Sunday, 8th September 2024

ಪೋಷಕತ್ವ ಮತ್ತು ಭಾವನಾತ್ಮಕ ಅಪರಿಪಕ್ವತೆ

ಶ್ವೇತ ಪತ್ರ

shwethabc@gmail.com

ಭಾವನಾತ್ಮಕವಾಗಿ ಪರಿಪಕ್ವರಾಗುವುದೆಂದರೆ, ವಾಸ್ತವಕ್ಕೆ ಹೆಚ್ಚು ಹತ್ತಿರವಾಗುತ್ತಾ ಯಾವುದೇ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಾ, ಯಾವುದೇ ವಿಷಯವನ್ನು ಇದು ಹೀಗೆ, ಇದು ಹಾಗೆ ಎಂದು ನಿರ್ಧರಿಸದೆ, ಗೌರವಯುತವಾಗಿ, ಸಹಾನುಭೂತಿಯಿಂದ ಬದುಕುವುದು. ಭಾವನಾತ್ಮಕವಾಗಿ ಅಸ್ಥಿರವಾದ ಪೋಷಕತ್ವಕ್ಕೆ ನಾವು-ನೀವು ಕಾರಣರಲ್ಲ; ಆದರೆ ಅದರಿಂದ ಹೊರಬರುವುದಕ್ಕೆ ಮಾತ್ರ ನಾವು-ನೀವು ಕಾರಣರಾಗಿ ಬಿಡಬೇಕು.

ಬದುಕಲ್ಲಿ ಏನೋ ಕಳೆದುಕೊಂಡು ಬೆಳೆದುಬಿಟ್ಟೆವು ಎಂಬ ಭಾವ ಕೆಲವೊಮ್ಮೆ ಆವರಿಸಿಬಿಡುತ್ತದೆ. ಭೌತಿಕವಾದದ್ದೇನೋ ಸಿಗಲಿಲ್ಲವೆಂದಾಗ ಅದರಿಂದ
ಯಾವುದೇ ಮಾನಸಿಕ ಅಸ್ಥಿರತೆ ಉಂಟಾಗುವುದಿಲ್ಲ. ಅದೇ ಭಾವನಾತ್ಮಕ ಕೊಂಡಿಯೊಂದು ಕಳಚಿದಾಗ ಬದುಕಲ್ಲಿ ಖಾಲಿತನ, ಏನೋ ಕಳೆದುಕೊಂಡು ಬಿಟ್ಟೆವೆಂಬ ಭಾವ, ನಮ್ಮನ್ನು ಯಾರೋ ಕಡೆಗಣಿಸಿದರೆಂಬ ನೋವು. ಈ ತರಹದ ಅನುಭವ ಸಾಮಾನ್ಯವಾಗಿ ನಮ್ಮೆಲ್ಲರನ್ನೂ ಕಾಡುತ್ತದೆ.

ಆದರೆ ಮಾನಸಿಕವಾಗಿ ತಮ್ಮೊಂದಿಗೆ ಅಷ್ಟೊಂದು ಕನೆಕ್ಟ್ ಆಗದ ಪೋಷಕರ ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುವುದನ್ನು ನಾವು ಸಂಶೋಧನೆಗಳಲ್ಲಿ ಗುರುತಿಸುತ್ತೇವೆ. ಈ ಮಕ್ಕಳು ಮೌನವಾಗೇ ನರಳುತ್ತಾರೆ. ಒಂಟಿತನ ಕಾಡುತ್ತಿದ್ದರೂ, ತಮ್ಮದೇನು ತಪ್ಪು ಎಂದು ಗುರುತಿಸಲಾಗದೆ ತಮ್ಮನ್ನೇ ದೂಷಿಸುತ್ತ ಒದ್ದಾಡುತ್ತಾರೆ. ಈ ಮಕ್ಕಳಿಗೆ ತಮ್ಮ ಪೋಷಕರು ತಮಗೆ ಒತ್ತಾಸೆಯಾಗಿದ್ದಾರೆ ಎನ್ನುವುದಕ್ಕಿಂತಲೂ ಒತ್ತಡಕಾರಕವಾಗಿದ್ದಾರೆ ಎನಿಸಿಬಿಡುತ್ತದೆ.

ನನ್ನ ಆಪ್ತಸಲಹೆಯ ಅನುಭವದಲ್ಲಿ ನೋಡಿರುವಂತೆ ಊಹಿಸಲೂ ಸಾಧ್ಯವಾಗದ, ಮಕ್ಕಳ ನಂಬಿಕೆಗೆ ಎಟುಕದ, ತಮ್ಮಷ್ಟಕ್ಕೆ ತಾವೇ ಹುದುಗಿ ಹೋಗಿ ರುವ ಪೋಷಕರನ್ನು ನೋಡಿದ್ದೇನೆ. ಇಂಥವರ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ದೊಡ್ಡವರ ಜವಾಬ್ದಾರಿಗಳನ್ನು ತಾವೇ ಹೆಗಲಿಗೇರಿಸಿಕೊಳ್ಳುತ್ತಾ ಬೆಳೆಯುತ್ತಾ ಹೋಗುತ್ತಾರೆ. ಹಾಗಿದ್ದರೆ ಭಾವನಾತ್ಮಕ ಅಪರಿಪಕ್ವತೆ ಎಂದರೆ ಏನು? ಭಾವನಾತ್ಮಕವಾಗಿ ಅಪರಿಪಕ್ವರಾದ ಪೋಷಕರ ಸ್ವಭಾವಗಳೇನು? ಇಂಥ ಅಪರಿಪಕ್ವ ಪೋಷಕತ್ವದಿಂದ ಮಾಗುವುದು ಹೇಗೆ? ಎಂಬ ವಿಚಾರಗಳನ್ನು ಮುಂದಿಟ್ಟುಕೊಂಡು ಇಂದಿನ ಅಂಕಣವನ್ನು ಬರೆಯುತ್ತಿದ್ದೇನೆ.

ಭಾವನಾತ್ಮಕವಾಗಿ ಮಕ್ಕಳಿಂದ ದೂರ ಉಳಿದುಬಿಡುವುದು, ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ಅಸ್ಥಿರವಾಗಿ ಬಿಡುವುದು ಹಾಗೂ ಸ್ವಯಂ ಕೇಂದ್ರಿತ ಸ್ವಭಾವವನ್ನು ಮೈಗೂಡಿಸಿಕೊಂಡಿರುವುದು ಇದೇ ಭಾವನಾತ್ಮಕ ಅಸ್ಥಿರತೆ. ಸ್ಪೂರ್ತಿ ಎರಡನೆಯ ಬಿಎ ಅಭ್ಯಾಸ ಮಾಡುತ್ತಿರುವ ನನ್ನ ವಿದ್ಯಾರ್ಥಿನಿ, ದೂರದ ಬೆಳಗಾವಿ ಜಿಲ್ಲೆಯವಳು. ಬೆಂಗಳೂರಿನಲ್ಲಿ ಹಾಸ್ಟೆಲ್ ನಲ್ಲಿ ಇರುತ್ತಾಳೆ. ಆಕೆಗೂ ಅವಳ ಪೋಷಕರಿಗೂ ಅದೇನೋ ಘರ್ಷಣೆ. ಮೊನ್ನೆ ಅಪ್ಪ ಅಮ್ಮನ ಜತೆ ಜಗಳವಾಡಿಕೊಂಡು ನನ್ನ ಬಳಿ ಬಂದಿದ್ದಳು. ಅವಳನ್ನು ಸಂತೈಸುತ್ತಾ ಮಾತನಾಡಿಸುತ್ತಿದ್ದೆ.

ಸ್ಪೂರ್ತಿ ಕಣ್ಣೀರಾಗುತ್ತಾ ತನ್ನ ಬದುಕಿನ ಚಿತ್ರಣವನ್ನು ನನ್ನೆದುರಿಗೆ ತೆರೆದಿಡುತ್ತಾ ಹೋದಳು. ಚಿಕ್ಕ ವಯಸ್ಸಿನಿಂದಲೂ ಅಜ್ಜಿ ತಾತನ ಮನೆಯಲ್ಲಿ ಬೆಳೆದ ಅವಳು, ದಸರಾ ಅಥವಾ ಬೇಸಗೆ ರಜೆಗಷ್ಟೇ ತನ್ನೂರಿಗೆ (ಅಪ್ಪ-ಅಮ್ಮನ ಬಳಿಗೆ) ಹೋಗುತ್ತಿದ್ದಳು. ಅಪ್ಪ-ಅಮ್ಮ ಅವಳಿಗೆ ಎಂದೂ ಭಾವನಾತ್ಮಕ ವಾಗಿ ಹತ್ತಿರವೇ ಆಗಿರಲಿಲ್ಲ, ಯಾವತ್ತಿಗೂ ಮಾನಸಿಕ ಧೈರ್ಯವನ್ನು ತುಂಬಲೇ ಇಲ್ಲ. ಸದಾ ತಣ್ಣಗಿರುತ್ತಿದ್ದ ಅವರ ವರ್ತನೆ ಇವಳಲ್ಲಿ ಒಂದು ರೀತಿಯ ಅಭದ್ರತೆಯನ್ನು ಉಂಟುಮಾಡುತ್ತಿತ್ತು. ಸ್ಪೂರ್ತಿಯ ತಂದೆ-ತಾಯಿಗಳೆಂದಿಗೂ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದೇ ಇಲ್ಲವಂತೆ. ಇವಳಾಗೇ ಭಾವನಾ ತ್ಮಕವಾಗಿ ಹತ್ತಿರವಾಗಲು ಹೋದಷ್ಟೂ, ಅಂಥ ಹಿತಕರ ವಾತಾವರಣ ನೀಡಲು ಅವರು ನಿರಾಕರಿಸುತ್ತಿದ್ದರಂತೆ, ಸಣ್ಣಪುಟ್ಟ ಸಂಗತಿಗಳಿಗೂ ಅತಿರೇಕ ವಾಗಿ ಪ್ರತಿಕ್ರಿಯಿಸುತ್ತಿದ್ದರಂತೆ.

ಕೆಲವೊಮ್ಮೆ ಕಾರಣವಿಲ್ಲದೆ ವಿಲಕ್ಷಣವಾಗಿ ವರ್ತಿಸುತ್ತಿದ್ದರಂತೆ. ‘ನನಗೆ ಏನಾದರೂ ಬೇಸರವಾದರೆ ಯಾವುದೇ ರೀತಿಯಲ್ಲೂ ಸ್ಪಂದಿಸದೆ ನಿರ್ಲಿಪ್ತವಾಗಿ ಇದ್ದುಬಿಡುತ್ತಿದ್ದರು’ ಎನ್ನುತ್ತಿದ್ದ ಸ್ಪೂರ್ತಿ, ‘ಅಷ್ಟೇ ಅಲ್ಲ ಮೇಡಂ, ನಾವು ಮನೆಯಲ್ಲಿದ್ದರೂ ನಮ್ಮನ್ನು ಯಾರೂ ಗಮನಿಸುತ್ತಿಲ್ಲವೆಂಬ ಭಾವವಿದೆ ಯಲ್ಲ, ಅದರಷ್ಟು ದೊಡ್ಡ ಹಿಂಸೆ ಮತ್ತಾವುದೂ ಇಲ್ಲ’ ಎಂಬ ಸಂಕಟವನ್ನು ನನ್ನಲ್ಲಿ ತೋಡಿಕೊಳ್ಳುತ್ತಿದ್ದಳು. ಸ್ಪೂರ್ತಿ ಮೃದುವಾಗಿ ಏನನ್ನೇ ವಿರೋಧಿಸಿದರೂ ಪೋಷಕರು ವಿಪರೀತ ಕೋಪಿಷ್ಟರಾಗಿ ಬಿಡುತ್ತಿದ್ದರಂತೆ. ಹೊಸ ಆಲೋಚನೆಗಳನ್ನು ಎಂದಿಗೂ ಅವರು ಸ್ವೀಕರಿಸುತ್ತಿರಲಿಲ್ಲವಂತೆ.

‘ನಾನು ಸದಾ ಅವರೊಂದಿಗೆ ವಿಶ್ವಾಸ ವಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುತ್ತಿದ್ದ ನನ್ನ ತಂದೆ- ತಾಯಿ, ಎಂದಿಗೂ ನನ್ನ ಬಳಿ ಅಂಥದೇ ವಿಶ್ವಾಸ ದಿಂದ ನಡೆದುಕೊಂಡಿದ್ದೆ ಇಲ್ಲ’ ಎಂದು ಹೇಳಿಕೊಂಡಿದ್ದಳು ಸ್ಪೂರ್ತಿ. ಅವಳ ತಂದೆ-ತಾಯಿ ಬೇರೆಯವರ ಸಂವೇದನೆಗಳನ್ನೂ ಗೌರವಿಸುತ್ತಿರಲಿಲ್ಲ ಮತ್ತು ತಮ್ಮ ಆಸಕ್ತಿಗಳಿಗಷ್ಟೇ ಪ್ರಾಮುಖ್ಯ ನೀಡುತ್ತಿದ್ದರು. ಮಗಳ ಯಾವುದೇ ಯಶಸ್ಸು ಅವರಿಗೆ ಮುಖ್ಯವಾಗುತ್ತಲೇ ಇರಲಿಲ್ಲ ಎಂಬುದು ಸ್ಪೂರ್ತಿಯ ಮಾತುಗಳಲ್ಲಿ ಇಣುಕುತ್ತಿತ್ತು.

ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ನನಗೆ ಅನಿಸಿದ್ದಿಷ್ಟು. ನಮ್ಮಲ್ಲಿ ಅನೇಕ ಪೋಷಕರಿಗೆ ಒಂದು ಭಾವನೆಯಿದೆ. ಅದೇನೆಂದರೆ, ಮಕ್ಕಳಿಗೆ ಬ್ಯಾಗು, ಬಟ್ಟೆ, ಪುಸ್ತಕ ಎಲ್ಲವನ್ನೂ ಕೊಡಿಸುತ್ತೇವೆ. ನಮ್ಮ ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರ ಮಕ್ಕಳಿಗಿಂತ ಚೆನ್ನಾಗಿ ಸಾಕಿದ್ದೇವೆ. ಇನ್ನೇನು ದಾಡಿ ಇವರಿಗೆ? ಅನ್ನುವ
ತಾತ್ಸಾರ. ಪೋಷಕರೇ ನೆನಪಿರಲಿ, ಮಕ್ಕಳಿಗೆ ನೀವೇನು ಕೊಡಿಸಿದ್ದೀರಿ ಎನ್ನುವುದಕ್ಕಿಂತ, ಭಾವನಾತ್ಮಕವಾಗಿ ಅವರ ಜತೆ ಎಷ್ಟು ಕನೆಕ್ಟ್ ಆಗಿದ್ದೀರಿ ಎಂಬುದು ಬಹಳ ಮುಖ್ಯವಾಗುತ್ತಾ ಹೋಗುತ್ತದೆ. ಮಕ್ಕಳು ತಮ್ಮ ಪೋಷಕರಿಂದ ಭಾವನಾತ್ಮಕವಾದ, ಮೌಲ್ಯಯುತವಾದ ಸಹಾಯವನ್ನು, ಪ್ರೀತಿಯನ್ನು, ಕೇರಿಂಗ್ ಅನ್ನು ಹೆಚ್ಚೆಚ್ಚು ನಿರೀಕ್ಷಿಸುತ್ತಾರೆ. ಇವು ಪೋಷಕರಿಂದ ಸಿಗದೇ ಹೋದಾಗ, ಅವನ್ನು ಮನಸ್ಸಿನ ಗಾಯಗಳನ್ನಾಗಿ ಮಾಡಿ
ಕೊಂಡುಬಿಡುತ್ತಾರೆ.

ಎಷ್ಟೋ ಮಕ್ಕಳು ಇಂಥ ಅನೇಕ ಘಟನೆಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ದೀಪಾ ಮತ್ತು ಅವಳ ತಂಗಿ ಅನನ್ಯ ಇಬ್ಬರೂ ತಮ್ಮ ದೊಡ್ಡಮ್ಮನ (ತಾಯಿಯ ಅಕ್ಕ) ಮನೆಯಲ್ಲಿ ಓದುತ್ತಿರುತ್ತಾರೆ. ದೊಡ್ಡಮ್ಮನ ಮಗನಿಂದಲೇ ಚಿಕ್ಕ ವಯಸ್ಸಿನಲ್ಲೇ ಲೈಂಗಿಕ ದೌರ್ಜನ್ಯಕ್ಕೂ ಒಳಗಾಗುತ್ತಾರೆ. ಈ
ವಿಷಯವನ್ನು ತಮ್ಮ ತಂದೆ-ತಾಯಿಯ ಗಮನಕ್ಕೆ ತಂದರೂ, ಈ ವಿಷಯಕ್ಕೂ ತಮಗೂ ಸಂಬಂಧವೇ ಇಲ್ಲವೆನ್ನುವಂತೆ ಅವರು ಇದ್ದುಬಿಡುತ್ತಾರೆ. ಈ ಘಟನೆ ದೀಪಾಳ ಮಾನಸಿಕತೆಯ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂದರೆ, ಇಂದಿಗೂ ಅವಳು ತನ್ನ ತಂದೆ-ತಾಯಿಯನ್ನು ಕ್ಷಮಿಸಲು ತಯಾರಿಲ್ಲ. ಇಂಥ ಅನುಭವವಿರುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ.

ನಾವೆಲ್ಲ ಪೋಷಕರ ಮಾನಸಿಕ, ಭಾವನಾತ್ಮಕ ಅಪರಿಪಕ್ವತೆಯ ಗುಣಗಳ ಪರಿಣಾಮದಿಂದಾಗಿ ಮನಸ್ಸಿನಲ್ಲಾಗಿರುವ ಗಾಯಗಳನ್ನು ಮಾಗಿಸಿಕೊಳ್ಳ ಬೇಕಿದೆ. ಆದರೆ ಹೇಗೆ? ಅದು ಸಾಧ್ಯವಾಗುವುದು ನಮ್ಮನ್ನು ನಾವು ಮರುಹುಡುಕಿಕೊಂಡಾಗ ಮಾತ್ರ. ಇಲ್ಲಿ ಮೊದಲು ನಾವು ಒಂದು ಸಂಗತಿಯನ್ನು ಗುರುತಿಸಿಕೊಳ್ಳಬೇಕಿದೆ. ಅದೇನೆಂದರೆ ನಮ್ಮ ಪೋಷಕರ ಜೀವನದಲ್ಲಿ ಎಂದೋ ಆಗಿಹೋದ ಆಘಾತವೊಂದು ಅವರ ಈ ವರ್ತನೆಗೆ ಕಾರಣವಾಗಿರ ಬಹುದು. ಬಹುಶಃ ಹೀಗೆಂದುಕೊಂಡು ಬಿಟ್ಟರೆ ಪದೇಪದೆ ನಮ್ಮ ಬಳಲಿಕೆ ತಪ್ಪುತ್ತದೆ. ಭಾವನಾ ತ್ಮಕವಾಗಿ ಅಪರಿಪಕ್ವವಾದ ಪೋಷಕರು ಬಹುಶಃ ಭಾವನಾತ್ಮಕವಾಗಿರಲು ಪ್ರಯತ್ನಪಟ್ಟಾಗಲೆಲ್ಲಾ ಎಮೋಷನಲ್ ಫೋಬಿಯಾಗೆ (ಭಾವನಾತ್ಮಕ ಅತಿಭೀತಿಗೆ) ಒಳಗಾಗಿದ್ದಿರಬಹುದು.

ಯಾವಾಗ ಈ ರೀತಿಯ ಅತಿಭೀತಿ ಅವರನ್ನು ಕಾಡುವುದೋ ಅಂಥ ಸಮಯದಲ್ಲಿ ಅವರು ಯಾರೊಂದಿಗೂ ಭಾವನಾತ್ಮಕವಾಗಿ ಕನೆಕ್ಟ್ ಆಗಲು ಹಿಂಜರಿದುಬಿಡಬಹುದು. ನಮ್ಮ ಪೋಷಕರ ಕುರಿತು ನಮಗೆ ಗೊತ್ತಿಲ್ಲದ ಈ ವಿಷಯವನ್ನು, ಈಗ ಗೊತ್ತಾದ ಮೇಲೆ ನಾವು ನಿಧಾನವಾಗಿ ಒಪ್ಪಿಕೊಳ್ಳ ಬೇಕಾಗುತ್ತದೆ. ಭಾವನಾತ್ಮಕವಾಗಿ ಅಪರಿಪಕ್ವರಾದ ಪೋಷಕರು ಸದಾ ಒತ್ತಡದಲ್ಲಿ ಇರುತ್ತಾರೆ. ಅವರ ವರ್ತನೆ ಸ್ವಲ್ಪ ಸಿನಿಕತೆಯಿಂದಲೂ
ಕೂಡಿರುತ್ತದೆ ಮತ್ತು ಅವರು ಸದಾ ಯಾವುದಾದರೂ ಒಂದು ವಿಚಾರದ ಬಗ್ಗೆ ಆಕ್ಷೇಪಿಸುತ್ತಲೇ ಇರುತ್ತಾರೆ. ಈ ಎಲ್ಲಾ ವಿಚಾರಗಳು ಗೊತ್ತಿದ್ದರೂ ಅವರು ಬದಲಾಗಲು ಒಪ್ಪುವುದಿಲ್ಲ ಹಾಗೂ ನೀವೆಷ್ಟೇ ಅವರನ್ನು ಬದಲಾಯಿಸಲು ಪ್ರಯತ್ನಿಸಿದರೂ ಅವರು ಬದಲಾದದ್ದು ಎಷ್ಟು ಮಾತ್ರ ಎಂಬುದನ್ನು ನೀವೇ ಯೋಚಿಸಿ!

ಭಾವನಾತ್ಮಕವಾಗಿ ಅಪರಿಪಕ್ವರಾದ ಪೋಷಕರೊಂದಿಗೆ ವ್ಯವಹರಿಸುವಾಗ ಅವಲೋಕನದ ದೃಷ್ಟಿಕೋನ ನಮ್ಮದಾಗಿರಲಿ. ಅವಲೋಕಿಸುವುದು ಅಭ್ಯಾಸವಾದಾಗ ಅನೇಕ ಕ್ಲಿಷ್ಟಕರ ಸಂದರ್ಭವನ್ನು ನಿಭಾಯಿಸುವುದು ನಮಗೆ ಸುಲಭ ವಾಗುತ್ತದೆ. ಅವಲೋಕನವು ನಮ್ಮೊಳಗಿನ ಅಪೇಕ್ಷೆಗಳಿಗೂ
ಎದುರಿನಲ್ಲಿರುವ ವಾಸ್ತವಕ್ಕೂ ಕೊಂಡಿಯಾಗಿ ನಿಲ್ಲುತ್ತದೆ, ನೆನಪಿರಲಿ.

ಭಾವನಾತ್ಮಕ ಪರಿಪಕ್ವತೆ ಬಹುಮುಖ್ಯ ಭಾವನಾತ್ಮಕವಾಗಿ ಪರಿಪಕ್ವರಾಗುವುದೆಂದರೆ, ವಾಸ್ತವಕ್ಕೆ ಹೆಚ್ಚು ಹತ್ತಿರವಾಗುತ್ತಾ ಯಾವುದೇ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಾ, ಯಾವುದೇ ವಿಷಯವನ್ನು ಇದು ಹೀಗೆ, ಇದು ಹಾಗೆ ಎಂದು ನಿರ್ಧರಿಸದೆ, ಗೌರವಯುತವಾಗಿ, ಸಹಾನುಭೂತಿಯಿಂದ, ಒಟ್ಟಾರೆಯಾಗಿ ಧನಾತ್ಮಕತೆಯಿಂದ ಬದುಕು ವುದು. ಭಾವನಾತ್ಮಕವಾಗಿ ಪರಿಪಕ್ವರಾಗಿರುವ ಜನರೆಂದಿಗೂ ಅದ್ಭುತವಾಗಿ ಡಿಸೈನ್ ಮಾಡಿ ಕಟ್ಟಿದ ಮನೆಯಂತೆ. ಎಲ್ಲವೂ ಅದರ ಪಾಡಿಗೆ ಅದು ಕೆಲಸ ಮಾಡುತ್ತಿರುತ್ತದೆ, ಅದರೆಡೆಗೆ ನಮ್ಮ ಗಮನ ಹೋಗುವುದೇ ಇಲ್ಲ. ಅದೇ ಮನೆಯಲ್ಲಿರುವ
ಕೊಳಾಯಿ ತೊಟ್ಟಿಕ್ಕುತ್ತಿದ್ದರೆ, ಕಾಲಿಂಗ್ ಬೆಲ್ ಕೆಟ್ಟು ಹೋಗಿದ್ದರೆ, ಟ್ಯೂಬ್‌ಲೈಟ್ ಆನ್ ಆಗುತ್ತಿಲ್ಲವೆಂದರೆ ನಮ್ಮ ಗಮನವೆಲ್ಲ ಅದರೆಡೆಗೇ ಇರುತ್ತದೆ.

ಮನೆಯ ಆ ಸಮಸ್ಯೆಯನ್ನು ಮೊದಲು ರಿಪೇರಿ ಮಾಡಿಬಿಡಬೇಕೆನಿಸುತ್ತದೆ, ಅಲ್ಲವೇ? ಇದೊಂದು ಉದಾಹರಣೆ ಸಾಕು ಭಾವನಾತ್ಮಕ ಪರಿಪಕ್ವತೆ ಹಾಗೂ
ಭಾವನಾತ್ಮಕ ಅಪರಿಪಕ್ವತೆಯನ್ನು ವಿವರಿಸಲು. ಭಾವನಾತ್ಮಕವಾಗಿ ಪರಿಪಕ್ವವಾಗಿರುವವರೊಡನೆ ವ್ಯವಹರಿಸುವುದು ಇಷ್ಟೇ ಹಗುರ ಮತ್ತು ಸುಲಭ. ಅದಕ್ಕೆ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇರುವುದಿಲ್ಲ. ಇವರು ಕಾರಣ ಹಾಗೂ ಭಾವನೆಗಳನ್ನು ಸಮತೋಲನದಿಂದ ನಿಭಾಯಿಸುತ್ತಾರೆ, ಅವರದೇ ಅವಶ್ಯಕತೆ ಹಾಗೂ ಸಂದರ್ಭಕ್ಕೆ ತಕ್ಕಂತೆ. ಬದುಕನ್ನು ಅವರೆಂದಿಗೂ ‘ವಿನ್ -ವಿನ್’ ಮನಸ್ಥಿತಿಯಿಂದಲೇ ನೋಡುತ್ತಾರೆ.

ಸಂಬಂಧಗಳಲ್ಲೇ ನಾದರೂ ಘರ್ಷಣೆ ಎದುರಾದರೆ ಅವನ್ನು ಪರಿಣಾಮಕಾರಿಯಾಗಿ ಎದುರಿಸುವರೇ ವಿನಾ, ಭಾವನೆ ಗಳನ್ನು ಕುಶಲವಾಗಿ ನಿರ್ವಹಿ
ಸಿಯೋ ಅಥವಾ ದೀರ್ಘಮೌನದ ನಿಟ್ಟುಸಿರಿನೊಳಗೆ ಮುಳುಗಿ ಹೋಗಲು ಬಿಡುವುದಿಲ್ಲ. ಬೇರೆಯ ವರ ದೃಷ್ಟಿಕೋನ ಗಳನ್ನು ಅರ್ಥೈಸುವುದು ಇವರ ಮತ್ತೊಂದು ಬಹಳ ಮುಖ್ಯಗುಣ. ಭಾವನಾತ್ಮಕವಾಗಿ ಅಪರಿಪಕ್ವ ರಾದ ಪೋಷಕರ ಜತೆ ಇದ್ದು ಇದ್ದು, ಭಾವನಾತ್ಮಕ ಪರಿಪಕ್ವತೆ ಎಂಬುದು
ನಿಮಗೊಂದು ಕನಸೇನೋ ಎಂಬಂತೆ ಭಾಸವಾಗಿರಬಹುದು. ನಾವೆಲ್ಲ ಚಿಕ್ಕ ವಯಸ್ಸಿನಿಂದಲೇ ಈ ಮಾನಸಿಕ ಹೊಡೆತಗಳಿಗೆ ಒಗ್ಗಿಕೊಂಡು ಬಿಟ್ಟಿದ್ದೇವೆ. ನಮ್ಮ ಪೋಷಕರು ಹೇಗಿದ್ದರೋ ಅದರ ಚಿಂತೆ ನಮಗೆ ಬೇಡ; ನಾವು ನಮ್ಮ ಮುಖವಾಡಗಳನ್ನು ಕಳಚಿ ಭಾವನಾತ್ಮಕ ಸ್ಥಿರತೆ ಎಂಬ ಸುಸ್ಥಿರವಾದ ಪರದೆಯನ್ನು ನಮ್ಮ ಸುತ್ತ ಹೆಣೆದುಕೊಳ್ಳಬೇಕು.

ಭಾವನಾತ್ಮಕವಾಗಿ ಸ್ಥಿರವಾಗಿರುವ ವರನ್ನು ನೋಡುತ್ತಾ ನಾವು ನಾವಾಗಿರುವುದನ್ನು ಕಲಿಯಬೇಕು. ಥಟ್ಟನೆ ಪ್ರತಿಕ್ರಿಯಿಸಿ ಬಿಡುವುದಕ್ಕಿಂತ, ಯೋಚಿಸಿ ವ್ಯವಹರಿಸು ವುದನ್ನು ನಮ್ಮದಾಗಿಸಿಕೊಳ್ಳಬೇಕು. ಯಾವುದೋ ಹಳೆಯ ಆಲೋಚನಾ ವಿನ್ಯಾಸ ಗಳಿಗೆ ಜೋತುಬೀಳದೆ ಹೊಸ ಮನೋ ಭಾವಗಳಿಗೆ ತೆರೆದು ಕೊಳ್ಳಬೇಕು. ಭಾವನಾತ್ಮಕವಾಗಿ ಅಸ್ಥಿರವಾದ ಪೋಷಕತ್ವಕ್ಕೆ ನಾವು-ನೀವು ಕಾರಣರಲ್ಲ; ಆದರೆ ಅದರಿಂದ ಹೊರಬರುವುದಕ್ಕೆ ಮಾತ್ರ ನಾವು-ನೀವು ಕಾರಣರಾಗಿ ಬಿಡಬೇಕು. ಭಾವನಾತ್ಮಕ ವಾಗಿ ಅಸ್ಥಿರವಾಗಿರುವ ಪೋಷಕತ್ವದ ಹಳೆಯ ಮಾನಸಿಕ ಅಭ್ಯಾಸಗಳನ್ನು ಹೊರಗಿಟ್ಟು ನಿಮ್ಮ ಒಳಗಿನ ಆಲೋಚನೆ, ಸಂವೇದನೆಗಳಿಗೆ ಅನುಗುಣವಾಗಿ ಬದುಕಿ ಬಿಡುವುದು ನಿಮಗೆ ನೀವು ಕೊಟ್ಟಿಕೊಳ್ಳುವ ಮರುಹುಟ್ಟು, ಏನಂತೀರಿ!

Leave a Reply

Your email address will not be published. Required fields are marked *

error: Content is protected !!