Sunday, 8th September 2024

ಪವರ್‌ ಫುಲ್‌ ಸ್ವಾಮೀಜಿ ಆದ ಮೇಲೂ ನಮ್ಮನ್ನು ಗುರುಗಳು ಮರೆತಿಲ್ಲ ಅನ್ನುವುದೇ ಹೆಮ್ಮೆ

ಒಂದು ನೆನಪು

ರವಿ ಅಜ್ಜೀಪುರ

ಅದು ಟಿವಿ9ನ ಮೂರನೇ ಮಹಡಿ. ನಾವೆ ‘ಥರ್ಡ್ ಫ್ಲೋರಿಯನ್ಸ್’ ನಿಜ ಹೇಳಬೇಕು ಅಂದ್ರೆ ಟಿವಿ9ನ ರೇಟಿಂಗ್ ಶಕ್ತಿ ಇದ್ದಿದ್ದೇ ಮೂರನೇ ಮಹಡಿಯಲ್ಲಿ. ನಂದೂ ಅದೇ ಫ್ಲೋರ್‌ನಲ್ಲಿ ಕೆಲಸ. ಒಂದಿನ ಅಲ್ಲಿಗೆ ಯೋಗಗುರು ಶ್ರೀ ವಚನಾನಂದ ಸ್ವಾಮಿಗಳು
ಬಂದರು. ಆಗಷ್ಟೇ ಟಿವಿ9ನಲ್ಲಿ ಅವರ ‘ಯೋಗಾಯೋಗ’ ಕಾರ್ಯಕ್ರಮ ಶುರುವಾಗಿ ಬಹಳ ಪಾಪ್ಯುಲರ್ ಆಗಿತ್ತು.

ಬಂದು ನನ್ನ ಪಕ್ಕದ ಕೂತರು. ಮುಖದಲ್ಲಿ ಅದೇ ತೇಜಸ್ಸು, ಆತ್ಮೀಯವಾದ ಮಾತು, ಸರಳ ಪಾಂಡಿತ್ಯ. ಸಿಂಪಲ್ ಆಗಿ ಹೇಳಬೇಕು ಅಂದ್ರೆ ನಾವಿಬ್ಬರೂ ಅವತ್ತಿನಿಂದ  ಒಳ್ಳೆ ಫ್ರೆಂಡ್ಸ್ ಆಗಿಬಿಟ್ಟೆವು. ಶ್ರೀವಚನಾನಂದ ಸ್ವಾಮಿಗಳು ಟಿವಿ9ಗೆ ಬಂದಾಗಲೆ ಮೂರನೇ ಮಹಡಿಗೆ ಬಂದು ನನ್ನ ಜೊತೆ ಒಂದಿಷ್ಟು ಹೊತ್ತು ಮಾತಾಡಿ ಹೋಗುತ್ತಿದ್ದರು. ನಾನು ಮಾಡುತ್ತಿದ್ದ ಕಾರ್ಯಕ್ರಮಗಳನ್ನೆ ಸ್ವಾಮೀಜಿ ನೋಡುತ್ತಿದ್ದರು. ‘ಬೆಸ್ಟ್ ಮಾಡ್ತೀರಿ ಬಿಡಿ’ ಅಂತ ಬೆನ್ನುತಟ್ಟುತಿದ್ರು. ನಮಗೆ ಅದಕ್ಕಿಂತ ಇನ್ನೇನು ಬೇಕು ಅಲ್ವ.
ಫುಲ್ ಖುಷಿ.

ಹತ್ತನ್ನೊಂದು ವರ್ಷಗಳ ಹಿಂದೆ ಶುರುವಾದ ಆ ಆತ್ಮೀಯತೆಯ ಒರತೆ ನಮ್ಮಿಬ್ಬರಲ್ಲಿ ಇನ್ನೂ ಬತ್ತಿಲ್ಲ. ಸ್ವಾಮೀಜಿ ಈಗ ಹರಿಹರ ಪಂಚಮಸಾಲಿ ಪೀಠದ ಜಗದ್ಗುರುಗಳು. ಶ್ರೀವಚನಾನಂದ ಸ್ವಾಮೀಜಿಗಳು ಪೀಠದ ಚುಕ್ಕಾಣಿ ಹಿಡಿದ ಮೇಲೆ ಪೀಠದ ಪವರ್ ಏನು ಅಂತ ಇಡೀ ನಾಡಿಗೆ ಗೊತ್ತಾಗಿ ಹೋಯ್ತು. ಅವರೀಗ ಕರ್ನಾಟಕದ ಮೋಸ್ಟ್ ಪವರ್ ಫುಲ್ ಸ್ವಾಮೀಜಿ.

ಆದರೂ ಅವರು ನಮಗೆ ಸಿಗುತ್ತಾರೆ. ನಾವಿಬ್ಬರೇ ಕೂತು ಗಂಟೆಗಟ್ಟಲೆ ಮಾತನಾಡಬವು. ಅದೇನು ಅಧ್ಯಾತ್ಮ ಅಲ್ಲ. ರಾಜಕೀಯ ಅಲ್ಲ. ಸಾಹಿತ್ಯ ಸಾಂಸ್ಕೃತಿಕವೂ ಅಲ್ಲ. ನಮ್ಮದು ಬೇರೆಯದ್ದೇ ಮಾತು. ಮನುಷ್ಯ ಸಂಬಂಧಗಳನ್ನು ಬೆಸೆಯುವಂಥವು. ಸ್ವಾಮಿ
ವಚನಾನಂದರನ್ನು ನಾನು ಹತ್ತಿರದಿಂದ ಬನಾದ್ದರಿಂದ ಈ ಎರಡು ಮಾತು ಹೇಳಲೇಬೇಕು. ಅವರಿಗೆ ಅಹಂ ಗೊತ್ತೇ ಇಲ್ಲ. ನಾನು ಜಗದ್ಗುರು ಅನ್ನೋ ಗರ್ವ ಇಲ್ಲ. ಮುಖವಾಡ ಇಲ್ಲ. ನೇರಾನೇರ ಮಾತು ನೇರಾನೇರ ನಡೆ. ಸಿಎಂ ಯಡಿಯೂರಪ್ಪ ನವರನ್ನು ಪಕ್ಕದ ಕೂರಿಸಿಕೊಂಡು ನಮ್ಮ ಬೇಡಿಕೆ ಇದು ಈಡೇರಿಸ್ತೀರೋ ಇಲ್ವೋ ಅಂದಾಗ ತುಂಬಾ ಜನ ಸ್ವಾಮೀಜಿಗೆ ಇದೆ ಬೇಕಿತ್ತಾ ಅಂತ ನನ್ನ ಬಳಿ ಅಲವತ್ತುಕೊಂಡಿದ್ದರು. ಖಂಡಿತಾ ಬೇಕಿತ್ತು.

ಅದು ಅಹಂ ಅಲ್ಲ. ಹಕ್ಕು ಅಂತ ನಾನು ಅವರಿಗೆ ಹೇಳಿದ್ದೆ. ನಮ್ಮ ಹಕ್ಕನ್ನು ಕೇಳಲು ನಾವ್ಯಾಕೆ ಭಯಪಡಬೇಕು ಅನ್ನೋದು ನನ್ನ ಪ್ರಶ್ನೆ. ಅದು ಸ್ವಾಮೀಜಿಯ ಪ್ರಶ್ನೆ ಕೂಡ ಹೌದು. ಹಾಗಾಗಿಯೇ ನನ್ನಂಥವರಿಗೆ ಸ್ವಾಮೀಜಿ ಹೆಚ್ಚು ಇಷ್ಟ ಆಗುತ್ತಾರೆ. ಆಪ್ತ ಎನಿಸುತ್ತಾರೆ. ಇನ್ನೊಂದು ಹೇಳಲೇಬೇಕಾದ ವಿಷಯವೇನೆಂದರೆ ಅವರು ಪವರ್ ಫುಲ್ ಸ್ವಾಮೀಜಿ ಆದಮೇಲೂ ನಮ್ಮಂಥ ಕುಚೇಲರನ್ನು ಮರೆತಿಲ್ಲ.

ಹೇಗಿದೀರಿ ಅಂತ ಯೋಗಕ್ಷೇಮ ವಿಚಾರಿಸಿಕೊಳ್ತಾರೆ. ನಾನಿದೀನಿ ನಿಮಗ್ಯಾಕೆ ಭಯ ಅನ್ನೋ ಭರವಸೆ ನೀಡ್ತಾರೆ. ಅಷ್ಟು ಸಾಕು.
ಇನ್ನೊಂದು ವಿಷಯ, ಸ್ವಾಮೀಜಿ ವಿಶ್ರಮಿಸಿದ್ದನ್ನು ನಾನು ನೋಡೇ ಇಲ್ಲ. ಕಣ್ಣಿಗೆ ನಿದ್ರೆ ಹತ್ತುವ ತನಕವೂ ಅವರದ್ದು ಕಾಯಕ ಕಾಯಕ ಕಾಯಕ. ಏನಾದರೊಂದು ಮಾಡುತ್ತಲೇ ಇರುತ್ತಾರೆ. ಅವರೊಬ್ಬ ಅದ್ಭುತ ಓದುಗ. ಅದ್ಭುತ ಟ್ರಾವೆಲರ್. ಹರಿಹರ ದಿಂದ ಹಿಡಿದು ಹಿಮಾಲಯದ ತನಕ ಬೆಂಗಳೂರಿನಿಂದ ಹಿಡಿದು ವಿದೇಶಗಳ ತನಕ ಅವರು ಕಾಲಿಗೆ ಚಕ್ರಕಟ್ಟಿ ಕೊಂಡು ಓಡಾಡುವ ಬಿಡುವಿಲ್ಲದ ಸ್ವಾಮೀಜಿ.

ಒಮ್ಮೆ ಕೇಳಿದ್ದೆ. ಹೇಗೆ ಗುರುಗಳೇ ಇದೆ ಸಾಧ್ಯವಾಯ್ತು? ಸಾಧ್ಯಾಸಾಧ್ಯತೆಯ ಪ್ರಶ್ನೆಯೇ ಬರಲ್ಲ ಅಜ್ಜೀಪುರ. ನಮ್ಮ ನಮ್ಮ ಕೆಲಸ ವನ್ನು ನಾವು ಪ್ರಾಮಾಣಿಕತೆಯಿಂದ ಮಾಡ್ಕೊಂತಾ ಹೋಗ್ತಿರಬೇಕು. ಅವನೊಬ್ಬ ಇದ್ದಾನೆ ಮೇಲೆ, ಆತ ಎಲ್ಲವನ್ನೂ ಮಾಡಿಸ್ತಾನೆ. ನಾವು ಪ್ರಜ್ಞಾವಂತರಾಗಿ ಕೆಲಸ ಮಾಡಬೇಕು ಅಷ್ಟೆ.

ನಿಜ ಶ್ರೀವಚನಾನಂದರು ನಾನು ಕಂಡ ಅತ್ಯಂತ ಪ್ರಜ್ಞಾವಂತ ಸ್ವಾಮೀಜಿ. ಬೇರೆ ಯಾವುದೇ ಸ್ವಾಮೀಜಿಗೆ ಸಿಗದ ಲೋಕಾನುಭವ ಅವರಿಗೆ ಸಿಕ್ಕಿದೆ. ಜಗದ್ಗುರುವಾಗಿ ಜನಪರವಾಗಿ ಹೇಗೆ ಕೆಲಸ ಮಾಡಬಹುದು ಅನ್ನೋದರ ಅರಿವು ಅವರಿಗಿದೆ. ನಾನು ಲಿಂಗಾಯತ ಪಂಚಮಸಾಲಿ ಸ್ವಾಮೀಜಿ ಮಾತ್ರವಲ್ಲ. ಹೌದು ನನಗೆ ಅವರನ್ನೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಮೇಲೆತ್ತುವ ಜವಾಬ್ದಾರಿ ಇದೆ.

ಅದು ನನ್ನ ಕರ್ತವ್ಯ. ಹಾಗಂತ ನಾನು ಒಂದು ಸಮುದಾಯದ ಸ್ವಾಮೀಜಿ ಅಲ್ಲ. ನಾನು ಸೆಕ್ಯೂಲರ್ ಸ್ವಾಮೀಜಿ. ನನಗೆ ಸಕಲ ಜೀವಾತ್ಮದ ಶ್ರೇಯಸ್ಸೂ ಮುಖ್ಯ ಅಂತ ಹೇಳಿದ್ದು ನನಗೆ ನೆನಪಿದೆ. ಹರಜಾತ್ರಾ ಮಹೋತ್ಸವದಲ್ಲೂ ಶ್ರೀಸಿದ್ದರಾಮಯ್ಯನವರು ಅದೇ ಮಾತನ್ನು ಹೇಳಿದ್ರು. ‘ನೀವೊಬ್ರೆ ನೋಡಿ ಸೆಕ್ಯೂಲರ್ ಸ್ವಾಮೀಜಿ ನಮ್ಮಲ್ಲಿರೋದು’ ಅಂತ. ಆಗ ಕರತಾಡನ ಕಿವಿ
ಕಿತ್ತೋಗೋ ಹಾಗೆ ಬಂದಿದ್ದನ್ನು ನಾನೇ ಅವರ ಪಕ್ಕ ನಿಂತು ಕೇಳಿಸಿಕೊಂಡಿದ್ದೇನೆ.

ಕೆಲವೊಮ್ಮೆ ಪೀಠದಿಂದ ವ್ಯಕ್ತಿ ದೊಡ್ಡವನಾಗಲ್ಲ. ಪೀಠ ಏರಿದ ವ್ಯಕ್ತಿಯಿಂದ ಆ ಪೀಠಕ್ಕೊಂದು ಘನತೆ ಗೌರವ ಬರುತ್ತದೆ. ಹರಿಹರ ಪೀಠಕ್ಕೆ ಆ ಘನತೆ ಗೌರವ ಎರಡನ್ನೂ ತಂದುಕೊಟ್ಟವರು ಶ್ರೀವಚನಾನಂದ ಸ್ವಾಮೀಜಿಗಳು ಅಂತ ನಾನಾದರೂ ಭಾವಿಸಿದ್ದೇನೆ.
ನಿಮ್ಮ ನಡಿಗೆಯ ಸ್ಪೀಡ್, ನಿಮ್ಮ ಯೋಚನೆಯ ಸ್ಪೀಡ್, ನಿಮ್ಮ ಆತ್ಮದ ಸ್ಪೀಡ್, ನಿಮ್ಮ ಯೋಗದ ಸ್ಪೀಡ್‌ಗೆ ನೀವೇ ಸಾಟಿ ಗುರುಗಳೆ. ಪ್ರೀತಿ ಮುಂದುವರಿಯಲಿ ಅಷ್ಟೆ.

Leave a Reply

Your email address will not be published. Required fields are marked *

error: Content is protected !!