವ ನೋವು ನಮ್ಮನ್ನು ಕಾಪಾಡುತ್ತದೆ.

ನೋವು ಎಷ್ಟು ಮುಖ್ಯ ಎನ್ನುವುದಕ್ಕೆ ಇವಿಷ್ಟು ಸಾಕು. ಸಾಮಾನ್ಯವಾಗಿ ನಾವಂದುಕೊಳ್ಳುವುದಿದೆ – ನೋವು ಎನ್ನುವುದು ಘಾಸಿ, ರೋಗ ಮೊದಲಾದವುಗಳ ಪರಿಣಾಮ ಎಂದು. ಆದರೆ ಕೆಲವೊಮ್ಮೆ ಈ ನೋವೇ ರೋಗವಾಗುವುದಿದೆ. ಇದನ್ನು ವಿವರಿಸುವುದಕ್ಕಿಂತ ಮೊದಲು ನೋವನ್ನು ನಾವು ಹೇಗೆ ಗ್ರಹಿಸುತ್ತೇವೆ ಎಂದು ಚಿಕ್ಕದಾಗಿ ವಿವರಿಸುತ್ತೇನೆ. ದೇಹಕ್ಕೆ
ಘಾಸಿ ಯಾದಾಗ ನರದ ತುದಿಯಲ್ಲಿರುವ ನೋಸಿಸೆಪ್ಟರ್ ನೋವು ಗ್ರಾಹಿಗಳು ಅದನ್ನು ಗ್ರಹಿಸಿ ಆ ಸಂದೇಶವನ್ನು
ಮೆದುಳಿಗೆ ರವಾನಿಸುತ್ತವೆ.

ಈ ರವಾನೆಯಾದ ಸಿಗ್ನಲ್ ಅನ್ನು ಮೆದುಳು ನೋವು ಎಂದು ಗ್ರಹಿಸುತ್ತದೆ, ಅದಕ್ಕನುಗುಣವಾಗಿ ನಮ್ಮ ದೇಹವನ್ನು ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಅದಲ್ಲದೇ ಆ ನೋವು ಮತ್ತು ಘಟನೆಯನ್ನು ಮೆದುಳು ನೆನಪಿಟ್ಟುಕೊಳ್ಳುತ್ತದೆ. ಗಾಯ ದೊಡ್ಡದಾದಾಗ ನೋವು ಜಾಸ್ತಿ ಅಲ್ಲವೇ, ಅದೆಲ್ಲ ಹೆಚ್ಚು – ಕಡಿಮೆ ಮೊದಲಾದ ಗ್ರಹಿಕೆಯಾಗುವುದು ಮೆದುಳಿನಲ್ಲಿ. ನೋವಿನ ಪ್ರಮಾಣವನ್ನು ನಿರ್ಧರಿಸುವುದು ನಮ್ಮ ಮೆದುಳು. ಈ ಕಾರಣಕ್ಕೆ ದಿನಾ ಇಂಜೆಕ್ಷನ್ ಚುಚ್ಚಿಕೊಳ್ಳುವ ಡಯಾಬಿಟೀಸ್ ರೋಗಿಗೆ
ಉಂಟಾಗುವ ನೋವಿಗೆ ಮತ್ತು ಅಪರೂಪಕ್ಕೆ ಇಂಜೆಕ್ಷನ್ ತೆಗೆದುಕೊಂಡಾಗ ಉಳಿದವರಿಗೆ ಆಗುವ ನೋವಿಗೆ ಬಹಳಷ್ಟು
ವ್ಯತ್ಯಾಸವಿದೆ.

ನಮ್ಮ ಮೆದುಳು ನೋವನ್ನು ಸಂಪೂರ್ಣ ಕಂಟ್ರೋಲ್ ಮಾಡುತ್ತದೆ. ಮುಳ್ಳು ಕಾಲಿಗೆ ಚುಚ್ಚಿದಾಗ ನೋವಾಗುತ್ತದೆಯಲ್ಲ, ಅದೇ ಹಿಂದೊಮ್ಮೆ ಹಾವು ಕಚ್ಚಿ ಬದುಕಿದವರಿಗೆ ಚಿಕ್ಕ ಅದೇ ಮುಳ್ಳು ಚುಚ್ಚಿದಾಗ ಉಳಿದವರಿಗಿಂತ ಹೆಚ್ಚಿನ ನೋವು ಮತ್ತು ಆಘಾತ ಉಂಟಾಗುತ್ತದೆ. ಮೆದುಳಿನ ನೆನಪು ಕೂಡ ನಮ್ಮ ನೋವಿನ ಪ್ರಮಾಣವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ.

ಕೆಲವೊಮ್ಮೆ ಈ ನೋವಿನ ಗ್ರಹಿಕೆಯ ವ್ಯವಸ್ಥೆಯಲ್ಲಿ ಅಪರಾತಪರಾ ಆಗುವುದಿದೆ. ಈ ಸ್ಥಿತಿಯನ್ನು ಅಲೋಡಿನಿಯಾ ಎನ್ನಲಾಗುತ್ತದೆ. ಇದು ಪಾಕಿಸ್ತಾನದ ಖುರೇಷಿ ಖಾಂದಾನಿನ ಸ್ಥಿತಿಯ ಉಲ್ಟಾ. ಸಾಮಾನ್ಯವಾಗಿ ಕೈ ಅಥವಾ ಕಾಲು
ಮುರಿದಾಗ ಅತ್ಯಂತ ನೋವಾಗುತ್ತದೆಯಲ್ಲ, ಅದು = ವಾಸಿಯಾದಾಗ ಆ ನೋವು ಹೋಗಬೇಕು ತಾನೆ. ಆದರೆ
ಅಲೋಡೀ ನಿಯಾ ಇರುವವರಿಗೆ ಈ ನೋವು ಘಾಸಿ ಮಾಣಿದ ನಂತರವೂ ಮುಂದುವರಿಯುತ್ತದೆ.

ಯಾರಾದರೂ ಮುಟ್ಟಿದರೂ ಈ ಹಿಂದೆ ಘಾಸಿಯಾಗಿ ವಾಸಿಯಾದ ಅಂಗದಲ್ಲಿನ ನೋವು ಗ್ರಾಹಿಗಳು ಮೆದುಳಿಗೆ ನೋವಿನ ಸಂದೇಶವನ್ನು ತಪ್ಪಾಗಿ ಕಳಿಸುತ್ತವೆ. ಆಗ ಸುಮ್ಮನೆ ಮುಟ್ಟಿದರೂ ಮುರಿದ ಕೈ ತಿರುಚಿದ ಅನುಭವ ಅವರದ್ದಾಗಿರುತ್ತದೆ.
ಇತ್ತೀಚೆಗೆ ಇಂತಹ ಹಲವು ಕೇಸ್‌ಗಳು ಎಡೆ ಜಾಸ್ತಿಯಾಗುತ್ತಿದೆ. ಹಿಂದೆಲ್ಲ ಈ ಸಮಸ್ಯೆಯಿದ್ದರೆ ನೋವಿನ ಅರಿವು ಮರೆ ಮಾಚುವ ಪೇನ್ ಕಿಲ್ಲರ್‌ಗಳನ್ನು ನಿರಂತರವಾಗಿ ಕೊಡ ಬೇಕಾಗಿತ್ತು. ಸಾಮಾನ್ಯವಾಗಿ ಪೇನ್ ಕಿರ್ಲ್ಲ ನೇರವಾಗಿ ಕಿಡ್ನಿ
ಸೇರಿದಂತೆ ಹಲವು ಅಂಗಗಳ ಮೇಲೆ ಸೈಡ್ ಎಫೆಕ್ಟ್ ಉಂಟು ಮಾಡುತ್ತದೆ.

ಈಗ ಪುಣ್ಯವಶಾತ್ ವಿಜ್ಞಾನ ಮುಂದುವರಿದು ಹೀಗೆ ನಮ್ಮ ನೋವು ಗ್ರಾಹಿಗಳು ವ್ಯತಿರಿಕ್ತವಾಗಿ ವ್ಯವಹರಿಸುವುದನ್ನು ಸರಿಯಾಮಾಡುವ ಶುಶ್ರೂಷೆಗಳು ಬಂದಿವೆ. ಕೆಲ ವಾರಗಳ ಹಿಂದೆ ಅಮೆರಿಕಾದ ಅಬಾರ್ಷನ್ – ಗರ್ಭಪಾತದ ಸುತ್ತ ನಡೆಯುತ್ತಿರುವ ರಾಜಕೀಯ ದೊಂಬರಾಟಗಳ ಬಗ್ಗೆ ಬರೆದಿದ್ದೆ. ಆ ಸಮಯದಲ್ಲಿ ಮತ್ತು ನಂತರದಲ್ಲಿ ಅತಿಹೆಚ್ಚು ಚರ್ಚೆ ಯಾದದ್ದು ಗರ್ಭಪಾತ ಮಾಡುವಾಗ ಬ್ರೂಣಕ್ಕೆ ನೋವಿನ ಅನುಭವವಾಗುತ್ತದೆಯೇ ಎಂದು. ಗರ್ಭಧಾರಣೆಯ, ಜೀವಾಂಕುರದ ಯಾವ ಸಮಯದಲ್ಲಿ ನೋವು ಅರಿವಿಗೆ ಬರುತ್ತದೆ ಎಂಬಿತ್ಯಾದಿ ತೀವ್ರ ಚರ್ಚೆಗೆ ಬಂತು.

ಒಂದು ವರದಿಯ ಪ್ರಕಾರ ಭ್ರೂಣ ಎಂಟನೇ ವಾರವಿರುವಾಗಲೇ ನೋವಿನ ಅನುಭವ ಶುರುವಾಗುತ್ತದೆ. ಆದರೆ ಆ
ನೋವು ಕಚಕುಳಿಯಂತಿರುತ್ತದೆ ಎಂಬಿತ್ಯಾದಿ ವಿಜ್ಞಾನ ಕಂಡುಹಿಡಿದದ್ದು. ಎಂದರೆ ನೋವೆನ್ನುವುದು ಹುಟ್ಟಿಗಿಂತ
ಮೊದಲೇ ನಾವು ಪಡೆದುಕೊಂಡು ಬರುವ, ತೀರಾ ಅಗತ್ಯದ ಒಂದು ಪ್ರಜ್ಞೆ ಎಂದಷ್ಟೇ ನಾವು ಇಲ್ಲಿ ತೆಗೆದುಕೊಳ್ಳೋಣ.
ಒಟ್ಟಾರೆ – ನೋವು ತೀರಾ ಅವಶ್ಯಕ ಪ್ರಜ್ಞೆಯಂದು ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ.

ಅಂತೆಯೇ ನೋವಿನ ಶುಶ್ರೂಷೆ ಕೂಡ ಇಂದು ಬಿಲಿಯನ್ ಗಟ್ಟಲೆ ಡಾಲರ್‌ನ ವ್ಯವಹಾರ ಎನ್ನುವುದು ಕೂಡ ನಿಜ. ನೋವನ್ನು ಇಂದು ವಿಜ್ಞಾನ ಐದು ವಿಭಾಗವಾಗಿ ವಿಂಗಡಿಸುತ್ತದೆ. ಆದರೆ ನೋವೆನ್ನುವುದು ಅಸಲಿಗೆ ನೂರಾರು ರೀತಿ. ಸಾಮಾನ್ಯವಾಗಿ
ಬೇರೆಯವರ ನೋವಿನ ವಿಚಾರ ಕೇಳುವಾಗ ನನಗೂ ಅಂಥದ್ದೇ ನೋವಿತ್ತು ಎನ್ನುತ್ತೇವೆ. ಆದರೆ ಅಸಲಿಗೆ ನೋವಿನ ಅನುಭವ ಕೂಡ ಒಬ್ಬರಿಂದೊಬ್ಬರಿಗೆ ಅವರ ಮೆದುಳಿನ ಕಿತಾಪತಿಯಿಂದಾಗಿ ಬೇರೆ ಬೇರೆಯೇ ಆಗಿರುತ್ತದೆ. ನೋವು ನಮಗೆ ಸಹ್ಯವಲ್ಲದಿದ್ದರೂ ಅತ್ಯಂತ ಅವಶ್ಯ ಪ್ರಜ್ಞೆಯಂದು ಎನ್ನುವುದನ್ನು ಒಪ್ಪಲೇ ಬೇಕು.

ಅದೊಂದು ಪ್ರಜ್ಞೆಯಿಲ್ಲದಿದ್ದಲ್ಲಿ ದೇಹ ಘಾಸಿಮಾಡುವ ವಾಂರ್ಪೈ ಬಾವಲಿ, ಜವಳೆ ರೀತಿಯ ಅದೆಷ್ಟೋ ಜೀವಿಗಳು ನಮ್ಮ ಸುತ್ತ ವಿಕಾಸವಾಗಿಬಿಡುತ್ತಿದ್ದವು. ಅದೆಲ್ಲದಕ್ಕಿಂತ ಹೆಚ್ಚಾಗಿ ನಾವು ಆ ಪ್ರಜ್ಞೆಯಿಲ್ಲದ ಜಗತ್ತಿನಲ್ಲಿ ಇಂದು ಇದ್ದಂತೆ ಇರುತ್ತಲೇ ಇರಲಿಲ್ಲ. ನೋವು ನಮಗೆ ಬೇಡವಾಗಿದ್ದರೂ ನಮ್ಮ ಅಸ್ತಿತ್ವಕ್ಕೆ ಬೇಕೇ ಬೇಕಿತ್ತು – ಹಾಗಾಗಿಯೇ ಅದು ಇದೆ.

error: Content is protected !!