ಸಾಧನಾಪಥ
ಡಾ.ಜಗದೀಶ ಮಾನೆ
ತಮಗಾದ ಘನಘೋರ ಆಘಾತದಿಂದಾಗಿ ಅಸಹಾಯಕರಾಗಿದ್ದ ಸುನೀತಾ ಮುಂದೆ ಪದ್ಮಶ್ರೀ ಪುರಸ್ಕಾರ ಪಡೆದಿದ್ದಕ್ಕೆ ಕಾರಣ ಅವರಲ್ಲಿದ್ದ ಛಲ ಮತ್ತು ಮಾನವೀಯತೆಗಳು ಮಾತ್ರವೇ ಅಲ್ಲ; ಅಂದು ಅವರು ತಮ್ಮ ಅಂತರಾಳದೊಂದಿಗೆ ಗಟ್ಟಿದನಿಯಲ್ಲಿ ಮಾತಾಡಿಕೊಂಡಿದ್ದು ಕೂಡ ಇದಕ್ಕೆ ಕಾರಣ.
ಹತ್ತನೆಯ ತರಗತಿಯನ್ನು ಮುಗಿಸಿದ್ದ ಆ ಹುಡುಗಿ ಕಾಲೇಜು ಮೆಟ್ಟಿಲೇರುವ ತವಕದಲ್ಲಿದ್ದಳು, ಸ್ಕೂಲ್ ಡ್ರೆಸ್ ಜಮಾನ ಮುಗಿಯತು; ಇನ್ನೇನಿದ್ದರೂ ಬಣ್ಣಬಣ್ಣದ ಬಟ್ಟೆ ಹಾಕಿಕೊಂಡು ಕಾಲೇಜಿಗೆ ತೆರಳಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಆಕೆಯ ಮುಖದಲ್ಲಿ ಲವಲವಿಕೆ ಕಳೆಗಟ್ಟಿತ್ತು. ಅಂತೆಯೇ, ಸ್ಥಳೀಯ ಕಾಲೇಜೊಂದರ ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದು ಪ್ರತಿನಿತ್ಯ ಉತ್ಸಾಹದಲ್ಲೇ ಕಾಲೇಜಿಗೆ ಹೋಗಿಬರುತ್ತಿದ್ದಳು.
ಆದರೆ ಕರಾಳ ದಿನವೊಂದು ಹಸಿದ ಹೆಬ್ಬುಲಿಯಂತೆ ತನಗಾಗಿ ಕಾಯುತ್ತಿರುವುದು ಅವಳಿಗರಿವಿರಲಿಲ್ಲ. ಎಂದಿನಂತೆ ಕಾಲೇಜು ಮುಗಿಸಿಕೊಂಡು ಮನೆಗೆ
ಮರಳುತ್ತಿರುವಾಗ, ಎಂಟು ಜನರ ಗುಂಪೊಂದು ಆಕೆಯ ಮೇಲೆ ದಾಳಿ ಮಾಡಿ ಬಲಾತ್ಕಾರವೆಸಗಿತು. ಆಕ್ರಮಣಕ್ಕೆ ಸಿಲುಕಿ ಮಾಂಸದ ಮುದ್ದೆಯಂತೆ ಬಿದ್ದಿದ್ದ ಆಕೆಯನ್ನು ಎತ್ತಿಕೊಂಡು ಮನೆಗೆ ಬಂದ ತಂದೆಗೆ ಎಲ್ಲಿಲ್ಲದ ಸಂಕಟ. ಆಕೆಯ ತಾಯಿ, ‘ಯಾವ ತಪ್ಪಿಗೆ ನನ್ನ ಕಂದನಿಗೆ ಈ ಶಿಕ್ಷೆ ಕೊಟ್ಟೆ ನೀನು? ಇಷ್ಟು ದಿನ ನಿನಗಾಗಿ ನಾನು ವ್ರತ ಮಾಡಿದೆ, ಉಪವಾಸ ಮಾಡಿದೆ. ಅದಕ್ಕೆಲ್ಲ ನೀನು ನನಗೆ ಕೊಟ್ಟ ಪ್ರತಿಫಲ ಇದೇನಾ?’ ಎಂದು ಹಣೆ ಚಚ್ಚಿಕೊಂಡು ದೇವರಿಗೇ ಹಿಡಿಶಾಪ ಹಾಕಿದರು. ಕೈಹಿಡಿದು ಆಡಿಸಿ ಬೆಳೆಸಿದ ಆ ತಂದೆ ಏನೂ ಮಾತನಾಡದೆ ಮಗಳ ಸ್ಥಿತಿ ಕಂಡು ಮರುಗುತ್ತಾ ನಿಂತರು.
ಸ್ವಲ್ಪ ದಿನ ಕಳೆದವು. ಮಗಳಿಗೆ ತಂದೆ ಊಟ ಮಾಡಿಸುತ್ತಾ ಧೈರ್ಯವನ್ನು ತುಂಬುತ್ತಿದ್ದರು. ಆದರೆ ಆಕೆ ಪ್ರತಿನಿತ್ಯ ಮನೆಯ ಕಿಟಕಿಯಾಚೆ ನೋಡುತ್ತಾ ಒಬ್ಬಳೇ ಕುಳಿತು ಬಿಡುತ್ತಿದ್ದಳು. ಮಾತಾಡಿಸಲು ಮನೆಗೆ ಬಂದ ಸಂಬಂಧಿಕರಿಗೂ ಬಹಳಷ್ಟು ಮುಜುಗರ, ತಳಮಳ ಆಗುತ್ತಿತ್ತು; ಕಾರಣ, ಈ ಮನೆತನ ದೊಟ್ಟಿಗೆ ಒಡನಾಟ ಜಾಸ್ತಿ ಮಾಡಿದರೆ, ಮುಂದೆ ತಮ್ಮ ಮಾನ-ಮರ್ಯಾದೆಗೂ ಕುಂದು ಬರಬಹುದು ಎಂಬ ಅವರ ಆಲೋಚನೆ. ಇನ್ನು ಕೆಲವರಿ ಗಂತೂ ಆಕೆಯೊಂದಿಗೆ ಏನು ಮಾತನಾಡಬೇಕೆಂಬುದೇ ತಿಳಿಯುತ್ತಿರಲಿಲ್ಲ.
ಹೀಗೆಯೇ ೨ ವರ್ಷ ಕಳೆದ ನಂತರ, ಮನೆಯವರೊಟ್ಟಿಗಾದರೂ ಸ್ವಲ್ಪ ಮಾತನಾಡುವ ಹಂತಕ್ಕೆ ಬಂದಳು ಮಗಳು. ಆಗ ತಂದೆ, ‘ಮಗೂ, ಹಿಂದೆ ಆಗಿದ್ದರ ಕುರಿತೇ ಯೋಚಿಸುತ್ತಾ ಇನ್ನೂ ಎಷ್ಟು ದಿನ ಹೀಗೆ ಕೂರುವೆ? ಏನಾದರೂ ಮಾಡು ಕಂದಾ’ ಅಂದಾಗ ಮಗಳು, ‘ಅಪ್ಪಾ ಯೋಚಿಸಬೇಡ. ಆಗಿದ್ದು ಆಗಿಹೋಗಿದೆ. ನನ್ನ ಮುಂದೆ ಈಗ ೩ ಆಯ್ಕೆಗಳಿವೆ. ಒಂದು, ನಾನು ಸಾಯಬಹುದು. ಎರಡು, ನಾನು ಕೇವಲ ಜೀವಂತ ಇರಬಹುದು. ಮೂರನೆಯದ್ದು ನಾನು ‘ಜೀವನ’ ಮಾಡುವುದು…’ ಎಂದಳು. ಮುಂದುವರಿದ ಆಕೆ, ‘ಅಪ್ಪಾ, ನಾನು ಯಾವುದೇ ಕಾರಣಕ್ಕೂ ಸಾಯುವುದಿಲ್ಲ. ಹಾಗಿದ್ದಿದ್ದರೆ ಅಂದೇ
ಸತ್ತುಹೋಗುತ್ತಿದ್ದೆ. ಹಾಗಂತ ನಾನು ‘ಕೇವಲ ಜೀವಂತ’ ಕೂಡ ಇರುವುದಿಲ್ಲ; ಒಂದು ಪ್ರಾಣಿ ಕೂಡ ತಿಂದುಂಡು ಜೀವಂತವಾಗಿದ್ದು ಎಲ್ಲರಂತೆ ದಿನ ದೂಡುತ್ತದೆ. ನಾನು ಪುನಃ ಕಾಲೇಜಿಗೆ ಹೋಗುತ್ತೇನೆ’ ಎಂದಳು. ಅದಕ್ಕೊಪ್ಪಿದ ತಂದೆ ಮರುದಿನ ಆಕೆಗೆ ಹಣ ಕೊಟ್ಟು ಕಾಲೇಜಿಗೆ ಕಳಿಸಿದರು.
ಆಕೆಯ ಹೆಸರು ಸುನೀತಾ ಕೃಷ್ಣನ್. ಮರುಪ್ರವೇಶಕ್ಕೆಂದು ಕಾಲೇಜಿಗೆ ಉತ್ಸುಕತೆಯಿಂದ ತೆರಳಿದ ಅವಳಿಗೆ ಅಲ್ಲಿ ಪ್ರವೇಶ ಸಿಗಲಿಲ್ಲ; ಕಾರಣ ಮರು ಪ್ರವೇಶಕ್ಕೆ ಅವಕಾಶ ನೀಡಿದರೆ ಕಾಲೇಜಿನ ಪರಿಸರ ಕೆಟ್ಟುಹೋಗುತ್ತದೆ ಎಂಬುದು ಅಲ್ಲಿನ ‘ಬಲ್ಲವರ’ ಯೋಚನೆಯಾಗಿತ್ತು. ಇದರಿಂದ ಸುಮ್ಮನಿರದ
ಸುನೀತಾ ಅಕ್ಕಪಕ್ಕದ ಊರಿನ ಕಾಲೇಜುಗಳಿಗೆ ತೆರಳಿದಳು. ಆಕೆಯ ಕಥೆಯನ್ನು ಆಲಿಸಿದ ಕಾಲೇಜಿನವರು ಪ್ರವೇಶ ಕಲ್ಪಿಸಲಿಲ್ಲ.
ಸುಸ್ತಾಗಿ ಮನೆಗೆ ಮರಳಿದ ಆಕೆ, ‘ಅಪ್ಪಾ, ನನಗೆ ಯಾವ ಕಾಲೇಜಿನಲ್ಲೂ ಪ್ರವೇಶ ಸಿಗಲಿಲ್ಲ. ನನಗೆ ಪ್ರವೇಶ ಕೊಟ್ಟರೆ ಉತ್ತಮ ಸಂಸ್ಕಾರವುಳ್ಳ ಮಕ್ಕಳು ಅಲ್ಲಿಂದ ಹೊರಗಡೆ ಹೋಗುತ್ತಾರಂತೆ, ಅದರಿಂದ ಅವರ ಕಾಲೇಜಿನ ವಾತಾವರಣ ಕೆಟ್ಟು ಹೋಗುತ್ತದಂತೆ’ ಎಂದಾಗ ಅಪ್ಪ, ‘ಇನ್ನೂ ಸ್ವಲ್ಪ ದಿನ
ಹೋಗಲಿ ಮಗಳೇ’ ಎಂದು ಅವಳಲ್ಲಿ ಧೈರ್ಯ ತುಂಬಿದರು. ಮತ್ತೊಂದು ವರ್ಷ ಕಳೆದ ಅವಳಿಗೆ ಎಲ್ಲಾದರೂ ಕೆಲಸಕ್ಕೆ ಸೇರಿಕೊಳ್ಳಬೇಕು ಎನಿಸಿತು; ಆದರೆ ಎಲ್ಲಿ ತಿರುಗಿದರೂ ಅವಳ ಹಿನ್ನೆಲೆ ತಿಳಿದವರು ಆಕೆಗೆ ಕೆಲಸವನ್ನು ಕೂಡ ಕೊಡಲಿಲ್ಲ. ತಂದೆ-ತಾಯಿಯರ ಸಂಕಟ ಮುಗಿಲು ಮುಟ್ಟಿತು.
ಕೊನೆಗೊಮ್ಮೆ ಸುನೀತಾ, ‘ಅಪ್ಪಾ ನಾನೊಂದು ನಿರ್ಧಾರ ಮಾಡಿದ್ದೇನೆ. ‘ಪ್ರಜ್ವಲಾ’ ಎಂಬ ಹೆಸರಿನ ನನ್ನದೇ ಆದ ಸಂಸ್ಥೆಯೊಂದನ್ನು ಆರಂಭಿಸುತ್ತೇನೆ’ ಎಂದಳು. ಮಗಳಿಂದ ಈ ಮಾತು ಕೇಳಿಸಿಕೊಂಡ ಅಪ್ಪನಿಗೆ ಅರೆಕ್ಷಣ ಆಶ್ಚರ್ಯವೂ ಜತೆಗೆ ಸಂತೋಷವೂ ಆಯಿತು (ಇದಕ್ಕೇ ಅಲ್ಲವೇ ಹೆಣ್ಣು ಮಕ್ಕಳಿಗೆ ‘ಶಕ್ತಿಯ ರೂಪ’ ಅಂತ ಕರೆಯುವುದು?).
ಸುನೀತಾ ಮುಂದುವರಿದು, ‘ಅಪ್ಪಾ, ನನ್ನಂತೆ ಯಾರೆಲ್ಲಾ ಇದ್ದಾರೋ, ಅವರಿಗೆಲ್ಲಾ ನಾನು ಆಶ್ರಯ ಕೊಡುತ್ತೇನೆ. ಯಾವೆಲ್ಲಾ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಯಲ್ಲಿ ತಳ್ಳಲಾಗಿದೆಯೋ, ಯಾರೆಲ್ಲ ತಮಗೆ ಹೆಣ್ಣು ಮಕ್ಕಳು ಬೇಡವೆಂದು ಅವರನ್ನು ಬೀದಿಗೆ ತಳ್ಳಿದ್ದಾರೋ ಅಂಥ ಎಲ್ಲರನ್ನೂ ಕರೆದುಕೊಂಡು ಬಂದು ಜತೆಗಿಟ್ಟುಕೊಳ್ಳುತ್ತೇನೆ. ಅವರಿಗೆಲ್ಲ ನಾನು ಆಶ್ರಯ ನೀಡುತ್ತೇನೆ’ ಎಂದಳು. ಮಗಳು ನೋವಿನ ಕೂಪದಿಂದ ಹೊರಬಂದು ಏನೋ ಮಾಡುತ್ತೀನಿ ಎನ್ನುತ್ತಿದ್ದಾಳಲ್ಲಾ, ಅದರಿಂದ ಅವಳಿಗೆ ಸಂತಸ ಸಿಕ್ಕರೆ ಏಕಾಗಬಾರದು? ಎಂಬ ಎಣಿಕೆಯಲ್ಲಿ ಅಪ್ಪ ಸಂತಸದಿಂದ ಒಪ್ಪಿದರು.
ಸುನೀತಾರದ್ದು ಎಂಥ ಗಟ್ಟಿನಿರ್ಧಾರ ಎಂಬುದನ್ನು ಒಮ್ಮೆ ಹಾಗೇ ಅವಲೋಕಿಸಿ. ಸ್ವತಃ ಅವರಿಗೇ ಯಾವ ಕಾಲೇಜಿ ನಲ್ಲೂ ಕಾಲಿಡಲು ಬಿಡಲಿಲ್ಲ, ಏನಾದರೂ ಕೆಲಸ ಮಾಡೋಣ ವೆಂದರೆ ಅವಕಾಶ ನೀಡಲು ಯಾರೂ ಸಿದ್ಧರಿರಲಿಲ್ಲ. ಒಟ್ಟಾರೆ ಹೇಳುವುದಾದರೆ ಅವರ ಜೀವನವೇ ಒಂದರ್ಥದಲ್ಲಿ ಅವರಿಗೆ ಹೊರೆಯಾಗಿತ್ತು. ಅಂಥ ವಿಷಮ ಪರಿಸ್ಥಿತಿಯಲ್ಲೂ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದೆಂದರೆ ಸುಲಭದ ಮಾತಲ್ಲ. ಹೀಗೆ ನಿರ್ಧರಿಸಿ ಸುಮ್ಮನೆ ಕೂರದ ಸುನೀತಾ ತಮ್ಮ ೧೯ನೇ ವಯಸ್ಸಿನಲ್ಲಿ ಕೇವಲ ಇಬ್ಬರು ಮಕ್ಕಳೊಂದಿಗೆ ತಮ್ಮ ಕನಸಿನ ‘ಪ್ರಜ್ವಲಾ’ ಸಂಸ್ಥೆಯನ್ನು ಹೈದರಾಬಾದ್‌ನಲ್ಲಿ
ಆರಂಭಿಸಿದರು.
ಅಂದು ಪ್ರಾರಂಭವಾದ ಈ ಸಂಸ್ಥೆಯಲ್ಲಿಂದು ೧೦,೦೦೦ಕ್ಕಿಂತಲೂ ಹೆಚ್ಚು ಮಕ್ಕಳನ್ನು ಅವರು ಸಾಕಿ ಬೆಳೆಸಿದ್ದಾರೆ. ಮಕ್ಕಳಿಗೆಲ್ಲ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿದ್ದಾರೆ. ಹೀಗೊಮ್ಮೆ ಅಲ್ಲಿನ ಕೆಲ ಮಕ್ಕಳು ಕಾಲೇಜಿಗೆ ಪ್ರವೇಶ ಕೋರಿ ಹೋಗಿದ್ದ ಸಂದರ್ಭದಲ್ಲಿ, ‘ಇವರೆಲ್ಲ ವೇಶ್ಯಾವಾಟಿಕೆಯಿಂದ ಬಂದ ಮಕ್ಕಳು; ಇಂಥವರಿಗೆ ಪ್ರವೇಶ ಕೊಟ್ಟರೆ ಕಾಲೇಜಿನ ಹೆಸರು ಹಾಳಾಗುತ್ತದೆ’ ಎಂಬ ನೆಪವೊಡ್ಡಿ ಪ್ರವೇಶವನ್ನು ನಿರಾಕರಿಸಿದರು. ಅದನ್ನೇ ಸವಾಲಾಗಿ ತೆಗೆದುಕೊಂಡ ಸುನೀತಾ, ಆ ಮಕ್ಕಳಿಗೋಸ್ಕರ ಸ್ವಂತ ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದರು. ಇವತ್ತು ಅವುಗಳ ಸಂಖ್ಯೆ ೧೮. ಆ ಎಲ್ಲಾ ಮಹಿಳೆಯರಿಗೆ ಉದ್ಯೋಗಾವಕಾಶ ನೀಡಲೆಂದು ಕೆಲವೊಂದು ಕಂಪನಿ/ಉದ್ಯಮಗಳನ್ನೂ ಸ್ಥಾಪಿಸಿದರು. ತಮಗೇ ಆಶ್ರಯವಿಲ್ಲದಾಗಿದ್ದ ಅವರು ಹತ್ತಾ
ರು ಸಾವಿರ ಮಕ್ಕಳಿಗೆ ಆಸರೆಯಾಗಿ ಅವರ ಬಾಳಲ್ಲಿ ಬದಲಾವಣೆ ತಂದರು.
ಅವರ ಈ ಸಾಧನೆಗಾಗಿ ಭಾರತ ಸರಕಾರವು ೨೦೧೬ರಲ್ಲಿ ‘ಪದ್ಮಶ್ರೀ’ ಪುರಸ್ಕಾರವನ್ನು ಕೊಟ್ಟು ಗೌರವಿಸಿತು. ಹಿಂದೊಮ್ಮೆ ತಮ್ಮ ಬದುಕಿನಲ್ಲಾದ ಘನಘೋರ ಆಘಾತ ದಿಂದಾಗಿ ಅಕ್ಷರಶಃ ಮಾಂಸದ ಮುದ್ದೆಯಾಗಿ ರಸ್ತೆಯಲ್ಲಿ ಬಿದ್ದಿದ್ದ ಸುನೀತಾ ಇಂದು ಪದ್ಮಶ್ರೀ ಪುರಸ್ಕಾರವನ್ನು ಪಡೆದಿದ್ದಕ್ಕೆ ಕಾರಣ ಅವರಲ್ಲಿ ಇದ್ದ ಛಲ ಮತ್ತು ಮಾನವೀಯತೆಗಳು ಮಾತ್ರವೇ ಅಲ್ಲ; ಅಂದು ಅವರು ತಮ್ಮ ಅಂತರಾಳ ದೊಂದಿಗೆ ಗಟ್ಟಿದನಿಯಲ್ಲಿ ಮಾತಾಡಿ ಕೊಂಡಿದ್ದು ಕೂಡ ಇದಕ್ಕೆ ಕಾರಣ. ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಮುಂದೆ ಬರಬೇಕು ಎಂದರೆ, ತನ್ನೊಂದಿಗೆ ತಾನು ಏನನ್ನು ಮಾತನಾಡಿ ಕೊಳ್ಳುತ್ತಾನೋ, ತನ್ನ ಒಳಮನಸ್ಸಿನ ಮೇಲೆ ಯಾವುದರ ಸ್ಪಷ್ಟ ಛಾಪು ಮೂಡಿಸುತ್ತಾನೋ ಅದನ್ನೇ ಕೃತಿರೂಪಕ್ಕೆ ಇಳಿಸುವಂತಾಗಬೇಕು. ಹೀಗೆ ಸ್ಪಷ್ಟವಾಗಿ ಹೊಮ್ಮಿದ ದನಿ ಹಾಗೂ ಮೂಡಿದ ಚಿತ್ರಗಳೇ ನಮ್ಮನ್ನು ರೂಪಿಸುತ್ತವೆ. ನಮ್ಮ ಸಕಾರಾತ್ಮಕ ಮತ್ತು ಸದಾಶಯದಷ್ಟಿಯೇ ಮಹತ್ತರ ಸೃಷ್ಟಿಗೆ ಕಾರಣವಾಗುತ್ತದೆ ಎಂಬುದನ್ನು ಮರೆಯದಿರೋಣ.
(ಲೇಖಕರು ರಾಜ್ಯಶಾಸ್ತ್ರ ಅಧ್ಯಾಪಕರು)