Friday, 18th October 2024

ಪೊಪಿ ಪೊಪಿ ಯೆಸ್ ಪಾಪಾ…

ವಿದೇಶವಾಸಿ

dhyapaa@gmail.com

ಲೇಖನ ಆರಂಭಿಸುವುದಕ್ಕಿಂತ ಮೊದಲು, ನನ್ನಿಂದ ಆದ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ನವೆಂಬರ್ ತಿಂಗಳ ಮೊದಲ ಎರಡು ವಾರ ಯುನೈಟೆಡ್ ಕಿಂಗ್‌ಡಮ್ ಪ್ರವಾಸದಲ್ಲಿದ್ದೆ. ಕನ್ನಡಿಗರು ಯುಕೆಯ ರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿ ಲಂಡನ್‌ನಿಂದ ಸ್ಕಾಟ್‌ಲ್ಯಾಂಡಿನ ಎಡಿನ್‌ಬರ್ಗ್ ತಲುಪಿದ್ದೆವು.

ಅಲ್ಲೊಂದು ಮೂರು ದಿನ, ನಂತರ ಉತ್ತರದಲ್ಲಿರುವ ಡಂಡಿ, ಎಬಾರ್ಡಿನ್, ಎವರ್‌ನೆಸ್, ಲಾಕ್‌ನೆಸ್, ಹಾಗೇ ಕೆಳಗೆ ಬಂದು ಗ್ಲಾಸ್ಗೋ, ಲೇಕ್ ಡಿಸ್ಟ್ರಿಕ್ಟ್, ಹೇ ಆನ್ ವೈ, ಕಾರ್ಡಿಫ್ ಜತೆಗೆ ದಾರಿಯಲ್ಲಿ ಸಿಗುವ ಹಲವಾರು ಊರು ಸುತ್ತಿ ಪುನಃ ಲಂಡನ್ ತಲುಪಿದ್ದೆವು. ಸ್ಕಾಟ್‌ಲ್ಯಾಂಡ್‌ನಲ್ಲಿರುವಾಗ ಕಂಡ ಮಳಿಗೆಗಳಲ್ಲಿ, ಅಂಗಡಿಗಳಲ್ಲಿ ಕೆಂಪು ಬಣ್ಣದ ನಾಲ್ಕು ದಳದ ಸುಮಾರು ೨ ಇಂಚು ಗಾತ್ರದ ಕೃತಕ ಹೂವು ಕಾಣುತ್ತಿತ್ತು. ನೂರಕ್ಕೆ ೯೦ರಷ್ಟು ಜನ ಆ ಹೂವನ್ನು ತಮ್ಮ ಹೃದಯಕ್ಕೆ ಹತ್ತಿರವಾಗಿ ಧರಿಸಿದ್ದರು. ಒಂದು ಸುಪರ್‌ ಮಾರ್ಕೆಟ್‌ನಲ್ಲಿ ಒಂದಷ್ಟು ಹೂವು, ಪಕ್ಕದಲ್ಲಿ ಒಂದು ಡಬ್ಬಿಯನ್ನೂ ಇಟ್ಟಿದ್ದರು.

ಕ್ಯಾಶ್ ಕೌಂಟರ್‌ನಲ್ಲಿ ಕುಳಿತವನಲ್ಲಿ, ಅದೇನು? ಬೆಲೆ ಎಷ್ಟು? ಎಂದು ಕೇಳಿದಾಗ, ಅದು ಪೊಪಿ ಪವರ್, ಅದಕ್ಕೆ ನಿರ್ದಿಷ್ಟ ಬೆಲೆ ಇಲ್ಲ. ನಿಮ್ಮ ಇಷ್ಟ, ನೀವು ಹಣ ಕೊಡದಿದ್ದರೂ ಕೇಳುವುದಿಲ್ಲ, ನಿಮಗೆ ಕೊಡಬೇಕೆಂದು ಅನಿಸಿದರೆ, ಹಣವನ್ನು ಡಬ್ಬದಲ್ಲಿ ಹಾಕಿ ಎಂದು ಪಕ್ಕದಲ್ಲಿದ್ದ ಡಬ್ಬ ತೋರಿಸಿದ. ಈ ಕೆಂಪು ಬಿಂಗಲಾಟಿ ಹೂವು ನನಗೇಕೆ? ಇದು ಯಾವುದೋ ಕಂಪನಿಯ ಪ್ರಚಾರದ ಗಿಮಿಕ್ ಇರಬೇಕು ಅಂತ ಅಲ್ಲಿಂದ ಹೊರಟಿದ್ದೆ. poppy flower ನಮ್ಮಲ್ಲಿ ಗಸಗಸೆ, ಅಥವಾ ಅಫೀಮು ಗಿಡದ ಹೂವನ್ನು ಹೋಲುವ ಕೆಂಪು ಹೂವು.

ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ, ಹೆಣ್ಣು ಗಂಡು ಬೇಧವಿಲ್ಲದೆ, ಉಡುಪಿನ ಮೇಲೆ ಸಣ್ಣ ಕೆಂಪು ಹೂವನ್ನು ಧರಿಸಿದ್ದರು. ಸ್ಕಾಟ್‌ಲ್ಯಾಂಡ್ ನ ಪಾರ್ಲಿಮೆಂಟ್‌ನ ಒಳಗೂ ನೌಕರರಿಂದ ಹಿಡಿದು ಮಂತ್ರಿಗಳವರೆಗೆ ಕೋಟಿನ ಮೇಲೆ, ಎದೆಯ ಎಡಭಾಗ ದಲ್ಲಿ, ವೆಲ್ವೆಟ್ ಕಾಗದದ ಹೂವು ಇಟ್ಟುಕೊಂಡಿದ್ದರು. ನವೆಂಬರ್ 11ರಂದು ಬೆಳಿಗ್ಗೆ 11 ಗಂಟೆಗೆ, ಎಡಿನ್‌ಬರ್ಗ್‌ ನಲ್ಲಿರುವ ಸ್ಕಾಟಿಶ್ ಮಾನ್ಯುಮೆಂಟ್ ಮುಂದೆ ನೂರಾರು ಜನ ಸೇರಿದ್ದರು.

ಎಲ್ಲರ ಎದೆಯ ಮೇಲೂ ಕೆಂಪು ಹೂವು. ಆವರಣದ ಒಳಗೆ ಸೇರಿದ್ದ ಜನರ ಕೈಯಲ್ಲಿ ಅದೇ ಕೆಂಪು ಹೂವಿನಿಂದ ತಯಾರಿಸಿದ
ಮಾಲೆಗಳಿದ್ದವು. ಅಲ್ಲಿ ಹೂತಿಟ್ಟ ಬಿಳಿ ಶಿಲುಬೆಯ ಮುಂದೆ ಮಾಲೆ ಇಡುವಾಗ, ಅದು ಶ್ರದ್ಧಾಂಜಲಿ ಕಾರ್ಯಕ್ರಮವೆಂದು ಯಾರಿಗಾದರೂ ತಿಳಿಯುತ್ತಿತ್ತು. ಸ್ಕಾಟ್‌ಲ್ಯಾಂಡ್ ರಾಜಧಾನಿಯ ಸದಾ ಗಿಜಿಗುಡುವ ರಸ್ತೆಯಲ್ಲೂ ಆ ಎರಡು ನಿಮಿಷ ಮಾತ್ರ ಸೂಜಿ ಬಿದ್ದರೂ ಕೇಳುವಷ್ಟು ಮೌನ!

ದಕ್ಷಿಣಕ್ಕೆ ಬರುತ್ತಿದ್ದಂತೆ ಅದೇ ರೀತಿಯ, ಆದರೆ ಎರಡು ದಳದ, ಜತೆಗೆ ಒಂದು ಹಸಿರು ಎಲೆಯ, ದೊಡ್ಡ ಗಾತ್ರದ ಹೂವುಗಳು ಮನೆಯ ಮುಂದಿನ ಗೋಡೆ, ಗೇಟು, ಬೀದಿ ದೀಪದ ಕಂಬದ ಮೇಲೂ ರಾರಾಜಿಸುತ್ತಿದ್ದವು. ಆಸ್ಪತ್ರೆ, ಕಾರ್ಖಾನೆ, ಕಚೇರಿ,
ಕೊನೆಗೆ ವಿಮಾನ ನಿಲ್ದಾಣದಲ್ಲೂ ಕೆಂಪು ಹೂವು ಕಂಡಾಗ ಅದರ ಹಿಂದೆ ಯಾವುದೋ ಅರ್ಥ ಪೂರ್ಣ ಸಂಗತಿ ಇದೆ ಎಂದು ಅನಿಸಲಾರಂಭವಾಯಿತು.

ಅದರ ಕುರಿತಂತೆ ಸ್ಥಳೀಯರಲ್ಲಿ ವಿಚಾರಿಸುವ ಅಥವಾ ಕೊನೆ ಪಕ್ಷ ಗೂಗಲ್‌ನಲ್ಲಿ ಹುಡುಕುವ ಗೋಜಿಗೂ ಹೋಗಲಿಲ್ಲ. ಅಲ್ಲಿಂದ ಹಿಂತಿರುಗಿ ಬಂದ ನಂತರವೇ ಆ ಕೆಂಪು ಹೂವಿನ ಮಹತ್ವ ತಿಳಿದದ್ದು. 1914ರಲ್ಲಿ ಆರಂಭವಾದ ಮೊದಲ ವಿಶ್ವ
ಯುದ್ಧದಲ್ಲಿ ಬ್ರಿಟಿಷ್ ಸಾಮ್ರಾಜ್ಯ, ಅಮೆರಿಕ, ಫ್ರಾನ್ಸ್, ಇಟಲಿ, ರಷ್ಯಾ ಇತ್ಯಾದಿ ದೇಶಗಳು ಒಂದೆಡೆ, ಜರ್ಮನಿ, ಆಸ್ಟ್ರಿಯಾ-ಹಂಗೇರಿ, ಒಟ್ಟಮನ್ ಸಾಮ್ರಾಜ್ಯ ಇನ್ನೊಂದು ಕಡೆ ಇದ್ದವು.

ಲಕ್ಷಾಂತರ ಸೈನಿಕರು ಬ್ರಿಟಿಷ್ ಸೈನ್ಯ ಸೇರಿಕೊಂಡರು, ಸಮರದಲ್ಲಿ ಸತ್ತರು, ಅಂಗಾಂಗ ಕಳೆದುಕೊಂಡರು. ಯುದ್ಧದಲ್ಲಿ ಬದುಕಿ, ಹಿಂತಿರುಗಿ ಮನೆಗೆ ಬಂದವರಲ್ಲೂ ಬಹುತೇಕರು ಮೊದಲಿನಂತಿರಲಿಲ್ಲ. 1918 ರ ನವೆಂಬರ್ 11ರಂದು ಬೆಳಿಗ್ಗೆ 11 ಗಂಟೆಗೆ ಯುದ್ಧ ಮುಗಿಯಿತೆಂದು ಸಂಧಾನಕ್ಕೆ ಸಹಿ ಹಾಕಲಾಯಿತು. ಇದನ್ನು ಕದನ ವಿರಾಮದ ದಿನ, ಸ್ಮರಣಾ ದಿವಸ ಅಥವಾ ಹಿರಿಯರ ದಿನ (ವೆಟರನ್ಸ್ ಡೇ) ಎಂದೂ ಆಚರಿಸುತ್ತಾರೆ.

ವಾಡಿಕೆಯಲ್ಲಿ, ಮಾಜಿ ಸೈನಿಕರನ್ನು ex-servicemen ಎಂದೂ, ಸೈನಿಕನ ಪತ್ನಿಯನ್ನು veteran ಎಂದೂ ಹೇಳುವುದಿದೆ. ಇಂದಿಗೂ ಯುಕೆ ಮತ್ತು ಯುರೋಪ್‌ನ ಬಹು ಭಾಗದಲ್ಲಿ ಪ್ರತಿ ವರ್ಷ ನವೆಂಬರ್ 11ರಂದು ಬೆಳಿಗ್ಗೆ 11 ಗಂಟೆಗೆ, ಸೈನಿಕರಿಗೆ
ಗೌರವ ಸಲ್ಲಿಸುವುದಕ್ಕೆ 2 ನಿಮಿಷದ ಮೌನಾಚರಣೆ ನಡೆಯುತ್ತದೆ. ಅಂದು ಬಹುತೇಕ ಜನರು ಪೊಪಿ ಹೂವನ್ನು ಎದೆಗೆ ಅಂಟಿಸಿಕೊಂಡಿರುತ್ತಾರೆ. ಪೊಪಿ ಹೂವೇ ಯಾಕೆ? ಅದಕ್ಕೂ ಇತಿಹಾಸವಿದೆ.

ನಾಲ್ಕು ವರ್ಷ ನಡೆದ ಯುದ್ಧದಲ್ಲಿ ಸಾಕಷ್ಟು ರುಂಡಗಳು ಧರೆಗೆ ಉರುಳಿದವು. ನೆತ್ತರಿನ ಕೋಡಿಯೇ ಹರಿಯಿತು. ಆ ಯುದ್ಧ ದಲ್ಲಿ ಕೆನಡಾದ ವೈದ್ಯ ಲೆಫ್ಟಿನೆಂಟ್ ಕರ್ನಲ್ ಜಾನ್ ಮೆಕ್‌ರೇ ಕೂಡ ಭಾಗಿಯಾಗಿದ್ದರು. ತಮ್ಮ 41ನೆಯ ವಯಸ್ಸಿನಲ್ಲಿ
ಸೇನೆಗೆ ಸೇರಿಕೊಂಡ ಮೆಕ್‌ರೇ ವೃತ್ತಿಯಲ್ಲಿ ವೈದ್ಯರಾಗಿದ್ದು, ಗನ್ನರ್ ಮತ್ತು ವೈದ್ಯರಾಗಿ ಸೇರಿಕೊಂಡಿದ್ದರು. ಅದು 1915ರ

ಮೇ 2ನೆಯ ತಾರೀಖು. ಬೆಲ್ಜಿಯಂನ ಉತ್ತರ ಭಾಗದಲ್ಲಿರುವ ಫ್ಲಾಂಡರ್ಸ್ ಪ್ರದೇಶದಲ್ಲಿ ಕದನ ಜೋರಾಗಿತ್ತು. ಇತಿಹಾಸ ದಲ್ಲಿಯೇ ಮೊದಲ ಬಾರಿಗೆ ಅಂದು ಫ್ರಾನ್ಸ್ ವಿರುದ್ಧ ಜರ್ಮನಿ ರಾಸಾಯನಿಕ ಆಯುಧ ಬಳಸಿತ್ತು. ಅಂದು ಮೆಕ್‌ರೇ ತಮ್ಮ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದರು. ಶೋಕದಲ್ಲಿದ್ದ ಮೆಕ್‌ರೇ, ಆಂಬುಲನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಯುದ್ಧದ ದಾಳಿಗೆ ಸಿಲುಕಿ ಛಿದ್ರ, ಶವದ ರಾಶಿಯನ್ನೇ ಹೊದ್ದು ಮಲಗಿದ ಭೂಮಿಯ ನಡುವೆಯೂ ಅರಳಿದ ಕೆಂಪು ಬಣ್ಣದ ಹೂವುಗಳನ್ನು ಕಂಡರು. ವಾಹನದಲ್ಲಿಯೇ ಕುಳಿತು 20 ನಿಮಿಷದಲ್ಲಿ ಒಂದು ಕವಿತೆ ಬರೆದರು.

ಅಂದು ಅವರು ಬರೆದ ’’In Flanders Fields’ ಕವಿತೆ ಇಂಗ್ಲಿಷ್ ಭಾಷೆಯಲ್ಲಿ, ಅದರಲ್ಲೂ ಕೆನಡಾದಲ್ಲಿ ಸಾರ್ವಕಾಲಿಕ ವಾಗಿ ಶ್ರೇಷ್ಠ ಕವಿತೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಫ್ಲಾಂಡರ್ಸ್ ಮೈದಾನದಲ್ಲಿ ಸೈನಿಕರ ಶವದ ನಡುವೆ, ಸಾಲು ಸಾಲು ಶಿಲುಬೆಗಳ ಮಧ್ಯದಲ್ಲಿ ಪೊಪಿ ಹೂವುಗಳು ಸಾಲು ಸಾಲಾಗಿ ಅರಳುತ್ತವೆ ಎಂದು ಆರಂಭವಾಗುವ ಕವಿತೆ, ಪೊಪಿ ಹೂವು,
ಸೈನಿಕರು, ಅವರ ತ್ಯಾಗವನ್ನು ಹೇಳುತ್ತದೆ.

ಕವಿತೆ ಮೊದಲು ಅವರಿಗೇ ಇಷ್ಟವಾಗಿರಲಿಲ್ಲ. ಅದನ್ನು ಮುದ್ದೆ ಮಾಡಿ ಎಸೆದಿದ್ದರು. ಅವರ ಜತೆಗಿರುವ ಸೈನಿಕನಿಗೆ ಅದು ಬಹಳ ಇಷ್ಟವಾಗಿತ್ತು. ಆತ ಅದನ್ನು ಪುನಃ ಬರೆದು, ಪ್ರಕಟಿಸುವಂತೆ ಒತ್ತಾಯಿಸಿದ್ದ. ಮೆಕ್‌ರೇ ಅದನ್ನು ಪುನಃ ಬರೆದು, ದಿ ಸ್ಪೆಕ್ಟೇಟರ್ ಪತ್ರಿಕೆಗೆ ಕಳಿಸಿದಾಗ ಅದು ತಿರಸ್ಕೃತಗೊಂಡಿತ್ತು. ನಂತರ ಅದನ್ನು ಪಂಚ್ ಪತ್ರಿಕೆ ಪ್ರಕಟಿಸಿತು, ಕವನ
ಜನಪ್ರಿಯ ವಾಯಿತು. ಯುದ್ಧದ ಕೊನೆಯ ದಿನಗಳಲ್ಲಿ ಮೆಕ್‌ರೇ ನಿಮೋನಿಯಾದಿಂದ ಸಾವನ್ನಪ್ಪಿದರು. ಅವರ ಕವನ ಇಂದಿಗೂ ಶಾಶ್ವತವಾಗಿದೆ.

ಆ ಕವಿತೆ ಬಹಳ ಜನರಿಗೆ ಪ್ರೇರಣೆ ನೀಡಿತಾದರೂ, ಅತಿಯಾಗಿ ಪ್ರೇರೇಪಿತರಾದವರು ಅಮೆರಿಕದ ಪ್ರಾಧ್ಯಾಪಕಿ, ಸೇನೆಯಲ್ಲಿ
ಕಾರ್ಯದರ್ಶಿಯ ಕೆಲಸ ಮಾಡುತ್ತಿದ್ದ ಮೊಯ್ನಾ ಮೈಕಲ್ ಮತ್ತು ಫ್ರಾನ್ಸ್‌ನ ಶಿಕ್ಷಕಿ ಅನ್ನಾ ಗುರೈನ್ ಎಂಬ ಇಬ್ಬರು ಮಹಿಳೆ ಯರು. ಗುರೈನ್ ಸಾಹಸಿ ಹೆಣ್ಣು. ಆಕೆ ಯುದ್ಧಕ್ಕೂ ಮೊದಲು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಫ್ರಾನ್ಸ್‌ನಿಂದ ಬ್ರಿಟನ್‌ಗೆ ಬಂದಿದ್ದಳು. ಯುದ್ಧ ಆರಂಭವಾದ ನಂತರ ಅಮೆರಿಕಕ್ಕೆ ತೆರಳಿದಳು.

ಯುದ್ಧ ಮುಗಿದ ನಂತರ, ಅಮೆರಿಕದ ಕೆಲವು ರಾಜ್ಯಗಳಲ್ಲಿ ಓಡಾಡಿ ಸೈನಿಕರ ಗೌರವ ದಿನ ನಿಗದಿಪಡಿಸುವುದು ಮತ್ತು
ಪೊಪಿ ಹೂವನ್ನು ಅದರ ಚಿಹ್ನೆಯನ್ನಾಗಿಸುವುದಕ್ಕೆ ಶ್ರಮಿಸಿದಳು. ನಂತರ ಯುಕೆಯ ಲಿವರ್‌ಪೂಲ್‌ಗೆ ಬಂದು ಬ್ರಿಟಿಷ್ ಲೀಜನ್‌ಗೆ ತಿಳಿಸಿ, ಒಪ್ಪಿಸಿದಳು. ಮೊದಲ ಹತ್ತು ಲಕ್ಷ ಹೂವನ್ನು ತಾನೇ ತಯಾರಿಸಿಕೊಟ್ಟಳು.

ಅತ್ತ ಮೊಯ್ನಾ ಕೂಡ ಇದರ ಪ್ರಚಾರ ಮಾಡಿದಳು. ಗುರೈನ್ ಮತ್ತು ಮೊಯ್ನಾ ಸೇರಿ ಆ ವರ್ಷ ಒಟ್ಟೂ 90 ಲಕ್ಷ ರೇಷ್ಮೆ ಪೊಪಿ ತಯಾರಿಸಿ ಬ್ರಿಟಿಷ್ ಲೀಜನ್‌ಗೆ ನೀಡಿದರು. ಅಂದಿನಿಂದ ಅದು ಪೊಪಿ ಅಪೀಲ್ ಎಂದೇ ಖ್ಯಾತವಾಯಿತು. ಅಂದು ಪೊಪಿ ಅಪೀಲ್‌ನಿಂದ 1 ಲಕ್ಷ ಪೌಂಡ್‌ಗಿಂತಲೂ ಹೆಚ್ಚಿನ ಹಣ ಸಂಗ್ರಹವಾಯಿತು. ಅದು ನಿವೃತ್ತ ಸೈನಿಕರ, ಸೈನಿಕ ವಿಧವೆಯರ, ಅವರ ಮಕ್ಕಳ ಆರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ಉಪಯೋಗಿಸುವ ಕಲ್ಯಾಣ ನಿಽಯಾಯಿತು.

ಇಂದು, 100 ವರ್ಷಗಳ ನಂತರವೂ ಪೊಪಿ ಅಪೀಲ್ ಜಾರಿಯಲ್ಲಿದ್ದು, ಸೈನಿಕರ ಯೋಗಕ್ಷೇಮಕ್ಕೆ ಹಣ ಸಂಗ್ರಹಿಸುತ್ತಿದೆ.
ಅಂದಂತೆ, ಬ್ರಿಟಿಷ್ ಲೀಜನ್ ಪೊಪಿ ತಯಾರಿಸುವ ಕಾರ್ಖಾನೆ ಸ್ಥಾಪಿಸಿತು ಎಂದೆನಲ್ಲ, ಆ ಕಾರ್ಖಾನೆ ಸ್ಥಾಪಿಸಿದ್ದು ಯುದ್ಧಕಾಲ ದಲ್ಲಿ ಫೀಲ್ಡ್ ಮಾರ್ಷಲ್ ಆಗಿದ್ದ ಡಗ್ಲಾಸ್ ಹೈಗ್‌ನ ಪತ್ನಿ ಲೇಡಿ ಹೈಗ್. ಆರಂಭದ ಬಂಡವಾಳವೆಂದರೆ ಸ್ವಲ್ಪ ಕೆಂಪು ಬಣ್ಣದ ಕಾಗದ ಮತ್ತು ಎರಡು ಕತ್ತರಿ. ಕಾರ್ಖಾನೆಯಲ್ಲಿ ಇಬ್ಬರು ನಿವೃತ್ತ ಸೈನಿಕರು ಮಾತ್ರ ಕೆಲಸ ಮಾಡುತ್ತಿದ್ದರು. ಇಂದು ಅಂಗಾಂಗ
ಕಳೆದುಕೊಂಡ ಸುಮಾರು 50 ನಿವೃತ್ತ ಸೈನಿಕರು ಕೆಲಸಮಾಡುತ್ತಿದ್ದಾರೆ. ಎಡಿನ್‌ಬರ್ಗ್‌ನಲ್ಲಿರುವ ಈ ಒಂದೇ ಕಾರ್ಖಾನೆ ಸ್ಕಾಟ್ಲೆಂಡ್‌ನಲ್ಲಿ ಹಂಚಲೆಂದೇ ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ಪೊಪಿ ಹೂವು ತಯಾರಾಗುತ್ತದೆ.

ಸುಮಾರು ೧೫,೦೦೦ಕ್ಕೂ ಹೆಚ್ಚು ಮಾಲೆಗಳು, 10000ಕ್ಕೂ ಹೆಚ್ಚು ಸ್ಮರಣಿಕೆಗಳನ್ನು ಕಾರ್ಖಾನೆ ತಯಾರಿಸುತ್ತದೆ. ೨೦೧೮ ರಲ್ಲಿ ಮೊದಲ ಬಾರಿ, ವಿಶ್ವಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರ ಸ್ಮರಣೆಗಾಗಿ ಖಾದಿ ಪೊಪಿಯನ್ನು ತಯಾರಿಸ ಲಾಯಿತು. ಯುಕೆ ಬಿಡಿ, ಇಂದು ಅಮೆರಿಕ, ಕೆನಡಾ, ದಕ್ಷಿಣ ಆಫ್ರಿಕಾ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಪೊಪಿ ತಯಾರಿಸುವ ಕಾರ್ಖಾನೆಗಳಿವೆ.

40000ಕ್ಕೂ ಹೆಚ್ಚು ಸ್ವಯಂಸೇವಕರು, 120ಕ್ಕೂ ಹೆಚ್ಚು ದೇಶದಲ್ಲಿ ೫ ಕೋಟಿಗೂ ಹೆಚ್ಚು ಪೊಪಿ ಹಂಚುತ್ತಾರೆ. ನಾವು ನೀಡುವ ಪ್ರತಿಯೊಂದು ಪೈಸೆಯೂ ಸೈನಿಕರ ಕಲ್ಯಾಣ ನಿಧಿಗೆ ಸಂದಾಯವಾಗುತ್ತದೆ. ಕಳೆದವರ್ಷ ಪೊಪಿ ಅಪೀಲ್‌ನಿಂದ ಸಂಗ್ರಹಿಸಿದ ಹಣದಿಂದ ಎರಡೂವರೆ ಸೈನಿಕರ ಕುಟುಂಬ ಲಾಭ ಪಡೆದಿದೆ. ಪೊಪಿಯ ಹಿಂದೆ ಇಷ್ಟೆಲ್ಲ ಕತೆ ಇದ್ದದ್ದು ತಿಳಿದಿರ ಲಿಲ್ಲ. ಅದರ ಕುರಿತು ಕಿಂಚಿತ್ತೂ ತಿಳಿಯದೆ ಉದಾಸೀನ ಮಾಡಿದ್ದೆ. ಅದರ ಕುರಿತು ತಿಳಿಯದೇ, ಅಸಡ್ಡೆ ತೋರಿಸಿದ್ದು ನನ್ನ ಪ್ರಮಾದವೆಂದೇ ಹೇಳಬೇಕು. ಅದು ಇಂದಿಗೂ ನನ್ನನ್ನು ಕುಟುಕುತ್ತಿದೆ. ಅದಕ್ಕಾಗಿಯೇ ವಿಷಾದ ವ್ಯಕ್ತಪಡಿಸಿದ್ದು. ಮುಂದೆ ಎಲ್ಲಿಯೇ ಪೊಪಿ ಕಂಡರೂ ಖರೀದಿಸುತ್ತೇನೆ.

ಯಾವ ದೇಶದವರೇ ಆಗಲಿ, ಸೈನಿಕರು ಸೈನಿಕರು ತಾನೆ? ಅವರೆಲ್ಲರೂ ಹೋರಾಡುವುದು ಅವರ ನೆಲ, ಜಲ, ಜನರ ರಕ್ಷಣೆಗಾಗಿ. ಅವರು ಬದುಕುವುದಷ್ಟೇ ಅಲ್ಲ, ಪ್ರಾಣ ತ್ಯಾಗ ಮಾಡುವುದೂ ಅವರ ನಾಡಿಗಾಗಿ ವಿನಃ ಸ್ವಂತಕ್ಕಲ್ಲ. ಅಂಥವರಿಗೆ ಗೌರವ ಸೂಚಕ ಒಂದು ಕ್ಷಣಕ್ಕೋ, ಒಂದು ದಿನಕ್ಕೋ ಸೀಮಿತವಲ್ಲ. ಸೈನಿಕರಿಗೆ ಸಿಗುವ ಗೌರವ ಯಾವುದೇ ಪರಿಽಗೆ, ಪರಿಮಿತಿಗೆ ಒಳಗಾಗದೇ ವಿಶ್ವದಾದ್ಯಂತ ಪಸರಿಸಲಿ.