Thursday, 19th September 2024

ಜನಸಂಖ್ಯಾ ನೀತಿ ರಾಜ್ಯಕ್ಕೆ ನಿಜಕ್ಕೂ ಅಗತ್ಯವೇ ?

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hosakere@gmail.com

ಇಡೀ ದೇಶದೆಲ್ಲೆಡೆ ಕಳೆದೊಂದು ವಾರದಿಂದ ‘ಜನಸಂಖ್ಯಾ ನಿಯಂತ್ರಣ ಕಾಯಿದೆ’ಯ ಕುರಿತಾದಂತೆ ಭರ್ಜರಿ ಚರ್ಚೆಯಾಗುತ್ತಿದೆ. ಆರಂಭದಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರದಿಂದ ಶುರುವಾದ ಈ ಕಾಯಿದೆಯ ಮಾತು, ಬಳಿಕ ಅಸ್ಸಾಂ, ಗುಜರಾತ್ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸದ್ದು ಮಾಡಿತ್ತು.

ಉತ್ತರ ಭಾರತದಲ್ಲಿ ಕಾಣಿಸಿಕೊಂಡ ಈ ಹೊಸ ಕಾಯಿದೆಯ ಮಾತು ಅಲ್ಲಿಯೇ ತಣ್ಣಗಾಗಲಿದೆ ಎನ್ನುವ ಮೊದಲೇ, ‘ಉತ್ತರ ಪ್ರದೇಶ ಮಾದರಿ ಕರ್ನಾಟಕ ದಲ್ಲಿಯೂ ಜಾರಿಯಾಗಬೇಕು’ ಎನ್ನುವ ಮಾತುಗಳನ್ನು ಬಿಜೆಪಿಯ ಕೆಲ ನಾಯಕರು ಶುರು ಹಚ್ಚಿದರು. ಆದರೆ ಜನಸಂಖ್ಯಾ ನೀತಿ ನಿಜಕ್ಕೂ ಕರ್ನಾಟಕದಲ್ಲಿ ಅಗತ್ಯವೇ ಎನ್ನುವ ಪ್ರಶ್ನೆಗೆ ಮಾತ್ರ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ. 20 ಕೋಟಿ ಜನಸಂಖ್ಯೆ ದಾಟಿರುವ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಜನಸಂಖ್ಯೆ ನಿಯಂತ್ರಣ ಕಾಯಿದೆಯ ಕರಡು ಪ್ರತಿಯನ್ನು ಕಳೆದ ವಾರ ಪಬ್ಲಿಕ್ ಡೊಮೇನ್‌ಗೆ ಬಿಡುತ್ತಿದ್ದಂತೆ, ಇದಕ್ಕೆ ಭಾರಿ ವಿರೋಧ ವ್ಯಕ್ತವಾಯಿತು.

ವಿರೋಧಿ ಪಡೆ, ಈ ಕಾನೂನಿನ ಮೂಲಕ ಮುಸ್ಲಿಂ ಜನಸಂಖ್ಯೆಯನ್ನು ನಿಯಂತ್ರಿಸಬೇಕು ಎಂದು ಯೋಗಿ ತೀರ್ಮಾನಿಸಿದ್ದಾರೆ ಎಂದು ಆರೋಪಿಸಿದರೆ, ವಿಎಚ್‌ಪಿ ಸೇರಿದಂತೆ ಹಲವು ಬಲಪಂಥೀಯ ಸಂಘಟನೆಗಳು, ‘ಜನಸಂಖ್ಯಾ ನಿಯಂತ್ರಣ ಕಾಯಿದೆಯನ್ನು ಕೇವಲ ಹಿಂದೂಗಳಿಗೆ ತರುತ್ತೀರಾ. ಮುಸ್ಲಿಮರಿಗೆ ಶರಿಯಾ
ಕಾನೂನು ಎಂದು ಹೇಳಿ ವಿನಾಯಿತಿ ನೀಡುತ್ತೀರಾ. ಇದರಿಂದ ಮುಂದೊಂದು ದಿನ ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿ, ಹಿಂದು ರಾಷ್ಟ್ರದಲ್ಲಿ ಹಿಂದುಗಳೇ ಅಲ್ಪಸಂಖ್ಯಾತರಾಗುತ್ತಾರೆ’ ಎಂದು ವಿರೋಧಿಸಿದರು.

ಜನಸಂಖ್ಯೆ ನಿಯಂತ್ರಣ ಕಾಯಿದೆ ಜಾರಿಗೊಳಿಸುತ್ತಿರುವುದು ರಾಜಕೀಯ ಕಾರಣಕ್ಕೆ ಎಂದು ಕೆಲವರು ಹೇಳಿದರೆ, ನಾಲ್ಕೈದು ಮಕ್ಕಳಿಗೆ ಜನ್ಮ ನೀಡುವ ಮುಸ್ಲಿಂ ಮಹಿಳೆಯರು ಈ ಕಾಯಿದೆಯನ್ನು ಸ್ವಾಗತಿಸುತ್ತಾರೆ ಎಂದರು. ಈ ಎಲ್ಲ ಚರ್ಚೆ ಉತ್ತರ ಪ್ರದೇಶಕ್ಕೆ ಸೀಮಿತ ವಾಗಿದ್ದರೆ, ಕರ್ನಾಟಕಕ್ಕೆ ಇದು ಅಷ್ಟು ‘ಪ್ರಸ್ತುತ’ ವಾಗುತ್ತಿರಲಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಈ ಕಾನೂನಿನ ಕರಡು ಪ್ರತಿ ಹೊರಬರುವ ಮೊದಲೇ, ‘ಜನಸಂಖ್ಯಾ ನಿಯಂತ್ರಣ ಕಾಯಿದೆ’ಯನ್ನು ಉತ್ತರ ಪ್ರದೇಶ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಜಾರಿಗೆ ತನ್ನಿ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟ್ವೀಟ್ ಮಾಡಿದ್ದರು.

ಇಷ್ಟಕ್ಕೇ ನಿಲ್ಲಿಸದೇ, ಮುಂದಿನ ಅಽವೇಶನದಲ್ಲಿಯೇ ಜನಸಂಖ್ಯಾ ನೀತಿ ಜಾರಿಯಾಗಲಿ ಎಂದು ಆಗ್ರಹಿಸಿದರು. ಉತ್ತರ ಪ್ರದೇಶದ ಜನಸಂಖ್ಯಾ ನಿಯಂತ್ರಣ ಕಾಯಿದೆ ಜಾರಿಯ ಪರ-ವಿರೋಧ ಮಾತನಾಡುವ ಮೊದಲು, ಆ ಕಾಯಿದೆಯಲ್ಲಿರುವ ಪ್ರಮುಖ ಅಂಶಗಳನ್ನು ಹೇಳಬೇಕು. ಪ್ರಮುಖವಾಗಿ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳಿದ್ದರೆ ಅಂತಹ ಕುಟುಂಬಕ್ಕೆ ಸರಕಾರಿ ಸವಲತ್ತು ಸಿಗುವುದಿಲ್ಲ. ಸರಕಾರಿ ನೌಕರ ಅಥವಾ ಸಿಬ್ಬಂದಿಗಳಿಗೆ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಅವರಿಗೆ ಬಡ್ತಿ ನೀಡುವುದಿಲ್ಲ ಎನ್ನುವ ಷರತ್ತುಗಳಿವೆ. ಆದರೆ ಇದನ್ನು ಕಾರ್ಯಗತಗೊಳಿಸಲು ನಿಜಕ್ಕೂ ಸಾಧ್ಯವೇ? ಕಾಲವೇ ಉತ್ತರಿಸಬೇಕಿದೆ.

ದೇಶದಲ್ಲಿ ಜನಸಂಖ್ಯೆ ಏರಿದಷ್ಟು ದೇಶದ ಅಭಿವೃದ್ಧಿಗೆ ಮೀಸಲಿಡಬೇಕಾದ ಅನುದಾನಕ್ಕಿಂತ ಹೆಚ್ಚು ‘ಸಮಾಜದ ಅಭಿವೃದ್ಧಿ’ಗೆ ಮೀಸಲಿಡಬೇಕಾಗುತ್ತದೆ ಎನ್ನುವುದು ಆತಂಕದಿಂದ ಈ ಕಾಯಿದೆ ಜಾರಿಗೊಳಿಸುವುದು ಸರಿ. ಆದರೆ ಇಲ್ಲಿ ಗಮನಿಸಬೇಕಿರುವ ಒಂದು ಅಂಶವಿದೆ. ಜನಸಂಖ್ಯಾ ನಿಯಂತ್ರಣ ಕಾಯಿದೆ ಯಿಂದ ಭವಿಷ್ಯದಲ್ಲಿ ಆಗಬಹುದಾದ ‘ಜನಸಂಖ್ಯಾ ಅಸಮಾನತೆ’ಯ ಬಗ್ಗೆಯೂ ಯೋಚಿಸಬೇಕಿದೆ. ಕರ್ನಾಟಕದಲ್ಲಿ (ಸದ್ಯದ ಮಟ್ಟಿಗಾದರೂ) ಜನಸಂಖ್ಯಾ
ನಿಯಂತ್ರಣ ನೀತಿ ಜಾರಿಗೊಳಿಸುವ ಮೊದಲು ಎರಡೆರಡು ಬಾರಿ ಯೋಚಿಸಬೇಕು ಎಂದು ವಾದ ಮಂಡಿಸಲು ಕೆಲವು ಕಾರಣಗಳಿವೆ. ಅದಕ್ಕೆ ಅಂಕಿ-ಅಂಶದ ದಾಖಲೆಯನ್ನು ನೀಡಬಹುದು.

ಕರ್ನಾಟಕ ಆರ್ಥಿಕ ಸಮೀಕ್ಷೆ 2020-21ರ ಪ್ರಕಾರ ರಾಜ್ಯದ ಒಟ್ಟು ಫಲವತ್ತತೆ ದರ (ಟಿಎಫ್ಆರ್), ಜನಸಂಖ್ಯೆಯ ನಿಯಂತ್ರಣವನ್ನು ಅಳೆಯುವ ಮಾಪನ –
2020ರಲ್ಲಿ 1.7 ರಷ್ಟಿತ್ತು. 2025ರ ವೇಳೆಗೆ ರಾಷ್ಟ್ರೀಯ ಗುರಿ 2.1 ಕ್ಕೆ ನಿಗದಿಪಡಿಸಲಾಗಿದೆ, ಕರ್ನಾಟಕದ ಟಿಎಫ್ಆರ್ 1999ರಲ್ಲಿ 2.5 ರಿಂದ 2020 ರಲ್ಲಿ 1.7 ಕ್ಕೆ ಸ್ಥಿರ ಕುಸಿತ ಕಂಡಿದೆ. ಇನ್ನು ಭಾರತದ ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ ಪ್ರಕಾರ, ಭಾರತದಲ್ಲಿ 2020ರ ವೇಳೆಗೆ ಪ್ರತಿ ಮಹಿಳೆಗೆ 2.2ರಷ್ಟು ಮಕ್ಕಳು ಜನಿಸುತ್ತಿದ್ದಾರೆ. 2016ರ ನೀತಿ ಆಯೋಗದ ಅಂಕಿ-ಅಂಶಗಳ ಪ್ರಕಾರ, ಜನನ ಪ್ರಮಾಣ ಉತ್ತರ ಪ್ರದೇಶ 3.1, ಬಿಹಾರ
3.3, ಚತ್ತೀಸ್‌ಗಢ 2.5, ಮಧ್ಯಪ್ರದೇಶ 2.8ರಷ್ಟಿದೆ.

ಆದರೆ ದಕ್ಷಿಣ ಭಾರತದಲ್ಲಿರುವ ರಾಜ್ಯಗಳಾದ ಆಂಧ್ರ ಪ್ರದೇಶದಲ್ಲಿ ಶೇ.1.7, ಕರ್ನಾಟಕ ಶೇ.1.8, ಕೇರಳ ಶೇ.1.8, ತೆಲಂಗಾಣ ಶೇ.1.7, ತಮಿಳುನಾಡು ಶೇ.1.6ರಷ್ಟಿದೆ. ಆದರೆ ದೇಶದಲ್ಲಿ ಸರಾಸರಿ ಜನನ ಪ್ರಮಾಣ 2.1ರಷ್ಟಿದೆ. ಇನ್ನು ಸಂತಾನ ಶಕ್ತಿ ಹರಣ ಹಾಗೂ ಐಯುಡಿ (ಗರ್ಭಾಶಯ ಸಾಧನ) ಅಳವಡಿಕೆ ವಿಷ ಯದಲ್ಲಿಯೂ ಕರ್ನಾಟಕದ ಸಾಧನೆ ಉತ್ತಮವಾಗಿದೆ. 2020-21ರ ಅವಧಿಯಲ್ಲಿ ನವೆಂಬರ್‌ವರೆಗೆ ಒಟ್ಟು ಸಂತಾನ ಶಕ್ತಿ ಹರಣ 1,02,227 ಮತ್ತು ಐಯುಡಿ (ಗರ್ಭಾಶಯದ ಸಾಧನ)ಅಳವಡಿಕೆ 1,33,412 ಆಗಿದೆ. ಈ ಅಂಕಿ- ಅಂಶ ಗಳನ್ನು ಗಮನಿಸಿದರೆ, ದೇಶದ ಸರಾಸರಿಗಿಂತ ಕರ್ನಾಟಕದಲ್ಲಿ ಜನಸಂಖ್ಯಾ ಸರಾಸರಿ ಕಡಿಮೆಯಿದೆ. ಈಗಾಗಲೇ ಜನಸಂಖ್ಯೆಯಲ್ಲಿ ಕುಸಿತ ಕಾಣುತ್ತಿರುವ ಕರ್ನಾಟಕದಲ್ಲಿ ಮತ್ತೊಮ್ಮೆ ಜನಸಂಖ್ಯಾ ನಿಯಂತ್ರಣ ಕಾಯಿದೆ
ಅಗತ್ಯವಾದರೂ ಏನಿದೆ? ಎನ್ನುವ ಪ್ರಶ್ನೆ ಸಹಜವಲ್ಲವೇ.

ಕರ್ನಾಟಕದ ವಿಷಯ ಒಂದಾದರೆ, ದಕ್ಷಿಣ ಹಾಗೂ ಉತ್ತರ ಭಾರತದ ಜನಸಂಖ್ಯೆಯ ಬಗ್ಗೆ ಗಮನಿಸಿದಾಗ, ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಜನನ ಪ್ರಮಾಣ ಭಾರಿ ಪ್ರಮಾಣದಲ್ಲಿದೆ. ಉದಾಹರಣೆಗೆ ಜನನ ಪ್ರಮಾಣದ ಸರಾಸರಿ ಪ್ರತಿ ಮಹಿಳೆಯಲ್ಲಿ ಉತ್ತರ ಪ್ರದೇಶದಲ್ಲಿ 3.1, ಬಿಹಾರದಲ್ಲಿ 3.3, ಛತ್ತೀಸ್‌ ಗಢದಲ್ಲಿ 2.5, ಮಧ್ಯಪ್ರದೇಶದಲ್ಲಿ 2.8ರಷ್ಟಿದೆ. ಆದರೆ ದಕ್ಷಿಣ ಭಾರತದಲ್ಲಿರುವ ರಾಜ್ಯ ಗಳಾದ ಆಂಧ್ರ ಪ್ರದೇಶದಲ್ಲಿ ಇದರ ಸರಾಸರಿ ಶೇ.1.7, ಕರ್ನಾಟಕ ಶೇ.1.8, ಕೇರಳ ಶೇ.1.8, ತೆಲಂಗಾಣ ಶೇ.1.7, ತಮಿಳುನಾಡು ಶೇ.1.6ರಷ್ಟಿದೆ.

ಹಾಗಾದರೆ ಈ ಕಾಯಿದೆಯ ಅಗತ್ಯ ಇರುವುದು ಉತ್ತರ ಭಾರತದ ರಾಜ್ಯಗಳಿಗೋ, ದಕ್ಷಿಣ ಭಾರತದ ರಾಜ್ಯಗಳಿಗೋ ಎನ್ನುವುದನ್ನು ಮೊದಲು ಅರಿಯಬೇಕಿದೆ. ಉತ್ತರ ಪ್ರದೇಶದಲ್ಲಿ ಜಾರಿಗೊಳಿಸಲು ಮುಂದಾಗಿರುವ ಈ ಕಾಯಿದೆಯನ್ನು, ಅಲ್ಲಿಗಿಂತ ಮೊದಲೇ ಕರ್ನಾಟಕದಲ್ಲಿ ಜಾರಿಗೊಳಿಸಬೇಕು ಎನ್ನುವ ಸಿ.ಟಿ. ರವಿ ಅವರ ವಾದ ‘practical’ ಆಗಿ ಇದೆಯೇ? ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತು, ಇನ್ಯಾವ ರಾಜ್ಯಗಳಲ್ಲಿಯೂ ಬಿಜೆಪಿಯ ವಾದ ಒಪ್ಪಿತವಾಗುವುದಿಲ್ಲ
ಎನ್ನುವ ಏಕ ಮಾತ್ರ ಕಾರಣಕ್ಕೆ ಕರ್ನಾಟಕದಲ್ಲಿ ಜಾರಿಗೊಳಿಸಿ ಎನ್ನುವುದು ಸರಿಯೇ?

ಉತ್ತರ ಪ್ರದೇಶದಲ್ಲಿ ಈ ಕಾಯಿದೆ ತರಲು ಯೋಗಿ ಮುಂದಾಗುತ್ತಿದ್ದಂತೆ, ಬಲಪಂಥೀಯರು, ಮುಸ್ಲಿಂ ಜನಸಂಖ್ಯೆಗೆ ಬ್ರೇಕ್ ಹಾಕಲು ತರುತ್ತಿರುವ ಮಹತ್ವ ಕಾಯಿದೆ ಎನ್ನುವ ಬಣ್ಣವನ್ನು ಕಟ್ಟಿಬಿಟ್ಟರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತಗಳ ಕ್ರೋಡೀಕರಣ ಮಾಡಲು ಯೋಗಿ ‘ಬ್ರಹ್ಮಾಸ್ತ್ರ’ದ ರೀತಿ ಈ ಕಾಯಿದೆಯನ್ನು ಬಳಸಿಕೊಳ್ಳಲಿದ್ದಾರೆ. ಆದ್ದರಿಂದ ಕರ್ನಾಟಕದಲ್ಲಿಯೂ ಇದೇ ಅಸ್ತ್ರವನ್ನು ಪ್ರಯೋಗಿಸಬೇಕು ಎನ್ನುವುದು ಕೆಲ ಬಿಜೆಪಿಗರ ವಾದ. ಆದರೆ ಪ್ರಾಯೋಗಿಕವಾಗಿ ಈ ಕಾಯಿದೆ ಜಾರಿಗೊಳಿಸಿದರೆ, ಇದಕ್ಕೆ ಮುಸ್ಲಿಂ ಸಮುದಾಯವನ್ನು ಸೇರಿಸುತ್ತಾ ರೆಯೇ ಎನ್ನುವುದು ಈಗಲೂ ಸ್ಪಷ್ಟವಾಗಿಲ್ಲ.

ಏಕೆಂದರೆ ದೇಶದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ‘ಹಿಂದೂ ಲಾ’ ಹಾಗೂ ಮುಸ್ಲಿಮರಿಗೆ ‘ಶರಿಯಾ ಕಾನೂನು’ ಎನ್ನುವ ಪ್ರತ್ಯೇಕ ಕಾನೂನುಗಳಿವೆ. ಮುಸ್ಲಿಮರ ವಿಚ್ಛೇದನದಿಂದ ಹಿಡಿದು ಪ್ರತಿಯೊಂದು ಹಂತದಲ್ಲಿಯೂ ಶರಿಯಾ ಕಾನೂನನ್ನು ಮಾನದಂಡವಾಗಿರಿಸಿಕೊಂಡೇ, ತೀರ್ಪು ಬಂದಿರುವ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಆದ್ದರಿಂದ ಜನಸಂಖ್ಯಾ ನಿಯಂತ್ರಣ ಕಾಯಿದೆಯನ್ನು ಎಲ್ಲ ಸಮಾಜ ಹಾಗೂ ಸಮುದಾಯಗಳಿಗೆ ಅನ್ವಯವಾಗುವುದೇ ಎನ್ನುವ ಪ್ರಶ್ನೆಯಿದೆ.

ಇನ್ನು ಜನಸಂಖ್ಯಾ ನಿಯಂತ್ರಣ ನೀತಿ ಜಾರಿಗೊಳಿಸಲು ಮುಂದಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗಲೂ ಜಾರಿಗೊಳಿಸಲಾಗಿತ್ತು. 1876ರಲ್ಲಿ ಎರಡು ಮಕ್ಕಳು ಎನ್ನುವ ಕಾನೂನು ತರಲು ಮುಂದಾಗಿ, ಇದಕ್ಕೆ ಮುಸ್ಲಿಂಮರ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಈ ಕಾಯಿದೆ ಜಾರಿಗೊಂಡರೂ, ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ಭಾರತ ಸರಕಾರ ಯಶಸ್ವಿಯಾಗಲಿಲ್ಲ ಎನ್ನುವುದು ಬೇರೆ ಮಾತು. ಆದರೆ ಭಾರತದ ರೀತಿ ಯಲ್ಲಿಯೇ ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾ ಸಹ, ‘ಕುಟುಂಬಕ್ಕೆ ಒಂದು ಮಗು’ ಎನ್ನುವ ಪರಿಕಲ್ಪನೆಯನ್ನು ಕಠಿಣವಾಗಿ ಜಾರಿ ಗೊಳಿಸಿದ ರಾಷ್ಟ್ರ. ಆದರೆ ಚೀನಾದ ಸರಕಾರ ಈ ಕಾಯಿದೆ ಜಾರಿಗೆ ತಂದು ದಶಕಗಳ ಬಳಿಕ, ತಾನು ಮಾಡಿದ್ದ ಕಾಯಿದೆಯಿಂದ ಆಗುತ್ತಿರುವ ಎಡವಟ್ಟನ್ನು ಮನವರಿಕೆ ಮಾಡಿಕೊಂಡಿತ್ತು. ಆದ್ದರಿಂದ ಇದೀಗ ಒಂದು ಮಗು ಎನ್ನುವ ಆದೇಶವನ್ನು ಹಿಂಪಡೆದು, ಮೂರು ಮಕ್ಕಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅಲ್ಲಿನ ಜನರಿಗೆ ನೀಡಿದೆ.

ನಿಯಮವನ್ನು ಸಡಿಲಿಕೆ ಮಾಡಲು ಕಾರಣವನ್ನು ನೋಡುವುದಾದರೆ, ಸಂತಾನಕ್ಕೆ ಬ್ರೇಕ್ ಹಾಕಿದ್ದರಿಂದ ಈಗ ಅಲ್ಲಿ ಯುವಕರಿಗಿಂತ ಹೆಚ್ಚು ಮುದುಕರಿದ್ದಾರೆ. ದುಡಿ ಯುವ ಕೈಗಳಿಗಿಂತ, ತಿನ್ನುವ ಕೈಗಳು ಹೆಚ್ಚಾಗುತ್ತಿವೆ ಹಾಗೂ ಅತ್ಯಾಧುನಿಕ ಆರೋಗ್ಯ ವ್ಯವಸ್ಥೆಯಿಂದ, ಜನರ ಆಯಸ್ಸು ಹೆಚ್ಚಾಗುತ್ತಿರುವುದರಿಂದ
‘ಮುದುಕರ ರಾಷ್ಟ್ರ’ವಾಗುತ್ತಿದೆ. ಇದು ಹೀಗೆ ಮುಂದುವರಿದರೆ, ಮುಂದೊಂದು ದಿನ ಜನಸಂಖ್ಯೆ ರೇಸ್ ನಲ್ಲಿ ಹಿಂದೆ ಬೀಳುವ ಜತೆಜತೆಗೆ, ಮಾನವ ಸಂಪನ್ಮೂಲ
ಕೊರತೆಯನ್ನು ಎದುರಿಸಬೇಕಾದ ಆತಂಕ ಚೀನಾಕ್ಕೆ ಕಾಡುತ್ತಿದೆ. ಇದು ದೇಶದ ವಿಷಯವಾದರೆ, ಕೌಟುಂಬಿಕವಾಗಿ ನೋಡುವುದಾದರೆ, ಒಂದೇ ಮಗು
ಇರುವುದರಿಂದ ಮಗುವಿನ ಜತೆಯಲ್ಲಿ ಕಾಲ ಕಳೆಯಲು, ಆಡಲು ಸಹವರ್ತಿಗಳಿಲ್ಲ.

ಸಹೋದರ-ಸಹೋದರಿ, ಕುಟುಂಬದ ವ್ಯವಸ್ಥೆಯ ಕಲ್ಪನೆಯೇ ಅಲ್ಲಿನ ಮಕ್ಕಳಲ್ಲಿ ಬರುತ್ತಿಲ್ಲ. ಇದರಿಂದ ಹಲವು ಮಾನಸಿಕ ಸಮಸ್ಯೆಗಳು ಎದುರಾಗುತ್ತಿವೆ. ಈ ಎಲ್ಲವನ್ನು ಗಮನಿಸಿ, ಭವಿಷ್ಯದಲ್ಲಿ ಆಗಬಹುದಾದ ಅನಾಹುತವನ್ನು ಊಹಿಸಿ ‘ಒಂದಲ್ಲ, ಮೂರು ಮಕ್ಕಳನ್ನು ಮಾಡಿಕೊಳ್ಳಲು ಅವಕಾಶ ನೀಡಿದೆ’. ಮಾನವ ಸಂಪನ್ಮೂಲ ಕೊರತೆ ನೀಗಿಸಲು ಚೀನಾ ಮುಂದೊಂದು ದಿನ ‘ಕಡ್ಡಾಯವಾಗಿ ಮೂರು ಮಕ್ಕಳು ಮಾಡಿಕೊಳ್ಳಿ’ ಎಂದರು ಅಚ್ಚರಿಯಿಲ್ಲ.

ಇದನ್ನು ಗಮನಿಸಿದರೆ ಜನಸಂಖ್ಯಾ ನಿಯಂತ್ರಣ ಕಾಯಿದೆ ಎನ್ನುವುದು ಆಯಾ ಸಮಯಕ್ಕೆ ತಕ್ಕಂತೆ, ಆಯಾ ಪ್ರದೇಶಕ್ಕೆ ಸರಿಹೊಂದುವ ರೀತಿ ಮಾಡುವ ನೀತಿಯಾಗಿದೆ. ಇಂದಿರಾ ಗಾಂಽ ಸಮಯದಲ್ಲಿ ಜಾರಿಗೊಳಿಸಿದ ಜನಸಂಖ್ಯಾ ನಿಯಂತ್ರಣ ಕಾಯಿದೆ, ದಕ್ಷಿಣ ಭಾರತದಲ್ಲಿ ಯಶಸ್ವಿಯಾಗಿದ್ದರಿಂದ ಉತ್ತರ
ಭಾರತಕ್ಕೆ ಹೋಲಿಸಿದರೆ, ದಕ್ಷಿಣ ಭಾರತದಲ್ಲಿ ಸರಾಸರಿ ಸಂತಾನ 2ಕ್ಕಿಂತ ಕಡಿಮೆಯಿದೆ. ಆದರೆ ಉತ್ತರ ಭಾರತದಲ್ಲಿ, ಅದರಲ್ಲಿಯೂ ಉತ್ತರ ಭಾರತದಲ್ಲಿ ಈ ಸಂಖ್ಯೆ 2.5ಕ್ಕಿಂತ ಹೆಚ್ಚಿದೆ.

ಹೀಗಿರುವಾಗ, ಉತ್ತರ ಪ್ರದೇಶದಲ್ಲಿ ಅಲ್ಲಿನ ಜನಸಂಖ್ಯೆಯಿಂದ ಆಗುತ್ತಿರುವ ಸಮಸ್ಯೆಯನ್ನು ಕಡಿಮೆ ಮಾಡಲು ಅಥವಾ ಅಲ್ಲಿನ ರಾಜಕೀಯ ಕಾರಣಗಳಿಗೆ ಜಾರಿಗೊಳಿಸಲು ಮುಂದಾಗಿರುವ ಜನಸಂಖ್ಯೆ ನಿಯಂತ್ರಣ ಕಾಯಿದೆ, ಕರ್ನಾಟಕಕ್ಕೂ ಅಗತ್ಯವಿದೆ ಎನ್ನುವುದು ಸರಿಯೇ ಎನ್ನುವ ವಿಮರ್ಶೆಯನ್ನು ಮಾಡಿ ಕೊಳ್ಳಬೇಕಿದೆ. ಉತ್ತರ ಪ್ರದೇಶ ಮಾದರಿ, ಗುಜರಾತ್ ಮಾದರಿ ಕರ್ನಾಟಕಕ್ಕೂ ಬರಬೇಕು ಎನ್ನುವ ಮನಸ್ಥಿತಿಯಿಂದ ಬಿಜೆಪಿ ನಾಯಕರು ಹೊರಬರಬೇಕಿದೆ. ಕರ್ನಾಟಕದಲ್ಲಿ ದೇಶದ ಅಥವಾ ಇತರ ರಾಜ್ಯಗಳ ಸರಾಸರಿ ಜನನ ಪ್ರಮಾಣಕ್ಕಿಂತ ಹಿಂದಿರುವ ಈ ಸಮಯದಲ್ಲಿ ಈ ಕಾಯಿದೆಯ ಅಗತ್ಯವಾದರೂ ಏನಿದೆ ಎನ್ನುವುದು ಮೂಲಭೂತ ಪ್ರಶ್ನೆ.

ಆದ್ದರಿಂದ ‘ಅಲ್ಲಿ ಬಂದರೆ ಇಲ್ಲಿಯೂ ಬರಬೇಕು’ ಎನ್ನುವ ಮನಸ್ಥಿತಿಯಿಂದ ಹೊರಬಂದು, ಕರ್ನಾಟಕದಲ್ಲಿ ಆಗಬೇಕಿರುವ, ಇಲ್ಲಿಗೆ ಅಗತ್ಯ ಎನಿಸುವ ಕಾಯಿದೆ ಅಥವಾ ಕೆಲಸವನ್ನು ಮಾಡುವ ಕೆಲಸದ ಬಗ್ಗೆ ಗಮನಹರಿಸಬೇಕಿದೆ.