Saturday, 27th July 2024

ಪಚನವಾಗುವಷ್ಟೇ ವಿಷ ತುಂಬಿ; ಇದು ಅಪಾಯರಹಿತ ವಿಷ((ಯ ))!

ತಿಳಿರು ತೋರಣ

srivathsajoshi@yahoo.com

‘ಅತಿಯಾದರೆ ಅಮೃತವೂ ವಿಷವಾಗುತ್ತದೆ’ ಎನ್ನುತ್ತದೆ ಗಾದೆ. ಈ ಗಾದೆಯನ್ನು ಪದಶಃ ವಿರುದ್ಧವಾಗಿಸಿದರೆ ‘ಸ್ವಲ್ಪೇಸ್ವಲ್ಪವಾದರೆ ವಿಷವೂ ಅಮೃತ ವಾಗುತ್ತದೆ!’ ಸರಿ ತಾನೆ? ಸಾಹಿತ್ಯದಲ್ಲಿ ಇಂಥದನ್ನೇ ಪರಿಸಂಖ್ಯಾ ಅಲಂಕಾರ ಎನ್ನುವುದೋ ನನಗೆ ಸರಿಯಾಗಿ ಗೊತ್ತಿಲ್ಲ, ಆದರೆ ತಮಾಷೆಗಾಗಿಯಾದರೂ ಇದೊಂದು ತರ್ಕ. ನೀವೂ ಒಪ್ಪಿಕೊಳ್ಳುತ್ತೀರಾದರೆ, ಹಸುರು ನಿಶಾನೆ ತೋರಿಸುತ್ತೀರಾದರೆ ನಾನು ನಿಮಗೀಗ ಸ್ವಲ್ಪೇಸ್ವಲ್ಪ ವಿಷವನ್ನು ಕೊಡ ಬಯಸುತ್ತೇನೆ. ಎಲಾ ಇವನ…! ಎಂದು ಮೂಗಿನಮೇಲೆ ಬೆರಳಿಟ್ಟು ದಿಗಿಲುಪಡಬೇಡಿ. ಸ್ವಲ್ಪೇಸ್ವಲ್ಪ ವಿಷ ಅಂದರೆ ಅಮೃತವೇ ಆಗುತ್ತದೆಂದ ಮೇಲೆ ಚಿಂತೆಯೇಕೆ? ‘ವಚನ ದಲ್ಲಿ ನಾಮಾಮೃತ ತುಂಬಿ…’ ಎಂಬ ಶೀರ್ಷಿಕೆಯ ಹರಟೆಯನ್ನು ಕಳೆದ ವಾರ ಬರೆದಿದ್ದೆನಷ್ಟೆ? ಈ ಸಲ ಅದಕ್ಕೆ ಹೊಂದುವಂತೆ ಇನ್ನೊಂದು ಹರಟೆ ಹೆಣೆಯಬೇಕು ಎಂದುಕೊಂಡಿರುವುದರ ಫಲವೇ ಈ ಲೇಖನ. ‘ವಿಷಯ ಕಡಿಮೆಯಾಗಿ ವಿಷ ಆಗಿದೆ’ ಎಂದು ಕನ್ನಡ ಪದಬಂಧದ ಸುಳಿವಿಗೆ ಉತ್ತರ ಹುಡುಕಿದಂತೆ ನಿಮ್ಮ ಯೋಚನಾಲಹರಿ ಹರಿದರೂ ಸರಿಯೇ, ಇವತ್ತಿನ ವಿಷಯ ‘ವಿಷ’! ಮತ್ತೊಮ್ಮೆ ಹೇಳುತ್ತಿದ್ದೇನೆ, ಇದು ನಿಮಗೆ ಕಿಂಚಿತ್ತೂ ಅಪಾಯವಿಲ್ಲದ ವಿಷ(ಯ). ನಿಮ್ಮ ಅಂಗಾಂಗಗಳಲ್ಲಿ ಮುಖ್ಯವಾಗಿ ತಲೆಯಲ್ಲಿ ಪಚನವಾಗುವಷ್ಟೇ ಪ್ರಮಾಣದಲ್ಲಿ ಕೊಡಲ್ಪಡುತ್ತಿರುವ ವಿಷ(ಯ).

ಹಾಗಾಗಿ ವಿಷ(ಯ) ಭೋಗದ ತೃಣಕ್ಕೆ ಉರಿಯಾಗುತ್ತ, ನಿಶಿಹಗಲು ಶ್ರೀಹರಿಯ ನೆನೆಯುತ್ತ… ಇದನ್ನು ಸೇವಿಸಿ ಸವಿಯಿರಿ. ಒಂದೊಮ್ಮೆಗೆ ವಿಷಕಂಠರಾಗಿ.
ವಿಷದ ಬಗ್ಗೆ ಬರೆಯತೊಡಗಿದರೆ ವಿಷಯಗಳೆಲ್ಲ ಒತ್ತರಿಸಿ ಬರುತ್ತವೆ. ಅವನ್ನೆಲ್ಲ ಸಂಕ್ಷಿಪ್ತವಾಗಿಯಷ್ಟೇ ಉಲ್ಲೇಖಿಸಿ ಆಮೇಲೆ ಇವತ್ತೇಕೆ ವಿಷವೇ ವಿಷಯ ವಾಯಿತೆಂಬುದರ ಅಸಲಿ ವಿಷಯವನ್ನೂ ತಿಳಿಸುತ್ತೇನೆ. ನಾವು ಚಿಕ್ಕವರಿದ್ದಾಗ ಆಡುತ್ತಿದ್ದ ಹೊರಾಂಗಣ ಆಟಗಳಲ್ಲಿ ‘ವಿಷಾಮೃತ’ ಅಂತಲೂ ಒಂದು ಆಟವಿತ್ತು. ಒಂದು ರೀತಿಯಲ್ಲಿ ಕುಂಟಲಪಿ ಅಥವಾ ಓಡಿಮುಟ್ಟಾಟ ಇದ್ದಂತೆಯೇ.

ಸ್ವಲ್ಪ ಎರ್ರಾಬಿರ್ರಿಯಾದ ಖೊ-ಖೊ ಇದ್ದಂತೆ ಎಂದು ಕೂಡ ಹೇಳಬಹುದು. ಒಂದು ತಂಡದವರು ಎದುರಾಳಿ ತಂಡದ ಯಾರಿಗಾದರೂ ವಿಷ ಕೊಟ್ಟರೆ (ಮುಟ್ಟಿ ‘ವಿಷ!’ ಎಂದಾಗ ಅವನು ಅಲ್ಲೇ ಕುಕ್ಕರಗಾಲಲ್ಲಿ ಕುಳಿತುಕೊಳ್ಳಬೇಕು) ಎದುರಾಳಿ ತಂಡದವರಾರಾ ದರೂ ಅವನಿಗೆ ಅಮೃತ ಕೊಡಬೇಕು (ತಲೆಮುಟ್ಟಿ ‘ಅಮೃತ!’ ಎಂದಾಗ ಅವನು ಎದ್ದು ಆಟ ಮುಂದುವರಿಸುತ್ತಾನೆ). ವಿಷಕ್ಕೆ ಸಂಬಂಧಪಟ್ಟಂತೆಯೇ ಬಾಲ್ಯದ ಇನ್ನೊಂದು ನೆನಪೂ ಇದೆ, ಇದು ಸ್ವಲ್ಪ ಕರಾಳವಾದದ್ದು. ನಾನಾಗ ಮೂರನೆಯ ಅಥವಾ ನಾಲ್ಕನೆಯ ತರಗತಿಯಲ್ಲಿದ್ದೆನೆಂದು ನೆನಪು. ಕಾರ್ಕಳದ ಸುತ್ತಮುತ್ತ ಯಾರೋ ವಿಷ ಇಂಜೆಕ್ಷನ್ ಕೊಟ್ಟು ಮಕ್ಕಳನ್ನು ಸಾಯಿಸುವವರು ಬಂದಿದ್ದಾರಂತೆ… ಸಾಣೂರಿನಲ್ಲಿ ಒಂದು ಮಗು ಸತ್ತಿತಂತೆ… ಇನ್ನೊಂದು ಕೇಸ್ ಮೂಡಬಿದ್ರೆ ಯಲ್ಲಾಯ್ತಂತೆ… ಎಂಬೊಂದು ಭಯಾನಕ ಸುದ್ದಿ ಹಬ್ಬಿತ್ತು.

ಅದರ ಸತ್ಯಾಸತ್ಯತೆ ಕೊನೆಗೇನಾಯ್ತೋ ಗೊತ್ತಿಲ್ಲ, ಆದರೆ ವಿಷದ ಬಗ್ಗೆ ಭಯಭೀತರಾದ ನಾವು ವಿಷಾಮೃತ ಆಟಕ್ಕೇ ವಿಷ ಕೊಟ್ಟುಬಿಟ್ಟಿದ್ದೆವು. ವಿಷ-ಸಾವು-ದುಃಖ ಇತ್ಯಾದಿಗಳ ಏನೇನೂ ಅರಿವು ಇಲ್ಲದ ಮುಗ್ಧತೆಯ ಆ ದಿನಗಳಲ್ಲಿ ವಿಷ ಇಂಜೆಕ್ಷನ್‌ನ ಗಾಳಿಸುದ್ದಿ ಬಿರುಗಾಳಿಯಾಗಿ ನಮ್ಮನ್ನೆಲ್ಲ ಅಲುಗಾಡಿ
ಸಿದ್ದು ಹೌದು. ಜ್ಞಾನಿಗಳು, ಅನುಭವಸ್ಥರು ಈ ಪ್ರಪಂಚವನ್ನೇ ವಿಷವರ್ತುಲ ಎನ್ನುವುದಿದೆ. ಸಂಸಾರದ ಜಂಜಡಗಳನ್ನು ವಿಷವೃಕ್ಷಕ್ಕೆ ಹೋಲಿಸು ವುದೂ ಇದೆ. ಅಂತಹ ವಿಷವೃಕ್ಷದಲ್ಲೂ ಅಮೃತತುಲ್ಯವಾದ ಎರಡು ಫ ಗಳು ಬೆಳೆಯುವುದು ಸಾಧ್ಯವಿದೆ ಎನ್ನುತ್ತದೆ ಒಂದು ಸುಭಾಷಿತ: ಸಂಸಾರ ವಿಷವೃಕ್ಷಸ್ಯ ದ್ವೇ ಫಲೇ ಹ್ಯಮೃತೋಪಮೇ| ಸುಭಾಷಿತ ರಸಾಸ್ವಾದಃ ಸಂಗತಿಃ ಸುಜನೈಃ ಸಹ|| – ಸುಭಾಷಿತಗಳ ರಸಾಸ್ವಾದ ಮಾಡುವುದು ಮತ್ತು ಸಜ್ಜನರ ಸ್ನೇಹಸಹವಾಸ ಬೆಳೆಸುವುದು- ಇವೇ ಆ ಫಲಗಳು.

‘ಅನಭ್ಯಾಸೇ ವಿಷಂ ಶಾಸ್ತ್ರಂ ಅಜೀರ್ಣೇ ಭೋಜನಂ ವಿಷಮ್| ಮೂರ್ಖಸ್ಯ ಚ ವಿಷಂ ಗೋಷ್ಠೀ ವೃದ್ಧಸ್ಯ ತರುಣೀ ವಿಷಮ್||’ ಅಂತ ಇನ್ನೊಂದು ಸುಭಾಷಿತ. ಇದರ ಅರ್ಥ- ಪಳಗಿಸಿಕೊಳ್ಳದ ಶಾಸ್ತ್ರ ವಿಷ; ಅರಗಿಸಿಕೊಳ್ಳಲಾಗದ ಊಟ ವಿಷ; ಅರಿಯದ ಮೂಢನಿಗೆ ವಿದ್ವಜ್ಜನರ ಸಭೆಯೂ ಒಂದು ವಿಷ; ಮುದುಕಯ್ಯನಿಗಾದರೋ ಏರುಯೌವನದ ತರುಣಿಯೇ ವಿಷ!

ವಿಷದ ಬಗ್ಗೆ ಎಷ್ಟು ಬೇಕಿದ್ದರೂ ವಿಶದೀಕರಿಸಬಹುದು- ವಿಷ ಹಾಲು ಉಣಿಸಲೆತ್ನಿಸಿದ ಪೂತನಿಯನ್ನು ಬಾಲಕೃಷ್ಣನೇ ಕೊಂದು ಮುಗಿಸಿದ ಭಾಗವತಕ ಥೆಯಿಂದ ಹಿಡಿದು ‘ಪ್ರೀತಿ ಮಾಡಬಾರದು… ಮಾಡಿದರೆ ವಿಷವ ಕುಡಿಯಬಾರದು…’ ಎಂದು ಹೇಳಿಯೂ ಪ್ರೀತಿಗಾಗಿ ವಿಷ ಕುಡಿದು ರಣಧೀರ (ಹೆಣ ಧೀರ?) ರಾಗುವ ಪ್ರೇಮಿಗಳ ಕಥೆಗಳವರೆಗೆ. ಹಳ್ಳಿಗಳಲ್ಲಿ ಪ್ರಸಿದ್ಧರಾಗಿರುವ ವಿಷವೈದ್ಯರಿಂದ ಹಿಡಿದು ಅಮೆರಿಕದ ಅತ್ಯಾಧುನಿಕ ಪ್ರಯೋಗ
ಶಾಲೆಗಳಲ್ಲಿ ಕಾರ್ಯಪ್ರವೃತ್ತರಾಗಿರುವ ವಿಷವಿಜ್ಞಾನಿಗಳವರೆಗೆ.

ಭೋಪಾಲ್‌ನಲ್ಲಿ ವಿಷಾನಿಲ ಸೋರಿಕೆಯಿಂದಾದ ದುರಂತದಿಂದ ಹಿಡಿದು(ಅದನ್ನಾಧರಿಸಿದ ‘ದ ರೈಲ್ವೇ ಮೆನ್’ ಎಂಬ ಅತ್ಯುತ್ತಮ ಸರಣಿಚಿತ್ರ ನೆಟ್‌ ಫ್ಲಿಕ್ಸ್‌ನಲ್ಲಿ ಬಂದಿತ್ತು) ಡಿಸ್ಕವರಿ ಅಥವಾ ನ್ಯಾಶನಲ್ ಜಿಯಾಗ್ರಾಫಿ ಚಾನೆಲ್‌ಗಳಲ್ಲಿ ಇಂಡಿಯನ್ ಕಿಂಗ್ ಕೋಬ್ರಾ ಹೆಚ್ಚು ವಿಷಕಾರಿಯೇ ಆಸ್ಟ್ರೇಲಿಯಾದ ಹಾಕ್ಸ್‌ಬಿಲ್ ಟರ್ಟಲ್‌ಸ್ನೇಕ್ ಅದಕ್ಕಿಂತ ಹೆಚ್ಚು ವಿಷದ್ದೇ ಎನ್ನುವ ಡಾಕ್ಯುಮೆಂಟರಿ ಗಳವರೆಗೆ. ನಾವು ಕುಡಿಯುವ ಪೆಪ್ಸಿ/ಕೋಕ್‌ಗಳೂ ಹೇಗೆ ವಿಷಕಾರಿ ಯಾಗಿರುತ್ತವೆಯೆಂಬ ಜಾಗೃತರ ಉಪದೇಶಗಳಿಂದ ಹಿಡಿದು, ಮದ್ಯವೆಂದರೆ ಸ್ಲೊ ಪಾಯ್ಸನ್ ಅಂತೆ ಪರವಾಗಿ ಇಲ್ಲ… ಸಾಯುವ ತರಾತುರಿಯುಳ್ಳವರು ವಿಷವನ್ನೇ ಕುಡಿಯಲಿ, ನಾನಂತೂ ವ್ಹಿಸ್ಕಿಯನ್ನೇ ಕುಡಿಯುತ್ತೇನೆ… ಎನ್ನುವ ಅಜಾಗೃತರ ಉವಾಚಗಳವರೆಗೂ.

ಹಾಗೆಯೇ, ವಿಷ ತುಂಬಿದ ಡಬ್ಬಿಯ ಮೇಲಿನ ಎಕ್ಸ್‌ಪೈರಿ ಡೇಟ್ ಈಗಾಗಲೇ ಮುಗಿದುಹೋಗಿದೆಯೆಂದರೆ ಅದರೊಳಗಿನ ವಿಷ ಇನ್ನಷ್ಟು ವಿಷಕಾರಿ ಯಾಗುತ್ತದೆಯೇ? ಎಂಬ ಸಿಲ್ಲಿ ಜೋಕಿನವರೆಗೂ. ಇನ್ನು, ಪುರಂದರ ದಾಸರಾಗುವುದಕ್ಕೆ ಮೊದಲು ಶ್ರೀನಿವಾಸನಾಯಕ ಜಿಪುಣಾಗ್ರೇಸರ ಆಗಿದ್ದಾಗ, ಆತನ ಹೆಂಡತಿಯು ಮೂಗುತಿಯನ್ನು ಕಳೆದು-ಮತ್ತೆ-ಪಡಕೊಂಡ ಕಥೆಯನ್ನು ಮರೆಯಲುಂಟೇ? ಬಡಬ್ರಾಹ್ಮಣನ ವೇಷದಲ್ಲಿ ಪಾಂಡುರಂಗ ವಿಟ್ಠಲನಿಗೆ ಮೂಗುತಿ ಕೊಟ್ಟಾಗಿದೆ. ಗಂಡನಿಗೆ ತಿಳಿಸಿಲ್ಲ. ಆ ಬ್ರಾಹ್ಮಣನಾದರೋ ಮೂಗುತಿ ಪಡೆದುಕೊಂಡವನು ನೇರವಾಗಿ ಶ್ರೀನಿವಾಸನಾಯಕನ ಅಂಗಡಿಗೆ ಹೋಗಿ ಅದನ್ನು ಅಡವಿಟ್ಟು ಕೊಂಡು ದುಡ್ಡು ಕೇಳಿದ್ದಾನೆ.

ಮೂಗುತಿಯನ್ನು ಅಲ್ಲೇ ಅಂಗಡಿಯಲ್ಲಿಟ್ಟು ಮನೆಗೆ ಬಂದು ಹೆಂಡತಿಯ ಮೇಲೆ ಗದರಿ ಮೂಗುತಿ ಎಲ್ಲೆಂದು ಕೇಳಿದಾಗ ಆಕೆ ಪಾಪ ಇನ್ನು ತನಗೆ ಸಾವೇ ಗತಿಯೆಂದು ವಿಷದ ಬಟ್ಟಲು ಎತ್ತಿಕೊಳ್ಳುತ್ತಾಳೆ, ಪವಾಡವೆಂಬಂತೆ ಅದರಲ್ಲಿ ಮೂಗುತಿ ಬಂದುಬೀಳುತ್ತದೆ! ಮಹಾಭಾರತದಲ್ಲಿ ಪಾಂಡವರನ್ನು ಅದರಲ್ಲೂ ಮುಖ್ಯವಾಗಿ ಭೀಮಸೇನನನ್ನು ಮುಗಿಸಲು ದುರ್ಯೋಧನನು ಲಡ್ಡುಗೆಗಳಲ್ಲಿ ವಿಷ ತುಂಬಿಸಿ ಭೀಮಸೇನನಿಗೆ ಉಣಬಡಿಸಿದ್ದು, ಜನ್ನನ
ಯಶೋಧರ ಚರಿತೆಯಲ್ಲಿ ಯಶೋಧರನಿಗೆ ಮತ್ತವನ ತಾಯಿಗೆ ಅಮೃತಮತಿಯು ವಿಷದ ಲಡ್ಡುಗೆಗಳನ್ನು ಬಡಿಸಿದ್ದು… ಹೀಗೆ ವಿಷದ ಕಥೆಗಳು ಅನೇಕವಿವೆ. ಇವುಗಳಲ್ಲಿ ನನಗೆ ಹೆಚ್ಚು ರೋಚಕ ವೆನಿಸುವುದು ಮಹಾಭಾರತದಲ್ಲೇ ಬರುವ ಚಂದ್ರಹಾಸನ ಕಥೆ.

ನಿಮಗೂ ಗೊತ್ತಿದ್ದದ್ದೇ. ಆದರೂ ಒಮ್ಮೆ ಸಂಕ್ಷಿಪ್ತವಾಗಿ ನೆನಪಿಸಿಕೊಳ್ಳೋಣ: ಚಂದ್ರಹಾಸ ಹುಟ್ಟಿನಲ್ಲಿ ಕೇರಳದೇಶದ ಸುಧಾರ್ಮಿಕ ಎಂಬ ರಾಜನ ಮಗ. ಮೂಲಾನಕ್ಷತ್ರದಲ್ಲಿ ಹುಟ್ಟಿದ್ದ ಮಗುವಿಗೆ ಎಡಗಾಲಿನಲ್ಲಿ ಆರು ಬೆರಳು. ಇದೇ ಅಪಶಕುನವೋ ಎಂಬಂತೆ ಕೇರಳದೇಶದ ಮೇಲೆ ಶತ್ರುಗಳ ಮುತ್ತಿಗೆ. ಯುದ್ಧದಲ್ಲಿ ಸುಧಾರ್ಮಿಕನ ಸಾವು. ರಾಣಿಯ ಸಹಗಮನ. ಬಾಲಕ ಅನಾಥ ನಾಗಿ ಕುಂತಳರಾಜ್ಯದ ದಾದಿಯೊಬ್ಬಳ ಆರೈಕೆಯಲ್ಲಿ ಬೆಳೆಯುತ್ತಾನೆ. ಪುರೋಹಿತ ಗಾಲವರು ಆ ಅನಾಥ ಬಾಲಕ ರಾಜನಾಗುವ ನೆಂಬ ಭವಿಷ್ಯ ನುಡಿಯುತ್ತಾರೆ. ಕುಂತಳದ ರಾಜನಿಗೆ ಗಂಡು ಮಕ್ಕಳಿರಲಿಲ್ಲವಾಗಿ, ಮಂತ್ರಿ ದುಷ್ಟಬುದ್ಧಿಯು ತನ್ನ ಮಗ ಮದನ ನಿಗೆ ಬರಬೇಕಾದ ಆ ರಾಜ್ಯಕ್ಕೆ ಈ ಅನಾಥ ಹುಡುಗ ಒಡೆಯನಾಗುವುದನ್ನು ಕೇಳಿ ಹೇಗಾದರೂ ಆತನನ್ನು ನಿರ್ಮೂಲ ಮಾಡುವ ಸಂಚು ಹೂಡುತ್ತಾನೆ.

ಕಟುಕರನ್ನು ನೇಮಿಸಿ ಅವನನ್ನು ಕೊಲ್ಲಲು ಯೋಚಿಸುತ್ತಾನೆ. ನಾಲಗೆಯ ಕೆಳಗೆ ಸಾಲಿಗ್ರಾಮವನ್ನಿಟ್ಟುಕೊಂಡು ಶ್ರೀಹರಿಯನ್ನು ಸದಾ ಸ್ತುತಿಸುತ್ತಿದ್ದ ಆ ಮುಗ್ಧ ಬಾಲಕನನ್ನು ಕೊಲ್ಲಲು ಮನಸ್ಸಿಲ್ಲದ ಕಟುಕರು ಅವನ ಎಡಗಾಲಲ್ಲಿದ್ದ ಆರನೆಯ ಬೆರಳನ್ನು ಕೊಯ್ದು ತಂದು ತೋರಿಸುತ್ತಾರೆ. ಅರಣ್ಯದಲ್ಲಿ ರೋದಿಸುತ್ತಿದ್ದ ಬಾಲಕನನ್ನು ಬೇಡರ ದೊರೆ ಕುಳಿಂದನು ತನ್ನ ರಾಜ್ಯವಾದ ಚಂದನಾವತಿಗೆ ಒಯ್ದು ಪತ್ನಿ ಮೇಧಾವಿನಿಗೆ ಒಪ್ಪಿಸುತ್ತಾನೆ. ಬಾಲಕನ ಮುಖ ಚಂದ್ರನ ಬೆಳದಿಂಗ ಳಂತೆ ಇದ್ದುದರಿಂದ ‘ಚಂದ್ರಹಾಸ’ ಎಂದು ಹೆಸರಿಡುತ್ತಾನೆ. ಬೆಳೆದು ದೊಡ್ಡವನಾದಾಗ ಯುವ ರಾಜನನ್ನಾಗಿಸುತ್ತಾನೆ.

ಚಂದ್ರಹಾಸ ಇನ್ನೂ ಬದುಕಿದ್ದಾನೆಂದು ದುಷ್ಟಬುದ್ಧಿಗೆ ಗೊತ್ತಾಗುತ್ತದೆ. ಅವನನ್ನು ಕೊನೆಗಾಣಿಸಬೇಕೆಂಬ ಛಲ ಮತ್ತೆ ಜಾಗೃತವಾಗುತ್ತದೆ. ತಾನೇ ಚಂದನಾವತಿಗೆ ಬಂದು ಚಂದ್ರಹಾಸನನ್ನು ಏಕಾಂತದಲ್ಲಿ ಕರೆದು ಒಂದು ರಹಸ್ಯ ಪತ್ರವನ್ನು ಅವನ ಕೈಯಲ್ಲಿಟ್ಟು ‘ಚಂದ್ರಹಾಸ, ಇದರಲ್ಲಿ ತುಂಬಾ ಗುಟ್ಟಾದ ವಿಷಯವಿದೆ. ಇದನ್ನು ಬೇರೆ ಯಾರಿಗೂ ಗೊತ್ತಾಗದಂತೆ ನನ್ನ ಮಗನಾದ ಮದನನಿಗೆ ತಲುಪಿಸು. ಈಗಲೇ ಹೋಗಿ ಮಾರುತ್ತರವನ್ನು ತೆಗೆದುಕೊಂಡು ಬಾ’ ಎನ್ನುತ್ತಾನೆ. ಆ ಪತ್ರದಲ್ಲಿ ಬರೆದದ್ದಾದರೂ ಏನು? ‘ಮದನ ಕುಮಾರಾ, ಈ ಕಾಗದವನ್ನು ತಂದಿರುವವನು ಮುಂದೆ ನಮ್ಮ ದೇಶದ ರಾಜನಾಗುವವನು. ಇವನಿಗೆ ಕೂಡಲೇ ವಿಷವನ್ನು ಕೊಡು.’ ಎಂದು!

ಮುಗ್ಧ ಚಂದ್ರಹಾಸ ಅದೇನನ್ನೂ ಅರಿಯದೆ ನಡೆದುಕೊಂಡು ಕುಂತಳಪುರವನ್ನು ತಲುಪುತ್ತಾನೆ. ಹೊತ್ತು ಏರಿದ್ದರಿಂದ ಕೊಂಚ ವಿಶ್ರಾಂತಿಗೆಂದು ಉಪವನದಲ್ಲಿ ದೊಡ್ಡ ಮರದಡಿ ಮಲಗಿ ಬಿಡುತ್ತಾನೆ. ಚೆನ್ನಾಗಿ ನಿದ್ರೆ ಹತ್ತುತ್ತದೆ. ಅದೇವೇಳೆ ಅಲ್ಲಿಗೆ ದುಷ್ಟಬುದ್ಧಿಯ ಮಗಳು ವಿಷಯೆ ತನ್ನ ಸ್ನೇಹಿತೆ ಯರೊಡನೆ ಬಂದಿರುತ್ತಾಳೆ. ಮರದಡಿ ಮಲಗಿದ್ದ ಚಂದ್ರಹಾಸನ ಮುದ್ದು ಮುಖವನ್ನು ಕಂಡು ಮೋಹಪರವಶಳಾಗುತ್ತಾಳೆ. ಅವನ ಕಂಚುಕದಲ್ಲಿದ್ದ ಪತ್ರ ಆಕೆಗೆ ಕಾಣಿಸುತ್ತದೆ. ಮೆಲ್ಲಗೆ ತೆಗೆದು ಓದತೊಡಗುತ್ತಾಳೆ. ತಂದೆಯ ಹಸ್ತಾಕ್ಷರವೆಂದು ತಿಳಿದು ಬೆಚ್ಚಿಬೀಳುತ್ತಾಳೆ. ಹೇಗಾದರೂ ಇವನನ್ನು ಪ್ರಾಣಾ ಪಾಯದಿಂದ ಪಾರು ಮಾಡಿ, ತನ್ನ ಪ್ರಾಣೇಶ್ವರನನ್ನಾಗಿ ಮಾಡಿಕೊಳ್ಳಬೇಕೆಂದು ಬಯಸುತ್ತಾಳೆ. ತುಂಬಾ ಸಮಯ ಕುಳಿತು ಯೋಚಿಸಿ, ಒಂದು ಉಪಾಯ ಹೂಡುತ್ತಾಳೆ. ಅಲ್ಲಿಯೇ ಇದ್ದ ಕಾಡಿಗೆ ಮರದಿಂದ ಕಡ್ಡಿಯನ್ನು ಮುರಿದು ಪತ್ರದಲ್ಲಿ ‘ವಿಷವನ್ನು’ ಎಂದು ಇದ್ದಕಡೆ ‘ವಿಷಯೆಯನ್ನು’ ಎಂದು ತಿದ್ದಿ ಬರೆಯುತ್ತಾಳೆ.

ಪತ್ರವನ್ನು ಮೊದಲಿನಂತೆ ಕಂಚುಕದಲ್ಲಿಟ್ಟು ಕಣ್ತುಂಬ ಚಂದ್ರಹಾಸನನ್ನು ನೋಡಿ ತನ್ನ ಸಖಿಯರ ಜೊತೆ ಅರಮನೆಗೆ ತೆರಳುತ್ತಾಳೆ. ಚಂದ್ರಹಾಸನು ಎದ್ದಾಗ ಸಂಜೆಯ ವೇಳೆ ಆಯ್ತೆಂದು ಮನಗಂಡು, ಅಯ್ಯೋ ಎಷ್ಟೊಂದು ಸಮಯ ಮಲಗಿಬಿಟ್ಟೆನಲ್ಲಾ ಎಂದು ಉದ್ಗರಿಸಿ ಸರಸರನೆ ಮಂತ್ರಿಯ ಮನೆಗೆ ಹೋಗುತ್ತಾನೆ. ಮದನನಿಗೆ ಗೌರವದಿಂದ ನಮಸ್ಕರಿಸಿ, ಪತ್ರವನ್ನು ಕೊಡುತ್ತಾನೆ. ಮದನ ತಂದೆಯ ಪತ್ರದ ಒಕ್ಕಣೆಯಂತೆ ಮುಂದೆ ನಿಂತು ತನ್ನ ತಂಗಿ ವಿಷಯೆಯನ್ನು ಚಂದ್ರಹಾಸನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಕುಂತಳಪುರದ ರಾಜನಿಗೂ ಚಂದ್ರ ಹಾಸನ ಸೌಜನ್ಯದ ಸ್ವಭಾವ ಮೆಚ್ಚಿಗೆಯಾಗಿ ತನ್ನ
ಮಗಳಾದ ರಾಜಕುಮಾರಿ ಚಂಪಕಮಾಲಿಯನ್ನು ಅವನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ಚಂದನಾವತಿಯಿಂದ ಹಿಂದಿರುಗಿದ ದುಷ್ಟಬುದ್ಧಿಗೆ ದಿಗ್ಭ್ರಮೆಯಾಗುತ್ತದೆ.

ಅಳಿಯನಾದರೂ ಶತ್ರು ಶತ್ರುವೇ, ದುಷ್ಟ ಬುದ್ಧಿ ತನ್ನ ಪ್ರಯತ್ನ ಬಿಡದೆ ಮತ್ತೊಂದು ವಿಷವ್ಯೂಹ ರಚಿಸು ತ್ತಾನೆ. ಸಂಪ್ರದಾಯದಂತೆ ಅಳಿಯನನ್ನು ಪೂಜಾ ಸಾಮಾಗ್ರಿಯೊಡನೆ ಚಂಡಿಕಾಲಯಕ್ಕೆ ಕಳುಹಿಸಿ, ಅಲ್ಲಿ ಅವನನ್ನು ಕೊಲ್ಲಲು ಚಂಡಾಲರನ್ನು ನೇಮಿಸುತ್ತಾನೆ. ಗುಡಿಗೆ ಹೋಗುತ್ತಿದ್ದ ಚಂದ್ರ ಹಾಸನು ದಾರಿಯಲ್ಲಿ ಸಿಕ್ಕಿದ್ದರಿಂದ ಅವನನ್ನು ಅರಮನೆಗೆ ಕಳುಹಿಸಿ ಮದನನೇ ಚಂಡಿಕಾಲಯಕ್ಕೆ ಹೋಗಿ ಅಲ್ಲಿ ಚಂಡಾಲರಿಂದ ಹತನಾಗುತ್ತಾನೆ. ತನ್ನ ಯೋಜನೆ ತನ್ನ ವಂಶದ ಬೆಳಕನ್ನೇ ನುಂಗಿದುದನ್ನು ಕಂಡು ಎದೆಯೊಡೆದ ದುಷ್ಟಬುದ್ಧಿ ತನ್ನನ್ನು ತಾನೇ ಇರಿದು ಕೊಳ್ಳುತ್ತಾನೆ. ಆಮೇಲೆ ಚಂದ್ರಹಾಸನೇ ದೇವಿಯ ಅನುಗ್ರಹದಿಂದ ಮದನನನ್ನು ಬದುಕಿಸುತ್ತಾನೆ.

ಕುಂತಳದ ಚಕ್ರವರ್ತಿಯಾಗುತ್ತಾನೆ. ಮುಂದೆ ಅವನಿಗೆ ಚಂಪಕ ಮಾಲಿನಿಯಲ್ಲಿ ಪದ್ಮಾಕ್ಷನೂ, ವಿಷಯೆಯಲ್ಲಿ ಮಕರಾಕ್ಷನೂ ಹುಟ್ಟುತ್ತಾರೆ. ಯುಧಿಷ್ಠಿರನ ಅಶ್ವಮೇಧ ಯಾಗದ ಕುದುರೆಯನ್ನು ಆ ಕುಮಾರರು ಕಟ್ಟಿಹಾಕಿ ವಿಷಯ ತಿಳಿದ ಚಂದ್ರಹಾಸನು ಯುಧಿಷ್ಠಿರನ ಅಶ್ವಮೇಧಯಾಗಕ್ಕೆ ವಿಪುಲ ಸಂಪತ್ತನ್ನೂ ಅಧಿಕ ಸೈನ್ಯವನ್ನೂ ಕೊಟ್ಟು ನೆರವಾಗುತ್ತಾನೆ. ಇಷ್ಟೆಲ್ಲ ವಿಷಪುರಾಣ ಆದಮೇಲೆ ಈಗ ಹೇಳುತ್ತೇನೆ, ಏನೆಂದರೆ ಇಂದಿನ ವಿಷ(ಯ) ಅದಲ್ಲ. ಬದಲಿಗೆ, ನಿಮ್ಮ ತಲೆಯೊಳಗೊಂದು ಒಗಟಿನ ಹುಳ (ವಿಷಜಂತು?) ಬಿಡಬೇಕೆಂದು ನನ್ನ ಅಸಲಿ ಯೋಜನೆ. ಅದು ಹೀಗಿದೆ: ಒಂದಾನೊಂದು ರಾಜ್ಯದ ಪ್ರಜೆಗಳಲ್ಲಿ ಒಂದು ವಿಶಿಷ್ಟ ನಂಬಿಕೆ ಇತ್ತು. ಅದೇನೆಂದರೆ ಯಾರಾದರೂ ವಿಷ ಸೇವಿಸಿದರೆ (ಅಕಸ್ಮಾತ್ತಾಗಿಯೋ, ಆತ್ಮಹತ್ಯೆಗಾಗಿಯೋ, ಬೇರಾ
ವುದೇ ಸಂದರ್ಭದಲ್ಲೋ) ಅವನನ್ನು ಬದುಕಿಸುವ ಏಕೈಕ ಮಾರ್ಗ ವೆಂದರೆ ಇನ್ನೂ ತೀಕ್ಷ್ಣವಾದ ವಿಷವನ್ನು ಅವನಿಗೆ ಕುಡಿಸುವುದು; ಆ ಮೂಲಕ ವಿಷಕ್ಕೇ ವಿಷವುಣಿಸಿ ಅದನ್ನು ಹತ್ತಿಕ್ಕಿ, ವ್ಯಕ್ತಿಯನ್ನು ಬದುಕಿಸುವುದು. ಮುಳ್ಳನ್ನು ಮುಳ್ಳಿಂದಲೇ ತೆಗೆದಂತೆ.

ಅದು ಬರೀ ನಂಬಿಕೆಯಷ್ಟೇ ಅಲ್ಲ ಎಷ್ಟೋ ಜನರ ಜೀವ ಉಳಿಸುವುದರಲ್ಲಿ ಅದ್ಭುತವಾಗಿ ಯಶಸ್ವಿಯಾಗಿತ್ತು ಕೂಡ! ಹೀಗಿರಲು, ಆ ರಾಜ್ಯದ ರಾಜನಿಗೆ ಒಂದು ಆಲೋಚನೆ ಬಂತು. ಹೇಗಾದರೂ ಮಾಡಿ ತಾನು ಅತ್ಯಂತ ಪ್ರಬಲವಾದ ವಿಷವನ್ನು ತನ್ನ ಬಳಿ ಇಟ್ಟುಕೊಳ್ಳಬೇಕು; ಯಾರೇ ತನಗೆ ವಿಷ ಕುಡಿಸಿದರೂ ತನ್ನ ಬಳಿಯಿರುವ ಪವರ್‌ಫುಲ್ ವಿಷದಿಂದ ಅದನ್ನು ಶಮನಗೊಳಿಸುವಂತಿರಬೇಕು. ಯೋಚನೆ ಯೇನೋ (ಸ್ವಾರ್ಥದ್ದೇ ಆದರೂ) ಒಳ್ಳೆಯದೇ. ಆದರೆ ಶಕ್ತಿಯುತ ವಿಷವನ್ನು ಸಂಗ್ರಹಿಸುವುದೆಂತು? ಶಕ್ತಿಯುತವೇ ಎಂದು ಸಾಬೀತಾಗುವುದೆಂತು? ರಾಜ ತನ್ನ ಆಸ್ಥಾನವೈದ್ಯನನ್ನೂ ಕೋಶಾಧಿಕಾರಿಯನ್ನೂ ಕರೆಸಿ ಒಂದು ವಾರದೊಳಗೆ ಅವರಿಬ್ಬರೂ ಪ್ರತ್ಯೇಕವಾಗಿ ವಿಷ ತಯಾರಿಸಿಕೊಂಡು ಬರಬೇಕೆಂದು ಆeಯಿತ್ತ; ವಾರದ ಬಳಿಕ ತಾನು ಏನು ಮಾಡಲಿದ್ದೇನೆಂಬುದನ್ನೂ ವಿವರಿಸಿದ-ಅವರಿಬ್ಬರೇ ಆ ವಿಷಗಳ ಪರೀಕ್ಷಕರೂ ಆಗಬೇಕು.

ಇನ್ನೊಬ್ಬನ ವಿಷವನ್ನು ಮೊದಲು ಕುಡಿದು ಆಮೇಲೆ ತನ್ನದನ್ನು ಕುಡಿದು ತೋರಿಸಬೇಕು. ಯಾರು ಬದುಕಿಕೊಳ್ಳುತ್ತಾರೋ ಅವನ ವಿಷ ಪ್ರಬಲ ವಾದುದು ಎಂದು ಸಿದ್ಧವಾದಂತಾಗುತ್ತದೆ. ಆಮೇಲೆ ಅದು ರಾಜನ ಸ್ವತ್ತಾಗುತ್ತದೆ. ಸರಿ, ವೈದ್ಯ ತನ್ನ ಮನೆಗೆ ತೆರಳಿ ವಿಷವಿನ್ಯಾಸಕ್ಕೆ ಶುರುಹಚ್ಚಿದ. ಕೋಶಾಧಿಕಾರಿಯೋ ಕಂಗಾಲಾಗಿ ಹೋದ. ‘ದುಡ್ಡು ಮಾಡಿದ್ದೇನೆ, ದುಡ್ಡು ತಿಂದಿದ್ದೇನೆ… ಆದರೆ ಈಗ ವಿಷ ತಯಾರಿಸಿ ಅದನ್ನೇ ಕುಡಿಯ ಬೇಕೆಂದರೆ!?
ವೈದ್ಯನಿಗಾದರೆ ಏನು, ಅವನು ಆ ಕ್ಷೇತ್ರ ದಲ್ಲಿ ಪಳಗಿದವನು. ನನಗೆಲ್ಲಿಯ ವಿಷಜ್ಞಾನ?’ ಎಂದು ಹತಾಶನಾದರೂ, ಏನಾದರೂ ಮಾಡಿ ವೈದ್ಯನೇ ಸಾಯುವಂತೆ ತಾನು ಬದುಕುಳಿಯುವಂತೆ ಉಪಾಯ ಹುಡುಕಿದ.

ಇತ್ತ ವೈದ್ಯನು ಆರು ದಿನಗಳ ಸತತ ಪ್ರಯತ್ನದ ಬಳಿಕ ಒಂದು ವಿಶೇಷ ವಿಷವನ್ನು ತಯಾರಿಸಿದ. ತನ್ನದೇ ಪ್ರಬಲ ವಿಷವಾಗಿರುತ್ತದೆಂದು ಬೀಗಿದ. ಆದರೆ ಏಳನೆಯ ದಿನವಾಗುವಾಗ ಅವನಿಗೂ ಸ್ವಲ್ಪ ನಡುಕ ಹುಟ್ಟಿತು. ‘ಈ ತರ್ಲೆ ಕೋಶಾಽಕಾರಿ ವಿಷ ತಯಾರಿಸಲಿಕ್ಕೆ ಗೊತ್ತಿಲ್ಲದವನಾದರೂ ವಿಷಕ್ಕಿಂತ ಕಟುವಾದ ಉಪಾಯವನ್ನಂತೂ ತಯಾರಿಸಿಯೇ ಇರುತ್ತಾನೆ… ಹಾಗಾಗಿ ನಾನು ಕೇರ್‌ಫುಲ್ ಆಗಿರಬೇಕು…’ ಎಂದುಕೊಂಡನು.

ಕೋಶಾಧಿಕಾರಿಯ ಪ್ಲಾನ್ ಏನಿರಬಹುದು ಎಂದು ಊಹೆಯನ್ನೂ ಮಾಡಿ (ಆತ ಬರೀ ವೈದ್ಯನಲ್ಲ, ಮನಃಶಾಸ್ತ್ರಜ್ಞನೂ ಆಗಿದ್ದಿರಬೇಕು- ಸರಿಯಾಗಿಯೇ ಊಹಿಸಿದ್ದನು) ಅದನ್ನು ಸೋಲಿಸುವ ಸೂಪರ್‌ಪ್ಲಾನ್ ಒಂದನ್ನು ರಚಿಸಿಕೊಂಡನು. ಸತ್ತ್ವಪರೀಕ್ಷೆಯ ಸಮಯ ಬಂತು. ನಿಜಕ್ಕೂ ಅದು ವಿಷದ ‘ಸತ್ತ್ವ’ಪರೀಕ್ಷೆ! ಎರಡೂ ವಿಷಗಳಿಗೆ ಅಮೃತಘಳಿಗೆ! ಕೋಶಾಧಿಕಾರಿ ಮತ್ತು ವೈದ್ಯ ಇಬ್ಬರೂ ತಂತಮ್ಮ ‘ವಿಷ’ಗಳೊಂದಿಗೆ ಆಸ್ಥಾನಕ್ಕೆ ಬಂದರು. ರಾಜನ ಸಮ್ಮುಖದಲ್ಲೇ ‘ಮಹಾ ರಾಜ್ ಕೀ ಜೈ ಹೋ!’ ಎಂದು ಹೇಳಿ ರಾಜಾಜ್ಞೆಯಂತೆಯೇ- ಮೊದಲು ಇನ್ನೊಬ್ಬನ, ಆಮೇಲೆ ತನ್ನ- ವಿಷವನ್ನು ಸೇವಿಸಿದರು.

ಸ್ವಲ್ಪವೇ ಹೊತ್ತಿನಲ್ಲಿ ಕೋಶಾಧಿಕಾರಿ ಕಣ್ಮುಚ್ಚಿ ಕೊನೆಯುಸಿರೆಳೆದನು. ವೈದ್ಯ ವಿಜೇತನಾದನು. ಆದರೆ, ರಾಜ ಏನು ಅಪೇಕ್ಷಿಸಿದ್ದನೋ (ಅತಿ ಪ್ರಬಲ ವಿಷವನ್ನು ತನ್ನದಾಗಿಸುವುದು) ಅದು ಸಾಧ್ಯವಾಗಲಿಲ್ಲ! ಹಾಗಾದರೆ ಅಲ್ಲಿ ನಿಜಕ್ಕೂ ಏನು ನಡೆಯಿತು? ಉತ್ತರವನ್ನು ಹೇಳದಿದ್ದರೆ ನಿಮ್ಮ ತಲೆ ಸಾವಿರ
ಹೋಳಾಗುವುದಿಲ್ಲ. ಆದರೂ ಒಂದು ಹಿಂಟ್ ಬೇಕಿದ್ದರೆ ಗಮನ ದಲ್ಲಿಟ್ಟುಕೊಳ್ಳಿ. ಇದು ‘ನೀರು ಕುಡಿದಷ್ಟು’ ಸುಲಭವಾಗಿದೆ!

Leave a Reply

Your email address will not be published. Required fields are marked *

error: Content is protected !!